Saturday, December 26, 2020

ಓ ನನ್ನ ಬಾಲ್ಯ ಸ್ನೇಹಿತನೇ ನಿನ್ನುಪಸ್ಥಿತಿಗಾಗಿ ಕಾದಿಹೆನು ಬಾ.

                          ಎಸ್ ಪಿ ತೇಜರಾಜು.


ಬಾಲ್ಯದಲಿ ತಾಯಿ ತೋರಿದ ನಿನ್ನಂದಕೆ

 ಮಾರುಹೋಗಿ ಹೆಚ್ಚುoಡು ಬೆಳೆದವ ನಾನು,

ಬೇಸಿಗೆಯ ಧಗೆಗೆ ಮನೆಯ ಪ್ರಾಂಗಣದಿ ನನ್ನಜ್ಜಿಯೊಂದಿಗೆ

 ನಿನ್ನನ್ನು ನೋಡುತ ಮಲಗಿದವ ನಾನು,

|ಓ ನನ್ನ ಬಾಲ್ಯ ಸ್ನೇಹಿತನೇ ನಿನ್ನುಪಸ್ಥಿತಿಗಾಗಿ ಕಾದಿಹೆನು ಬಾ.|


ಭೂಮಿಯಲಿ ಜನಿಸಿದ ಜೀವ ಕೋಟಿಗಳಿಗೆ

ಶಾಂತ ಬೆಳಕಿನ ಆನಂದವನು ನೀಡಿದವ ನೀನು,

ತೊರೆಗಳಲಿ ಹರಿದು, ನದಿ ಸೇರಿ, ಸಮುದ್ರದಬ್ಬರಗಳಿಗೆ

ಬೆಳಕು ನೀಡಿ,ಕಿನಾರೆಯಲಿ ಮುಳುಗಿದವ ನೀನು,

|ಓ ನನ್ನ ಬಾಲ್ಯ|


ಅಂಬೆಗಾಲಲಿ ತೆವಳಿ,ಪುಟ್ಟ ಹೆಜ್ಜೆಯಿಡುತ್ತಿರುವಾಗ,

 ನಾ ಹೋದ ಕಡೆಗೆಲ್ಲ ನನ್ನೊಂದಿಗೆ ಬಂದಿರುವೆ ನೀನು,

ನಾ ಮರೆತರು ನೀ ಮರೆಯದೆ ಪ್ರತಿದಿನವೂ ಬಂದು

 ಕೂಗಿ ಕರೆದಿರುವೆ ನೀನು,| ಓ ನನ್ನ ಬಾಲ್ಯ|


ಪ್ರತಿದಿನವೂ ನಿನ್ನ ಬೆಳಕಿನ ಶೋಭೆಯಲಿ ತರು-ಲತೆ 

ಬಳ್ಳಿಗಳಿಗೆ ಪುಷ್ಠಿ ನೀಡಿ ಬೆಳೆಸಿದವ ನೀನು,

ಪ್ರತಿದಿನವೂ ಕಾದ ಚಾಗರದಕ್ಕಿಗೆ ಷೋಡಶ ಬೆಳಕ

 ಉಣಬಡಿಸಿ ಸಂತೃಪ್ತಿ ಪಡಿಸಿದವ ನೀನು,| ಓ ನನ್ನ ಬಾಲ್ಯ|


 ಕತ್ತಲಾಗಿದೆ, ಮೌನ ಆವರಿಸಿದೆ, ವೃಕ್ಷಗಳ ನೆರಳು ವಿಚಿತ್ರ

 ಆಕಾರ ಪಡೆದು ಭಯ ಮೂಡಿಸುತಲಿವೆ,

ಮೋಡದ ಮರೆಯಲಿ ನಾ ನಡೆವ ಹಾದಿಯನು 

ನಕ್ಷತ್ರಗಳು ಇಣುಕಿ ನೋಡುತಲಿವೆ,

ಕಾಡಿನಲಿ ಉದುರಿದ ತರಗೆಲೆಯ ಮೇಲೆ ಕಾಲಿಡುತಾ  

ನನ್ನೆಜ್ಜೆ ಸಪ್ಪಳಕೆ ಹೆದರಿ ಬೆಂಡಾಗಿಹೆನು,

ಮನೆಯಲ್ಲಿ ತಾಯಿ ಕಾಡಿನ ಭಯಾನಕ ಮೌನವನು 

ನೆನೆದು ನನ್ನ ಹಿಂತಿರುಗುವಿಕೆಗಾಗಿ ಕಾದಿ ಕುಳಿತಿಹಳು, 

ಆ ನಿನ್ನ ಸಣ್ಣ ನಗುವಿನ ಬೆಳಕು ಸಾಕು ನನಗೆ ಧೈರ್ಯ ಬರಲು,

| ಓ ನನ್ನ ಬಾಲ್ಯ|



 ಬೀಜವಾಗಿ ಭೂಮಿಗೆ ಬಿದ್ದು, ಮೊಳಕೆಯೊಡೆದು ಚಿಗುರಿ, 

ಆಳೆತ್ತರದ ಅಜಾನುಬಾಹುಗಳ ನಡುವೆ ಪೈಪೋಟಿಯಲ್ಲಿ ಬೆಳೆದು,

ಹೆಮ್ಮರವಾಗಿ ನೂರಾರು ಜೀವಿಗಳಿಗೆ ಆಶ್ರಯ ನೀಡಿಹೆನು,ನನ್ನ 

ಜೀವಿತಾವಧಿಯಲ್ಲಿ ನಿನ್ನ ಬಹು ಆಯಾಮವನುನೋಡಿಹೆನು, 

ಎಷ್ಟೇ ಆದರೂ ನಾ ಅಳಿಯುವವ, ನೀವು ಉಳಿಯುವವ,

ನಾ ಅಳಿಯುವ ಮುನ್ನ ಚಾಗರದಕ್ಕಿಗೆ ಉಣಬಡಿಸಿದಂತೆ

ನಿನ್ನ ಶೋಭೆಯನ್ನುಮ್ಮೆ ಉಣಬಡಿಸಿ ಬಿಡು ಸಾಕು,

ಓ ನನ್ನ ಬಾಲ್ಯ ಸ್ನೇಹಿತನೇ ನಿನ್ನುಪಸ್ಥಿತಿಗಾಗಿ ಕಾದಿಹೆನು ಬಾ.

Saturday, November 14, 2020

                                                            -  ಎಸ್ ಪಿ ತೇಜರಾಜು.

 ನಾ ಆಸ್ವಾದಿಸದಿರೆ ಇನ್ನಾರು ಆಸ್ವಾದಿಸುವರು?


 ಕತ್ತಲರಿದು ಬೆಳಕು ಮೂಡಿ ಜಗದ ಜೀವಕೋಟಿಗೆ 

ಪುಷ್ಟಿ ನೀಡಿದ ಸೂರ್ಯ ತೇಜ ಪ್ರಕರತೆಯನ್ನು 

ನಾ ಆಸ್ವಾದಿಸದಿರೆ ಇನ್ನಾರು ಆಸ್ವಾದಿಸುವವರು?


ಬೆಳಕು ಮೂಡಿದ ಖುಷಿಗೆ ಚಂದದಿ ನಲಿದು ರೆಕ್ಕೆ ಬಡಿದು

 ಆಗಸವೇರಲು ಚಿಲಿಪಿಲಿ ಗುಟ್ಟಿದ ಪಕ್ಷಿಗಳ ಇಂಚರವನ್ನು

 ನಾ ಆಸ್ವಾದಿಸದಿರೆ ಇನ್ನಾರು ಆಸ್ವಾದಿಸುವರು?


 ಇರುವೆಯಿಂದಿಡಿದು ಗಜಾನನ ಮರಿಯವರೆಗೆ

 ಗುಟುಕು ನೀಡಿ ಚಂದದಿ ನಲಿವ ತೀರ್ಯಜಂತುಗಳ ಆನಂದವನ್ನು

 ನಾ ಆಸ್ವಾದಿಸದಿರೆ ಇನ್ನಾರು ಆಸ್ವಾದಿಸುವರು?


 ಝೇಂಕಾರ ಮೊಳಗಿಸಿ ವೃಕ್ಷದ ಪ್ರತಿ ಪುಷ್ಪಗಳ ಮಕರಂದವೀರಿ 

ಹೂವು ಹಣ್ಣಾಗುವಂತೆ ಮಾಡಿದ ಜೇನು,ದುಂಬಿಯ ಪ್ರತಿಫಲಾಪೇಕ್ಷೆಯಿಲ್ಲದ ಕಾಯಕವನ್ನು

 ನಾ ಆಸ್ವಾದಿಸದಿರೆ ಇನ್ನಾರು ಆಸ್ವಾದಿಸುವರು?


 ಆಗಸ ಮುಟ್ಟುವ ಭರದಲ್ಲಿ ನಾಮುಂದು ತಾಮುಂದೆ ಎಂಬಂತೆ

 ಚೈತನ್ಯದಿ ನಲಿದು ದೈತ್ಯ ಮರವಾಗಿ ಬೆಳೆಯುವ ವೃಕ್ಷಗಳ ಪೈಪೋಟಿಯನ್ನು

ನಾ ಆಸ್ವಾದಿಸದಿರೆ ಇನ್ನಾರು ಆಸ್ವಾದಿಸುವರು?


 ಕಾಡಿನಲ್ಲಿ ಅಲೆದು ಬೆಟ್ಟದ ತುತ್ತ ತುದಿಯನೇರಿ 

ದೂರದಿ ಘರ್ಜಿಸಿದ ಆನೆ, ಸಿಂಹ, ಕರಡಿಯ ಶಬ್ದವನ್ನು

 ನಾ ಆಸ್ವಾದಿಸದಿರೆ ಇನ್ನಾರು ಆಸ್ವಾದಿಸುವರು?


 ಸೂರ್ಯನ ಪ್ರಖರತೆಗೆ ಗಿಡಮರಗಳ ಎಲೆಗಳೆಲ್ಲ

 ಹಣ್ಣಾಗಿ ಉದುರಿ ಭೂಮಿ ಒಣಗಿರೆ, ಬಿದ್ದ ಮೊದಲ ಮಳೆಗೆ ಮಣ್ಣಿನಿಂದ ಹೊರಬಂದ

 ಆ ಮಣ್ಣ ಸುವಾಸನೆಯನ್ನು ನಾ ಆಸ್ವಾದಿಸದಿರೆ ಇನ್ನಾರು ಆಸ್ವಾದಿಸುವರು?


 ಭೋರ್ಗರೆದು ಜಲಪಾತದಲ್ಲಿ ಧುಮ್ಮಿಕ್ಕಿ ನದಿ ತೊರೆ ಝರಿಗಳಾಗಿ ಹರಿದು

 ಆಮೆ, ಮೀನು, ಮಂಡುಕಗಳಿಗೆ ಆಶ್ರಯ ನೀಡಿ, ಸಮುದ್ರ ಸೇರುವ ನದಿಗಳ ಹಂಬಲವನ್ನು 

ನಾ ಆಸ್ವಾದಿಸದಿರೆ ಇನ್ನಾರು ಆಸ್ವಾದಿಸುವರು?


 ಹಗಲು ಉರುಳಿ ಕತ್ತಲಾವರಿಸಿ ತನ್ನ ಶಾಂತ ಬೆಳಕಿನಡಿ

 ಪ್ರಶಾಂತತೆ ನೀಡಿದ ಪೂರ್ಣಚಂದ್ರನ ಪ್ರಭಾವಳಿಯನ್ನು

 ನಾ ಆಸ್ವಾದಿಸದಿರೆ ಇನ್ನಾರು ಆಸ್ವಾದಿಸುವರು?


 ಬಡವನಾಗಿರಲಿ ಬಲ್ಲಿದನಾಗಿರಲಿ ಬಂಗಲೆ ಉಳ್ಳವನಾಗಿರಲ್ಲಿ ಗುಡಿಸಲು ಉಳ್ಳವನಾಗಿರಲಿ 

ಪ್ರತಿ ಮನೆ ಮನದಲ್ಲಿಯೂ ಅಜ್ಞಾನದಿಂದ ಜ್ಞಾನದೆಡೆಗೆ ಬೆಳಕುಚೆಲ್ಲುವ ದೀಪಾವಳಿಯ ಸೊಬಗನ್ನು

 ನಾ ಆಸ್ವಾದಿಸಿದ್ದೀರಿ ಇನ್ನಾರು ಆಸ್ವಾದಿಸುವವರು?


 ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

Saturday, October 31, 2020

ಮಾತೃಭಾಷೆಯ ಕಳವಳ.



                                           - ಎಸ್. ಪಿ. ತೇಜರಾಜು.

 ಆ ನಾಡೊಳು ಊರೋಳು ಓಳೋಳಿಯಿo ಬೆಳೆದ ಕಳವೆಯ ಕೆಯ್ವೊಲಗಳಿಂ ಅಲ್ಲಲ್ಲಿ ಪರಿವ  ಪರಿಕಾಲ್ ಗಳಿಂ,ಪೊಗ, ಪುನ್ನಾಗ, ನಾಗ, ವಕುಳ,ಚಂಪಕ,ಅವಿಚಕಳ, ಕೇತಕಿ, ಸುಗನ್ಧ, ಕಣವೀರ, ಸೇವಂತಿ, ಕಾಸಾರ ಆಭಾಭರಿತಮೆನಿಪೆ ಪುಷ್ಪಾ ವಾಟಂಗಳಿಂ,ಕೌಂಗು,ತೆಂಗು,ಕದಳೀವನ,ಸಾಂಬ್ರ,ಜಂಬೂದ್ರುಮಾದಿ ನಂದನಂಗಳಿಂ. ನಾಗವಲ್ಲೀವನಂಗಳಿಂ, ಒಸರ್ವ, ತನಿರಸದ ಪುಂಡ್ರೇ ಕ್ಷುವಾಟಂಗಳಿಂ, ಕಂಪನುಗುಳ್ವ ಕವಳ ನೀಳೋತ್ಪಳವನಾವಳಿಯಿಂದ ಅತೀವ ರಮ್ಯಂ ಎನಿಸಿ ಯೋಗಿಗಳ್ಗo ಭೋಗಾಸಕ್ತಿಯನಾಗಿಸುತಿರರ್ಪುದು.

 ಇದು ನಮ್ಮ ಬನವಾಸಿಯ ಸುತ್ತಮುತ್ತ ಇರುವ ನಿಸರ್ಗದ ಸೌಂದರ್ಯವನ್ನು ವರ್ಣಿಸುವ ಶಾಸನ ಯಾವ ಪ್ರದೇಶದಲ್ಲಿ ಈ ರೀತಿಯಾದಂತಹ ಶ್ರೀಮಂತ ಸಸ್ಯ ಸಂಪತ್ತು ಹೊಂದಿರುತ್ತದೆಯೋ ಅಲ್ಲಿ ನೆಲೆ ಕಾಣುವ ಪ್ರತಿಯೊಂದು ವಿಷಯವೂ ಕೂಡ ಅಷ್ಟೇ ಭವ್ಯತೆ, ವಿಶಾಲತೆ, ಶ್ರೀಮಂತಿಕೆಯನ್ನು ಹೊಂದಿರುತ್ತದೆ ಹಾಗೂ ಶ್ರೀಮಂತವಾದ ವನಸಿರಿಯ ಸೌಂದರ್ಯಕ್ಕೆ ಯೋಗಿಗಳಿಗೂ ಇಂದ್ರಿಯ ಸುಖಗಳತ್ತ ಮನಸ್ಸು ಸೆಳೆಯುವಂತೆ ಮಾಡುವ ಶಕ್ತಿ ಈ ನಿಸರ್ಗಕ್ಕಿದೆ ಎಂದು ಹೇಳಲಾಗುತ್ತಿದೆ.

 ಈ ಅಭೂತಪೂರ್ವ ನಿಸರ್ಗಕ್ಕೆ ಹೊಂದಿಕೊಂಡಂತೆ ವಿಧವಿಧವಾದಂತಹ ಪ್ರಾಣಿ-ಪಕ್ಷಿ ವೈಶಿಷ್ಟ್ಯ ನೆಲೆಗೊಂಡಿದೆ. ಇರುವೆ, ಜೇನುಹುಳು, ಚಿಟ್ಟೆಯಿಂದಿಡಿದು ಗುಬ್ಬಿ, ಬಹಳ ಸುಂದರವಾಗಿ ತನ್ನ ಗೂಡು ಹೆಣೆದುಕೊಳ್ಳುವ ಗೀಜಗ, ಚಂದದ ಪಾರಿವಾಳ, ಯಾರೋ ಹೊರಗಿನವರು ಮನೆಗೆ ಬರಬಹುದಾದಂತಹ ಸೂಚನೆಯನ್ನು ನೀಡುವ ಕಾಗೆ, ಹಲ್ಲಿ, ಸುಶ್ರಾವ್ಯವಾಗಿ ಹಾಡುವ ಕೋಗಿಲೆ, ಚಂದದ ಗರಿ ಹೊಂದಿರುವ ನವಿಲು ಹೀಗೆ ನೂರಾರು ಪಕ್ಷಿ ವೈಶಿಷ್ಟ್ಯ ಜೊತೆಜೊತೆಗೆ ಚಂದದ ಮೊಲ, ಆನಂದವಾಗಿ ವಿಹರಿಸುವ ಜಿಂಕೆ, ಕಡವೆ, ಕೋಣ, ಹಲಸಿನ ಹಣ್ಣನ್ನು ಹೆಕ್ಕಿ ತಿನ್ನುವ ಅಳಿಲು, ವಾನರ, ಜೇನು ಹುಡುಕುವ ಕರಡಿ, ಮೈ ಜುಮ್ಮೆನಿಸುವ ಕಾಳಿಂಗಸರ್ಪ, ತನ್ನ ಗರ್ಜನೆಗೆ ಉಸಿರುಗಟ್ಟಿಸುವಂತಹ ವ್ಯಾಘ್ರ, ಭೂಮಿಯ ಮೇಲಿನ ದೊಡ್ಡ ಪ್ರಾಣಿಯಾದಂತಹ ಸಲಗ. ಇಲ್ಲಿಯ ಕಣಿವೆ, ಜಲಪಾತದಲ್ಲಿ ಭೋರ್ಗರೆದು ನದಿ, ತೊರೆ, ಝರಿಗಳ ಮೂಲಕ ಹರಿಯುವ ಜೀವನದಿ, ಮೀನು, ಆಮೆ, ಏಡಿ, ಮೊಸಳೆ, ಹೀಗೆ ನೂರಾರು ಜಲಚರ ಹಾಗೂ ಉಭಯಚರ ಪ್ರಾಣಿಗಳಿಗೆ ನೆಲೆ ಕಲ್ಪಿಸಿದೆ.

 ಈ ಜೀವ ನದಿಗಳಿಗೆ ಹೊಂದಿಕೊಂಡ ಹಾಗೆ ಇಲ್ಲಿಯ ಮಾನವನ ಆಚಾರ-ವಿಚಾರ, ಕಲೆ-ಸಾಹಿತ್ಯ, ಉಡುಗೆ-ತೊಡುಗೆ, ಭಾಷೆ, ನದಿ ಮುಖಜ ಭೂಮಿಗೆ ಹೊಂದಿಕೊಂಡ ಹಾಗೆ ಕೃಷಿ ಮಲೆನಾಡಿನ ಬೆಟ್ಟದ ಸಾಲುಗಳಲ್ಲಿ ಕಾಣಬಹುದಾದ ಕಾಫಿ, ಟೀ, ರಬ್ಬರ್ ತೋಟಗಳು, ಅಸಂಖ್ಯಾತ ಔಷಧಿ ಗಿಡಮೂಲಿಕೆಗಳು, ಧಾರ್ಮಿಕ ಪುಣ್ಯಕ್ಷೇತ್ರಗಳಾದಂತಹ ಹೊರನಾಡು, ಧರ್ಮಸ್ಥಳ, ಶೃಂಗೇರಿ, ಸುಬ್ರಹ್ಮಣ್ಯ, ಇಲ್ಲಿಯ ಜನರ ನೀರಿನ ದಾಹವನ್ನು ತೀರಿಸಿ ತನ್ನೆಡೆಗೆ ಕೈ ಬೀಸಿ ಕರೆಯುವ ಭವ್ಯ ಕರಾವಳಿ ಇದಕ್ಕೆ ಹೊಂದಿಕೊಂಡ ಹಾಗೆ ಇರುವ ಕಾರವಾರ,ಮಂಗಳೂರಿನ ಪುಣ್ಯಕ್ಷೇತ್ರಗಳು ಹೀಗೆ ಎಲ್ಲವೂ ಪೂರಕವಾಗಿ ಬೆಳೆದು ಬಂದಿದೆ.

 ಇಷ್ಟೆಲ್ಲಾ ಶ್ರೀಮಂತ ನಿಸರ್ಗಸಂಪತ್ತನ್ನು ಹೊಂದಿರುವ ನಾಡನ್ನು ಆಳಿದ ಕದಂಬ, ವಿಜಯನಗರ, ಹೊಯ್ಸಳ, ಮೈಸೂರು ರಾಜಮನೆತನಗಳು ಹಾಗೂ ಅವರು ಕಲೆ, ಸಾಹಿತ್ಯ, ಸಂಸ್ಕೃತಿತೆಗೆ ನೀಡಿದ ಕಾಣಿಕೆ ಕೋಟೆಕೊತ್ತಲಗಳು [ ಚಿತ್ರದುರ್ಗದ ಕಲ್ಲಿನ ಕೋಟೆ], ಜೈನ ಬಸದಿಗಳು, ಶ್ರವಣಬೆಳಗೊಳದ ಗೊಮ್ಮಟೇಶ್ವರ ಏಕಶಿಲಾಸ್ತಂಭ, ಅಸಂಖ್ಯಾತ ಕಲ್ಲಿನ ಶಾಸನಗಳು, ಕೆರೆಕಟ್ಟೆಗಳು, ಭವ್ಯ ಅರಮನೆಗಳು, ಅತ್ಯಂತ ಸೂಕ್ಷ್ಮ ಕೆತ್ತನೆಗಳುಳ್ಳ ಬೇಲೂರು, ಹಳೇಬೀಡಿನ ದೇವಾಲಯಗಳು, ಇಲ್ಲಿಯ ನಯನಮನೋಹರ ಕಾವಿಕಲೆ, ಸಂಗೀತ ಹಾಗೂ ಭಾಷೆಗೆ ನೀಡಿದಂತಹ ಪ್ರಾಶಸ್ತ್ಯ ನಿಜಕ್ಕೂ ಅಮೋಘವಾದದ್ದು.

 ಇಷ್ಟೆಲ್ಲಾ ಭವ್ಯತೆಯನ್ನು ಹೊಂದಿರುವ ನಾಡನ್ನು ನೋಡಲಿಕ್ಕೆ ಸನಾತನ ಕಾಲದಿಂದಲೂ ವಿದೇಶಿ ಯಾತ್ರಿಗಳು ಬರುತ್ತಿದ್ದಾರೆ ಅವರು ತಮ್ಮ ಅನುಭವದ ಪುಸ್ತಕಗಳಲ್ಲಿ ಬರೆದುಕೊಂಡ ಕೆಲವು ಘಟನೆಗಳು ಅದರಲ್ಲಿಯೂ ಇಲ್ಲಿಯ ಜನಸಾಮಾನ್ಯರು ವಿದೇಶಿಯರಿಗೆ ನೀಡುವ ಗೌರವ ಮಾತೃಭೂಮಿ, ಮಾತೃಭಾಷೆ , ನಿಸರ್ಗದ ಮೇಲೆ ಇರುವ ಪ್ರೀತಿ, ಗೌರವ, ಕಾಳಜಿ ಎಲ್ಲವನ್ನೂ ಹಾಡಿ, ಹೊಗಳಿ, ಕೊಂಡಾಡಿದ್ದಾರೆ.

 ಸಾಧುಗೆ ಸಾದು ಮಾಧುರ್ಯನ್ಗೆ ಮಾಧುರ್ಯo ಬಾಧಿಪ್ಪ । ಕಲಿಗೆ ಕಲಿಯುಗ ವಿಪರೀತನ ಮಾಧವನೀತನ್ ಪೇಱನಲ್ಲಿ.ಎಂದು ಸಾರುವ ಕಪ್ಪೆ ಅರಭಟ್ಟ ಶಾಸನ.ಕೆರೆಯಂ ಕಟ್ಟಿಸು ಬಾವಿಯಂ ಸವೆಸು ದೇವಾಗಾರಮo ಮಾಡಿಸು ಹೀಗೆ ಮುಂದುವರೆಯುವ ಲಕ್ಷ್ಮೀ ಧರಾಮಾತ್ಯ ಶಾಸನ. ಮುಂದಿನ ಜನ್ಮವೊಂದಿದ್ದರೆ ಒಂದು ಪುಟ್ಟ ಜೇನುಹುಳವಾದರೂ ಸರಿಯೇ ಬನವಾಸಿಯಲ್ಲಿ ಹುಟ್ಟಬೇಕು ಎಂದು ಸಾರುವ ಪಂಪನ ಕೃತಿ. ಕಾವೇರಿಯಿಂದಮಾ ಗೋದಾವರಿವರಮಿರ್ದ ಈ ಕನ್ನಡ ನಾಡು,ಇಲ್ಲಿಯ ಜನ ಓದದೇ ಇದ್ದರೂ ಕಾವ್ಯ ಪರಿಣತಿಯನ್ನು ಹೊಂದಿದ್ದಾರೆ ಎನ್ನುವ ನೃಪತುಂಗನ ಕಂದಪದ್ಯ, ಕನ್ನಡಿಗರು ಮಾತೃ ಭೂಮಿ ಭಾಷೆಗೆ ನೀಡಿದ ಗೌರವವನ್ನು ತಿಳಿಸುತ್ತದೆ.

 ಈ ಕನ್ನಡ ನಾಡಿನಲ್ಲಿ ಹುಟ್ಟಿದ ನಾವೆಲ್ಲರೂ ನಿಜಕ್ಕೂ  ಧನ್ಯೋಸ್ಮಿಗಳು. ಕನ್ನಡ ಪುರಾತನ ಹಾಗೂ ಇಂದಿಗೂ ಜೀವಿಸುತ್ತಿರುವ ಭಾಷೆಯಾಗಿರುವುದರಿಂದಲೇ ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿರುವುದು.

 ಭಾರತೀಯರು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದುಕೊಳ್ಳಲು ಹೇಗೆ ಎಲ್ಲರೂ ಏಕೀಕರಣ ಗೊಂಡರೋ ಅದೇ ರೀತಿ ಕನ್ನಡ ಉಳಿವಿಗಾಗಿ ಏಕೀಕರಣ ನಡೆಸುವುದು ಅನಿವಾರ್ಯವಾಯಿತು.

 ದೇಶಪಾಂಡೆಯವರು ಕನ್ನಡ ಉಳಿವಿಗಾಗಿ ಮೊದಲ ಹೆಜ್ಜೆಯನ್ನಿಟ್ಟರೆ,ಕರ್ನಾಟಕ ಕುಲಪುರೋಹಿತರಾದ ಆಲೂರು ವೆಂಕಟರಾಯರು ಹರಿದು ಹಂಚಿಹೋಗಿದ್ದ ಕನ್ನಡ ನಾಡನ್ನು ಅಖಂಡ ಕನ್ನಡ ನಾಡನ್ನಾಗಿ ಮಾಡಲು ಪರಿಶ್ರಮಿಸಿದರು.

 ಹುಯಿಲಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಎಂಬ ಗೀತೆ, ಕುವೆಂಪು ಅವರ ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಗೀತೆಗಳು, ಡಿ ಎಸ್ ಕರ್ಕಿಯವರ ಹಚ್ಚೇವು ಕನ್ನಡದ ದೀಪ ಎಂಬ ಗೀತೆ, ಕನ್ನಡ ಪದಗೋಳ್ ಅಂದ್ರೆ ರತ್ನಂಗ್ ಪ್ರಾಣ ಎಂಬ ಜಿ ಪಿ ರಾಜರತ್ನಂ ಅವರ ಗೀತೆಗಳು ಲಕ್ಷಾಂತರ ಮಂದಿ ಕನ್ನಡಿಗರ ಹೃದಯ ಮುಟ್ಟಿದವು.

 ಪತ್ರಿಕೋದ್ಯಮದ ಪ್ರಭಾವ, ಕನ್ನಡ ಸಾಹಿತ್ಯ ಪರಿಷತ್ ನ ಸ್ಥಾಪನೆ, ಅಸಂಖ್ಯಾತ ಸಾಹಿತಿಗಳ ಬರಹಗಳು ಕರ್ನಾಟಕ ಏಕೀಕರಣಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿತು.

 ಲಕ್ಷಾಂತರ ಕನ್ನಡಿಗರ ಪರಿಶ್ರಮದ ಫಲವಾಗಿ 1956 ನವೆಂಬರ್ 1 ರಂದು ಕನ್ನಡಿಗರಿಗಾಗಿ ಪ್ರತ್ಯೇಕ ರಾಜ್ಯ ವಿಂಗಡಣೆಯಾಯಿತು.1973 ನವೆಂಬರ್ 1ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು.

 ಇಂದಿಗೂ ಅಣ್ಣಾವ್ರ ನಾವಾಡುವ ನುಡಿಯೇ ಕನ್ನಡ ನುಡಿ, ನಾವಿರುವ ತಾಣವೆ ಗಂಧದ ಗುಡಿ ಎಂಬ ಗೀತೆಯನ್ನು ಕೇಳುವಾಗ ಮೈರೋಮಾಂಚನವೆನಿಸುತ್ತದೆ.

ನಿಸರ್ಗವು ಭಾಷೆಯ ಸೃಷ್ಟಿ ಹಾಗೂ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಕಲ್ಪಿಸಿಕೊಡುತ್ತದೆ. ಭಾಷೆಯು ತಾನೊಂದೇ ಅಜರಾಮರವಾಗಿರಲು ಸಾಧ್ಯವಿಲ್ಲ ಏಕೆಂದರೆ ಅದು ಇಲ್ಲಿಯ ನಿಸರ್ಗಕ್ಕೆ ಪೂರಕವಾಗಿ ಬೆಳೆದಿದೆ ಹಾಗೂ ನಿಸರ್ಗಕ್ಕೆ ಭಾಷೆಯ ಅವಿಭಾಜ್ಯ ಅಂಗವಾಗಿದೆ.

 ಭಾಷೆ ಜೀವಿಸಲಿಕ್ಕೆ ಅದನ್ನು ಬಳಸುವ ಜನರು ಎಷ್ಟು ಮುಖ್ಯವಾಗುತ್ತಾರೆಯೋ ಅದೇ ರೀತಿ ಇಲ್ಲಿಯ ನಿಸರ್ಗವು ಕೂಡ ಮುಖ್ಯವಾಗಿರುತ್ತದೆ. ನಿಸರ್ಗವನ್ನು ಅಳಿಸಿ ಭಾಷೆಯನ್ನು ಬೆಳೆಸುವ ಕಾಯಕ ನಿಜವಾಗಿಯೂ ತ್ರಾಸಮಯವಾಗಿರುವಂತಹದ್ದು. ಮಾತೃಭಾಷೆಯನ್ನು ನಾವೆಷ್ಟು ಪೂಜ್ಯ ಭಾವನೆಯಲ್ಲಿ ಕಾಣುತ್ತೇವೆಯೋ ಅಷ್ಟೇ ಪ್ರಮಾಣದಲ್ಲಿ ಮಾತೃಭೂಮಿ ಹಾಗೂ ಇಲ್ಲಿಯ ನಿಸರ್ಗ ಸಂಪತ್ತನ್ನು ಸಂರಕ್ಷಿಸಿ, ಪೂಜ್ಯ ಭಾವನೆಯಲ್ಲಿ ಕಾಣುವುದರಿಂದ ಮಾತ್ರ ಈ ಭಾಷೆಯ ಅಜರಾಮರವಾಗಿರಲು ಸಾಧ್ಯ.

 ಅಂಕಣದ ಒಳನೋಟ ಮತ್ತಷ್ಟು ಜನರಿಗೆ ತಿಳಿದರೆ ವಿಷಯ ಜಾಗೃತವಾಗಿ ಬರೆದ ಅಂಕಣ ಸಾರ್ಥಕವೆನಿಸುತ್ತದೆ.

  ನಾವೆಲ್ಲರೂ ಕನ್ನಡ ಭಾರತೀಯರು,ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

                                                                          ಧನ್ಯವಾದಗಳು.

Saturday, August 29, 2020

                                          ಸಮಯಕ್ಕೆ ಬೆಲೆ ಕಟ್ಟಲು ಸಾಧ್ಯವೇ?

                                              ಎಸ್ ಪಿ ತೇಜರಾಜು.

Student Life is golden life  ಎಂಬ ಮಾತಿದೆ ವಿದ್ಯಾರ್ಥಿ ಜೀವನವನ್ನು ಕಳೆದ ಬಹುಪಾಲು ಮಂದಿ ಹೌದು ಎನ್ನುವುದೇನೋ ನಿಜವಾದರೂ ಇನ್ನುಳಿದವರು ಇಲ್ಲ ಎನ್ನುವುದಕ್ಕೆ ಅವರದ್ದೇ ಆದಂತಹ ಬಲವಾದ ಕಾರಣಗಳಿರಬಹುದು, ರಿಮೋಟ್ ಏರಿಯಾಗಳಲ್ಲೇ ಆಗಲಿ ಅಥವಾ ನಗರಗಳಲ್ಲಿಯೇ ಆಗಲಿ ಬೆರಳೆಣಿಕೆಗೆ ಸಿಗದ ಅದೆಷ್ಟೋ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಇಂತಹ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಸರಕಾರ ಹಾಗೂ ಸರಕಾರೇತರ ಸೇವಾ ಸಂಸ್ಥೆಗಳು ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ,SSLC ಯವರೆಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣವೇ ಈ ಯೋಜನೆಯ ಒಂದು ಉದಾಹರಣೆಯಾಗಿದೆ.

 ಸೂಕ್ಷ್ಮವಾಗಿ ಗಮನಿಸಿದರೆ ಖಾಸಗಿ ಹಾಗೂ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಬಹಳಷ್ಟು ಲೋಪದೋಷಗಳಿರುವುದರಿಂದಲೇ ಇಂದಿನ ದಿನದ ಚರ್ಚಾ ವಿಷಯವಾಗಿದೆ, ಇದಕ್ಕಾಗಿಯೇ ರಾಷ್ಟ್ರೀಯ ಶಿಕ್ಷಣ ಸಮಿತಿಯು ಸುದೀರ್ಘ ಅಧ್ಯಯನವನ್ನು ನಡೆಸಿ ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳನ್ನು ತರಲಾರಂಭಿಸಿದೆ, ಶಿಕ್ಷಣ ವ್ಯವಸ್ಥೆಯ ಬಗ್ಗೆ ಮಾತನಾಡುತ್ತ ಹೋದರೆ ಅಂಕಣದ ವಿಷಯ ಬೇರೆಡೆಗೆ ತಿರುಗುವುದರಿಂದ ವಿಷಯವನ್ನು ಇಲ್ಲಿಗೆ ನಿಲ್ಲಿಸಿ ನಾವು ಓದಿದಂತಹ ಶಾಲಾ - ಕಾಲೇಜಿನ ದಿನಗಳನ್ನು ನೆನಪಿಸಿಕೊಳ್ಳುವುದು ಅಂಕಣದ ಆಶಯವಾಗಿದೆ.

 ಬಹುಪಾಲು ಮಂದಿ ನಮ್ಮ ಪೋಷಕರು ಹಳ್ಳಿಯವರೆ ಆಗಿರುವುದರಿಂದ ಅವರು ಶಿಕ್ಷಣಕ್ಕಾಗಿ ಸಾಹಸವನ್ನೇ ಪಟ್ಟಿದ್ದಾರೆ ತಮ್ಮ ಊರಿನಲ್ಲಿರುವ ಪ್ರೈಮರಿ ಸ್ಕೂಲ್ ಅನ್ನು ಮುಗಿಸಿ ಪಕ್ಕದ ಹಳ್ಳಿಗೆ ಹೈಸ್ಕೂಲ್ ಗಾಗಿ ಹೋಗಬೇಕಾಗಿತ್ತು, ಮನೆಯಲ್ಲಿ ಹಣಕಾಸಿನ ತೊಂದರೆಯಿಂದಲೂ, ದೂರದ ಊರಿಗೆ ನಡೆದು ಹೋಗಬೇಕೆಂದಲೋ, ಗುರುಗಳು ಹೊಡೆಯುತ್ತಾರೆಂತಲೋ ಶಾಲೆಯಿಂದ ಹೊರಗುಳಿದರು ಇದರ ನಡುವೆಯೂ ಕೆಲವರು ಓದಿ ನಗರವನ್ನು ಸೇರಿ ದೊಡ್ಡ ಹುದ್ದೆಗಳನ್ನು ಪಡೆದವರಿದ್ದಾರೆ.

