- ಎಸ್ ಪಿ ತೇಜರಾಜು
ದೇಶದಲ್ಲಿ ಒಟ್ಟು 31 ಲಕ್ಷಕ್ಕಿಂತಲೂ ಅಧಿಕ NGO ಸಂಸ್ಥೆಗಳಿವೆ ಎಂಬ ಮಾಹಿತಿ ಹೊರ ಬೀಳುತ್ತಿದ್ದಂತೆಯೇ ಆಶ್ಚರ್ಯವಾಗಿದ್ದೇನೋ ನಿಜ ಏಕೆಂದರೆ ಈ ಸಂಖ್ಯೆ ಇಡೀ ದೇಶದ ಒಟ್ಟು ಶಾಲೆಗಳ ಎರಡುಪಟ್ಟು. ದೇಶದಲ್ಲಿ ವಿವಿಧ ಇಲಾಖೆಯ ಸರಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುವುದರ ಜೊತೆಯಲ್ಲಿ ಎಷ್ಟು ಪ್ರಮಾಣದ ಸರಕಾರೇತರ ಸೇವಾಸಂಸ್ಥೆಗಳು ಇರುವುದು ನಿಜಕ್ಕೂ ಶ್ಲಾಘನೀಯ ಏಕೆಂದರೆ ಈ NGOಗಳು ಸರಕಾರಿ ಸಂಸ್ಥೆಗಳಿಗಿಂತ ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸಿರುವುದೇ ಇದಕ್ಕೆ ಸಾಕ್ಷಿ.
NGO ಗಳು ಕೇವಲ ಒಂದೇ ಒಂದು ಸೇವಾ ಕ್ಷೇತ್ರಕ್ಕೆ ಸೀಮಿತಗೊಳ್ಳದೆ ವಿವಿಧ ಪ್ರಕಾರಗಳಾಗಿ ವಿಭಾಗಿಸಲಾಗಿದೆ. ಇದರಲ್ಲಿಯ ಕೆಲ ಸಂಸ್ಥೆಗಳು ಸರಕಾರಿ ಸಂಸ್ಥೆಗಳಿಗಿಂತಲೂ ಒಂದು ಹೆಜ್ಜೆ ಮುಂದಿಟ್ಟಿದ್ದು ಟೆಕ್ನಾಲಜಿಕಲ್ ಡೆವಲಪ್ಮೆಂಟ್ನಲ್ಲಾಗಲಿ ಸಮಾಜದ ಒಳಿತಿಗಾಗಿ ಬಹಳಷ್ಟು ಶ್ರಮಿಸಿದೆ. ಇದರಿಂದಾಗಿಯೇ ಈ ಸಂಸ್ಥೆಗಳು ಅಪರ ಜನಮನ್ನಣೆಯನ್ನು ರಾಷ್ಟ್ರಮಟ್ಟದಲ್ಲಿ ಒಳ್ಳೆಯ ಹೆಸರುಗಳನ್ನುಗಳಿಸಿವೆ. ಸಮಾಜದ ಒಳಿತಿಗಾಗಿ ದುಡಿಯುತ್ತಿರುವಂತಹ NGOಗಳು ಬೆಳೆದು ಬಂದ ಹಾದಿಯನ್ನೊಮ್ಮೆ ನೋಡಿದರೆ ಅನೇಕ ಸ್ವಾರಸ್ಯಕರ ವಿಷಯಗಳು ಗೋಚರಿಸುತ್ತವೆ.
