- ಎಸ್ ಪಿ ತೇಜರಾಜು.
ನೀವು ಅಮೆರಿಕದ ನ್ಯೂಯಾರ್ಕ್ ಸಿಟಿ ಭೇಟಿ ನೀಡಿದಲ್ಲಿ ಅಲ್ಲಿರುವ ಸ್ಟ್ಯಾಚು ಆಫ್ ಲಿಬರ್ಟಿಯನ್ನು ನೋಡಿರುತ್ತೀರಿ, ಬ್ರೆಜಿಲ್ನ ನ ರಿಯೊ ಡಿ ಜನೈರೊ ನಗರ ಬೇಟಿ ನೀಡಿದಲ್ಲಿ ಕ್ರಿಸ್ತನ ಪ್ರತಿಮೆಯನ್ನು ನೋಡಿರುತ್ತೀರಿ, ಅಷ್ಟೆಲ್ಲಾ ದೂರ ಯಾಕೆ ನಮ್ಮ ದೇಶದಲ್ಲೇ ಇರುವ ಪ್ರಪಂಚದ ಅತ್ಯಂತ ಎತ್ತರದ ವಿಗ್ರಹವಾದ ಸ್ಟಾಚು ಆಫ್ ಯುನಿಟಿ, ದಕ್ಷಿಣ ಭಾರತದಲ್ಲಿ ಇರುವ ಸ್ಟ್ಯಾಚು ಆಫ್ ಈಕ್ವಾಲಿಟಿ ಪ್ರತಿಮೆಗಳನ್ನು ನೋಡಿರಬಹುದು, ಈ ಶತಮನಕ್ಕೆ ಇಂತಹ ಮೂರ್ತಿಗಳು ಪ್ರಪಂಚದ ಅದ್ಭುತ ಎಂದು ಹೇಳಿದರೆ ತಪ್ಪಾಗಲಾರದು.
ಭೂಮಿಯ ಮೇಲೆ ಮಾನವ ಸೃಷ್ಟಿಯಾದ ಬಳಿಕ, ಮಾನವ ತನ್ನದೇ ಆದಂತಹ ಅದ್ಭುತಗಳನ್ನ ಭೂಮಿ ಮೇಲೆ ಸೃಷ್ಟಿಸುತ್ತ ಬಂದಿದ್ದಾನೆ, ಕಲ್ಲಿನ ಬಳಕೆ ಈತನ ಜೀವನದಲ್ಲಿ ಹಾಸು ಹೊಕ್ಕಾಗಿ ಬೆಳೆದು ನಿಂತಿದೆ, ಬೇಟೆಯಾಡಲಿಕ್ಕೆ, ಪಾತ್ರೆ ತಯಾರಿಕೆಗೆ, ತನ್ನ ಮನೆ ಕಟ್ಟಿಕೊಳ್ಳಲು, ದೇಗುಲ, ಮೂರ್ತಿನಿರ್ಮಾಣಕ್ಕೆ ಕಲ್ಲನ್ನು ತನ್ನ ಕೈಯಿಂದ ಕೆತ್ತಿ ಶಿಲೆಗೆ ಕಲೆಯ ಚಾಪನ ನೀಡಿದ್ದಾನೆ.
ಇಂತಹ ಶಿಲೆಗೆ ಕಲೆಯ ಛಾಪನ್ನು ನೀಡಿರುವಂತಹ ಅದ್ಭುತ ವಿನ್ಯಾಸಗಳು ನಮ್ಮ ಸುತ್ತಮುತ್ತಲಿವೆ, ಅವುಗಳು ಶಿಲೆಯನ್ನು ಕೊರೆದು ಮಾಡಿದಂತಹ ಗುಹಾಂತರ ದೇವಾಲಯಗಳಾಗಿರಬಹುದು ( ಅಜಂತ, ಎಲ್ಲೋರ, ಐಹೊಳೆ) ಸೂಕ್ಷ್ಮ ಕೆತ್ತನೆಗಳುಳ್ಳ ಹೊಯ್ಸಳರ ಬೇಲೂರು, ಹಳೇಬೀಡು ದೇವಾಲಯಗಳಾಗಿರಬಹುದು, ಶ್ರವಣಬೆಳಗೊಳದ ಏಕಶಿಲಾ ವಿಗ್ರಹವಾಗಿರಬಹುದು.
ಇನ್ನು ಗೊಮ್ಮಟೇಶ್ವರನ ವಿಗ್ರಹದ ಮುಂದೆ ನಿಂತಾಗ ಹೊಂದಾಣಿಕೆಯಾಗದ ಎತ್ತರ ನಮ್ಮನ್ನು ಮೂಕವಿಸ್ಮಯರನ್ನಾಗಿಸುತ್ತದೆ. ಶ್ರವಣಬೆಳಗೊಳದ ಏಕಶಿಲಾ ವಿಗ್ರಹ ಕೇವಲ ಮೂರ್ತಿಯಾಗಿ ನಿಲ್ಲದೆ ಹತ್ತಾರು ವಿಷಯಗಳನ್ನು ಆಗರವಾಗಿದೆ.
ನಮ್ಮಲ್ಲಿ ಕೆಲವರು ಆಸ್ತಿಕರು ಇರಬಹುದು, ನಾಸ್ತಿಕರು ಇರಬಹುದು, ಇದರಲ್ಲಿಯೂ ಕೆಲವರು ಮೂರ್ತಿ ಆರಾಧಕರು ಇರಬಹುದು, ಇಲ್ಲದೆಯೂ ಇರಬಹುದು, ಕೆಲವು ಬಾರಿ ಮೂರ್ತಿಗಳನ್ನು ನಿರ್ಲಿಪ್ತ ರೂಪದಲ್ಲಿ ಪೂಜಿಸಲುಬಹುದು ಉದಾ ಶಿವನನ್ನು ಲಿಂಗದ ರೂಪದಲ್ಲಿ ಆರಾಧಿಸುವುದು, ಮೂರ್ತಿ ಆರಾಧಕರಲ್ಲೊಂದು ಮಾತು ಪ್ರಚಲಿತದಲ್ಲಿದೆ " ನಂಬಿದರೆ ದೈವ ಇಲ್ಲವಾದರೆ ಮೂರ್ತಿ", ಈ ಮೂರ್ತಿಗಳನ್ನು ಇಡುವ ಆಲಯ / ದೇಗುಲ ಎಂಬುದು ಕೇವಲ ಧಾರ್ಮಿಕ ದೃಷ್ಟಿಕೋನಕ್ಕೆ ಮಾತ್ರ ಸೀಮಿತವಾಗಿರದೆ, ಇದೊಂದು ಅದ್ಭುತ ವಾಸ್ತುವನ್ನು ಒಳಗೊಂಡ ವಿಜ್ಞಾನವಾಗಿದೆ. ಸೂಕ್ಷ್ಮ ಕೆತ್ತನೆಗಳುಳ್ಳ ದೇವಾಲಯಗಳು ನಮ್ಮ ಪೂರ್ವಜರ ಜ್ಞಾನದ ಮಟ್ಟವನ್ನು ವ್ಯಕ್ತಪಡಿಸುತ್ತದೆ ಅರ್ಥಾತ್ ಕಲ್ಲಲ್ಲಿ ಹೂವು ಹೊರಳಿಸಿದ ಬಗೆ.
ಬೇಲೂರಿನ ಚೆನ್ನಕೇಶವ ದೇವಾಲಯ ತೆಗೆದುಕೊಳ್ಳಿ ಇದೊಂದು ಅದ್ಭುತ ಶಿಲಾ ವಿನ್ಯಾಸ, ಈ ದೇವಾಲಯದ ವಿಶೇಷತೆ ಎಂದರೆ ಕಲ್ಲಿನಿಂದ ನಿರ್ಮಾಣವಾದ ಈ ದೇವಾಲಯವನ್ನು ಒಂದೊಂದೇ ಕಲ್ಲನ್ನು ತೆಗೆದು ಮತ್ತದೇ ರೀತಿಯಲ್ಲಿ ಜೋಡಿಸಬಹುದು ( Puzzel ಜೋಡಿಸುವ ರೀತಿಯಲ್ಲಿ ) ಇಂತಹ ಅದ್ಭುತ ದೇವಾಲಯ ನಿರ್ಮಾಣಕ್ಕೆ ಆಗಿನ ಕಾಲದಲ್ಲಿಯೇ ಸುಮಾರು 190 ವರ್ಷಗಳಾಗಿದ್ದವು. ಪೂರ್ವಜರನ್ನು ಹೋಲಿಸಿಕೊಂಡರೆ ನಾವು ಅವರಿಗಿಂತ ವೈಜ್ಞಾನಿಕವಾಗಿ ಮುಂದಿರಬಹುದು ಆದರೆ ಅಂತಹ ದೇವಾಲಯಗಳ ಮರುಸೃಷ್ಟಿ ಇಂದಿಗೆ ನಿಜವಾಗಿಯೂ ಸಾಧ್ಯವೇ ?