 ಪೋಷಕರು ಕಡಿಮೆ ಸಮಯವನ್ನು ವಿದ್ಯಾರ್ಥಿ ಜೀವನದಲ್ಲಿ ಕಳೆದಿದ್ದರೂ ಕೂಡ ಅವರ ನೆನಪುಗಳು ಸ್ಮೃತಿಪಟಲದಲ್ಲಿ ಹಸಿರಾಗಿದೆ. ಪಕ್ಕದ ಹಳ್ಳಿಯ ಶಾಲೆಗೆ ನಡೆದುಕೊಂಡು ಹೋಗುವಾಗ ಸ್ನೇಹಿತರೊಂದಿಗೆ ಗೇಲಿ ಮಾಡಿಕೊಂಡು ಹೋಗಿದ್ದು, ರಸ್ತೆಯ ಆಜುಬಾಜಿನಲ್ಲಿ ಬೆಳೆದಿದಂತಹ ನೇರಳೆ, ಹುಣಸೆ ಮರವನ್ನು ಹತ್ತಿ ಕಿತ್ತು ತಿಂದು ಗುರುಗಳಿಗೆ ತಿಳಿಯದ ಹಾಗೆ ಬಾಯಿಯನ್ನು ತೊಳೆದುಕೊಂಡು ಹೋಗಿದ್ದು, ಮಳೆಗಾಲ ಬಂತೆಂದರೆ ತಿಂಗಳುಗಟ್ಟಲೆ ಶಾಲೆ ನಡೆಯದಿದ್ದಿದ್ದು, ಭಾನುವಾರ ಬಂತೆಂದರೆ ಸ್ನೇಹಿತರೊಂದಿಗೆ ಸೈಕಲ್ ತುಳಿದಿದ್ದು, ಚಾನೆಲ್ನಲ್ಲಿ ಈಜು ಹೊಡೆದದ್ದು, ಆಲೆಮನೆಯ ಬೆಲ್ಲದ ಅಂಟು ತಿಂದಿದ್ದು, ರಾಗಿ ತೆನೆ ಕಿತ್ತು ತಿಂದಿದ್ದು, ದನ ಮೇಯಿಸಲೋ ಅಥವಾ ಸೌದೆತರಲು ಕಾಡಿಗೆ ಹೋದಾಗ ಆದಂತಹ ಅನುಭವಗಳು, ಬಿಸಿಲು ಮಳೆ ಚಳಿಗೆ ತಲೆಕೆಡಿಸಿಕೊಳ್ಳದೆ ಸ್ನೇಹಿತರೊಂದಿಗೆ ಹಬ್ಬ ಹರಿದಿನ ಜಾತ್ರೆಗಳಿಗೆ ನಡೆದುಕೊಂಡು ಹೋಗಿದ್ದು, ಬೇಸಿಗೆ ರಜೆಯಲ್ಲಿ ನಡೆದ ಅನೇಕ ಘಟನೆಗಳನ್ನು ಇಂದಿಗೂ ನೆನಪಿಸಿಕೊಳ್ಳುತ್ತಾರೆ.

 ನಮ್ಮ ಪೋಷಕರಿಗೆ ಆಗಲಿ ಅಥವಾ ನಮಗೆ ಆಗಲಿ ಈ ವಿದ್ಯಾರ್ಥಿ ಜೀವನ ಎನ್ನುವುದು ಒಂದು ಹೊಸ ಅನುಭವಗಳನ್ನು ಹೊತ್ತು ಸಾಗುವ ಪಯಣವಾಗಿದೆ. ಕೆಲವರು ತಮ್ಮ ವಿದ್ಯಾರ್ಥಿ ಜೀವನದ ಕೊನೆಯ ಘಟ್ಟವನ್ನು ಒಂದೇ ಒಂದು ಶಿಕ್ಷಣ ಸಂಸ್ಥೆಯಲ್ಲಿ ಮುಗಿಸಿರುತ್ತಾರೆ ಇನ್ನು ಕೆಲವರು ಬೇರೆ ಬೇರೆ ಕಡೆ ಮುಗಿಸಿರುತ್ತಾರೆ, ಕೆಲವು ವಿದ್ಯಾರ್ಥಿಗಳು ಪೋಷಕರಿಗೆ ತಿಳಿಯದ ಹಾಗೆ ದುಶ್ಚಟಗಳಿಗೆ ಬಲಿಯಾಗಿ ಶಾಲೆಯನ್ನು ತೊರೆದವರಿದ್ದಾರೆ, SSLC,PUC, DEGREE ವಿವಿಧ ಸ್ತರಗಳಲ್ಲಿ ಅನುತ್ತೀರ್ಣರಾಗಿ  ವಿದ್ಯಾರ್ಥಿ ಜೀವನಕ್ಕೆ ವಿದಾಯ ಹೇಳಿದವರಿದ್ದಾರೆ, ಇವರುಗಳ ನಡುವೆಯೂ ಬೆರಳೆಣಿಕೆಯಷ್ಟು ಜನ ಸ್ನಾತಕೋತ್ತರವನ್ನು ಮುಗಿಸಿದವರಿದ್ದಾರೆ.

 ಪದವಿ ಶಿಕ್ಷಣವು ಜೀವನದ ಒಂದು ಘಟ್ಟ, ಎರಡು ವರ್ಷದ ಪದವಿಪೂರ್ವ ಶಿಕ್ಷಣವು ತಿಳಿಯದಹಾಗೆ ಮುಗಿದಿರುತ್ತದೆ. ಹೊಸ ಕಾಲೇಜು ಹೊಸ ಸ್ನೇಹಿತರೊಂದಿಗೆ ಪದವಿಗೆ ಕಾಲು ಇಟ್ಟಿರುತ್ತಾರೆ, ಇದರಿಂದ ಎಲ್ಲವೂ ಹೊಸತನದಿಂದ ಕೂಡಿರುತ್ತದೆ. ಈ ಕಾಲಘಟ್ಟ ಪ್ರತಿಯೊಬ್ಬರ ಜೀವನದಲ್ಲಿಯೂ ತಮ್ಮ ಹವ್ಯಾಸಗಳಿಗೆ ಹಾಗೂ ಭವಿಷ್ಯಕ್ಕೆ ರೆಕ್ಕೆ ಬಿಚ್ಚಿ ಹಾರುವ ಕಾಲವಾಗಿರುತ್ತದೆ. ಫೇಲಾಗುವರಿಂದಲೂ ಹಿಡಿದು ರಾಂಕ್ ಗಳಿಸುವವರು ಕೂಡ ಇಲ್ಲಿರುತ್ತಾರೆ, freshers party ಇಂದ ಪ್ರಾರಂಭವಾಗಿ ಪ್ರತಿ ಸೆಮಿಸ್ಟರ್ ನಲ್ಲಿ ನಾಲ್ಕಾರು ತರಹದ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ,CR election, Sports, College annual day, NSS, NCC, ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದರಲ್ಲಿಯೇ ಮೊದಲ ವರ್ಷ ಮುಗಿದಿರುತ್ತದೆ.

 ಇಷ್ಟರಲ್ಲಾಗಲೇ ಪ್ರತಿಯೊಬ್ಬರೂ ತಮ್ಮತಮ್ಮ ಬಳಗದ ಸ್ನೇಹಿತರನ್ನು ಮಾಡಿಕೊಂಡು ಆತ್ಮೀಯರಾಗುತ್ತಾರೆ. ಓದುವವರದೇ ಒಂದು ಬಳಗವಾದರೆ, ಓದದವರದು ಮತ್ತೊಂದು ಬಳಗ, ಕಾಲೇಜಿಗೆ ಬಂಕ್ ಹೊಡೆಯುವವರದು ಮತ್ತೊಂದು ಬಳಗ, ಹೀಗೆ ತಮ್ಮ ತಮ್ಮ ಹವ್ಯಾಸಗಳಿಗನುಗುಣವಾಗಿ ಸ್ನೇಹಿತರ ಬಳಗವಾಗಿರುತ್ತದೆ. ಸ್ನೇಹಿತರೊಂದಿಗೆ ಸಣ್ಣಪುಟ್ಟ ಜಗಳಗಳು ನಡೆದಿದ್ದರೂ ಕೂಡ ಪ್ರವಾಸ ಎಂದ ಕೂಡಲೇ ಎಲ್ಲರೂ ಒಟ್ಟಿಗೆ ಸೇರುತ್ತಾರೆ. ಮೈಸೂರಿನಲ್ಲಿರುವವರಿಗಂತೂ ವಾರಕ್ಕೆರಡು ದಿನ ಚಾಮುಂಡಿ ಬೆಟ್ಟ, ತಿಂಗಳಿಗೆ ಎರಡು ಬಾರಿ KRS backwater, ಪ್ರತಿ ಸೆಮಿಸ್ಟರ್ ನಲಿಯು ತಪ್ಪದ ಹಾಗೆ 8-10 ಜನರ ಬೈಕ್ ಟ್ರಿಪ್ ಇರುವುದುಂಟು, ಮೈಸೂರಿನ ಸುತ್ತಮುತ್ತ ಅನೇಕ ಪ್ರವಾಸಿ ತಾಣಗಳು ಇರುವುದರಿಂದ 1Day trip ಮಾಡಲು ಅನೇಕ ಅವಕಾಶಗಳು ಇರುವುದುಂಟು.

ಬಿಳಿಗಿರಿರಂಗನ ಬೆಟ್ಟ(BR Hill's), ಮುತ್ತತ್ತಿ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಬಂಡೀಪುರ ಫಾರೆಸ್ಟ್, ತಲಕಾಡು, ಮಲೆ ಮಹದೇಶ್ವರ ಬೆಟ್ಟ, ನಂಜನಗೂಡು, ಮಡಿಕೇರಿಯ ಅಬಿ ಫಾಲ್ಸ್, ಎಣ್ಣೆಹೊಳೆ, ತಲಕಾವೇರಿ, ರಾಜಾಸೀಟ್, ಮಂದಲ್ಪಟ್ಟಿ, ಇರ್ಪು ಫಾಲ್ಸ್, ನಾಗರಹೊಳೆ, ಕಬಿನಿ ಜಲಾಶಯ,kabini back water, ಚಿಕ್ಕಮ್ಮ ಚಿಕ್ಕದೇವಿ ಬೆಟ್ಟ, ಬಳ್ಳೆಫಾರೆಸ್ಟ್, ಭೀಮನಕೊಲ್ಲಿ, ಗದಿಗೆ, ಸುತ್ತೂರು, ಸೋಮನಾಥಪುರ, ವ್ಯವಸ್ಥಿತವಾಗಿ ಯೋಚನೆ ಮಾಡಿದ್ದೆ ಆದರೆ ಪ್ರತಿಯೊಂದು ಒಂದೊಂದು ದಿನದ ಪ್ರವಾಸವಾಗುತ್ತದೆ.

 ಹಾಸನದ ಬೇಲೂರು, ಹಾರಂಗಿ ಜಲಾಶಯ, ಹಳೇಬೀಡು, ಆಗುಂಬೆಯ sunset view point, ಚಿಕ್ಕಮಗಳೂರಿನ ಬಾಬಾಬುಡನ್ ಗಿರಿ, ಮುಳ್ಳಯ್ಯನ ಗಿರಿ, ಶೃಂಗೇರಿ, ಧರ್ಮಸ್ಥಳ, ಸುಬ್ರಹ್ಮಣ್ಯ, ಬಿಸಿಲೆ ಘಾಟ್, ಮಂಗಳೂರು ಬೀಚ್, ಊಟಿ, ಕೊಡೆಕೆನಾಲ್ ಎರಡರಿಂದ ನಾಲ್ಕು ದಿನದ ಪ್ರವಾಸವಾಗುತ್ತದೆ.

 ಚಾರಣಗಳಲ್ಲಿ ಆಸಕ್ತಿ ಇರುವವರಿಗಂತೂ ಕೊಡಚಾದ್ರಿಯ, ತಡಿಯಂಡಮೋಳ್, ಎತ್ತಿನ ಭುಜ, ಚಾರ್ಮುಡಿ ಘಾಟ್, ನಿಶಾನಿ ಬೆಟ್ಟ, ಕುಮಾರ ಪರ್ವತ, ಕುದುರೆಮುಖ, ಕೆಮ್ಮಣ್ಣುಗುಂಡಿ, ಹೀಗೆ ಹತ್ತು ಹಲವು ಚಾರಣ ಪ್ರದೇಶಗಳು ಎರಡು ಮೂರು ದಿನದ ಪ್ರವಾಸದಲ್ಲಿ ಕೊನೆಯಾಗುತ್ತವೆ.

 ಇವುಗಳೆಲ್ಲವೂ ಸ್ನೇಹಿತರೊಂದಿಗಿನ ಪ್ರವಾಸವಾದರೆ ಕಾಲೇಜಿನಿಂದ NSS camp, Industrial visit ಗಳಿರುತ್ತಿದ್ದವು.

 ಇವುಗಳ ನಡುನಡುವೆಯೇ ಕಾಲೇಜಿನ ಇಂಟರ್ನಲ್ಸ್(Internals), Record submission,ಗಳಾಗುತ್ತಿದ್ದಂತೆ ಕೊನೆಯ ಸೆಮಿಸ್ಟರ್ನ ಎಕ್ಸಾಮ್ ಹತ್ತಿರವಾಗಿರುತ್ತವೆ, ಕೊನೆಯದಾಗಿ ಉಳಿವುದು ಬೀಳ್ಕೊಡುಗೆ ಕಾರ್ಯಕ್ರಮ ಜೂನಿಯರ್ಸ್ ಗಳು ಕೂಡ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡುತ್ತಾರೆ.

 ಕಾಲೇಜಿನ ಎಕ್ಸಾಮ್ ಮುಗಿದ ಮಾರನೇ ದಿನದಿಂದಲೇ ಪ್ರತಿಯೊಬ್ಬರಿಗೂ ಅವರದ್ದೇ ಆದಂತಹ ಜೀವನವಾಗಿರುತ್ತದೆ, ಕೆಲವರು ಸ್ನಾತಕೋತ್ತರ ಬೆನ್ನು ಹತ್ತಿದರೆ, ಇನ್ನು ಕೆಲವರು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುತ್ತಾರೆ, ಇನ್ನು ಕೆಲವರು ಕೆಲಸ ಹುಡುಕುವುದರಲ್ಲಿ ಮುಳುಗಿ ಹೋಗುತ್ತಾರೆ, ಕೆಲವರು ಹಳ್ಳಿಗೆ ಹಿಂತಿರುಗುತ್ತಾರೆ, ಮನೆಯಕಡೆ ಶ್ರೀಮಂತವಾಗಿರುವವರು ಸುತ್ತಮುತ್ತಲು ಓಡಾಡಿಕೊಂಡು ಕಾಲ ಕಳೆಯುತ್ತಾರೆ.

 ಯೌವನವು ಪ್ರತಿಯೊಬ್ಬರಿಗೂ ದೊರಕುವಂತಹ ಒಂದು ಸುಸಂದರ್ಭ ಇದರಲ್ಲಿ ನಾವು ನಮ್ಮನ್ನು ಹೇಗೆ ರೂಪಿಸಿಕೊಳ್ಳುತ್ತೇವೆ ಎನ್ನುವುದು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಅಂದು ಎಲ್ಲರ ಬಳಿ ಹಣ ಇರುತ್ತಿರಲಿಲ್ಲ ಆದರೆ ಸಮಯವಿರುತ್ತಿತ್ತು, ಆದರೆ ಇಂದು ಎಲ್ಲರೂ  ಹಣ ಸಂಪಾದಿಸುತ್ತಿದ್ದಾರೆ ಆದರೆ ಯಾರಿಗೂ ಸಮಯವಿಲ್ಲ, ಪ್ರತಿಯೊಬ್ಬರೂ ತಾವು ವಿದ್ಯಾರ್ಥಿ ಜೀವನದಲ್ಲಿ ಕಳೆದಂತಹ ಸಮಯವನ್ನು ನೆನಪಿಸಿಕೊಳ್ಳುತ್ತಾರೆ. ಪ್ರತಿಯೊಬ್ಬರಲ್ಲಿಯೂ ನೆನಪುಗಳು ಸದಾ ಹಸಿರಾಗಿರುತ್ತದೆ. ಅದನ್ನು ಕೇವಲ ನೆನಪಿಸಿಕೊಳ್ಳಬಹುದೇ ಹೊರತು ಹಿಂತಿರುಗಲು ಸಾಧ್ಯವಿಲ್ಲ, ಅರ್ಥಾತ್ ಹಣ ಇದೇ ಸಮಯದಲ್ಲಿ ಮತ್ತಷ್ಟು ಹಣವನ್ನು ಸಂಪಾದಿಸಬಹುದೇ ಹೊರತು ಸಮಯವನ್ನೆಲ್ಲ  ಆದ್ದರಿಂದಲೇ ಸಮಯಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ.

[ ಮೇಲೆ ತಿಳಿದಿರುವಂತಹ ಪ್ರವಾಸಿ ತಾಣಗಳ ಪ್ರಯಾಣ ಒಂದು ಮತ್ತೊಂದಕ್ಕಿಂತ ವಿಭಿನ್ನವಾಗಿರುವಂತಹದ್ದು ಓದುಗರು ಇಚ್ಚಿಸಿದಲ್ಲಿ ಅದರೊಟ್ಟಿಗೆ ಸ್ನಾತಕೋತ್ತರ ಅನುಭವಗಳನ್ನು ಹಂಚಿಕೊಳ್ಳುತ್ತೇನೆ]

 ಧನ್ಯವಾದಗಳು.

Saturday, August 8, 2020

ಸಂಬಂಧಗಳು ಕಲ್ಪನೆಯೇ?

 

                                                                                                ಎಸ್. ಪಿ. ತೇಜರಾಜು.

 ಕಾಲೇಜಿನ ಗ್ರೂಪ್ ಡಿಸ್ಕಶನ್ ಮುಗಿಸಿ ಮನೆ ಸೇರಿದಾಗ ರಾತ್ರಿ 8.30 ಆಗಿತ್ತು, ಹೊಟ್ಟೆ ನಿಧಾನವಾಗಿ ಹಸಿಯಲಾರಂಭಿಸಿತ್ತು. ಚಪ್ಪಲಿ ಬಿಡುವ ಜಾಗದಲ್ಲಿ ಯಾವುದೋ ಒಂದು ಹೆಣ್ಣುಮಗುವಿನ ಪುಟ್ಟ ಪಾದರಕ್ಷೆಗಳು ಕಾಣಿಸಿದವು. ಆಜುಬಾಜಿನ ಮನೆಯ ಮಕ್ಕಳದಿರಬಹುದೆನಿಸಿತು. ಕೈ ಕಾಲು ತೊಳೆದು ಒಳಗೆ ಪ್ರವೇಶಿಸಿದೆ ಆಟವಾಡುತ್ತಿದ್ದ ಅಕ್ಕನ ಮಗಳು ಓಡಿಬಂದು ಅಪ್ಪಿಕೊಂಡಳು, ಇಷ್ಟು ಹೊತ್ತು ನೀನು ಎಲ್ಲಿಗೆ ಹೋಗಿದ್ದೆ? ನಾನು ಬಂದಿದ್ದು ನಿನಗೆ ತಿಳಿಯಲಿಲ್ಲವೇ? ಎಂದು ಮಾತನಾಡಿಸಿದಳು.

 ಸಾಮಾನ್ಯವಾಗಿ ಮನೆಗೆ ಬಂದವರ ಕುಶಲೋಪರಿಯನ್ನು ವಿಚಾರಿಸುವಂತೆ ಹೇಗಿದ್ದೀಯಾ? ಯಾವಾಗ ಬಂದೆ? ಯಾರು ಜೊತೆ ಬಂದೆ? ಶಾಲೆ ಮುಗಿಯಿತಾ? ಇನ್ನು ಎಷ್ಟು ದಿನ ರಜಾ? ಎಷ್ಟನೇ ಕ್ಲಾಸು? ಯಾವ ಸ್ಕೂಲು? ಸ್ಕೂಲ್ ಡೇಲಿ ಯಾವ ಡ್ಯಾನ್ಸ್ ಮಾಡಿದ್ದೆ? ಸ್ಕೂಲಲ್ಲಿ ನಿನಗೆ ಎಷ್ಟು ಜನ ಫ್ರೆಂಡ್ಸ್ ಇದ್ದಾರೆ? ಈ ಮಾತುಗಳ ನಡುವೆಯೇ ತೊಟ್ಟಿದ್ದ ಬಟ್ಟೆ ಬದಲಿಸಿದ್ದಾಯಿತು.

 ಮಾವ ನಿಮಗೆ ಹೊಸ ಫ್ರೆಂಡನ್ನು ಪರಿಚಯ ಮಾಡಿಸಿ ಕೊಡುತ್ತೇನೆಂದು ಮನೆಯ ಹೊರ ಕರೆದುಕೊಂಡು ಹೋದಳು ಯಾರಿರಬಹುದೆಂದು ಯೋಚಿಸುತ್ತಿದ್ದಾಗಲೇ ಪುಟ್ಟ ನಾಯಿ ಮರಿಯನ್ನು ಎತ್ತಿ ತೋರಿಸಿದಳು. ಈಕೆ ಮನೆಗೆ ಬಂದಿದ್ದು ಸಂಜೆ ಆಗಿದ್ದರಿಂದ ನಾಯಿಮರಿಯ ಜೊತೆ ಆಟಮಾಡಿಕೊಂಡಿದ್ದಳು ಇದಕ್ಕೆ ಸ್ವೀಟಿ ಎಂದು ಕೂಡ ನಾಮಕರಣ ಮಾಡಿದ್ದಳು. ಅಯ್ಯೋ ಪಾಪ ಇದಕ್ಕೆ ಹೊಟ್ಟೆ ಹಸಿವಾಗಿರಬಹುದೆಂದು ಯಾವುದೋ ಪ್ಲಾಸ್ಟಿಕ್ ಡಬ್ಬವನ್ನು ಹುಡುಕಿ ಹಾಲನ್ನು ಸುರಿದಳು. ಅದೂ ಕುಡಿದು ಇವಳೊಂದಿಗೆ ಆಟವಾಡುತ್ತಿತ್ತು,ನಂತರ ಒಂದು ಗೋಣಿಚೀಲವನ್ನು ಹುಡುಕಿ ತಟ್ಟಿ ಮಲಗಿಸುತ್ತಿದ್ದಳು.

 ಅಮ್ಮು ನಾಯಿಯನ್ನು ಹಾಗೆಲ್ಲ ಮುಟ್ಟಬಾರದು ಹೋಗಿ ಅದನ್ನು ಹೊರಗೆ ಬಿಟ್ಟು ಕೈ ತೊಳೆದುಕೊಂಡು ಬಾ ಎಂದೆ, ಅದಕ್ಕವಳು ಸಮ್ಮತಿಸಿ ಹೊರಗೆ ಬಿಟ್ಟು ಬಂದಳು. ಅನೇಕ ವರ್ಷಗಳಿಂದ ನಾಯಿಯನ್ನು ಕಾಂಪೌಂಡ್ ಒಳಗೆ ಸೇರಿಸಿದ ನಮ್ಮ ಮನೆಯವರು ಈಕೆಯ ಆಟದಲ್ಲಿ ಮರೆತಿದ್ದರು.

 ಸಮಯವಾದ್ದರಿಂದ ಊಟಕ್ಕೆ ಎಲ್ಲರೂ ಕುಳಿತೆವು ಊಟದ ಮಧ್ಯದಲ್ಲಿ ನೀನು ಮೊದಲು ನಾನು ಮೊದಲು ಎಂಬ ಸಣ್ಣ ಪುಟ್ಟ ಆಟಗಳು ನಡೆದವು. ಊಟವಾದ ಬಳಿಕ ಆಕೆಗೆ ಮತ್ತದೇ ನಾಯಿಯ ಚಿಂತೆ, ಮಾವ ನಾಯಿಮರಿಯ ಪೇರೆಂಟ್ಸ್ ಕೂಡ ಇದರೊಟ್ಟಿಗೆ ಇದ್ದಿದ್ದರೆ ಒಟ್ಟಿಗೆ ಮಲಗಿಸಬಹುದು ಎಂದು ಹೇಳಿದ ಮಾತನ್ನು ಕೇಳಿ ಎಲ್ಲರೂ ನಕ್ಕೆವು.ಊಟ ಮುಗಿದು ವಾಕಿಂಗ್ ಮಾಡಿ ಎಲ್ಲರೂ ಮಲಗಲು ಸಿದ್ಧರಾಗುತ್ತಿದ್ದರು, ಸಂಜೆಯಿಂದ ಆಟವಾಡಿದ್ದರಿಂದ ಈಕೆಗೂ ನಿದ್ದೆ ಚೆನ್ನಾಗಿ ಹತ್ತಿತು, ರಾತ್ರಿಯೆಲ್ಲ ನಾಯಿಯದೆ ಕನವರಿಕೆ.

 ಬೆಳಿಗ್ಗೆ ವಾಕಿಂಗ್ ಮುಗಿಸಿ ಮನೆಗೆ ಬರುವಷ್ಟರಲ್ಲಿ ಎದ್ದು ಏನನ್ನೋ ಹುಡುಕುತ್ತಿದ್ದಳು, ನಾಯಿಯನ್ನೇ ಹುಡುಕುತ್ತಿರಬಹುದೆಂದು ಭಾವಿಸಿದ್ದು ನಿಜವಾಗಿತ್ತು, ಮನೆಯಲ್ಲಿ ಎಲ್ಲರನ್ನು ವಿಚಾರಿಸಿದಳು, ಅಕ್ಕಪಕ್ಕದ ಸ್ನೇಹಿತರನ್ನು ವಿಚಾರಿಸಿದಳು, ಸುತ್ತಮುತ್ತಲ ಸ್ನೇಹಿತರೊಟ್ಟಿಗೆ ತಾನು ಹೋಗಿ ಹುಡುಕಿದಳು, ಎಲ್ಲಿಯೂ ನಾಯಿ ಸಿಗಲಿಲ್ಲವಾದ್ದರಿಂದ ಬೇಸರಗೊಂಡಳು. ಅಷ್ಟರಲ್ಲಾಗಲೇ ಮಗಳನ್ನು ಮನೆಗೆ ಕರೆದುಕೊಂಡು ಬಾ ಎಂದು ಅಕ್ಕನ ಕರೆ ಬಂದಿತ್ತು. ಅಮ್ಮು ಇಂದು ಇಲ್ಲಿಯೇ ಉಳಿ, ಸಂಜೆ ನಾನೇ ಚಾಕಲೇಟ್ ತಂದು ಕೊಡುತ್ತೇನೆ, ನಾಳೆ ನಾನೇ ಕರೆದುಕೊಂಡು ಹೋಗಿಬಿಡುತ್ತೇನೆ ಎಂದು ಹೇಳಿ ಕಾಲೇಜಿಗೆ ನಡೆದೆ.

 ಸಂಜೆ ನಾನು ಹಿಂತಿರುಗುವುದನ್ನು ಕಾಯುತ್ತಿದ್ದಳು, ದೂರದಿಂದಲೇ ಬರುವುದನ್ನು ಗ್ರಹಿಸಿ ಮತ್ತದೇ ನಾಯಿಮರಿಯೊಂದಿಗೆ ಆಟವಾಡುತ್ತಿರುವುದನ್ನು ಬಿಟ್ಟು ಓಡಿಬಂದು ಅಪ್ಪಿಕೊಂಡುಳು, ನಿರೀಕ್ಷಿಸಿದ್ದ ಚಾಕ್ಲೇಟ್ ಕೈಸೇರಿದಾಗ ಮತ್ತಷ್ಟು ಸಂತೋಷಗೊಂಡಳು,ಇತರರಿಗೂ ಹಂಚಿ ತಾನು ತಿಂದಳು, ನಂತರ ಸೈಕಲ್ ಹೊಡೆದು, ಶಟಲ್ ಕಾಕ್ ಆಡಿ ಕೈ ಕಾಲು ತೊಳೆದು ಊಟಕ್ಕೆ ಕುಳಿತೆವು, ಈಕೆಗೆ ಇಷ್ಟವಾದ ಅಡುಗೆಯೂ ತಯಾರಾಗಿ ಊಟ ಮುಗಿದಿತ್ತು. ಇಷ್ಟರಲ್ಲಾಗಲೇ ಮಗಳನ್ನು ಕರೆದುಕೊಂಡು ಬರುವಂತೆ ಅಕ್ಕನ ಕರೆ ಬಂದಿತ್ತು ಬೆಳಿಗ್ಗೆ ಕರೆದುಕೊಂಡು ಬರುತ್ತೇನೆಂದು ಹೇಳಿ ಮಲಗಿದೆ.

 ಬೆಳಕರೆದು ಸ್ನಾನ, ಕಾಫಿ, ತಿಂಡಿಯು ಮುಗಿದಿತ್ತು, ಎರಡು ದಿನ ನಮ್ಮೊಟ್ಟಿಗೆ ಆಟವಾಡಿಕೊಂಡಿದ್ದ ಅಕ್ಕನ ಮಗಳು ನಮ್ಮೆಲ್ಲ ಚಿಂತೆಗಳನ್ನು ಮರೆಸಿದ್ದಳು, ಈಕೆಯ ಆಟದಲ್ಲಿ ನಾವು ಕೂಡ ಮಕ್ಕಳಾಗಿದ್ದೆವು, ಇನ್ನೆರಡು ದಿನ ಮನೆಯಲ್ಲಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂಬುವುದು ಎಲ್ಲರ ಭಾವನೆಯಾಗಿತ್ತು, ಈಕೆಗೂ ತಾನು ಆಟವಾಡಿಸುತ್ತಿದ್ದಂತಹ ನಾಯಿಮರಿ, ಹಿಂದಿನ ದಿನ ಕಂಡಂತಹ ಪುಟ್ಟ ಪಕ್ಷಿಗಳು, ಸುತ್ತಮುತ್ತಲ ಮನೆಯ ಸ್ನೇಹಿತರನ್ನು ಬಿಟ್ಟು ಹೋಗಲು ಮನಸ್ಸಿರಲಿಲ್ಲ, ಹೇಗೋ ಬಟ್ಟೆ ಬದಲಿಸಿ ಹೊರಡಲು ಸಿದ್ಧವಾಗಿದ್ದಾಯ್ತು, ಬೈಕ್ ಸ್ಟಾರ್ಟ್ ಮಾಡಿದೆ, ಶರ್ಟನ್ನು ಗಟ್ಟಿಯಾಗಿ ಹಿಡಿದು ಹಿಂದೆ ಕುಡಿದುಕೊಂಡುಳು, ಇವಳು ಆಟವಾಡಿಸಿದ ನಾಯಿಮರಿ ಕುಯ್ಯಿ ಕುಯ್ಯಿ ಎನ್ನುತ್ತಿತ್ತು, ಎಲ್ಲರಿಗೂ ಟಾಟಾ ಹೇಳಿ, ಸ್ವೀಟಿ ಬಾಯ್ ಎಂದು ಹೇಳಿದಳು, ಬೈಕ್ ನಿಧಾನವಾಗಿ ಮುನ್ನಡೆಯುತ್ತಿತ್ತು ನಾಯಿಮರಿ ಹಿಂಬಾಲಿಸುತ್ತಿತ್ತು.

 ಬೈಕ್ ಚಲಿಸುತ್ತಿತ್ತು ಮನೆಗೆ ಇನ್ನಷ್ಟು ಹತ್ತಿರವಾಗುತ್ತಲಿತ್ತು, ಈಕೆಯ ಮಾತು ಮುಂದುವರೆದಿತ್ತು, ಮಾವ ನಾಯಿಮರಿಯನ್ನು ಚೆನ್ನಾಗಿ ನೋಡಿಕೋ, ಹಾಲು ಬಿಸ್ಕೆಟ್ಟನ್ನು ಸರಿಯಾದ ಸಮಯಕ್ಕೆ ಹಾಕು, ವಾರಕ್ಕೊಮ್ಮೆ ಬೆಚ್ಚಗಿನ ನೀರಿನಲ್ಲಿ ಸ್ನಾನಮಾಡಿಸು, ಗುಬ್ಬಚ್ಚಿಗಳಿಗೆ ಅಕ್ಕಿಯನ್ನು  ಆಕು, ಮುಂದಿನ ಸಲ ಬಂದು ನೋಡುತ್ತೇನೆ, ಮಾವ ನಮ್ಮ ಮನೆಗೆ ಬಂದು ಒಂದೆರಡು ದಿನ ಉಳಿದುಕೋ ಎಂದು ಹೇಳಿದಳು, ಮೊದಲೇ ಈಕೆಯನ್ನು ಕಳುಹಿಸಿಕೊಡಲು ಮನಸ್ಸಿರಲಿಲ್ಲ ಅದರೊಟ್ಟಿಗೆ ಈ ರೀತಿಯಾದಂತಹ ಮಾತುಗಳು ನನ್ನನ್ನು ಮೂಕಗೊಳಿಸಿ ಮನಸನ್ನು ಭಾರವಾಗಿಸಿ, ನೇತ್ರಗಳನ್ನು ಹಸಿಯಾಗಿದ್ದವು.

ಅಂತೂ ಮನೆ ತಲುಪಿದ್ದಾಯಿತು, ಗಂಟಲು ಒಣಗಿ ಮೌನ ಇನ್ನಷ್ಟು ಹೆಚ್ಚಾಗಿ ಮನಸ್ಸು ಭಾರವೆನಿಸಿತು. ಈಗಲೂ ಅವಳನ್ನು ಬಿಟ್ಟು ಹೋಗುವ ಮನಸ್ಸಿರಲಿಲ್ಲ, ಅಕ್ಕ ಮಾತನಾಡಿಸುತ್ತಿದ್ದರು, ಕಾಲೇಜಿಗೆ ಸಮಯವು ಆಗಿತ್ತು, ಮುಂದಿನ ರಜಕ್ಕೆ ಕರೆದುಕೊಂಡು ಬರುವಂತೆ ಹೇಳಿ ಹೊರನಡೆದೆ, ಈಕೆಯು ನನಗೆ ಟಾಟಾ ಮಾಡಿ ಕಳುಹಿಸಿಕೊಟ್ಟಳು. ಅಂದಿನ ದಿನದ ಕಾಲೇಜಿನ ಪಾಠ ಪ್ರವಚನಗಳೆಲ್ಲವೂ ಮೌನದಲ್ಲಿಯೇ ಮುಂದುವರೆದಿತ್ತು.

  ಇದೊಂದೇ ಘಟನೆ ಮಕ್ಕಳ ನಿಷ್ಕಲ್ಮಶ ಪ್ರೀತಿಯ ಭಾವ ಅರ್ಥವಾಗುವಂತೆ ಮಾಡಿತ್ತು. ಅದಕ್ಕೋಸ್ಕರವಾಗಿಯೇ ಹೇಳುವುದೇನೋ ಮಕ್ಕಳು ದೇವರ ಸಮಾನರೆಂದು, ಇವರೇ ಅಲ್ಲವೆ ನಿಜವಾದ ವಿಶ್ವಮಾನವರು.

 ಹುಟ್ಟುತ್ತಾ ಪ್ರತಿಯೊಂದು ಮಗುವು ವಿಶ್ವಮಾನವನೆ, ಬೆಳೆಯುತ್ತಾ ಸಂಬಂಧವೆಂಬ ಕೋಟೆಯ ಪರಿಧಿಯೊಳಗೆ ಬೆಳೆಯುತ್ತದಷ್ಟೇ. ಸಂಬಂಧಗಳು ಎಂಬುದು ಮಾನವನೇ ಸೃಷ್ಟಿಸಿಕೊಂಡ ಒಂದು ಅದ್ಭುತ ಬಂಧ, ಇದು ನಾವು ಇರುವ ವಾಸ್ತವದ ಸಂಕೇತವಾಗಿದೆ, ಕೆಲವು ಬಾರಿ ನಮ್ಮ ಪೂರ್ವಜರ ಮೂಲವನ್ನು ಹುಡುಕುತ್ತಾ ಹೋದರೆ ನಾಲ್ಕರಿಂದ ಐದು ತಲೆಮಾರುಗಳ ಹಿಂದಿನವರೆಗೆ ಮಾಹಿತಿ ತಿಳಿಯುತ್ತದೆ ಇದರ ಹಿಂದಿನದನ್ನು ಹುಡುಕುವ ಕೆಲಸ ತ್ರಾಸವೆನಿಸುತ್ತದೆ. ಒಟ್ಟಿನಲ್ಲಿ ಅಣ್ಣ- ತಮ್ಮ, ಅಕ್ಕ- ತಂಗಿ, ತಂದೆ-ತಾಯಿ, ತಾತ- ಅಜ್ಜಿ, ದೊಡ್ಡಪ್ಪ-ದೊಡ್ಡಮ್ಮ,ಚಿಕ್ಕಪ್ಪ-ಚಿಕ್ಕಮ್ಮ, ಅತ್ತೆ- ಮಾವ, ಭಾವ- ಮೈದುನ, ಅಳಿಯ- ಸೊಸೆ, ಮಗ- ಮಗಳು ಎಂಬ ಸಂಬಂಧಗಳು ಒಗ್ಗಟ್ಟನ್ನು ಪ್ರದರ್ಶಿಸುವಂತಹದ್ದಾಗಿದೆ. ಒಬ್ಬರಿಗೆ ಮತ್ತೊಬ್ಬರು ಸಹಾಯವನ್ನು ಮಾಡಿಕೊಂಡು ಜೀವನವನ್ನು ನಡೆಸುವಂತಹ ಅದ್ಭುತ ಕಲೆಯಾಗಿದೆ.

