ಪ್ರವೃತ್ತಿಯೆಂಬ ಕುದುರೆಯನ್ನೇರಿ
ನದಿ ತೊರೆ ಝರಿಗಳನ್ನು ದಾಟಿ
ಬೆಟ್ಟ-ಗುಡ್ಡ ಗಿರಿ ಶಿಖರವನ್ನೇರಿ
ಕಂಡೆನಾ ದೂರದ ದೈಹಿಕ ಶಿಖರವ
ತೀರದ ದಾಹ ಕುಗ್ಗದ ಉತ್ಸಾಹದಲ್ಲಿ ಮುನ್ನಡೆದೆ
ಆಗಸವೆ ಕೈಗೆಟುಕಿತೆಂಬ ಭಾಗದಲ್ಲಿಮುಳುಗಿಹೋದೆ
ಅಲ್ಲಿನಾ ಕಂಡೆ ಜಗದ ರಹಸ್ಯವ
ಕೊನೆಯಿಲ್ಲದ ಸಮುದ್ರದ ಅಲೆಗಳಲ್ಲಿ
ರವಿ ಮುಳುಗಿದ ಚಂದ್ರ ಕೈಬೀಸಿ ಕರೆದ.
ಪ್ರವೃತ್ತಿ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ವೃತ್ತಿಯಲ್ಲಿ ಕಾಣಲಾಗದ ಸಂತಸ ಸಂಭ್ರಮವನ್ನು ತಮ್ಮ ಪ್ರವೃತ್ತಿಯಲ್ಲಿ ಕಾಣುತ್ತಾರೆ. ಹಲವು ರೀತಿಯ ಪ್ರವೃತ್ತಿಗಳಿದ್ದರೂ ಕೂಡ ಪ್ರತಿಯೊಂದು ಪ್ರವೃತ್ತಿಗೂ ತನ್ನದೇ ಆದಂತಹ ಕೆಲವು ಸ್ಪಷ್ಟ ಗುಣಗಳಿವೆ. ಕೆಲವರು ಚಾರಣಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಇನ್ನು ಕೆಲವರು ಬರವಣಿಗೆಯಲ್ಲಿ ತೊಡಗಿಸಿಕೊಂಡಿರುತ್ತಾರೆ ಹೀಗೆ ಯೋಗ, ಸಂಗೀತ, ಸೈಕಲಿಂಗ್, ನಾಣ್ಯ ಹಾಗೂ ಸ್ಟ್ಯಾಂಪ್ಗಳ ಸಂಗ್ರಹ ,ಕೃಷಿ, ಸ್ವಿಮ್ಮಿಂಗ್, ಪ್ರವಾಸ, ಸಮಾಜಸೇವೆ, ಪರಿಸರ ಸಂರಕ್ಷಣೆ, Wildlife photography, ನೃತ್ಯ, ಹಾಸ್ಯ, ಅಭಿನಯಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.
ಕೆಲವರು ತಮ್ಮ ಪ್ರವೃತ್ತಿಯಲ್ಲೇ ವೃತ್ತಿಯನ್ನು ಕಂಡುಕೊಂಡಿರುತ್ತಾರೆ ಇನ್ನು ಕೆಲವರು ಬಿಡುವಿನ ಸಮಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ರೀತಿ ತಮ್ಮ ಪ್ರವೃತ್ತಿಯಲ್ಲಿ ಅನೇಕ ಮಜಲುಗಳನ್ನು ದಾಟಿ ಸಾಧನೆ ಮಾಡಿದವರು ನಮ್ಮ ಸುತ್ತಮುತ್ತಲಿದ್ದರೆ.
ಇಷ್ಟೆಲ್ಲಾ ಪ್ರವೃತ್ತಿಗಳಲ್ಲಿ ಪ್ರತಿಯೊಬ್ಬರೂ ತಪ್ಪದೇ ಪ್ರವಾಸವನ್ನು ನಾನಾ ಕಾರಣಗಳಿಂದ ಮಾಡಿಯೇ ಇರುತ್ತಾರೆ ತಮ್ಮ ಮಕ್ಕಳನ್ನು ಚಿಕ್ಕವಯಸ್ಸಿನಿಂದಲೇ ಪುಣ್ಯಕ್ಷೇತ್ರಗಳಿಗೆ ಕರೆದುಕೊಂಡು ಹೋಗುವುದರಿಂದ ಪ್ರಾರಂಭವಾಗುವ ಈ ಪ್ರವಾಸಗಳು ಮುಂದೆ ಬೆಳೆಯುತ್ತಾ ಸ್ನೇಹಿತರೊಟ್ಟಿಗೆ ಅದಾದ ಬಳಿಕ ಕೆಲಸದ ನಿಮಿತ್ತವಾದರೂ ಅನೇಕ ಪ್ರದೇಶಗಳಿಗೆ ಭೇಟಿ ನೀಡಿಯೇ ಇರುತ್ತೇವೆ. ಎಷ್ಟೋ ಪ್ರಯಾಣಗಳನ್ನು ಮಾಡಿದರೂ ಕೂಡ ತಮ್ಮ ಸ್ನೇಹಿತರೊಟ್ಟಿಗೆ ದೂರದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ನೆನಪುಗಳು ಪ್ರತಿಯೊಬ್ಬರ ಸ್ಮೃತಿಪಟಲದಲ್ಲಿ ಅಚ್ಚಳಿಯದಂತೆ ಉಳಿದಿರುತ್ತದೆ.
