- ಎಸ್ ಪಿ ತೇಜರಾಜು.
ವಿದ್ಯಾರ್ಥಿಗಳಾಗಿದ್ದಾಗ ಶಾಲೆ ಅಥವಾ ಕಾಲೇಜು ದಿನಗಳಲ್ಲಿ ನೀವು ಯಾವುದಾದರೂ ಶಿಬಿರಗಳಲ್ಲಿ ಭಾಗವಹಿಸಿರಬಹುದು ಅದು NSS ಆಗಿರಬಹುದು ಅಥವಾ NCC ಆಗಿರಬಹುದು, ಕೆಲವು ಶಿಬಿರಗಳು ಒಂದೆರಡು ದಿನಗಳಲ್ಲಿ ಮುಗಿದರೆ ಇನ್ನೂ ಕೆಲವು ಒಂದು ವಾರ ಅಥವಾ 10-15 ದಿನ ಹೀಗೆ ನಡೆಯುವುದುಂಟು ಅದರಲ್ಲಿಯೂ ವಿದ್ಯಾರ್ಥಿ ಜೀವನದಲ್ಲಿ ಭಾಗವಹಿಸಿದ ಪ್ರಪ್ರಥಮ ಶಿಬಿರದ ನೆನಪುಗಳು ಸದಾ ನಮ್ಮ ಸ್ಮೃತಿಪಟಲದಲ್ಲಿ ಚಿರಸ್ಥಾಯಿಯಾಗಿ ಉಳಿದಿರುತ್ತದೆ.
ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಇವರ ಸಹಯೋಗದಲ್ಲಿ ನಡೆದ ಐದು ದಿನಗಳು ( ದಿನಾಂಕ 2-9-2021 ರಿಂದ 6-9-2021 ) ಬುಡಕಟ್ಟು ಸಾಹಿತ್ಯ ಮತ್ತು ಸಂಸ್ಕೃತಿ ಶಿಬಿರದಲ್ಲಿ ಭಾಗವಹಿಸುವ ಅವಕಾಶ ಬಂದೊದಗಿತು. ಕಾಲೇಜಿನ ದಿನಗಳಲ್ಲಿ ವಿವಿಧ ರಂಗದ ಶಿಬಿರಗಳಲ್ಲಿ ಭಾಗವಹಿಸಿದ್ದ ನನಗೆ ಈ ಶಿಬಿರ ವಿಶಿಷ್ಟವಾಗಿ ಕೂಡಿತ್ತು ಏಕೆಂದರೆ ಇಲ್ಲಿ ನಾನು ಕೇವಲ ಶಿಬಿರಾರ್ಥಿಯಾಗಿರದೆ ಆಯೋಜಕರ ತಂಡದಲ್ಲಿ ಒಬ್ಬನಾಗಿದ್ದೆ.
ಶಿಬಿರವು ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸಂಸ್ಥೆಯ ವಿವೇಕ ಗಿರಿಜನ ಶೈಕ್ಷಣಿಕ ಕೇಂದ್ರ ಹೊಸಹಳ್ಳಿಯಲ್ಲಿಯೇ ನಡೆಯಲು ಒಂದು ಬಲವಾದ ಕಾರಣವಿದೆ, ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಅಂಟಿಕೊಂಡಂತಿರುವ ಈ ಪ್ರದೇಶ ಸುತ್ತಮುತ್ತಲು ಬೆಟ್ಟಗಳಿಂದ ಕೂಡಿದ್ದು ಮಳೆಗಾಲದಲ್ಲಿ ಹಚ್ಚ ಹಸಿರ ಹೊದಿಕೆಯನ್ನುದ್ದು ಜನರ ಕಣ್ಮನ ಸೆಳೆಯುತ್ತದೆ. ಸನಾತನ ಕಾಲದಿಂದಲೂ ಈ ಕಾಡೊಳಗೆ ಕಾಡಿಗೆ ಪೂರಕವಾಗಿ ಜೀವಿಸಿದವರು ಈ ಜೇನುಕುರುಬ, ಕಾಡುಕುರುಬ ಜನಾಂಗದವರ ಇಂದು ಅನೇಕ ಒತ್ತಡಗಳಿಗೆ ಸಿಲುಕಿ ಕಾಡಿನಿಂದ ಹೊರದೂಡಲ್ಪಟ್ಟು ಕಷ್ಟ ಕಾರ್ಪಣ್ಯಗಳ ನಡುವೆಯೇ ಕಪಿಲಾ ಜಲಾಶಯದ ಹಿನ್ನೀರ, ಬಂಡೀಪುರ ರಾಷ್ಟ್ರೀಯ ಉದ್ಯಾನದ ಮುಂಭಾಗದ ಮಧ್ಯದಲ್ಲಿ ಜೀವನ ನಡೆಸುತ್ತಿದ್ದಾರೆ. ಈ ಪ್ರದೇಶವೇ ಶಿಬಿರಕ್ಕೆ ಸೂಕ್ತವಾದ ತಾಣ ಎಂಬುದು ಆಯೋಜಕರ ಅಭಿಪ್ರಾಯ.
ನಗರದಲ್ಲಿರುವ ರಸ್ತೆಗಳ ಪರಿಸ್ಥಿತಿಗಳು ನಮಗೆಲ್ಲಾ ತಿಳಿದಿರುವ ವಿಚಾರವೇ, ಹಾಗಾದರೆ ಇಂತಹ ರಿಮೋಟ್ ಪ್ಲೇಸ್ ಗೆ ತಲುಪುವ ಮಾರ್ಗ ಎಷ್ಟು ಹೊತ್ತು ಆಗುತ್ತದೆ ಎಂಬುದನ್ನು ನೀವೊಮ್ಮೆ ಯೋಚಿಸಿ? ಮೈಸೂರಿನಿಂದ ಎರಡೂವರೆಗಂಟೆ ಹಾಗೂ ಬೆಂಗಳೂರಿಂದ 5:00 ಗಂಟೆ ಪಯಣ, ಆದ್ದರಿಂದಲೇ ಉತ್ತರ ಕರ್ನಾಟಕದಿಂದ ಆಗಮಿಸುವ ಶಿಬಿರಾರ್ಥಿಗಳೆಲ್ಲರೂ ಎರಡು ದಿನಗಳ ಮುಂಚಿತವಾಗಿಯೇ ತಮ್ಮ ಊರುಗಳಿಂದ ಹೊರಟಿದ್ದರು.