.jpeg)
ಇಂತಹ ಅದ್ಭುತ ಕಲೆ ಸೃಷ್ಟಿ ಆಗಬೇಕಾದರೆ ಮೂಲವಾಗಿ ಬೇಕಾಗಿದ್ದು ಶಿಲೆಗಳು, ಈ ಶಿಲೆಗಳು ಇರದೆ ಹೋಗಿದ್ದರೆ ಇಂತಹ ಕಲೆ ಸೃಷ್ಟಿಯಾಗುತ್ತಿರಲಿಲ್ಲ. ಶಿಲೆಗಳಿಗೆ ಸಂಬಂಧಪಟ್ಟಂತೆ ನಮಗೆ ಬಹಳಷ್ಟು ಬಾರಿ ಗೊಂದಲಗಳು ಇರಬಹುದು ಏಕೆಂದರೆ ಒಂದು ಕಡೆಯ ಶೀಲಾ ವಿನ್ಯಾಸ ಮತ್ತೊಂದು ಕಡೆ ಕಾಣಸಿಗದು, ಮೈಸೂರಿನಲ್ಲಿರುವ ಚಾಮುಂಡಿಬೆಟ್ಟದ ಶಿಲೆಯನ್ನು, ತುಮಕೂರಿನಲ್ಲಿರುವ ದೇವರಾಯನದುರ್ಗ, ದೊಡ್ಡಬಳ್ಳಾಪುರದಲ್ಲಿ ಇರುವ ನಂದಿಬೆಟ್ಟ ತೆಗೆದುಕೊಳ್ಳಿ ಇದರ ವಿನ್ಯಾಸವೇ ಬೇರೆ, ಮಧುಗಿರಿಯಲ್ಲಿರುವ ಶಿಲೆಯನ್ನು ಗಮನಿಸಿ ಇದು ಏಷ್ಯಾ ಖಂಡದ ಎರಡನೇ ಅತಿದೊಡ್ಡ ಏಕಶಿಲಾ ಬಂಡೆ, ಗಜೇಂದ್ರಗಡ ಬೆಟ್ಟವನ್ನು ಗಮನಿಸಿ ಇದು ಭೂಮಿಯ ಮೇಲೆದ್ದ ದಿಣ್ಣೆಯಂತೆ ಕಾಣುತ್ತದೆ, ನಮ್ಮ ಬಳ್ಳಾರಿ ರಾಯಚೂರು ಭಾಗದ ಶಿಲಾ ರಚನೆಯನ್ನು ಗಮನಿಸಿ ಇವುಗಳನ್ನು ಯಾರೋ ಒಂದರ ಮೇಲೆ ಮತ್ತೊಂದು ಶಿಲೆಯನ್ನು ಜೋಡಿಸಿದ ರೀತಿ ಕಾಣಸಿಗುತ್ತವೆ. ಹಗದ್ರೆ ಶಿಲೆಗಳ ಏಕಿಷ್ಟು ವೈವಿಧ್ಯಮಯವಾದವು ? ( ಕೆಳಗೆ ಕೊಟ್ಟಿರುವ ಚಿತ್ರವನ್ನು ಗಮನಿಸಿ )
ಶಿಲೆಗಳ ವೈವಿಧ್ಯತೆಯ ಬಗ್ಗೆ ತಿಳಿಯಬೇಕಾದರೆ ಅವುಗಳ ರಚನಾಕ್ರಮವನ್ನು ಗಮನಹರಿಸಬೇಕಾಗುತ್ತದೆ, ಶಿಲೆಗಳನ್ನ ಮುಖ್ಯವಾಗಿ ಮೂರು ವಿಧವಾಗಿ ವಿಂಗಡಿಸಲಾಗಿದೆ
1 ಅಗ್ನಿಶಿಲೆ / Igneous
2 ಪದರುಶಿಲೆ / Sedimentary rock
3 ರೂಪಾಂತರ ಶಿಲೆ / Metamorphic rock
ಅಗ್ನಿಶಿಲೆ ಮೂಲ ಜ್ವಾಲಾಮುಖಿಯ ರಸದಿಂದ ಸೃಷ್ಟಿಯಾದದ್ದು ಆದ್ದರಿಂದ ಇವು ಬಹಳ ಗಡುಸಾಗಿರುತ್ತವೆ ಉದಾಹರಣೆಗೆ : ಬಸಾಲ್ಟ್, ಗ್ರಾನೆಟ್
ಪದರು ಶಿಲೆಗಳು ವಾಯುಮಂಡಲದ ಘಟಕಗಳಾದ ಉಷ್ಣ, ಗಾಳಿ, ನದಿ ಸಮುದ್ರಗಳ ಶೀತಲೀಕರಣದಿಂದ ಪದರಾಗಿ ನಿರ್ಮಾಣವಾಗಿರುತ್ತದೆ, ಇವುಗಳು ಅರೆ ಗಡುಸಾಗಿದ್ದು ಭೂಮಿಯ ಮೇಲೆ ಕಾಣಸಿಗುವ % 75 ಶಿಲೆಗಳು ಇವುಗಳೇ ಆಗಿರುತ್ತದೆ, ಉದಾ: ಸುಣ್ಣದ ಕಲ್ಲು, ಮರಳು ಶಿಲೆ, ರೇವೆಗಲ್ಲು.
ಕೊನೆಯದು ರೂಪಾಂತರ ಶಿಲೆ, ಅಗ್ನಿ ಹಾಗೂ ಪದರುಶಿಲೆ ಭೂಮಿಯೊಳಗೆ ಸಿಲುಕಿ ಒತ್ತಡ ಹಾಗುವ ಶಾಖದಿಂದ ಬದಲಾವಣೆ ಹೊಂದಿದಾಗ ಸೃಷ್ಟಿಯಾಗುವುದು ರೂಪಾಂತರ ಶಿಲೆ ಉದಾ: ಗ್ರಾಫೈಟ್ ಅಮೃತಶಿಲೆ, ವಜ್ರ, ರೂಬಿ, ಚಿನ್ನ, ಬೆಳ್ಳಿ, ಪ್ಲಾಟಿನಂ, ಕಬ್ಬಿಣ, ತಾಮ್ರ ,ನಿಕಲ್, ಸೀಸ ಇತ್ಯಾದಿ
ಹಾಗಾದರೆ ಮಾನವರು ಅತ್ಯಂತ ಹೆಚ್ಚು ಬೆಲೆ ಕಟ್ಟುವ ವೈಡೂರ್ಯ ಗಳೆಲ್ಲವೂ ಕಲ್ಲು ಎಂದಾಯಿತಲ್ಲವೇ ?
