ಎಸ್ ಪಿ ತೇಜರಾಜು.
ಶಾಲೆಯ ದಿನಗಳಲ್ಲಿ ಎಂದೂ ಫೇಲ್ ಆಗದೆ ಹೋದರು, ಓದುವುದರಲ್ಲಿ ಆರಕ್ಕೇರದ ಮೂರಕ್ಕಿಳಿಯದ ಸಾಧಾರಣ ವಿದ್ಯಾರ್ಥಿಯಾಗಿದ್ದೆ, ತರಗತಿಯ ಇತರ ಹುಡುಗರಿಗೆ ಹೋಲಿಸಿದರೆ ಸ್ವಲ್ಪ ಹೆಚ್ಚು ಅಂಕ ಗಳಿಸುತ್ತಿದ್ದರೂ ಗುರುಗಳು ಅಪೇಕ್ಷಿಸುತ್ತಿದ್ದಷ್ಟು ಅಂಕವೇನೋ ಬರುತ್ತಿರಲಿಲ್ಲ, ಈ ಹೈಸ್ಕೂಲ್ ಮೆಟ್ಟಿಲೇರುತ್ತಿದ್ದಂತೆಯೇ ಎಲ್ಲಾ ಹುಡುಗರಿಗೂ ಗಂಟಲು ಓಡೆದು ಮತ್ತಷ್ಟು ಎತ್ತರ ಬೆಳವಣಿಗೆ ಹೊಂದುವಂತೆ ನನ್ನ ಬೆಳವಣಿಗೆಯೂ ಪ್ರಾರಂಭವಾಯಿತು.
ಪ್ರತಿದಿನ ಪ್ರೇಯರ್ ಗೆಂದು ಸಾಲಿನಲ್ಲಿ ನಿಲ್ಲಿಸುವಾಗ 4 ಅಥವಾ 5 ಹುಡುಗರ ಹಿಂದೆ ನಿಲ್ಲುತ್ತಿದ್ದೆ, ನನ್ನ ಹಿಂದೆ ಇನ್ನಷ್ಟು ಎತ್ತರವಿದ್ದ ಹತ್ತಾರು ಹುಡುಗರು ನಿಲ್ಲುತ್ತಿದ್ದರು, ಬಹುಪಾಲು ಈ ರೀತಿಯ ಕುಳ್ಳರದ್ದು ಪ್ರತ್ಯೇಕವಾದ ಗುಂಪು ಇರುವಂತೆ ನಮ್ಮ ಸಂಗಡಿಗದೊಂದು ಗುಂಪು ಇತ್ತು, ಬಹುಪಾಲು ವಿದ್ಯಾರ್ಥಿಗಳು ಶಾಲೆಗೆ ಸೈಕಲ್ ಹೊಡೆದುಕೊಂಡು ಬರುವಂತೆ ನಾವು ಕೂಡ ಸರ್ವತೋಮುಖ ಬೆಳವಣಿಗೆಗೆಂದು (ಆಟ-ಪಾಠ) ಸೈಕಲ್ ಹೊಡೆದದ್ದಾಯ್ತು.
ನಗುವು ಸಹಜ ಧರ್ಮ ಎಂಬ ಡಿವಿಜಿಯವರ ಮಾತಿನಂತೆ ಹೈಸ್ಕೂಲಿನ ಬಹಳಷ್ಟು ದಿನಗಳನ್ನು ನಗುತ್ತಲೇ ಕಳೆದುಬಿಟ್ಟೆ, ಈ ಕಂಪ್ಲೇಂಟ್ ಗಳನ್ನು ಪೋಷಕರಿಗೆ ವರದಿ ಒಪ್ಪಿಸಲೆಂದೇ ಮಾಡುವ ಪೇರೆಂಟ್ಸ್ ಟೀಚರ್ಸ್ ಮೀಟಿಂಗ್ ಮಾತ್ರ ತಪ್ಪದೇ ನಡೆಯುತ್ತಿತ್ತು. ಇದೇ ಸಮಯಕ್ಕೆ ಸರಿಯಾಗಿ ಶಾಲೆಯಲ್ಲಿ ಪ್ರಥಮ ಬಾರಿಗೆ NCC ಪ್ರಾರಂಭವಾಯಿತು, ಬಹಳಷ್ಟು ಸ್ನೇಹಿತರು ತಮ್ಮ ಹೆಸರನ್ನು ನೊಂದಾಯಿಸಿಕೊಂಡರು, ಆದರೆ ನನಗೆ ಏನಾಯಿತೆಂದು ತೋಚದೆ ನೊಂದಾಯಿಸಿಕೊಳ್ಳದೆ ಸುಮ್ಮನಾಗಿಬಿಟ್ಟೆ.
ಶಾಲೆಯಲ್ಲಿ NCC ಪ್ರಥಮ ಬಾರಿಗೆ ಪ್ರಾರಂಭವಾದ ಖುಷಿಯಲ್ಲಿ ಶಿಬಿರವನ್ನು ನಡೆಸಿದರು, ಶಿಬಿರದಲ್ಲಿ ಭಾಗವಹಿಸಿ ಬಂದ ಸ್ನೇಹಿತರು ಶಿಬಿರದ ಅನುಭವಗಳನ್ನು ಹೇಳಿಕೊಳ್ಳುತ್ತಿದ್ದರೆ ಮರುಕುವೇನೋ ಹುಟ್ಟಿದರು, ಮುಂದೆ ಅವಕಾಶ ಸಿಕ್ಕರೆ ತಪ್ಪದೇ ಹೋಗೋಣವೆಂದು ನಿರ್ಧರಿಸಿದೆ, ದುರಾದೃಷ್ಟಕ್ಕೆ ಶಾಲೆಯಲ್ಲಿ ಮತ್ತೊಂದು ಶಿಬಿರವನ್ನು ಆಯೋಜಿಸಲು ಇಲ್ಲ.
ಎಸೆಸೆಲ್ಸಿ ಉತ್ತೀರ್ಣನಾದ ಬಳಿಕ, ಹತ್ತಿರದ ಸರಕಾರಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾಗಿ ಸೇರಿಕೊಂಡು ತರಗತಿಗಳು ಪ್ರಾರಂಭವಾಗಿದ್ದವು, ಸೀನಿಯರ್ಸ್ ನ ಒತ್ತಾಸೆ ಮೇರೆಗೆ ಕಾಲೇಜಿನಲ್ಲಿ ಪ್ರಥಮ ಬಾರಿಗೆ NSS ಘಟಕವನ್ನು ಪ್ರಾರಂಭಿಸಲಾಯಿತು, ಶಾಲೆಯ ದಿನಗಳಲ್ಲಿ ಅವಕಾಶಗಳಿಂದ ವಂಚಿತವಾಗಿದ್ದ ನನಗೆ ಇದಕ್ಕಾದರೂ ಸೇರಬೇಕೆಂದು ದೃಢನಿರ್ಧಾರವನ್ನು ಮಾಡಿ ಸೇರಿದ್ದಾಯ್ತು.