ಕಾರ್ಯಕ್ರಮ ಪ್ರಾರಂಭವಾಗುವ ದಿನದವರೆಗೂ ನಾನು ಕನ್ನಡದ ಸಾಹಿತ್ಯ ಅಕಾಡೆಮಿಯ ವ್ಯಕ್ತಿಗಳನ್ನು ನೇರವಾಗಿ ಬೇಟೆ ಆಗದೆ ಹೋದರು ಸಹ ಒಂದೆರಡುಬಾರಿ ಗೂಗಲ್ ಮೇಟ್ ನಲ್ಲೆ ಪರಿಚಯವಾಗಿತ್ತು. ಅಂದು ಕಾರ್ಯಕ್ರಮದ ಉದ್ಘಾಟನಾ ಸಮಾರಂಭಕ್ಕೆ ರಾಜ್ಯದ್ಯಂತ ಶಿಬಿರಾರ್ಥಿಗಳು, ಕಾರ್ಯಕ್ರಮದ ಅತಿಥಿಗಳೊಂದಿಗೆ ಉದ್ಘಾಟನಾ ಸಮಾರಂಭ ಆರಂಭವಾಯಿತು, ಮುಖ್ಯವೇದಿಕೆಯಲ್ಲಿ ಡಾ ಬಾಲಸುಬ್ರಹ್ಮಣ್ಯಂ, ಸಾಮರ್ಥ್ಯ ಅಭಿವೃದ್ಧಿ ಆಯೋಗ ಮಾನವ ಸಂಪನ್ಮೂಲ, ಭಾರತ ಸರ್ಕಾರ, ನವದೆಹಲಿ ಇವರು ಹಾಗೂ ಮುಖ್ಯ ಅತಿಥಿಗಳು ಡಾ ಈ ಚಿ ಬೋರಲಿಂಗಯ್ಯ ವಿಶ್ರಾಂತ ಕುಲಪತಿಗಳು ಕನ್ನಡ ವಿಶ್ವವಿದ್ಯಾಲಯ ಹಂಪಿ, ಕಮ್ಮಟದ ನಿರ್ದೇಶಕರಾಗಿದ್ದಂತಹ ಪ್ರೊ ನೀಲಗಿರಿ ತಳವಾರ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಆದಂತಹ ಶ್ರೀ ಕರಿಯಪ್ಪ ಎಸ್, ವಿವೇಕನಂದ ಭಾರತೀಯ ಅಧ್ಯಯನ ಸಂಸ್ಥೆಯ ನಿರ್ದೇಶಕರು ಡಾಕ್ಟರ್ ರೇಖಾ ಷಣ್ಮುಖ, ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದಂತಹ ಡಾ ಬಿ ವಿ ವಸಂತಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಡೆಸಿಕೊಟ್ಟರು.
ಕಾರ್ಯಕ್ರಮವನ್ನು ಗಿಡ ನೆಡುವುದರೊಂದಿಗೆ ಹಾಗೂ ಬುಡಕಟ್ಟು ಜನರ ಜಾನಪದ ಗೀತೆಯನ್ನು ಮಕ್ಕಳಿಂದ ಹಾಡಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ ಬಾಲಸುಬ್ರಹ್ಮಮಣ್ಯಂ ಅವರು ಇಂದು ಜನಸಾಮಾನ್ಯರಲ್ಲಿ ಬುಡಕಟ್ಟು ಜನರ ಅಭಿವೃದ್ಧಿ ಎಂದರೆ ಅವರನ್ನು ಕಾಡಿನಿಂದ ಹೊರಗೆ ತಂದು ನಗರದ ಜೀವನಕ್ಕೆ ಒಂದು ಕೊಳ್ಳುವಂತೆ ಒತ್ತಾಯಪೂರ್ವಕವಾಗಿ ಮಾಡುವುದೇ ಎಂಬುದು ಎಲ್ಲರ ನಂಬಿಕೆಯಾಗಿದೆ ಆದರೆ ನಿಜವಾಗಿಯೂ ಬುಡಕಟ್ಟು ಜನರ ಏಳಿಗೆ ಎಂದರೆ ಏನು ? ತಾವು ಮೂವತ್ತೇಳು ವರ್ಷಗಳ ಹಿಂದೆ ಈ ಪ್ರದೇಶಕ್ಕೆ ಬಂದಾಗ ಇಲ್ಲಿಯ ಮೂಲನಿವಾಸಿಗಳಿಂದ ಕಲಿತ ಅಭಿವೃದ್ಧಿಯ ದೃಷ್ಟಿಕೋನ ಹಾಗೂ ಜೇನುಕುರುಬ ಹಾಗೂ ಕಾಡುಕುರುಬರ ಹಿಂದಿರುವ ಸ್ವಾರಸ್ಯಕರವಾದಂತಹ ಮಾಹಿತಿಯನ್ನು ಎಳೆಯಾಗಿ ಶಿಬಿರಾರ್ಥಿಗಳಿಗೆ ವಿವರಿಸಿದರು ನಂತರ ವೇದಿಕೆಯ ಮೇಲೆ ಇದ್ದಂತಹ ಅತಿಥಿಗಳೆಲ್ಲರೂ ಮಾತನಾಡಿ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳುವುದಾಗಿ ಹೇಳಿ ಊಟವಾದನಂತರ ಶಿಬಿರಾರ್ಥಿಗಳ ಪರಿಚಯ ಹಾಗೂ ಶಿಬಿರಕ್ಕೆ ಆಗಮಿಸಿರುವ ಉದ್ದೇಶವನ್ನು ತಿಳಿಯುವುದರ ಮೂಲಕ ಗೋಷ್ಠಿಗಳು ಪ್ರಾರಂಭವಾಗತೊಡಗಿದವು.
ಅಂದಿನ ದಿನ ಕುತೂಹಲ ಕೆರಳಿಸಿದ ಬಹಳ ಅದ್ಭುತವಾದಂತಹ ಗೋಷ್ಠಿ ಎಂದರೆ ಬುಡಕಟ್ಟು ಅಧ್ಯಯನ ಮತ್ತು ಸಂಶೋಧನೆ ಎಂಬ ವಿಷಯ, ಮಾತನಾಡಿದವರು ಡಾ. ನಾಗ ಎಚ್. ಬೆಳಿಗ್ಗೆಯಿಂದ ನಮ್ಮೊಂದಿಗೆ ಇದ್ದರೂ ಸಹ ಯಾರಿಗೂ ತಿಳಿಯದ ರೀತಿ ಕಾರ್ಯಕ್ರಮ ಆಲಿಸುತ್ತಿದ್ದರು.
ಬಹಳ ಸಾಧಾರಣರಂತೆ ನಮ್ಮೊಂದಿಗೆ ಕುಳಿತಿದ್ದ ಅವರು ಗೋಷ್ಠಿಯನ್ನು ಮೆಲುದನಿಯಲ್ಲಿ ಪ್ರಾರಂಭಿಸುತ್ತಾ ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಸಂಶೋಧನೆಯನ್ನು ಮಾಡಿಬಿಟ್ಟರೆ ನಮಗೆ ತಲೆಯ ಮೇಲೆ ಕಿರೀಟ ಇಟ್ಟಿರುವ ಹಾಗೆ ಹಾಡುತೇವೆ, ಇದು ನನಗೂ ಕೂಡ ಬಿಟ್ಟಿರಲಿಲ್ಲ, ಎಂದು ಕೆಲಸದ ನಿಮಿತ್ತ ಜಾರ್ಖಂಡ್ ನಾ ರಾಂಚಿಗೆ ತಲುಪಿದೆನು ಅಂದಿನಿಂದ ನಿಜವಾದ ಸಂಶೋಧನೆಯ ಅರ್ಥ ಅರಿವಾಗತೊಡಗಿತು, ಶೈಕ್ಷಣಿಕವಾಗಿ ಬಹಳ ಇಂದೇ ಉಳಿದಿರುವ ರಾಜ್ಯಗಳಾದಂತಹ ಜಾರ್ಖಂಡ್ನಲ್ಲಿ ಪಾಠ ಮಾಡುವುದು ಸವಾಲಿನ ವಿಷಯವೇ, ಅದರಲ್ಲಿಯೂ ಸಂಶೋಧನೆ ಎಂಬುದು ಮತ್ತೊಂದು ಆಯಾಮವೇ, ಎಲ್ಲೆಲ್ಲೂ ಚದುರಿದಂತೆ ದೂರದಲ್ಲಿ ಬೆರಳೆಣಿಕೆಗೆ ಸಿಗಲಾರದಷ್ಟು ಸ್ನಾತಕೋತ್ತರ ವ್ಯಾಸಂಗ ಮಾಡಿದವರು ಸಿಗುತ್ತಾರೆ.