ಯಾವುದೇ ಮೂರ್ತಿ ವಿಗ್ರಹ ಕೆತ್ತನೆಗೆ ಶಿಲೆ ಆಯ್ಕೆ ಬಹಳ ಮಹತ್ವಪೂರ್ಣ ಕೆಲಸವಾಗಿರುತ್ತದೆ, ಇಂತಹ ಶಿಲೆಗಳ ಆಯ್ಕೆಯನ್ನು ಹಿರಿಯ ಹಾಗೂ ನಿಪುಣ ಶಿಲ್ಪಿಗಳು ಆಯ್ಕೆ ಮಾಡುವುದು ಹೆಚ್ಚು ಏಕೆಂದರೆ ಮೂರ್ತಿಯನ್ನು ಮಾಡುವಾಗ ಮಧ್ಯದಲ್ಲಿ ಯಾವುದೇ ಬಿನ್ನ ಅಥವಾ ಬಿರುಕುಗಳು ಆಗಬಾರದು, ಪಂಡಿತೋತ್ತಮ ಶಿಲ್ಪಿಗಳು ಶಿಲೆಗಳನ್ನು ಗಂಡು ಹಾಗೂ ಹೆಣ್ಣು ಶಿಲೆಗಳು ಎಂದು ವಿಂಗಡಿಸುವುದು ಉಂಟು ಹಾಗೂ ಶಿಲೆಗಳನ್ನು ಕೆತ್ತುವ ಕಾರ್ಯ ಗ್ರಹಗತಿ ನಕ್ಷತ್ರಗಳ ಆಧಾರದ ಮೇಲೆ ಪ್ರಾರಂಭಿಸುವುದುಂಟು. ನಮ್ಮಲ್ಲಿ ಪ್ರತಿ ದೇವರುಗಳ ವೈಶಿಷ್ಯ ವೈವಿಧ್ಯಮಯವಾಗಿರುವುದರಿಂದ ಮೂರ್ತಿಗಳ ಕೆತ್ತನೆಯು ವೈವಿಧ್ಯಮಯವಾಗಿರುತ್ತದೆ, ಕೆಲವಕ್ಕೆ ಹೂವಿನ ಅಲಂಕಾರಗಳು ಹೆಚ್ಚು, ಕೆಲವಕ್ಕೆ ಆಭರಣದ ಅಲಂಕಾರಗಳು ಹೆಚ್ಚು ( ವೆಂಕಟೇಶ್ವರ ), ಕೆಲವು ಮೂರ್ತಿಗಳ ವೈಶಿಷ್ಟತೆ ಕೆಲವು ಭಾಗಗಳಿಗೆ ಹೆಚ್ಚು ಒತ್ತು ನೀಡಲಾಗುತ್ತದೆ ಕೆಲವಕ್ಕೆ ಕಣ್ಣು, ಕೆಲವಕ್ಕೆ ಮೂಗುತಿ, ಕೆಲವಕ್ಕೆ ಪೀಠ ( ಲಕ್ಷ್ಮಿಗೆ ತಾವರೆ, ನಾರಾಯಣನಿಗೆ ಸರ್ಪದ ಹಾಸಿಗೆ ), ಕೆಲವಕ್ಕೆ ಕೈಯಲ್ಲಿ ಹಿಡಿದಿರುವ ಆಯುಧಗಳು / ಉಪಕರಣಗಳು ( ಸರಸ್ವತಿಗೆ ವೀಣೆ, ಪಾರ್ವತಿಯ ತ್ರಿಶೂಲ, ಆಂಜನೇಯನಿಗೆ ಕೈಯಲ್ಲಿ ಹಿಡಿದಿರುವ ಪರ್ವತ) ಪಾದುಕೆ ಇತ್ಯಾದಿ,
ಬಾಹುಬಲಿ ಮೂರ್ತಿಯು ಇಂತಹ ಶಿಲೆಯಿಂದ ಒಡಮೂಡಿದ ಒಂದು ಅದ್ಭುತ ಕೆತ್ತನೆ, ಈ ಕೆತ್ತನೆಗೆ ಸಂಬಂಧಿಸಿದಂತೆ ಬಹಳಷ್ಟು ವಿಷಯಗಳು ವಿಜ್ಞಾನಕ್ಕೆ ಸವಾಲನ್ನು ಒಡ್ಡಿದೆ, ಮೂರ್ತಿಯನ್ನು ನೆಟ್ಟಗೆ ನಿಲ್ಲಿಸಿದ ಶಿಲೆಯ ಮೇಲಿನಿಂದ ಕೆತ್ತಲಾಯಿತೇ ? ಶಿಲೆಯನ್ನು ಅಡ್ಡವಾಗಿಟ್ಟು ಕೆತ್ತಿ ಆಮೇಲೆ ನೇರವಾಗಿ ನಿಲ್ಲಿಸಿದರೆ ? ಮೂರ್ತಿಯನ್ನು ಬೆಟ್ಟದ ಕೆಳಗೆ ಕೆತ್ತಿದ್ದರೂ ಬೆಟ್ಟದ ಮೇಲಕ್ಕೆ ಹೇಗೆ ಸಾಗಿಸಿದರು ? ಎಷ್ಟು ಮಾನವಶಕ್ತಿ ಉಪಯೋಗಿಸಲಾಯಿತು ? ಅದಕ್ಕೆ ಬಳಸಿದ ಉಪಕರಣಗಳಾವುವು ? ಮಹಾಮಸ್ತಕಾಭಿಷೇಕದಲ್ಲಿ ನಡೆಯುವ ಮಜ್ಜನದ ನೀರು ಎಲ್ಲಿಗೆ ಹೋಗಿ ಸೇರುತ್ತದೆ ? ಇತ್ಯಾದಿ,,
ಮೂರ್ತಿ ಕೆತ್ತನೆಯು ಒಂದು ಶಾಸ್ತ್ರವನ್ನು ಅನುಸರಿಸುತ್ತದೆ, ಶಾಸ್ತ್ರವಿಲ್ಲದೆ ಕೆತ್ತಲಾಗದು, ಏಕೆಂದರೆ ಒಬ್ಬ ಉತ್ತಮ ದೇಹದಾರ್ಢ್ಯ ಉಳ್ಳ ವ್ಯಕ್ತಿಯ ದೇಹ ರಚನೆ ಮೂರ್ತಿಗೆ ಅಳವಡಿಸಬೇಕು, ತಲೆಯ ಸುತ್ತಳತೆ ಕಣ್ಣುಗಳ ನಡುವಿನ ಅಂತರ, ಮೂಗು, ಹಣೆ, ಗಲ್ಲ, ಕಿವಿಯ ಸಮಾನ ಎತ್ತರ, ಎದೆ ಭಾಗದ ವಿಸ್ತಾರ, ಕೈಕಾಲುಗಳ ಹೊಂದಾಣಿಕೆ ಎಲ್ಲಿಯೂ ವ್ಯತ್ಯಾಸ ಉಂಟಾಗಬಾರದು, ಇಲ್ಲಿ ಯಾವುದು ಹೆಚ್ಚು ಕಡಿಮೆ ಆಗುವಂತಿಲ್ಲ ಹಾಗೇನಾದರೂ ಆದರೆ ಮೂರ್ತಿಯ ಅಂದ ಕೆಡುತ್ತದೆ, ಇದಕ್ಕಿಂತಲೂ ಕೆಲವು ಸೂಕ್ಷ್ಮ ಕೆತ್ತನೆಗಳಾದ ಕೈಕಾಲು ಉಗುರುಗಳ ಕೆತ್ತನೆ, ತಲೆಕೂದಲ, ಕಣ್ಣಿನ ಉಬ್ಬು, ಮೊಣಕಾಲು, ತುಟಿ ರಚನೆ ಕೆತ್ತನೆಯ ವೈಭವವನ್ನು ಎತ್ತಿಹಿಡಿಯುತ್ತದೆ.
ಬಾಹುಬಲಿ ಎಲ್ಲವನ್ನೂ ತ್ಯಜಿಸಿ ಲೋಕಕಲ್ಯಾಣಕ್ಕೆ ನಿಂತವನು ಎಂದು ಭಾವಿಸಬಹುದು, ಆದರೆ ಪ್ರಕೃತಿಯೊಳಗೆ ಮೂರ್ತಿಯು ಒಂದು ಎಂಬುದಕ್ಕೆ ಮೂರ್ತಿ ಸಾಕ್ಷಿಯಾಗಿ ನಿಂತಿದೆ, ಮೂರ್ತಿಯ ಕೆತ್ತನೆಯನ್ನು ಪಾದುಕೆಯಿಂದ ಗಮನಿಸಿ ಅಲ್ಲಿ ಯಾವುದು ಬೋಳಾದ ರಚನೆಯಿಂದ ಕೂಡಿಲ್ಲ, ಎಲ್ಲವನ್ನೂ ನಿಸರ್ಗಕ್ಕೆ ಪೂರಕವಾಗಿರುವಂತೆ ಕೆತ್ತಲಾಗಿದೆ, ಪಾದುಕೆಯಿಂದ ಮಂಡಿ ಹಿಂಬದಿಯ ತನಕ ಹುತ್ತ ಕೆತ್ತಲಾಗಿದೆ ಅದರಿಂದ ಹಾವುಗಳು ಹೊರಬಂದಂತೆ ಗೋಚರಿಸುತ್ತವೆ, ಮೊಣಕಾಲು ತೊಡೆ ಕೈಗಳು ಸೇರಿದಂತೆ ಸುಂದರವಾದ ಬಳ್ಳಿಯನ್ನು ಕತ್ತಲಾಗಿದೆ, ಈ ಎಲೆಗಳ ರಚನೆ ನೈಜ್ಯ ಎಲೆಯ ರೀತಿಯಂತೆ ಕಾಣುತ್ತದೆ. ಬೇರೆ ಕಡೆ ಕಾಣಿಸುವ ಕೆತ್ತಿರುವ ಮೂರ್ತಿಗಳಲ್ಲಿ ಕಲ್ಪವೃಕ್ಷ, ಹೂಗಳ ರಚನೆ, ಐರಾವತ, ಗೋವು, ಆಕಳು, ನವಿಲು, ನಾಗರಾಜ, ಜೇನುಗೂಡು, ನೃತ್ಯಗಾರ್ತಿಯರನ್ನು ಕೆತ್ತಲಾಗಿದೆ.