ಸುಮಾರು ಏಳು ವರ್ಷಗಳ ಹಿಂದೆ ಪಿಯುಸಿ ವ್ಯಾಸಂಗ ಮುಗಿಯಲು ಒಂದು ತಿಂಗಳು ಇರುವ ಸಮಯದಲ್ಲಿ ಪರಿಚಯವಾದ ಬೇರೆ ವಿಭಾಗದ ಸ್ನೇಹಿತನೇ ರಾಘುಲ್, ಪರೀಕ್ಷೆ ಮುಗಿಯುವುದರೊಳಗೆ ಒಂದೆರಡುಬಾರಿ ಮಾತನಾಡಿಸಿದ್ದೇವೆ ಹೊರತು ಅವನ ಬಗ್ಗೆ ನನಗಾಗಲಿ ನನ್ನ ಬಗ್ಗೆ ಅವನಿಗಾಗಲಿ ಹೆಚ್ಚೇನು ತಿಳಿದಿರಲಿಲ್ಲ. ಹೀಗೊಮ್ಮೆ ಸ್ನೇಹಿತರೆಲ್ಲರೂ ಮಾತನಾಡುತ್ತಿರುವಾಗ ನಮ್ಮೆಲ್ಲರನ್ನುದ್ದೇಶಿಸಿ ರಾಘುಲ್ ಪರೀಕ್ಷೆ ಮುಗಿದ ಬಳಿಕ ನಮ್ಮ ಊರಿಗೆ ಒಮ್ಮೆ ಹೋಗಿ ಬರೋಣ ಎಂದಿದ್ದ.
ಬಹಳ ಸೌಂದರ್ಯಯುತ ಪ್ರವಾಸಿ ತಾಣಗಳಲ್ಲಿ ಒಂದಾಗಿದಂತಹ ಅವರ ಊರಿನ ಹೆಸರನ್ನು ಕೇಳಿದೊಡನೆ ಸ್ನೇಹಿತರೆಲ್ಲರೂ ತಪ್ಪದೇ ಬರುತ್ತೇವೆ ಎಂದು ಒಪ್ಪಿಕೊಂಡರು. ನಮ್ಮ ಸ್ನೇಹಿತರ ಸ್ವಭಾವ ನಮಗೆ ತಿಳಿಯದೆ ಹೊರಡುವ ಕೊನೆಯ ಹಂತದಲ್ಲಿ ನಾನಾ ಕಾರಣಗಳನ್ನು ಹೇಳಿ ತಪ್ಪಿಸಿಕೊಳ್ಳುವವರೇ ಹೆಚ್ಚು. ಈ ವಿಷಯ ತಿಳಿದಿದ್ದ ನನಗೆ ನೇರವಾಗಿ ರಾಘುಲ್ ನ ಬಳಿ ಇವರಾರೂ ಬಾರದೇ ಹೋದರೂ ಪರವಾಗಿಲ್ಲ ನಾವಿಬ್ಬರೆ ಹೋಗಿಬರೋಣ ಎಂದಿದ್ದಕ್ಕೆ ಆತನು ಸಮ್ಮತಿಸಿದ್ದ.
ಹೀಗೆ ಈ ಮಾತುಗಳನ್ನೆಲ್ಲವನ್ನು ಆಡಿ ಸುಮಾರು ಆರು ತಿಂಗಳು ಕಳೆದುಹೋಗಿತ್ತು ಎಲ್ಲರೂ ತಮ್ಮ ಮುಂದಿನ ವ್ಯಾಸಂಗಕ್ಕಾಗಿ ಪದವಿ ಕಾಲೇಜು ಸೇರಿಕೊಂಡು ಮೊದಲ ಸೆಮಿಸ್ಟರ್ ಮುಗಿಸಿದ್ದರು. ಜುಲೈ ರಜೆ ಇರುವ ಕಾರಣ ಸ್ನೇಹಿತನ ಊರಿಗೆ ಹೋಗೋಣವೆಂದು ನಿರ್ಧರಿಸಿದಾಗ ನಾವು ಭಾವಿಸಿದಂತೆ ಸ್ನೇಹಿತರೆಲ್ಲರೂ ನಾನಾ ಕಾರಣಗಳನ್ನು ಹೇಳಿ ತಪ್ಪಿಸಿಕೊಂಡರು.