ತಾನು ವಿದ್ಯಾರ್ಥಿ ಜೀವನದ ನಾಲ್ಕು ಗೋಡೆಗಳ ಮಧ್ಯದಲ್ಲಿ ಸಂಶೋಧನೆಯ ಬಗ್ಗೆ ಕಲಿತ ವಿಷಯಗಳಿಗಿಂತ ಸ್ವತಹ ಸಂಶೋಧನೆಗೊಂದು ಕ್ಷೇತ್ರದಲ್ಲಿ ಇಳಿದಾಗ ಕಲಿತದ್ದೆ ಬಹಳ ಇದೆ ಎಂದು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಪ್ರಾರಂಭಿಸ ತೊಡಗಿದರು, ರಾಂಚಿಯ ಎಲೆಮರೆ ಕಾಯಿಗಳಂತೆ ಕಾಡಿನೊಳಗೆ ಜೀವಿಸುತ್ತಿರುವ ಬುಡಕಟ್ಟು ಜನರ ಬಗ್ಗೆ ಅಧ್ಯಯನ ಮಾಡುವುದು ಇವರ ಆಸಕ್ತಿದಾಯಕ ವಿಷಯವಾಗಿತ್ತು ಆದರೆ ಅದು ಅಷ್ಟು ಸುಲಭದ ಮಾತಾಗಿರಲಿಲ್ಲ, ಇಲ್ಲಿಯ ಬುಡಕಟ್ಟಿನವರು ನಿಜವಾಗಿಯೂ ಅಂಡಮಾನ್-ನಿಕೋಬಾರ್ ಗಳಲ್ಲಿ ಕಾಣಸಿಗುವ ಬುಡಕಟ್ಟು ಜನರಂತೆ ಹೊರಗಿನವರನ್ನು ಕಂಡರೆ ವಿಷದ ಬಾಣವನ್ನು ಹೂಡಿ ಸಾಯಿಸಿ ಬಿಡುತ್ತಾರೆ, ಈ ರೀತಿ ಅವರು ನಡೆದುಕೊಳ್ಳಲು ಅನೇಕ ಬಲವಾದ ಕಾರಣಗಳಿವೆ.
ಇವುಗಳ ಹೊರತಾಗಿಯೂ ಒಮ್ಮೆ ಇವರನ್ನು ಭೇಟಿಯಾಗಬೇಕೆಂದು ದೃಢನಿರ್ಧಾರವನ್ನು ಮಾಡಿ ಬಹಳ ಕಷ್ಟಪಟ್ಟು ಬುಡಕಟ್ಟು ವ್ಯಕ್ತಿಯೊಬ್ಬನನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾತನಾಡಿಸಿ ಅಧ್ಯಯನಕ್ಕೆಂದು ನಿಮ್ಮ ಕಾಡಿಗೆ ಕರೆದುಕೊಂಡು ಹೋಗುವೆಯ ಎಂದು ಹೇಳಿದ್ದಾಯ್ತು ಆದರೆ ಇವರಿಂದ ಯಾವುದೇ ಪ್ರತಿಕ್ರಿಯೆ ದೊರಕದೆ ಬಹಳಷ್ಟು ದಿನ ಕಾದು ಕೊನೆಗೊಂದು ದಿನ ಅವರ ಸಮುದಾಯದ ಹಿರಿಯ ಮುಖಂಡರ ಅಪ್ಪಣೆಯಾದ ಬಳಿಕ ಕಾಡಿಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿ, ಬಹಳ ದಿನಗಳ ನಂತರ ತಾನು ಹೇಳಿದ ಮಾರ್ಗಕ್ಕೆ ಬರುವಂತೆ ಹೇಳಿದ ಬಳಿಕ ಆ ಪ್ರದೇಶಕ್ಕೆ ಹೋಗಲು ಕಾಡು ದಾರಿಯಲ್ಲಿ ನಡೆದುಕೊಂಡು ನದಿಯ ಸಮೀಪಕ್ಕೆ ಹೋಗಿ ನಿಂತರು, ಇಲ್ಲಿ ಹೆಣದ ರಾಶಿ ಕಾಣಸಿಗುವುದು ತೀರಾ ಸಾಮಾನ್ಯ ವಿಷಯವೇ ಆದರೂ ಒಮ್ಮೆ ಭಯವಾಗಿದಂತೂ ಸತ್ಯ ನಂತರ ದೂರದಲ್ಲಿಯೇ ಬುಡಕಟ್ಟು ಜನರು ಇವನನ್ನು ಗುರುತಿಸಿ ಬಾಣವನ್ನು ಬಿಡಲು ಹೊರಟರು ಆದರೆ ಇವರು ತಮ್ಮ ಕೈಯಲ್ಲಿ ಹಿಡಿದು ನಿಂತಿದ್ದ ಒಂದು ಪ್ರಾಣಿ ಚರ್ಮದ ಬಿಲ್ಲೆಯನ್ನು ಕಂಡು ಇವನು ನಮ್ಮನ್ನು ಭೇಟಿ ಮಾಡಲು ಬಂದಿರುವುದೆಂದು ತಿಳಿದು ಕಾಡಿನ ಆ ಬದಿಯಿಂದ ಒಂದೆರಡು ಬಿದಿರುಗಳನ್ನು ಕಟ್ಟಿದ್ದ ತೆಪ್ಪವೂ ಅಲ್ಲದ ತೆಪ್ಪದಲ್ಲಿ ಇವರನ್ನು ಕೂರಿಸಿಕೊಂಡು ಕಾಡಿನ ಮತ್ತೊಂದು ಬದಿಗೆ ಕರೆದುಕೊಂಡುಹೋದರು ಅಲ್ಲಿ ಇವರನ್ನು ತಪಾಸಣೆಗೆ ಒಳಪಡಿಸಿ ತಮ್ಮ ಸನ್ನೆ ಭಾಷೆಯಲ್ಲಿ ಏನನ್ನೋ ಕೂಗಿ ದೂರದವರೆಗೆ ವಿಷಯ ಮುಟ್ಟುವಂತೆ ಹೇಳಿದರು ನಂತರ ನಾಲ್ಕು ಜನ ಬಾಂಬ್ ಹಿಡಿದುಕೊಂಡಿದ್ದವರ ಸುತ್ತುವರೆದು ಚಟ್ಟದ ರೀತಿ ತಯಾರಿಸಿದ್ದ ಬಿದಿರ ಮೇಲೆ ಕಣ್ಣಿಗೆ ಬಟ್ಟೆಯನ್ನು ಕಟ್ಟಿ ಐದು ಜನ ಹೊತ್ತು ಬಹಳ ಹೊತ್ತು ನಡೆದರು, ಯಾವಾಗ ಈ ರೀತಿ ಆಗತೊಡಗಿತು ನಾನು ಹಿಂದಕ್ಕೆ ಬರುವುದಿಲ್ಲ ಎಂದು ಮನಸ್ಸಿನಲ್ಲಿಯೇ ದೃಢ ಸಂಕಲ್ಪವನ್ನು ಮಾಡಿಕೊಂಡಿದ್ದೆ.