ಮೂರ್ತಿ ಕೇವಲ ವಿಜ್ಞಾನ ವಿಷಯಕ್ಕೆ ಮಾತ್ರ ಸೀಮಿತವಾಗಿಲ್ಲ ಇದರ ಹಿಂದೆ ಬಹುದೊಡ್ಡ ಇತಿಹಾಸವು ಇದೆ. ಭರತ ಹಾಗೂ ಬಹುಬಲಿ ಇಬ್ಬರು ವೃಷಭದೇವನ ಮಕ್ಕಳು, ಚಕ್ರರತ್ನದ ಆಸೆಯಿಂದ ಭರತ ತನ್ನ ಅಣ್ಣನಾದ ಬಾಹುಬಲಿಯಮೇಲೆ ಯುದ್ಧವನ್ನು ಸಾರುತ್ತಾನೆ, ಅಣ್ಣ-ತಮ್ಮಂದಿರ ಯುದ್ಧಕ್ಕೆ ಸೈನಿಕರು ಹತರಾಗುವುದು ಬೇಡ ಎಂಬ ಕಾರಣಕ್ಕಾಗಿ ಕೇವಲ ಇಬ್ಬರ ನಡುವೆಯೇ ಗದಾಯುದ್ಧ, ಮಲ್ಲಯುದ್ಧ, ದೃಷ್ಟಿಯುದ್ಧ ಹೀಗೆ ನಾನಾ ಯುದ್ಧಗಳು ನಡೆಯುತ್ತವೆ, ಪರಾಕ್ರಮಿ ಬಲಶಾಲಿಯಾದ ಬಾಹುಬಲಿ ಯುದ್ಧದ ಕೊನೆಯ ದಿನ ರಣರಂಗದಲ್ಲಿ ಭರತನನ್ನು ನನ್ನ ಎರಡೂ ಕೈಯಿಂದ ಮೇಲಕ್ಕೆತ್ತಿ ಇನ್ನೇನು ನೆಲಕ್ಕೆ ಅಪ್ಪಳಿಸಿ ಪ್ರಾಣ ಪಕ್ಷಿ ಹಾರಿ ಹೋಗಬೇಕೆನ್ನುವ ಸಂದರ್ಭದಲ್ಲಿ ಬಾಹುಬಲಿಯ ಮನಸ್ಸಿನಲ್ಲಿ ಕೇವಲ ರಾಜ್ಯಕ್ಕಾಗಿ ಇಂತಹ ಹೀನ ಕೃತ್ಯವನ್ನು ಮಾಡಬೇಕೆಂದು ಹಿಂದೆ ಸರಿದು ಎಲ್ಲವನ್ನು ತ್ಯಜಿಸಿ ಕಾಡಿಗೆ ತೆರಳುತ್ತಾನೆ, ಇಷ್ಟರಲ್ಲಾಗಲೇ ಇವರ ತಂದೆಯಾದ ವೃಷಭದೇವ ನಾಡಿನಲ್ಲಿ ಹೊಸಧರ್ಮವನ್ನು ಸೃಷ್ಟಿಸಬೇಕೆಂದು ಕಾಯಕಲ್ಪ ಮಾಡಿಕೊಂಡು ಜೈನಧರ್ಮವನ್ನು ಹುಟ್ಟುಹಾಕಿ ಮೊದಲ ತೀರ್ಥಂಕರರಾಗುತ್ತಾರೆ.
ಇದಾದ ಬಳಿಕ ಜೈನ ಧರ್ಮದ ತೀರ್ಥಂಕರ ಧರ್ಮ ಸಂಸ್ಥಾಪನೆಯ ಕಾರ್ಯವನ್ನು ಕೈಗೊಳ್ಳುತ್ತಾರೆ, ಒಟ್ಟು ಜೈನಧರ್ಮದಲ್ಲಿ 24 ತೀರ್ಥಂಕರರು ಇದ್ದಾರೆ ಅವರುಗಳೇ
1 ಆದಿನಾಥ/ ಋಷಭನಾಥ 2 ಅಜಿತನಾಥ 3 ಸಂಭವನಾಥ 4 ಅಭಿನಂದನ 5 ಸುಮತಿನಾಥ 6 ಪದ್ಮಪ್ರಭ 7 ಸೂಪರ್ಶ್ವನಾಥ 8 ಚಂದ್ರಪ್ರಭ 9 ಪುಷ್ಪದಂತ 10 ಶೀತಲನಾಥ 11 ಶ್ರೇಯಾಂಶನಾಥ 12 ವಾಸುಪುಜ್ಯ 13 ವಿಮಲನಾಥ 14 ಅನಂತನಾಥ 15 ಧರ್ಮನಾಥ 16 ಶಾಂತಿನಾಥ 17 ಕುಂತುನಾಥ 18 ಅರನಾಥ 19 ಮಲ್ಲಿನಾಥ 20 ಮುನಿವ್ರತ 21 ನಮಿನಾಥ 22 ನೇಮಿನಾಥ 23 ಪಾರ್ಶ್ವನಾಥ 24 ಮಹಾವೀರ
ಪ್ರತಿಯೊಬ್ಬ ತೀರ್ಥಂಕರರು ಅವರದೇ ಆದಂತಹ ಲಾಂಛನಗಳು, ಬಣ್ಣದ ಸಂಕೇತಗಳಿವೆ. ಋಷಭದೇವನ ಕಾಲದಿಂದಲೂ ಧರ್ಮ ಸಮ್ಮೇಳನಗಳು ನಡೆಯುತ್ತಾ ಬಂದಿದೆ, ತೀರ್ಥಂಕರರಲ್ಲಿ ಕೊನೆಯವರಾದ ಮಹಾವೀರ ಕ್ರಿಸ್ತಪೂರ್ವ 600 ಕಾಲವಧಿಯಲ್ಲಿ ತ್ರಿರತ್ನಗಳನ್ನು ಸಂಯುಕ್ತ ನಡತೆ, ಸಂಯುಕ್ತ ನಂಬಿಕೆ, ಸಂಯುಕ್ತ ಜ್ಞಾನ ನೀಡುತ್ತಾನೆ ಇದರೊಂದಿಗೆ ಧರ್ಮದ ಪಂಚತತ್ವಗಳಾದ ಅಹಿಂಸೆ, ಸತ್ಯ, ಆಸ್ತಿಯ, ಅಪರಿಗ್ರಹ, ಬ್ರಹ್ಮಚರ್ಯ ಹೆಚ್ಚು ಒತ್ತು ಕೊಟ್ಟು ಧರ್ಮವನ್ನು ಮತ್ತಷ್ಟು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತಾನೆ.
ಮಹಾವೀರನ ಬಗ್ಗೆ ನಿಮಗೆ ಈಗಾಗಲೇ ತಿಳಿದಿರಬಹುದು ಈತ ರಾಜ ಕುಟುಂಬದಲ್ಲಿ ಸಿದ್ಧರ್ಥ ಮತ್ತು ತ್ರಿಶೂಲದೇವಿಗೆ ಹುಟ್ಟಿದ ಮಗ, ಮಹಾವೀರ ರಾಜಕುಟುಂಬದ ಸಂಪ್ರದಾಯದಂತೆ ಯಶೋದಾ ಕೈ ಹಿಡಿಯುತ್ತಾನೆ, ಇದಾದ ಬಳಿಕ ಆತನಿಗಾದ ಜ್ಞಾನೋದಯ ಸನ್ಯಾಸಿ ದೀಕ್ಷೆಯನ್ನು ಪಡೆದು 24ನೇ ತೀರ್ಥಂಕರನಾಗುತ್ತಾನೆ.
ಬುದ್ಧ ಹಾಗೂ ಮಹಾವೀರನ ಕಾಲವಧಿಯ ಹೆಚ್ಚುಕಡಿಮೆ ಸಮಾನವಾಗಿರುವುದರಿಂದ ಬುದ್ಧ ಮಹಾವೀರರಲ್ಲಿ ಗೊಂದಲವಾಗಬಹುದು,( ನನಗೂ ಮೊದಲು ಇಬ್ಬರನ್ನು ಒಂದೇ ಎಂದು ಭಾವಿಸಿದ್ದಿದೆ ) ತಿಳಿದಿರಬಹುದು ಗೌತಮ ಬುದ್ಧ ಬೌದ್ಧ ಧರ್ಮದ ಸ್ಥಾಪಕ.
