Saturday, May 29, 2021

ಅಜ್ಜಿಯ ಕಾಯಕ.

                      


 ಹಳ್ಳಿಯೇ ಆಗಿರಲಿ ನಗರವೇ ಆಗಿರಲಿ ಜೀವನ ನಿರ್ವಹಣೆಗೆ ಆಹಾರ ಬಹಳ ಮುಖ್ಯವಾಗಿರುತ್ತದೆ, ಆದರೆ ಈ ಅಂಕಣದ ಪ್ರಸ್ತಾಪ ಆಹಾರದಲ್ಲಾ ಬದಲಿಗೆ ಬೇರೆಬೇರೆ ಪ್ರದೇಶಗಳಲ್ಲಿ ಜೀವನ ನಡೆಸುವಂತಹ ಚಿತ್ರಣದ ಗ್ರಹಿಕೆಯಾಗಿದೆ.

ನಗರದಲ್ಲಿ ಸಾಮಾನ್ಯವಾಗಿ ಕಾಣುವ ಒಂದು ಪುಟ್ಟ ಉದಾಹರಣೆಯ ಮೂಲಕ ಅಂಕಣವನ್ನು ಪ್ರಾರಂಭಿಸೋಣ, ದಂಪತಿಗಳಿಬ್ಬರು ನಗರದಲ್ಲಿ ಜೀವನವನ್ನು ನಡೆಸಲು ಪ್ರಾರಂಭಿಸಿದರು, ಗಂಡನಿಗೆ ಒಳ್ಳೆಯ ಕೇಂದ್ರ ಸರ್ಕಾರದ ನೌಕರಿಯಾಗಿದ್ದರಿಂದ ಬಹಳವೇನು ತಲೆಕೆಡಿಸಿಕೊಳ್ಳದೆ ಜೀವನ ಪ್ರಾರಂಭವಾಯಿತು,ವರ್ಷಗಳ ತರುವಾಯ ಮೂರು ಗಂಡು ಮಕ್ಕಳು ಜನಿಸಿದರು, ಇರುವ 4 ಜನ ಗಂಡು ಮಕ್ಕಳಿಗೆ ಯಾವುದೇ ರೀತಿಯ ಕೊರತೆಯಾಗಬಾರದೆಂದು ಆಸೆಯಿಂದ ಬಹಳ ಶ್ರೀಮಂತವಾಗಿ ಏನು ಅಲ್ಲದೆ ಹೋದರು ಎಲ್ಲರಂತೆ ಸಾಮಾನ್ಯವಾಗಿ ಬೆಳೆಸಲು ಪ್ರಯತ್ನಪಟ್ಟರು, ಚಿಕ್ಕವರಿಂದಲೇ ಒಳ್ಳೆ ಶಾಲಾ- ಕಾಲೇಜುಗಳಲ್ಲಿ ಓದಿಸಿದರು, ಸಹವಾಸದಂತೆ ಬುದ್ಧಿ ಎಂಬಂತೆ ಶ್ರೀಮಂತರ ಮನೆಯ ಹುಡುಗರ ಸಹವಾಸ ಸ್ವಲ್ಪ ಹಾದಿಯನ್ನು ತಪ್ಪಿಸಿತು, ಬೆಳೆದು ದೊಡ್ಡವರಾಗಿರುದನ್ನು ಕಂಡು ಮನೆಯವರೇ ನಿಂತು ಮದುವೆಯನ್ನು ಮಾಡಿ ಮುಗಿಸಿದರು, ಅಣ್ಣ-ತಮ್ಮಂದಿರ ಯಾವುದೇ ಸಮಸ್ಯೆ ಇಲ್ಲದೆ ಹೋದರೂ ಮದುವೆಯಾದ ಬಳಿಕ ಮನೆಗೆ ಸೊಸೆಯಂದಿರು ಸೇರುತ್ತಿದ್ದಂತೆ ನಿಧಾನವಾಗಿ ಜಗಳ ಪ್ರಾರಂಭವಾಗಿ, ಇಡೀ ಮನೆಯನ್ನು ಚಿದ್ರಗೊಳಿಸಿ, ಬಂದ ನಿವೃತ್ತಿ ಹಣವನ್ನು ಭಾಗ ಮಾಡಿಕೊಂಡು, ಅತ್ತೆ ಮಾವನವರನ್ನು old age home ಗೆ ಸೇರಿಸಲಾಯಿತು,   ಅಲ್ಲಿ ಅವರು ಹೇಗೋ ಕೊರಗಿ ಕೊಂಡು ದಿನ ಕಲಿಯಲಾರಂಭಿಸಿದರು, ಇದು ನಗರದ ಚಿತ್ರಣವಾದರೆ ಹಳ್ಳಿಯ ಚಿತ್ರಣವೇ ಸಂಪೂರ್ಣವಾಗಿ ಸೌಮ್ಯವಾಗಿರುವಂತಹದ್ದು.