ಕೊನೆಗೆ ಬಹಳಷ್ಟು ದೂರ ನಡೆದ ನಂತರ ಎಲ್ಲಿಯೋ ತಂದು ನಿಲ್ಲಿಸಿ ಕಣ್ಣಿಗೆ ಕಟ್ಟಿದ್ದ ಬಟ್ಟೆಯನ್ನು ಸಡಿಲಿಸಿದರು ನಿಧಾನವಾಗಿ ಕಣ್ಣುಗಳನ್ನು ತೆರೆದು ಸುತ್ತಮುತ್ತಲ ಬೆಟ್ಟಗುಡ್ಡಗಳ ಹಸಿರು ಹೊದಿಕೆಯನ್ನು ಕಂಡು ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತೆ ಭಾಸವಾದರೂ ಪಕ್ಕದಲ್ಲಿ ನಿಂತಿದ್ದ ಆದಿವಾಸಿಗಳನ್ನು ಕಂಡು ನರಕ ದರ್ಶನವಾಯಿತು. ಸುತ್ತಲು ಕಾಣಿಸುತ್ತಿದ್ದ ಬೆಟ್ಟಗುಡ್ಡಗಳಲ್ಲಿ ಹಸಿರು ನಳನಳಿಸುತ್ತಿತ್ತು ಇನ್ನು ಸ್ವಲ್ಪ ದೂರ ನಡೆದು ಕೊನೆಗೆ ಒಂದು ಸಾಧಾರಣ ತರಗೆಲೆಗಳಿಂದ ಹೊದಿಸಿದ್ದ ಮಣ್ಣಗೋಡೆಯ ಮನೆ ಕಾಣಿಸಿತು, ಮನೆಯೊಳಗೆ ಪ್ರವೇಶಿಸಲು ಪುಟ್ಟದಾದ ಒಂದು ದ್ವಾರ, ಬಗ್ಗಿ ಒಳಗೆ ಹೋದರೆ ಯಾರು ಕಾಣುತ್ತಿಲ್ಲ, ಪಕ್ಕದಲ್ಲಿದ್ದ ಸೇನಕರ ಜೊತೆ ಒಂದೆರಡು ನಿಮಿಷ ಕಳೆದು ಮನೆಯ ತಗರು ಹೊದಿಕೆಯ ಸಂಧಿಯಲ್ಲಿ ಬರುತ್ತಿದ್ದಾ ಬೆಳಕು ಮುಸುಕು ಮಸುಕಾಗಿತ್ತು, ಆ ಮುಸುಕು ಬೆಳಕಿನಲ್ಲಿ ಎಂದೂ ಕೈಯಾಡಿಸಿದ ತಲೆಯ ಕೂದಲು, ಗಡ್ಡ, ಸುಕ್ಕುಗಟ್ಟಿದ ಕಪ್ಪು ಮೈಬಣ್ಣ ಇಳಿ ವಯಸನ್ನು ಎದ್ದು ತೋರುತ್ತಿದ್ದ ವ್ಯಕ್ತಿಯು ಬಂದು ಮುಂದೆ ಕುಳಿತುಕೊಳ್ಳುತ್ತಿದ್ದಂತೆ ಎದೆಬಡಿತ ಇನ್ನಷ್ಟು ವೇಗವನ್ನು ಪಡೆಯಿತು. ನನ್ನ ಪ್ರಾಣ ಹೋಯಿತು ಎಂದು ಎಂದುಕೊಳ್ಳುತ್ತಿದ್ದಂತೆ ಮಾತಿಗಿಳಿದ ಆ ಬುಡಕಟ್ಟು ಜನರ ಹಿರಿಯ ವ್ಯಕ್ತಿ ಬಂದಿರುವ ಉದ್ದೇಶವನ್ನು ಕೇಳಿ ತಿಳಿದುಕೊಂಡರು, ಆಗಲೇ ಅನಿಸಿದ್ದು ಈತನೇ ಬುಡಕಟ್ಟು ಜನರಿಗೆ ಎಲ್ಲರಿಗೂ ಸ್ವಲ್ಪ ತಿಳಿದವ ಎಂದು ಕಾಣುತ್ತದೆ ಏಕೆಂದರೆ ಹೊರಗಿನವರ ಮಾತನ್ನು ಕೇಳುವ ಸಮಾಧಾನವಾದರೂ ಸ್ವಲ್ಪ ಇದೆ. ಹೇಗೋ ಮಾತನಾಡಿಸಿ ವಿಶ್ವಾಸವನ್ನುಗಳಿಸಿದ ನಂತರ ಈ ಹೊರಗಿನ ವ್ಯಕ್ತಿಯ ಮೇಲೆ ನಂಬಿಕೆ ಬಂದು ಇವರ ಸುತ್ತಮುತ್ತಲ ಪ್ರದೇಶವನ್ನು ತೋರಿಸಿ ಬರುವುದಾಗಿ ತನ್ನ ಸೇವಕರಿಗೆ ಹೇಳಿದನು, ಅದರಂತೆ ಇವರನ್ನು ಸುತ್ತಮುತ್ತಲೂ ಇರುವ ಜಾಗಗಳನ್ನು ತೋರಿಸುತ್ತಾ ಸಂಜೆಯಾಗುತ್ತಾ ಹಿಂತಿರುಗೆ ಹೋಗೋಣವೆಂದು ನಾಯಕ ಬಳಿ ಮಾತನಾಡಿದಾಗ ಅವರ ವಿಶ್ವಾಸವನ್ನು ಗಳಿಸಿದ ಕಾರಣ ಅವರನ್ನು ಅಂದು ಅಲ್ಲಿಯೇ ಉಳಿಸಿಕೊಂಡಿರು, ಒಂದೆರಡು ಗಂಟೆಯೊಳಗೆ ಭೇಟಿಯನ್ನು ಮುಗಿಸಿಕೊಂಡು ಬರಬೇಕು ಎಂದುಕೊಂಡಿದ್ದ ಇವರ ಯೋಚನೆ ಅವರ ವಿಶ್ವಾಸಕ್ಕೆ ಭಜನವಾಗಿ ಎರಡು ದಿನ ಅಲ್ಲಿಯೇ ಉಳಿವ ಸುವರ್ಣಾವಕಾಶ ಜೀವನದಲ್ಲಿ ಬಂದಿತಲ್ಲಾ ಎಂದು ಆನಂದವಾಯಿತು. ಆ ಎರಡು ದಿನಗಳಲ್ಲಿ ಜೀವನದಲ್ಲಿ ಎಂದೂ ತಿನ್ನದ ಹತ್ತಾರು ಬಗೆಯ ಕಾಡು ಹಣ್ಣುಗಳನ್ನು ಸವಿಯುತ್ತ ಅವರ ಗುರುಕುಲದ ಬಗ್ಗೆ ಮಾಹಿತಿ ತಿಳಿದುಕೊಳ್ಳುವಂತಾಯಿತು ನಮ್ಮಲ್ಲಿ ಶಾಲೆ ಇರುವಾಗ ಹಾಗೆ ಅವರಲ್ಲಿ 5 ವಯಸ್ಸಿನಿಂದ 25 ವಯಸ್ಸಿನವರೆಗೂ ಎಲ್ಲಾ ಹುಡುಗ ಹುಡುಗಿಯರನ್ನು ಒಂದೇ ಜಗದಲ್ಲಿ ಇರಿಸಲಾಗುತ್ತದೆ ಇಲ್ಲಿ ಪ್ರತಿಯೊಬ್ಬರೂ ಅನ್ಯೋನ್ಯವಾಗಿ ಸೋದರ-ಸೋದರಿಯರು ಸಂಬಂಧಿಕರಂತೆ ಬಾಳುತ್ತಾರೆ. ಯಾವುದೇ ತಾರತಮ್ಯ ಭೇದ