ನಮ್ಮ ಕನ್ನಡ ಪ್ರಾಧ್ಯಾಪಕರಾಗಿದ್ದಂತಹ ತಿಮ್ಮರಾಜು ಸರ್ ಅವರು ಕಾಲೇಜಿನ NSS ಸಂಯೋಜನಾಧಿಕಾರಿಗಳಾಗಿದ್ದರು, ಮೊದಲು ವಿದ್ಯಾರ್ಥಿಗಳ ಹೆಸರು ನೋಂದಾಯಿಸಿಕೊಳ್ಳುವ ಪ್ರಕ್ರಿಯೆಯಿಂದ ಪ್ರಾರಂಭವಾಗಿ, ಶನಿವಾರದಂದು ಹೆಸರು ನೋಂದಾಯಿಸಿಕೊಂಡ ವಿದ್ಯಾರ್ಥಿಗಳೆಲ್ಲರೂ ಒಂದುಗೂಡಿ ಕಾಲೇಜಿನ ಆವರಣವನ್ನು ಸ್ವಚ್ಛಗೊಳಿಸುವುದರೊಂದಿಗೆ ಗಿಡಗಳನ್ನು ತಂದು ನೆಡಲಾಗುತ್ತಿತ್ತು, ಮಧ್ಯವಾರ್ಷಿಕ ಪರೀಕ್ಷೆ ಮುಗಿದ ಬಳಿಕ ಶಿಬಿರ ಆಯೋಜಿಸುವಂತೆ ಕೇಳಿಕೊಂಡಿದ್ದರಿಂದ 50
ವಿದ್ಯಾರ್ಥಿಗಳನ್ನೊಳಗೊಂಡ ಒಂದು ವಾರದ ಶಿಬಿರಕ್ಕೆ ಯೋಜನೆಗಳು ನಡೆದವು, ನೂರಕ್ಕೂ ಅಧಿಕ ಮಂದಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರಿಂದ ಇವರುಗಳಲ್ಲಿ ಯಾರನ್ನು ಕರೆದುಕೊಂಡು ಹೋಗಬೇಕೆಂದು ಮೊದಮೊದಲು ಕಷ್ಟವೆನಿಸಿದರೂ, ಕೊನೆಗೆ ವಿದ್ಯಾರ್ಥಿಗಳ ನಡುವಳಿಕೆ ಆಧಾರದ ಮೇಲೆ ಕರೆದುಕೊಂಡು ಹೋಗುವುದಾಗಿ ನಿರ್ಧರಿಸಿದ್ದಾಯಿತು.
ಅಂತಿಮವಾಗಿ ಶಿಬಿರಕ್ಕೆ ಯೋಜನೆಗಳೆಲ್ಲವೂ ಪ್ರಾರಂಭಗೊಂಡವು, ಶಿಬಿರಕ್ಕೆ ಬೇಕಾದಂತಹ ಉಪಕರಣಗಳನ್ನು ಹೊಸದಾಗಿ ಖರೀದಿಸಿದ್ದಾಯಿತು, ಐವತ್ತು ಜನ ವಿದ್ಯಾರ್ಥಿಗಳ ಪೈಕಿ ಹುಡುಗ-ಹುಡುಗಿಯರಿಗೆ ಸಮಾನ ಅವಕಾಶ ನೀಡಲಾಗಿತ್ತು, ಶಿಬಿರಕ್ಕೆ ಹೊರಡುವ ಸ್ವಲ್ಪ ದಿನಗಳು ಇರುವ ಹಾಗೆ NSS ಸಂಯೋಜನಾಧಿಕಾರಿಗಳೊಂದಿಗೆ ಕಾಲೇಜಿನ ಇತರ ಉಪನ್ಯಾಸಕರು ಶಿಬಿರವನ್ನು ಎಲ್ಲಿ ಆಯೋಜಿಸಲಾಗಿದೆ? ಎಷ್ಟು ದಿನ ನಡೆಯುತ್ತದೆ? ನಾವು ಕೊಂಡಯ್ಯ ಬೇಕಾದಂತಹ ವಸ್ತುಗಳು ಯಾವುವು? ಊರ ಜನರೊಂದಿಗೆ ನಾವು ಹೇಗೆ ವರ್ತಿಸಬೇಕು? ನಮ್ಮ ಕರ್ತವ್ಯಗಳೇನು? ಜನರಲ್ಲಿ ಅರಿವು ಮೂಡಿಸುವುದು ಹೇಗೆ? ಶಿಬಿರದಲ್ಲಿ ಯಾವ ಯಾವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ? ಪೋಷಕರು ಮಕ್ಕಳನ್ನು ವಿಚಾರಿಸುವುದು ಹೇಗೆ? ಮೊಬೈಲ್ ಗಳನ್ನು ತರಕೂಡದು, ಅಸಭ್ಯವಾಗಿ ವರ್ತಿಸಿದ ವಿದ್ಯಾರ್ಥಿಗಳನ್ನು ನಿರ್ಧಾಕ್ಷಿಣ್ಯವಾಗಿ ಶಿಬಿರದಿಂದ ಹೊರಗೆ ಕಳುಹಿಸಿಕೊಡಲಾಗುತ್ತದೆ, ಗಂಭೀರ ಕಾಯಿಲೆ ಇರುವವರು ಬರಕೂಡದು, ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಬಂದು ಕಳೆದುಕೊಂಡರೆ ಅದಕ್ಕೆ ನೀವೇ ಜವಾಬ್ದಾರರು ಎಂಬಿತ್ಯಾದಿ ಮಾರ್ಗದರ್ಶನವನ್ನು ನೀಡುತ್ತಿದ್ದರು.
ಅಂತಿಮವಾಗಿ ಶಿಬಿರವನ್ನು ದಸರಾದ ರಜದಲ್ಲಿ ಆಯೋಜಿಸಲಾಯಿತು, ಇದಕ್ಕೆಂದು ಸಕಲ ಸಿದ್ಧತೆಗಳು ಭರದಿಂದಲೇ ಸಾಗಿದವು, ಶಿಬಿರಕ್ಕೆ ಹೊರಡುವ ದಿನದಂದು ಎಲ್ಲ ಶಿಬಿರಾರ್ಥಿಗಳು ಕಾಲೇಜಿನ ಆವರಣಕ್ಕೆ ಬಂದು ಸೇರುತ್ತಿದ್ದರು, ಶಿಬಿರಕ್ಕೆ ಬೇಕಾದಂತಹ ಎಲ್ಲ ಉಪಕರಣಗಳನ್ನು ಜೋಡಿಸಿ ಎನಿಸಿಕೊಳ್ಳಲಾಗುತ್ತಿತ್ತು, ಎಲ್ಲರೂ ಬಂದು ಸೇರಿಯೇ ಸ್ವಲ್ಪ ಹೊತ್ತಾದ ಬಳಿಕ ಬಸ್ ಬಂದು ನಿಂತಿತು.