ಇತ್ತ ನಮ್ಮ ಮನೆಯಲ್ಲಿ ಇಲ್ಲಿಯವರೆಗೂ ಸ್ನೇಹಿತರೊಟ್ಟಿಗೆ ಹೊರಗೆ ಹೋಗಲು ಬಿಡದಿದಂತಹ ಸಂದರ್ಭದಲ್ಲಿ ಸ್ನೇಹಿತನೂರಿಗೆ ಹೋಗಿಬರುತ್ತೇನೆ ಎಂದ ತಕ್ಷಣ ಮನೆಯಲ್ಲಿ ಎಲ್ಲರೂ ನನ್ನ ಮೇಲೆ ಜಗಳವಾಡಿದ್ದರು ಈ ಜಗಳ ಮುಂದುವರೆದು ನೀನು ಸ್ನೇಹಿತನೊಟ್ಟಿಗೆ ಹೋಗುವುದಾದರೆ ಮನೆಗೆ ಹಿಂತಿರುಗಿ ಬರುವುದೇಬೇಡ ಎಂದಿದ್ದರು.[ ಕಾರಣ ಮನೆಗೆ ಮೊದಲ ಮಗನೆಂಬ ಪ್ರೀತಿ ಹಾಗು ಕಾಳಜಿ ]
ಆದರಿತ್ತ ಸ್ನೇಹಿತನಿಗೆ ಹೇಳಿಯಾಗಿದೆ ಹೋಗಿಬರೋಣವೆಂದು,ಇವರು ನನ್ನನು ಮನೆಗೆ ಸೇರಿಸದೆ ಹೋದರೂ ಪರವಾಗಿಲ್ಲ ಎಂದು ಭಾವಿಸಿ ಒಳ್ಳೆ ಮಳೆಗಾಲದ ತಿಂಗಳದಂತಹ ಜುಲೈ ಮೊದಲ ವಾರದಲ್ಲಿ ಬೆಳಗ್ಗಿನ ಉಪಹಾರವನ್ನು ಮನೆಯಲ್ಲಿಯೇ ಮಾಡಿಕೊಂಡು ಬಸ್ ಹತ್ತಿ ಹೊರೆಟೆವು ಉದಕಮಂಡಲದೆಡೆಗೆ.
ಜೀವನದಲ್ಲಿ ಅದು ಪ್ರಥಮಬಾರಿಗೆ ಸ್ಸ್ನೇಹಿತನೊಟ್ಟಿಗೆ ಬಹಳ ದೂರದೂರಿಗೆ ಹೋಗುತ್ತಿದ್ದಿದರಿಂದ ಮನಸ್ಸಿನಲ್ಲಿ ಒಮ್ಮೆ ರೋಚಕವೆನಿಸಿದರೂ, ಮತೊಮ್ಮೆ ಭಯವಾಗುತ್ತಿತ್ತು ನಿಸರ್ಗದ ಮಡಿಲಿಗೆ ಹೋಗುತ್ತಿದ್ದೇನೇಎಂದು ರೋಚಕವೆನಿಸಿದರು ಊರು ಸೇರಿದ ಬಳಿಕ ಆರೋಗ್ಯ ಕೈಕೊಟ್ಟರೆಂಬ ಭಯವಾಗುತಿತ್ತು ಆದರೆ ಸ್ನೇಹಿತನ ಮಾತುಗಳು ನನ್ನ ಆತ್ಮವಿಶ್ವಾಸವನ್ನು ಬಲಪಡಿಸುತಿತ್ತು.
ಗುಂಡ್ಲುಪೇಟೆಯನ್ನು ದಾಟಿ ಮುಂದೆ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಬಸ್ ಸಾಗುತಿತ್ತು.ಮಳೆಗಾಲವೇ ಆಗಿದ್ದರಿಂದ ಕಾಡು ಸಂಪೂರ್ಣವಾಗಿ ಹಸಿರಿನ ಹೊದಿಕೆಯೊದ್ದು ಕಂಗೊಳಿಸುತ್ತಿತ್ತು.ಯಾವುದಾದರು ಪ್ರಾಣಿಗಳು ಕಾಣಬಹುದೆಂಬ ಆಶಾಭಾವದಲ್ಲಿ ಕಣ್ಣುಗಳನ್ನು ಅರಳಿಸಿಕೊಂಡು ಕುಳಿತಿದ್ದ ನಮಗೆ ಮೊದಲು ಕಂಡದ್ದು ವಾನರಗಳ ಸಮೂಹ.ಯಾವುದಾದರೂ ಆಹಾರದ ಪೊಟ್ಟಣವನ್ನು ಎಸೆಯುತ್ತಾರೆಂದು ಸಾಲಾಗಿ ಕುಳಿತಿದ್ದ ವಾನರಗಳನ್ನು ಕಂಡಾಗ ಮರುಕ ಹುಟ್ಟಿತು. ರಾಷ್ಟ್ರೀಯ ಉದ್ಯಾನವನವಾಗಿದ್ದರಿಂದ ಅರಣ್ಯ ಇಲಾಖೆಯವರು ಸ್ವಲ್ಪ ಸ್ವಲ್ಪ ದೂರದಲ್ಲಿಯೇ ಬೋರ್ಡ್ ಗಳ ಮೇಲೆ ದಪ್ಪ ಅಕ್ಷರಗಳಲ್ಲಿ ನಿಧಾನವಾಗಿ ಚಲಿಸಿ, ಪ್ಲಾಸ್ಟಿಕ್ ನಿಷೇಧಿಸಲಾಗಿದೆ, ಛಾಯಾಗ್ರಹಣ ನಿಷೇಧಿಸಲಾಗಿದೆ, ಪ್ರಾಣಿಗಳಿಗೆ ಆಹಾರವನ್ನು ನೀಡಬೇಡಿ ಎಂಬ ಬೋರ್ಡ್ ಗಳು ಆಗಾಗ ಗೋಚರಿಸುತ್ತಲೆ ಇದ್ದವು. ಹೀಗೆ ಮುಂದೆ ಸಾಗುತ್ತಾ ಕಾಡುಕೋಣಗಳು, ನವಿಲು, ಆನೆಗಳು, ಹಾಗೂ ಜಿಂಕೆಗಳ ಹಿಂಡು ಕಂಡವು.