 ಈ ಬಾರಿಯ ಬೇಸಿಗೆರಜಕ್ಕೆ ಅಕ್ಕನ ಮಗಳ ಜೋತೆಗೆ ಮಗನು ಬಂದಿದ್ದ ನಮಗೆ ಸಂಭ್ರಮ ಇಮ್ಮಡಿಸಿತ್ತು, ಒಂದೆರಡು ದಿನ ಉಳಿಸಿಕೊಳ್ಳೋಣವೆಂದು ಭಾವಿಸಿದ್ದೆ ಆದರೆ ಕರೋನಾದ ಕಾರಣಾಂತರಗಳಿಂದ ಆಗಲಿಲ್ಲ, ಅವರಿದ್ದ ಸ್ವಲ್ಪ ಹೊತ್ತನ್ನು ಖುಷಿಯಿಂದ ಕಳೆದಿದ್ದಾಯಿತು. ಮನೆಯ ಸುತ್ತ ಒಂದು ಪ್ರದಕ್ಷಿಣೆಯನ್ನು ಹಾಕಿ ನಾಯಿಯನ್ನು ಹುಡುಕಿದಳು ಅವಳು ಹೋದ ಒಂದೆರಡು ದಿನಕ್ಕೆ ಆ ನಾಯಿಮರಿಯೂ ಕೂಡ ಓಡಿಹೋಗಿತ್ತು, ಅದೇನೇ ಇರಲಿ ಮಕ್ಕಳ ಮುಗ್ಧತೆ ನಮಗೆ ತಿಳಿಯದ ಹಾಗೆ ಸಂಬಂಧವನ್ನು ಅರ್ಥಮಾಡಿಸಿದ್ದವು. ನಾವು ಚಿಕ್ಕವರಲ್ಲಿ ನೆಂಟರಿಷ್ಟರ ಮನೆಯಲ್ಲಿ ಉಳಿದಾಗ ಅವರಿಗೂ ಹೀಗೆನಿಸಿತೇನೋ, ಇದೆಲ್ಲವೂ ಕಾಲಚಕ್ರದ ಕೊಡುಗೆ.

 ಕಾಲ ಉರುಳಿದಂತೆ ಕಾಲಚಕ್ರದಲ್ಲಿ ನಾವು ಲೀನವಾಗುತ್ತೇವೆ, ಆದರೆ ಮಾನವ ಕಲ್ಪಿತ ಈ ಸಂಬಂಧಗಳು ಮುಂದಿನ ತಲೆಮಾರುಗಳಿಗೆ ಮುಂದುವರೆಯುತ್ತಾ ಹೋಗುತ್ತದೆ.

 ಧನ್ಯವಾದಗಳು.

Saturday, July 25, 2020

ಇವರುಗಳಿಗೆ ಉತ್ತರಿಸುವವರಾರು?

                          ಎಸ್ ಪಿ ತೇಜರಾಜು.

 ಆಷಾಢ ಮಾಸ ಬಂತೆಂದರೆ ಸಾಕು ಎಲ್ಲಾ ಸಸ್ಯ ಕೋಟಿ ಜೀವಸಂಕುಲಗಳಿಗೆ ಸಂತಸದ ಕಾಲ, ತಂಪಾದ ಗಾಳಿ, ಸೋನೆಮಳೆ ಯಾವ ಸಮಯದಲ್ಲಾದರೂ ಸುರಿಯಬಹುದು,ಇದೆ ಮಾಸಕ್ಕೆ ಸಂಬಂಧಿಸಿದಂತೆ ಮೂರು ಮಳೆನಕ್ಷತ್ರಗಳು ಸಾಧಾರಣ ಆದ್ರಾ೯ ಮಳೆ ಸಂಪೂರ್ಣ ಪುನರ್ವಸು ಹಾಗೂ ಭಾಗಶಃ ಪುಷ್ಯ ಮಳೆ. ಈ ಆಷಾಢ ಮಾಸವು ಖಗ-ಮೃಗ, ಪಶು-ಪಕ್ಷಿ, ಕ್ರಿಮಿ-ಕೀಟ, ಸಸ್ಯಗಳೊಂದಿಗೆ ಮಾನವರಿಗೂ ಕೂಡ ಚೈತನ್ಯವನ್ನು ನೀಡುವಂತಹದ್ದು ಪ್ರತಿ ಶುಕ್ರವಾರ ತಾಯಿ ಚಾಮುಂಡೇಶ್ವರಿಯ ಆರಾಧನೆ, ಮೈಸೂರು ರಾಜಮನೆತನದವರಿಂದ ಚಾಮುಂಡಿಬೆಟ್ಟದಲ್ಲಿ ವೈಭವೋಪೇರಿತವಾದ ವರ್ಧಂತಿ ಉತ್ಸವ, ಪೂಜೆ ಪುನಸ್ಕಾರಗಳು ನಡೆಯುತ್ತದೆ, ನೂರಾರು ಭಕ್ತಮಂಡಳಿಗಳಿಂದ ಪ್ರಸಾದ, ಸಿಹಿ ವಿತರಣೆ ಸಾಮಾನ್ಯವಾಗಿ ಎಲ್ಲ ಕಡೆಯೂ ನಡೆಯುವಂತಹದ್ದು. ಈ ಎಲ್ಲ ಚಟುವಟಿಕೆಗಳು ಸುಖ, ಶಾಂತಿ, ಸಮೃದ್ಧಿಯ ಸಂಕೇತವಾಗಿದೆ.

 ಇಂದು ಆಷಾಢಮಾಸ ಕೃಷ್ಣಪಕ್ಷದ ತ್ರಯೋದಶಿ[ ಬರೆಯುತ್ತಿರುವ ದಿನದಂದು] ಎಂದಿನಂತೆ ಸೂರ್ಯ ಮುಳುಗಿ ಕತ್ತಲಾವರಿಸುತ್ತಿತ್ತು ಎಲ್ಲಾ ಪಕ್ಷಿಗಳು ಸುಶ್ರಾವ್ಯವನ್ನು ನಿಲ್ಲಿಸಿ ಗೂಡುಸೇರಿದ್ದವು, ಮೌನ ಹೆಚ್ಚಾಗಿ ಕತ್ತಲು ಗಾಢವಾಗುತ್ತಿತ್ತು, ಗೂಬೆ, ಬಾವಲಿಗಳು ಆಕಾಶದಲ್ಲಿ ಹಾರಾಡತೊಡಗಿದವು, ಹೆಗ್ಗಣ, ಹಂದಿ ಇನ್ನಿತರ ನಿಶಾಚರ ಪ್ರಾಣಿಗಳು ಆಹಾರವನ್ನು ಹುಡುಕುವ ಕಾಯಕದಲ್ಲಿ ಮಗ್ನವಾಗಿದ್ದವು.

  ಎಂದಿನಂತೆ ಸುತ್ತಮುತ್ತಲಿನ ಜನರು ದಿನನಿತ್ಯದ ಕಾಯಕವನ್ನು ಮುಗಿಸಿ ಊಟ ಮಾಡಿ ನಿದ್ದೆಯಲ್ಲಿ ಜಾರಿದ್ದರು. ನಡುರಾತ್ರಿ ಇರಬಹುದು ಆದರೆ ಸರಿಯಾಗಿ ಸಮಯ ತೋಚದು ಒಂದರ ಹಿಂದೆ ಮತ್ತೊಂದರಂತೆ 20ರಿಂದ 30 ನಾಯಿಗಳು ಬೊಗಳುತ್ತಿದ್ದವು. ಈ ನಿಶಬ್ದ ವಾತಾವರಣದಲ್ಲಿ ಇಷ್ಟು ಪ್ರಮಾಣದ ಶಬ್ದ ಒಮ್ಮೆಲೆ ಕಿವಿಯೊಳಗೆ ತೋರಿದ್ದರಿಂದ ನಿದ್ದೆ ಪಟ್ಟನೆ ಹಾರಿಹೋಯಿತು.  ಈ ಹಾಳು ಸುಡುಗಾಡು ನಾಯಿಗಳಿಗೆ ಏನು ಬಂದಿದೆಯೋ ತೋಚದು ಇಷ್ಟುಹೊತ್ತಿನಲ್ಲಿ ಇವುಗಳ ಕಣ್ಣಿಗೆ ಏನು ಗೋಚರಿಸಿತೋ ತಿಳಿಯದು ಅಮಾವಾಸ್ಯೆಯ ರಾತ್ರಿಗೆ ಕೇವಲ ಒಂದು ರಾತ್ರಿ ಉಳಿದಿರುವುದು ಅದಕ್ಕೇನಾದರೂ ಇವುಗಳು ಈ ರೀತಿ ಬೊಗಳುತ್ತಿವೆಯೇ? ಅಥವಾ ಯಾರಾದರೂ ಇಷ್ಟುಹೊತ್ತಿನಲ್ಲಿ ಓಡಾಡುತ್ತಿದ್ದಾರೆಯೇ? ಏನಾದರೂ ಕಳ್ಳಕಾಕರು ಇದ್ದಿರಬಹುದೇ? ನಿಜವಾಗಿಯೂ ಏನಾದರೂ ದೆವ್ವ ಭೂತಗಳು ಈ ನಾಯಿಗಳ ಕಣ್ಣಿಗೆ ಪ್ರತ್ಯಕ್ಷವಾಗಿಬಿಟ್ಟವೆ? ಹೀಗೆ ಹತ್ತಾರು ಪ್ರಶ್ನೆಗಳು ತಲೆಯನ್ನು ತೋರಿ ನಿದ್ದೆಯನ್ನು ಕೆಡಿಸುತ್ತಿದ್ದವು.

 ಹಾಸಿಗೆಯಿಂದ ಎದ್ದು ಮನೆಯ ಮುಖ್ಯದ್ವಾರದ ಪಕ್ಕದ ಕಿಟಕಿಯನ್ನು ತೆಗೆದು ಬೆಳಕು ಹತ್ತಿಸಿ ನೋಡಿದ್ದಾಯಿತು. ನಾಯಿಗಳು ಮತ್ತಷ್ಟು ಜೋರಾಗಿ ಬೋಗಳಲಾರಂಬಿಸಿದವು. ಒಂದೆರಡು ಬಾರಿ ಗದರಿಸಿದಾಗ ಸ್ವಲ್ಪ ಪ್ರಮಾಣದಲ್ಲಿ ನಾಯಿಗಳು ಕೂಗುವುದನ್ನು ನಿಲ್ಲಿಸಿದವು 15 ನಿಮಿಷಗಳ ಬಳಿಕ ಮತ್ತೆ ಕೂಗಲಾರಂಭಿಸಿದವು ಕೋಪ ನೆತ್ತಿಗೇರಿ ಬಾಗಿಲು ತೆಗೆದು ಅವುಗಳನ್ನು ಓಡಿಸಿ ಬರೋಣವೆಂದು ನಿರ್ಧರಿಸಿದೆ. ಬಾಗಿಲು ತೆಗೆಯುವ ಶಬ್ದಕ್ಕೆ ಮನೆಯವರು ಎಚ್ಚರವಾಗಿ ಅವರ ನಿದ್ದೆಯು ಹಾಳಾಗುತ್ತದೆ ಎಂದು ಭಾವಿಸಿ ಸುಮ್ಮನೆ ಹೋಗಿ ಮಲಗಿದೆ.

 ಒಂದೈದು ನಿಮಿಷ ನಾಯಿಗಳು ಬೊಗಳುವುದನ್ನು ಮುಂದುವರೆಸಿದವು ಮತ್ತೊಮ್ಮೆ ಗದರಿಸಿದಾಗ ಎಲ್ಲವೂ ಸುಮ್ಮನಾದವು ಇದಾದ ಬಳಿಕ ನಿಶಬ್ದ, ಮೌನ, ಬಳಿಕ ಕಪ್ಪೆಗಳ ಹಿಂಡು ವಟಗುಡಲಾರಂಭಿಸಿದವು, ಪಕ್ಕದ ಮನೆಯ ವಯಸ್ಸಾದ ಮುದುಕ ಇನ್ನೇನು ಸ್ವಲ್ಪ ಹೊತ್ತಿನಲ್ಲಿಯೇ ಸತ್ತು ಹೋಗುವವನ ರೀತಿಯಲ್ಲಿ ಕೆಮ್ಮುತ್ತಿದ್ದ, ಇನ್ನೆಲ್ಲೋ ದೂರದಲ್ಲಿ ಬೆಕ್ಕುಗಳು ಅರಚುತ್ತಿದ್ದವು, ಇನ್ನಾರದೋ ಮನೆಯಲ್ಲಿ ನಲ್ಲಿಯ ನೀರು ಒಂದೇ ಸಮನೆ ಸೋರಿಹೋಗುತ್ತಿತ್ತು. ಬಾವಲಿಗಳು ಚಿರುತಿದ್ದವು. ಈ ಎಲ್ಲ ಶಬ್ದಗಳ ನಡುವೆ ನಿದ್ದೆ ಸಂಪೂರ್ಣವಾಗಿ ಭಗ್ನಗೊಂಡು ಹಾಸಿಗೆ ಮೇಲೆ ಹೊರಳಾಡುವಂತೆಮಾಡಿತು.

 ಸಾಮಾನ್ಯವಾಗಿ ರಾತ್ರಿ ಹೊತ್ತು ನಾಯಿಗಳು ಬೊಗಳುತ್ತಿದ್ದವು ಆದರೆ ಎಂದೂ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ ಆದರೆ ಇಂದು ಬೊಗಳಿದ ನಾಯಿ ನಮ್ಮ ರಸ್ತೆಯದ್ದೆ ಆಗಿತ್ತು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರಿಂದಲೂ ಕೂಡ ಪ್ರೀತಿಯನ್ನು ಸಂಪಾದಿಸಿತ್ತು. ಇದಕ್ಕೊಂದು ನಿಯತ್ತಿನ ಬುದ್ಧಿ ಇತ್ತು ಅದರ ಊಟದ ಬಟ್ಟಲಿಗೆ ಹಾಕಿದರೆ ಮಾತ್ರವೇ ಅದು ಊಟ ಮಾಡುತ್ತಿತೆ ಹೊರತು ಯಾವ ಮಕ್ಕಳ ಕೈಯಿಂದ ಎಂದೂ ಬಿಸ್ಕೆಟ್ ಆಗಲಿ ಮತ್ತೊಂದನ್ನೇ ಆಗಲಿ ಕಿತ್ತು ತಿಂದಿರುವುದನ್ನು ಯಾರೂ ನೋಡಿರಲಿಲ್ಲ. ಮಕ್ಕಳಿಗೂ ಈ ನಾಯಿಯನ್ನು ಕಂಡರೆ ಅಷ್ಟೇ ಅಕ್ಕರೆ. ಮಕ್ಕಳು ಆಟವಾಡುತ್ತಿರುವಾಗ ಅವರ ಬಳಿ ಹೋಗುತ್ತಿತ್ತು ಮಕ್ಕಳೆಲ್ಲರೂ ಸೇರಿ ಅದಕ್ಕೆ ಕುಂಕುಮ ಬಳಿದು ಕೂದಲು ಬಾಚಿ ಕಳಿಸುತ್ತಿದ್ದರು. ಯಾರಾದರೂ ದೊಡ್ಡವರನ್ನು ಕಂಡರೆ ಬಾಲಮುದುಡಿಕೊಂಡು ಅವರ ಹಿಂದೆ ನಡೆದುಕೊಂಡು ಹೋಗುತ್ತಿತ್ತು.

 ಈ ಹೆಣ್ಣು ನಾಯಿ ಮೂಲತಃ ನಮ್ಮ ನಗರದೇನಲ್ಲ. ಯಾರದೋ ಶ್ರೀಮಂತರ ಮನೆಯವರದಾಗಿರಬೇಕೆಂದೆನಿಸುತ್ತದೆ. ಈಗ ಇದಕ್ಕೆ ಒಂದು ಹತ್ತು ವರ್ಷದ ಆಜುಬಾಜಿನ ವಯಸ್ಸಾಗಿರಬಹುದು. ಎಂದೋ ತಪ್ಪಿಸಿಕೊಂಡು ನಮ್ಮ ರಸ್ತೆಗೆ ಸೇರಿ ಅದು ಸುಮಾರು ಏಳು ವರ್ಷಗಳನ್ನೇ ಕಳೆದಿತ್ತು. ಆಯಾಸಗೊಂಡ ನಾಯಿಯನ್ನು ಕಂಡು ಯಾರೋ ಎರಡು ಮೂರು ದಿನ ಹಾಲು ನೀಡಿದ್ದರಿಂದ ಈ ರಸ್ತೆಯ ಸ್ವಂತ ನಾಯಿಯಾಗಿ ಉಳಿಯಿತು. ದೀಪಾವಳಿಯ ಪಟಾಕಿ ಶಬ್ದವೆಂದರೆ ಇದಕ್ಕೆ ಬಹಳ ಹೆದರಿಕೆ ಕೆಲವು ವರ್ಷಗಳ ಹಿಂದೆ ಪಟಾಕಿಯ ಶಬ್ದ ಮಿತಿಮೀರಿದಾಗ ಎಲ್ಲೋ ಕಾಣೆಯಾಗಿತ್ತು. ಮೂರ್ನಾಲ್ಕು ದಿನ ಯಾರ ಕಣ್ಣಿಗೂ ಬಿದ್ದಿರಲಿಲ್ಲ, ಮಕ್ಕಳೆಲ್ಲರೂ ಹುಡುಕಲಾರಂಭಿಸಿದರು ಯಾರೋ ದಾರಿಹೋಕರ ಕಣ್ಣಿಗೆ ರಾಜಕಾಲುವೆಗಳ ಕೆಸರಿನಲ್ಲಿ ಸಿಲುಕಿಕೊಂಡಿದ್ದ ನಾಯಿಯನ್ನು ಕಂಡರು. ಇದಾದಬಳಿಕ ಕೆಸರಿನಲ್ಲಿ ಸಿಲುಕಿದ ಈ ನಾಯಿಗೆ ಬಿಸಿನೀರಿನ ಸ್ನಾನ ಹಾಲು, ಬನ್ನು, ಬಿಸ್ಕೆಟ್ಟು ಎಲ್ಲವನ್ನೂ ನೀಡಿದ್ದರಿಂದ ಮಾರನೆದಿನ ಎದ್ದು ನಡೆಯಲಾರಂಭಿಸಿತು. ಇಂತಹ ಅನೇಕ ಘಟನೆಗಳಿಂದಾಗಿ ಈ ನಾಯಿ ಎಲ್ಲರಿಗೂ ಚಿರಪರಿಚಿತ. ಇಷ್ಟೆಲ್ಲಾ ಪ್ರೀತಿಪಾತ್ರವಾದ ನಾಯಿಗೆ ಎಲ್ಲರೂ ಮುದ್ದಾಗಿ ಅವಲಕ್ಕಿ ಎಂದು ಕರೆಯುತ್ತಿದ್ದರು.

 ಈ ನಾಯಿ ಬೊಗಳಿದ್ದರಿಂದಲೇ ನನಗೆ ಸಂಶಯವಿನಿಸಿತೆ ಹೊರತು ಮತ್ತೇನಲ್ಲ. ಹೇಗೋ ರಾತ್ರಿ ಕಳೆದು ಬೆಳಕರೆಯಲಾರಂಭಿಸಿತು ಸುಮಾರು 5.30 ಬೆಳಗಿನ ಜಾವ ಒಂದು ಕಡೆ ಕೋಳಿಗಳು ಕೂಗುತ್ತಿದ್ದವು ಇನ್ನೊಂದು ಕಡೆ ನವಿಲು, ಪಕ್ಷಿಗಳು ಇoಪಾದ ಗಾನವನ್ನು ಮೊಳಗಿಸುತ್ತಿದ್ದವು. ಹಸುಗಳು ಅಂಬಾ ಎಂದು ಕೂಗುತ್ತಿದ್ದವು ಅಲ್ಲಲ್ಲಿ ನಾಯಿಗಳು ನಗರದ ಪ್ರದಕ್ಷಿಣೆ ಮಾಡುತ್ತಿದ್ದವು. ಈ ಹಸುಗಳನ್ನು ಸಾಕಿದವರು ಒಂದು ಹಸಿವಿಗೆ ಒಂದು ನಾಯಿಯಂತೆ ಹಸುಗಳು ಮೇಯಲು ಹೋದಾಗ ಅವುಗಳನ್ನು ಕಾಯುವಂತೆ ನಾಯಿಗಳನ್ನು ಪಳಗಿಸಿದ್ದರು ಈ ರೀತಿಯ ನಾಯಿಗಳೇ 15ರಿಂದ 20ರ ಮೇಲಿತ್ತು.

 ದನಕಾಯುವ ಕಾಯಕದಲ್ಲಿ ಪಳಗಿದ್ದ ನಾಯಿಗಳ ಪೂರ್ವಜರೆಲ್ಲರೂ ಇಲ್ಲಿಯ ಗದ್ದೆ ತೋಟಗಳಲ್ಲಿ ಹಾರಿ, ನೆಗೆದು, ನುಸುಳಿ ಬೆಳೆದಿದ್ದವು ಎಂತಹ ಕಷ್ಟದ ಪರಿಸ್ಥಿತಿಯಲ್ಲಿಯೂ ಗೆದ್ದು ಬರುತ್ತಿದ್ದವು. ಇಲ್ಲಿಯ ಹಾವು-ಮುಂಗುಸಿ, ತೋಳಗಳು ಜೊತೆ ಸೆಣೆಸಾಡಿ ಜಯಶಾಲಿಯಾಗಿದ್ದವು. ಎಲ್ಲಾ ಸೂಕ್ಷ್ಮತೆಯನ್ನು ಗ್ರಹಿಸುವಂತಹ ಪ್ರಾಣಿಗಳಾಗಿದ್ದವು.

 15 ರಿಂದ 20 ವರ್ಷಗಳ ಹಿಂದೆ ಈ ಪ್ರದೇಶದ ಒಂದು ಭಾಗದಲ್ಲಿ ಭತ್ತ, ಕಬ್ಬನ್ನು ಬೆಳೆಯುತ್ತಿದ್ದರು. ಮತ್ತೊಂದು ಕಡೆ ಪುದಿನಾ, ಮೂಲಂಗಿ, ಸೊಪ್ಪು, ತರಕಾರಿಗಳನ್ನು ಕೂಡ ಬೆಳೆಯುತ್ತಿದ್ದರು. ಇದರ ಪಕ್ಕದಲ್ಲಿಯೇ ಮರಗಳು ಒತ್ತೊತ್ತಾಗಿ ಬೆಳೆದು ಕಾಡಿನಂತೆ ಗೋಚರಿಸುತ್ತಿತ್ತು ನೂರಾರು ವರ್ಷಗಳ ದೈತ್ಯ ಮರಗಳು ಇಲ್ಲಿದ್ದವು. ಇನ್ನ ಸುತ್ತಮುತ್ತಲು ತೆಂಗು, ಬಾಳೆ, ಅಡಿಕೆ, ವೀಳ್ಯ, ಮಾವು, ಹಲಸು, ಸೀಬೆ, ಹೇರಳಿ, ಬ್ಯಾಲ, ಬಿದಿರಿನ ಜೊತೆಗೆ ಅರಳಿ, ಹತ್ತಿ,ಆಲದ ಮರಗಳನ್ನೊಳಗೊಂಡ ತೋಟಗಳನ್ನು ಮಾಡಿಕೊಂಡಿದ್ದರು. ನವಿಲು, ಜಿಂಕೆ, ಹಾವು-ಮುಂಗುಸಿ, ತೋಳ, ಮೊಲ ಇನ್ನಿತರ ಪ್ರಾಣಿಗಳು ಇಲ್ಲಿಯ ಸಾಮಾನ್ಯ ಪ್ರಾಣಿಗಳಾಗಿದ್ದು. ಮೂವತ್ತರಿಂದ ನಲವತ್ತು ಬಗೆಯ ಪಕ್ಷಿಗಳು ಇಲ್ಲಿದ್ದವು. ಇದರ ಪಕ್ಕದಲ್ಲಿಯೇ ಒಂದು ವಿಶಾಲ ಕೆರೆಯುಇತ್ತು  ಏಡಿ, ಮೀನು, ಆಮೆ, ನೀರುಹಾವು ಹೀಗೆ ಇನ್ನಿತರ ಹತ್ತಾರು ಜಲಚರಗಳು ವಾಸಿಸುತ್ತಿದ್ದವು. ವರ್ಷವಿಡಿ ಈ ಕೆರೆ ಸುತ್ತಮುತ್ತಲ ಪ್ರದೇಶಕ್ಕೆ ಜೀವಜಲವನ್ನು ಸರಬರಾಜು ಮಾಡುತ್ತಿತ್ತು.

 ಒಂದಾನೊಂದು ಕಾಲಕ್ಕೆ ಮೈಸೂರು ನಗರದ ಹೊರವಲಯವೆನಿಸಿಕೊಂಡಿದ್ದ ಈ ಪ್ರದೇಶ ಇಂದು ನಗರದ ಪರಿಧಿಯೊಳಗೆ ಸೇರಿಕೊಂಡಿದೆ. ಬಹಳ ಹಿಂದೆ ಹತ್ತಿಪ್ಪತ್ತು ಮನೆಗಳು ಮಾತ್ರ ಎಲ್ಲಿದ್ದವು. ಸುಣ್ಣ ತಯಾರಿಸುವುದು ಇಲ್ಲಿಯವರ ಕಾಯಕವಾಗಿತ್ತು. ಪ್ಲೇಗ್ ಮಹಾಮಾರಿಯ ಹೊಡೆತದಿಂದಾಗಿ ಇಲ್ಲಿಯ ಜನ ಸ್ಥಳಾಂತರಿಸಿದರು. ಇಂದಿಗೂ ಅವರು ವಾಸಿಸಿದಂತಹದ ಮನೆ, ಸುಣ್ಣ ಸುಟ್ಟ ಜಾಗ ಎಲ್ಲವೂ ಪಾಳುಬಿದ್ದ ಸ್ಥಿತಿಯಲ್ಲಿ ಇದೆ. ಸ್ಟೀಮ್ ಎಂಜಿನ್ ಬೂದಿಯನ್ನು ತಂದು ಈ ಪ್ರದೇಶಕ್ಕೆ ಸುರಿಯುತ್ತಿದ್ದರಿಂದ ಬೂದಿಗುಂಡಿ ಎಂದು ಈ ಪ್ರದೇಶಕ್ಕೆ ಕರೆಯುತ್ತಾರೆ.

 ನಗರ ಬೆಳೆಯತೊಡಗಿತು, ಜನದಟ್ಟಣೆ ಹೆಚ್ಚಾಗತೊಡಗಿತು, ಇದರ ಸಲುವಾಗಿ ಮನೆಗಳು ಹೆಚ್ಚಾದವು, ಮನೆಗಳು ಹೆಚ್ಚಾದ್ದರಿಂದ ವಾಹನಗಳು ಕೂಡ ಹೆಚ್ಚಾದವು, ಇಷ್ಟೆಲ್ಲಾ ಪ್ರದೇಶಕ್ಕೆ ಇದ್ದಿದ್ದು ಎರಡೇ ಎರಡು ಕೊಳವೆ ಬಾವಿಗಳು ನಂತರ ರಸ್ತೆಗೊಂದು ನಲ್ಲಿಯಂತೆ, ಇಂದು ಪ್ರತಿಯೊಂದು ಮನೆಗೂ ನೀರು ಸರಬರಾಜಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಎಲ್ಲರ ಮನೆಯಲ್ಲಿಯೂ ಟಿವಿ, ಪ್ರಿಡ್ಜ್, ವಾಷಿಂಗ್ ಮಷೀನ್ಗಳು ರಾರಾಜಿಸುತ್ತಲಿವೆ.

 ನಟ್ಟನಡು ಬೇಸಿಗೆಯಲ್ಲಿಯೂ ಭೂಮಿಗೆ ಬೆಳಕು ಸ್ಪರ್ಶಿಸಲಾಗದ್ದಂತಿದ್ದ ತೆಂಗು, ಬಾಳೆ, ಅಡಕೆ, ಪ್ರದೇಶ ಇಂದು ಅನೇಕ ಬಡಾವಣೆಗಳಾಗಿ ಮಾರ್ಪಾಡುಗೊಂಡಿದೆ[ ಹೆಸರುಗಳು ಬೇಡ]. ಇನ್ನು ಕೆಲ ಭಾಗದ ಜಾಗ ಮಕ್ಕಳು, ಮೊಮ್ಮಕ್ಕಳು ಹಾಗೂ ಮರಿಮಕ್ಕಳಿಗಾಗಿ ಛಿದ್ರಗೊಂಡಿದೆ. ಕೆರೆಗೆ ನೀರು ಹರಿದು ಬರುತ್ತಿದ್ದ ಜಾಗದಲ್ಲಿ ದೊಡ್ಡ ದೊಡ್ಡ ಅಪಾರ್ಟ್ಮೆಂಟ್ಗಳು ತಲೆಯೆತ್ತಿದೆ. ಇದರಿಂದ ಕೆರೆಯ ಕುರುಹೇ ಇಲ್ಲದಂತೆ ಆಗಿದೆ. ಒತ್ತೊತ್ತಾಗಿ ಕಾಡಿನಂತೆ ಗೋಚರಿಸುತ್ತಿದ್ದ ವೃಕ್ಷಗಳನ್ನು ನಾನಾ ಕಾರಣಗಳಿಂದ ಕಡಿಯಲಾಗಿದೆ. ಮೂರರಿಂದ ನಾಲ್ಕು ಅಡಿ ಬೆಳೆಯುತ್ತಿದಂತಹ  ಹುತ್ತಗಳು ಸಂಪೂರ್ಣವಾಗಿ ಮರೆಮಾಚಿದೆ. ಮನೆಗೊಂದು ಬೋರ್ವೆಲ್ಗಳು ಬಂದು ಅಂತರ್ಜಲ ಬತ್ತಲಾರಂಭಿಸಿದೆ. ಡಾಂಬರು ರಸ್ತೆ ಎಲ್ಲ ಪ್ರದೇಶಕ್ಕೂ ವಿಸ್ತರಿಸಿದೆ. ಬಿದ್ದ ಒಂದು ಹನಿ ಮಳೆ ನೀರು ಕೂಡ ಎಲ್ಲಿಯೂ ಇಂಗದ ಹಾಗೆ ಮೋರಿ ಸೇರುವ ಯೋಜನೆ ನಡೆಯುತ್ತಿದೆ. ಮರಗಳಿದ್ದ ಜಾಗದಲ್ಲಿ ಲೈಟ್ ಕಂಬಗಳು ರಾರಾಜಿಸುತ್ತಿವೆ.


 ನಗರೀಕರಣದಿಂದಾಗಿ ಸಂಪೂರ್ಣ ಹಸಿರು ಹೊಂದಿದ ಪ್ರದೇಶ ಛಿದ್ರಗೊಂಡಿದೆ. 40ಕ್ಕೂ ಹೆಚ್ಚು ಬಗೆಯ ಪಕ್ಷಿಗಳು ಇದ್ದಂತಹ ಈ ಪ್ರದೇಶ ಅವುಗಳ ಆಹಾರ ವಸತಿಯ ಕೊರತೆಯಿಂದಾಗಿ ಇಪ್ಪತ್ತಕ್ಕೆ ಇಳಿದಿದೆ ಪ್ರತಿದಿನದ ಕೂಳಿಗಾಗಿ ಕಾಯುತ್ತಿರುವ ಈ ಪಕ್ಷಿಗಳಿಗೆ ಉತ್ತರಿಸುವವರಾರು? ಮೊಲ, ಜಿಂಕೆ, ತೋಳ, ಮುಂಗುಸಿಗಳು ಇಂದು ಕುರುಹಿಲ್ಲದಾಗಿವೆ ಇವುಗಳಿಗೆ ಉತ್ತರಿಸುವವರಾರು? ನಾಲ್ಕು ಅಡಿಯವರೆಗೆ ಬಹಳ ಸುಂದರವಾಗಿ ಹುತ್ತವನ್ನು ಕಟ್ಟುತ್ತಿದಂತಹ ಗೆದ್ದಲು ಹುಳುಗಳು ರಾಸಾಯನಿಕಗಳ ಬಳಕೆಯಿಂದ ಸಾವನ್ನಪ್ಪಿದೆ ಇವುಗಳಿಗೆ ಉತ್ತರಿಸುವವರಾರು? ಸದಾ ನೀರಿನಲ್ಲಿ ಆಟವಾಡಿಕೊಂಡಿದಂತಹ ಕಪ್ಪೆ, ನೀರುಹಾವು, ಮೀನು, ಆಮೇಗಳು ಕೆರೆ ಬತ್ತಿದ್ದರಿಂದ ಕಣ್ಮರೆಯಾಗಿದೆಯಲ್ಲಾ ಇವುಗಳಿಗೆ ಉತ್ತರಿಸುವವರಾರು? ಸದಾ ಪರೋಪಕಾರಿಯಾಗಿ ಪರಿಸರಕ್ಕೆ ಪ್ರಾಣಿ ಪಕ್ಷಿಗಳಿಗೂ ಮಾನವರಿಗೂ ಹಣ್ಣು, ಶುದ್ಧಗಾಳಿ, ನೆರಳು ನೀಡುತ್ತಿದ್ದ ಅಜಾನುಬಾಹು ಮರಗಳು ಧರೆಗುರುಳಿತಲ್ಲ ಅವುಗಳಿಗೆ ಉತ್ತರಿಸುವವರಾರು? ಇಂದಿಗೂ ಪ್ರತಿದಿನವೂ ವಾಹನಗಳಿಗೆ ಸಿಲುಕಿ ಕಪ್ಪೆ, ಹಾವುಗಳು ಸಾಯುತ್ತಿವೆಯಲ್ಲ ಇವುಗಳಿಗೆ ಉತ್ತರಿಸುವವರಾರು?


 ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವವರು ಇಂದು ಯಾರು ಇಲ್ಲ ಆದರೂ ಸಹ ಕರ್ನಾಟಕ ಅರಣ್ಯ ಇಲಾಖೆಯವರು ಸಣ್ಣ ಪ್ರಮಾಣದಲ್ಲಿ ಸಣ್ಣ ಪ್ರದೇಶದಲ್ಲಿ ಸಾಲುಮರದ ತಿಮ್ಮಕ್ಕ ಉದ್ಯಾನವನವನ್ನು ಮಾಡಿದ್ದಾರೆ ಇದು ನಿಜಕ್ಕೂ ಶ್ಲಾಘನೀಯ. ಇದರಿಂದ ವಿವಿಧ ರೀತಿಯ ಪಕ್ಷಿಗಳು ಮತ್ತೆ ಬರಲಾರಂಭಿಸಿವೆ. ಕಣ್ಮರೆಯಾಗಿದ್ದ ನವಿಲುಗಳು ಮತ್ತೆ ಬರಲಾರಂಭಿಸಿದೆ.ಈ ಮಾದರಿಯನ್ನು ಸುತ್ತಮುತ್ತಲೂ ಛಿದ್ರಗೊಂಡಿರುವ ಪ್ರದೇಶಕ್ಕೆ ವಿಸ್ತರಿಸಿದ್ದೆಆದಲ್ಲಿ ಕುರುಹು ಇಲ್ಲದೆ ಬತ್ತಿರುವ ಕೆರೆಯಲ್ಲಿ ನೀರು ತುಂಬಬಹುದು, ಕಣ್ಮರೆಯಾದ ಪ್ರಾಣಿಗಳು ಮತ್ತೆ ತಮ್ಮ ಪ್ರದೇಶಕ್ಕೆ ಹಿಂದಿರುಗಬಹುದು. ಆಹಾರ ಸರಪಳಿ ಸರಿಹೊಂದದೆ ಜೀವ ವೈವಿಧ್ಯ ಸುಭಿಕ್ಷವಾಗಿರುವುದು. ಇದರಿಂದ ನಗರದ ಜನರಿಗೆ ಶುದ್ಧ ಗಾಳಿಯೂ ದೊರಕಿದಂತಾಗುತ್ತದೆ. ನಿಧಾನವಾಗಿ ಅಂತರ್ಜಲ ಮಟ್ಟವು ಹೆಚ್ಚಗಬಹುದು. ಜೀವವೈವಿಧ್ಯವೆಂದರೆ ಏನು ಎಂದು ತಿಳಿಯದ ಜನರಿಗೆ ಜ್ಞಾನಾಭಿವೃದ್ಧಿಯ ಪ್ರದೇಶವಾಗಬಹುದು. ಸಮಯ ಓಡುತ್ತಲಿದೆ ನಗರದ ಬೆಳವಣಿಗೆಯ ದಿನೇ ದಿನೇ ಹೆಚ್ಚಾಗುತ್ತಲಿದೆ. ಇಂದು ಪರಿಸರಾಸಕ್ತರು ಅರಣ್ಯ ಇಲಾಖೆಯವರು ತೆಗೆದುಕೊಳ್ಳುವ ನಿರ್ಧಾರಗಳು ಮುಂದಿನ ತಲೆಮಾರುಗಳಿಗೆ ಮಾದರಿಯಾಗಬಹುದು. ಈ ಪ್ರಯೋಗವನ್ನು ಕೈಗೊಳ್ಳಲು ಇದೇ ಸರಿಯಾದ ಸಮಯ. ಸಾಮೂಹಿಕವಾಗಿ ಸಾರ್ವಜನಿಕರು,ಪರಿಸರಾಸಕ್ತರು ಹಾಗೂ ಅರಣ್ಯ ಇಲಾಖೆಯವರು ಕೈ ಜೋಡಿಸಿ ಈ ಮಾದರಿಯನ್ನು ಮಾಡಿದ್ದೆ ಆದಲ್ಲಿ ದೇಶಕ್ಕೆ ಮಾದರಿಯಾಗಬಹುದು ಒಮ್ಮೆ ಯೋಚಿಸಿ.

 ಧನ್ಯವಾದಗಳು.

Sunday, July 12, 2020

ಭಾವನೆಗಳಿಗೆ ಬೆಲೆ ಕಟ್ಟಲು ಸಾಧ್ಯವೇ?

                          
                                -ಎಸ್ ಪಿ ತೇಜರಾಜು.

 ಮನಸ್ಸಿನ ಮನೆಯೆಂಬ
 ಕನಸಿನ ಕಟ್ಟಡ ಇನ್ಯಾರದೋ
 ಮನೆಯಲ್ಲಿ ಮನೆಮಾಡಿದೆ.

 ಆಸೆಯ ಎರಡಕ್ಷರವು
 ಹಣವೆಂಬ ವಾಸ್ತವ ಸೇರಿ 
 ನಿರಾಸೆಯ ದ್ಯೋತಕವಾಗಿ 
 ನನ್ನ ಮನಸೇರಿದೆ.

  ಕೂಸಿನ ನಗುವು
  ಬೆಳೆಸಿದವರ ನೋವು 
  ಅಜ್ಜಿಯರ ಹಾಡು 
  ಬಂಧುಮಿತ್ರರ ಬಂಧನದ ಬೇಡಿ
  ಅಳಿಸಿಹೋಗಿದೆ
  ನನ್ನ ಮನವ ಅಳಿಸಿಹೋಗಿದೆ.

  ಮಳೆ ಹನಿಯ ಸದ್ದು 
  ಕಾಲ್ಗೆಜ್ಜೆ ನಾದ 
  ಒರಳು ಕಲ್ಲಿನ ಗುಡುಗುಡು 
  ಮಾತು ಮೆದುವಾಗಿದೆ 
  ನನ್ನ ಮನಸ್ಸನ್ನು ಹಸಿ ಮಾಡಿದೆ.

  ಪಶುವಿನ ಮೊರೆತ 
  ಬೆರಣಿ ಒಲೆಯ ಹೊಗೆಯ ಕಾಟ
  ತೊಲೆಯ ನಡುವೆ ಹಾಕಿದ 
  ಜೋಗುಳದ ಮಾಟ ಮಂಕಾಗಿದೆ
  ಚಿಮಣಿ ದೀಪದ ಜೊತೆಗೆ ಹಾರಿಹೋಗಿದೆ

  ಮತ್ತೊಂದು ಮದುವೆಗೆ 
  ಸಿಂಗಾರಗೊಂಡು ತನ್ನ 
  ಕೊಳ್ಳುವವರಿಗೆ ಕಾಯುತ್ತಾ ನಿಂತಿದ್ದೆ...

                          -ದಶಾನನ.

 ಭಾವ ಸಂಯೋಜಿತ ಜೀವನವನ್ನು ನಡೆಸುವುದೇ ಮಾನವನ ಒಂದು ಅದ್ಭುತ ಜೀವನಶೈಲಿಯಾಗಿದೆ. ಹುಟ್ಟುತ್ತಾ ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಎಂದು ಪ್ರಾರಂಭಗೊಳ್ಳುವ ಪ್ರತಿಯೊಬ್ಬ ವ್ಯಕ್ತಿಯು ತಾನು ಮುಂದೆ ಓದಲಿಚ್ಚಿಸುವ ಕ್ಷೇತ್ರಗಳಲ್ಲಿ ಗುರುಗಳನ್ನು ಕಾಣುತ್ತಾರೆ. ಇಲ್ಲಿ ಗುರುಗಳು ಕೇವಲ ಬೋಧಕರಾಗಿರದೆ ಆದರ್ಶ ವ್ಯಕ್ತಿಗಳು ಕೂಡ ಆಗಿರುತ್ತಾರೆ. ಗುರುಗಳ ಸಹಾಯದಿಂದ ನಮ್ಮ ಜ್ಞಾನಭಂಡಾರವನ್ನು ಹೆಚ್ಚಿಸುವುದರ ಜೊತೆಗೆ ನಾವು ಮುಂದೆ ಕೆಲಸ ಮಾಡುವಂತಹ ಕಾರ್ಯಕ್ಷೇತ್ರಕ್ಕೆ ಬೇಗ ಹೊಂದಿಕೊಳ್ಳಲು ಸಹಾಯವಾಗುತ್ತದೆ. ಒಟ್ಟಿನಲ್ಲಿ ದೊಡ್ಡಮಟ್ಟದ ಸ್ಥಾನದಲ್ಲಿ ಹೊರಹೊಮ್ಮಿದ ವ್ಯಕ್ತಿಯೂ ಕೂಡ ತನ್ನ ಜೀವಿತಾವಧಿಯ ಕೊನೆಯವರೆಗೂ ತಾನು ಓದಿದಂತಹ ಸಂಸ್ಥೆ ಹಾಗೂ ಗುರುಗಳನ್ನು ಸ್ಮರಿಸುತ್ತಲೇ ಇರುತ್ತಾರೆ.

 ಪ್ರತಿಯೊಬ್ಬರೂ ಕೂಡ ತಾವು ಬೆಳೆದಂತಹ ಮನೆ, ಓದಿದಂತಹ ಸಂಸ್ಥೆ, ಕೆಲಸ ಮಾಡಿದ ಸ್ಥಳಗಳಲ್ಲಿ ಒಂದು ರೀತಿಯ ಭಾವನೆಗಳು ಬೆರೆತುಕೊಂಡಿರುತ್ತವೆ. ಅಜ್ಜಿಗೆ ಅವರ ಅಜ್ಜಿಯವರು ಕೊಟ್ಟಂತಹ ಕೆಲವು ಅಮೂಲ್ಯ ಕಾಣಿಕೆಗಳನ್ನು ಇಂದಿಗೂ ಹೇಗೆ ಕಾಪಾಡಿಕೊಂಡು ಬಂದಿದ್ದಾರೆಯೋ, ತಾತನಿಗೆ ಅವರ ತಲೆಮಾರುಗಳಿಂದ ಬಂದಂತಹ ಮನೆ, ಜಮೀನುಗಳನ್ನು ಇಂದಿಗೂ ಕಾಪಾಡಿಕೊಂಡು ಬಂದಿರಲು ಮೂಲ ಕಾರಣ ಇದೆ ಭಾವಸಂಯೋಜಿತ ಜೀವನಶೈಲಿಯೇ ಆಗಿದೆ.


 ಇಷ್ಟೆಲ್ಲಾ ಭಾವನೆಗಳು ಇರುವುದರಿಂದಲೇ ಪ್ರತಿಯೊಬ್ಬರೂ ಕೂಡ ತಾನೊಂದು ಸೂರು ಕಟ್ಟಬೇಕೆಂದು ಹಂಬಲಿಸುವುದೇನೋ. ಅವರ ಸಾಮರ್ಥ್ಯಕ್ಕೆ ತಕ್ಕ ಹಾಗೆ ಅವರವರ ಕನಸಿನ ಸೂರು ವಿನ್ಯಾಸಗೊಳ್ಳುತ್ತಾ ಹೋಗುತ್ತದೆ. ಅವರು ಆಸ್ತಿಕರೇ ಆಗಿರಲಿ ನಾಸ್ತಿಕರೇ ಆಗಿರಲಿ, ವಾಸ್ತುವನ್ನು ನಂಬುವರೆ ಆಗಿರಲಿ ಅಥವಾ ನಂಬದವರೇ ಆಗಿರಲಿ, ಗೃಹಪ್ರವೇಶ ಮಾಡಿದ ಬಳಿಕವೇ ಮನೆಯಲ್ಲಿ ವಾಸಿಸುವವರಾಗಲಿ ಅಥವಾ ಹಾಗೆಯೇ ವಾಸಿಸುವವರಾಗಲಿ ಒಟ್ಟಿನಲ್ಲಿ ಸೂರು ನೆಲೆಗೊಳ್ಳುತ್ತದೆ.

 ಒಂದು ಪ್ರದೇಶ ಮತ್ತೊಂದು ಪ್ರದೇಶಕ್ಕೆ ಹೇಗೆ ಭೌಗೋಳಿಕವಾಗಿ ವಿಭಿನ್ನವಾಗಿರುತ್ತದೆ ಅದೇ ರೀತಿ ಮನೆಗಳ ವಿನ್ಯಾಸವು ಕೂಡ ವಿಭಿನ್ನವಾಗಿರುತ್ತದೆ. ಮಲೆನಾಡಿನ ಬೆಟ್ಟಗುಡ್ಡಗಳ ನಡುವೆ ಅಡಕೆ, ಬಾಳೆ, ಏಲಕ್ಕಿ, ಕಾಫಿ ತೋಟಗಳ ಮಧ್ಯದಲ್ಲಿ ವಿಶಾಲ ಪ್ರಾಂಗಣಉಳ್ಳ ಎರಡು ಮೂರು ಅಂತಸ್ತಿನ ಮನೆಗಳೇ ಆಗಿರಲಿ, ಕರಾವಳಿ ತೀರದ ತೆಂಗಿನತೋಟದ ಮಧ್ಯದ ವಿಶಾಲ ಮನೆಯೇ ಆಗಿರಲಿ, ಬಯಲುಸೀಮೆಯ ಜಗಲಿಕಟ್ಟೆ ಮನೆಗಳೇ ಆಗಿರಲಿ, ಉತ್ತರ ಕರ್ನಾಟಕದ ಕಲ್ಲಿನಕೋಟೆ ಮನೆಗಳೇ ಆಗಿರಲಿ, ಕಾಕನಕೋಟೆ ಸುತ್ತಮುತ್ತಲಿನ ಹಾಡಿ ರೀತಿಯ ಮನೆ ನಿರ್ಮಾಣ ವಿಭಿನ್ನವಾಗಿರುತ್ತದೆ.

 ಮನೆಗಳ ವಾಸ್ತುವಿನ್ಯಾಸ ಪ್ರದೇಶದಿಂದ ಪ್ರದೇಶಕ್ಕೆ ಹೇಗೆ ವಿಭಿನ್ನವಾಗಿರುತ್ತದೆ ಅದೇ ರೀತಿ ದೇವಾಲಯಗಳ ವಾಸ್ತು ವಿನ್ಯಾಸವು ಕೂಡ ವಿಭಿನ್ನವಾಗಿರುತ್ತದೆ. ಐಹೊಳೆ ಪಟ್ಟದಕಲ್ಲಿನ ದೇವಾಲಯಗಳ ವಾಸ್ತು ವಿನ್ಯಾಸವೇ ಆಗಿರಲಿ, ಬೇಲೂರು ಹಳೇಬೀಡು ದೇವಾಲಯದ ಸೂಕ್ಷ್ಮ ಕೆತ್ತನೆಗಳ ದೇವಾಲಯಗಳೇ ಆಗಿರಲಿ, ಮಲೆನಾಡು ಹಾಗೂ ಕರಾವಳಿ ಭಾಗದ ಬೃಹತ್ ದೇವಾಲಯಗಳಮೇಲಿನ ನಯವಾದ ಕಾವಿಕಲೆಯ ರಚನೆಗಳೇ ಆಗಿರಲಿ ವಿಭಿನ್ನವಾಗಿರುತ್ತದೆ. ಇದರೊಟ್ಟಿಗೆ ದಕ್ಷಿಣ ಭಾರತದ ಅರಮನೆ ವಾಸ್ತು ವಿನ್ಯಾಸದ ಶೈಲಿಯು ಉತ್ತರಭಾರತದ ಅರಮನೆ ನಿರ್ಮಾಣಕ್ಕಿಂತ ವಿಭಿನ್ನವಾಗಿರುತ್ತದೆ. ಅದೇನೇ ಇರಲಿ ಕಾಲ ಉರುಳಿದಂತೆ ವಾಸ್ತು ವಿನ್ಯಾಸದಲ್ಲಿ ಅನೇಕ ಬದಲಾವಣೆಗಳು ಬಂದು ಇಂದು ಅತ್ಯಾಧುನಿಕ ತಂತ್ರಜ್ಞಾನಕ್ಕೆ ತಕ್ಕ ಹಾಗೆ ಹಾಗೂ ಐಷಾರಾಮಿ ಜೀವನಕ್ಕೆ ಹೊಂದಿಕೊಳ್ಳುವಂತೆ ವಾಸ್ತು ಮಾರ್ಪಟ್ಟಿರುವುದೇನು ಸುಳ್ಳಲ್ಲ.

 ಭೂಮಿಯು ಪ್ರಕೃತಿಮಾತೆ ಕೊಟ್ಟಂತಹ ಒಂದು ಅದ್ಭುತ ಕಾಣಿಕೆ. ಇದು ಹಿಂದೆ ಯಾರ ಸ್ವತ್ತು ಆಗಿರಲಿಲ್ಲ ಸಾಗುವಳಿಗಾಗಿ ಆದಿಮಾನವ ಕಾಡು ಕಡಿದು ಆಹಾರಧಾನ್ಯವನ್ನು ಬೆಳೆದುಕೊಂಡು ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗುತ್ತಿದ್ದ. ನಾಗರಿಕತೆಯ ಬೆಳವಣಿಗೆ, ರಾಜರಾಳ್ವಿಕೆ, ನಗರಗಳ ಬೆಳವಣಿಗೆಯಿಂದಾಗಿ ಭೂಮಿಯು ಮಾನವನ ಹೆಸರಿಗೆ ಹಸ್ತಾಂತರಿಸಲಾಯಿತು. ಇದೇ ಮುಂದೆ ಆತನ ಹೆಸರಿನಲ್ಲಿ ಸರ್ಕಾರದ ದಾಖಲೆಗಳಲ್ಲಿ ನಮೂದಿಸಲಾಯಿತು.

 ಇಂದಿಗೂ ಒಬ್ಬ ವ್ಯಕ್ತಿ ತನ್ನ ಜಮೀನನ್ನು ಮತ್ತೊಬ್ಬರಿಗೆ ಮಾರುವಾಗ ಸರಕಾರದಪತ್ರದಲ್ಲಿ ನಮೂದಿಸುವಂತಹ ಪದ ಬಳಕೆಯನ್ನು ಕಂಡಾಗ ಶ್ಲಾಗನೀಯವೆನಿಸುತ್ತದೆ. ಜಮೀನು ಖರೀದಿದಾರನು ಸಂಪೂರ್ಣವಾಗಿ ಹಣವನ್ನು ಮಾರುವವನಿಗೆ ಸಂದಾಯವಾದ ಬಳಿಕ ಆತನಿಗೆ ಆ ಜಮೀನಿನ ಮೇಲೆ ಇರುವ ಸಂಪೂರ್ಣವಾದಂತಹ ಅಧಿಕಾರ ಬಿಟ್ಟು ಕೊಟ್ಟಿರುತ್ತಾನೆ. ಈ ಪ್ರದೇಶದಲ್ಲಿ ಸಿಗುವಂತಹ ಯಾವುದೇ ನಿಧಿ, ನಿಕ್ಷೇಪ, ಜಲ, ತರು, ಪಾಷಣಾದಿ ಅಷ್ಟಭೋಗ ತೇಜ ಸ್ವಾಮ್ಯಕ್ಕೆ ಅವುಗಳ ಆದಿ, ಕ್ರಯ, ದಾನ, ಪರಿವರ್ತನೆಗಳೆಂಬ ವ್ಯವಹಾರ ಚತುಷ್ಟಯಕ್ಕು ಖರೀದಿದಾರರು ಭಾದ್ಯಾನಾಗಿರುತ್ತಾನೆ. ಇನ್ನುಮುಂದೆ ಸರಕಾರಿ ಕಂದಾಯವನ್ನು ಪಾವತಿಸಿಕೊಂಡು ನಿಮ್ಮ ಇಚ್ಛಾನುಸಾರ ನಿಮ್ಮ ಪುತ್ರ- ಪೌತ್ರ ವಂಶಪಾರಂಪರ್ಯವಾಗಿ ಸುಖದಿಂದ ಅನುಭವಿಸಬಹುದು ಎಂದು ಬರೆದು ಕೊಡಲಾಗುತ್ತದೆ. ಇದರ ಹೊರತಾಗಿಯೂ ಏನಾದರೂ ಸಮಸ್ಯೆಗಳು ಬಂದಲ್ಲಿ ಅದನ್ನು ತನ್ನ ಸ್ವಂತ ಹಣದಲ್ಲಿ ಬಗೆಹರಿಸಿ ಕೊಡುವುದಾಗಿ ನಮೂದಿಸಲಾಗಿರುತ್ತದೆ. ಒಟ್ಟಿನಲ್ಲಿ ಈ ಸರಕಾರಿ ದಾಖಲೆಗಳ ಉದ್ದೇಶವೂ ಕೂಡ ಭೂಮಿಯನ್ನು ವಂಶಪಾರಂಪರ್ಯವಾಗಿ ಮುಂದುವರಿಸಿಕೊಂಡು ಹೋಗಬೇಕೆಂಬುದೇ ಆಗಿದೆ.

 ಮನೆಯಲ್ಲಿ ಒಂದು ಮಗು ಜನಿಸಿದಾಗ ಎಲ್ಲರಿಗೂ ಹೇಗೆ ಸಂತೋಷವಾಗುತ್ತದೆ ಅದೇ ರೀತಿ ಒಂದು ಹೊಸ ಮನೆಯನ್ನು ಕಟ್ಟಿದಾಗಲು ಕೂಡ ಎಲ್ಲರಿಗೂ ಸಂತೋಷವಾಗುತ್ತದೆ. ಮಗುವಿಗೆ ನಾಮಕರಣ ಶಾಸ್ತ್ರ ಮುಗಿದು, ಪುಟ್ಟ ಹೆಜ್ಜೆಗಳನ್ನು ಇಡಲು ಪ್ರಾರಂಭಿಸಿ, ಮನೆಸುತ್ತ ಅಂಬೆಗಾಲನಿಟ್ಟುಕೊಂಡು, ತೊದಲು ನುಡಿಗಳನ್ನು ನುಡಿಯುತ್ತಾ ಮೇಲಿದ್ದು ನಿಲ್ಲಲು ಪ್ರಯತ್ನಿಸುತ್ತದೆ. ಇದಕ್ಕೇನು ಬಡವ-ಶ್ರೀಮಂತನೆಂಬ ವ್ಯತ್ಯಾಸವಿಲ್ಲ. ಗುಡಿಸಲೆ ಆಗಿರಲಿ, ಪುಟ್ಟಮನೆ ಆಗಿರಲಿ ಅಥವಾ ಅರಮನೆಯೇ ಆಗಿರಲಿ ಈ ಬೆಳವಣಿಗೆಯಿಂದ ಹೊರತಾಗಿಲ್ಲ.


 ಮನೆ ಕಟ್ಟಿದಷ್ಟು ವಿಶಾಲವಾಗಿರುತ್ತದೆ ಆದರೆ ಮಗುವಿನ ಬೆಳವಣಿಗೆ ಋತುವಿನಿಂದ ಋತುವಿಗೆ ಹೆಚ್ಚುತ್ತಾ ಹೋಗುತ್ತದೆ. ರಾತ್ರಿ ಅಜ್ಜಿಯ ಬಾಯಿಂದ ಕೇಳಿದ ಸಣ್ಣಕಥೆಗಳೇ ಆಗಿರಲಿ, ಗುಡುಗಿನ ಶಬ್ದಕ್ಕೆ ಬೆಚ್ಚಿದ ನೆನಪಾಗಿರಲಿ, ಮಳೆಗಾಲದಲ್ಲಿ ಮನೆಯ ಮುಂದೆ ಹರಿಯುವ ಪುಟ್ಟ ಹಳ್ಳದಲ್ಲಿ ಹರಿಬಿಟ್ಟ ಕಾಗದದ ದೋಣಿಯ ನೆನಪೇ ಆಗಿರಲಿ ಚಳಿಗಾಲದಲ್ಲಿ ಬಿಸಿ ಬಿಸಿ ಬಜ್ಜಿ ಮಾಡಿಸಿಕೊಂಡ ತಿಂದ ನೆನಪೇ ಆಗಿರಲಿ, ಓಲೆ ಹತ್ತಿಸಲು ಹೋಗಿ ಕಿಡಿ ಕೈ ಮೇಲೆ ಹಾರಿ ನರಕಯಾತನೆ ಪಟ್ಟಿದ್ದರೂ ಕೂಡ ಕೆಂಡದಲ್ಲಿ ಸುಟ್ಟು ತಿಂದ ಗೇರುಬೀಜ, ಆಲೂಗೆಡ್ಡೆ, ಗೆಣಸಾಗಿರಲಿ, ಹುಳಿ ಮಾವಿನಕಾಯಿಯ ಉಪ್ಪಿನಕಾಯಿ ಮಾಡಿಟ್ಟ ಜಾಡಿಯು ಇನ್ನೊಂದು ಕಥೆಯನ್ನು ನೆನಪಿಸುತ್ತದೆ. ಒರಳು ಕಲ್ಲಿನಲ್ಲಿ ಕುಟ್ಟಿದ ಹುಣಸೆಹಣ್ಣಿಗೆ ಉಪ್ಪು ಖಾರದ ಪುಡಿ ಹಾಕಿ ತಿಂದ ನೆನಪು ಇಂದಿಗೂ ಬಾಯಲ್ಲಿ ನೀರೂರಿಸುತ್ತದೆ. ಮನೆಯ ಪ್ರಾಂಗಣದಲ್ಲಿ ಸ್ನೇಹಿತರೊಟ್ಟಿಗೆ ಲಗೋರಿ, ಸಾಕೋ ಬೇಕೋ ಆಡುತ್ತಿರುವಾಗ ಬಿದ್ದು ಚರ್ಮ ತರಚಿ ತುಂಬೆ ರಸ ಹಾಕಿದಾಗ ಚೀರಿದ ನೆನಪು ಇಂದಿಗೂ ಹಸಿಯಾಗಿದೆ. ರಾತ್ರಿ ಚಿಮಣಿ ದೀಪವನ್ನು ಹಿಡಿದು ಓಡಾಡುತ್ತಿರುವಾಗ ನಮ್ಮ ನೆರಳನ್ನೇ ಕಂಡು ಭೂತವೆಂದು ಭಾವಿಸಿದ್ದೆದೆ. ಬೇಸಿಗೆಯ ರಜೆಯಲ್ಲಿ ಮನೆಯ ಮೇಲೆ ಹಪ್ಪಳ-ಸಂಡಿಗೆ ಒತ್ತಿ ಮಾಡಿ ಒಣಗಿಸಿದ ನೆನಪುಗಳಿವೆ. ರಾತ್ರಿ ಕಾಣಿಸಿಕೊಳ್ಳುವಂತಹ ಬೆಳಕಿನ ಹುಳುಗಳನ್ನು ಕಂಡಾಗ ಆಶ್ಚರ್ಯವಾಗಿದ್ದು ಇದೆ ಹಾಗೂ ಅವುಗಳನ್ನು ಹಿಡಿಯುವ ಸಾಹಸ ಮಾಡಿದ್ದಿದೆ. ನೆಂಟರಿಷ್ಟರು ಮನೆಗೆ ಬಂದಾಗ ಎಲ್ಲರೂ ಕೈ ಜೋಡಿಸಿ ಮಾಡಿದಂತಹ ಒತ್ತು ಶಾವಿಗೆ ಕಾಯಿರಸ ಬಾಯಲ್ಲಿ ನೀರೂರಿಸುತ್ತದೆ. ರಾತ್ರಿ ಊಟ ಮಾಡದೆ ಮಲಗಿರುವಾಗ ಅಮ್ಮ ಚಂದ್ರನನ್ನು ತೋರಿಸಿ ಇನ್ನೆರಡು ತುತ್ತು ಊಟವನ್ನು ಹೆಚ್ಚಿಗೆ ತಿನ್ನಿಸಿದ ನೆನಪುಗಳಿವೆ. ರಾತ್ರಿ ಊಟ ಮಾಡದೆ ಮಲಗಿದರೆ ಗುಮ್ಮ ಬಂದು ನಮ್ಮನ್ನು ಎತ್ತಿಕೊಂಡು ಹೋಗುತ್ತಾನೆಂದು ಹೇಳಿದಂತ ಕಥೆ ಇಂದಿಗೂ ನೆನಪಿನಲ್ಲಿದೆ.

 ಮಕ್ಕಳು ಬೆಳೆದು ದೊಡ್ಡವರಾಗಿ ಹೇಗೆ ಮದುವೆಗೆ  ಸಿಂಗರಿಸಿ ಸಿದ್ದಗೊಳ್ಳುತ್ತಾರೆಯೋ ಅದೇ ರೀತಿ ಮನೆಯೂ ಕೂಡ ತೆಂಗಿನ ಚಪ್ಪರ, ತಳಿರು ತೋರಣ, ಹೂವಿನಹಾರ ಎಲ್ಲವನ್ನೂ ಹೊದ್ದು ಸಿಂಗಾರಗೊಳ್ಳುತ್ತದೆ,ಬಂದು ಹೋದಂತಹ ಎಲ್ಲಾ ಸ್ನೇಹಿತರು, ಬಂಧು ಮಿತ್ರರಿಗೆ ಇದೆ ಮನೆ ಸಾಕ್ಷಿಯಾಗಿರುತ್ತದೆ. ಸ್ವಲ್ಪ ವರ್ಷದ ಬಳಿಕ ಮತ್ತೊಂದು ತೊಟ್ಟಿಲು ಶಾಸ್ತ್ರಕ್ಕೆ ಸಿದ್ಧಗೊಳ್ಳುತ್ತದೆ. ಮುಂದೆ ಮನೆಯ ಹಿರಿಯರೊಬ್ಬರು ಅಸುನೀಗಿದಾಗ ಮನೆಯವರೊಂದಿಗೆ ಮನೆಯುಕೂಡ ಮೌನದ ಮಡುವಿನಲ್ಲಿ ಮುಳುಗುತ್ತದೆ. ಈ ರೀತಿ ಮನೆ ಎಲ್ಲಾ ಕಾರ್ಯಕ್ರಮಗಳಿಗೂ ಸಾಕ್ಷಿಯಾಗಿರುತ್ತದೆ. ಮೊಮ್ಮಕ್ಕಳು ಮನೆಯನ್ನು ಮಾರಿ ವಿದೇಶಗಳಲ್ಲಿ ನೆಲೆಸುವಂತಹ ಸಂದರ್ಭಗಳಲ್ಲಿಯೂ ಕೂಡ ಇದೇ ಮನೆ ಮೌನವಾಗಿ ಎಲ್ಲವನ್ನೂ ಸ್ವೀಕರಿಸುತ್ತದೆ.

 ಮಾನವ ಹೇಗೆ ತನ್ನೆಲ್ಲ ಮಜಲುಗಳನ್ನು ದಾಟಿ ಪಂಚಭೂತಗಳಲ್ಲಿ ಲೀನವಾಗುತ್ತಾನೆಯೋ ಅದೇ ರೀತಿ ಮನೆಯೂ ಕೂಡ ಶಿಥಿಲಾವಸ್ಥೆಗೆ ತಲುಪಿ ಅದೇ ಜಾಗದಲ್ಲಿ ಮತ್ತೊಂದು ಮನೆ ನಿರ್ಮಾಣವಾಗುತ್ತದೆ. ಇಲ್ಲಿ ಬದಲಾಗಿದ್ದು ಮನೆ ಹೊರತು ಭಾವನೆಗಳಲ್ಲ ಭಾವನೆಗಳು ಎಂದೆಂದಿಗೂ ಶಾಶ್ವತ ಹಾಗೂ ಜೀವಂತ. ಭಾವನೆಗಳೆಂಬುವುದು ಮಾನವ ಜೀವನದ ಅವಿಭಾಜ್ಯಅಂಗ ಆದ್ದರಿಂದಲೇ ಭಾವನೆಗಳಿಗೆ ಬೆಲೆ ಕಟ್ಟಲಾಗುವುದಿಲ್ಲ.


 ಇಷ್ಟೆಲ್ಲವನ್ನೂ ನೆನಪಿಸಿದಂತಹ ಸ್ನೇಹಿತನ ಕವಿತೆ ನಿಜಕ್ಕೂ ಶ್ಲಾಘನೀಯ. ಇಂತಹ ಭಾವನಾತ್ಮಕ ಕವಿತೆಗಳು ವಾಸ್ತವ ಹಾಗೂ ನಿರಂತರ.

Saturday, June 27, 2020

ಕಾಲ-ಸಕಾಲ

                 
                         ಎಸ್ ಪಿ ತೇಜರಾಜು.

 ಭರತಖಂಡದ ಕೊಡುಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ವಿಶಿಷ್ಟ, ವಿಭಿನ್ನ ಹಾಗೂ ಅವಿಸ್ಮರಣೀಯವಾಗಿರುವಂತಹದ್ದು. ಇಲ್ಲಿಯ ಕಲೆ ಸಾಹಿತ್ಯ ಸಂಸ್ಕೃತಿಯೇ ಆಗಿರಲಿ, ಹಸ್ತಪ್ರತಿ, ಶಿಲಾಶಾಸನ, ಆಚಾರ-ವಿಚಾರ, ಉಡುಗೆ ತೊಡುಗೆಗಳು ಸಂಸ್ಕೃತ ಭಾಷೆ ಹಾಗೂ ಲಿಪಿಯ ಬಳಕೆ, ವೇದ-ಶಾಸ್ತ್ರ- ಪುರಾಣಗಳೇ ಆಗಿರಲಿ, ವಾಗ್ಭಟರ ಆಹಾರ ಪದ್ಧತಿ, ದೈಹಿಕ ಮಾನಸಿಕ ಸ್ಥಿರತೆಯನ್ನು ಉಂಟುಮಾಡುವಂತಹ ಪತಂಜಲಿ ಯೋಗ ಶಿಕ್ಷಣವಾಗಿರಲಿ, ಚರಕನ ಆಯುರ್ವೇದ ಚಿಕಿತ್ಸಾ ವಿಧಾನವೇ ಆಗಿರಲಿ, ಬೌತಿಕ ಸಂಪತ್ತನ್ನು ಹೆಚ್ಚಿಸುವಂತಹ ಗುರುಕುಲ ಮಾದರಿಯ ಪಂಚ ಶಿಕ್ಷಣ ಪದ್ಧತಿಯೇ ಆಗಿರಲಿ, ಇಡೀ ಪ್ರಪಂಚಕ್ಕೆ ಮಾದರಿಯಾದಂತಹ ಪರಿಸರಕ್ಕೆ ಪೂರಕ ಕೃಷಿ ಪದ್ಧತಿಯೇ ಆಗಿರಲಿ, ಇಲ್ಲಿ ನೆಲೆಸಿರುವಂತಹ ಸಸ್ಯ ಕೋಟಿ ಜೀವಸಂಕುಲದ ಜಗತ್ತೇ ಆಗಿರಲಿ, ಇಲ್ಲಿ ದೊರಕುವಂತಹ ಬೆಲೆಬಾಳುವ ಚಿನ್ನ, ಬೆಳ್ಳಿ, ವಜ್ರ, ವೈಢೂರ್ಯ, ಮುತ್ತು, ರತ್ನ, ಮಾಣಿಕ್ಯವೇ ಆಗಿರಲಿ, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಶಾಸ್ತ್ರಕ್ಕೆ ನೀಡಿರುವಂತಹ ಅನೇಕ ಮಹನೀಯರ ಕೊಡುಗೆ ಆಗಿರಲಿ, ನಿಸರ್ಗಕ್ಕೆ ಪೂರಕವಾದಂತಹ ಜೀವನ ನಡೆಸಬೇಕೆಂಬ ವೃಕ್ಷಾಯುರ್ವೇದ ಎಂಬ ವೇದದ ಒಂದು ಶಾಖೆಯೇ ಇದೆ ಎಂದಾಗಲಿ, ಭವಿಷ್ಯದ ನಿಸರ್ಗದಲ್ಲಾಗುವ ಬದಲಾವಣೆಗಳನ್ನು ನಿಖರವಾಗಿ ತಿಳಿದುಕೊಳ್ಳುವಂತಹ ನಮ್ಮ ಪಂಚಾಂಗವೇ ಆಗಿರಲಿ ಹೀಗೆ ಹೇಳುತ್ತಾ ಹೋದರೆ ಪುಟಗಳು ಸಾಲದಾಗುತ್ತದೆ.

 ಜಗತ್ತಿನ ನಾನಾ ಪ್ರದೇಶಗಳಲ್ಲಿ ನಡೆದಂತಹ ನಾಗರಿಕತೆಯ ಬೆಳವಣಿಗೆಯು ವಿಶಿಷ್ಟ ಹಾಗೂ ವಿಭಿನ್ನವಾಗಿರುವಂತಹದ್ದು. ವಿವಿಧ ಮಜಲುಗಳಲ್ಲಿ ನಡೆದಂತಹ ಈ ನಾಗರಿಕತೆಯ ಬೆಳವಣಿಗೆ ಕಾಲಕಾಲಕ್ಕೆ ಬದಲಾಗುತ್ತ ಹೋಯಿತು ಅವರವರ ಸುತ್ತಮುತ್ತಲಿನ ಗುಣಧರ್ಮಗಳನ್ನು ಆಧರಿಸಿದಂತೆ ಅವರವರ ಧರ್ಮಶಾಸ್ತ್ರಗಳು ಬೆಳೆಯುತ್ತಾ ಹೋಯಿತು.

 ಇಂದಿಗೂ ಕಾಲದಲ್ಲೇನು ಬದಲಾವಣೆ ಕಂಡುಬಂದಿಲ್ಲ ಅಂದೂ ಕೂಡ ದಿನಕ್ಕೆ 24 ಗಂಟೆಯೇ ಇದ್ದಿದ್ದು ಈಗಲೂ ಕೂಡ 24 ಗಂಟೆಯೇ ಇದೆ ಮುಂದೆಯೂ ಇದೇ ಮುಂದುವರಿಯಬಹುದು. ಪ್ರತಿದಿನವೂ ಸೂರ್ಯ, ಚಂದ್ರ, ನಕ್ಷತ್ರಗಳು ಪ್ರತ್ಯಕ್ಷವಾಗುತ್ತಲೇ ಇದೆ. ತಿಥಿ ಹಾಗೂ ಪಕ್ಷವಾಧಾರಿತ[ ಶುಕ್ಲ ಪಕ್ಷ-ಕೃಷ್ಣ ಪಕ್ಷ ] ದಿನಕಳೆದು ವಾರವಾಗಿ, ವಾಸವಾಗಿ, ಋತು ಕಳೆದು, ಆಯಣಗಳನ್ನೊಳಗೊಂಡ [ ಉತ್ತರಾಯಣ ಹಾಗೂ ದಕ್ಷಿಣಾಯಣ ] ಸಂವತ್ಸರಗಳು ಹಿಂದೆಯೂ ಇತ್ತು, ಇಂದು ಇದೆ, ಮುಂದೆಯೂ ಇರುತ್ತದೆ. ಈ ರೀತಿ ಯಥಾವತ್ತಾಗಿ ಕಾಲವನ್ನು ನಿರ್ಧರಿಸುವಂತಹ ಏಕಮಾನ ಮಾಪನವು ನಮ್ಮ ಭರತಖಂಡದ ಪಂಚಾಂಗದಲ್ಲಿ ಅಡಗಿದೆ.