ಇಷ್ಟೆಲ್ಲಾ ಘಟನೆಗಳು ನಡೆದ ಅನೇಕ ವರ್ಷಗಳ ತರುವಾಯ ಯುದ್ಧದಿಂದ ಮನನೊಂದ ಅಶೋಕ ಚಕ್ರವರ್ತಿಯ ಜೈನಧರ್ಮವನ್ನು ಸ್ವೀಕರಿಸುತ್ತಾನೆ, ತನ್ನ ಮಕ್ಕಳಿಬ್ಬರನ್ನು ಧರ್ಮಪ್ರಚಾರಕ್ಕೆ ಕಳಿಸಿಕೊಡುತ್ತಾನೆ, ಈ ಕಾಲಾವಧಿಯಲ್ಲಿಯೇ ಜೈನ ಧರ್ಮವು ಎರಡು ಭಾಗಗಳಾಗಿ ಮಾರ್ಪಾಡಾಗಿರುತ್ತದೆ 1 ಶ್ವೇತಂಬರ - ಬಿಳಿಯ ವಸ್ತ್ರಧಾರಿಗಳು 2 ದಿಗಂಬರ - ವಸ್ತ್ರ ರಹಿತರಾದವರು.
ಇಷ್ಟೆಲ್ಲಾ ಬೆಳವಣಿಗೆಯಿಂದಾಗಿ ಪ್ರಪಂಚದ ನಾನಾ ಮೂಲೆಗಳಿಗೆ ಜೈನ ಧರ್ಮ ಪ್ರಚಾರವಾಗ ತೊಡಗುತ್ತದೆ, ಇದರೊಂದಿಗೆ ಭಾರತದಲ್ಲಿಯ ಜನ್ಮಪಡೆದ ಬೌದ್ಧ ಧರ್ಮ, ಸಿಖ್ ಧರ್ಮ, ಪ್ರಪಂಚದ ಮೂಲೆಗಳಲ್ಲಿ ಹರಡುತ್ತದೆ, ಅನೇಕ ಧರ್ಮಗಳು ಹುಟ್ಟಿದ ಈ ಹಿಂದೂಸ್ತಾನವನ್ನು ಅನೇಕ ಧರ್ಮಗಳ ತೊಟ್ಟಿಲು/ ಅನೇಕ ಧರ್ಮಗಳು ಉಗಮ ಸ್ಥಾನ ಎಂದು ಬಿರುದು ಪಡೆಯುತ್ತದೆ.
ಶ್ರವಣಬೆಳಗೊಳದಲ್ಲಿ ಒಟ್ಟು 2 ಪರ್ವತಗಳಿವೆ, ಚಂದ್ರಗಿರಿ ಹಾಗೂ ವಿಂಧ್ಯಗಿರಿ ಎರಡು ಪರ್ವತಗಳ ನಡುವೆ ಒಂದು ಪುಷ್ಕರಣಿ ಇದೆ, ವಿಂಧ್ಯಗಿರಿ ಪರ್ವತದ ಮೇಲೆ ಕ್ರಿಸ್ತಶಕ 10ನೇ ಶತಮಾನದಲ್ಲಿ ಗಂಗ ರಾಜವಂಶದ ಮಂತ್ರಿಯ ಚಾವುಂಡರಾಯ 58 ಅಡಿ ಎತ್ತರದ ಏಕಶಿಲಾ ಬಾಹುಬಲಿಯ ವಿಗ್ರಹವನ್ನು ಕೆತ್ತಿಸಿದ್ದಾನೆಂದು ಶಾಸನಗಳಿಂದ ತಿಳಿಯುತ್ತದೆ. ಗೊಮ್ಮಟೇಶ್ವರನ ವಿಗ್ರಹವಾದಮೇಲೆ ಈ ಕ್ಷೇತ್ರ ಜೈನರ ಕಾಶಿ ಎಂದು ಹೆಸರನ್ನು ಪಡೆಯಿತು ( 2011 ಜನಗಣತಿಯ ಪ್ರಕಾರ ಭಾರತದಲ್ಲಿ ಒಟ್ಟು 44.50 ಲಕ್ಷ ಜೈನ ಧರ್ಮದವರಿದ್ದು, ಹೇಗೆ ಹಿಂದೂಗಳು ಜೀವನದಲ್ಲೊಮ್ಮೆ ಕಾಶಿ ಯಾತ್ರೆಯನ್ನು ಕೈಗೊಳ್ಳುತ್ತಾರೋ ಹಾಗೆಯೇ ಪ್ರಪಂಚದ ಮೂಲೆಮೂಲೆಗಳಲ್ಲಿರುವ ಜೈನ ಧರ್ಮೀಯರ ಬಹುಪಾಲು ಮಂದಿ ಮಹಾಮಸ್ತಕಾಭಿಷೇಕಕ್ಕೆ ಬಂದು ಸೇರುತ್ತಾರೆ ) ಕ್ರಿಸ್ತಶಕ 981 ರಂದು ಮೊದಲ ಮಹಾಮಸ್ತಕಾಭಿಷೇಕ ನೆರವೇರಿತು ಇದಾದ ಪ್ರತಿ 12 ವರ್ಷಗಳಿಗೊಮ್ಮೆ ಜೈನ ಧರ್ಮದ ಪಂಚಾಗದ ಪ್ರಕಾರ ಮಹಾಮಸ್ತಕಾಭಿಷೇಕವನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ, 2018 ರಲ್ಲಿ ನಡೆದ ಮಹಾಮಸ್ತಕಾಭಿಷೇಕ 88ನೇ ಯದಾಗಿದ್ದು ಇದು 21ನೇ ಶತಮಾನದ ಎರಡನೆಯ ಮಹಾಮಸ್ತಕಾಭಿಷೇಕವಾಗಿದೆ.
12 ವರ್ಷಗಳಿಗೆ ಒಮ್ಮೆ ಮಾತ್ರ ಕೈಗೊಳ್ಳುವ ಬಾಹುಬಲಿಯ ಮಜ್ಜನವ ಎಂದ ಮೇಲೆ ಅದು ಸಾಮಾನ್ಯ ಮಜ್ಜನವಾಗಿರಲು ಸಾಧ್ಯವೇ, ಮೂರ್ತಿಗೆ ಈ ಅಭಿಷೇಕದ ಸಂದರ್ಭದಲ್ಲಿ ಹಾಲು, ಸುಗಂಧದ್ರವ್ಯ, ಕಬ್ಬಿನಹಾಲು, ಕುಂಕುಮ, ಗಂಧದ ದ್ರವ್ಯಗಳಿಂದ ಅಭಿಷೇಕ ಮಾಡಲಾಗುತ್ತದೆ, 58 ಅಡಿ ಎತ್ತರದ ಏಕಶಿಲಾ ವಿಗ್ರಹ ನೆನೆಯಬೇಕಾದದಲ್ಲಿ ಎಷ್ಟು ಪ್ರಮಾಣದ ನೀರು ಬೇಕೆಂದು ನೀವೊಮ್ಮೆ ಯೋಚಿಸಿ, ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಪ್ರತಿದಿನ 8000 ಲೀಟರ್ ಮೂರ್ತಿಯನ್ನು ಸೇರುತ್ತದೆ, ಇಷ್ಟು ಪ್ರಮಾಣದ ನೀರು ಮೂರ್ತಿಯ ಮೇಲೆ ಬಿದ್ದರೂ ನೀರು ಎಲ್ಲಿಗೆ ಹೋಗಿ ಸೇರುತ್ತದೆ ಎಂಬ ವಿಷಯ ವಿಜ್ಞಾನಕ್ಕೆ ಸವಾಲನ್ನು ಒಡ್ಡಿದೆ.