ಗಾತ್ರದಲ್ಲಿ ಚಿಕ್ಕದಾಗಿದ್ದ ಬಸ್ಸನ್ನು ನೋಡಿ ಎಲ್ಲರೂ ದಿಗಿಲುಗೊಂಡರು, ಬಸ್ನ ಹಿಂಭಾಗದಿಂದ ಶಿಬಿರಕ್ಕೆ ಬೇಕಾದಂತಹ ಅಡುಗೆ ಉಪಕರಣಗಳು ಪಾತ್ರೆ ಪಗಾರಗಳು ಗ್ಯಾಸ್ ಸಿಲಿಂಡರ್ ಇಡಲಾಯಿತು, ಇದಾದ ಬಳಿಕ ಶಿಬಿರಕ್ಕೆ ಬೇಕಾದಂತಹ ಉಪಕರಣಗಳಾದ ಆರೆ, ಗುದ್ದಲಿ, ಮಚ್ಚು, ಪೊರಕೆ ಇತ್ಯಾದಿ ಉಪಕರಣಗಳನ್ನು ತುಂಬಿದ ಬಳಿಕ, ವಿದ್ಯಾರ್ಥಿಗಳ ಲಗೇಜ್ ಗಳನ್ನು ತುಂಬುವುದರೊಳಗಾಗಿ ಬಸ್ನ ನ ಅರ್ಧಬಾಗ ತುಂಬಿಹೋಗಿತ್ತು, ಇದನ್ನೆಲ್ಲಾ ನೋಡುತ್ತಿದ್ದ ಹುಡುಗಿಯರು ಈ ಉಪಕರಣಗಳೊಂದಿಗೆ ಹುಡುಗರು ಮೊದಲು ಹೋಗಿ ತಲುಪಲಿ, ಎರಡನೇ ಟ್ರಿಪ್ನಲ್ಲಿ ನಾವೆಲ್ಲಾ ಬರುತ್ತೇವೆ ಎಂದುಕೊಂಡು ಕುಳಿತಿದ್ದರು, ಹುಡುಗ-ಹುಡುಗಿಯರ ನಡುವೆ ವಾದ ಮುಗಿಲುಮುಟ್ಟಿತಿದ್ದಂತೆ ಗುರುಗಳು ಬಂದು ಎಲ್ಲರನ್ನೂ ಗದರಿಸಿ ಒಂದೇ ಟ್ರಿಪ್ಪಿನಲ್ಲಿ ಎಲ್ಲವೂ ಮುಗಿಯಬೇಕು, ಬರಲಿಕ್ಕೆ ಆಗದೆ ಇರುವವರು ಇಲ್ಲಿಯೇ ಉಳಿಯಬಹುದು ಎನ್ನುತ್ತಿದ್ದಂತೆ ಎಲ್ಲರೂ ತೆಪ್ಪಗಾಗಿ ಬಸ್ಸನ್ನೇರಿದರು.
ಮೊದಲೇ ಅರ್ಧಭಾಗ ತುಂಬಿರುವ ಬಸ್ ನ ಹಿಂಭಾಗದಿಂದ ಎತ್ತರಕ್ಕೆ, ಡುಮ್ಮಗಿರುವ ಹುಡುಗರನ್ನು ಒತ್ತೊತ್ತಾಗಿ ನಿಲ್ಲಿಸಿದ್ದಾತು, ಇದಾದ ಬಳಿಕ ಸಣ್ಣಗೆ ಕುಳ್ಳಗಿದ್ದ ಹುಡುಗರನ್ನು ನಿಲ್ಲಿಸಿದ ಬಳಿಕ, ಉಳಿದ ಸೀಟ್ನಲ್ಲಿ ಒಬ್ಬರ ಮೇಲೆ ಇನ್ನೊಬ್ಬರು ಹುಡುಗಿಯರು ಕುಳಿತುಕೊಳ್ಳುವಂತೆ ಹೇಳಿ, ಬಾಗಿಲ ಬಳಿಯವರೆಗೂ ಒತ್ತೊತ್ತಾಗಿ ತುಂಬಿಸಿ, ಒಬ್ಬ ಶಿಕ್ಷಕರಿಗೂ ಅದರಲ್ಲಿ ಜಾಗ ಮಾಡಿಕೊಟ್ಟು, ಡ್ರೈವರ್ ನ ಬಳಿ ಎಲ್ಲರನ್ನೂ ಸೌಖ್ಯವಾಗಿ ಶಿಬಿರದ ಶಾಲೆಯ ಬಳಿ ಕರೆದುಕೊಂಡು ಬರುವಂತೆ ಹೇಳಿದ್ದಾಯಿತು. ಮೊದಲೇ ವಯಸ್ಸಾದ ಗಾಡಿಗೆ ತುಂಬು ಬಸರಿಯ ಹಾಗೆ ಒಳಗೆ ತುಂಬಿಸಿ, ಬಾರ ಹೊರಲಾಗದ ಸ್ಥಿತಿಯಲ್ಲಿ ಎಲ್ಲರನ್ನೂ ತುಂಬಿಕೊಂಡು ಮತ್ತಷ್ಟು ಶಬ್ದವನ್ನು ಮಾಡುತ್ತಾ, ಯಥೇಚ್ಛವಾದ ಗಾಢ ಹೊಗೆಯನ್ನು ಹೊರಸೂಸುತ, ನಿಧಾನವಾಗಿ ಮುನ್ನಡೆಯುತ್ತಿತ್ತು, ಬಸ್ ಎಡ-ಬಲ ರಸ್ತೆಗಳಲ್ಲಿ ತಿರುಗಿ, ವಾಹನಗಳ ಹಿಂದೆ ವೇಗವಾಗಿ ಚಲಿಸಿ, ಸಡನ್ನಾಗಿ ಬ್ರೇಕ್ ಆಕಿ, ಒಬ್ಬರ ಮುಖ ಇನ್ನೊಬ್ಬರು ಮುಖಕ್ಕೆ ಚೆಚ್ಚಿ, ಚೀರಿ ಆಕ್ರಂದಿಸುತ್ತಾ ವಿದ್ಯಾರ್ಥಿಗಳು ಸುಮ್ಮನಾಗಿ, ಮತ್ತೆಲ್ಲೂ ಹಾರಿಸಿದ ಹಂಸ್ ನಿಂದಾಗಿ ಹುಡುಗರು ಇನ್ನೊಬ್ಬರ ಮೇಲೆ ಬಿದ್ದು ಎದ್ದು ಸಮಾಧಾನ ತಂದುಕೊಂಡ ಬಳಿಕ ಬಸ್ ನಗರವನ್ನು ದಾಟಿ ಶಿಬಿರದ ಹಳ್ಳಿಯನ್ನು ತಲುಪಿತು.