 ಪಂಚಾಂಗ ಎಂದ ಕೂಡಲೇ ನಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ನಾವೇ ಮಾಡಿಕೊಂಡಿರುವಂತಹ ಒಂದು ಕಲ್ಪನೆ ಅಥವಾ ಯಾವುದೋ ಕಟ್ಟುಪಾಡುಗಳನ್ನು ಒಳಗೊಂಡ ಪುಸ್ತಕ ಎಂದು ಭಾವಿಸುವವರು/ ಅರಿತಿರುವವರೇ ಹೆಚ್ಚು. ಆದರೆ ಪಂಚಾಂಗವನ್ನು ಸರಿಯಾಗಿ ಬಲ್ಲವರಿಂದ ತಿಳಿದುಕೊಂಡರೆ ಪ್ರತಿಯೊಬ್ಬರಿಗೂ ಅರ್ಥವಾಗುತ್ತದೆ ಇದೆ ಪಂಚಾಂಗ ವಾಸ್ತವಕ್ಕೆ ಹೇಗೆ ಹತ್ತಿರವಾಗಿದೆ ಎಂದು, ಹಾಗೂ ಇದೇ ಪಂಚಾಂಗ ನಮ್ಮ ನಡುವೆಯೇ ಹೇಗೆ ಜೀವಂತವಾಗಿದೆ ಎಂದು ತಿಳಿಯುತ್ತದೆ.

 ಕಾಲಪುರುಷನ ವರ್ಣನೆಯಂತೂ ಅದ್ಭುತವಾಗಿರುವಂತಹದ್ದು ಅದರಲ್ಲಿಯೂ ಕಾಲಪುರುಷನ ಚಿತ್ರವು ನಾವು ಇಂದು ಭೂಮಿಯ ಮೇಲೆ ಜೀವಿಸುತ್ತಿರುವ ವಾಸ್ತವತೆಯನ್ನು ತಿಳಿಸಿಕೊಡುತ್ತದೆ. ಸೂರ್ಯನ ಮಧ್ಯಭಾಗದಲ್ಲಿ ಮಾಕುಷ್ಮಾಂಡದೇವಿ ಇರುತ್ತಾಳೆ ಆಕೆಯ 9 ಶಕ್ತಿಗಳು 9 ಕಿರಣಗಳು ಈಕೆ ಸೂರ್ಯನಿಗೆ ದಿಕ್ಕನ್ನು ತೋರಿಸುತ್ತಾಳೆ. ಸೂರ್ಯನನ್ನು ಹೊತ್ತ ರಥದ ಚಕ್ರ ಹಿಂದೂ ಪಂಚಾಂಗವಾಧಾರಿತವಾಗಿದ್ದು ಅದರ ಅರ್ಧಭಾಗ ಉತ್ತರಾಯಣವನ್ನು ಉಳಿದ ಇನ್ನರ್ಧ ಭಾಗ ದಕ್ಷಿಣಾಯಣವನ್ನು ಪ್ರತಿಬಿಂಬಿಸುತ್ತದೆ. ಈ ಚಕ್ರದಲ್ಲಿರುವ 60 ಸಣ್ಣ ಗೆರೆಗಳು 60 ಸಂವತ್ಸರವನ್ನು, ನಂತರದ ಸಣ್ಣ 12 ಗೆರೆಗಳು ಸಂವತ್ಸರದ 12 ಮಾಸಗಳು ಪ್ರತಿಬಿಂಬಿಸುತ್ತದೆ. ಈ ಚಕ್ರ ದೊಳಗಿನ ಮೂರು ಸಣ್ಣ ಚಕ್ರಗಳು ಭೂತ-ಭವಿಷ್ಯ ಹಾಗೂ ವರ್ತಮಾನವನ್ನು ಇದರ ಮೇಲಿನ ಐದು ಪುಟ್ಟ ಚಕ್ರಗಳು ತಿಥಿ, ವಾರ, ಯೋಗ, ಕರಣ, ನಕ್ಷತ್ರವನ್ನು ಪ್ರತಿಬಿಂಬಿಸುತ್ತದೆ. ಈ ರಥದ ಮುಂಭಾಗ ಉಷಾ ಹಾಗೂ ಪ್ರಭಾತ ದಿನದ ಮೊದಲ ಬೆಳಕನ್ನು ಹಾಗೂ ರೇವಂತ ಭೂಮಿಗೆ ಶಾಖವನ್ನು ಪಸರಿಸುತ್ತಾನೆ. ರಥದ ಮಧ್ಯಭಾಗದಲ್ಲಿ ಆರು ಜನರ ಪೀಠವಿದ್ದು ಅದರ ಹಿಂದೆ ದಂಡಿ ಹಾಗೂ ತಿಂಗಳ ಸೂರ್ಯ ಎಷ್ಟು ಮುಂದೆ ಚಲಿಸುತ್ತಿದ್ದನೆಂದು ಲೆಕ್ಕವಿಡುತ್ತಾರೆ. ಈ ರಥವನ್ನು ಏಳು ಕುದುರೆಗಳು ಮುನ್ನಡೆಸಿದರೆ, ಇವುಗಳೆಲ್ಲದರ ಹಿಂದೆ ಕೊನೆಯದಾಗಿ ಕಾಲಪುರುಷ ಬರುತ್ತಾನೆಂದು ಒಂದು ಕಲ್ಪನೆಯಾದರೂ ಇದೆಲ್ಲವೂ ವಾಸ್ತವಕ್ಕೆ ಹತ್ತಿರವಾಗಿಯೇ ಇದೆ.

 ಇದರೊಟ್ಟಿಗೆ ಪಂಚಾಂಗವು ನಕ್ಷತ್ರವಾದಾರಿತ ಮಳೆ ಬರಬಹುದಾದಂತಹ ದಿನಗಳನ್ನು ಕೂಡ ತಿಳಿಸುತ್ತದೆ. ಇದರ ಆಧಾರವಾಗಿಯೇ ಈ ನೆಲದ ಕೃಷಿ ಪರಂಪರೆ ಬೆಳೆದುಬಂದಿದೆ. ನಾವು ಪಠಿಸುವಂತಹ ಗಾಯತ್ರಿ ಮಂತ್ರದ ಒಳಾರ್ಥವೇ ಆಗಿರಲಿ, ಆದ್ಯ ಬ್ರಹ್ಮನಿಂದ ಪ್ರಾರಂಭವಾಗುವ ನಮ್ಮ ದಿನಚರಿಯೇ ಆಗಿರಲಿ ಇವುಗಳೆಲ್ಲವೂ ನಮ್ಮ ಇರುವಿಕೆಯನ್ನು ಸ್ಪಷ್ಟವಾಗಿ ತಿಳಿಸುತ್ತದೆ.

 ನಾವು ಇದೇ ಕಾಲವನ್ನು ಎಷ್ಟು ನಿರ್ಲಕ್ಷಿಸಿದ್ದೇವೆ ಎಂದರೆ ಪ್ರಪಂಚದ ಯಾವುದೋ ಮೂಲೆಯ ಜನ ಇದೇ ವಿಷಯವನ್ನು ಅಧ್ಯಯನ ನಡೆಸಿ ಮತ್ತೆ ನಮಗೆ ತಿಳಿಸುವಂತಹ ಶೋಚನೀಯ ಪರಿಸ್ಥಿತಿಗೆ ತಲುಪಿದ್ದೇವೆ.

 ಪ್ರತಿ ದಿನ ಸೂರ್ಯೋದಯದಿಂದ ಪ್ರಾರಂಭವಾಗುವಂತಹ ಅನೇಕ ಜೀವಿಗಳ ದಿನಚರಿ ಚಂದ್ರನ ಆಗಮನದಿಂದಾಗಿ ಮುಕ್ತಾಯಗೊಳ್ಳುತ್ತದೆ ಆದರೆ ಇದೇ ಚಂದ್ರನ ಆಗಮನದಿಂದ ಮತ್ತೊಂದು ಜಗತ್ತು ಜಾಗೃತವಾಗಿರುತ್ತದೆ. ಈ ಬೆಳವಣಿಗೆ ಮಾನವನ ಭೌತಿಕ, ಮಾನಸಿಕ ಹಾಗೂ ಶಾರೀರಿಕ ಬೆಳವಣಿಗೆಗೆ ಸಹಾಯ ಮಾಡಿಕೊಡುತ್ತದೆ. ಈ ರೀತಿ ಪ್ರತಿದಿನ ನಡೆಯುವಂತಹ ಕಾಲಚಕ್ರ ಮಾನವನ ಜೀವನ ಚಕ್ರದಲ್ಲಿ ಅನೇಕ ಮಜಲುಗಳನ್ನು ದಾಟಿ ಕೊನೆಗೆ ಕಾಲಚಕ್ರದಲ್ಲಿ ಲೀನಗೊಳಿಸುತ್ತದೆ.

 ಅಳುತ್ತಾ ತಾಯಿಯ ಭೂ ಗರ್ಭಾಶಯದಿಂದ ಭೂಮಂಡಲಕ್ಕೆ ಆಗಮಿಸಿದಂತಹ ಮಗು ಹುಟ್ಟುತ್ತ ವಿಶ್ವಮಾನವನೇ. ಇದೆ ಮಗುವಿನ ಜನನದಿಂದಾಗಿ ನವದಂಪತಿಗಳು ತಂದೆ-ತಾಯಿಗಳಾಗುತ್ತಾರೆ ಅವರ ಪೋಷಕರು ಅಜ್ಜಿ-ತಾತನ ಎಂಬ ಭಾವ ಬೆಳೆಯುತ್ತದೆ. ಮುಂದೆ ಇದೆ ಮಗು ತನ್ನ ತಮ್ಮನಿಗೆ ಅಣ್ಣನಾಗುತ್ತಾನೆ ಅಥವಾ ಹೆಣ್ಣುಮಗುವಾಗಿದ್ದರೆ ಅಕ್ಕ ಆಗುತ್ತಾಳೆ. ಹೀಗೆ ಬೆಳೆಯುತ್ತಾ ಅತ್ತೆ- ಮಾವ, ಚಿಕ್ಕಪ್ಪ -ಚಿಕ್ಕಮ್ಮ, ದೊಡ್ಡಪ್ಪ- ದೊಡ್ಡಮ್ಮ, ತಾತನ ಯಾವುದೋ ಸಂಬಂಧಿಕರಿಗೆ ಸಂಬಂಧಿಕನಾಗುತ್ತಾನೆ, ದೂರದೂರಿನ ಊರುಗಳಲ್ಲಿನ ಸಂಬಂಧಿಕರಿಗೆ ನೆಂಟರಾಗುತ್ತಾನೆ, ಮುಂದೆ ಅವರದ್ದೇ ಆದಂತಹ ಮನೆತನ ಎಂಬ ಹೆಸರು ಬೆಳೆಯುತ್ತದೆ. ಅದೇನೇ ಇರಲಿ ಜೀವನದಲ್ಲಿ ಎಂತಹ ವಿದ್ಯೆ ಬಲ್ಲವನಾಗಿ ಜಗತ್ತನ್ನೇ ಜಯಿಸಿದರು ಕೂಡ ಆತ ತಾಯಿಗೆ ಮಗನೆ, ಅಜ್ಜಿ ತಾತನಿಗೆ ಮೊಮ್ಮಕ್ಕಳೇ, ಗುರುವಿಗೆ ಶಿಷ್ಯನೇ, ದೇವರಿಗೆ ಭಕ್ತನೆಂಬ ಭಾವವನ್ನು ಮಾತ್ರ ಮುಂದಿನ ಪೀಳಿಗೆಗೆ ಬಿಟ್ಟು ಹೋಗುತ್ತಾನೆ.

 ಮೇಲೆ ತಿಳಿಸಿರುವಂತಹ ಉದಾಹರಣೆ ಮಾನವನ ಜೀವನ ಕ್ರಮಕ್ಕೆ ಅನ್ವಯಿಸುವಂತಹ ಕಾಲಚಕ್ರ ವಾಗಿದೆ ಆದರೆ ಇದೇ ಕಾಲ ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ರೂಪವನ್ನು ಪಡೆಯುತ್ತದೆ. ಭೂಮಿಯ ಮೇಲೆ ಹಾಗೂ ಭೂ ಗರ್ಭಾಶಯದಲ್ಲಿ ಜೀವಿಸುವಂತೆ ಸಕಲಜೀವ ಕೋಟಿಗಳಿಗೆ ಇದೆ ಕಾಲ ಮತ್ತೊಂದು ರೂಪವನ್ನು ನೀಡುತ್ತದೆ. ಸಾಗರದ ಜೀವಿಗಳಿಗೆ ಹಾಗೂ ಭೂಮಿಯ ಮೇಲೆ ಜೀವಿಸುವಂತಹ ಜೀವಿಗಳಿಗೆ, ಇವುಗಳೆರಡರಲ್ಲೂ  ಜೀವಿಸುವಂತಹ ಉಭಯಚರ ಜೀವಿಗಳಾದ ಆಮೆ, ಕಪ್ಪೆಗೆ, ಸರೀಸೃಪಗಳಿಗೆ ಮತ್ತೊಂದು ರೂಪವನ್ನು, ಮರುಭೂಮಿಯ ಜೀವಿಗಳಿಗೆ, ಹಿಮ ಜೀವಿಗಳಿಗೆ ಮತ್ತೊಂದು ರೂಪವನ್ನು, ಆಕಾಶದಲ್ಲಿ ಸ್ವಚ್ಛಂದವಾಗಿ ವಿಹರಿಸುವಂತಹ ಪಕ್ಷಿಗಳಿಗೆ, ಕೀಟ,ಮಿಡತೆ, ಇರುವೆಯಂತಹ ಪುಟ್ಟ ಜೀವಿಗೂ ಕೂಡ ಮತ್ತೊಂದು ರೂಪವನ್ನು ನೀಡುತ್ತದೆ.

 ಇದೇ ಕಾಲ ಸಾವಿರಾರು ವರ್ಷಗಳಿಂದ ತನ್ನಸ್ತಿತ್ವವನ್ನು ಉಳಿಸಿಕೊಂಡಿರುವಂತಹ ಅಜಾನುಬಾಹು, ಸಾವಿರಾರು ಪ್ರಾಣಿ-ಪಕ್ಷಿಗಳಿಗೆ ಆಹಾರ, ವಸತಿ, ಶುದ್ಧ ಗಾಳಿ, ನೆರಳು, ಭೂಮಿಗೆ ನೀರುಣಿಸುವಂತಹ ಕಾರ್ಯದಲ್ಲಿ ಹಾಗೂ ನೂರಾರು ಕಾರಣಗಳಿಂದ ಮಾನವರಿಗೆ ಪರೋಪಕಾರಿ ಆಗಿರುವಂತಹ ದೈತ್ಯ ಮರಗಳನ್ನು ಧರೆಗುರುಳಿಸುತ್ತದೆ ಮತ್ತೊಂದೆಡೆ ಇದೆ ಮರದಿಂದ ಬಿದ್ದ ಪುಟ್ಟ ಬೀಜಕ್ಕೆ ಸತ್ವ, ಪೋಷಕಾಂಶ ಭರಿತ, ಫಲವತ್ತಾದ ಭೂಮಿಯನ್ನು ನೀಡಿ ಬೀಜ ಮೊಳಕೆಯೊಡೆದು ಮತ್ತೆ ಅದೇ ರೀತಿ ದೈತ್ಯ ಹಾಗೂ ಸಾವಿರಾರು ವರ್ಷಗಳು ಬೆಳೆಯಬಹುದಾದಂತಹ ಮರವನ್ನು ಬೆಳೆಸುತ್ತದೆ. ಸುತ್ತಮುತ್ತಲಿನ ಪರಿಸರವನ್ನು ಸಮತೋಲನದಲ್ಲಿಟ್ಟುಕೊಂಡು ಸೂರ್ಯನ ಬೆಳಕು ಬೀಳದಂತಹ ಕಾನನವನ್ನು ತನ್ನಷ್ಟಕ್ಕೆ ತಾನೇ ಸೃಷ್ಟಿಸಿಕೊಳ್ಳುತ್ತದೆ.

 ಇದೇ ಕಾಲ ವಿನಾಶ ಕಾಲದ ಸಮಯದಲ್ಲಿ ಎಲ್ಲವನ್ನು ಆಹುತಿ ಪಡೆದುಕೊಳ್ಳಬಹುದು ಇದಕ್ಕೆ ಯಾವುದೇ ರೀತಿಯಾದಂತಹ ನಿರ್ದಿಷ್ಟ ಕಾರಣ ಇರಬಹುದು ಅಥವಾ ಇಲ್ಲದೆ ಇರಬಹುದು. ಒಂದೇ ಒಂದು ಬೆಂಕಿಯ ಕಿಡಿ ಸಕಲ ಸಸ್ಯ ಹಾಗೂ ಪ್ರಾಣಿ ಸಂಕುಲವನ್ನು ಆಹುತಿ ಪಡೆಯಬಹುದು. ಒಂದೇ ಒಂದು ವೈರಾಣು ಇಡೀ ಮಾನವ ಸಂಕುಲವನ್ನು ಬಲಿ ತೆಗೆದುಕೊಳ್ಳಬಹುದು. ಒಂದು ಮಾತಿದೆ ವಿನಾಶಕಾಲೇ ವಿಪರೀತ ಬುದ್ಧಿ ಎಂದು ಈ ಮಾತಿಗೆ ಮಾನವನೆಷ್ಟು ಹತ್ತಿರವಾಗಿದ್ದಾನೆಂದು ಹೂಇಸಲಾಗುವುದಿಲ್ಲ ಆದರೆ ಎಲ್ಲದಕ್ಕೂ ಕಾಲವೇ ಉತ್ತರಿಸುತ್ತದೆ.

 ಎಲ್ಲರೂ ಒಂದೇ ಮಾತನ್ನು ಹೇಳುವವರೇ ಕಾಲ ಕೆಟ್ಟುಹೋಯಿತು ಎಂದು ಆದರೆ ಕಾಲ ಎಂದು ಕೆಟ್ಟಿಲ್ಲ, ಇಂದು ಕೆಟ್ಟಿಲ್ಲ, ಮುಂದೆಯೂ ಕೆಡುವುದಿಲ್ಲ, ಕೆಡುವುದು ಏನಾದರೂ ಮಾನವ ಮಾತ್ರ. ಸೂಕ್ಷ್ಮತೆ ತುಂಬಿದ ಜೀವನವನ್ನು ನಾವು ಗ್ರಹಿಸಬೇಕು, ಅರ್ಥಮಾಡಿಕೊಳ್ಳಬೇಕಾಗುತ್ತದೆ ಇದಕ್ಕೆಂದು ನಾನೇನು ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ಅವಶ್ಯಕತೆ ಇಲ್ಲ. ಜೀವನದಲ್ಲಿ ನಾವು ತೆಗೆದುಕೊಳ್ಳುಬಹುದಾದಂತಹ ನಿರ್ಧಾರ ಹಾಗೂ ಸಣ್ಣ ಬದಲಾವಣೆಗಳು ಮಾನವನನ್ನು ಮತ್ತೊಂದು ಶಿಖರವನ್ನೇವಂತೆ ಮಾಡುತ್ತದೆ.

 ಮಾನವನ ಸೃಷ್ಟಿಯೇ ಒಂದು ಅದ್ಭುತ ಅದರಲ್ಲಿಯೂ ನಮ್ಮ ಪಂಚೇಂದ್ರಿಯಗಳ ಕಾರ್ಯಗಳಂತೂ ಅವರ್ಣನೀಯ. ಪಂಚೇಂದ್ರಿಯಗಳಲ್ಲಿ ಒಂದಾದಂತಹ ನಮ್ಮ ನೇತ್ರಗಳು ಬಹಳ ಸೂಕ್ಷ್ಮತೆಯನ್ನು ಗ್ರಹಿಸುವಂತಹ ವಿಶೇಷ ಗುಣವನ್ನು ಹೊಂದಿದೆ ಎಂತಹ ಕತ್ತಲೆಯೇ ಇರಲಿ ನಮ್ಮ ಒಳಮನಸ್ಸನ್ನು ಜಾಗೃತವಾಗಿರುವಂತೆ ಮಾಡುತ್ತದೆ. ರಾತ್ರಿಯ ಬೆಳದಿಂಗಳ ಬೆಳಕಿನಲ್ಲಿ ಸ್ವಲ್ಪಹೊತ್ತು ಏಕಾಂತವಾಗಿ ಕಾಲ ಕಳೆದರೆ ಮನಸ್ಸಿಗೆ ಶಾಂತಿ ದೊರೆಯುತ್ತದೆ. ಮೌನವಾಗಿ ಸ್ವಲ್ಪಹೊತ್ತು ಕಾಲ ಕಳೆದರೆ ಮನಸ್ಸಿನ ಭಾಷೆ ಅರ್ಥವಾಗುತ್ತದೆ. ಬೆಳಿಗ್ಗೆ ಸೂರ್ಯೋದಯವಾಗುವ ಮುನ್ನ ಎದ್ದು ಸೂರ್ಯನಿಗಾಗಿ ಕಾದು ಸೂರ್ಯನಮಸ್ಕಾರವನ್ನು ಮಾಡಿದರೆ ಜೀವನ ಸಾರ್ಥಕವೆನಿಸುತ್ತದೆ. ಯಾವುದಾದರೂ ಒಂದು ಪುಟ್ಟ ಹೂಬಿಡುವ ಗಿಡವನ್ನು ಕುಂಡದಲ್ಲಿ ಬೆಳೆಸಿ ಪ್ರತಿದಿನವೂ ನೀರನ್ನು ಹಾಕಿ, ಒಂದು ಚಿಟ್ಟೆ ಅದರ ಹತ್ತಿರ ಬಂದಾಗ ನಮ್ಮ ಸಂತೋಷ ಇಮ್ಮಡಿಸುತ್ತದೆ. ಸಮಯ ಸಿಕ್ಕಾಗ ಪುಸ್ತಕವನ್ನು ಓದಲು ಪ್ರಯತ್ನಿಸಿ ಪುಸ್ತಕ ಪ್ರೀತಿಯು ಹಾಗೂ ಜ್ಞಾನಶಕ್ತಿಯು ಹೆಚ್ಚಾಗುತ್ತದೆ. ಈ ಕಾರ್ಯಗಳೆಲ್ಲವು ಮನಸ್ಸಿಗೆ ಶಾಂತಿ ತಂದುಕೊಡುವುದಲ್ಲದೆ ನಮ್ಮನ್ನು ಇನ್ನಷ್ಟು ಜಾಗೃತವಾಗಿರುವಂತೆ ಮಾಡುತ್ತವೆ.

 ಕೆಟ್ಟಿರುವುದು ಕಾಲವೇನಲ್ಲ ಬದಲಿಗೆ ಮಾನವ ಮಾತ್ರ. ಇದನ್ನು ಸರಿಪಡಿಸಿಕೊಳ್ಳಲು ಇದೆ ಸರಿಯಾದ ಸಮಯ. ನಮ್ಮ ಪುಟ್ಟ ಪ್ರಯತ್ನಗಳಿಂದ ಮುಂದಿನ ತಲೆಮಾರುಗಳು ಸರಿದಾರಿಯಲ್ಲಿ ನಡೆಯಬಹುದಾದರೆ ನಾವೇಕೆ ಈ ಪುಟ್ಟ ಪ್ರಯತ್ನಗಳನ್ನು ಮಾಡಬಾರದು? ಆದ್ದರಿಂದ ನಾವು ಈ ಸಮಯದಲ್ಲಿ ತೆಗೆದುಕೊಳ್ಳುವಂತಹ ನಿರ್ಧಾರಗಳು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತವೆ ಏಕೆಂದರೆ ಕಾಲಕಳೆದಂತೆ ನಾವು ಮರೆಯಾಗಿ ಭೂತಕಾಲದಲ್ಲಿ ಸೇರಿಕೊಳ್ಳುತ್ತೇವೆ ಇದೆ ಕಾಲ ಮುಂದುವರೆದು ಮುಂದಿನವರಿಗೆ ವರ್ತಮಾನ ಹಾಗೂ ಭವಿಷ್ಯ ಕಾಲವಾಗಿರುತ್ತದೆ.

Saturday, June 13, 2020

ಜೀವನವೇ ಒಂದು ಸಾಧನೆ.

                      ಎಸ್ ಪಿ ತೇಜರಾಜು.
             


 ಇಷ್ಟು ದಿನವಾದರೂ ನಾನು ಕೂಡ ಈ ವಿಷಯಗಳ ಬಗ್ಗೆ ಗ್ರಹಿಸಿಯೇ ಇರಲಿಲ್ಲ ಕೋಟ್ಯಂತರ ರೂಪಾಯಿಗಳ ವ್ಯವಹಾರವನ್ನು ನಡೆಸುವ ಮಾನವ ಕೆಲವೇ ನಿಮಿಷಗಳಲ್ಲಿ ಮೂಟೆಗಟ್ಟಲೆ ಹಣವನ್ನು ಎಣಿಸುವುದರಲ್ಲಿ ನಿಸ್ಸೀಮನಾಗಿದ್ದ ಆದರೆ ತಾನು ಈ ಭೂಮಿಯ ಮೇಲೆ ಎಷ್ಟು ದಿನಗಳು ಬದುಕಬಹುದೆಂದು ಅಂದಾಜಿಸುವುದುರಲ್ಲಿ ಸೋತಿದ್ದಾನೆ.
  ನಮ್ಮ ಪ್ರಾಚಾರ್ಯರೊಬ್ಬರು ಬರೆದಿದಂತಹ "ಹೀಗೊಂದು ಆಯಸ್ಸಿನ ಲೆಕ್ಕಾಚಾರ" ಎಂಬ ಅಂಕಣವನ್ನು ಓದುವ ಮೊದಲು ಮಾನವ ಕಡಿಮೆ ಎಂದರು ಒಂದು ಲಕ್ಷ ದಿನವಾದರೂ  ಬದುಕಬಹುದೆಂದು ಅಂದಾಜಿಸಿದ್ದೆ ನನ್ನ ಲೆಕ್ಕಾಚಾರದಂತೆ ಮಾನವನೇನಾದರೂ ಲಕ್ಷದಿನ  ಬದುಕಿದರೆ ಅವನ ಆಯಸ್ಸು 274 ವರ್ಷಗಳಾಗಿರುತ್ತದೆ. ಲೆಕ್ಕ ತಿಳಿದು ಗಾಬರಿಯಾಗಿದ್ದರು ಮಾನವ ಕನಿಷ್ಠಪಕ್ಷ ಒಂದು ಲಕ್ಷ ದಿನವೂ ಬದುಕುವುದಿಲ್ಲವಲ್ಲ ಎಂದು ಬೇಸರವಾಯಿತು.

 ಅಂಕಣದಲ್ಲಿಯೇಇರುವಂತೆ ಮಾನವ 70 ವರ್ಷ ಬದುಕಿದ್ದರೆ ಅವನು 25,550 ದಿನಗಳನ್ನು ಕಳೆದಿರುತ್ತಾನೆ. ಇದರಲ್ಲಿ 8517 ದಿನಗಳನ್ನು ನಿದ್ದೆಯಲ್ಲಿ, 6388 ದಿನಗಳು ತನ್ನ ಕೆಲಸಗಳಲ್ಲಿ, 6388 ದಿನಗಳನ್ನು ದಿನ ನಿತ್ಯಕರ್ಮಗಳಲ್ಲಿ, ಊಟ-ಉಪಚಾರಗಳಲ್ಲಿ, ಸ್ನೇಹಿತರು, ಕುಟುಂಬದವರೊಂದಿಗೆ, ಟಿವಿ ಅಥವಾ ಮೊಬೈಲ್ಗಾಗಿ ಕಳೆದು ಹೋಗುತ್ತದೆ ಇಷ್ಟೆಲ್ಲವನ್ನು ಕಳೆದು ತನಗಾಗಿ ಉಳಿಯುವುದು ಕೇವಲ 4258 ದಿನಗಳು ಅಂದರೆ ಸರಾಸರಿ ದಿನಕ್ಕೆ ನಾಲ್ಕು ಗಂಟೆಗಳು ಮಾತ್ರ.

  ಕೆಲವರು ತನಗಾಗಿಯೇ ಉಳಿದ  4258 ದಿನಗಳನ್ನು ಸಮಾಜದಲ್ಲಿ ತನ್ನ ಹೆಸರನ್ನು ಸಂಪಾದಿಸಲು, ತನ್ನ ಅಸ್ತಿತ್ವವನ್ನು ಉಳಿಸಬೇಕೆಂದು ಬಹಳ ಪ್ರಯತ್ನಗಳನ್ನು ನಡೆಸುತ್ತಾನೆ. ಸೂಕ್ಷ್ಮವಾಗಿ ಗಮನಿಸಿದರೆ ಎಷ್ಟೋ ಮನೆಗಳಲ್ಲಿ ಅವರ ಅಜ್ಜಿ ತಾತಂದಿರ ಕುರುಹೇ ಇರುವುದಿಲ್ಲ ತಾತ ಮುತ್ತಾತಂದಿರುಗಳ ಹೆಸರೇ ನೆನಪಿರುವುದಿಲ್ಲ.

  ಇನ್ನು ಕೆಲವರು ತಮಗಾಗಿಯೇ ಸಿಗುವಂತಹ ಈ ಸುಸಂದರ್ಭವನ್ನು ಬಹಳ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮುಖಾಂತರ ಸದುಪಯೋಗಪಡಿಸಿಕೊಳ್ಳುತ್ತಾರೆ. ಪ್ರತಿಯೊಬ್ಬ ವ್ಯಕ್ತಿಗಳು ಬೆಳೆದಂತಹ ಪೂರಕ ವಾತಾವರಣ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಿಭಿನ್ನವಾಗಿರುವುದರಿಂದ ಅವರವರ ಆಸಕ್ತಿಗಳು ಕೂಡ ಬದಲಾಗುತ್ತಾ ಹೋಗುತ್ತವೆ. ಕೆಲವರು ಪುಸ್ತಕಗಳನ್ನು ಓದುವುದರಲ್ಲಿ ತೊಡಗಿಸಿಕೊಂಡರೆ ಇನ್ನು ಕೆಲವರು ಬರಹದಲ್ಲಿ, ಮತ್ತೊಬ್ಬರು ಕ್ರೀಡೆಯಲ್ಲಿ, ಮಗದೊಬ್ಬರು ಕೃಷಿಯಲ್ಲಿ ಹೀಗೆ ನಾನಾ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.
 ಪ್ರತಿಯೊಂದು ಕ್ಷೇತ್ರದಲ್ಲಿ ಮುಳುಗುತ್ತಾ ಹೋದಷ್ಟು ಅದರ ಆಳ ಆಗಲ ಇನ್ನಷ್ಟು ವಿಸ್ತಾರವಾಗುತ್ತಾ ಹೋಗುತ್ತದೆ. ಹೀಗೆ ಇಷ್ಟೆಲ್ಲಾ ಆಸಕ್ತಿಗಳಲ್ಲಿ ಪುಸ್ತಕ ಬರೆಯುವವರು ಹಾಗೂ ಓದುವರ ಸಂಖ್ಯೆ ಬಹಳ ವಿಶಾಲವಾಗಿದೆ. ಅನೇಕ ಕಾರಣಗಳಿಂದ ಓದುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾದರೂ ಬರೆಯುವವರ ಸಂಖ್ಯೆಯಲ್ಲೇನು ಕಡಿಮೆ ಎಂದೆನಿಸಲಿಲ್ಲ.

 ಈ ಬರವಣಿಗೆಯಲ್ಲಿ ಬಹಳ ಪ್ರಕಾರಗಳು ಇದ್ದರೂ ಕೂಡ ಬರಹಗಾರರು ತಾವು ಹೇಳಬೇಕಾದಂತಹ ವಿಷಯಗಳನ್ನು  ಓದುಗರ ದೃಷ್ಟಿಕೋನದಲ್ಲಿಇಟ್ಟುಕೊಂಡು ಅವರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಲೆತ್ನಿಸುತ್ತಾರೆ. ಎಷ್ಟೋ ಜನ ಬರಹಗಾರರು ಇಹಲೋಕವನ್ನು ತ್ಯಜಿಸಿದರು ಕೂಡ ಅವರು ಬರೆದಂತಹ ಪುಸ್ತಕಗಳು ಜನರ ಮನಸ್ಸಿನಲ್ಲಿ ಇಂದಿಗೂ ಕೂಡ ಜೀವಂತವಾಗಿದೆ ಇದರಿಂದಲೇ ಪುಸ್ತಕ ಮಹತ್ವ ಎಷ್ಟಿದೆ ಎಂದು ತಿಳಿದುಬರುತ್ತದೆ.

 ಪ್ರತಿಯೊಬ್ಬ ಪುಸ್ತಕ ಓದುಗನ ಅಭಿರುಚಿಗಳು ವಿಭಿನ್ನವಾಗಿರುವುದರಿಂದ ಕೆಲವರು ವೇದ-ಶಾಸ್ತ್ರ ಪುರಾಣಕ್ಕೆ ಸಂಬಂಧಿಸಿದ ಪುಸ್ತಕಗಳನ್ನು, ಕೆಲವರು ಪರಿಸರ ಸಂಬಂಧಿ ಪುಸ್ತಕಗಳನ್ನು, ಇನ್ನು ಕೆಲವರು ಕೃಷಿ ಸಂಬಂಧಿ, ಪ್ರಾಣಿ-ಪಕ್ಷಿಗಳಿಗೆ ಸಂಬಂಧಿಸಿದಂತೆ, ಹಾಗೂ ಕಥೆ-ಕಾದಂಬರಿ-ಕವನ ಆಧಾರಿತ ಪುಸ್ತಕಗಳನ್ನು, ಪ್ರಚಲಿತ ವಿದ್ಯಮಾನ ಆಧಾರಿತ, ಪಂಚಾಂಗ, ವಿಜ್ಞಾನ ಆಧಾರಿತ, ಪ್ರವಾಸಿ ಕಥನವಾಧಾರಿತ, ಯೋಗ, ಆಹಾರ ಪದ್ಧತಿ ಆಧಾರಿತ ಪುಸ್ತಕಗಳನ್ನು ಓದಲು ಇಚ್ಛೆಪಡುತ್ತಾರೆ.

 ಪುಸ್ತಕಲೋಕವೇ ಒಂದು ಮುದುಡದ, ಮಾಗದ, ಕೊನೆಇಲ್ಲದ ಲೋಕ. ಸಾಮಾನ್ಯವಾಗಿ ಓದುಗರದ್ದೆ ಒಂದು ಪ್ರಪಂಚವಾಗಿರುವುದರಿಂದ ತಮಗೆ ಸಮಯ ಸಿಕ್ಕಾಗ ಅಂದರೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಅಥವಾ ರಾತ್ರಿ ನಿದ್ದೆಗೆ ಜಾರುವ ಮುನ್ನ ತಮಗಿಷ್ಟವಾದ ಪುಸ್ತಕವನ್ನು ಓದಲು ಇಚ್ಛೆಪಡುತ್ತಾರೆ. ಕೆಲವರು ಒಂದೇ ಒಂದು ವಿಷಯದಲ್ಲಿ ಮುಳುಗಿ ಹೋಗಿದ್ದರೆ, ಇನ್ನು ಕೆಲವರು ವಿವಿಧ ಕ್ಷೇತ್ರಗಳಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಕುತೂಹಲದಲ್ಲಿ ಓದುತ್ತಾರೆ. ಯಾವುದೇ ವಿಷಯವಾಗಿರಲಿ ಅಥವಾ ಯಾವುದೇ ಪುಸ್ತಕವಾಗಿರಲಿ ಓದುವುದರಿಂದ ಜ್ಞಾನಾಭಿವೃದ್ಧಿ ಆಗುವುದರ ಜೊತೆಗೆ ಮನಸ್ಸಿಗೆ ಶಾಂತಿ ದೊರಕುವುದೇನಂತು ಸುಳ್ಳೇನಲ್ಲ.