ಮೂರ್ತಿಗೆ ಸಿಂಪಡಿಸುವ ಮೊದಲ ಕಳಸಕ್ಕೆ ಭಾರಿ ಬೇಡಿಕೆ ಇದ್ದು 2018 ರಲ್ಲಿ ನಡೆದ ಮಹಾಮಸ್ತಕಾಭಿಷೇಕದ ಮೊದಲ ಕಳಸವನ್ನು ರಾಜಸ್ಥಾನದ ಉದ್ಯಮಿ ಅಶೋಕ್ ಎಂಬುವರು 11.6 ಕೋಟಿ ಹಣವನ್ನು ಕೊಟ್ಟು ಖರೀದಿಸಿದ್ದರು, ಈ ಹಿಂದೆ ನಡೆದ ಮಹಾಮಸ್ತಕಾಭಿಷೇಕಕ್ಕೆ ಕರ್ನಾಟಕ ಸರ್ಕಾರ ವಿನಿಯೋಗಿಸಿದ ಹಣದ ಮೊತ್ತ ಬರೋಬ್ಬರಿ 263 ಕೋಟಿ ರೂಪಾಯಿಗಳು, ಇಷ್ಟು ದೊಡ್ಡ ಕರ್ಚು ಎಂದಮೇಲೆ ಕಾರ್ಯಕ್ರಮದ ಸಿದ್ಧತೆ ಕಡಿಮೆ ದಿನಗಳಲ್ಲಿ ನಡೆಯಲು ಸಾಧ್ಯವೇ ?
ಮಹಾಮಸ್ತಕಾಭಿಷೇಕ ಆಗುವ 1 ವರ್ಷದ ಹಿಂದೆಯೇ ಆಯವ್ಯಯವನ್ನು ನಿಗದಿಪಡಿಸಲಾಗುತ್ತದೆ, ಈ ಕಾರ್ಯಕ್ರಮದ ಒಂದು ವರ್ಷದ ಹಿಂದಿನಿಂದಲೇ ಸರಕಾರ ವಿಂದ್ಯಗಿರಿ ಪರ್ವತದ ಸುತ್ತಮುತ್ತಲಿರುವ ಗ್ರಾಮದ ರೈತರ ಜಮೀನುಗಳನ್ನು ಬಾಡಿಗೆಗೆ ಪಡೆಯಲಾಗುತ್ತದೆ, ಈ ಪ್ರದೇಶದಲ್ಲಿ ಪ್ರಪಂಚದ ಮೂಲೆಮೂಲೆಗಳಿಂದ ಅಭಿಷೇಕಕ್ಕೆ ಆಗಮಿಸುವಂತಹ ಜನರಿಗೆ ಉಳಿದುಕೊಳ್ಳುವ ಸೌಕರ್ಯವನ್ನು ಸ್ವಾಮೀಜಿಗಳಿಗೆ ಆಶ್ರಮವನ್ನು ಮಾಡಿಕೊಡಲಾಗುತ್ತದೆ, 4 ತಿಂಗಳ ಹಿಂದಿನಿಂದಲೇ ವಿಗ್ರಹದ ಸುತ್ತ ಭದ್ರವಾಗಿ ಅಟ್ಟಣಿಗೆಯನ್ನು ಕಟ್ಟಲಾಗುತ್ತದೆ, ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ವರ್ಷಾನುಗಟ್ಟಲೆ ಹಿಂದಿನಿಂದಲೇ ಪಾದಯಾತ್ರೆಯನ್ನು ಕೈಗೊಳ್ಳುವವರಿದ್ದಾರೆ. ಕಾರ್ಯಕ್ರಮದ ಒಂದು ತಿಂಗಳಿಂದ ಅಂತೆಯೇ ವ್ಯಾಪಾರ ವಹಿವಾಟುಗಳು ಅಂಗಡಿ-ಮುಂಗಟ್ಟುಗಳು ತೆರೆದುಕೊಳ್ಳುತ್ತವೆ, ಮಹಾಮಸ್ತಕಾಭಿಷೇಕ ಪ್ರಾರಂಭದ ವಿಜೃಂಭಣೆಯ ಕಾರ್ಯಕ್ರಮದಿಂದ ನಡೆಯುತ್ತದೆ. ಅಧಿಕೃತವಾಗಿ ಮಹಾಮಸ್ತಕಾಭಿಷೇಕ ಒಂದು ವಾರ ಇದ್ದರೂ ಒಂದು ತಿಂಗಳ ತನಕ ಹೊರಗಿನವರು ಬಂದು ಬೇಟಿ ಕೊಡುತ್ತಿರುತ್ತಾರೆ. ಇದಾದ ಬಳಿಕ ಅಟ್ಟಣೆಯನ್ನು ಬಿಚ್ಚುವ ಕಾರ್ಯ 2 ತಿಂಗಳಲ್ಲಿ ಮುಕ್ತಾಯವಾಗುತ್ತಾ ಮತ್ತದೇ ಹನ್ನೆರಡು ವರ್ಷಗಳಿಗೆ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ನಾಂದಿ ಹಾಡುತ್ತದೆ.
ಸತತವಾಗಿ 12 ವರ್ಷ, ಗಾಳಿ ಮಳೆ ಬಿಸಿಲಿಗೆ ಮೈಯೊಡ್ಡಿ ನಿಂತಿದ್ದ ಬಾಹುಬಲಿ ಮೂರ್ತಿ ಈ ಮಹಾಮಜ್ಜನದಿಂದ ಚೇತನವನ್ನ ಪಡೆಯುತ್ತದೆ, ಮಹಾಮಜ್ಜನ ಮೂರ್ತಿ ಹಾಳಾಗದಂತೆ ರಕ್ಷಣೆಯನ್ನು ನೀಡುತ್ತದೆ. ಇದರ ಸಂರಕ್ಷಣೆಯ ಹಾಗೂ ಮೇಲುಸ್ತುವಾರಿಯನ್ನು ರಾಜ್ಯದ ಪುರತತ್ವ ಇಲಾಖೆ ಮೂರ್ತಿ ಹಾಳಾಗದಂತೆ ಕಾಲಕಾಲಕ್ಕೆ ಆಗಬೇಕಾದದ್ದು ಸಂರಕ್ಷಣಾ ವಿಧಾನಗಳನ್ನು ಅನುಸರಿಸುತ್ತದೆ.
ದೇಶದ ಉದ್ದಗಲಕ್ಕೂ ಶಿವನ ದೇವಾಲಯಗಳಿದ್ದರೂ ಸಹ ಹಿಂದುಗಳು ಹೇಗೆ ವಾರಣಾಶಿಯ ಕಾಶಿ ದೇವಾಲಯಕ್ಕೆ ಹೋಗುತ್ತಾರೆಯೇ ಅದೇ ರೀತಿ ಪ್ರಪಂಚದ ಬೇರೆ ಬೇರೆ ಕಡೆಗಳಲ್ಲಿ ಬಾಹುಬಲಿ ಮೂರ್ತಿಯಿದ್ದು ಮಹಾಮಸ್ತಕಾಭಿಷೇಕ ನಡೆದರೂ ಸಹ ಶ್ರವಣಬೆಳಗೊಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ತನ್ನದೇ ಆದಂತಹ ಪ್ರಾಮುಖ್ಯತೆಯನ್ನು ಹೊಂದಿದೆ, ನಮ್ಮ ದೇಶದ ಉದ್ದಗಲಕ್ಕೂ ಗೊಮ್ಮಟೇಶ್ವರನ ವಿಗ್ರಹಗಳಿವೆ ಕರ್ನಾಟಕದ 5 ಕಡೆ ಇದೆ ಶ್ರವಣಬೆಳಗೊಳ, ಕಾರ್ಕಳ, ಧರ್ಮಸ್ಥಳ, ವೇನೂರ್, ಗೊಮ್ಮಟಗಿರಿ ಸೇರಿದಂತೆ ಒಟ್ಟು ಐದು ಮೂರ್ತಿಗಳಿವೆ ಕರ್ನಾಟಕದಲ್ಲಿಯೇ ಇಷ್ಟು ಕಡೆ ಮೂರ್ತಿಗಳು ಕಾಣಸಿಗುತ್ತವೆ ಎಂದರೆ ರಾಜ್ಯದ ಉದ್ದಗಲಕ್ಕೂ ಜೈನಧರ್ಮ ಬೆಳೆಸಲು ನಮ್ಮ ಪೂರ್ವಜರು ಅವಕಾಶ ಮಾಡಿಕೊಟ್ಟಿದ್ದಾರೆ ಎಂಬುದನ್ನು ನಾವು ಸ್ಮರಿಸಬೇಕಾಗುತ್ತದೆ.