ಶಿಬಿರವನ್ನು ಮೈಸೂರಿನ ಪಕ್ಕದಲ್ಲಿರುವ ಕೇರ್ಗಳ್ಳಿಯ ರಾಮನಹುಂಡಿ ಶಾಲೆಯಲ್ಲಿ ಆಯೋಜಿಸಲಾಗಿತ್ತು, ಬಸ್ ಬಂದು ತಲುಪಿದ ಬಳಿಕ ಒಬ್ಬೊಬ್ಬರೇ ನಿಧಾನವಾಗಿ ಇಳಿದು ತಮ್ಮ ಲಗೇಜುಗಳನ್ನು ತೆಗೆದುಕೊಂಡು ಒಂದು ಕಡೆ ಕುಳಿತು ಸಮಾಧಾನ ಪಟ್ಟುಕೊಳ್ಳುತ್ತಿದ್ದರು, ಒಂದರ್ಧ ಗಂಟೆ ಒಳಗಾಗಿ ಎಲ್ಲರೂ ವೇದಿಕೆ ಮುಂಬಾಗದಲ್ಲಿ ಬಂದು ನಿಂತ ಬಳಿಕ 5 ಹುಡುಗರು 5 ಹುಡುಗಿಯರನ್ನು ಒಳಗೊಂಡ ಹತ್ತು ಜನರ ಐದು ಗುಂಪುಗಳಾಗಿ ಪ್ರತ್ಯೇಕಗೊಳಿಸಿ, ಪ್ರತಿ ಗುಂಪಿಗೆ ನಾಯಕನನ್ನು ನೇಮಿಸಿ, ಅವುಗಳಿಗೆ ತಮ್ಮದೇ ಆದಂತಹ ಹೆಸರುಗಳನ್ನು ಇಟ್ಟುಕೊಳ್ಳಬಹುದು ಎಂದು ಹೇಳಿ ಆದ ನಂತರ ಕೆಲ ಮಾಹಿತಿಗಳನ್ನು ಕೊಡಲಾರಂಭಿಸಿದರು,
1. ಶ್ರಮದಾನದ ಸಮಯದಲ್ಲಿ ಮಾತ್ರ ಶಾಲೆಯ ಆವರಣವನ್ನು ದಾಟಬೇಕೆಹೊರತು ಕಾರಣವಿಲ್ಲದೆ ಹೊರಗೆ ಹೋಗಬಾರದು.
2. ಊರ ಪಕ್ಕಪಕ್ಕದಲ್ಲಿ ಕೆರೆ ಬಾವಿ ಇದೆಯೆಂದು ಹುಡುಕಿಕೊಂಡು ಹೋಗುವಂತಿಲ್ಲ.
3. ಬೆಳಿಗ್ಗೆ ಐದು ಗಂಟೆಗೆ ಎದ್ದು ತಮ್ಮ ನಿತ್ಯಕರ್ಮಗಳನ್ನು ಮುಗಿಸಿ ಯೋಗಾಸನವಾದ ಬಳಿಕ ತಿಂಡಿಯನ್ನು ಮುಗಿಸಿಕೊಂಡು ಶ್ರಮದಾನಕ್ಕೆ ಹೊರಡಬೇಕು.
4. ಶ್ರಮದಾನಕ್ಕೆ ತೆಗೆದುಕೊಂಡು ಹೋದಂತಹ ವಸ್ತುಗಳನ್ನು ಒಂದು ಕಡೆ ಬರೆದುಕೊಂಡು ಹಿಂತಿರುಗಿ ಬರುವಾಗ ಅವುಗಳಿರುವಿಕೆಯನ್ನು ಖಾತ್ರಿಪಡಿಸಿಕೊಳ್ಳಬೇಕು.
5. ಶ್ರಮದಾನ ಮುಗಿಸಿ ಬಂದ ಬಳಿಕ ಸ್ನಾನ ಮಾಡಿ ಒಟ್ಟಿಗೆ ಎಲ್ಲರೂ ಕುಳಿತು ಊಟಮಾಡಬೇಕು.
6. ತಾವು ತೆಗೆದುಕೊಂಡು ಬಂದ ತಟ್ಟೆಯಲ್ಲಿ ಹೊಟ್ಟೆತುಂಬಾ ಊಟ ಸೇವಿಸಬೇಕು,ಯಾವುದೇ ಕಾರಣಕ್ಕೆ ಆಹಾರವನ್ನು ಚೆಲ್ಲುವುದಕ್ಕೆ ಅನುಮತಿ ಇಲ್ಲ.
7. ಪ್ರತಿದಿನವೂ ಶ್ರಮದಾನ ಕೆಲಸವನ್ನು, ವೇದಿಕೆ ಸಿದ್ಧಪಡಿಸುವುದನ್ನು, ನಿರೂಪಣೆ ಮಾಡುವುದನ್ನು, ಅಡಿಗೆಯವರಿಗೆ ಸಹಾಯ ಮಾಡುವುದನ್ನು, ಗುಂಪುಗಳು ಬದಲಾಯಿಸಿಕೊಳ್ಳುತ್ತೀರಿಬೇಕು.
8. ಮನೆಯವರಿಂದ ಮಾತನಾಡಬೇಕಾದರೆ ಶಿಕ್ಷಕರ ಮೊಬೈಲ್ ಗಳನ್ನು ಉಪಯೋಗಿಸಿಕೊಳ್ಳಬಹುದು.
9. ಯಾವುದೇ ಕಾರಣಕ್ಕೂ ಹೊರಗಿನ ತಿಂಡಿ ತಿನಿಸುಗಳನ್ನು ತಿನ್ನಬಾರದು.
10. ಶಿಬಿರದ ಉಪಕರಣಗಳನ್ನು ಪ್ರತ್ಯೇಕವಾದ ಕೋಣೆಯಲ್ಲಿಯೇ ಇಡಬೇಕು.