ಭಾವಗಳಿಲ್ಲದೆ ಇವರನ್ನು ಸಮುದಾಯದ ವಿಧವೆಯರು ನೋಡಿಕೊಳ್ಳುತ್ತಾರೆ. ಮುಂದೆ ಈ ಮಕ್ಕಳು ಬೆಳೆದು ತಮ್ಮ ಜೀವನಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಭೂಮಿಯನ್ನು ಉಳುಮೆ ಮಾಡಿ ಅದುವೆ ವರ್ಷಕ್ಕೆ ಬೇಕಾಗುವಷ್ಟು ಮಾತ್ರ ಆಹಾರ ಪದಾರ್ಥವನ್ನು ಬೆಳೆದುಕೊಂಡು ಪ್ರತಿದಿನವೂ ಸಂಜೆ ಎಲ್ಲರೊಟ್ಟಿಗೆ ಹಾಡಿಕೊಂಡು ನೃತ್ಯಮಾಡಿ ದಿನ ಕಳೆಯುತ್ತಾರೆ. ಹೀಗೆ ಸಂಶೋಧನೆಯಲ್ಲಿ ನನ್ನನ್ನು ತೊಡಗಿಸಿಕೊಂಡಾಗ ಇಂತಹ ಮಜಲುಗಳೆಲ್ಲವೂ ಕಾಣಸಿಗುತ್ತವೆ. ಇವರಲ್ಲಿರುವ ಸಾಮರಸ್ಯ ಜೀವನ ನಮ್ಮೆಲ್ಲರಿಗೆ ಮಾರ್ಗದರ್ಶನವಾಗಬೇಕು. ಇವರಲ್ಲಿ ಅಡಗಿರುವ ಅಪಾರವಾದಂತಹ ಜ್ಞಾನ ಪರಂಪರೆಯ ಬಗ್ಗೆ ಎಂದೂ ಬರೆದಿಡುವ ಪ್ರಯತ್ನಗಳು ನಡೆದಿಲ್ಲ ಬರೆಯಲು ಇವರ್ಯಾರಿಗೂ ಬರುವುದಿಲ್ಲ ಬರೆದು ಕೊಡುವುದಾದರೆ ಅವರಿಗೆ ತಿಳಿಯುವುದು ಇಲ್ಲ ಅಷ್ಟು ಮುಗ್ಧರು ಇವರು, ಹೀಗೆ ನನಗಾದ ಅನುಭವವನ್ನು ಜಾರ್ಖಂಡ್ ಆದಿವಾಸಿ ಬದುಕು ಎಂಬ ಪುಸ್ತಕದಲ್ಲಿ

ತಿಳಿಸಿದ್ದೇನೆ ಹಾಗೂ ಆ ಪುಸ್ತಕದಲ್ಲಿ ಬುಡಕಟ್ಟು ಸಮುದಾಯದ ಭಾಷೆಯ ಕೆಲವು ಪದಗಳ ಅರ್ಥವನ್ನು ಕನ್ನಡದಲ್ಲಿಯೂ ನೀಡಲಾಗಿದೆ ಎನ್ನುತ್ತಾ ಈ ಬುಡಕಟ್ಟು ಅಧ್ಯಯನ ಮತ್ತು ಸಂಶೋಧನೆ ಎಂದು ಮುಗಿಯದ ವಿಷಯವಸ್ತುಗಳು ಆದುದರಿಂದಲೇ ನೀವೆಲ್ಲರೂ ಇನ್ನೂ ಹೆಚ್ಚೆಚ್ಚು ಕ್ಷೇತ್ರಕಾರ್ಯದಲ್ಲಿ ಮುಳುಗಿ ಇನ್ನಷ್ಟು ಜ್ಞಾನ ಸಂಪಾದನೆಯನ್ನು ಮಾಡಿಕೊಳ್ಳಿ. ಬಹಳಷ್ಟು ಅದ್ಭುತವಾದಂತಹ ಪುಸ್ತಕಗಳು ನಮ್ಮಲ್ಲಿವೆ ಅವುಗಳನ್ನು ಓದುವ ಪ್ರಯತ್ನವನ್ನು ಮಾಡಿ. ನಾನು ಕೂಡ ತಿಳಿದುಕೊಂಡಿರುವುದು ಏನೇನು ಅಲ್ಲ ಪ್ರತಿದಿನವೂ ಹೊಸ ಕಲಿಕೆ ಆಗುತ್ತಿದೆ ಎಂಬುದರ ಮೂಲಕ ನಗುಮುಖದಲ್ಲ ವಿದ್ಯಾರ್ಥಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತಾ ಕಾಫಿಯನ್ನು ಶಿಬಿರಾರ್ಥಿಗಳೊಂದಿಗೆ ಕುಡಿದು ಹೊರಟರು.
ನಂತರ ಶ್ರೀ ಎಸ್ ಪ್ರವೀಣ್ ಕುಮಾರ್ ಅವರ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ನಡೆದು ಬಂದ ಹಾದಿಯ ಬಗ್ಗೆ ಸವಿಸ್ತಾರವಾಗಿ ಪಿಪಿಟಿ ಪ್ರೆಸೆಂಟೇಶನ್ ನ ಮೂಲಕ ವಿವರಿಸುತ್ತ, ಇವತ್ತಿನ ಪರಿಸ್ಥಿತಿಗೂ ಸುಮಾರು 37 ವರ್ಷಗಳಿಂದ ಇಲ್ಲಿದ್ದ ಪರಿಸ್ಥಿತಿಗಳನ್ನು ವಿವರಿಸುತ್ತಾ, ಸಂಸ್ಥಾಪಕರು ಸಮುದಾಯದ ಅಭಿವೃದ್ಧಿಗೆಂದು ಇಲ್ಲಿಗೆ ಬಂದಾಗ ಇಲ್ಲಿಯ ಜನರಿಂದ ಕಲಿತದ್ದೇ ಹೆಚ್ಚು, ವರ್ಷಗಳು ಕಳೆಯುತ್ತಿದ್ದಂತೆ ಹೇಗೆಲ್ಲಾ ಸಂಸ್ಥೆಯು ವಿವಿಧ ಮಜಲುಗಳು ತೆರೆದುಕೊಂಡವು, ಬಹುಬಗೆಯ ಪ್ರಶಸ್ತಿಗಳು ಬರಲಿಕ್ಕೆ ಕಾರಣಗಳು, ಹೊಸ ಹೊಸ ಪ್ರಯೋಗಗಳ ಮೂಲಕ ಸಮುದಾಯದ ಹೇಳಿಗೆಗೆ ಪ್ರಾಪ್ತವಾಗಿದ್ದು ಹೇಗೆ ಎಂಬಿತ್ಯಾದಿ ಹತ್ತಾರು ಬಗೆಯ ಮಾಹಿತಿಯನ್ನು, ಶಿಬಿರಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನು ನೀಡುವುದರ ಮೂಲಕ ಮೊದಲ ದಿನದ ಕಾರ್ಯಕ್ರಮಗಳು ಮುಕ್ತಾಯಗೊಂಡವು.