ಹೀಗೆ ಗೊಮ್ಮಟೇಶ್ವರನ ವಿಗ್ರಹ ಕೇವಲ ಕಲ್ಲಿನ ಮೂರ್ತಿಯಾಗಿ ಉಳಿಯದೆ ನೈಸರ್ಗಿಕ, ಧಾರ್ಮಿಕ, ಭೌಗೋಳಿಕ, ವೈಜ್ಞಾನಿಕ, ಕಲೆ ಹಾಗೂ ರಾಜಕೀಯ ಹೀಗೆ ಹತ್ತಾರು ಆಯಾಮಗಳ ಆಗರವಾಗಿದೆ. 88ನೇ ಮಹಾಮಸ್ತಕಾಭಿಷೇಕ 2018 ರಲ್ಲಿ ನಡೆದಾಗಿದೆ, ಮುಂದೆ ನಡೆಯುವುದು 89ನೇ ಮಹಾಮಸ್ತಕಾಭಿಷೇಕ ಅದು 2030 ಯಂದು ನಡೆಯುತ್ತದೆ, ಅಷ್ಟೊತ್ತಿಗಾಗಲೇ ನಮ್ಮ ವಯಸ್ಸು ಬಹಳವು ಆಗಿರುತ್ತದೆ, ಆಗಲು ನೋಡುವ ಒಂದು ಅವಕಾಶ ಒದಗುತ್ತದೆ ಸಮಯ ಮಾಡಿಕೊಂಡು ಭೇಟಿನೀಡಿ, ಉತ್ತರಭಾರತದಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಕುಂಭ ಮೇಳಕ್ಕೆ ಭೇಟಿ ನೀಡಲಾಗತ್ತದೆಯೋ ಇಲ್ಲವೋ ನಮಗಂತೂ ತಿಳಿಯದು, ಆದರೆ ಜೀವನದಲ್ಲಿ ಒಮ್ಮೆಯಾದರೂ ಶ್ರವಣಬೆಳಗೊಳಕ್ಕೆ ಭೇಟಿ ನೀಡಬಹುದು. ನಾವು ಭೇಟಿ ನೀಡದೇ ಹೋದರು ಪ್ರತಿ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ವಿಜೃಂಭಣೆಯಿಂದ ನಡೆಯುತ್ತಲೇ ಇರುತ್ತದೆ, ಇದು ಎಂದೂ ಅಳಿಯದ ಮಾಸದ ಕಾಲಚಕ್ರದಲ್ಲಿ ಒಂದಾದ ನಿಸರ್ಗದ ಆಚರಣೆಯಾಗಿದೆ, ಇಂದಿಗೂ ನಡೆಯುತ್ತಿದೆ, ಮುಂದೆಯೂ ನಡೆಯುತ್ತಲೇ ಇರುತ್ತದೆ, ಎಲ್ಲಿಯತನಕ ನಿಸರ್ಗ ಉಳಿಯುತ್ತದೆ ಅಲ್ಲಿಯತನಕ ಆಚರಣೆಗಳು ನಡೆಯುತ್ತಲೇ ಇರುತ್ತದೆ, ಇದು ಭಾರತೀಯರು ಪ್ರಪಂಚಕ್ಕೆ ತೋರಿಸಿಕೊಟ್ಟ ಸತ್ಯದರ್ಶನದ ಮಾರ್ಗ.
ಶ್ರವಣ ಬೆಳಗೊಳದ ಬಾಹುಬಲಿ ಏಕಶಿಲಾ ಮೂರ್ತಿ ಕರ್ನಾಟಕದ ಬಹುದೊಡ್ಡ ಹಿರಿಮೆಯಾಗಿರುವುದರಿಂದ 2005 ಭಾರತ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಬಾಹುಬಲಿಯ ಸ್ತಬ್ಧಚಿತ್ರವನ್ನು ರಾಜಪಥದ ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿತ್ತು.
ಇಷ್ಟೆಲ್ಲಾ ವಿಷಯ ನಾವಿಂದು ಚರ್ಚಿಸಬೇಕಾದಲ್ಲಿ ಪ್ರಕೃತಿಯ ಒಂದಂಶವಾದ ಶಿಲೆಗಳು ಬೇಕಾಗಿದ್ದವು, ಮಾನವನ ದುರಾಸೆಯಿಂದಾಗಿ ಭೂಮಿಯ ಮೇಲೆ ತಲೆಯೆತ್ತಿದ್ದಂತಹ ಅನೇಕ ಶಿಲೆಗಳು ವಿವಿಧ ಉದ್ದೇಶಗಳಿಂದ ಕಣ್ಮರೆಯಾಗಿದೆ, ಅನೇಕ ಖನಿಜ ಸಂಪನ್ಮೂಲಗಳಿಗೆ ಭೂಗರ್ಭವನ್ನು ಬರಿದು ಮಾಡಲಾಗುತ್ತದೆ, ಶಿಲೆಗಳನ್ನು ಮುಂದಿನ ಭವಿಷ್ಯಕ್ಕಾಗಿ ಉಳಿಸಬೇಕೆಂದು ಪ್ರತಿವರ್ಷ ಡಿಸೆಂಬರ್ 11 ನೇ ತಾರೀಕನ್ನು ವಿಶ್ವ ಪರ್ವತಗಳ ದಿನವೆಂದು ಆಚರಿಸಲಾಗುತ್ತದೆ, ಇಷ್ಟೆಲ್ಲ ಇದ್ದರೂ ಬೆಟ್ಟಗಳು ದಿನದಿನ ನೆಲಸಮವಾಗುತ್ತಿರುವುದು ದುರ್ದೈವವೇ ಸರಿ.
ಪ್ರಕೃತಿಯ ಒಂದು ಅಂಶವಾದ ಶಿಲೆಗಳು ಇರದೆ ಹೋಗಿದ್ದರೆ ವಿಶ್ವದ ಅತ್ಯಂತ ಎತ್ತರವಾದ ಪರ್ವತ ಮೌಂಟ್ ಎವರೆಸ್ಟ್ ನಮಗೆ ತಿಳಿಯುತ್ತಿರಲಿಲ್ಲ,
ಅತಿ ವಿರಳ, ಬೆಲೆಬಾಳುವ, ಬಣ್ಣ ಬಣ್ಣದ ಶಿಲೆಗಳು ದೊರೆಯುತ್ತಿರಲಿಲ್ಲ,
ಇನ್ನು ಕೆಲವು ಶಿಲೆಗಳಿವೆ ಅವು ನೋಡಲಿಕ್ಕೆ ಮರಗಳ ಆಕೃತಿಯನ್ನೇ ಹೋಲುತ್ತದೆ, ಇವುಗಳ ಮೇಲೆ ಹೊಸ ಹೊಸ ಸಂಶೋಧನೆಗಳು ನಡೆಯುತ್ತಿವೆ ಹಾಗೂ ವಿಜ್ಞಾನಿಗಳ ತಲೆಯನ್ನು ಕೆಡಿಸಿದೆ.
ಓಡಾಡುವ ಕಲ್ಲುಗಳೆಂದೇ ಪ್ರಖ್ಯಾತವಾಗಿರುವ Nazla ರೇಖೆಗಳು ಸೃಷ್ಟಿಯಾಗುತ್ತಿರಲಿಲ್ಲ,
ಶಿಲೆಗಳು ಇದ್ದರಿಂದ ತಾನೇ ಗುಹೆಗಳಲ್ಲಿ ಆದಿಮಾನವ ಚಿತ್ರಗಳನ್ನು ಬಿಡಿಸಿದ್ದು, ಕೋಟೆ ಕೊತ್ತಲಗಳನ್ನು ಕಟ್ಟಿಸಿದ್ದು, ಶಾಸನಗಳನ್ನು ಕೆತ್ತಿಸಿದ್ದು.
ರಾಮಾಯಣದಲ್ಲಿ ಲಂಕೆಗೆ ಕಟ್ಟಲಾದ ಸೇತುವೆಗೆ ತೇಲುವ ಕಲ್ಲುಗಳು ಬಳಕೆಗೆ ಬರುತ್ತಿರಲಿಲ್ಲ.
ಶಿಲೆಗಳು ಇಲ್ಲದೇ ಹೋಗಿದ್ದರೆ ಪುರಾಣಗಳಲ್ಲಿ ಕೃಷ್ಣ ಲೋಕಕಲ್ಯಾಣಕ್ಕಾಗಿ ಎತ್ತಿದ ಗೋವರ್ಧನ ಗಿರಿ ಬೆಟ್ಟ ಇರುತ್ತಿರಲಿಲ್ಲ.