ಇಷ್ಟಾಗುವುದರೊಳಗೆ ಬಸ್ ತಮಿಳುನಾಡನ್ನು ಪ್ರವೇಶಿಸಿ ಮುಂದೆ ಮಧ್ಯಾಹ್ನದ ಊಟವನ್ನು ಮುಗಿಸಿಕೊಂಡು ಹೊರಟೆವು, ಗಾಳಿಯ ರಭಸಕ್ಕೆ/ಬಡಿತಕ್ಕೆ ಮರಗಳು ಉರುಳಿ ತೆರವುಗೊಳಿಸಿದ ರಸ್ತೆಗಳ ಮೂಲಕ ಉದಕಮಂಡಲದ ಕಣಿವೆಯಲ್ಲಿ ಬಸ್ ನಿಧಾನವಾಗಿ ಬೆಟ್ಟ ಗುಡ್ಡವನ್ನೇರುತ್ತಿತ್ತು, ಸುತ್ತಲೂ ನೀಲಗಿರಿಸ್ ನೆಡುತೋಪುಗಳು ಹೆಚ್ಚಾಗಿರುವ ಕಾರಣ ನೀಲಗಿರೀಸ್ ಮರಗಳ ಮೂಲಕ ಬೀಸುತ್ತಿದಂತಹ ಸುಗಂಧಭರಿತ ಗಾಳಿಯು ನಮ್ಮನ್ನು ಮತ್ತಷ್ಟು ನೀಳವಾಗಿ ಉಸಿರೆಳೆದು ಕೊಳ್ಳುವಂತೆ ಪ್ರೇರೇಪಿಸುತ್ತಿತ್ತು. ಅಂತೂ ಕೊನೆಗೂ ಘಾಟ್ ಸೆಕ್ಷನ್ ಗಳನ್ನೆಲ್ಲವನ್ನು ದಾಟಿ ಸ್ನೇಹಿತನ ಮನೆಯ ಹತ್ತಿರವಿರುವ ಬಸ್ ಸ್ಟ್ಯಾಂಡ್ ಅನ್ನು ತಲುಪಿದಾಗ ಸಮಯ ಮೂರು ಗಂಟೆಯಾಗಿತ್ತು.
ನಮ್ಮ ಆಗಮನವನ್ನು ನಿರೀಕ್ಷಿಸಿದ್ದ ಸ್ನೇಹಿತನ ತಂದೆಯವರು ನಮಗಾಗಿ ಇನ್ನೆರಡು ಕೊಡೆಗಳನ್ನು ಹಿಡಿದುಕೊಂಡು ನಿಂತಿದ್ದರು, ಮಳೆ ಸುರಿಯುತ್ತಲೇ ಇದ್ದಿದ್ದರಿಂದ ಬಸ್ ಇಳಿದ ಕೂಡಲೇ ಅರಳಿಸಿದ್ದ ಕೊಡೆಯೊಳಗೆ ಸೇರಿಕೊಂಡೆವು. ಸುತ್ತಲೂ ಬೆಳೆದಿದ್ದ ದೈತ್ಯ ಮರಗಳ ರಸ್ತೆಯ ಮೂಲಕ ಸ್ವಲ್ಪ ದೂರದಲ್ಲಿ ಇದ್ದ ಮನೆಯನ್ನು ಸೇರಿಕೊಂಡೆವು. ನಮ್ಮನ್ನು ಬಹಳ ಪ್ರೀತಿಯಿಂದ ಬರಮಾಡಿಕೊಂಡವರು ಸ್ನೇಹಿತನ ಅಜ್ಜಿ ಹಾಗೂ ಅವರ ಚಿಕ್ಕಮ್ಮ. Freshup ಆದ ಬಳಿಕ ಬಿಸಿ ಬಿಸಿ ಊಟವನ್ನು ಬಿಡಿಸಿದರು. ಪ್ರಯಾಣದ ಚಳಿಯಲ್ಲಿ ನಡುಗಿದ್ದ ನಮಗೆ ಈ ಬಿಸಿಊಟ ದೇಹದ ಶಾಖವನ್ನು ಹೆಚ್ಚು ಮಾಡಿತು. ಸಂಜೆ ಗುಡ್ಡದ ಮೇಲಿರುವ ದೇವಸ್ಥಾನಕ್ಕೂ ಹಾಗೂ ಗೌರ್ನಮೆಂಟ್ ಗೆಸ್ಟ್ ಹೌಸ್ ಅನ್ನು ನೋಡಿಕೊಂಡು ಮನೆಗೆ ಹಿಂತಿರುಗಿದೆವು.