ಭರತಖಂಡವನ್ನು ಆಳಿದ ಅನೇಕ ರಾಜಮನೆತನಗಳು ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದಂತಹ ಛಾಪನ್ನು ಮೂಡಿಸಿವೆ, ಕೆಲ ಕ್ಷೇತ್ರಗಳಲ್ಲಂತೂ ಒಂದು ರಾಜಮನೆತನ ಮತ್ತೊಂದು ರಾಜಮನೆತನಗಳಿಗಿಂತಲೂ ಮೇಲುಗೈ ಸಾಧಿಸಿದೆ. ಈ ಎಲ್ಲಾ ಕ್ಷೇತ್ರಗಳಿಗಿಂತಲೂ ಸರ್ವಶ್ರೇಷ್ಠವಾದ ಸ್ಥಾನವನ್ನು ಪಡೆದಿರುವುದೆಂದರೆ ರಾಜಧರ್ಮ ನೀತಿ ಸಾಮ್ರಾಜ್ಯದೊಳಗೆ ನೆಲೆಸಿರುವ ಎಲ್ಲಾ ಪ್ರಜೆಗಳು ಕೂಡ ನಿಶ್ಚಿಂತೆ, ನಿರ್ಭಿತಿ, ಸುಖ, ಶಾಂತಿ, ನೆಮ್ಮದಿಇಂದಿರಬೇಕು ಎನ್ನುವುದೇ ಈ ರಾಜಧರ್ಮ ನೀತಿಯ ಉದ್ದೇಶವಾಗಿದೆ.
ಮೊದಲಿನಿಂದಲೂ ಭರತಖಂಡವು ಜಗತ್ತಿಗೆ ಅನೇಕ ವಿಧವಾದ ಕೊಡುಗೆಯನ್ನು ವಿವಿಧ ಕ್ಷೇತ್ರಗಳಲ್ಲಿ ನೀಡುತ್ತಾ ಬಂದಿದೆ. ಜ್ಞಾನ ದಾಸೋಹದಲ್ಲಂತೂ ಜಗತ್ತಿಗೆ ಮಾದರಿಯಾಗಿದೆ. ನಳಂದ ವಿಶ್ವವಿದ್ಯಾನಿಲಯ ಜಗತ್ತಿನ ಮೊದಲ ವಿಶ್ವವಿದ್ಯಾಲಯ ಎಂದೆನಿಸಿಕೊಂಡು, ಪ್ರತಿವರ್ಷವೂ 10 ಸಾವಿರಕ್ಕಿಂತಲೂ ಹೆಚ್ಚು ಜಗತ್ತಿನ ನಾನಾ ವಿದ್ಯಾರ್ಥಿಸಮೂಹವನ್ನು ಒಳಗೊಂಡ, ಸಾವಿರದ ಐನೂರಕ್ಕೂ ಹೆಚ್ಚು ಉಪನ್ಯಾಸಕರನ್ನೊಳಗೊಂಡ, ಉಚಿತ ಊಟ, ವಸತಿ, ವಿದ್ಯಾರ್ಜನೆಯನ್ನೊಳಗೊಂಡ, ಲಕ್ಷೋಪಲಕ್ಷ ತಾಳೆಗರಿಯ ಮೇಲೆ ಬರೆದಂತ ಹಸ್ತಪ್ರತಿಗಳ ಧರ್ಮಕುಂಜಚ ಎಂಬ ಗ್ರಂಥಾಲಯವನ್ನುಳಗೊಂಡ, ಕಲೆ, ಧರ್ಮ ಸಾಹಿತ್ಯ,ವಿಜ್ಞಾನ, ಜ್ಯೋತಿಷ್ಯಶಾಸ್ತ್ರ ,ಗಣಿತಶಾಸ್ತ್ರ ಹೀಗೆ ನಾನಾ ಕ್ಷೇತ್ರಗಳಿಗೆ ಸಂಬಂಧಪಟ್ಟ ವಿಷಯಗಳನ್ನು ಬೋಧಿಸುತ್ತಾ ಜಗತ್ತಿಗೆ ಮೇಧಾವಿಗಳನ್ನು ನೀಡಿರುವಂತಹದ್ದು ನಿಜಕ್ಕೂ ಶ್ಲಾಘನೀಯವೆನಿಸುತ್ತದೆ.