ಮನೆಯ ಹಿರಿಯರಿಗೆ ಮಕ್ಕಳೂ ಮೊಮ್ಮಕ್ಕಳೂ ಹಣ ಕೊಟ್ಟರೆ ಅದನ್ನು ಖರ್ಚು ಮಾಡಿದೆ ಪೆಟ್ಟಿಗೆಯಲ್ಲಿ ಇಟ್ಟುಕೊಂಡು, ಮನೆಗೆ ಕಷ್ಟ ಎಂದು ತಿಳಿದರೆ ಅದನ್ನು ಹಿಂದಿರುಗಿಸುತ್ತಾರೆ. ಅದರಲ್ಲಿಯೂ ಮನೆಯ ಹಿರಿಯ ಅಜ್ಜಿಯರ ಪಾತ್ರ ಬಹಳ ವಿಶಾಲವಾದದ್ದು, ಬೆಳಿಗ್ಗೆ ಸೂರ್ಯೋದಯವಾಗುವ ಮುನ್ನವೇ ಎದ್ದು ಹಾಲು ಕರೆದು  ಎಲ್ಲರಿಗೂ ಕಾಫಿ ಮಾಡಿಕೊಟ್ಟು, ನೀರು ಕಾಯಿಸಿ ಮೊಮ್ಮಕ್ಕಳಿಗೆ ಸ್ನಾನ ಮಾಡಿಸಿ, ತಿಂಡಿ ಬಟ್ಟೆ ಪಾತ್ರೆ ಕೆಲಸಗಳಲ್ಲಿ ಮನೆಯವರೊಂದಿಗೆ ಕೈಜೋಡಿಸಿ, ತಮ್ಮ ಬಟ್ಟೆಯನ್ನು ತಾವೇ ಒಗೆದುಕೊಂಡು, ಶಿವಾ ಎಂದು ದೇವರಿಗೆ ಕೈಮುಗಿದು, ಮಕ್ಕಳು ಉಳುಮೆ ಕೆಲಸ ಮಾಡುತ್ತಿರುವ ಜಮೀನಿಗೆ ಹೋಗಿ ಕಾಳು, ಬೀಜವನ್ನು ಅಥವಾ ಕಳೆಯ ಕೆಲಸವನ್ನು ಮಾಡಿ, ಸಂಜೆ ಮನೆಗೆ ಹಿಂದಿರುಗುವಾಗ ತೋಟದ ಸುತ್ತ ಬೆಳೆದಿರುವಂತಹ ಸೊಪ್ಪು ತರಕಾರಿಗಳನ್ನು ಕಿತ್ತುತಂದು ಬಿಸಿಬಿಸಿ ಅಡುಗೆಯನ್ನು ಮಾಡಿ ಎಲ್ಲರಿಗೂ ಉಣಬಡಿಸುತ್ತಾರೆ, ಇಷ್ಟರಲ್ಲೇ ಅವರ ದಿನಚರಿ ಮುಗಿದುಹೋಗುತ್ತದೆ ಎಂದುಕೊಂಡರೆ ಅದು ನಮ್ಮ ತಪ್ಪುಗ್ರಹಿಕೆ ಆಗುತ್ತದೆ, ನಿಜಕ್ಕೂ ಮನೆಯ ಹಿರಿಯ ಅಜ್ಜಿಯವರು ಮಾಡುವ ಕೆಲಸಗಳನ್ನು ನೋಡಿದರೆ ಆಶ್ಚರ್ಯವಾಗುತ್ತದೆ ಅವುಗಳಲ್ಲಿ ಕೆಲವೆಂದರೆ:

1 ಬೆಳೆ ಕಟಾವಾದ ಬಳಿಕ ಮುಂದಿನ ಬೆಳೆಗೆ ಬೇಕಾದಂತಹ ಉತ್ತಮ ಬೀಜಗಳನ್ನು ಸಂರಕ್ಷಿಸಿ ಇಡುತ್ತಾರೆ.