ಮರುದಿನದ ಭೇಟಿ ನೀಡಬೇಕಾದಂತಹ ಪ್ರವಾಸಿ ತಾಣವನ್ನು ಸ್ನೇಹಿತನೆ ನಿರ್ಧರಿಸಿದ್ದ. ಹೀಗಾಗಿ ಬೆಳಿಗ್ಗೆ ಬೇಗನೆ ಎದ್ದು ಉಪಹಾರವನ್ನುಮಾಡಿ ಬಸ್ ಹತ್ತಿ ಊಟಿ ತಲುಪಿದೆವು. ಸ್ನೇಹಿತನ ತಂದೆಯವರು ಸುತ್ತಮುತ್ತಲ ಪ್ರವಾಸಿ ತಾಣಗಳದಂತಹ Botanical garden, Rose garden ಹಾಗೂ ಸುತ್ತಲಿದ್ದ ಕೆರೆಗಳಿಗೆ ಕರೆದುಕೊಂಡು ಹೋದರು. ಮಳೆ ದೋ ಎಂದು ಸುರಿಯುತ್ತಿದ್ದರಿಂದ ಹಾಕಿಕೊಂಡು ಹೋಗಿದಂತಹ ಬಟ್ಟೆಗಳೆಲ್ಲವೂ ಮಳೆಯ ನೀರಿನಲ್ಲಿ ತೊಯ್ದುಹೋಗಿದ್ದವು. ಜುಲೈ ಪ್ರವಾಸಿ ಸಮಯವಲ್ಲವಾಗಿದ್ದುದರಿಂದ ಎಲ್ಲಾ ಪ್ರವಾಸಿ ತಾಣಗಳು ಖಾಲಿ ಖಾಲಿ ಹೊಡೆಯುತ್ತಿದ್ದವು ಆದರೂ ಆಗಾಗ ಅಲ್ಲಲ್ಲಿ ಬೆರಳೆಣಿಕೆಯಷ್ಟು ಜನ ಕಾಣಿಸಿಕೊಳ್ಳುತ್ತಿದ್ದರು.
ಸುತ್ತಮುತ್ತಲಿದ್ದ ಪ್ರವಾಸಿ ತಾಣವನ್ನು ನೋಡುವುದರೊಳಗೆ ಸಮಯ ನಾಲ್ಕು ಗಂಟೆಯಾಗಿತ್ತು ಈಗ ಶಾಪಿಂಗ್ ಸಮಯ ಸ್ನೇಹಿತನ ತಂದೆಯವರು ಕೆಲವಷ್ಟು ಅಂಗಡಿಗಳಿಗೆ ಕರೆದುಕೊಂಡು ಹೋಗುತ್ತಿದ್ದರು ಅಂಗಡಿಯವರು ನಾವು ಕನ್ನಡಿಗರೆಂದು ತಿಳಿದಾಗ ನಮ್ಮನ್ನು ಬಹಳ ಆತ್ಮೀಯವಾಗಿ ಮಾತನಾಡಿಸುತ್ತಿದ್ದರು.[ ಆಗಲೇ ನನಗೆ ತಿಳಿದಿದ್ದು ಮೊದಲು ಉದಕಮಂಡಲ ಕರ್ನಾಟಕಕ್ಕೆ ಸೇರಿತೆಂದು] ಊಟಿಯ ಹೆಸರಾಂತ Homemade chocolate ,Tea powder, Nilgiri oil, Varkeyಗಳನ್ನು ತೆಗೆದುಕೊಳ್ಳುವುದರೂಳಗೆ ಬ್ಯಾಗ್ ತುಂಬಿತುಳುಕುತ್ತಿತ್ತು.ಇವುಗಳನ್ನೆಲ್ಲವನ್ನೂ ಎತ್ತಿಕೊಂಡು ಮನೆಗೆ ಹಿಂತಿರುಗಿದೆವು.