ರಾಜಾಶ್ರಯವೂ ಕೇವಲ ವಿದ್ಯಾರ್ಥಿಗಳಿಗೆ ಸೀಮಿತವಾಗಿರದೆ ಹೊರ ದೇಶಗಳಿಂದ ಬಂದಂತಹ ಪ್ರವಾಸಿಗರಿಗೂ ಕೂಡ ಉಚಿತ ಊಟ ವಸತಿಯನ್ನು ಕಲ್ಪಿಸಲಾಗಿತ್ತು. ಇಲ್ಲಿಯ ಪ್ರತಿಯೊಬ್ಬ ಪ್ರಜೆಗಳು ಕೂಡ ಅತಿಥಿ ದೇವೋಭವ ಎಂಬಂತೆ ಪ್ರವಾಸಿಗರ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದರು.
ಇಲ್ಲಿಗೆ ಭೇಟಿ ನೀಡಿದ ಅನೇಕ ಪ್ರವಾಸಿಗರು ತಮ್ಮ ಅನುಭವದ ಪುಸ್ತಕಗಳಲ್ಲಿ ಇಲ್ಲಿಯ ವೈಭೋಗವನ್ನು ನೋಡಿ ಹಾಡಿ ಹೊಗಳಿ ಕೊಂಡಾಡಿದ್ದಾರೆ. ಈಸ್ಟ್ ಇಂಡಿಯಾ ಕಂಪನಿಯ ಸೈನ್ ಅಧಿಕಾರಿಯಾಗಿ ಭಾರತಕ್ಕೆ ಆಗಮಿಸಿದ್ದ
W H ಸ್ಲೀಮತ್ ತನ್ನ ಅನುಭವದ ಪುಸ್ತಕಗಳಲ್ಲಿ ಹೀಗೆ ಬರೆದಿದ್ದಾನೆ " ನಾವು ಆಗಾಗ ಉರಿಬಿಸಿಲಿನಲ್ಲಿ ಪ್ರವಾಸಕ್ಕೆ ಹೊರಗೆ ಹೋಗಲೇ ಬೇಕಾಗುತ್ತಿತ್ತು ಅಲ್ಲಲ್ಲಿ ಗಿಡಮರಗಳು ದಟ್ಟವಾಗಿಯೇ ಬೆಳೆಯಿಸಿದ ತಾಣದಲ್ಲಿ ಕೆರೆ ಬಾವಿಗಳನ್ನು ನೋಡಿದಲ್ಲಿ ನಮ್ಮ ಡೇರೆಗಳನ್ನು ನಿಲ್ಲಿಸುತ್ತಿದ್ದೆವು. ಇವೆಲ್ಲಾ ಭಾರತೀಯ ಪರೋಪಕಾರದ ವಿಶಾಲ ದೃಷ್ಟಿಯ ಫಲ. ಸೋತು ದಣಿದ ಪ್ರವಾಸಿಗರಿಗೆ ಯಾವ ಫಲಾಪೇಕ್ಷೆಯಿಲ್ಲದೆ ನೆರಳು ನೀರು ಹಣ್ಣುಗಳನ್ನು ಒದಗಿಸುವ ಈ ಮನೋವೃತ್ತಿಯ ಬಗ್ಗೆ ಪಟ್ಟಣಗಳಲ್ಲಿರುವ ತನ್ನ ದೇಶ ಬಾಂಧವರಿಗೆ ಹೇಗೆ ತಿಳಿ ಹೇಳುವುದು?" ಹೀಗೆ ಅನೇಕ ಮಂದಿ ಇಲ್ಲಿಯ ಸೊಬಗನ್ನು ಕೊಂಡಾಡಿದ್ದಾರೆ.