 ಪುಸ್ತಕಗಳ ಮಹತ್ವ ಅಗಾಧವಾದದ್ದು ಮಾನವನ ವಿಕಸನದ ಬಗ್ಗೆಯಾಗಲಿ ಅಥವಾ ವೇದ ಶಾಸ್ತ್ರ ಪುರಾಣಗಳ ಬಗ್ಗೆಯೇ ತಿಳಿದುಕೊಳ್ಳಲು ಈ ಪುಸ್ತಕಗಳು ನೆರವು ಮಾಡಿಕೊಡುತ್ತವೆ. ಒಬ್ಬ ನೊಂದು-ಬೆಂದು ಜೀವನವೇ ಬೇಡ ಎನ್ನುವ ವ್ಯಕ್ತಿಗೂ ಕೂಡ ಸ್ಪೂರ್ತಿಯನ್ನು ನೀಡಿ ಮೇಲೆದ್ದು ಮುನ್ನಡೆಸುವ ಶಕ್ತಿಯನ್ನು ನೀಡುತ್ತದೆ. ಅದಕ್ಕೋಸ್ಕರವಾಗಿಯೇ ನಮ್ಮ ದೇಶದ ಅಪ್ರತಿಮ ವಿಜ್ಞಾನಿ ಅಬ್ದುಲ್ ಕಲಾಂರವರ ಹೇಳಿರುವುದು "ಒಂದು ಉತ್ತಮ ಪುಸ್ತಕ ನೂರು ಉತ್ತಮ ಸ್ನೇಹಿತರಿಗೆ ಸಮಾನವಾಗಿದೆ
ಆದರೆ ಒಬ್ಬ ಉತ್ತಮ ಸ್ನೇಹಿತ ಗ್ರಂಥಾಲಯಕ್ಕೆ ಸಮಾನ" ಎಂದು.


 ಒಮ್ಮೆ ಯೋಚಿಸಿ ನಮ್ಮ ಪೂರ್ವಜರೆಲ್ಲರೂ ಕೂಡ ಬರಿಗೈಯಲ್ಲೇ ಬಂದವರು. ಭೂಮಿತಾಯಿಯನ್ನು ನಂಬಿ ಜಮೀನುಗಳನ್ನು ನೋಡಿಕೊಂಡು, ಕಷ್ಟಪಟ್ಟು ತೋಟವನ್ನು ಮಾಡಿ, ಯಾವುದೇ ವಿಷವನ್ನು ಭೂಮಿಗೆ ಸೇರಿಸದೆ, ಹಬ್ಬ-ಹರಿದಿನ ಜಾತ್ರೆಗಳನ್ನು ಮಾಡಿಕೊಂಡು, ಕೊಯ್ಲು ಕಟಾವಾದ ಬಳಿಕ ಹರಿಕಥೆ, ಕೀರ್ತನೆ, ನಾಟಕ, ಯಕ್ಷಗಾನ, ಪುರಾಣ, ಭಜನೆಗಳನ್ನು ಮಾಡಿಕೊಂಡು ರಾಮಾಯಣ-ಮಹಾಭಾರತದಂತಹ ಪವಿತ್ರ ಪುಸ್ತಕಗಳನ್ನು ಓದಿಕೊಂಡು ಜ್ಞಾನಭಂಡಾರವನ್ನು ಇಮ್ಮಡಿಸಿ ಸಾವನ್ನು ಪ್ರೀತಿಯಿಂದ ಸ್ವಾಗತಿಸಿಕೊಂಡು ಪರಿಸರಕ್ಕೆ ಪೂರಕವಾಗಿ ಮಣ್ಣಲ್ಲಿ ಮಣ್ಣಾಗಿದ್ದಾರೆ. ನಿಜವಾದ ಸೌಂದರ್ಯ ಅಡಗಿರುವುದೆ ಈ ನಿಸರ್ಗ ಸ್ನೇಹಿ ಜೀವನದಲ್ಲಿ ಅಲ್ಲವೇ ? ಇದೆ ಅಲ್ಲದೆ ಜೀವನವೇ ಒಂದು ಸಾಧನೆ ಎಂದರೆ.

Saturday, May 30, 2020

ಸಾಧನೆ ಜೀವನದೊಳಗೋ? ಜೀವನ ಸಾಧನೆಯೋಳಗೋ ?


                          ಎಸ್ ಪಿ ತೇಜರಾಜು.

 ಕೆಲವು ಭೇಟಿ ನಮ್ಮನ್ನು ಮೂಕವಿಸ್ಮಯರನ್ನಾಗಿಸಿ ಬಿಡುತ್ತವೆ ಇಂತಹ ಸಂದರ್ಭದಲ್ಲಿ ಭೇಟಿಯಾದ ವ್ಯಕ್ತಿಗಳ ಮಾತುಗಳನ್ನು ಆಲಿಸುವುದೇ ನಮ್ಮ ಜವಾಬ್ದಾರಿಯುತ ಕೆಲಸವಾಗಿರುತ್ತದೆ. ಮಾತಿನ ಮಧ್ಯ ನಾವೇನಾದರೂ ಪ್ರವೇಶಿಸಿದರೆ ಅವರ ಲಕ್ಷ್ಯ ಇನ್ನಾವುದೋ ವಿಷಯಗಳಿಗೆ ತಿರುಗಿ ಮತ್ತೆ ಅದೇ ವಿಷಯಕ್ಕೆ ಬರಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಅಥವಾ ವಿಷಯ ಅಲ್ಲಿಗೆ ಮುಗಿದು ಹೋಗಬಹುದು ಇಂತಹ ಸಂದರ್ಭದಲ್ಲಿ ನಮ್ಮ ಮಾತುಗಳು ಮೌನವಾಗಿದ್ದರೆ ಒಳಿತು.


 ತ್ವರಿತಗತಿಯಲ್ಲಿ ನಮ್ಮ ಸುತ್ತಮುತ್ತಲಾಗುತ್ತಿರುವ ಅನೇಕ ಬದಲಾವಣೆಗಳೊಂದಿಗೆ ಹೊಂದಿಕೊಂಡು ಬೆಳೆದಂತಹ ನಾವೆಲ್ಲರೂ ಇದೆ ಜೀವನವೆಂದರಿತೀರುತ್ತೇವೆ. ನಗರದಿಂದ ಸ್ವಲ್ಪ ದೂರದ ಹಳ್ಳಿಗಳಿಗೆ ಹೋದ ಸ್ವಲ್ಪ ಹೊತ್ತಿನಲ್ಲಿಯೇ ಇಲ್ಲಿ ಕರೆಂಟ್ ಸರಿಯಾಗಿರುವುದಿಲ್ಲ, ಸ್ನೇಹಿತರು ಇಲ್ಲ, ಇಂಟರ್ನೆಟ್ ಕರೆಕ್ಟಾಗಿ ವರ್ಕ್ ಆಗೋಲ್ಲ, ಸರಿಯಾಗಿ ನೀರು ಕೂಡ ಬರುವುದಿಲ್ಲ ಎಂದು ನಾನಾ ಕಾರಣಗಳನ್ನು ಹೇಳಿ ಯಾವಾಗ ನಗರಕ್ಕೆ ಹಿಂದಿರುಗುತ್ತೇವೆ ಎಂದು ಯೋಚಿಸುವ ಈ ದಿನಗಳಲ್ಲಿ ನಗರದ ಗೋಜುಗಳನ್ನೆಲ್ಲವನ್ನುಬಿಟ್ಟು ದೂರದ ರಿಮೋಟ್ ಏರಿಯಾಗಳಲ್ಲಿ ಏಕಾಂಗಿಯಾಗಿ ನಿಸರ್ಗದೊಂದಿಗೆ ಬಾಳುವವರನ್ನು ಕಂಡಾಗ ಆಗುವುದು ಆಶ್ಚರ್ಯವಲ್ಲವೇ ಮತ್ತೇನು? ಇಂತಹ ವಿಶಿಷ್ಟ ವ್ಯಕ್ತಿಗಳ ಪರಿಚಯವನ್ನು ಅನೇಕ ಲೇಖಕರು ತಮ್ಮ ಪುಸ್ತಕಗಳಲ್ಲಿ ತಿಳಿಸಿದ್ದಾರೆ.


 ನಂಜನಗೂಡು ಚಾಮರಾಜನಗರ ಮಾರ್ಗದ ಒಂದು ಪುಟ್ಟ ಬಲ ರಸ್ತೆಯನ್ನುಹಿಡಿದು ಮೂರ್ನಾಲ್ಕು ಮೈಲಿ ಚಲಿಸಿದರೆ ಒಂದು ಪುಟ್ಟ ಹಳ್ಳಿ, ಬೆರಳೆಣಿಕೆಯಷ್ಟು ಮನೆಗಳು,ಇದೇ ಮಾರ್ಗದಲ್ಲಿ ಮುನ್ನಡೆದರೆ ಸುತ್ತಮುತ್ತಲು ಜಾಲಿ ಮರಗಳು, ಕುರುಚಲು ಗಿಡಗಳು ಬೆಳೆದಿರುವಂತಹ ಮರಳು,ಸುಣ್ಣದ ಕಲ್ಲುಮಿಶ್ರಿತ ಜಮೀನುಗಳು, ರಸ್ತೆಯೂ ಕೊನೆಯಾಗಿ ಕಾಲುದಾರಿಯ ಮುಖಾಂತರ ನಡೆದುಕೊಂಡು ಮುಂದೆ ಸಾಗುತ್ತಿದ್ದಂತೆ ಸುತ್ತಮುತ್ತಲು ಬೆಳೆದಿದಂತಹ ಕುರುಚಲು ಗಿಡಗಳು ಮೈ ಪರಚುತ್ತಿದ್ದವು, ಸುತ್ತಮುತ್ತಲು ಎಲ್ಲಿ ನೋಡಿದರೂ ಇದೇ ರೀತಿ ಗಿಡಗಳು ಬೆಳೆದಿರುವಂತಹ ಜಮೀನುಗಳು. ಇಲ್ಲಿ ಕೃಷಿ ಮಾಡಬಯಸುವವರಿಗೆ ಒಂದಿಲ್ಲ ಒಂದು ರೀತಿಯಾದಂತಹ ಉಪಟಳಗಳು ಸಹಜವಾಗಿಯೇ ಇದ್ದವು ಒಮ್ಮೆ ಕಾಡುಹಂದಿಗಳ ಕಾಟವಾದರೆ, ಮತ್ತೊಮ್ಮೆ ತೋಳಗಳ ಕಾಟ, ಮಗದೊಮ್ಮೆ ನವಿಲು ಜಿಂಕೆಗಳು ಹಾಕಿದ ಬೆಳೆಯನ್ನುತಿಂದು ಮುಗಿಸುತ್ತಿದ್ದವು.

 ಇಷ್ಟೆಲ್ಲಾ ಉಪಟಳಗಳಿರುವ ಈ ಭೂಮಿಯಲ್ಲಿ ಬೆಳೆ ಬೆಳೆದರೂ ಸರಿಯಾಗಿ ಬೆಲೆ ಸಿಗದ ಕಾರಣ ಇಲ್ಲಿಯ ಜನ ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ಮಾರಿಕೊಂಡು ಅನೇಕರು ನಗರವನ್ನು ಸೇರಿದರು. ಇವೆಲ್ಲವೂ ನಿಸರ್ಗಸಹಜ ಎಂದರಿತು ತನ್ನ ಜೀವನದಲ್ಲೊಂದು ತೋಟವನ್ನು ಮಾಡಲೇಬೇಕೆಂಬ ಆತ್ಮವಿಶ್ವಾಸದಲ್ಲಿ ಇಂದಿಗೂ ಏಕಾಂಗಿಯಾಗಿ ಹಗಲಿರುಳೆನ್ನದೆ ಶ್ರಮವಹಿಸಿ ತೋಟವನ್ನು ಮಾಡುತ್ತಿದ್ದಂತಹ ವಯೋವೃದ್ಧರನ್ನು ಕಂಡಾಗ ನಮಗೆ ಆಶ್ಚರ್ಯವಾಯಿತು.


 ಒಣಕಲು ದೇಹ, ಬಿಳಿಯ ಕೂದಲು, ಕಪ್ಪು ಮೈಬಣ್ಣ, ಮುರಿದ ಹಲ್ಲುಗಳು, ಯಾವುದೋ ಒಂದು ಮಾಸಿದ ಹಸಿರು ಬಣ್ಣದ ಟೀ-ಶರ್ಟು, ಖಾಕಿ ಚಡ್ಡಿಯ ಜೇಬಿನಲ್ಲಿ ಒಂದು ಕಟ್ಟು ಬೀಡಿ,ಬೆಂಕಿ ಪಟ್ಟಣವನ್ನುಇಟ್ಟುಕೊಂಡಿದ್ದಂತಹ ವ್ಯಕ್ತಿಯು ತಾವು  ಬೆಳೆಸಿದಂತಹ ಗಿಡಗಳಿಗೆ ನೀರುಣಿಸುವ ಕಾಯಕದಲ್ಲಿ ಮಗ್ನರಾಗಿದ್ದರು ನಮ್ಮ ಬರುವಿಕೆಯನ್ನು ದೂರದಿಂದಲೇ ಗುರುತಿಸಿ ಹತ್ತಿರಕ್ಕೆ ಬಂದು ಮಾತನಾಡಿಸಿದರು, ನಾವು ಬಂದ ಕಾರಣವೇನೋ ಅವರಿಗೆ ತಿಳಿಯಿತಾದರೂ ಏಕಾಂಗಿಯಾಗಿ ತಾವೇನು ಮಾಡುತ್ತಿದ್ದೀರಿ ಎಂದಿದ್ದಕ್ಕೆ ಸ್ವಲ್ಪದೂರದಲ್ಲೇ ತಾವು ಬೆಳೆಸಿದಂತಹ ತೋಟಕ್ಕೆ ಕರೆದುಕೊಂಡು ಹೋದರು.

 ತೆಂಗಿನಗರಿಗಳಿಂದ ನಿರ್ಮಿಸಿದಂತಹ ಪುಟ್ಟ ಗುಡಿಸಲು, ಯಾರ ಸಹಾಯವೂ ಇಲ್ಲದೆ ತಮ್ಮ ಅಡುಗೆಯನ್ನು ತಾವೇ ಮಾಡಿಕೊಳ್ಳುತ್ತಾರೆ,   ಸಾಕಿದಂತಹ ಎರಡು ಕರು ಹಾಗೂ ಒಂದು ಹಸುವಿಗೆ ಹುಲ್ಲನ್ನು ತಾನೇ ಬೆಳೆದುಕೊಳ್ಳುತ್ತಾರೆ, ಇವರೊಟ್ಟಿಗೆ ತೋಟವನ್ನೂ ರಕ್ಷಿಸುವ ಕಾಯಕದಲ್ಲಿ ಎರಡು ನಾಯಿಗಳು ಕೂಡ ಸದಾ ಶ್ರಮಿಸುತ್ತಿವೆ. ಸರಿಯಾಗಿ ಸಂಜೆ 6 ಗಂಟೆಯ ಹೊತ್ತಿಗೆ ಕರೆಂಟ್ ಬಂದ್ ಆಗುತ್ತದೆ ಸೀಮೆಎಣ್ಣೆಯ ದೀಪವೋ ಅಥವಾ ಕ್ಯಾಂಡಲ್ ಅನ್ನು ಬೆಳಕಿಗಾಗಿ ಉಪಯೋಗಿಸಿಕೊಳ್ಳುತ್ತಾರೆ. ರಾತ್ರಿ ಯಾವುದಾದರೂ ಕಾಡುಪ್ರಾಣಿಗಳು ತೋಟವನ್ನು ನುಗ್ಗಿದಾಗ ಟಾರ್ಚ್ ಹಿಡಿದು ನಾಯಿಗಳೊಂದಿಗೆ ಅವುಗಳನ್ನು ಓಡಿಸುವ ಕಾಯಕದಲ್ಲಿ ಮಗ್ನರಾಗುತ್ತಾರೆ. ಮರುದಿನ ಎಂದಿನ ಕಾಯಕದಂತೆ ಸೂರ್ಯ ಉದಯಿಸುವುದರೊಳಗೆ ಎದ್ದು ತಮ್ಮ ಕಾಯಕದಲ್ಲಿ ಮಗ್ನರಾಗುತ್ತಾರೆ. ಪ್ರತಿಬಾರಿಯೂ ಬಿದ್ದ ಸ್ವಲ್ಪ ಮಳೆಯಲ್ಲಿಯೇ ದ್ವಿದಳ ಧಾನ್ಯಗಳನ್ನು ಬೆಳೆಯುವುದರೊಟ್ಟಿಗೆ ತೆಂಗು, ಬಾಳೆ, ನುಗ್ಗೆ, ಹೆಬ್ಬೇವು, ಕರಿಬೇವು, ಹೀಗೆ ನಾಲ್ಕಾರು ತರಹದಂತಹ ಮರಗಳು, ಕಾಳು ತರಕಾರಿಗಳನ್ನು ಬೆಳೆದುಕೊಂಡು ಹಾಯಾಗಿದ್ದೇನೆ ಎಂದು ಹೇಳುತ್ತಾರೆ. ನನಗೇನು ಹೊರಗಿನವರ ಚಿಂತೆಯಾಗಲಿ, ತಂಟೆ ತಕರಾರುಗಳು ಏನೂ ಇಲ್ಲ, ಕಾಡು ಪ್ರಾಣಿಗಳಿಂದಲೇನೋ ನನಗೇನು ಉಪಟಳ ಎಂದೆನಿಸಲಿಲ್ಲ ಏಕೆಂದರೆ ಅದು ನಿಸರ್ಗಸಹಜ ನಾವು ಅದರೊಟ್ಟಿಗೆ ಬಾಳಬೇಕು. ಮಾನವನ ಆರೋಗ್ಯದ ರಹಸ್ಯ ಈ ನಿಸರ್ಗದಲ್ಲೇ ಅಡಗಿದೆ ಅದನ್ನ ನಾವು ಅರಿಯಬೇಕಷ್ಟೇ. ನಗರದ ಜೀವನಕ್ಕೆ ಅಂಟಿಕೊಂಡಿರುವಂತಹ ಮಕ್ಕಳು ನಗರಕ್ಕೆ ಬರುವಂತೆ ಒತ್ತಾಯಿಸಿದ್ದು ಬಹಳಷ್ಟು ಸಾರಿ ನಡೆದಿದೆ ಆದರೆ ನನ್ನ ಆತ್ಮವೆಲ್ಲವೂ ಇದೆ ಜಮೀನಿನಲ್ಲಿ ಅಡಗಿದೆಯೆಂದು ಹೇಳಿ ಹಿಂದಿರುಗಿ ಕಳುಹಿಸಿದ್ದಿದೆ.


 ಹೀಗೆ ನಮ್ಮ ನಡುವೆ ಸಾವಿರಾರು ಜನ ಎಲೆಮರೆಯ ಕಾಯಿಗಳಂತೆ ನಿಸರ್ಗದೊಂದಿಗೆ ಬದುಕಿದ್ದಾರೆ ಹಾಗೂ ಇಂದಿಗೂ ಕೂಡ ಜೀವನ ನಡೆಸುತ್ತಿದ್ದಾರೆ. ಪ್ರಪಂಚದ ಜಂಜಾಟಗಳಿಂದ ದೂರವುಳಿದು ಸುಖ ಜೀವನವನ್ನು ನಡೆಸುತ್ತಿದ್ದಾರೆ. ಇಂತಹ ಅನೇಕ ಜನರ ಉದ್ದೇಶವೆಲ್ಲವು ಒಂದೇ ಅದುವೇ ಪರಿಸರದೊಂದಿಗೆ ಸುಖ ಜೀವನ ನಡೆಸುವುದಾಗಿದೆ.


  ಒಂದು ಲಕ್ಷಕ್ಕೂ ಮಿಗಿಲಾದ ಮರಗಳನ್ನು ಬೆಳೆಸಿದಂತಹ ವೃಕ್ಷಮಾತೆ ತುಳಸಿ ಗೌಡರವರೆ ಆಗಿರಲಿ, ರಸ್ತೆಯ ಬದಿ ಸಾವಿರಾರು ಮರಗಳನ್ನು ನೆಟ್ಟು ಬೆಳೆಸಿದಂತಹ ಸಾಲುಮರದ ತಿಮ್ಮಕ್ಕನವರೇ ಆಗಿರಲಿ, ತಮ್ಮ ಜೀವನವನ್ನೇ ಪರಿಸರಕೆಂದು ಮುಡಿಪಾಗಿಟ್ಟಂತಹ ಸುಂದರ್ ಲಾಲ್ ಬಹುಗುಣ ರವರೆ ಆಗಿರಲಿ, ಮಜೂಲಿ ದ್ವೀಪದಲ್ಲಿ 1360 ಎಕರೆ ಕಾಡನ್ನು ನಿರ್ಮಿಸಿದಂತಹ ಜಾದವ್ ಅವರೇ ಆಗಿರಲಿ, ನಮ್ಮ ಪಕ್ಕದ ವಿರಾಜಪೇಟೆಯಲ್ಲಿ 300 ಎಕರೆ ಪ್ರದೇಶದಲ್ಲಿ SAI SANCTUARY ಎಂಬ ಕಾಡನ್ನು ನಿರ್ಮಿಸಿದಂತಹ ದಂಪತಿಗಳೇ ಆಗಿರಲಿ, ಹೀಗೆ ಸಾವಿರಾರು ಮಂದಿ ತಮ್ಮನ್ನು ತಾವು ನಿಸರ್ಗಕ್ಕೆ ಸಮರ್ಪಿಸಿಕೊಂಡಿದ್ದಾರೆ. ಇವರುಗಳು ತಾವು ಮಾಡಿದ ಕಾರ್ಯಗಳೆಲ್ಲವು ಸಾಧನೆ ಆಗಬೇಕೆಂದು ಮಾಡಿದವರಲ್ಲ ಬದಲಿಗೆ ತಮ್ಮ ಕಾಯಕವನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡಿದ್ದಾರೆ. ಇಂತಹ ಅನೇಕ ಮಹನೀಯರನ್ನು ಗುರುತಿಸಿ ಸರಕಾರವು ಪದ್ಮಶ್ರೀಯಂತಹ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಪ್ರಶಸ್ತಿಗಳಿಗೆ ಭಾಜನರಾಗಿದ್ದರು ಸ್ವಲ್ಪವೂ ಗರ್ವ ದರ್ಪಗಳಿಲ್ಲ ಇವರುಗಳೆಲ್ಲರೂ ಬಹಳ ಮುಗ್ಧ ಜನರು. ಸದಾ ಮುಖದಲ್ಲಿ ಮುಗುಳ್ನಗೆಯನ್ನು ಬೀರುತ್ತ ಹಸನ್ಮುಖಿಗಳಾಗಿದ್ದಾರೆ.


 ಹಾಗಾದರೆ ಹೀಗೊಮ್ಮೆ ಯೋಚಿಸಿ ಇವರೆಲ್ಲರೂ ತಾವು ಮಾಡಿದ ಕಾಯಕವನ್ನು ಸಾಧನೆಯಾಗಬೇಕೆಂದು ಮಾಡಿದರೆ? ಇಲ್ಲವಲ್ಲ ಒಟ್ಟಿನಲ್ಲಿ ಸಾಧನೆಆಗಿದ್ದಂತೂ ಸತ್ಯವಲ್ಲವೇ? ಹೀಗೆ ನಾವು ಮಾಡಿದಂತಹ ಕಾರ್ಯಗಳೆಲ್ಲವೂ ಸಾಧನೆ ಆಗಬೇಕೆಂಬ ಆಲೋಚನೆಯನ್ನು ಮನಸ್ಸಿನಿಂದ ತೆಗೆದುಹಾಕಿ ಈ ಬಾರಿಯ ವಿಶ್ವ ಪರಿಸರ ದಿನಕ್ಕೆ ನಾವೆಲ್ಲರೂ ನಮ್ಮ ಸಾಮರ್ಥ್ಯಕ್ಕೆ ತಕ್ಕಷ್ಟು ಗಿಡಗಳನ್ನು ನೆಡೋಣ ಹಾಗೂ ಈ ಕೆಲಸವನ್ನು ಕೇವಲ ಪರಿಸರ ದಿನಕ್ಕೆ ಮಾತ್ರ ಸೀಮಿತಗೊಳಿಸದೆ ಪ್ರತಿ ಮಾಸವು ನಮ್ಮ ಕೈಲಾದಷ್ಟು ಗಿಡಗಳನ್ನು ಬೆಳೆಸೋಣ. ಪ್ರತಿಯೊಬ್ಬರೂ ಒಂದೊಂದು ಗಿಡದಂತೆ ನಮ್ಮ ದೇಶದಲ್ಲಿ ನೆಟ್ಟಿದ್ದೇ ಆದರೆ ಒಟ್ಟು136 ಕೋಟಿ ಗಿಡಗಳಾಗುತ್ತದೆ ಇದೇ ರೀತಿ ಇಷ್ಟು ಪ್ರಮಾಣದ ಗಿಡಮರಗಳನ್ನು ಬೆಳೆಸಿದ್ದೆ ಆದರೆ ಮುಂದಿನ 10-15 ವರ್ಷಗಳಲ್ಲಿ ಇಂದು ಅಕಾಲಿಕವಾಗಿ ಬೀಳುತ್ತಿರುವ ಮಳೆ ಸಕಾಲಕ್ಕೆ ಬೀಳುವಂತೆ ಮಾಡಬಹುದಾಗಿದೆ. ಇದರಿಂದ ದೇಶವು ಸುಭಿಕ್ಷವಾಗಿರುತ್ತದೆ ಅದಕ್ಕೋಸ್ಕರವಾದರೂ ನಾವು ಪರಿಸರವನ್ನು ರಕ್ಷಿಸಬೇಕು ಏಕೆಂದರೆ ಪರಿಸರ ಸದಾ ನಮ್ಮನ್ನು ರಕ್ಷಿಸುತ್ತದೆ.


ಎಲ್ಲರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು.

Saturday, May 23, 2020

ನಾವು ಬದಲಾವಣೆಯೊಳಗೋ? ಬದಲಾವಣೆ ನಮ್ಮೊಳಗೋ ?

                     
                        ಎಸ್ ಪಿ ತೇಜರಾಜು.


 ಮಾನವನೆ ಹೀಗೆ ತನ್ನ ಮೂಗಿನ ನೇರಕ್ಕೆ ಏನು ಗೋಚರಿಸುತ್ತದೆ ಅದನ್ನೇ ಸತ್ಯವೆಂದರಿತಿರುತ್ತಾನೆ. ಹೀಗಾಗಿ ಪ್ರತಿಯೊಬ್ಬ ವ್ಯಕ್ತಿಯ ಅಭಿಪ್ರಾಯಗಳು ಮತ್ತೊಬ್ಬರಿಗಿಂತ ವಿಭಿನ್ನವಾಗಿರುತ್ತದೆ ಏಕೆಂದರೆ ಪ್ರತಿಯೊಬ್ಬರೂ ಕೂಡ ಬೆಳೆದಂತಹ ಪೂರಕ ವಾತಾವರಣ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಿಭಿನ್ನವಾಗಿರುತ್ತದೆ.

 ಬದಲಾವಣೆಯೇ ಜಗದ ನಿಯಮವೆಂಬಂತೆ ಭೂಮಿಯು ಸಹ ಮಾನವನ ಉಗಮಕ್ಕೆ ಬೇಕಾದಂತಹ ಪೂರಕ ವಾತಾವರಣವನ್ನು ಸೃಷ್ಟಿಸಿಕೊಳ್ಳಲು ಸುಮಾರು 200 ಕೋಟಿ ವರ್ಷಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅಂದಾಜಿಸಲಾಗಿದೆ ಹೀಗಾಗಿ ಭೂಮಿಗೆ ಇಂದು
460ಕೋಟಿ ವರ್ಷ ವಯಸ್ಸಾಗಿದೆ ಎಂದು ನಿರ್ಧರಿಸಲಾಗಿದೆ.

 ಇಷ್ಟೆಲ್ಲಾ ನಿಧಾನಗತಿಯಲ್ಲಿ ಸಾಗಿದೆ ಬದಲಾವಣೆ ಮಾನವನುಗಮವಾದಗಲಂತೂ ಮಾನವನ ನಡವಳಿಕೆಯೊಂದಿಗೆ ಪರಿಸರಕ್ಕೂ ಕೂಡ  ತ್ವರಿತಗತಿಯ ಬದಲಾವಣೆ ಸಿಕ್ಕಿತು. ಮಾನವನ ಉಗಮ, ನಾಗರಿಕತೆಯ ಬೆಳವಣಿಗೆ, ರಾಜರ ಆಳ್ವಿಕೆ, ಬಹಳ ದೊಡ್ಡ ಇತಿಹಾಸವನೊಂದಿದ್ದರು ಇದಾದ ಬಳಿಕ ಅಂದರೆ ಇಂದಿನಿಂದ ಸುಮಾರು ಐದು ಶತಮಾನಗಳ ಹಿಂದಿನಿಂದಲಂತು ಮಾನವನ ಇತಿಹಾಸದಲ್ಲಿ ಕಂಡರಿಯದಂತಹ ಆವಿಷ್ಕಾರಗಳು ನಡೆದಿವೆ ಅವುಗಳಲ್ಲಿ ಪ್ರಮುಖವೆಂದರೆ :

1.1712 ರಲ್ಲಿ Thomus Newcomen ಹಬೇ ಯಂತ್ರವನ್ನು(Steam engine) ಆವಿಷ್ಕರಿಸಿದರು.

2.1750 ರಲ್ಲಿ Benjamin Fraklin  ವಿದ್ಯುತ್ ಶಕ್ತಿಯನ್ನು(Electricity) ಆವಿಷ್ಕರಿಸಿದರು.

3.1766 ರಲ್ಲಿ Jacob Christin Schaefer ವಾಷಿಂಗ್ ಮಷೀನ್(washing machine) ಅನ್ನು,

4.1805 ರಲ್ಲಿ Oliver Evans ರೆಫ್ರಿಜರೇಟರ್( Refrigerator) ಅನ್ನು,

5.1820 ರಲ್ಲಿ Baron karlvon Drais  ಮೋಟಾರ್ ವೆಹಿಕಲ್ ಅನ್ನು,

6.1836 ರಲ್ಲಿ Charles Babbage  ಗಣಕಯಂತ್ರವನ್ನು(computer),

7.1840 ರಲ್ಲಿ Alexander wollcott  ಕ್ಯಾಮರಾವನ್ನು(camera) ,

8.1873 ರಲ್ಲಿ Montgolfier Brothers ಹಾಟ್ ಏರ್ ಬಲೂನ್ (Hot air balloon) ಅನ್ನು,

9.1876 ರಲ್ಲಿ Alexander grahambell  ಫೋನನ್ನು(Phone)

10.1879 ರಲ್ಲಿ Thomas Edison ಬಲ್ಪನ್ನು(Bulb),

11.1895 ರಲ್ಲಿ Guglilmo Marconic  ರೇಡಿಯೋವನ್ನು(Radio),

12.1902 ರಲ್ಲಿ Willis Carrier - AC ಏರ್ ಕಂಡೀಶನರ್ ನ್ನು,

13.1903 ರಲ್ಲಿ Right brother ವಿಮಾನವನ್ನು,

14.1920 ರಲ್ಲಿ Philo T Farnsworth- TV (Television)ಆವಿಷ್ಕರಿಸಿದರು.

15.1957 ರಲ್ಲಿ ಪ್ರಥಮ ಮಾನವ ನಿರ್ಮಿತ ಉಪಗ್ರಹವನ್ನು ಕಕ್ಷೆಗೆ ಸೇರಿಸಲಾಯಿತು.

 ಇಷ್ಟೆಲ್ಲಾ ಆವಿಷ್ಕಾರಗಳು ನಡೆದ ಬಳಿಕವಂತೂ ಪ್ರತಿ  ಕ್ಷೇತ್ರಕ್ಕೂ ಮತ್ತಷ್ಟು ಪುಷ್ಟಿ ಸಿಕ್ಕಿದಂತಾಯಿತು ಇದರಿಂದಾಗಿ ಮಂಗಳಯಾನದಂತಹ ಬಾಹ್ಯಾಕಾಶ ಯೋಜನೆಗಳು ಹಾಗೂ 400 ಕಿಲೋಮೀಟರ್ ಗಂಟೆಗೆ ಓಡಬಲ್ಲ ಬುಲೆಟ್ ರೈಲುಗಳು ಆವಿಷ್ಕಾರಗೊಂಡವು.

 ಎಲ್ಲರಿಗೂ ನೆನಪಿರಬಹುದು ನಮ್ಮ ಶಾಲಾ ಶಿಕ್ಷಕರು ಪಾಠವನ್ನು ಹೇಳಿಕೊಡುವುದರೊಟ್ಟಿಗೆ ಪ್ರಚಲಿತ ವಿದ್ಯಮಾನಗಳ ಬಗ್ಗೆಯೂ ಹಾಗೂ ಪಾಶ್ಚಿಮಾತ್ಯ ದೇಶಗಳಲ್ಲಿ ಇದ್ದಂತಹ ಕೆಲವು ಪದ್ಧತಿಗಳ ಬಗ್ಗೆಯೂ ಹೇಳಿಕೊಡುತ್ತಿದ್ದರು. ಮನೆಯಲ್ಲಿಯೇ ಕುಳಿತುಕೊಂಡು ನಮಗೆ ಬೇಕಾದಂತಹ ಪದಾರ್ಥಗಳನ್ನು ಆರ್ಡರ್ ಮಾಡುವುದರ ಮೂಲಕ ಮನೆಯ ಬಾಗಿಲಿಗೆ ತರುಹಿಸಿಕೊಳ್ಳಬಹುದು ಎಂದು ಹೇಳಿದಾಗ ನಮಗೆ ಆಶ್ಚರ್ಯವಾಗಿದ್ದು ಉಂಟು ಆದರೆ ನೋಡಿ ಈ ಎಲ್ಲಾ ಪದ್ಧತಿಗಳನ್ನು ನಮ್ಮ ತಲೆಮಾರಿನಲ್ಲಿ ನೋಡಿದ್ದಾಗಿದೆ.

 ಕೈಯಲ್ಲೊಂದು ಪುಟ್ಟ ಫೋನ್ ಇದ್ದರೆ ಸಾಕು ಇಡೀ ಪ್ರಪಂಚದ ಮೂಲೆ ಮೂಲೆಯಲ್ಲಿ ನಡೆಯುತ್ತಿರುವ  ಪ್ರಚಲಿತ ವಿದ್ಯಾಮಾನಗಳಬಗ್ಗೆ ನಾವು ಕುಳಿತಿರುವ ಜಾಗದಲ್ಲಿಯೇ ತಿಳಿದುಕೊಳ್ಳುವಷ್ಟು ಮಾಹಿತಿ ಸುಲಭವಾಗಿದೆ. ನಮ್ಮ ತಲೆಮಾರಿನಲ್ಲಿ ಕಂಡ ಕೆಲವಷ್ಟು ಬದಲಾವಣೆಗಳೆಂದರೆ :

1.ಊಟಕ್ಕಾಗಿ ಹೋಟೆಲ್ ಹುಡುಕಿಕೊಂಡು ಹೋಗಬೇಕಾದಂತಹ ಪ್ರಮೇಯ ತಪ್ಪಿದೆ ನಾವು ಕುಳಿತ ಜಾಗದಲ್ಲಿಯೇ ಬೇಕಾದ ಆಹಾರವನ್ನು ತರಿಸಿಕೊಳ್ಳಬಹುದಾದಂತಹ ಅಪ್ಲಿಕೇಶನ್ಗಳು(Uber eats,Swiggy)ಬಂದಿದೆ.

2.ಮನೆಗೆ ಬೇಕಾದಂತಹ ಗೃಹೋಪಯೋಗಿ ಉಪಕರಣಗಳನ್ನು ತರಿಸಿಕೊಳ್ಳಬಹುದಾದಂತಹ
Tata cliq  ಅಪ್ಲಿಕೇಶನ್ ಗಳಿವೆ.

3. ಸರಳ ಪೇಮೆಂಟ್ ಗಾಗಿ Bheam app, Google pay, paytm ಗಳಿಗೆ.

4. ಪ್ರತಿಯೊಂದು ಬ್ಯಾಂಕ್ ಕೂಡ ತನ್ನ ಗ್ರಾಹಕರಿಗೆ ಇಂಟರ್ನೆಟ್ ಬ್ಯಾಂಕಿಂಗ್ ಅನ್ನು ಬಳಸಬಹುದಾದಂತಹ ಅವಕಾಶಗಳನ್ನು ನೀಡಿದೆ.

5. ಹೊರಗೆ ಓಡಾಡಲು Ola, Uber auto,Rapido Appಗಳಿವೆ. 