11. ಹುಡುಗ-ಹುಡುಗಿಯರು ಹೆಚ್ಚು ಮಾತನಾಡಿಕೊಂಡು ಕಾಲಹರಣ ಮಾಡುವಂತಿಲ್ಲ.
12. ಹುಡುಗ-ಹುಡುಗಿಯರಿಗೆ ಪ್ರತ್ಯೇಕವಾದ ಕೊಠಡಿಯನ್ನು ನಿಗದಿಪಡಿಸಲಾಗಿದೆ.
13. ಯಾವುದೇ ಮನಸ್ತಾಪಗಳಿಗೆ ಆಸ್ಪದವಿಲ್ಲ.
14. ಆಯಾಸಗೊಂಡವರು ಫಸ್ಟ್ ಏಡ್ ಬಾಕ್ಸ್ ನಲ್ಲಿರುವ ಗ್ಲೂಕೋಸ್ ಅನ್ನು ಬಳಸಬಹುದು.
15. ಧ್ವಜಾರೋಹಣ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರೂ ತಪ್ಪದೇ ಭಾಗವಹಿಸಬೇಕು.
16. ಶ್ರಮದಾನದ ಸಮಯದಲ್ಲಿ ಜನರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕು.
17. ಶ್ರಮಧಾನದಲ್ಲಿ ದೊರೆತ ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ದೂರಕ್ಕೆ ಹೋಗಿ ಒಂದು ಕಡೆ ಗುಡ್ಡೆ ಮಾಡಬೇಕು.
18. ಶ್ರಮಧಾನದ ಸಮಯದಲ್ಲಿ ಬಿಸಿಲು ಇರುವುದರಿಂದ ಹೆಚ್ಚು ನೀರು ಕುಡಿಯಬೇಕು.
19. ಮಧ್ಯಾಹ್ನ ಊಟವಾದ ಬಳಿಕ ಬಿಡುವಿನ ಸಮಯದಲ್ಲಿ ಬಟ್ಟೆಗಳನ್ನು ತೆಗೆದುಕೊಳ್ಳಬಹುದು.
20. ಸಂಜೆ ಕಾರ್ಯಕ್ರಮಗಳೆಲ್ಲವೂ ಮುಗಿದ ಬಳಿಕ ವೇದಿಕೆ ಮೇಲೆ ತಮ್ಮ ಪ್ರತಿಭೆಗಳನ್ನು ಗುರುತಿಸಿಕೊಳ್ಳಬಹುದು.
21. ರಾತ್ರಿ ಊಟವಾದ ಬಳಿಕ ತಮ್ಮ ದಿನಚರಿಯನ್ನು ಡೈರಿಯಲ್ಲಿ ಬರೆಯತಕ್ಕದ್ದು.
ಇನ್ನಿತರ ಮಾಹಿತಿಗಳನ್ನು ಸಮಯಕ್ಕೆ ಅನುಗುಣವಾಗಿ ನೀಡುತ್ತೇವೆ ಎಂದು ಹೇಳಿದ್ದಾಯಿತು. ಇದಾದ ಬಳಿಕ ಎಲ್ಲರೂ ಕಾಫಿಯನ್ನು ಹೀರಿ, ರಾತ್ರಿ ಊಟ ಮುಗಿಸಿ ಮಲಗಿದ್ದಾಯಿತು.
ಮರುದಿನ ಬೆಳಿಗ್ಗೆ ಎಲ್ಲರೂ ಬೇಗ ಎದ್ದು ಧ್ವಜಾರೋಹಣವಾದ ಬಳಿಕ ಯೋಗಾಸನವನ್ನು ಮಾಡಿ ಬಿಸಿ ಬಿಸಿ ಕಾಫಿ ತಿಂಡಿ ತಿಂದುಕೊಂಡು ಶ್ರಮದಾನಕ್ಕೆ ಬೇಕಾದಂತಹ ಸಲಕರಣೆಗಳನ್ನು ತೆಗೆದುಕೊಂಡು ಹಳ್ಳಿ ಕಡೆಗೆ ನಡೆದಿದ್ದಾಯಿತು, ಮೊದಲ ದಿನವಾಗಿದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಉತ್ಸಾಹದಿಂದ ಕೂಡಿದ್ದು ಶಾಲೆಯ ಇಕ್ಕೆಲಗಳಿಂದ ಹಳ್ಳಿಯ ಮನೆ ತಲುಪುವ ದಾರಿ ಉದ್ದಕ್ಕೂ ಬೆಳೆದು ನಿಂತಿದ್ದ ಗಿಡಗಂಟೆಗಳನ್ನು ಕೆಲವರು ಕತ್ತರಿಸುತ್ತಿದ್ದರೆ, ಇನ್ನು ಕೆಲವರು ಪ್ಲಾಸ್ಟಿಕ್, ಟೈಯರ್, ಗಾಜಿನ ತುಂಡುಗಳನ್ನು ಎತ್ತಿ ಒಂದು ಕಡೆ ಹಾಕುತ್ತಿದ್ದರೆ, ರಸ್ತೆಯ ಮೇಲೆ ಬಿದ್ದಂತಹ ಕಸವನ್ನೆಲ್ಲ ಹುಡುಗಿಯರು ಗುಡಿಸಿ ಸ್ವಚ್ಛಗೊಳಿಸಿದರು, ಇನ್ನುಳಿದವರು ಗುಡ್ಡೆ ಮಾಡಿದ ಕಸಗಳನ್ನು ದೂರಕ್ಕೆ ಎಸೆದು ಬರುತ್ತಿದ್ದರು, ಉತ್ಸಾಹದಲ್ಲಿದ್ದ ಯುವಜನತೆಯ ಸಹಯೋಗದೊಂದಿಗೆ ಊರಿನ ಮುಖ್ಯ ರಸ್ತೆ ಸ್ವಲ್ಪವೂ ಕಸದಿಂದ ಕೂಡಿರದೆ ಗ್ರಾಮಸ್ಥರು ಇದು ನಿಜವಾಗಿಯೂ ನಮ್ಮ ಹಳ್ಳಿಯ ರಸ್ತೆಯೇ ಎನ್ನುವಷ್ಟು ನಳನಳಿಸುತ್ತಿತ್ತು, ಇಷ್ಟಗುವುದರೊಳಗೆ ಮಧ್ಯಾಹ್ನ ಕಳೆದೇಹೋಗಿತ್ತು, ಎಲ್ಲರೂ ಉಪಕರಣಗಳನ್ನು ತೆಗೆದುಕೊಂಡು ಮರಳಿ ಶಾಲೆಗೆ ಹಿಂತಿರುಗಿದೆವು.