ಕಾಲಾನಂತರ ಈ ಸಾಮ್ರಾಜ್ಯಗಳು ಕೊನೆಗೊಂಡು ನಾವಿಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇವೆ. ಸರಕಾರವು ಕೂಡ ಜನರ ಸರ್ವತೋಮುಖ ಬೆಳವಣಿಗೆಗೆಂದೇ ಅನೇಕ ರೀತಿಯ ನಿಯಮ, ಕಾನೂನು, ಯೋಜನೆಗಳನ್ನು ಜಾರಿಗೊಳಿಸುತ್ತಿಲಿದೆ. ಯಾವುದೇ ಯೋಜನೆಯಾಗಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎನ್ನುವುದು ಸರ್ಕಾರದ ಧೋರಣೆಯಾಗಿದೆ, ಆದರೆ ಸರಕಾರ ಯಾವ ಯಾವ ಯೋಜನೆಗಳನ್ನು ಜನಸಾಮಾನ್ಯರಿಗೆ ಹೊರತರುತ್ತಿದೆ ಎಂದು ಮಾಹಿತಿ ಜನಸಾಮಾನ್ಯರಿಗೆ ತಿಳಿಯದಿರುವುದೆ ಇಲ್ಲಿಯ ದುರ್ದೈವದ ಸಂಗತಿಯಾಗಿದೆ.ಇಂತಹ ಸಂದರ್ಭದಲ್ಲಿಯೇ ಮಠ-ಮಂದಿರಗಳು ಕೆಲವು NGOಗಳು ಜನರಿಗೆ ದಾರಿದೀಪವಾಗಿದೆ ಎಂದರೆ ತಪ್ಪಾಗಲಾರದು.
ಕನ್ನಡ ನಾಡಿನಲ್ಲಿರುವ ಬಹುಪಾಲು ಮಠ-ಮಂದಿರಗಳು ಶಿಕ್ಷಣ ಕ್ಷೇತ್ರದಲ್ಲಿ ಬಹುದೊಡ್ಡ ಕೊಡುಗೆಯನ್ನು ನೀಡಿದೆ.[ ಸಿದ್ದಗಂಗಾ ಮಠ, ಪ್ರಭೋದಿನಿ ಗುರುಕುಲ, ಚಂಪಕ ಪುರ ಮಠ, ಉಡುಪಿ ಪೇಜಾವರ ಮಠ, ಬಾಲಗಂಗಾಧರ ಮಠ,ಗವಿಸಿದ್ದೇಶ್ವರ ಮಠ,JSS ಮಠ, ರಾಮಕೃಷ್ಣಾಶ್ರಮ, ಶೃಂಗೇರಿ ಶಾರದಾಪೀಠ,] ಈ ಮಠಗಳು ಕೇವಲ ಶಿಕ್ಷಣ ಕ್ಷೇತ್ರಕ್ಕೆ ಮೀಸಲಾಗದೆ ಸಮಾಜದ ಒಳಿತಿಗಾಗಿ ಜನೋಪಕಾರಿ ಸೇವೆಗಳನ್ನು ಮಾಡಿದೆ ಕೆರೆಯ ಹೂಳನ್ನು ತೆಗೆಯುವುದು, ಪವಿತ್ರ ವನವನ್ನು ಸೃಷ್ಟಿಸುವುದು, ವೈದ್ಯಕೀಯ ನೆರವು ನೀಡುವುದು, ಪರಿಸರ ಜಾಗೃತಿ ಕಾರ್ಯಕ್ರಮಗಳು, ಸಭೆ-ಸಮಾರಂಭ ಜಾತ್ರೆಗಳು ಮೂಲಕ ಎಲ್ಲರನ್ನೂ ಒಂದುಗೂಡಿಸುವುದು ಎಲ್ಲರಲ್ಲಿ ಭಾತೃತ್ವವನ್ನು ಮೂಡಿಸುವುದು ಹೀಗೆ ಮೊದಲಾದವುಗಳಾಗಿವೆ.