6. ನಮಗೆ ಬೇಕಾದಂತಹ ಪುಸ್ತಕಗಳನ್ನು Internetನ ಮೂಲಕ ಓದಬಹುದಾಗಿದೆ.

7. ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ತಿಳಿಯಲು ಅನೇಕ ಅಪ್ಲಿಕೇಶನ್( Gramasadak, Dishank,etc) ಗಳಿವೆ.

8. ಹವಾಗುಣಕ್ಕೆ ತಕ್ಕಂತೆ ಬೆಳೆ ಬೆಳೆಯಬಹುದಾದಂತಹ ಕೃಷಿ ಮಾಹಿತಿಗಾಗಿ ಕೃಷಿ ಕೈಪಿಡಿಯಂತಹ ಅಪ್ಲಿಕೇಶನ್ಗಳು ಬಹಳಷ್ಟಿವೆ.

9. ದೂರದ ಪ್ರವಾಸಿ ತಾಣಗಳ ಬಗ್ಗೆ ಸಮಗ್ರ ಮಾಹಿತಿ ನೀಡಲು ಬಹಳಷ್ಟು ಅಪ್ಲಿಕೇಶನ್ ಗಳಿವೆ.

10. ಪ್ರತಿಯೊಂದು ನ್ಯೂಸ್ ಚಾನಲ್ ರವರು ಅವರದೇ ಆದಂತಹ ನ್ಯೂಸ್ ಅಪ್ಲಿಕೇಶನ್ಗಳನ್ನು ಬಿಡುಗಡೆಗೊಳಿಸಿದ್ದಾರೆ.

11. ದೂರದ ವ್ಯಕ್ತಿಗಳನ್ನು ಹತ್ತಿರವಾಗಿರುವಂತೆ ಮಾಡಲು Facebook, whats app, Telegram, Hike ನಂತಹ ಸೋಶಿಯಲ್ ಮೀಡಿಯಾಗಳಿಗೆ.

12. ಕೋಟಿಗಟ್ಟಲೆ ವ್ಯವಹಾರವನ್ನು ನಡೆಸುವಂತಹ  ಬಿಸಿನೆಸ್ ಗಳು ಕೂಡ ತಮ್ಮ ಅಕೌಂಟನ್ನು Tally ಯಂತಹ ಸಾಫ್ಟ್ವೇರ್ ಗಳಲ್ಲಿ ಸ್ಟೋರ್ ಮಾಡಲಾಗುತ್ತದೆ.

13. ತಲುಪಬೇಕಾದಂತಹ ಪ್ರದೇಶದ ಮಾಹಿತಿಯನ್ನು ನಿಖರವಾಗಿ ನೀಡಿದ್ದಲ್ಲಿ  ನಾವು ಇರುವ ಪ್ರದೇಶದಿಂದ ತಲುಪಬೇಕಾದ ಪ್ರದೇಶಕ್ಕೆ ಇರುವ ಅಂತರವನ್ನು ನಿಖರವಾಗಿ ಹೇಳುವಂತಹ ಅಪ್ಲಿಕೇಶನ್ ಗಳಿವೆ.

 ಇವುಗಳೆಲ್ಲವೂ ಒಬ್ಬ ಅವಿದ್ಯಾವಂತರೂ ಕೂಡ ಬಳಸಬಹುದಾದಷ್ಟು ಸರಳವಾಗಿರುವುದರಿಂದ ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಗಳಿವೆ. ಈ ರೀತಿಯಾದಂತಹ ಬದಲಾವಣೆಗಳು ನಮ್ಮದೇ ಆದಂತಹ ಕೆಲಸಗಳನ್ನು ಸರಳಗೊಳಿಸಿರುವುದರಿಂದ ಪ್ರತಿಯೊಬ್ಬರು ಈ ಬದಲಾವಣೆಗಳೊಂದಿಗೆ ಹೊಂದಿಕೊಂಡಿದ್ದಾರೆ.

 ಇಷ್ಟೆಲ್ಲಾ ತ್ವರಿತಗತಿಯ ಬದಲಾವಣೆಗಳು ಮಾನವನಿಂದಾಗಿದ್ದರೂ ಕೂಡ ಪ್ರಕೃತಿಯಿಂದ ಮಾನವನು ಕಲಿಯಬೇಕಾಗಿರುವುದು ಬಹಳಷ್ಟಿದೆ.
 ನೂರಾರು ಕೋಟಿ ವರ್ಷಗಳಿಂದ ಬೆಳೆದು ನಿಂತಿರುವಂತಹ ಸಸ್ಯಸಂಪತ್ತು ಮಾನವನೆದುರೇ ಇದೆ. ನೂರಾರು ಅಡಿ ಎತ್ತರ, ಸಾವಿರಾರು ವರ್ಷಗಳು ಬದುಕಬಲ್ಲಂತಹ ದೈತ್ಯ ಮರಗಳು ಕೂಡ ನಮ್ಮ ಕಣ್ಣುಮುಂದೆಯೇ ಇದೆಯಲ್ಲವೇ? ಹಾಗಾದರೆ ಹೀಗೊಮ್ಮೆ ಯೋಚಿಸಿ ನಿಸರ್ಗದ ಬೆಳವಣಿಗೆಯೂ ಕೂಡ ನಮ್ಮ ಟೆಕ್ನಾಲಜಿಯಷ್ಟು ವೇಗದಲ್ಲಿಯೇ ಬೆಳೆಯಿತೇ? ಇಲ್ಲವಲ್ಲ  ತೋಟಗಾರಿಕೆಯಲ್ಲಿಯೂ ಕೂಡ ಅನೇಕ ಅನ್ವೇಷಣೆಗಳು ನಡೆದಿದ್ದು ಏಳು ವರ್ಷಗಳಾದ ಬಳಿಕ ಫಲಕೊಡಬೇಕಾದಂತಹ ತೆಂಗಿನ ಮರವನ್ನು ಇಂದು 4 ವರ್ಷಕ್ಕೆ ಕಾಯಿ ಬಿಡುವಂತೆ ಮಾಡಲಾಗಿದೆ ಆದರೆ ನಿಸರ್ಗದ ಅದ್ಭುತ ನೋಡಿ ಏನೇ ಟೆಕ್ನಾಲಜಿ ಮುಂದುವರೆದರು ಕೂಡ ಮರ ತನ್ನ ಬೆಳವಣಿಗೆಗೆ ನಾಲ್ಕು ವರ್ಷವನ್ನಾದರೂ ತೆಗೆದೇಕೊಳ್ಳುತ್ತದೆ ಅಲ್ಲವೇ? ಹೆಚ್ಚು ಆಹಾರ ಪದಾರ್ಥಗಳನ್ನು ಬೆಳೆದು ಹೆಚ್ಚು ಹಣ ಸಂಪಾದನೆ ಮಾಡಬೇಕೆಂಬ ಆಸೆಯಲ್ಲಿ ಭೂಮಿಗೆ ವಿಷ ಉಣಿಸಿದ್ದಾಗಿದೆ. ಮೇಲ್ನೋಟಕ್ಕೆ ಸರಿ ಎನಿಸಿದರೂ ಕೂಡ ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಿದೆ.

 ಬದಲಾವಣೆಗಳೊಂದಿಗೆ ಬದಲಾಗಬೇಕೆನ್ನುವುದೇನೋ ನಿಜ ಆದರೆ ದೊಡ್ಡ ಅಣೆಕಟ್ಟುಗಳನ್ನು ಕಟ್ಟಿ ಬೆಲೆಕಟ್ಟಲಾಗದ ಕಾಡುಗಳನ್ನು ಮುಳುಗಿಸಿ ಲಕ್ಷಾಂತರ ರೂಪಾಯಿಯ ಎಲೆಕ್ಟ್ರಿಸಿಟಿ ಪಡೆಯುವಂತಹ ಬದಲಾವಣೆಗಳು ಬೇಕೆ? ಹೆಚ್ಚುತ್ತಿರುವ ನಗರೀಕರಣದಿಂದ ಕೊಳಚೆ ನೀರನ್ನು ಕೆರೆಗಳಿಗೆ ಹರಿ ಬಿಡುತ್ತಿರುವುದು, ಕಸದ ರಾಶಿ ಬೆಟ್ಟದಷ್ಟುತ್ತರ  ಏರುತ್ತಿರುವುದು, ಸುತ್ತಮುತ್ತಲ ಕೃಷಿಯಾಧಾರಿತ ಜಮೀನುಗಳನ್ನು ಲೇಔಟ್ ಗಳಾಗಿ ಪರಿವರ್ತಿಸುತಿರುವಂತಹ ಬದಲಾವಣೆಗಳು ಬೇಕೆ? ಮನೋರಂಜನೆಗಾಗಿ ಇರುವ ಕಾಡುಗಳನ್ನು ಕಡಿದು ರೆಸಾರ್ಟ್ ಗಳಾಗಿ ಪರಿವರ್ತನೆಗೊಳ್ಳುತ್ತಿದೆಯಲ್ಲ ಇಂತಹ ಬದಲಾವಣೆಗಳು ಬೇಕೆ? ಕಾರ್ಖಾನೆಗಳು ಹೊರಸೂಸುತ್ತಿರುವಂತಹ ವಿಷಾನಿಲಗಳು ವಾತಾವರಣದಲ್ಲಿ ಬೆರೆತು ಆಮ್ಲ ಮಳೆಗೆ(Asid rain) ಕಾರಣವಾಗುತ್ತಿದೆಯಲ್ಲ ಇಂತಹ ಬದಲಾವಣೆಗಳು ಬೇಕೆ? ಗಣಿಗಾರಿಕೆಯಿಂದ ಇರುವ ಕಾಡುಗಳನ್ನು ಚಿದ್ರಗೋಳಿಸಿದ್ದೇವಲ್ಲ ಇಂತಹ ಬದಲಾವಣೆಗಳು ಬೇಕೆ? ಆಳ ಸಮುದ್ರದ ಮೀನುಗಾರಿಕೆಯಿಂದಾಗಿ ಸಮುದ್ರದ ಜೀವಿಗಳ ಸಂತಾನಕ್ಕೆ ಕುತ್ತು ಬಂದಿದೆಯಲ್ಲ ಇಂತಹ ಬದಲಾವಣೆಗಳು ಬೇಕೆ? ರಸ್ತೆ ಅಗಲೀಕರಣಕ್ಕಾಗಿ ಲಕ್ಷಾಂತರ ಮರಗಳನ್ನು ಇಂದಿಗೂ ಕೂಡ ಧರೆಗುರುಳುಸುತ್ತಿದ್ದೇವಲ್ಲ ಇಂತಹ ಬದಲಾವಣೆಗಳು ಬೇಕೆ? ನದಿ ತಿರುವು ಯೋಜನೆಗಳಿಂದಾಗಿ ಕರಾವಳಿಯ ಜನರ ಜೀವನ ನಿರ್ವಹಣೆಗೆ ಕುತ್ತು ಬಂದಿದೆಯಲ್ಲ ಇಂತಹ ಬದಲಾವಣೆಗಳು ಬೇಕೆ? ಏಕ ಸಸ್ಯವರ್ಗ ನೆಡುತೋಪುಗಳಿಂದಾಗಿ ಜೀವವೈವಿಧ್ಯದ ಕೊಂಡಿಯನ್ನೇ ನಾಶಗೊಳಿಸಲಾಗಿದೆಯಲ್ಲ ಇಂತಹ ಬದಲಾವಣೆಗಳು ಬೇಕೆ? ನ್ಯೂಕ್ಲಿಯರ್ ವಿದ್ಯುತ್ ಘಟನೆಗಳಿಂದಾಗಿ ಸುತ್ತಮುತ್ತಲ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆಯಲ್ಲ ಇಂತಹ ಬದಲಾವಣೆಗಳು ಬೇಕೆ? ಜಾಗತಿಕ ತಾಪಮಾನ ಏರಿಕೆಯಿಂದ ಸಮುದ್ರದ ಮಟ್ಟ ಹೆಚ್ಚಾಗಿ ಅನೇಕ ದ್ವೀಪಗಳು ಮುಳುಗಿರುವುದರೋಟ್ಟಿಗೆ ಹವಳದಿಬ್ಬಗಳು ಸಾಯುತ್ತಿದೆಯಲ್ಲ ಇಂತಹ ಬದಲಾವಣೆಗಳು ಬೇಕೆ? ಒಂದೊಮ್ಮೆ ಯೋಚಿಸಿ. ಪರಿಸರದ ಪ್ರೇಮಿಗಳೇನು ಅಭಿವೃದ್ಧಿಯ ವಿರೋಧಿಗಳಲ್ಲ ಬದಲಿಗೆ ನಮ್ಮ ಅಭಿವೃದ್ಧಿಗಳೆಲ್ಲವೂ ಪರಿಸರಕ್ಕೆಪೂರಕವಾಗಿರಬೇಕೆನ್ನುವುದೇ ಪರಿಸರಾಸಕ್ತರ ಆಶಯವಾಗಿದೆ.

Monday, May 18, 2020

ಹಸಿರು ಪಥಗಳ ನಡುವೆ ಒಂದೆರಡು ದಿನ.


                            ಎಸ್ ಪಿ ತೇಜರಾಜು.


 ಪ್ರವೃತ್ತಿಯೆಂಬ  ಕುದುರೆಯನ್ನೇರಿ
 ನದಿ ತೊರೆ ಝರಿಗಳನ್ನು ದಾಟಿ
 ಬೆಟ್ಟ-ಗುಡ್ಡ ಗಿರಿ ಶಿಖರವನ್ನೇರಿ
 ಕಂಡೆನಾ ದೂರದ ದೈಹಿಕ ಶಿಖರವ
 ತೀರದ ದಾಹ ಕುಗ್ಗದ ಉತ್ಸಾಹದಲ್ಲಿ ಮುನ್ನಡೆದೆ
 ಆಗಸವೆ ಕೈಗೆಟುಕಿತೆಂಬ ಭಾಗದಲ್ಲಿಮುಳುಗಿಹೋದೆ
 ಅಲ್ಲಿನಾ ಕಂಡೆ ಜಗದ ರಹಸ್ಯವ
 ಕೊನೆಯಿಲ್ಲದ ಸಮುದ್ರದ ಅಲೆಗಳಲ್ಲಿ
 ರವಿ ಮುಳುಗಿದ ಚಂದ್ರ ಕೈಬೀಸಿ ಕರೆದ.


 ಪ್ರವೃತ್ತಿ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ವೃತ್ತಿಯಲ್ಲಿ ಕಾಣಲಾಗದ  ಸಂತಸ ಸಂಭ್ರಮವನ್ನು ತಮ್ಮ ಪ್ರವೃತ್ತಿಯಲ್ಲಿ ಕಾಣುತ್ತಾರೆ. ಹಲವು ರೀತಿಯ ಪ್ರವೃತ್ತಿಗಳಿದ್ದರೂ ಕೂಡ ಪ್ರತಿಯೊಂದು ಪ್ರವೃತ್ತಿಗೂ ತನ್ನದೇ ಆದಂತಹ ಕೆಲವು ಸ್ಪಷ್ಟ ಗುಣಗಳಿವೆ. ಕೆಲವರು ಚಾರಣಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಇನ್ನು ಕೆಲವರು ಬರವಣಿಗೆಯಲ್ಲಿ ತೊಡಗಿಸಿಕೊಂಡಿರುತ್ತಾರೆ ಹೀಗೆ ಯೋಗ, ಸಂಗೀತ, ಸೈಕಲಿಂಗ್, ನಾಣ್ಯ ಹಾಗೂ ಸ್ಟ್ಯಾಂಪ್ಗಳ ಸಂಗ್ರಹ ,ಕೃಷಿ, ಸ್ವಿಮ್ಮಿಂಗ್, ಪ್ರವಾಸ, ಸಮಾಜಸೇವೆ, ಪರಿಸರ ಸಂರಕ್ಷಣೆ, Wildlife photography, ನೃತ್ಯ, ಹಾಸ್ಯ, ಅಭಿನಯಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.

 ಕೆಲವರು ತಮ್ಮ ಪ್ರವೃತ್ತಿಯಲ್ಲೇ ವೃತ್ತಿಯನ್ನು ಕಂಡುಕೊಂಡಿರುತ್ತಾರೆ ಇನ್ನು ಕೆಲವರು ಬಿಡುವಿನ ಸಮಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ರೀತಿ ತಮ್ಮ ಪ್ರವೃತ್ತಿಯಲ್ಲಿ ಅನೇಕ ಮಜಲುಗಳನ್ನು ದಾಟಿ ಸಾಧನೆ ಮಾಡಿದವರು ನಮ್ಮ ಸುತ್ತಮುತ್ತಲಿದ್ದರೆ.

 ಇಷ್ಟೆಲ್ಲಾ ಪ್ರವೃತ್ತಿಗಳಲ್ಲಿ ಪ್ರತಿಯೊಬ್ಬರೂ ತಪ್ಪದೇ ಪ್ರವಾಸವನ್ನು ನಾನಾ ಕಾರಣಗಳಿಂದ ಮಾಡಿಯೇ ಇರುತ್ತಾರೆ ತಮ್ಮ ಮಕ್ಕಳನ್ನು ಚಿಕ್ಕವಯಸ್ಸಿನಿಂದಲೇ ಪುಣ್ಯಕ್ಷೇತ್ರಗಳಿಗೆ ಕರೆದುಕೊಂಡು ಹೋಗುವುದರಿಂದ ಪ್ರಾರಂಭವಾಗುವ ಈ ಪ್ರವಾಸಗಳು ಮುಂದೆ ಬೆಳೆಯುತ್ತಾ ಸ್ನೇಹಿತರೊಟ್ಟಿಗೆ ಅದಾದ ಬಳಿಕ ಕೆಲಸದ ನಿಮಿತ್ತವಾದರೂ ಅನೇಕ ಪ್ರದೇಶಗಳಿಗೆ ಭೇಟಿ ನೀಡಿಯೇ ಇರುತ್ತೇವೆ. ಎಷ್ಟೋ  ಪ್ರಯಾಣಗಳನ್ನು ಮಾಡಿದರೂ ಕೂಡ ತಮ್ಮ ಸ್ನೇಹಿತರೊಟ್ಟಿಗೆ ದೂರದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ನೆನಪುಗಳು ಪ್ರತಿಯೊಬ್ಬರ ಸ್ಮೃತಿಪಟಲದಲ್ಲಿ ಅಚ್ಚಳಿಯದಂತೆ ಉಳಿದಿರುತ್ತದೆ.

 ಸುಮಾರು ಏಳು ವರ್ಷಗಳ ಹಿಂದೆ ಪಿಯುಸಿ ವ್ಯಾಸಂಗ ಮುಗಿಯಲು ಒಂದು ತಿಂಗಳು ಇರುವ ಸಮಯದಲ್ಲಿ ಪರಿಚಯವಾದ ಬೇರೆ ವಿಭಾಗದ ಸ್ನೇಹಿತನೇ ರಾಘುಲ್, ಪರೀಕ್ಷೆ  ಮುಗಿಯುವುದರೊಳಗೆ ಒಂದೆರಡುಬಾರಿ  ಮಾತನಾಡಿಸಿದ್ದೇವೆ ಹೊರತು ಅವನ ಬಗ್ಗೆ ನನಗಾಗಲಿ ನನ್ನ ಬಗ್ಗೆ ಅವನಿಗಾಗಲಿ ಹೆಚ್ಚೇನು ತಿಳಿದಿರಲಿಲ್ಲ. ಹೀಗೊಮ್ಮೆ ಸ್ನೇಹಿತರೆಲ್ಲರೂ ಮಾತನಾಡುತ್ತಿರುವಾಗ ನಮ್ಮೆಲ್ಲರನ್ನುದ್ದೇಶಿಸಿ ರಾಘುಲ್ ಪರೀಕ್ಷೆ ಮುಗಿದ ಬಳಿಕ ನಮ್ಮ ಊರಿಗೆ ಒಮ್ಮೆ ಹೋಗಿ ಬರೋಣ ಎಂದಿದ್ದ. 
 ಬಹಳ ಸೌಂದರ್ಯಯುತ ಪ್ರವಾಸಿ ತಾಣಗಳಲ್ಲಿ ಒಂದಾಗಿದಂತಹ ಅವರ ಊರಿನ ಹೆಸರನ್ನು ಕೇಳಿದೊಡನೆ ಸ್ನೇಹಿತರೆಲ್ಲರೂ ತಪ್ಪದೇ ಬರುತ್ತೇವೆ ಎಂದು ಒಪ್ಪಿಕೊಂಡರು. ನಮ್ಮ ಸ್ನೇಹಿತರ ಸ್ವಭಾವ ನಮಗೆ ತಿಳಿಯದೆ ಹೊರಡುವ ಕೊನೆಯ ಹಂತದಲ್ಲಿ ನಾನಾ  ಕಾರಣಗಳನ್ನು ಹೇಳಿ ತಪ್ಪಿಸಿಕೊಳ್ಳುವವರೇ ಹೆಚ್ಚು. ಈ ವಿಷಯ ತಿಳಿದಿದ್ದ ನನಗೆ ನೇರವಾಗಿ ರಾಘುಲ್ ನ ಬಳಿ ಇವರಾರೂ ಬಾರದೇ ಹೋದರೂ  ಪರವಾಗಿಲ್ಲ ನಾವಿಬ್ಬರೆ ಹೋಗಿಬರೋಣ ಎಂದಿದ್ದಕ್ಕೆ ಆತನು ಸಮ್ಮತಿಸಿದ್ದ.

 ಹೀಗೆ ಈ ಮಾತುಗಳನ್ನೆಲ್ಲವನ್ನು ಆಡಿ ಸುಮಾರು ಆರು ತಿಂಗಳು ಕಳೆದುಹೋಗಿತ್ತು ಎಲ್ಲರೂ ತಮ್ಮ ಮುಂದಿನ ವ್ಯಾಸಂಗಕ್ಕಾಗಿ ಪದವಿ ಕಾಲೇಜು ಸೇರಿಕೊಂಡು ಮೊದಲ ಸೆಮಿಸ್ಟರ್ ಮುಗಿಸಿದ್ದರು. ಜುಲೈ ರಜೆ ಇರುವ ಕಾರಣ ಸ್ನೇಹಿತನ ಊರಿಗೆ ಹೋಗೋಣವೆಂದು ನಿರ್ಧರಿಸಿದಾಗ ನಾವು ಭಾವಿಸಿದಂತೆ ಸ್ನೇಹಿತರೆಲ್ಲರೂ ನಾನಾ ಕಾರಣಗಳನ್ನು ಹೇಳಿ ತಪ್ಪಿಸಿಕೊಂಡರು.

 ಇತ್ತ ನಮ್ಮ ಮನೆಯಲ್ಲಿ ಇಲ್ಲಿಯವರೆಗೂ  ಸ್ನೇಹಿತರೊಟ್ಟಿಗೆ ಹೊರಗೆ ಹೋಗಲು ಬಿಡದಿದಂತಹ ಸಂದರ್ಭದಲ್ಲಿ ಸ್ನೇಹಿತನೂರಿಗೆ ಹೋಗಿಬರುತ್ತೇನೆ ಎಂದ ತಕ್ಷಣ ಮನೆಯಲ್ಲಿ ಎಲ್ಲರೂ ನನ್ನ ಮೇಲೆ ಜಗಳವಾಡಿದ್ದರು ಈ ಜಗಳ ಮುಂದುವರೆದು ನೀನು ಸ್ನೇಹಿತನೊಟ್ಟಿಗೆ ಹೋಗುವುದಾದರೆ ಮನೆಗೆ ಹಿಂತಿರುಗಿ ಬರುವುದೇಬೇಡ ಎಂದಿದ್ದರು.[   ಕಾರಣ ಮನೆಗೆ ಮೊದಲ ಮಗನೆಂಬ ಪ್ರೀತಿ ಹಾಗು ಕಾಳಜಿ ]

ಆದರಿತ್ತ ಸ್ನೇಹಿತನಿಗೆ ಹೇಳಿಯಾಗಿದೆ ಹೋಗಿಬರೋಣವೆಂದು,ಇವರು ನನ್ನನು ಮನೆಗೆ ಸೇರಿಸದೆ ಹೋದರೂ ಪರವಾಗಿಲ್ಲ ಎಂದು ಭಾವಿಸಿ ಒಳ್ಳೆ ಮಳೆಗಾಲದ ತಿಂಗಳದಂತಹ ಜುಲೈ ಮೊದಲ ವಾರದಲ್ಲಿ ಬೆಳಗ್ಗಿನ ಉಪಹಾರವನ್ನು ಮನೆಯಲ್ಲಿಯೇ ಮಾಡಿಕೊಂಡು ಬಸ್ ಹತ್ತಿ ಹೊರೆಟೆವು ಉದಕಮಂಡಲದೆಡೆಗೆ.

ಜೀವನದಲ್ಲಿ ಅದು ಪ್ರಥಮಬಾರಿಗೆ ಸ್ಸ್ನೇಹಿತನೊಟ್ಟಿಗೆ ಬಹಳ ದೂರದೂರಿಗೆ ಹೋಗುತ್ತಿದ್ದಿದರಿಂದ ಮನಸ್ಸಿನಲ್ಲಿ ಒಮ್ಮೆ ರೋಚಕವೆನಿಸಿದರೂ, ಮತೊಮ್ಮೆ ಭಯವಾಗುತ್ತಿತ್ತು ನಿಸರ್ಗದ ಮಡಿಲಿಗೆ ಹೋಗುತ್ತಿದ್ದೇನೇಎಂದು ರೋಚಕವೆನಿಸಿದರು ಊರು ಸೇರಿದ ಬಳಿಕ ಆರೋಗ್ಯ ಕೈಕೊಟ್ಟರೆಂಬ ಭಯವಾಗುತಿತ್ತು ಆದರೆ ಸ್ನೇಹಿತನ ಮಾತುಗಳು ನನ್ನ ಆತ್ಮವಿಶ್ವಾಸವನ್ನು ಬಲಪಡಿಸುತಿತ್ತು.

 ಗುಂಡ್ಲುಪೇಟೆಯನ್ನು ದಾಟಿ ಮುಂದೆ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಬಸ್ ಸಾಗುತಿತ್ತು.ಮಳೆಗಾಲವೇ ಆಗಿದ್ದರಿಂದ ಕಾಡು ಸಂಪೂರ್ಣವಾಗಿ ಹಸಿರಿನ ಹೊದಿಕೆಯೊದ್ದು ಕಂಗೊಳಿಸುತ್ತಿತ್ತು.ಯಾವುದಾದರು ಪ್ರಾಣಿಗಳು ಕಾಣಬಹುದೆಂಬ ಆಶಾಭಾವದಲ್ಲಿ ಕಣ್ಣುಗಳನ್ನು ಅರಳಿಸಿಕೊಂಡು ಕುಳಿತಿದ್ದ ನಮಗೆ ಮೊದಲು ಕಂಡದ್ದು ವಾನರಗಳ ಸಮೂಹ.ಯಾವುದಾದರೂ ಆಹಾರದ ಪೊಟ್ಟಣವನ್ನು ಎಸೆಯುತ್ತಾರೆಂದು ಸಾಲಾಗಿ ಕುಳಿತಿದ್ದ ವಾನರಗಳನ್ನು ಕಂಡಾಗ ಮರುಕ ಹುಟ್ಟಿತು. ರಾಷ್ಟ್ರೀಯ ಉದ್ಯಾನವನವಾಗಿದ್ದರಿಂದ  ಅರಣ್ಯ ಇಲಾಖೆಯವರು ಸ್ವಲ್ಪ ಸ್ವಲ್ಪ ದೂರದಲ್ಲಿಯೇ ಬೋರ್ಡ್ ಗಳ ಮೇಲೆ ದಪ್ಪ ಅಕ್ಷರಗಳಲ್ಲಿ ನಿಧಾನವಾಗಿ ಚಲಿಸಿ, ಪ್ಲಾಸ್ಟಿಕ್ ನಿಷೇಧಿಸಲಾಗಿದೆ, ಛಾಯಾಗ್ರಹಣ ನಿಷೇಧಿಸಲಾಗಿದೆ, ಪ್ರಾಣಿಗಳಿಗೆ ಆಹಾರವನ್ನು ನೀಡಬೇಡಿ ಎಂಬ ಬೋರ್ಡ್ ಗಳು ಆಗಾಗ ಗೋಚರಿಸುತ್ತಲೆ ಇದ್ದವು. ಹೀಗೆ ಮುಂದೆ ಸಾಗುತ್ತಾ ಕಾಡುಕೋಣಗಳು, ನವಿಲು, ಆನೆಗಳು, ಹಾಗೂ ಜಿಂಕೆಗಳ ಹಿಂಡು ಕಂಡವು.

  ಇಷ್ಟಾಗುವುದರೊಳಗೆ ಬಸ್ ತಮಿಳುನಾಡನ್ನು ಪ್ರವೇಶಿಸಿ ಮುಂದೆ ಮಧ್ಯಾಹ್ನದ ಊಟವನ್ನು ಮುಗಿಸಿಕೊಂಡು ಹೊರಟೆವು, ಗಾಳಿಯ ರಭಸಕ್ಕೆ/ಬಡಿತಕ್ಕೆ ಮರಗಳು ಉರುಳಿ ತೆರವುಗೊಳಿಸಿದ ರಸ್ತೆಗಳ ಮೂಲಕ ಉದಕಮಂಡಲದ ಕಣಿವೆಯಲ್ಲಿ ಬಸ್ ನಿಧಾನವಾಗಿ ಬೆಟ್ಟ ಗುಡ್ಡವನ್ನೇರುತ್ತಿತ್ತು, ಸುತ್ತಲೂ ನೀಲಗಿರಿಸ್ ನೆಡುತೋಪುಗಳು ಹೆಚ್ಚಾಗಿರುವ ಕಾರಣ ನೀಲಗಿರೀಸ್ ಮರಗಳ ಮೂಲಕ ಬೀಸುತ್ತಿದಂತಹ ಸುಗಂಧಭರಿತ ಗಾಳಿಯು ನಮ್ಮನ್ನು ಮತ್ತಷ್ಟು ನೀಳವಾಗಿ ಉಸಿರೆಳೆದು ಕೊಳ್ಳುವಂತೆ ಪ್ರೇರೇಪಿಸುತ್ತಿತ್ತು. ಅಂತೂ ಕೊನೆಗೂ ಘಾಟ್ ಸೆಕ್ಷನ್ ಗಳನ್ನೆಲ್ಲವನ್ನು ದಾಟಿ ಸ್ನೇಹಿತನ ಮನೆಯ ಹತ್ತಿರವಿರುವ ಬಸ್ ಸ್ಟ್ಯಾಂಡ್ ಅನ್ನು ತಲುಪಿದಾಗ  ಸಮಯ ಮೂರು ಗಂಟೆಯಾಗಿತ್ತು.

 ನಮ್ಮ ಆಗಮನವನ್ನು ನಿರೀಕ್ಷಿಸಿದ್ದ ಸ್ನೇಹಿತನ ತಂದೆಯವರು ನಮಗಾಗಿ ಇನ್ನೆರಡು ಕೊಡೆಗಳನ್ನು ಹಿಡಿದುಕೊಂಡು ನಿಂತಿದ್ದರು, ಮಳೆ ಸುರಿಯುತ್ತಲೇ ಇದ್ದಿದ್ದರಿಂದ ಬಸ್ ಇಳಿದ ಕೂಡಲೇ ಅರಳಿಸಿದ್ದ ಕೊಡೆಯೊಳಗೆ ಸೇರಿಕೊಂಡೆವು. ಸುತ್ತಲೂ ಬೆಳೆದಿದ್ದ ದೈತ್ಯ ಮರಗಳ  ರಸ್ತೆಯ ಮೂಲಕ ಸ್ವಲ್ಪ ದೂರದಲ್ಲಿ ಇದ್ದ ಮನೆಯನ್ನು ಸೇರಿಕೊಂಡೆವು. ನಮ್ಮನ್ನು ಬಹಳ ಪ್ರೀತಿಯಿಂದ ಬರಮಾಡಿಕೊಂಡವರು ಸ್ನೇಹಿತನ ಅಜ್ಜಿ ಹಾಗೂ ಅವರ ಚಿಕ್ಕಮ್ಮ. Freshup ಆದ ಬಳಿಕ ಬಿಸಿ ಬಿಸಿ ಊಟವನ್ನು ಬಿಡಿಸಿದರು. ಪ್ರಯಾಣದ ಚಳಿಯಲ್ಲಿ ನಡುಗಿದ್ದ ನಮಗೆ ಈ ಬಿಸಿಊಟ ದೇಹದ ಶಾಖವನ್ನು ಹೆಚ್ಚು ಮಾಡಿತು. ಸಂಜೆ ಗುಡ್ಡದ ಮೇಲಿರುವ ದೇವಸ್ಥಾನಕ್ಕೂ ಹಾಗೂ ಗೌರ್ನಮೆಂಟ್ ಗೆಸ್ಟ್ ಹೌಸ್ ಅನ್ನು ನೋಡಿಕೊಂಡು ಮನೆಗೆ ಹಿಂತಿರುಗಿದೆವು.

 ಮರುದಿನದ ಭೇಟಿ ನೀಡಬೇಕಾದಂತಹ ಪ್ರವಾಸಿ ತಾಣವನ್ನು ಸ್ನೇಹಿತನೆ ನಿರ್ಧರಿಸಿದ್ದ. ಹೀಗಾಗಿ ಬೆಳಿಗ್ಗೆ ಬೇಗನೆ ಎದ್ದು ಉಪಹಾರವನ್ನುಮಾಡಿ ಬಸ್ ಹತ್ತಿ ಊಟಿ ತಲುಪಿದೆವು. ಸ್ನೇಹಿತನ ತಂದೆಯವರು ಸುತ್ತಮುತ್ತಲ ಪ್ರವಾಸಿ ತಾಣಗಳದಂತಹ Botanical garden, Rose garden  ಹಾಗೂ ಸುತ್ತಲಿದ್ದ ಕೆರೆಗಳಿಗೆ ಕರೆದುಕೊಂಡು ಹೋದರು. ಮಳೆ ದೋ ಎಂದು ಸುರಿಯುತ್ತಿದ್ದರಿಂದ ಹಾಕಿಕೊಂಡು ಹೋಗಿದಂತಹ ಬಟ್ಟೆಗಳೆಲ್ಲವೂ ಮಳೆಯ ನೀರಿನಲ್ಲಿ ತೊಯ್ದುಹೋಗಿದ್ದವು. ಜುಲೈ ಪ್ರವಾಸಿ ಸಮಯವಲ್ಲವಾಗಿದ್ದುದರಿಂದ ಎಲ್ಲಾ ಪ್ರವಾಸಿ ತಾಣಗಳು ಖಾಲಿ ಖಾಲಿ ಹೊಡೆಯುತ್ತಿದ್ದವು ಆದರೂ ಆಗಾಗ ಅಲ್ಲಲ್ಲಿ ಬೆರಳೆಣಿಕೆಯಷ್ಟು ಜನ ಕಾಣಿಸಿಕೊಳ್ಳುತ್ತಿದ್ದರು.

 ಸುತ್ತಮುತ್ತಲಿದ್ದ ಪ್ರವಾಸಿ ತಾಣವನ್ನು ನೋಡುವುದರೊಳಗೆ ಸಮಯ ನಾಲ್ಕು ಗಂಟೆಯಾಗಿತ್ತು ಈಗ ಶಾಪಿಂಗ್ ಸಮಯ ಸ್ನೇಹಿತನ ತಂದೆಯವರು ಕೆಲವಷ್ಟು ಅಂಗಡಿಗಳಿಗೆ ಕರೆದುಕೊಂಡು ಹೋಗುತ್ತಿದ್ದರು ಅಂಗಡಿಯವರು ನಾವು ಕನ್ನಡಿಗರೆಂದು ತಿಳಿದಾಗ ನಮ್ಮನ್ನು ಬಹಳ ಆತ್ಮೀಯವಾಗಿ ಮಾತನಾಡಿಸುತ್ತಿದ್ದರು.[ ಆಗಲೇ ನನಗೆ ತಿಳಿದಿದ್ದು ಮೊದಲು ಉದಕಮಂಡಲ ಕರ್ನಾಟಕಕ್ಕೆ ಸೇರಿತೆಂದು] ಊಟಿಯ ಹೆಸರಾಂತ Homemade chocolate ,Tea powder, Nilgiri oil, Varkeyಗಳನ್ನು ತೆಗೆದುಕೊಳ್ಳುವುದರೂಳಗೆ ಬ್ಯಾಗ್ ತುಂಬಿತುಳುಕುತ್ತಿತ್ತು.ಇವುಗಳನ್ನೆಲ್ಲವನ್ನೂ ಎತ್ತಿಕೊಂಡು ಮನೆಗೆ ಹಿಂತಿರುಗಿದೆವು.