ಎಲ್ಲರದ್ದು ಸ್ನಾನವಾಗಿ ಊಟವಾದ ಬಳಿಕ, ವಿಶೇಷ ಆಹ್ವಾನಿತರಿಂದ ವೇದಿಕೆಯ ಕಾರ್ಯಕ್ರಮ ಪ್ರಾರಂಭವಾಯಿತು, ಅಂದಿನ ಕಾರ್ಯಕ್ರಮಕ್ಕೆ ಮೈಸೂರಿನ ಉರಗ ತಜ್ಞರಾದಂತಹ ಸ್ನೇಕ್ಸ್ ಶಾಮ್ ಹಾವುಗಳ ಚಲನವಲನ, ಅವುಗಳ ಆಹಾರ, ಪರಿಸರಕ್ಕೆ ಹಾವುಗಳ ಕೊಡುಗೆ, ಎಂಬಿತ್ಯಾದಿ ಮಾಹಿತಿಗಳು ನೀಡುವ ಮೂಲಕ ಕಾರ್ಯಕ್ರಮ ಮುಕ್ತಾಯವಾಯಿತು. ಹೀಗೆ ಪ್ರತಿದಿನವೂ ವೇದಿಕೆಯ ಕಾರ್ಯಕ್ರಮಕ್ಕೆ ಪತ್ರಕರ್ತರನ್ನು, ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು, ಎನ್ಎಸ್ಎಸ್ ನ ಮುಖ್ಯ ಅಧಿಕಾರಿ ಗಳನ್ನು ಕರೆಸಲಾಗುತ್ತಿತ್ತು, ಈ ಕಾರ್ಯಕ್ರಮಗಳು ಮುಗಿದು ಟೀ ಬ್ರೇಕ್ ಆದನಂತರ ವಿದ್ಯಾರ್ಥಿಗಳಿಗೆ ವೇದಿಕೆಯ ಮೇಲೆ ಕಾರ್ಯಕ್ರಮವನ್ನು ಮಾಡಲು ಅವಕಾಶ ನೀಡಲಾಗಿತ್ತು.
ಮಾರನೆಯ ದಿನ ಹಳ್ಳಿ ಒಳಗೆ ಶ್ರಮದಾನ ವಾದುದರಿಂದ ಪ್ರತಿಯೊಂದು ಗುಂಪಿನವರು ಒಂದೊಂದೇ ರಸ್ತೆಗಳನ್ನು ಸ್ವಚ್ಛಗೊಳಿಸುತ್ತಾ, ಊರಿನ ಅಂದವನ್ನು ಹೆಚ್ಚುಗೂಳಿಸುವುದರೊಂದಿಗೆ, ಜನರಿಗೆ ಸ್ವಚ್ಛತೆಯ ಬಗ್ಗೆ ತಿಳಿಯುವ ರೀತಿಯಲ್ಲಿ, ನೀರಿನ ಬಳಕೆ, ಕಸವನ್ನು ವಿಂಗಡಿಸುವಿಕೆ, ಮೋರಿಗಳ ಸ್ವಚ್ಛತೆಯಿಂದ ಕ್ರಿಮಿಕೀಟಗಳ ಮುಕ್ತಿ, ಶೌಚಾಲಯ ಬಳಕೆ, ಎಂಬಿತ್ಯಾದಿ ವಿಷಯಗಳ ಬಗ್ಗೆ ಅರಿವು ಮೂಡಿಸಿದ್ದಾಯಿತು, ಇದರೊಂದಿಗೆ ಊರಿನವರು ದಣಿವಾದ ವಿದ್ಯಾರ್ಥಿಗಳಿಗೆ ನೀರು ಕೊಡುವುದರ ಮೂಲಕ ಸಹಕರಿಸುತ್ತಿದ್ದರು, ಶ್ರಮದಾನವಾದ ಬಳಿಕ ಶಾಲೆಗೆ ಹಿಂದಿರುಗುವಷ್ಟರಲ್ಲಿ ಪ್ರತಿದಿನವೂ ಅಡುಗೆ ಮಾಡುವವರಿಗೆ ಸಹಕರಿಸುತ್ತಿದ್ದ ಗುಂಪುಗಳು ಬದಲಾಗುತ್ತಾ ಅಡಿಗೆಯನ್ನು ಮಾಡಿಕೊಂಡು ಬಡಿಸಲು ನೆರವಾಗುತ್ತಿದ್ದರು, ಅಂದು ಆ ಗುಂಪಿನವರೇ ಅಡುಗೆ ಪಾತ್ರೆಗಳನ್ನು ತೊಳೆದು ಶುಚಿಗೊಳಿಸುತ್ತಿದ್ದರು.
ಉಳಿದ ಇನ್ನೆರಡು ದಿನ ಊರಹೊರಗೆ ಪಾಳುಬಿದ್ದಿದಂತಹ ದೇವಸ್ಥಾನ, ಪುಷ್ಕರಣಿಯ ಸುತ್ತಲೂ ನಮ್ಮಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದಂತಹ ಗಿಡಗಂಟಿಗಳನ್ನು ತೆರವುಗೊಳಿಸಿ, ಕಸವನ್ನು ದೂರಕ್ಕೆ ಎಸೆದು ಬಂದಿದ್ದರಿಂದ ಸುತ್ತಲೂ ಶುಭ್ರತೆ ನಳನಳಿಸುತ್ತಿತ್ತು, ನಮ್ಮೆಲ್ಲರ ಶ್ರಮಧಾನವನ್ನು ನೋಡಿದಂತಹ ಊರಿನವರು ಇನ್ನಷ್ಟು ಹತ್ತಿರವಾದರೂ, ಇದರೊಂದಿಗೆ ಸಂಜೆಯ ಕಾರ್ಯಕ್ರಮಕ್ಕೆ ತಾವು ಬಂದು ಕೂರುತ್ತಿದ್ದರು,ಇದರ ಸಲುವಾಗಿಯೇ ವಿದ್ಯಾರ್ಥಿಗಳು ಸ್ವಚ್ಛತೆಯ ಬಗ್ಗೆ ಅರಿವು ಮೂಡುವಂತೆ ಸಣ್ಣ ನಾಟಕಗಳನ್ನು, ಹಾಡುಗಳನ್ನು ಪ್ರದರ್ಶಿಸಲಾಗುತ್ತಿತ್ತು, ವೇದಿಕೆಯ ಮೇಲೆ ನಿಲ್ಲಲು ಹೆದರುತ್ತಿದ್ದ ಎಷ್ಟೋ ವಿದ್ಯಾರ್ಥಿಗಳು ಈ ಮೂಲಕ ತನಗೆ ತಿಳಿಯದ ಹಾಗೆ ವೇದಿಕೆ ಮೇಲೆ ಬರಲಾರಂಭಿಸಿದರು, ಇಷ್ಟೆಲ್ಲಾ ವಿದ್ಯಾರ್ಥಿಗಳ ಪರಿಶ್ರಮದಿಂದಾಗಿ ಗ್ರಾಮದ ಜನತೆಯಲ್ಲಿ ಸ್ವಚ್ಛತೆಎಡೆಗೆ ಬೆಳಕು ಚೆಲ್ಲಿ ತಾವು ಶುಚಿತ್ವವನ್ನು ಕಾಪಾಡಬೇಕೆಂದು ಅರಿವಾಯಿತು.