ರಾತ್ರಿ ಊಟ ಮಾಡಿ ಅಜ್ಜಿ ಅವರೊಂದಿಗೆ ಮಾತನಾಡುತ್ತಿದ್ದಾಗ ಅವರು ಊಟಿಯಲ್ಲಿ ಕಳೆದ ಬಾಲ್ಯದ ದಿನಗಳ ಅನುಭವಗಳನ್ನು ನಮ್ಮಟ್ಟಿಗೆ ಹಂಚಿಕೊಳ್ಳುತ್ತಿದ್ದರು, ಅವರು ತಮ್ಮ ಬಾಲ್ಯದಲ್ಲಿ ಬೆಟ್ಟಗುಡ್ಡಗಳಲ್ಲಿ ಆಟವಾಡಿಕೊಂಡು ಬೆಳೆದಂತಹ ಸಮಯವನ್ನು ನೆನಪಿಸಿಕೊಂಡು ಬಹಳ ಸಂತೋಷ ಪಡುತ್ತಿದ್ದರು. ಸ್ವಲ್ಪ ದೊಡ್ಡ ಮನೆತನದವರೇ ಆಗಿದ್ದರಿಂದ ಯಾರೇ ಹೊರಗಿನವರು ಬಂದರು ಅವರ ಯೋಗಕ್ಷೇಮ ಊಟೋಪಚಾರಗಳೆಲ್ಲವೂ ಇವರ ಮನೆಯಲ್ಲಿ ನಡೆಯುತ್ತಿತ್ತು. ನಾಳೆ ಇಲ್ಲೇ ಸುತ್ತಮುತ್ತಲಿರುವ ಟೀ ಎಸ್ಟೇಟ್ ಹಾಗೂ ಉದಕಮಂಡಲದಲ್ಲಿ ಅತ್ಯಂತ ಹಳೆಯ ಹಾಗೂ ಬೃಹದಾಕಾರವಾಗಿ ಗುಡ್ಡದಮೇಲೆ ಬೆಳೆದಿರುವಂತಹ ನೀಲಗಿರಿ ಮರವನ್ನು ನೋಡಿಕೊಂಡು ಬರುವಂತೆ ಸಲಹೆಯನ್ನು ಕೊಟ್ಟರು.
ಅಜ್ಜಿಯವರ ಸಲಹೆಯಂತೆ ಎಸ್ಟೇಟ್ಅನ್ನು ನೋಡುತ್ತಿರುವಾಗಲೇ ನಮಗಿಂತ ದೂರದಲ್ಲೇ ಅಜಾನುಬಾಹುವಾಗಿ ಬೆಳೆದಿದಂತಹ ನೀಲಗಿರಿ ಮರಗಳ ಸಮೂಹ ನಮ್ಮನ್ನು ಕೈಬೀಸಿ ಕರೆದವು. ಮುಂದೆ ಸಾಗಿ ಮರದ ಹತ್ತಿರ ಬರುತ್ತಿದ್ದಂತೆ ನೀಳವಾಗಿ ಬೆಳೆದು ನಿಂತಿದಂತಹ ಮರವನ್ನು ನೋಡಿ ಮೂಕವಿಸ್ಮಿತರಾದೆವು. ಅದರ ಬುಡದಲ್ಲಿ ನಿಂತಿದ್ದ ನಮಗೆ ಗಲಿವಾರನ ಮುಂದೆ ನಿಂತ ಮನುಷ್ಯನಂತೆ ಭಾಸವಾಯಿತು ಏನು ಅದರ ಬೆಳವಣಿಗೆ!! ಹತ್ತಾರು ಜನ ಸುತ್ತುವರಿಯ ಬಹುದಾದಂತಹ ಅದರ ಬುಡ!! ತಲೆಯೆತ್ತಿ ನೋಡಿದರೆ ಕಣ್ಣಿನ ದೃಷ್ಟಿಗೆ ನಿಲುಕದ ಎತ್ತರ!! ಏನೀ ನಿಸರ್ಗದ ಮಹಿಮೆ ತನ್ನೊಳಗಿನ್ನೆಷ್ಟು ವಿಸ್ಮಯಗಳನ್ನು ಅಡಗಿಸಿಕೊಂಡಿದೆಯೋ ಎಂದೆನಿಸಿತು.