ತಮಿಳುನಾಡಿನ ಮಹಾಬಲಿಪುರಂ ನಲ್ಲಿರುವ ಬೆಟ್ಟದಿಂದ ಬೀಳದೆ ನಿಂತಿರುವ ಒರೆಗಲ್ಲಿನಲ್ಲಿನ ಬಗ್ಗೆ ಜನರಿಗೆ ತಿಳಿಯುತ್ತಿರಲಿಲ್ಲ.
ಹಿಮದಿಂದ ಲಿಂಗದ ರೂಪ ಪಡೆಯುವ ಕೈಲಾಸ ಶಿಖರ ಇಷ್ಟೊಂದು ಹೆಸರನ್ನು ಪಡೆಯುತ್ತಿರಲಿಲ್ಲ
ಶಿಲೆಗಳ ರಚನೆ ಇರದೆ ಹೋಗಿದ್ದರೆ ಪ್ರಪಂಚದ ಅತ್ಯಂತ ಎತ್ತರದಿಂದ ಧುಮುಕುವ ಏಂಜಲ್ಸ್ ಜಲಪಾತ, ಏಷ್ಯಾ ಖಂಡದಲ್ಲಿಯೇ ಅತ್ಯಂತ ಎತ್ತರದಿಂದ ಧುಮುಕುವ ಜೋಕ್ಸ್ ಫಾಲ್ಸ್ ಇರುತ್ತಿರಲಿಲ್ಲ.
ಶಿಲೆಗಳು ಇಲ್ಲದೆ ಹೋಗದ್ದರೆ ಹಿಮಾಲಯದ ಶಿಲೆಗಳು ಒಳಗೆ ಸಿಗುವ ಕೆಂಪು ಉಪ್ಪು ಬಹಳ ಮನ್ನಣೆಯನ್ನು ಪಡೆಯುತ್ತಿರಲಿಲ್ಲ.
ಶಿಲೆಗಳು ಇಲ್ಲದೆ ಹೋಗಿದ್ದರೆ ವೈಜ್ಞಾನಿಕ ಯುಗದ ಅದ್ಭುತಗಳಾದಂತಹ ಅಂಡರ್ ಗ್ರೌಂಡ್ ಸುರಂಗಗಳು ಸೃಷ್ಟಿಯಾಗುತ್ತಿರಲಿಲ್ಲ.
ಶಿಲೆಗಳು ಇಲ್ಲದೆ ಹೋಗಿದ್ದರೆ ಹಂಪಿಯ ಕಲ್ಲಿನ ರಥ, ಸಂಗೀತ ಸ್ವರ ಹೊಮ್ಮುವ ಶಿಲೆಗಳು ಇರುತ್ತಿರಲಿಲ್ಲ
ಶಿಲೆಗಳು ಇರದೇ ಹೋಗಿದ್ದರೆ ಚೈನಾದ Leshan giant Budda ವಿಗ್ರಹವು ತಯಾರಾಗುತ್ತಿರಲಿಲ್ಲ.
ಶಿಲೆಗಳು ಇರದಿದ್ದರೆ ಇಂಡೋನೇಷ್ಯಾದಲ್ಲಿ ಕಂಡುಬರುವ ಪ್ರಪಂಚದ ಅತ್ಯಂತ ದೊಡ್ಡ ದೇವಾಲಯಗಳು ಕಾಣಿಸುತ್ತಿರಲಿಲ್ಲ.
ಭೂಮಿಯ ಮೇಲೆ ವೈವಿಧ್ಯಮಯವಾದ ಶಿಲೆಗಳು ಮೂಡಿದ್ದರಿಂದಲೇ ಕರ್ನಾಟಕದ ಯಾಣ ಚೈನಾದ ಸ್ಟೋನ್ ಫಾರೆಸ್ಟ್ / stone forest ಜನಮನ್ನಣೆಯನ್ನು ಪಡೆಯುತ್ತಿರಲಿಲ್ಲ.
ಕಟ್ಟಿಗೆ ಉರಿಯುತ್ತದೆ ಎಂದರೆ ನಂಬೋಣ ಆದರೆ ಕಲ್ಲು ಎಲ್ಲಿಯಾದರೂ ಉರಿಯುತ್ತದ ? ನನಗೂ ಮೊದಲು ಗಾಬರಿಎನಿಸಿತು, ಆಸ್ಟ್ರೇಲಿಯಾದಲ್ಲಿರುವ ಕೆಲವು ಪರ್ವತದ ಸಾಲುಗಳು ಕಟ್ಟಿಗೆಯಂತೆ ಉರಿಯುತ್ತದೆ.
ಶಿಲೆಗಳು ಇದ್ದಿದ್ದರಿಂದಲೇ ಪ್ರಪಂಚದಾದ್ಯಂತ ಗುಹಂತರ ಕೆತ್ತನೆಗಳು ಕಂಡು ಬಂದದ್ದು Petra, Peru , ಅಜಂತಾ ದೇವಾಲಯಗಳು.
ಶಿಲೆಗಳು ಇದ್ದಿದ್ದರಿಂದಲೇ ಪ್ರಪಂಚದ ಅದ್ಭುತಗಳಾದ ಪಿರಮಿಡ್, ಸೂಕ್ಷ್ಮ ಕೆತ್ತನೆ ಉಳ್ಳ ತಾಜ್ಮಹಲ್ ನಿರ್ಮಾಣವಾದದ್ದು.
[ ಶಿಲೆಗಳು ಕೇವಲ ಬೆಟ್ಟ ಗುಡ್ಡಗಳಿಗೆ ಸೀಮಿತವಾಗಿರದೆ ಬಹಳಷ್ಟು ವಿಷಯಗಳಲ್ಲಿ ಹಾಸುಹೊಕ್ಕಾಗಿದೆ,
ಲಾವಾರಸ ಸಮುದ್ರ ಸೇರುವ ಜಾಗದಲ್ಲಿ ಯಾವ ಪ್ರಾಣಿಗಳೂ ಬದುಕಲು ಸಾಧ್ಯ ಎಂದು ನಾವು ಭಾವಿಸುತ್ತೇವೆ ಅಲ್ಲವೇ ? ಇಂತಹ ಪ್ರದೇಶದಲ್ಲಿಯೂ ಒಂದು ಮೀನು ಬದುಕುತ್ತದೆ, ಇದು ಎಷ್ಟು ಅಪಾಯಕಾರಿ ಎಂದರೆ ಅಪ್ಪಿತಪ್ಪಿ ಇದರ ಚರ್ಮವನ್ನೇನಾದರೂ ಮಾನವ ಸ್ಪರ್ಶಿಸಿದರೆ ಸ್ವಲ್ಪ ಹೊತ್ತಿನಲ್ಲಿಯೇ ಅಸುನೀಗುತ್ತಾನೆ ಅಷ್ಟು ವಿಷಕಾರಿಯಾಗಿದೆ, ಅಂದಹಾಗೆ ಈ ಮೀನಿನ ಹೆಸರು ಏನು ಗೊತ್ತೇ ? - "ಕಲ್ಲು ಮೀನು"
ಕಲ್ಲು ಹೂವನ್ನೇನಾದರೂ ಒಮ್ಮೆ ತಿಂದಿದ್ದೀರಾ ಇದೇನಪ್ಪಾ ಹೆಸರು ಕೇಳಲಿಕ್ಕೆ ವಿಚಿತ್ರ ಎನಿಸುತ್ತಿದೆಯೇ ? ಹೌದು ಇದು ಒಂದು ಕಲ್ಲಿನ ಮೇಲೆ ಬೆಳೆಯುವ Lichens ಆಗಿದೆ, ಇದರ ಸೇವನೆಯಿಂದ ಮೂತ್ರಪಿಂಡದ ಸಮಸ್ಯೆ ಗುಣವಾಗುತ್ತದೆ.
]
ಶಿಲೆಗಳು ಇಲ್ಲದೆ ಹೋಗಿದ್ದರೆ ಇವುಗಳ ಮೇಲೆ ಸಂಶೋಧನೆಗಳು ನೆಡೆಯುತ್ತಿರಲಿಲ್ಲ. ಚರ್ಚಾವಿಷಯಗಳು ಆಗುತ್ತಿರಲಿಲ್ಲ. ಪ್ರಕೃತಿಯ ಅವಿಭಾಜ್ಯ ಅಂಗವಾದ ಶಿಲೆಗಳು ಮುಂದಿನ ಪೀಳಿಗೆಗಾಗಿ ಉಳಿಯಲಿ. ಎಲ್ಲೆಡೆಯೂ ಹಸಿರು ಕಿಚ್ಚು ಹೆಚ್ಚುಲಿ.
ಧನ್ಯವಾದಗಳು.