ಮರುದಿನ ಮುಂಜಾನೆ ಶಿಬಿರದ ಮೊದಲ ದಿನದ ಯೋಗಸನ ತರಗತಿ ಪ್ರಾರಂಭವಾಯಿತು ಯೋಗಾಸನವನ್ನು ಹೇಳಿಕೊಡುತ್ತಿದ್ದ ತಿಮ್ಮಯ್ಯನವರು ನಮ್ಮ ನಮ್ಮ ಯೋಗ್ಯತ ಅನುಸಾರ ಮಾಡುವುದೇ ಯೋಗ ಅದು ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ. ಇಲ್ಲಿಯ ಕೆಲವರು ಮೊದಲಿಂದಲೂ ಯೋಗಾಸನವನ್ನು ಮಾಡಿರಬಹುದು ಆದರೆ ಇನ್ನು ಕೆಲವರಿಗೆ ಇದೇ ಮೊದಲ ಬಾರಿಗೆ ಯೋಗಾಸನ ಮಾಡುತ್ತಿರಬಹುದು ಅಡ್ಡಿ ಇಲ್ಲ ಆದರೆ ಪಕ್ಕದವರು ಹೇಗೆ ಮಾಡುತ್ತಿದ್ದಾರೆ ಎಂಬುದನ್ನು ನೋಡುವುದನ್ನು ಬಿಟ್ಟು ತಮಗೆ ಎಷ್ಟು ಸಾಧ್ಯವೋ ಅಷ್ಟನ್ನೇ ಮಾಡಿ. ಯೋಗಾಸನದಲ್ಲಿ ಬಹುಮುಖ್ಯವಾಗಿ ಗಮನಿಸಬೇಕಾಗಿರುವುದು ಉಸಿರಾಟ ಇದೊಂದನ್ನು ಗಮನಿಸಿ ಬಿಟ್ಟರೆ ಸಾಕು ನೂರು ವರ್ಷ ಆರಾಮವಾಗಿ ಬದುಕುವುದರಲ್ಲಿ ಸಂದೇಹವೇ ಇಲ್ಲ ಎನ್ನುತ್ತಾ ಪ್ರಾಣಾಯಾಮವನ್ನು, ಆಸನಗಳನ್ನು, ಮನುಷ್ಯನ ಆಹಾರಕ್ರಮ ಹೇಗಿರಬೇಕೆಂದು ಹೇಳಿಕೊಡುವುದರ ಮೂಲಕ ಅಂದಿನ ಯೋಗಸನ ತರಗತಿ ಮುಕ್ತಾಯಗೊಂಡು ಸ್ನಾನ ತಿಂಡಿ ಮುಗಿಸಿ ಕೊಂಡು ಗೋಷ್ಠಿಗಾಗಿ ಎಲ್ಲರೂ ಬಂದು ಕ್ಲಾಸ್ ರೂಂ ಸೇರಿದರು.
ಅಂದು ಮೊದಲೇ ನಿಯೋಜನೆಯಾದ ಶೆಡ್ಯೂಲ್ ನ ಪ್ರಕಾರದಂತೆ ತರಗತಿಗಳು ಪ್ರಾರಂಭವಾದವು. ಅಂದಿನ ಒಂದೆರಡು ಗೋಷ್ಠಿಗಳು ಅದರಲ್ಲಿಯೂ ಬುಡಕಟ್ಟು ಸಾಹಿತ್ಯ ಹಾಗೂ ಜ್ಞಾನ-ಪರಂಪರೆ ವಿಷಯ ನನ್ನ ಮನಸ್ಸಿನ ಮೇಲೆ ಆಳವಾದ ಪ್ರಭಾವವನ್ನು ಬೀರಿ ಆಲೋಚನೆಯ ಪಥವನ್ನೇ ಬದಲಾಯಿಸಿತು.
ಕುವೆಂಪು ಅವರು ಹಾಕಿಕೊಟ್ಟ ವಿಶ್ವಮಾನವನ ಕಲ್ಪನೆಯ ಪಥದಲ್ಲಿ ಜೀವನ ನಡೆಸುವುದು ನನ್ನ ಆಶಯ ಹಾಗೂ ಆಚರಣೆಯು ಕೂಡ. ಹೀಗೆ ಒಮ್ಮೆ ಆಲೋಚಿಸುವುದಾದರೆ ನಮ್ಮ ಹತ್ತರಿಂದ ಹದಿನೈದು ತಲೆಮಾರಿನ ಇಂದಿನವರು ವಿಶ್ವಮಾನವನ ರೀತಿಯಲ್ಲಿಯೇ ಬದುಕಿ ಬಾಳಿದವರು ಆದರೆ ಅನೇಕ ಕಾರಣಗಳಿಂದ ಧರ್ಮದ ಪರಧಿಯೊಳಗೆ ಜೋತು, ವರ್ಣವ್ಯವಸ್ಥೆಯನ್ನು ಮಾಡಿಕೊಳ್ಳುತ್ತಾ ಮುಂದೆ ಅದು ಜಾತಿ ಮನೆತನಕ್ಕೆ ಒಳಪಟ್ಟು, ಉಪಪಂಗಡಗಳಾಗಿ ಸೀಳುತ್ತಾ, ಮತ್ತದರೊಳಗೆ ಬಗೆಬಗೆಯ ಗೋತ್ರ ಶಾಸ್ತ್ರಗಳನ್ನು ಪಾಲಿಸುತ್ತಾ ಒಂದು ಕಡೆಯಿಂದ ಚಿದ್ರವು ಮತ್ತೊಂದು ಕಡೆಯಿಂದ ಭದ್ರವು ಆಗುತ್ತಾ ಪೂಜೆ-ಪುನಸ್ಕಾರ, ಸಂಸ್ಕೃತಿ, ಆಚರಣೆಗಳನ್ನು ಮೈಗೂಡಿಸಿಕೊಂಡಂತಹದ್ದು. ಈ ಪ್ರಸ್ತಾವನೆ ಏಕೆಂಬುದನ್ನು ಒಂದು ಉದಾಹರಣೆಯ ಮೂಲಕ ತಿಳಿಸುತ್ತೇನೆ, ಪ್ರತಿಯೊಂದು ರಾಜಮನೆತನಗಳ ಮೂಲ ನೆಲೆಗಳು ನಮ್ಮ ಪೂರ್ವಜರ ರೀತಿಯಂತೆ ಇದ್ದವರೆ ಆದರೆ ಅವರು ಕಾಲಕ್ರಮೇಣ ರಾಜಾಡಳಿತ ಪಥಕ್ಕೆ ಹೊರಳುತ್ತಾ ಅವರದ್ದೇ ಆದಂತಹ ರಾಷ್ಟ್ರಲಾಂಛನ, ರಾಷ್ಟ್ರಗೀತೆ, ರಾಷ್ಟ್ರ ದೇವತೆ, ರಾಷ್ಟ್ರಪ್ರಾಣಿ, ಪಕ್ಷಿ, ಮರ, ಹೂ, ಹಣ್ಣು ಹೀಗೆ ನಾನಾ ವಿಧವಾಗಿ ಮಾಡಿಕೊಂಡಿದ್ದಲ್ಲವೇ ?