ಮನೆಗೆ ಹಿಂದಿರುಗಿ ಕಾಡುದಾರಿಯಲ್ಲಿ ನಡೆದುಕೊಂಡು ಹೋಗೋಣವೆಂದು ನಿರ್ಧರಿಸಿದ್ದಾಯಿತು. ಹುಲಿಗಳಿರುವ ದೈತ್ಯ ನೀಲಗಿರಿ ನೆಡುತೋಪುಗಳ ನಿಶಬ್ದ ಕಾಲುದಾರಿಯ ಮುಖಾಂತರ ನಡೆದುಕೊಂಡು ಹೋಗುವುದೇ ರೋಚಕವೆನಿಸಿತ್ತು. ಅಂದು ಎಂದಿನಂತೆ ಸುತ್ತಮುತ್ತಲ ಪ್ರವಾಸಿ ತಾಣ ವಾದಂತಹ Shooting made, Pay lakeಗಳನ್ನು ನೋಡಿದ್ದಾಯಿತು ಇಷ್ಟಗುವುದರೊಳಗೆ ಮೂರು ದಿನ ಮೂರುಗಳಿಗೆಯಂತೆ ಕಳೆದುಹೋಗಿತ್ತು.ಇತ್ತ ಮೈಸೂರಿಗೆ ವಾಪಸ್ ಹಿಂದಿರುಗಿ ಬರುವಂತೆ ಕರೆಯಮೇಲೆ ಕರೆಗಳು ಬರುತ್ತಲೇ ಇದ್ದವು ಅದರಂತೆ ಬಟ್ಟೆಗಳನ್ನೆಲ್ಲವನ್ನು ಜೋಡಿಸಿ ಕೊಳ್ಳುತ್ತಿದ್ದಾಗ ತೆಗೆದುಕೊಂಡು ಹೋಗಿದ್ದ ಒಂದು ಬ್ಯಾಗ್ ಜೊತೆ ಇನ್ನೆರಡುಸೇರಿಕೊಂಡಿದ್ದವು.
ಬೆಳಗ್ಗೆ ನಾವು ಹೊರಡುತ್ತೇವೆ ಎಂದು ವಿಷಯ ತಿಳಿದ ಅಜ್ಜಿಗೆ ನಮ್ಮನ್ನು ಕಳುಹಿಸಿಕೊಡಲು ಸ್ವಲ್ಪವೂ ಮನಸ್ಸಿರಲಿಲ್ಲ ಇನ್ನೆರಡು ದಿನ ಇಲ್ಲಿಯೇ ಇದ್ದು ಆಮೇಲೆ ಹೊರಡಬೇಕು ಎಂಬುದು ಅವರ ಅಪೇಕ್ಷೆಯಾಗಿತ್ತು.ಸ್ನೇಹಿತನ ಚಿಕ್ಕಮ್ಮನವರಂತೂ ನಮ್ಮನ್ನು ತಮ್ಮ ಮಕ್ಕಳಂತೆ ನೋಡಿಕೊಂಡರು. ಸದಾ ನಮಗಾಗಿ ಮಾಡಿ ಬಡಿಸುತ್ತಿದ್ದಂತಹ ಬಿಸಿ ಅಡುಗೆ ಮೃಷ್ಟಾನ್ನ ಭೋಜನವಾಗಿತ್ತು ಅದರಲ್ಲಿಯೂ ಅವರು ಮಾಡಿದಂತಹ ಮೆಣಸಿನ ಸಾರು ನನಗೆ ಈಗಲೂ ನೆನಪಿಸಿಕೊಂಡರೆ ಬಾಯಲ್ಲಿ ನೀರೂರುತ್ತದೆ ಅಷ್ಟು ಚೆನ್ನಾಗಿ ಸಾಂಬಾರ್ ಮಾಡಿದ್ದರು.
ಇಷ್ಟೆಲ್ಲಾ ಚೆನ್ನಾಗಿ ನೋಡಿಕೊಂಡಿದಂತಹ ನನ್ನ ಸ್ನೇಹಿತನ ಮನೆಯವರ ಪ್ರೀತಿ ವಿಶ್ವಾಸಕ್ಕೆ ನಾನು ಮಾರುಹೋಗಿದ್ದೆ. ಆ ಸಮಯದಲ್ಲಿ ನಾನು ಅವರಿಗೆ ಏನೇ ಕೊಟ್ಟರು ಅದು ಅವರ ಪ್ರೀತಿ-ವಿಶ್ವಾಸಕ್ಕೆ ಕಡಿಮೆಯೇ ಎಂದೆನಿಸುತ್ತಿತ್ತು. ಕೊನೆಯದಾಗಿ ಅಜ್ಜಿಯ ಆಶೀರ್ವಾದವನ್ನು ಪಡೆಯುತ್ತಿದ್ದಾಗ ಇನ್ನು ಮುಂದೆ ರಜದ ಸಮಯದಲ್ಲಿ ಇಲ್ಲಿಗೆ ಬರುತ್ತಲೇ ಇರಬೇಕು ಎಂದು ಹೇಳಿದ್ದರು. ಎಷ್ಟೇ ಆದರೂ ನನ್ನಂತಹ ಸಾವಿರಾರು ಜನರ ಯೋಗಕ್ಷೇಮವನ್ನು ವಿಚಾರಿಸಿದ ಕೈಯಲ್ಲವೇ ?. ಮನೆಗೆ ಬಂದವರನ್ನು ಬರೀ ಕೈಯಲ್ಲಿ ಕಳುಹಿಸಬಾರದೆಂದು, ದೊಡ್ಡವರು ಕೊಟ್ಟಿದ್ದನ್ನು ತಿರಸ್ಕರಿಸಬಾರದು ಎಂದೇಳಿ ಹಣವನ್ನು ಕೊಟ್ಟಿದ್ದರು. ಅವರ ಅಪಾರ ಪ್ರೀತಿಗೆ ಮಾರುಹೋಗಿದ್ದ ನನಗೆ ಮನೆಯಿಂದ ಹೊರಡುವಾಗ ಕಣ್ಣುಗಳು ಹಸಿಯಾಗಿದ್ದವು ಭಾರವಾದ ಮನಸ್ಸಿನಲ್ಲಿ ಬಸ್ ಹತ್ತಿ ಮೈಸೂರಿಗೆ ತಲುಪಿದ ಬಳಿಕ, ತಲುಪಿದ ವಿಷಯವನ್ನು ಕರೆಮಾಡಿ ತಿಳಿಸಿದ್ದಾಯಿತು.