ಮಠ ಪರಂಪರೆಗಳ ಕೊಡುಗೆ ಒಂದು ಕಡೆಯಾದರೆ ತಮ್ಮ ಸಮಾನ ಮನೋಭಾವದವರನ್ನೊಳಗೊಂಡ ಎಲ್ಲರೂ ಒಂದುಗೂಡಿ ಸಂಸ್ಥೆಯನ್ನು ಸ್ಥಾಪಿಸಿ ಜನರ ಸೇವೆಯಲ್ಲಿ ತೊಡಗಿಸಿಕೊಂಡ ಅನೇಕ ಸಂಸ್ಥೆಗಳಿವೆ, ಇವುಗಳನ್ನು ಹೊರತುಪಡಿಸಿಯೂ ಅನೇಕ ವ್ಯಕ್ತಿಗಳು ತಮ್ಮ ಖಾಸಗಿಯಾಗಿ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ದೇಶದಲ್ಲಿ ಒಟ್ಟು 31 ಲಕ್ಷಕ್ಕಿಂತಲೂ ಅಧಿಕNGO ಗಳಿವೆ ಎಂದು ಅಂದಾಜಿಸುವಾಗ ನಮ್ಮ ಸುತ್ತಮುತ್ತಲೇ ಸಾವಿರಾರು NGO ಗಳಿರುತ್ತವೆ. ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್(SVYM) ಗುಡ್ಡಗಾಡು ಜನರಿಗೆ ಶಿಕ್ಷಣ ಹಾಗೂ ಆರೋಗ್ಯಸೇವೆಯನ್ನು ಸಲ್ಲಿಸುತ್ತಲಿದೆ, ಅಕ್ಷಯಪಾತ್ರೆ ಹಾಗೂ ಅದಮ್ಯ ಚೇತನ ಎಂಬ ಸಂಸ್ಥೆ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟವನ್ನು ತಯಾರಿಸಿ ಕೊಡುತ್ತಿದೆ, ಮಕ್ಕಳಕೂಟ ಮಕ್ಕಳ ಸರ್ವತೋಮುಖ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದೆ, ಒಡನಾಡಿ ಸೇವಾ ಸಂಸ್ಥೆ ಹಾಗೂ ಶಕ್ತಿಧಾಮ ಮಹಿಳಾ ಸಬಲೀಕರಣಕ್ಕೆ ಶ್ರಮಿಸುತ್ತಿಲಿದೆ, ಚಯದೇವಿ ಅನಾಥಶ್ರಮ ಅನೇಕರಿಗೆ ನೆಲೆಯನ್ನು ಕಲ್ಪಿಸಿದೆ, ನಿರಂತರ, ರಂಗಾಯಣ, ಬಹುರೂಪಿ ಅಂತಹ ಸಂಸ್ಥೆಗಳು ಹವ್ಯಾಸಿ ನಾಟಕಕಾರರನ್ನು ಒಳಗೊಂಡ ನಾಟಕಗಳನ್ನು ಪ್ರದರ್ಶಿಸುತ್ತಲಿದೆ, ಪಿಂಜರ್ಪೋಲ್,People for animal ಎಂಬ ಸಂಸ್ಥೆ ಪ್ರಾಣಿಗಳು ಹಸುಗಳಿಗೆ ಆಶಯವನ್ನು ನೀಡಿದೆ, ಇನ್ಫೋಸಿಸ್ ಸಂಸ್ಥೆ ಬಹುಮುಖ ಕ್ಷೇತ್ರಗಳಲ್ಲಿ ತನ್ನ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಲಿದೆ. ಯೂತ್ ಅಸೋಸಿಯೇಷನ್ ಆಫ್ ಇಂಡಿಯಾYHAI, ಇಂಡಿಯನ್ ಹೆರಿಟೇಜ್ ಸಿಟಿ ನೆಟ್ವರ್ಕ್ ಫೌಂಡೇಶನ್ ಪ್ರವಾಸಿಗರಿಗೆ ಕಡಿಮೆ ಬೆಲೆಯ ಊಟವಸತಿ ವ್ಯವಸ್ಥೆಯನ್ನು ಮಾಡಿಕೊಡುತ್ತದೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಹಾಗೂ ಇನ್ನಿತರ ಸಂಸ್ಥೆಗಳು ಸಮಾಜದ ಒಳಿತಿಗಾಗಿ ದುಡಿಯುತ್ತಿರುವ, ದಿವ್ಯ ದೀಪ ಟ್ರಸ್ಟ್, ಗ್ರೀನ್ ಡಾಟ್ ಟ್ರಸ್ಟ್, ಪರಿವರ್ತನಾ ಫೌಂಡೇಶನ್, ಬುಗುರಿ ಫೌಂಡೇಶನ್, ಕಲಿಸು ಫೌಂಡೇಶನ್, ಚೇತನ ಟ್ರಸ್ಟ್, ಸಂಸ್ಕೃತಿ ಫೌಂಡೇಶನ್, ಬೆಳಕು ಚಾರಿಟಬಲ್ ಟ್ರಸ್ಟ್, ಮುಗಿಲು ಫೌಂಡೇಶನ್, ಹರಿವು, ನಮ್ಮ ಮೈಸೂರು ಫೌಂಡೇಶನ್, ಮಡಿಲು ಸೇವಾ ಟ್ರಸ್ಟ್, ನೇಚರೆ ಕನ್ಸರ್ವೇಶನ್ ಫೌಂಡೇಶನ್, ಎ ಟ್ರಿ ಫೌಂಡೇಶನ್ ಇವುಗಳೊಂದಿಗೆ ಕಾಳಿಂಗ ಸೆಂಟರ್ ಫಾರ್ ರೈನ್ಫೋರೆಸ್ಟ್ ಎಕಲಜಿ, ವೆಸ್ಟ್ರನ್ ಘಟ್ಸ್ ಅಂಡ್ ಈಸ್ಟರ್ನ್ ಗಾಡ್ಸ್ ವೈಲ್ಡ್ ಲೈಫ್ ಸೊಸೈಟಿ, ವೈಲೆಂಟ್ ಕನ್ಸರ್ವೇಷನ್ ಸೊಸೈಟಿ, ಇಂಡಿಯನ್ ಬರ್ಡ್ ಕನ್ಸರ್ವೇಶನ್ ನೆಟ್ವರ್ಕ್, 16000feet foundation, ಹೀಗೆ ಲಕ್ಷಾಂತರ ಸಂಸ್ಥೆಗಳು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುತ್ತಾ ಜನರಿಗೆ ಏಳಿಗೆಗಾಗಿ ಶ್ರಮಿಸುತ್ತಲಿದೆ, ಕೆಲ ಸಂಸ್ಥೆಗಳು ತೋರ್ಪಡಿಕೆಗೆ ಕಾರ್ಯವನ್ನು ಮಾಡಿದರೆ ಇನ್ನೂ ಕೆಲ ಸಂಸ್ಥೆಗಳು ಎಲೆಮರೆಯ ಕಾಯಿಯ ಹಾಗೆ ಸೇವೆಯನ್ನು ಮಾಡುತ್ತಿದೆ. ಪ್ರತಿವರ್ಷದ ಫೆಬ್ರುವರಿ 27ರಂದು World NGO day ಎಂದು ಆಚರಿಸಲಾಗುತ್ತದೆ. ದಯೆಯೇ ಧರ್ಮದ ಮೂಲವೆಂಬಂತೆ ಸಮಾಜದ ಸ್ವಸ್ತ್ಯಕ್ಕಾಗಿಯೇ ದುಡಿಯುತ್ತಿರುವಂತಹ ಇಂತಹ ಸಂಸ್ಥೆಯನ್ನು ನಾವಿಂದು ನೆನೆಯಬೇಕಾಗಿದೆ.
ಧನ್ಯವಾದಗಳು.
.jpeg)