ಈ ರೀತಿಯ ನಮ್ಮೊಳಗೆ ಪಂಗಡಗಳು ಚಿದ್ರಗೊಳ್ಳುವಾಗ ಪ್ರತಿಯೊಂದು ಮನೆತನಕ್ಕೂ ಅದರದೇ ಆದಂತಹ ರಾಷ್ಟ್ರಲಾಂಛನ, ರಾಷ್ಟ್ರಗೀತೆ, ರಾಷ್ಟ್ರ ದೇವತೆ, ರಾಷ್ಟ್ರಪ್ರಾಣಿ, ಪಕ್ಷಿ, ಮರ, ಹೂ, ಹಣ್ಣು ಇತ್ತು ಎಂದೆನಿಸುತ್ತದೆ, ಹಾಗಾದರೆ ಈ ರೀತಿ ಚಿದ್ರಗೊಳ್ಳಲು ಕಾರಣ ಹುಡುಕುವ ಗೋಜಿಗೆ ಹಾಗೂ ಮರೆಮಾಚಿರುವ ನನ್ನ ಮೂಲ ನಿವಾಸಿಗಳ ತಿಳಿಯುವ ಕುತೂಹಲ ಮೂಡಿದರೂ ಸಹ ಇದು ಅಷ್ಟು ಸುಲಭದ ಕಾಯಕವಲ್ಲ ಎಂಬುದು ಮನಸ್ಸಿನಲ್ಲಿ ಕಾಡಲು ಪ್ರಾರಂಭವಾಯಿತು.
ಸಂಜೆ ಗೋಷ್ಠಿಯಾಲ್ಲಾ ಮುಗಿದು ಚಹಾ ಹೀರುತ್ತಿದ್ದಂತೆ ಶಿಬಿರಾರ್ಥಿಗಳನ್ನು ಕೈಬೀಸಿ ಕರೆದದ್ದು ಬುಡಕಟ್ಟು ಜನರ ನೃತ್ಯ ಶೈಲಿ, ಶಿಬಿರಾರ್ಥಿಗಳಿಗೆ ಈ ಬುಡಕಟ್ಟು ಜನಾಂಗದ ಜಾನಪದ ನೃತ್ಯ ಶೈಲಿಯನ್ನು ಹೇಳಿಕೊಡುತ್ತಿದ್ದವರು ಬಿಳಿಗಿರಿರಂಗನ ಬೆಟ್ಟದಲ್ಲಿ ನೆಲೆಸಿರುವ ಸೋಲಿಗ ಜನಾಂಗದ ಶ್ರೀ ಬಸವರಾಜು ಅವರು, ತಮಟೆ ಹಾಗು ಇನ್ನಿತರ ವಾದ್ಯಗಳೊಂದಿಗೆ ಹಾಡನ್ನು ಹೇಳಿ ನೃತ್ಯವನ್ನು ಹೇಳಿಕೊಡುತ್ತಿದ್ದರು ಶಿಬಿರಾರ್ಥಿಗಳು ಖುಷಿ ಖುಷಿಯಿಂದಲೇ ಬಸವರಾಜು ಅವರು ಹೇಳಿಕೊಡುತ್ತಿದ್ದ ಮಾರಿ ಕುಣಿತ, ಪೂಜಾ ಕುಣಿತ ಕಲಿತು ಕೊಳ್ಳುವುದರ ಮೂಲಕ ಶಿಬಿರದ ಎರಡನೇ ದಿನ ಮುಕ್ತಾಯವಾಯಿತು.
ಮರುದಿನ ಬೆಳಿಗ್ಗೆ ಯೋಗಸನ ತರಗತಿ ಶಿಬಿರಾರ್ಥಿಗಳಿಗೆ ವಿಶೇಷತೆಯಿಂದ ಕೂಡಿತ್ತು, ಯೋಗ ಎಂದಿನಂತೆ ಪ್ರಾರಂಭವಾಗಿ ಮುಗಿಯುವ ಹಂತವನ್ನು ತಲುಪಿತ್ತು ಯೋಗಸನವನ್ನು ಹೇಳಿಕೊಡುತ್ತಿದ್ದ ತಿಮ್ಮಯ್ಯನವರು ಮಲ್ಲಾಡಿಹಳ್ಳಿ ಗುರುಗಳ ನೇರ ಹಾಗೂ ಪರಮ ಶಿಷ್ಯರು ತಮ್ಮ ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಜನರಿಗೆ ಉಚಿತವಾಗಿ ಯೋಗಾಸನವನ್ನು ಹೇಳಿ ಕೊಡುವುದರ ಮೂಲಕ ಪ್ರತಿಯೊಬ್ಬರ ಆರೋಗ್ಯವನ್ನು ವೃದ್ಧಿಸಬೇಕು ಎಂಬ ಗುರುಗಳ ಮಾರ್ಗದಲ್ಲಿ ನಡೆದುಕೊಂಡು ಬಂದಿರುವವರು. ಅಂದು ಜಲ್ ನೀತಿಯ ಒಂದು ಉಪಕರಣದ ಮೂಲಕ ಹೇಗೆ ಮೂಗಿನ ಒಂದು ಹೊಳ್ಳೆಯಿಂದ ನೀರನ್ನು ತೆಗೆದುಕೊಂಡು ಮತ್ತೊಂದು ಹೊಳ್ಳೆಯಲ್ಲಿ ನೀರನ್ನು ಹೊರಗೆ ತರಿಸಬಹುದು ಎಂಬುದನ್ನು ಪ್ರಾತಃಕ್ಷತೆಯ ಮೂಲಕ ತೋರಿಸಿಕೊಟ್ಟ, ಇದನ್ನು ಮಾಡುವುದರಿಂದ ಮೂಗಿನಲ್ಲಿ ಬೆಳೆಯುವ ದುರ್ಮಾಂಸ ಬೆಳೆಯದಂತೆಯು ಹಾಗೂ ಮೂಗನ್ನು ಹೇಗೆ ಶುಭ್ರವಾಗಿ ಇಟ್ಟುಕೊಳ್ಳಬಹುದು ಎಂಬುದನ್ನೂ ಹೇಳುತ್ತಾ, ಈಗ ನಿಮ್ಮಲ್ಲಾರಾದರೂ ಒಬ್ಬರು ಮುಂದೆ ಬಂದು ಈ ಪ್ರಯೋಗವನ್ನು ಮಾಡುವಿರಾ ಎಂದು ಹೇಳಿದರು. ಎಲ್ಲರೂ ಒಮ್ಮೆ ಮನಸ್ಸಿನಲ್ಲಿಯೇ ಊಟ ಮಾಡುವಾಗ ಒಂದು ಕಾಳು ಹಕ್ಕಿಯೋ ಅಥವಾ ಒಂದು ಹನಿ ನೀರೋ ನೆತ್ತಿಗೇರಿದರೆ ಪ್ರಾಣ ಹೋದಂತೆ ಆಗುತ್ತದೆ ಅದರಲ್ಲಿ ನೀರನ್ನು ಮುಗಿನಲ್ಲಿ ಹಾಕಿಕೊಂಡರೆ ಏನಪ್ಪಾ ಕಥೆ ಎಂದು ಯೋಚಿಸಲಾರಂಭಿಸಿದರು, ಇದನ್ನು ಎಲ್ಲರಿಗಿಂತಲೂ ಮೊದಲೇ ಗ್ರಹಿಸಿದ ಗುರುಗಳು ಯಾರು ಹೆದರುವ ಅವಶ್ಯಕತೆ ಇಲ್ಲ ನಾನು ಹೇಳುವುದನ್ನು ಪಾಲಿಸಿ ಸಾಕು ಎಂದು ಆತ್ಮವಿಶ್ವಾಸವನ್ನು ತುಂಬಿದರು, ಆದರೂ ಒಂದಿಬ್ಬರು ಮನಸ್ಸಿಲ್ಲದ ಮನಸ್ಥಿತಿಯಲ್ಲಿ ಧೈರ್ಯ ಮಾಡಿ