 ರಾತ್ರಿ ಊಟ ಮಾಡಿ ಅಜ್ಜಿ ಅವರೊಂದಿಗೆ ಮಾತನಾಡುತ್ತಿದ್ದಾಗ ಅವರು ಊಟಿಯಲ್ಲಿ ಕಳೆದ ಬಾಲ್ಯದ ದಿನಗಳ ಅನುಭವಗಳನ್ನು  ನಮ್ಮಟ್ಟಿಗೆ ಹಂಚಿಕೊಳ್ಳುತ್ತಿದ್ದರು, ಅವರು ತಮ್ಮ ಬಾಲ್ಯದಲ್ಲಿ ಬೆಟ್ಟಗುಡ್ಡಗಳಲ್ಲಿ ಆಟವಾಡಿಕೊಂಡು ಬೆಳೆದಂತಹ ಸಮಯವನ್ನು ನೆನಪಿಸಿಕೊಂಡು ಬಹಳ ಸಂತೋಷ ಪಡುತ್ತಿದ್ದರು. ಸ್ವಲ್ಪ ದೊಡ್ಡ ಮನೆತನದವರೇ ಆಗಿದ್ದರಿಂದ ಯಾರೇ ಹೊರಗಿನವರು ಬಂದರು ಅವರ ಯೋಗಕ್ಷೇಮ ಊಟೋಪಚಾರಗಳೆಲ್ಲವೂ ಇವರ ಮನೆಯಲ್ಲಿ ನಡೆಯುತ್ತಿತ್ತು. ನಾಳೆ ಇಲ್ಲೇ ಸುತ್ತಮುತ್ತಲಿರುವ ಟೀ ಎಸ್ಟೇಟ್ ಹಾಗೂ ಉದಕಮಂಡಲದಲ್ಲಿ ಅತ್ಯಂತ ಹಳೆಯ ಹಾಗೂ ಬೃಹದಾಕಾರವಾಗಿ ಗುಡ್ಡದಮೇಲೆ ಬೆಳೆದಿರುವಂತಹ ನೀಲಗಿರಿ ಮರವನ್ನು ನೋಡಿಕೊಂಡು ಬರುವಂತೆ ಸಲಹೆಯನ್ನು ಕೊಟ್ಟರು.

 ಅಜ್ಜಿಯವರ ಸಲಹೆಯಂತೆ ಎಸ್ಟೇಟ್ಅನ್ನು ನೋಡುತ್ತಿರುವಾಗಲೇ ನಮಗಿಂತ ದೂರದಲ್ಲೇ ಅಜಾನುಬಾಹುವಾಗಿ ಬೆಳೆದಿದಂತಹ ನೀಲಗಿರಿ ಮರಗಳ ಸಮೂಹ ನಮ್ಮನ್ನು ಕೈಬೀಸಿ ಕರೆದವು. ಮುಂದೆ ಸಾಗಿ ಮರದ ಹತ್ತಿರ ಬರುತ್ತಿದ್ದಂತೆ ನೀಳವಾಗಿ ಬೆಳೆದು ನಿಂತಿದಂತಹ ಮರವನ್ನು ನೋಡಿ ಮೂಕವಿಸ್ಮಿತರಾದೆವು. ಅದರ ಬುಡದಲ್ಲಿ ನಿಂತಿದ್ದ ನಮಗೆ ಗಲಿವಾರನ ಮುಂದೆ ನಿಂತ ಮನುಷ್ಯನಂತೆ ಭಾಸವಾಯಿತು ಏನು ಅದರ ಬೆಳವಣಿಗೆ!! ಹತ್ತಾರು ಜನ ಸುತ್ತುವರಿಯ ಬಹುದಾದಂತಹ ಅದರ ಬುಡ!! ತಲೆಯೆತ್ತಿ ನೋಡಿದರೆ ಕಣ್ಣಿನ ದೃಷ್ಟಿಗೆ ನಿಲುಕದ ಎತ್ತರ!! ಏನೀ ನಿಸರ್ಗದ ಮಹಿಮೆ ತನ್ನೊಳಗಿನ್ನೆಷ್ಟು ವಿಸ್ಮಯಗಳನ್ನು ಅಡಗಿಸಿಕೊಂಡಿದೆಯೋ ಎಂದೆನಿಸಿತು.

 ಮನೆಗೆ ಹಿಂದಿರುಗಿ ಕಾಡುದಾರಿಯಲ್ಲಿ ನಡೆದುಕೊಂಡು ಹೋಗೋಣವೆಂದು ನಿರ್ಧರಿಸಿದ್ದಾಯಿತು. ಹುಲಿಗಳಿರುವ ದೈತ್ಯ ನೀಲಗಿರಿ ನೆಡುತೋಪುಗಳ ನಿಶಬ್ದ ಕಾಲುದಾರಿಯ ಮುಖಾಂತರ ನಡೆದುಕೊಂಡು ಹೋಗುವುದೇ ರೋಚಕವೆನಿಸಿತ್ತು. ಅಂದು ಎಂದಿನಂತೆ ಸುತ್ತಮುತ್ತಲ ಪ್ರವಾಸಿ ತಾಣ ವಾದಂತಹ Shooting made, Pay lakeಗಳನ್ನು ನೋಡಿದ್ದಾಯಿತು ಇಷ್ಟಗುವುದರೊಳಗೆ ಮೂರು ದಿನ ಮೂರುಗಳಿಗೆಯಂತೆ ಕಳೆದುಹೋಗಿತ್ತು.ಇತ್ತ ಮೈಸೂರಿಗೆ ವಾಪಸ್ ಹಿಂದಿರುಗಿ ಬರುವಂತೆ ಕರೆಯಮೇಲೆ ಕರೆಗಳು ಬರುತ್ತಲೇ ಇದ್ದವು ಅದರಂತೆ ಬಟ್ಟೆಗಳನ್ನೆಲ್ಲವನ್ನು ಜೋಡಿಸಿ ಕೊಳ್ಳುತ್ತಿದ್ದಾಗ ತೆಗೆದುಕೊಂಡು ಹೋಗಿದ್ದ ಒಂದು ಬ್ಯಾಗ್ ಜೊತೆ ಇನ್ನೆರಡುಸೇರಿಕೊಂಡಿದ್ದವು.

 ಬೆಳಗ್ಗೆ ನಾವು ಹೊರಡುತ್ತೇವೆ ಎಂದು ವಿಷಯ ತಿಳಿದ ಅಜ್ಜಿಗೆ ನಮ್ಮನ್ನು ಕಳುಹಿಸಿಕೊಡಲು ಸ್ವಲ್ಪವೂ ಮನಸ್ಸಿರಲಿಲ್ಲ ಇನ್ನೆರಡು ದಿನ ಇಲ್ಲಿಯೇ ಇದ್ದು ಆಮೇಲೆ ಹೊರಡಬೇಕು ಎಂಬುದು ಅವರ ಅಪೇಕ್ಷೆಯಾಗಿತ್ತು.ಸ್ನೇಹಿತನ ಚಿಕ್ಕಮ್ಮನವರಂತೂ ನಮ್ಮನ್ನು ತಮ್ಮ ಮಕ್ಕಳಂತೆ ನೋಡಿಕೊಂಡರು. ಸದಾ ನಮಗಾಗಿ ಮಾಡಿ ಬಡಿಸುತ್ತಿದ್ದಂತಹ ಬಿಸಿ ಅಡುಗೆ ಮೃಷ್ಟಾನ್ನ ಭೋಜನವಾಗಿತ್ತು ಅದರಲ್ಲಿಯೂ ಅವರು ಮಾಡಿದಂತಹ ಮೆಣಸಿನ ಸಾರು ನನಗೆ ಈಗಲೂ ನೆನಪಿಸಿಕೊಂಡರೆ ಬಾಯಲ್ಲಿ  ನೀರೂರುತ್ತದೆ ಅಷ್ಟು ಚೆನ್ನಾಗಿ ಸಾಂಬಾರ್ ಮಾಡಿದ್ದರು.

 ಇಷ್ಟೆಲ್ಲಾ ಚೆನ್ನಾಗಿ ನೋಡಿಕೊಂಡಿದಂತಹ ನನ್ನ ಸ್ನೇಹಿತನ ಮನೆಯವರ ಪ್ರೀತಿ ವಿಶ್ವಾಸಕ್ಕೆ ನಾನು ಮಾರುಹೋಗಿದ್ದೆ. ಆ ಸಮಯದಲ್ಲಿ ನಾನು ಅವರಿಗೆ ಏನೇ ಕೊಟ್ಟರು ಅದು ಅವರ ಪ್ರೀತಿ-ವಿಶ್ವಾಸಕ್ಕೆ ಕಡಿಮೆಯೇ ಎಂದೆನಿಸುತ್ತಿತ್ತು. ಕೊನೆಯದಾಗಿ ಅಜ್ಜಿಯ ಆಶೀರ್ವಾದವನ್ನು ಪಡೆಯುತ್ತಿದ್ದಾಗ ಇನ್ನು ಮುಂದೆ ರಜದ ಸಮಯದಲ್ಲಿ ಇಲ್ಲಿಗೆ ಬರುತ್ತಲೇ ಇರಬೇಕು ಎಂದು ಹೇಳಿದ್ದರು. ಎಷ್ಟೇ ಆದರೂ ನನ್ನಂತಹ ಸಾವಿರಾರು ಜನರ ಯೋಗಕ್ಷೇಮವನ್ನು ವಿಚಾರಿಸಿದ ಕೈಯಲ್ಲವೇ ?. ಮನೆಗೆ ಬಂದವರನ್ನು ಬರೀ ಕೈಯಲ್ಲಿ ಕಳುಹಿಸಬಾರದೆಂದು, ದೊಡ್ಡವರು ಕೊಟ್ಟಿದ್ದನ್ನು ತಿರಸ್ಕರಿಸಬಾರದು ಎಂದೇಳಿ ಹಣವನ್ನು ಕೊಟ್ಟಿದ್ದರು. ಅವರ ಅಪಾರ ಪ್ರೀತಿಗೆ ಮಾರುಹೋಗಿದ್ದ ನನಗೆ ಮನೆಯಿಂದ ಹೊರಡುವಾಗ ಕಣ್ಣುಗಳು ಹಸಿಯಾಗಿದ್ದವು ಭಾರವಾದ ಮನಸ್ಸಿನಲ್ಲಿ ಬಸ್ ಹತ್ತಿ ಮೈಸೂರಿಗೆ ತಲುಪಿದ ಬಳಿಕ, ತಲುಪಿದ ವಿಷಯವನ್ನು ಕರೆಮಾಡಿ ತಿಳಿಸಿದ್ದಾಯಿತು.

ಇಲ್ಲಿ ರೋಚಕದ ವಿಷಯವೆಂದರೆ ನಾನು ಹಿಂತಿರುಗಿ ಬಂದ ಬಳಿಕವೇ ಮನೆಯವರಿಗೆ ತಿಳಿದಿದ್ದು ನಾನು ಯಾರ ಜೊತೆ ಹೋಗಿದ್ದೇನೆಂದು.

 ಇದಾದ ಅನೇಕ ವರ್ಷಗಳಾದ ಮೇಲೆ ನಾನು  ಊಟಿಗೆ ಹೋಗಿದ್ದೆ ಅಷ್ಟರಲ್ಲಾಗಲೇ ಅಜ್ಜಿ ಇಹಲೋಕ ತ್ಯಾಜಿಸಿದ್ದರು.ವಿಷಯ ತಿಳಿದು ಮತ್ತಷ್ಟು  ದುಃಖವಾಯಿತು. ಈ ಪ್ರವಾಸ ಕಥನವನ್ನು ನಾನು ಎಷ್ಟೊ ಬಾರಿ ಬರೆಯಬೇಕೆಂದು ಪ್ರಯತ್ನಪಟ್ಟಿದ್ದರು ನಾನಾ ಕಾರಣಗಳಿಂದ ಆಗಿರಲಿಲ್ಲ ಆದರೆ ಈ Lockdown ಸಮಯದಲ್ಲಿ ಸ್ನೇಹಿತನ ತಂದೆಯವರು ಸರಕಾರಿ ಇಲಾಖೆಯಿಂದ ನಿವೃತ್ತಿ ಹೊಂದಿದ್ದಾರೆ,  ಹೀಗಾಗಿ ಅವರ ಬರುವಿಕೆಗಾಗಿ ನಾವಿಲ್ಲಿ ಕಾಯುತ್ತಿದ್ದೇವೆ.ಅವರ ಪ್ರೀತಿ ವಿಶ್ವಾಸಕ್ಕೆ ಮಾರುಹೋದ ನಾನು ನನ್ನ ಈ ಪುಟ್ಟ ಬರಹವನ್ನು ಸಂಪೂರ್ಣವಾಗಿ ನನ್ನ ಸ್ನೇಹಿತನ ಮನೆಯವರಿಗೆ ಸಮರ್ಪಿಸಿದ್ದೇನೆ. ಸ್ನೇಹಿತನ ಚಿಕ್ಕಮ್ಮನವರು ಕೂಡ ನಿವೃತ್ತಿ ಹೊಂದಿದ ಬಳಿಕ ನಮ್ಮೊಟ್ಟಿಗೆ ಮೈಸೂರಿನಲ್ಲಿ ಇರಬೇಕೆಂಬುದು ನನ್ನ ಆಶಯವಾಗಿದೆ.

 ಹೀಗೆ ನಾವೆಲ್ಲರೂ ಸ್ನೇಹಿತರೊಟ್ಟಿಗೆ ಅನೇಕ ಪ್ರದೇಶಗಳಿಗೆ ಭೇಟಿ ನೀಡಿಯೇ ಇರುತ್ತೇವೆ ಅವುಗಳಲ್ಲೆಲ್ಲಾ ಪ್ರಕೃತಿಯೊಂದಿಗೆ ಕಳೆದ ಸಮಯವನ್ನು ಮರೆಯಲು ಸಾಧ್ಯವೇ ಇರುವುದಿಲ್ಲ ಏಕೆಂದರೆ ಪ್ರಕೃತಿಯ ಹಸಿರಿನೊಂದಿಗೆ ಕಳೆದ ಜೀವನದ ಸಮಯ ಸದಾ ಹಸಿರಾಗಿರುತ್ತವೆ.

Sunday, May 10, 2020

ಪರಿಸರ ಹೋರಾಟಗಾರರು ಅಭಿವೃದ್ಧಿಯ ವಿರೋಧಿಗಳೇ??


                         - ಎಸ್.ಪಿ.ತೇಜರಾಜು.

 ಜಗತ್ತು ವೇಗವಾಗಿ ಮುಂದುವರೆದಿದೆ,
 ಆದರೆ ಆ ವೇಗದಲ್ಲಿ ವಿನಯವಿಲ್ಲ,
 ವಿಚಾರವಿಲ್ಲ ಮೌಲ್ಯಗಳಿಲ್ಲ.
              - ಶ್ರೀ ಶ್ರೀ ಸಿದ್ದಗಂಗಾ ಶ್ರೀಗಳು.


 ಇಂತಹ ಮಹನೀಯರು, ಕಾಲಜ್ಞಾನಿಗಳು ಹೇಳಿರುವಂತಹ ಮಾತುಗಳು ಸರ್ವಕಾಲಿಕ ಸತ್ಯವಾಗಿದೆ. ನಾವಿಂದು ಎಲ್ಲಾ ವಿಷಯಗಳಲ್ಲಿಯೂ ನಮ್ಮತನವನ್ನು  ಕಳೆದುಕೊಂಡಿದಾಗಿದೆ ಹಾಗೂ ಎಲ್ಲಾ ವಿಷಯಗಳಲ್ಲಿಯೂ ವಿದೇಶಿಯರನ್ನು ಅನುಸರಿಸುತ್ತಿದ್ದೇವೆ. ಅಭಿವೃದ್ಧಿ ಎಂಬ ಹೆಸರಿನಲ್ಲಿ ಕೃಷಿಯಾಧಾರಿತವಾದ ದೇಶವನ್ನು ಸೇವಾ ವಲಯದ ಕಡೆಗೆ ತಿರುಗಿಸಲಾಗಿದೆ ಹೀಗಾಗಿ ಕೃಷಿಗಿಂತಲೂ ಹೆಚ್ಚು ಸೇವಾ ವಲಯಗಳಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತಿದೆ. ವಿದ್ಯಾವಂತ ಹಾಗೂ ಪಟ್ಟಣದ ನಾಲ್ಕು ಜನರಿಗೆ ಉದ್ಯೋಗ ದೊರಕುತ್ತದೆ ಇದರಿಂದ ಅವರ ಆರ್ಥಿಕ ಪರಿಸ್ಥಿತಿಗಳು ಸುಧಾರಿಸುವುದರೊಂದಿಗೆ ದೇಶದ ಬೊಕ್ಕಸಕ್ಕೆ ಹಣವರಿದುಬರುತ್ತದೆ ಎಂಬ ಮಹದಾಸೆಯಲ್ಲಿ ಹೊರದೇಶದ ಕಂಪನಿಗಳಿಗೆ ಕೆಂಪು ಹಾಸನ್ನು ಹಾಸಿ ಕರೆದುಕೊಂಡಿದ್ದರಿಂದ ನಮ್ಮ ಪರಿಸ್ಥಿತಿಗಳು ಅದೋಗತಿಗೆ ತಲುಪಿದೆ. ಎಷ್ಟೇ ಆದರೂ ಕೈಗಾರೀಕರಣಕ್ಕೆ ಹೆಚ್ಚು ಮಹತ್ವವನ್ನು ನೀಡುವುದೇ ಈ ಅಭಿವೃದ್ಧಿಯ ಅರ್ಥವಾಗಿದೆ ಅಲ್ಲವೇ?


 ಇಷ್ಟೆಲ್ಲಾ ಯೋಜನೆಗಳು ಬಂದರೇನು ಬಡವರ ಸಂಖ್ಯೆ ಕಡಿಮೆಯಾಗಿದೆ ? ಯಾರಿಗಾಗಿ ಈ ಬೆಳವಣಿಗೆ ? ಯಾರಿಗಾಗಿ ಈ ಅಭಿವೃದ್ಧಿ? ನಮ್ಮ ನಿಸರ್ಗವನ್ನು ಹಾಳುಮಾಡಿಕೊಂಡು ಹೊರದೇಶಗಳ ಕಂಪನಿಗಳನ್ನು ಉದ್ಧಾರ ಮಾಡುವ ಉಸಾಬರಿ? ಈ ಎಲ್ಲ ಯೋಜನೆಗಳು ಎಷ್ಟು ಜನರನ್ನು ತಲುಪಿವೆ? ಈ ಎಲ್ಲ ಯೋಜನೆಗಳಿಂದ ತಮ್ಮ ಜೇಬು ತುಂಬಿಕೊಂಡಿರುವ ಒಂದಷ್ಟು ರಾಜಕಾರಣಿಗಳು ಹಾಗೂ ಅಧಿಕಾರಿಗಳು.

 ಸರಕಾರದ ಅನೇಕ ಯೋಜನೆಗಳಿಂದ ನಿಸರ್ಗದ ಮೇಲಾದ ದೌರ್ಜನ್ಯಗಳನ್ನು ನಾವಿಂದು ತಿಳಿದುಕೊಳ್ಳಲೇಬೇಕಾಗಿದೆ.

1. ಹುಬ್ಬಳ್ಳಿಯಿಂದ ಅಂಕೋಲಾಗೆ ರೈಲ್ವೆ ಯೋಜನೆ ಕಾರ್ಯಗತಿಯಲ್ಲಿದ್ದು ಇದಕ್ಕಾಗಿ 2,50,000  ಮರಗಳನ್ನು ಕಡಿಯಲಾಗುತ್ತಿದೆ ಹಾಗೂ 1472  ಎಕರೆ ಅರಣ್ಯ ಪ್ರದೇಶ ನಾಶವಾಗುತ್ತದೆ.

2. 2011- 2019 ರೊಳಗೆ ಬೆಂಗಳೂರು ಜಿಲ್ಲೆಯೊಂದರಲ್ಲೇ ಅನೇಕ ಯೋಜನೆಗಳಿಗಾಗಿ 50,000  ಮರಗಳನ್ನು ಧರೆಗುರುಳಿಸಲಾಗಿದೆ.

3.ಮೈಸೂರಿನಿಂದ ಕೇರಳಕ್ಕೆ ವಿದ್ಯುತ್ ಸಂಪರ್ಕಕೆಂದು 54,000 ಮರಗಳನ್ನು ಧರೆಗುರುಳಿಸಲಾಗಿದೆ.

4.ಕಾಳಿ ನದಿಯೊಂದಕ್ಕೆ ಐದು ಅಣೆಕಟ್ಟುಗಳನ್ನು ಕಟ್ಟಲಾಗಿದೆ ಇದರಿಂದ 32,000 ಎಕರೆ ಕಾಡು ನಾಶವಾಗಿದೆ.

5. ಮಡಿಕೇರಿಯಲ್ಲಿ ಕೇವಲ ಒಂದು ರೆಸಾರ್ಟ್ ನಿರ್ಮಾಣಕ್ಕಾಗಿ 800 ಮರಗಳನ್ನು ಕಡಿಯಲಾಗಿದೆ.

6.ಎತ್ತಿನಹೊಳೆ ಯೋಜನೆಗೆಂದು ಅಪೂರ್ವ ಪಶ್ಚಿಮ ಘಟ್ಟದ ಜೀವ ವೈವಿಧ್ಯದ ಕೊಂಡಿಯನ್ನು ನಾಶಪಡಿಸಲಾಗುತ್ತಿದೆ.

7. ಕುದುರೆಮುಖದ ಕಬ್ಬಿಣದ ಅದಿರಿನ ಕಾರ್ಖಾನೆಗೆ ಎಂದು ನಿರ್ಮಿಸಲಾದ ಲಕ್ಯ ಡ್ಯಾಮ್ ಹೂಳಿನಿಂದ ತುಂಬಿದೆ ಹಾಗೂ ಭದ್ರಾ ನದಿಯ ನೀರು ಕೆಮ್ಮಣ್ಣಿನಿಂದ ಹರಿಯುತ್ತಿದೆ.

8.ಹರಿಹರ ಪಾಲಿಫೈಬರ್ ಕಾರ್ಖಾನೆಯ ಕಲುಷಿತ ನೀರನ್ನು ತುಂಗಾ ನದಿಗೆ ಹರಿಬಿಡಲಾಗುತ್ತಿದೆ.

9.ನಗರ ಹಾಗೂ ಕಾರ್ಖಾನೆಗಳ ಕಲುಷಿತ ನೀರನ್ನು ಜೀವನದಿಗಳಿಗೆ ಸೇರುತ್ತಿರುವುದರಿಂದ ನದಿಗಳ ಗುಣಮಟ್ಟ C grade ನಿಂದ D gradeಗೆ ಸೇರುತ್ತದೆ.

10.ಮಹಾನಗರಗಳಿಗೆ 24 ಗಂಟೆಗಳ ವಿದ್ಯುತ್ ಸಂಪರ್ಕಕ್ಕೆ ನಿರ್ಮಿಸುವಂತಹ ಅಣೆಕಟ್ಟೆಗಳ ಸುತ್ತಮುತ್ತಲಿರುವ ಜನರಿಗೆ ಇಂದಿಗೂ ಕೂಡ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿಲ್ಲ.

11.ಮೈಸೂರು ಹಾಗೂ ಬೆಂಗಳೂರು, ಬೆಂಗಳೂರು ಹಾಗೂ ಮಂಗಳೂರು, ಮೈಸೂರು ಹಾಗೂ ಚಾಮರಾಜನಗರಗಳ ರಸ್ತೆ ಅಗಲೀಕರಣಕ್ಕೆಎಂದು ಲಕ್ಷಾಂತರ ಮರಗಳನ್ನು ಕಡೆದಿದ್ದಾರೆ. ಕೇವಲ ಬೀದರ್ ರಸ್ತೆ ಅಗಲೀಕರಣಕೆಂದು 5000 ಮರಗಳನ್ನು ಕಡಿಯಲಾಗಿದೆ.

12.ಅನೇಕ ಅಣೆಕಟ್ಟುಗಳ ನಿರ್ಮಾಣಗಳಿಂದಾಗಿ ಮುಳುಗಡೆಯಾದ ಜನರಿಗೆ ಇಂದಿಗೂ ಕೂಡ ಯೋಜನೆಗಳು ತಲುಪದಗಿವೆ.

13.ಕುದುರೆಮುಖ ದಿನಗೂಲಿ ನೌಕರರ ಜೀವನ ಇಂದಿಗೂ ಕೂಡ ಶೋಚನೀಯವಾಗಿದೆ.

14.ಪ್ರಪಂಚದ ನಾನಾ ದೇಶಗಳು ಅಣುವಿದ್ಯುತ್ ಸ್ಥಾವರಗಳ ಅಪಾಯವನ್ನರಿತು ನಿರ್ಬಂಧಿಸಿರುವ ಸಂದರ್ಭದಲ್ಲಿ ನಮ್ಮ ಸರಕಾರಗಳು ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಐದು ಮತ್ತು ಆರನೇ ಘಟ್ಟಗಳನ್ನು ಪ್ರಾರಂಭಿಸಲು ಮುಂದಾಗಿದೆ.[ ಒಮ್ಮೆ ಚೆರ್ನೋಬಿಲ್ ಹಾಗೂ ಜಪಾನಲ್ಲಿ ನಡೆದಂತಹ  ಅಣು ವಿದ್ಯುತ್ ಸ್ಥಾವರಗಳ ದುರಂತವನ್ನು ನೆನಪಿಸಿಕೊಳ್ಳಿ].

15. ಹೊಸಯೋಜನೆಗಳಿಂದ ಹೊರಗಿನವರು ಉದ್ಯೋಗ ಪಡೆಯುತ್ತಿದ್ದಾರೆ ಹೊರತು ಸ್ಥಳೀಯರಿಗೆ ಸರಿಯಾದ ಉದ್ಯೋಗಗಳು ಇಂದಿಗೂ ದೊರೆತಿಲ್ಲ.

16.ಪ್ರತಿ ಜಿಲ್ಲೆಗಳಲ್ಲಿ ಇರುವಂತಹ ಕೈಗಾರಿಕಾ ಪ್ರದೇಶಗಳಿಂದ ಉದ್ಯೋಗ ದೊರೆಯುತ್ತಿರುವುದೇನೋ ನಿಜವಾದರೂ ಇದರಿಂದ ಸುತ್ತಮುತ್ತಲ ಜನರ ಆರೋಗ್ಯದ ಪರಿಸ್ಥಿತಿಗಳು ದಿನೇ ದಿನೇ ಹದಗೆಡುತ್ತಿದೆ.

17.ಕೈಗಾರಿಕೆಗಳಿಗಾಗಿ ಅಂತರ್ಜಲ ನೀರನ್ನು ಬಳಸಿಕೊಳ್ಳುವುದರ ಜೊತೆಗೆ ಕಲುಷಿತ ನೀರನ್ನು ಸುತ್ತಮುತ್ತಲ ಕೆರೆಗಳಿಗೆ ಹರಿ ಬಿಡಲಾಗುತ್ತಿದೆ.

18.ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಬೆಂಗಳೂರು, ಮೈಸೂರು ,ಹುಬ್ಬಳ್ಳಿ-ಧಾರವಾಡ, ಮಂಗಳೂರು ಜಿಲ್ಲೆಗಳದ್ಯಂತ ಕಸದ ರಾಶಿ ಬೆಟ್ಟದಷ್ಟೆತ್ತರ ಏರಲಿದೆ.

19.ಮೇಲುಕೋಟೆ - ಧನುಷ್ಕೋಟಿ ಸುತ್ತಮುತ್ತಲಿದ್ದ ಮರಗಳನ್ನು ಧರೆಗುರುಳಿಸಲಾಗಿದೆ.

20.ರಾಜ್ಯದ ಒಟ್ಟು ವಿಸ್ತೀರ್ಣದ 21% ಕಾಡಿದೆ ಎಂದು ರಾಜ್ಯ ಸರ್ಕಾರದ ವರದಿಯಲ್ಲಿದಾದರು ಪರಿಸರ ಹೋರಾಟಗಾರರ ಸಮಗ್ರ ವರದಿಯ ಪ್ರಕಾರ 19% ಕಾಡಿದೆ ಅಷ್ಟೇ.

21.ಸಾವಿರಾರು ಯೋಜನೆಗಳು ಶ್ರೀಸಾಮಾನ್ಯರ ನಡುವೆಯೇ ನಡೆಯುತ್ತಿದ್ದರು ಯೋಜನೆಗಳಿಗಾಗಿ ಕಡಿಯುತ್ತಿರುವಂತ ಮರಗಳ ವರದಿಯನ್ನು ಬಿಡುಗಡೆ ಮಾಡುತ್ತಿಲ್ಲ.

22.ಇಂದಿಗೂ ಕೂಡ ಹರಳುಗಳು ಹಾಗೂ ಮರಳಿನ ಹಗರಣ ನಡೆಯುತ್ತಲಿದೆ.

 ಹೀಗೆ ಸಾವಿರಾರು ಯೋಜನೆಗಳಿಂದ ಕೋಟ್ಯಂತರ ಮರಗಳು ದೇಶದಲ್ಲಿ ಧರೆಗುರುಳಿವೆ, ಲಕ್ಷಾಂತರ ಜನರು ಪರಿಸರದ ಅಸಮತೋಲನದಿಂದ ಸಾವಿಗೀಡಾಗುತ್ತಿದ್ದಾರೆ. ಅನೇಕ ಜನರಿಗೆ ಈ ರೀತಿಯಾದಂತಹ ಮಾಹಿತಿಗಳೇ ತಿಳಿದಿಲ್ಲ.
ತಿಳಿದವರೆಲ್ಲರೂ ತಮ್ಮ ಜೀವನದೋಟದಲ್ಲಿ ಮುಳುಗಿಹೋಗಿದ್ದಾರೆ.

 ಇಷ್ಟಾದರೂ ಸರಕಾರಗಳೇ ಸಮಿತಿಗಳನ್ನು ರಚಿಸಿ ತಯಾರಿಸಿದಂತಹ ಮಾಧವ ಗಾಡ್ಗಿಲ್ ಹಾಗೂ ಕಸ್ತೂರಿ ರಂಗನ್ ವರದಿಗಳನ್ನು ಮೂಲೆಗುಂಪಾಗಿಸಿದೆ. ನಮ್ಮ ರಾಜಕಾರಣಿಗಳೇ ಈ ವರದಿಗಳಿಂದ ಸ್ಥಳೀಯರನ್ನು ಒಕ್ಕಲೆಬ್ಬಿಸುತ್ತಾರೆ ಎಂದು ಸುಳ್ಳು ಸಂದೇಶಗಳನ್ನು ತಿಳಿಸಿದ್ದರಪರಿಣಾಮವಾಗಿ ಜನರು ಈ ವರದಿಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.  ಇವರೇನಾದರೂ ಪರಿಸರ ಆಸಕ್ತರಾಗಿದ್ದರೆ ನಿಜವಾಗಿಯೂ ಇಂತಹ ವರದಿಗಳನ್ನು ತಳ್ಳಿ ಹಾಕುತ್ತಿದ್ದಾರೆ ? ಈ ಯೋಜನೆಗಳು ಜಾರಿಯಾಗಿ ಬಿಟ್ಟರೆ ತಮ್ಮ ಜೋಬಿಗೆ ಸೇರಬಹುದಾದಂತಹ  ಹಣ ಇಲ್ಲದಗುತ್ತದಲ್ಲ ಎಂದು ಅವರ ಭಾವನೆಯಾಗಿದೆ.ಇದರಿಂದಲೇ ನಮಗೆ ತಿಳಿಯುತ್ತದೆ ರಾಜಕಾರಣಿಗಳು ಪರಿಸರದ ಮೇಲೆ ಇಟ್ಟಿರುವ ಕಾಳಜಿ.


 ಇಂದು ಕರೋನಾ ಮಹಾಮಾರಿ ವಿಶ್ವವನ್ನು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿಸಿದ್ದಾಗಿದೆ ಈ ನಿಟ್ಟಿನಲ್ಲಿ ಪ್ರತಿ ದೇಶಗಳು ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲು ಅನೇಕ ವಿದೇಶಿ ಕಂಪನಿಗಳಿಗೆ ಕೆಂಪು ಹಾಸನ್ನು ಹಾಕುವುದರ ಮೂಲಕ ತನ್ನ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ನಮ್ಮ ರಾಷ್ಟ್ರವು ಕೂಡ ವಿವಿಧ ಕೈಗಾರಿಕೆಗಳ ಸ್ಥಾಪನೆಗೆ ಎಂದು 4.61ಲಕ್ಷ ಹೆಕ್ಟೇರ್
 ಪ್ರದೇಶವನ್ನು ಗುರುತಿಸಲಾಗಿದೆ [ ಲಕ್ಸಂಬರ್ಗ್ ದೇಶದ ವಿಸ್ತೀರ್ಣದ ಎರಡುಪಟ್ಟು]  ಇದಕ್ಕಾಗಿ ಜಪಾನ್,ಅಮೆರಿಕ,ಚೀನಾ,ದೇಶಗಳಿಗೆ ಕೆಂಪು ಹಾಸನ್ನು ಹಾಸಲಾಗಿದೆ ಇವುಗಳಿಂದ ಸದ್ಯಕ್ಕೆ ನಮ್ಮ ಪರಿಸರದಮೇಲಿರುವ ಹಾನಿಗಳ ಜೊತೆಗೆ ಮತ್ತಷ್ಟು ಸೇರಿಕೊಳ್ಳಲಿದೆ. ಒಮ್ಮೆ ಯೋಚಿಸಿ ಇನ್ನೂ ನೂರಾರು ತಲೆಮಾರುಗಳಿಗೆ ಬೇಕಾಗಿರುವ ಪರಿಸರವನ್ನು ಹಾಳು ಮಾಡಿಕೊಂಡು ಸದ್ಯದ ಮಟ್ಟಿಗೆ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಪರಿ. ನಿಜವಾಗಿಯೂ ನಮಗೆ ಈ ರೀತಿಯಾದಂತಹ ಅಭಿವೃದ್ಧಿಗಳು ಬೇಕೆ?


 ಹೀಗಾಗಿ ಪರಿಸರ ಹೋರಾಟಗಾರರೇನೋ ಸರಕಾರದ ಅಥವಾ ಸರಕಾರದ ಯೋಜನೆಗಳಿಗೆ ವಿರೋಧಿಗಳಲ್ಲ ಬದಲಿಗೆ ನಮ್ಮ ಅಭಿವೃದ್ಧಿಗಳೆಲ್ಲವೂ ಕೂಡ ಪರಿಸರ ಪೂರಕವಾಗಿರಬೇಕೆನ್ನುವುದು ನಮ್ಮ ಬೇಡಿಕೆಯಾಗಿದೆ. 

1.ಹುಟ್ಟಿದ ಪ್ರತಿ ಮಗುವಿಗೆ ಎರಡು ಗಿಡದಂತೆ ಸರ್ಕಾರದ ಸಾವಿರಾರು ಹೆಕ್ಟೇರ್ ಪಾಳುಬಿದ್ದಿರುವ ಭೂಮಿಯಲ್ಲಿ ಬೆಳೆಸಬಹುದಾಗಿದೆ.

2.ಸೋಲಾರ್ ಹಾಗೂ ವಿಂಡ್ ಎನರ್ಜಿಗಳಿಗೆ ಇನ್ನಷ್ಟು ಆದ್ಯತೆಯನ್ನು ಕೊಡಬಹುದಾಗಿದೆ. 

3.ಪೆಟ್ರೋಲ್ ಅಥವಾ ಡೀಸೆಲ್ ವೆಹಿಕಲ್ಗಳನ್ನು ತೆಗೆದುಕೊಳ್ಳುವ ಬದಲಾಗಿ ಎಲೆಕ್ಟ್ರಿಕ್ ವಾಹನಗಳನ್ನು ತೆಗೆದುಕೊಳ್ಳಬಹುದಾಗಿದೆ.

ಹೀಗೆ ಕೆಲವಷ್ಟು ಮುಂಜಾಗ್ರತಾ ಕ್ರಮಗಳನ್ನು ಇಂದಿನಿಂದಲೇ ಪಾಲಿಸುವುದರ ಮೂಲಕ ಪರಿಸರವು ಸಮತೋಲನವಾಗಿರುತ್ತದೆ ಹಾಗೂ ಜನರು ಸುಭಿಕ್ಷವಾಗಿರುತ್ತಾರೆ. ಹೀಗಾಗಿ

 "ನಾವು ಪರಿಸರವನ್ನು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ".

 (Source : different news papers, journals, Magazines, internet source and many international reports)