ಎನ್ಎಸ್ಎಸ್ ನ ದ್ಯೆಯೋದ್ದೇಶವಾದ "ನನಗಲ್ಲ ನಿನಗೆ", ಹಾಗೂ ಸೇವೆಯ ಮಾಡೋಣ ಬನ್ನಿ ಎಂಬ ಗೀತೆಯು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಗಾಢವಾದ ಪ್ರಭಾವವನ್ನು ಬೀರಿ, ಗಾಂಧೀಜಿಯವರ ಕನಸಾದಂತಹ ಗ್ರಾಮಗಳ ಏಳಿಗೆಗೆಗಿ ಯುವಕರು ಬೆಳಕು ಚೆಲ್ಲಿದಂತಾಯಿತು, ಇಷ್ಟೆಲ್ಲ ಸಮಾಜಸೇವೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸಾರ್ಥಕತೆಯ ಭಾವವನ್ನು ಮೂಡಿಸಿತು .
ಎನ್ಎಸ್ಎಸ್ ನ ಸಂಪ್ರದಾಯದಂತೆ ಶಿಬಿರ ಮುಕ್ತಾಯಗೊಳ್ಳುವ ಹಿಂದಿನ ದಿನ ಸಂಜೆಯ ಕಾರ್ಯಕ್ರಮ ಮುಗಿದ ಬಳಿಕ ಎಲ್ಲರೂ ಮೌನವಾಗಿದ್ದುಕೊಂಡು, ಶಿಬಿರದಲ್ಲಿ ನಡೆದ ಎಲ್ಲಾ ಚಟುವಟಿಕೆಗಳನ್ನು ನೆನಪಿಸಿಕೊಂಡು, ಯಾವುದಾದರೂ ಕಹಿಘಟನೆ ಅಥವಾ ಮನಸ್ತಾಪಗಳಿದ್ದರೆ ಅವುಗಳನ್ನು ಮರೆತು, ಎಲ್ಲರೂ ಒಂದೊಂದು ಕ್ಯಾಂಡಲ್ ಅನ್ನು ಹಚ್ಚಿ, ಮೌನವಾಗಿ ಊಟ ಮಾಡಲಾಯಿತು, ನಮ್ಮೆಲ್ಲ ಶ್ರಮದಾನವನ್ನು ಮೆಚ್ಚಿ ಹಳ್ಳಿಯವರು ರಾತ್ರಿಯ ಊಟವನ್ನು ಏರ್ಪಡಿಸಿದ್ದರು, ಊಟ ಚೆನ್ನಾಗಿತ್ತು ಇದಾದ ಬಳಿಕ ಎಲ್ಲರೂ ಮಲಗಿಕೊಂಡೆವು.
ಮರುದಿನ ಬೆಳಿಗ್ಗೆ ಬೇಗ ಎದ್ದು ಎಲ್ಲರೂ ಶಾಲೆಯ ಆವರಣವನ್ನು ಮತ್ತೊಮ್ಮೆ ಸ್ವಚ್ಛಗೊಳಿಸಿ, ಉಪಹಾರವನ್ನು ಮುಗಿಸಿಕೊಂಡು, ಕಟ್ಟಕಡೆಯ ವೇದಿಕೆಯ ಕಾರ್ಯಕ್ರಮಕ್ಕೆ ಗ್ರಾಮಸ್ಥರನ್ನು ಕರೆಯಲೆಂದು ಒಂದಷ್ಟು ಜನ ಹೋಗಿ ಬಂದದ್ದಾಯಿತು, ಜನ ಸೇರುತ್ತಿದ್ದಂತೆ ಕಾರ್ಯಕ್ರಮ ಪ್ರಾರಂಭವಾಯಿತು, ವೇದಿಕೆಯ ಮೇಲೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿಗಳು, ಶಿಬಿರಕ್ಕೆ ಸಹಕರಿಸಿದ ಕಾಲೇಜಿನ ಇತರ ಶಿಕ್ಷಕರು, ಶಾಲೆಯ ಮುಖ್ಯೋಪಾಧ್ಯಾಯರು, ಊರಿನ ಅಧ್ಯಕ್ಷರು, ಮುಖಂಡರು, ವೇದಿಕೆ ಮೇಲೆ ಆಸೀನರಾಗಿದ್ದರು, ವೇದಿಕೆಯ ಮುಂಭಾಗದಲ್ಲಿ ಊರಿನ ಗ್ರಾಮಸ್ಥರು ಜೊತೆಗೆ ಶಿಬಿರಾರ್ಥಿಗಳು ಕುಳಿತಿದ್ದರು, ಸ್ವಾಗತ ಭಾಷಣವನ್ನು ಮಾಡಿದ ಬಳಿಕ ವೇದಿಕೆ ಮೇಲೆ ಕುಳಿತಿದ್ದಂತಹ ಗಣ್ಯರು ಶಿಬಿರ ಯಶಸ್ವಿಯಾಗಲು ಕಾರಣೀಭೂತರಾದ ಎಲ್ಲರನ್ನೂ ಸ್ಮರಿಸಲಾಯಿತು ಇದರೊಂದಿಗೆ ವಿದ್ಯಾರ್ಥಿಗಳ ಸೇವೆಯೆಂಬ ನಿಷ್ಕಲ್ಮಶ ಮನೋಧರ್ಮಗಳಿಗೆ ಬೆಳಕು ಚೆಲ್ಲುತ್ತದೆ ವಿದ್ಯಾರ್ಥಿಗಳನ್ನು ಶ್ಲಾಘಿಸುವುದರೊಂದಿಗೆ ಕಾರ್ಯಕ್ರಮ ಮಧ್ಯಾಹ್ನದ ಮುಕ್ತಾಯವಾಯಿತು.