ಇಲ್ಲಿ ರೋಚಕದ ವಿಷಯವೆಂದರೆ ನಾನು ಹಿಂತಿರುಗಿ ಬಂದ ಬಳಿಕವೇ ಮನೆಯವರಿಗೆ ತಿಳಿದಿದ್ದು ನಾನು ಯಾರ ಜೊತೆ ಹೋಗಿದ್ದೇನೆಂದು.
ಇದಾದ ಅನೇಕ ವರ್ಷಗಳಾದ ಮೇಲೆ ನಾನು ಊಟಿಗೆ ಹೋಗಿದ್ದೆ ಅಷ್ಟರಲ್ಲಾಗಲೇ ಅಜ್ಜಿ ಇಹಲೋಕ ತ್ಯಾಜಿಸಿದ್ದರು.ವಿಷಯ ತಿಳಿದು ಮತ್ತಷ್ಟು ದುಃಖವಾಯಿತು. ಈ ಪ್ರವಾಸ ಕಥನವನ್ನು ನಾನು ಎಷ್ಟೊ ಬಾರಿ ಬರೆಯಬೇಕೆಂದು ಪ್ರಯತ್ನಪಟ್ಟಿದ್ದರು ನಾನಾ ಕಾರಣಗಳಿಂದ ಆಗಿರಲಿಲ್ಲ ಆದರೆ ಈ Lockdown ಸಮಯದಲ್ಲಿ ಸ್ನೇಹಿತನ ತಂದೆಯವರು ಸರಕಾರಿ ಇಲಾಖೆಯಿಂದ ನಿವೃತ್ತಿ ಹೊಂದಿದ್ದಾರೆ, ಹೀಗಾಗಿ ಅವರ ಬರುವಿಕೆಗಾಗಿ ನಾವಿಲ್ಲಿ ಕಾಯುತ್ತಿದ್ದೇವೆ.ಅವರ ಪ್ರೀತಿ ವಿಶ್ವಾಸಕ್ಕೆ ಮಾರುಹೋದ ನಾನು ನನ್ನ ಈ ಪುಟ್ಟ ಬರಹವನ್ನು ಸಂಪೂರ್ಣವಾಗಿ ನನ್ನ ಸ್ನೇಹಿತನ ಮನೆಯವರಿಗೆ ಸಮರ್ಪಿಸಿದ್ದೇನೆ. ಸ್ನೇಹಿತನ ಚಿಕ್ಕಮ್ಮನವರು ಕೂಡ ನಿವೃತ್ತಿ ಹೊಂದಿದ ಬಳಿಕ ನಮ್ಮೊಟ್ಟಿಗೆ ಮೈಸೂರಿನಲ್ಲಿ ಇರಬೇಕೆಂಬುದು ನನ್ನ ಆಶಯವಾಗಿದೆ.
ಹೀಗೆ ನಾವೆಲ್ಲರೂ ಸ್ನೇಹಿತರೊಟ್ಟಿಗೆ ಅನೇಕ ಪ್ರದೇಶಗಳಿಗೆ ಭೇಟಿ ನೀಡಿಯೇ ಇರುತ್ತೇವೆ ಅವುಗಳಲ್ಲೆಲ್ಲಾ ಪ್ರಕೃತಿಯೊಂದಿಗೆ ಕಳೆದ ಸಮಯವನ್ನು ಮರೆಯಲು ಸಾಧ್ಯವೇ ಇರುವುದಿಲ್ಲ ಏಕೆಂದರೆ ಪ್ರಕೃತಿಯ ಹಸಿರಿನೊಂದಿಗೆ ಕಳೆದ ಜೀವನದ ಸಮಯ ಸದಾ ಹಸಿರಾಗಿರುತ್ತವೆ.

Wonderfull, All The Best. Teju
ReplyDeleteಒಳ್ಳೆ ಪ್ರವಾಸ ಕಥನ, ನಿನ್ನ ಈ ಕಾರ್ಯಗಳನ್ನು ಮುಂದುವರಿಸು. ಶುಭಾಶಯಗಳು.
ReplyDeleteI wish to join you guys for the next plan...🤞🤞
ReplyDeleteNice article Teju.. All the best 👍
ReplyDeleteHey nice lo!
ReplyDeleteNice theju 😍
ReplyDeleteNice article sir
ReplyDeleteKeep writing