ಮುಂದೆ ಒಂದು ನಿಂತುಕೊಂಡರು, ಇವರುಗಳು ಗುರುಗಳು ಹೇಳಿದ ರೀತಿಯಲ್ಲಿಯೇ ಮಾಡಿದ ಕಾರಣದಿಂದಾಗಿ ನೀರು ಮೂಗಿನ ಈ ಬದಿಯಿಂದ ಹೋಗಿ ಆ ಬದಿಯಲ್ಲಿ ಹೊರಬಂದಿತು ಎಲ್ಲರಿಗೂ ಆಶ್ಚರ್ಯದ ಜೊತೆಗೆ ಕುತೂಹಲವೂ ಮೂಡಿತು ನಂತರ ಯಾರು ಬರುವುದಾಗಿ ಹೇಳಿದರು ಈಗ ಇನ್ನಷ್ಟು ಜನ ಧೈರ್ಯಮಾಡಿ ಮುಂದೆ ನಿಂತರು. ಗುರುಗಳು ಹೀಗೆ ಹೇಳಿದರು ಮೊದಲು ನೀರಿನ ಉಪಕರಣವನ್ನು ಸರಿಯಾದ ರೀತಿಯಲ್ಲಿ ಹಿಡಿದುಕೊಳ್ಳಬೇಕು ನಂತರ ನೇರವಾಗಿ ನಿಂತು ಉಪಕರಣವನ್ನು ಮೂಗಿಗೆ ಸೇರಿಸಿಕೊಂಡು ಮುಂದೆ ಬಗ್ಗಿ ಎಡಕ್ಕೆ ಬಾಗಬೇಕು ಈ ಸಂದರ್ಭದಲ್ಲಿ ಉಸಿರಾಡದೇ ಇರುವುದು ಒಳಿತು, ಹೀಗೆ ಮಾಡುತ್ತಿದ್ದಂತೆಯೇ ಬಲಭಾಗದಲ್ಲಿ ಉಗುರು ಬೆಚ್ಚಗಿನ ಉಪ್ಪು ನೀರು ಈ ಬದಿಯಿಂದ ಆ ಬದಿಗೆ ಸರಾಗವಾಗಿ ಸಂಚರಿಸಿದ ನಂತರ ಧೈರ್ಯವು ಮೂಡಲಾರಂಭಿಸಿತು ನಂತರ ಇದೇ ಕ್ರಮದಲ್ಲಿ ಎಡ ಹೊಳ್ಳೆಯಲ್ಲಿ ನೀರನ್ನು ಸುರಿದು ಬಲ ಹೊಳ್ಳೆಯಲ್ಲಿ ನೀರು ಬಂದನಂತರ ಯೋಗಾಸನದ ಸಾಧನೆ ಮಾಡಿದೆವು ಅನ್ನಿಸಲಾರಂಭಿಸಿತು. ನೀರನ್ನು ಸರಿಯಾದ ಕ್ರಮದಲ್ಲಿ ಹಾಕಿಕೊಳ್ಳದೆ ಮಧ್ಯದಲ್ಲಿ ಉಸಿರಾಡಿದವರಿಗೆ ಸ್ವಲ್ಪ ನೆತ್ತಿಗೆ ಹತ್ತಿ ಕುಳಿತು ಚಿತ್ರವಿಚಿತ್ರವಾಗಿ ಕೆಮ್ಮಲು ಆರಂಭಿಸಿದರು. ಒಟ್ಟಿನಲ್ಲಿ ಅಂದಿನ ದಿನದ ಯೋಗಸನ ಎಲ್ಲರ ಮುಖದಲ್ಲಿ ಖುಷಿಯ ಅನುಭವ ನೀಡಿತು.
ಸಮಯಕ್ಕೆ ಸರಿಯಾಗಿ ಗೋಷ್ಠಿಗಳು ಪ್ರಾರಂಭವಾಗತೊಡಗಿದವು. ಬುಡಕಟ್ಟು ಸಮುದಾಯಗಳು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಎಂಬ ಗೋಷ್ಠಿಯಲ್ಲಿ ಉಪನ್ಯಾಸವನ್ನು ನೀಡಿದಂತಹ ಪ್ರೊ ಟಿ ಟಿ ಬಸವನಗೌಡ ಅವರೊಂದಿಗೆ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ಇರುವ ಯೋಜನೆಗಳು ಹಾಗೂ ಅದನ್ನು ಉಪಯೋಗಿಸಕೊಳ್ಳಲಾಗದ ಪರಿಸ್ಥಿತಿಯ ಮಧ್ಯದಲ್ಲಿರುವ ಅಂತರವನ್ನು ಸ್ಥೂಲವಾಗಿ ಗ್ರಹಿಸಿ ಅಂತರವನ್ನು ಕಡಿಮೆಗೊಳಿಸುವ ಕೆಲವು ಮಾರ್ಗೋಪಾಯಗಳನ್ನು ಟಿಪ್ಪಣಿ ಮಾಡಿದರು. ನಂತರ ಬುಡುಕಟ್ಟು ಮಹಾಕಾವ್ಯ ಸಂಸ್ಕೃತಿ ನಾಯಕರು ಎಂಬ ವಿಷಯದ ಮೇಲೆ ಮೀರಸಾಬಿಹಳ್ಳಿ ಶಿವಣ್ಣ ಅವರು ಬಹು ಬಗೆಯಾಗಿ ವಿವರಣೆಯೊಂದಿಗೆ ಇದೇ ವಿಷಯಕ್ಕೆ ಸಂಬಂಧಪಟ್ಟ ಪುಸ್ತಕಗಳ ಮಾಹಿತಿಯನ್ನು ಹಂಚಿಕೊಂಡರು. ಸಂಜೆ ಶಿಬಿರದ ನಿರ್ದೇಶಕರಾದ ಪ್ರೊ ನೀಲಗಿರಿ ತಳವಾರರು ಬುಡಕಟ್ಟು ಸಾಹಿತ್ಯ ಹಾಗೂ ಸಂಸ್ಕೃತಿಯ ಬಗ್ಗೆ ಸವಿಸ್ತಾರವಗಿ ವಿವರಣೆಯನ್ನು ನೀಡುವುದರೊಂದಿಗೆ ಶಿಬಿರದ 3ನೇ ದಿನ ಬುಡಕಟ್ಟು ಜನರ ಜಾನಪದೀಯ ನೃತ್ಯಕಲೆಯನ್ನು ಕಲಿಯುವುದರೊಂದಿಗೆ ಮುಕ್ತಾಯವಾಯಿತು.
ಮುಂದುವರಿಯುತ್ತದೆ.