ಇದಾದ ಬಳಿಕ ಎಲ್ಲ ವಿದ್ಯಾರ್ಥಿಗಳು ಊಟವನ್ನು ಮಾಡಿ, ಪಾತ್ರೆಯನ್ನು ತೊಳೆದು, ಶಿಬಿರದ ಉಪಕರಣಗಳೆಲ್ಲವನ್ನೂ, ತಮ್ಮ ಲಗೇಜುಗಳನ್ನು ಬಸ್ಸಿಗೆ ತುಂಬಿ ಹೊರಡಲು ಸಿದ್ಧರಾಗುತ್ತಿದಂತೆ, ಶಿಬಿರ ಇನ್ನೆರಡು ದಿನ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳುತ್ತಾ ಸ್ವಲ್ಪ ಮರುಗಿ, ಕೆಲವರು ಕಣ್ಣೀರನ್ನು ಸುರಿಸಿ ಬಸ್ ಹತ್ತಿ ಕುಳಿತರು, ಭಾರವಾದ ಮನಸ್ಸಿನಲ್ಲಿ ಶಿಬಿರದ ಶಾಲೆಯನ್ನು ಹಿಂತಿರುಗಿ ನೋಡುತ್ತಾ ಕಾಲೇಜಿನತ್ತ ಪಯಣ ಬೆಳೆಸಿದೆವು, ಸಮಯ 4:30 ಒಳಗಾಗಿ ಬಸ್ ಕಾಲೇಜನ್ನು ಸೇರಿದ ಬಳಿಕ, ಕಾಲೇಜು ಪ್ರಾರಂಭವಾದ ಬಳಿಕ ಎಲ್ಲರೂ ಸಿಗೋಣ ವೆಂದು ಹೇಳಿ ಎಲ್ಲರೂ ತಮ್ಮ ತಮ್ಮ ಮನೆಗೆ ಹೊರಡುವ ಮೂಲಕ ಶಿಬಿರ ಮುಕ್ತಾಯವಾಯಿತು.
ಕಾಲೇಜು ಪ್ರಾರಂಭವಾದ ಸ್ವಲ್ಪದಿನಗಳಲ್ಲಿ ಶಿಬಿರದಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳನ್ನುಳಗೊಂಡ ಸಭೆಯನ್ನು ಕರೆಯಲಾಗಿತ್ತು, ಈ ಕಾರ್ಯಕ್ರಮದಲ್ಲಿ ಶಿಬಿರದ ವಿವಿಧ ಕಾರ್ಯಕ್ರಮಗಳಲ್ಲಿ ಗೆದ್ದಂತಹ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯನ್ನು ಮಾಡಲಾಯಿತು, ಇದರೊಂದಿಗೆ ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಂತಹ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಮಾಣ ಪತ್ರವನ್ನು ನೀಡಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಿಕ್ಷಕರು ಬಹುಮಾನವನ್ನು ತೆಗೆದುಕೊಳ್ಳುವುದು ಎರಡನೆಯ ಮಾತು ಆದರೆ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ನಿಜಕ್ಕೂ ಪ್ರಶಸ್ತಿಗಳನ್ನು ತೆಗೆದುಕೊಳ್ಳುವುದಕ್ಕೆ ಸಮ ಎಂದು ಹೇಳಿದರು, ಇದರೊಂದಿಗೆ ಒಬ್ಬ ಶಿಬಿರಾರ್ಥಿ ಮಾತನಾಡುತ್ತಾ ಶಿಬಿರ ನಮಗೆ ತಿಳಿಯದಹಾಗೆ ನಮ್ಮನ್ನು ಬಹಳಷ್ಟು ಪರಿವರ್ತಿಸಿದೆ, ಶಿಸ್ತು, ಸಂಯಮ, ತಾಳ್ಮೆಯಲ್ಲಿ ಜೀವನ ನಡೆಸುವುದನ್ನು ಕಲಿಸಿಕೊಟ್ಟಿದೆ, ಸೇವೆಯನ್ನು ಮಾಡುವ ಮೂಲಕ ಅದರೊಳಗಿನ ನಿಜ ಆನಂದವನ್ನು ತಿಳಿಸಿಕೊಟ್ಟಿದೆ, ಈ ಮೂಲಕ ಶಿಬಿರ ಸಾರ್ಥಕತೆಯಹಾದಿಯನ್ನು ಹಿಡಿದಿದೆ ಎಂಬ ಮಾತುಗಳಿಗೆ ಚಪ್ಪಾಳೆಯ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು.
ಈ ಕಾರ್ಯಕ್ರಮ ಮುಗಿದು ಎಷ್ಟೊ ದಿನಗಳಾದ ಬಳಿಕದ ಸ್ನೇಹಿತರಿಂದ ತಿಳಿದಿದ್ದೇನೆಂದರೆ, ಎನ್ಎಸ್ಎಸ್ ಆಫೀಸಿನಿಂದ ರಿಲೀಸ್ ಆಗುವ ಫಂಡ್ ಸಾಕಾಗದೆ ಶಿಕ್ಷಕರು ತಮ್ಮ ಸ್ವಂತ ಹಣವನ್ನು ಹಾಕಿ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು, ಈ ವಿಷಯಗಳನ್ನು ಎಲ್ಲಿಯೂ ತೋರ್ಪಡಿಸಿಕೊಳ್ಳದ ಗುರುಗಳಿಗೆ ನಾವು ನಿಜವಾಗಿಯೂ ನಮಿಸಬೇಕಾಗುತ್ತದೆ. ದುಃಖದ ಸಂಗತಿಯೆಂದರೆ ಕಾರಣಾಂತರಗಳಿಂದ ನಾವು ಸೆಕೆಂಡ್ ಇಯರ್ ಬರುವುದರೊಳಗೆ ಎನ್ಎಸ್ಎಸ್ ಘಟಕವನ್ನೇ ಮುಚ್ಚಲಾಗಿತ್ತು,ಮುಚ್ಚಿದ್ದು ಘಟಕವನ್ನೇ ಹೊರತು ನಮ್ಮ ನೆನಪುಗಳಲ್ಲ, ನೀವು ಓದುವ ಶಾಲಾ ಕಾಲೇಜುಗಳಲ್ಲಿ ಯಾವುದಾದರೊಂದು ಸ್ವಯಂಸೇವಾ ಘಟಕ ಇದ್ದೇ ಇರುತ್ತದೆ, ಅದರಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ಅನೇಕ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ. ನಿಮ್ಮ ಮನೆಯಲ್ಲಿ ಮಕ್ಕಳೇನಾದರೂ ಇದ್ದಲ್ಲಿ ಅವರನ್ನು ಶಿಬಿರಕ್ಕೆ ಕಳುಹಿಸಿಕೊಡಿ ಏಕೆಂದರೆ ಶಿಬಿರದಲ್ಲಿ ಕಲಿಯುವುದು ಬಹಳಷ್ಟಿದೆ.
ಧನ್ಯವಾದಗಳು.