2 ಹರಳಿನ ಗಿಡ ಬೀಜವಿಡಿಯುವ ಕಾಲದಲ್ಲಿ, ಎಲ್ಲವನ್ನು ಒಣಗಿಸಿ ವರ್ಷಕ್ಕೆ ಬೇಕಾಗುವಷ್ಟು ಎಣ್ಣೆ ತೆಗೆಯುತ್ತಾರೆ.

3 ಮನೆಯ ಸುತ್ತ ನಾಲ್ಕಾರು ಬಗೆಯ ಹೂವು, ಹಣ್ಣಿನ ಗಿಡಗಳನ್ನು ಬೆಳೆಸಿ ದೇವರ ಪೂಜೆಗೆ ಸಮರ್ಪಿಸುತ್ತಾರೆ.

4 ಮನೆಗೆ ಬೇಕಾದಂತಹ ಅಂಚಿನ ಕಡ್ಡಿ ಪುರಕೆಯನ್ನು ತೆಂಗಿನಗರಿಯಲ್ಲಿ ಮಾಡಿಕೊಳ್ಳುತ್ತಾರೆ.

5 ಕಾಲು ಹೊರೆಸುವ ಮ್ಯಾಟ್, ಚಾಪೆ ಹಾಗೂ ಕೆಲವು ಬಾರಿ ಮಕ್ಕಳಿಗೆ ಸ್ವೆಟರು, ಬಿದುರಿನ ಬುಟ್ಟಿ ಮಾಡುತ್ತಾರೆ.

6 ಚಳಿಗಾಲಕ್ಕೆ ಬೇಕಾದಂತಹ ದಟ್ಟವನ್ನು ಒಲಿಯುತ್ತಾರೆ.

7 ಒಗೆದ ಬಟ್ಟೆಗಳನ್ನು ಇಸ್ತ್ರಿ ಮಾಡಿದ ರೀತಿಯಲ್ಲಿ ಮಡಚಿ ಇಡುತ್ತಾರೆ.

8 ಕಾಳುಗಳಲ್ಲಿ ಸೇರಿರುವಂತಹ ಕಸ ಕಡ್ಡಿಯನ್ನು ಹೆಕ್ಕಿ ಶುಚಿಗೊಳಿಸುತ್ತಾರೆ.

9 ಮನೆಗೆ ಬರುವಂತಹ ಗುಬ್ಬಿಗಳಿಗೆ ಅಕ್ಕಿಕಾಳು ಹಾಕುತ್ತಾರೆ.

10 ಕೋಳಿ, ಆಡು, ಮೇಕೆ, ಹಸು, ದನಕರುಗಳನ್ನು ಪ್ರೀತಿಯಿಂದ ಆರೈಕೆ ಮಾಡುತ್ತಾರೆ.

11 ದೇವರ ಪೂಜೆಗೆ ಬೇಕಾದಂತಹ ಗೆಜ್ಜೇವಸ್ತ್ರ ದೀಪದ ಬತ್ತಿಯನ್ನು ಜಮೀನಿನಲ್ಲಿ ಬೆಳೆದ ಹತ್ತಿಯನ್ನು ಕಿತ್ತುತಂದು ತಯಾರಿಸುತ್ತಾರೆ.

12 ಹಬ್ಬಗಳಿಗೆ ಸರಿಹೊಂದುವ ಅಡುಗೆಯನ್ನು ಹೇಳಿಕೊಡುತ್ತಾರೆ.

13 ಚಿಕ್ಕಮಕ್ಕಳಿಗೆ ಪ್ರೊಟೀನ್ ಅಂಶ ಒದಗಿಸುವಂತಹ ರಾಗಿ ಅಂಬಲಿ, ಕಾಳು ಪಲ್ಯಗಳನ್ನು ಮಾಡಿಕೊಡುತ್ತಾರೆ.

14 ಮನೆಯಲ್ಲಿ ಯಾರಿಗಾದರೂ ಹುಷಾರು ಇಲ್ಲದೆ ಹೋದರೆ ಪ್ರಥಮ ಚಿಕಿತ್ಸೆ ಮಾಡುತ್ತಾರೆ.

15 ಮೊಸರು ಕಡೆದು, ಬೆಣ್ಣೆ ತೆಗೆದು, ತುಪ್ಪ ತಯಾರಿಸುತ್ತಾರೆ.

16 ಮಳೆಗಾಲಕ್ಕೆ ಬೇಕಾದಂತಹ ಕಾರದಪುಡಿ, ಸಂಡಿಗೆ ಅನ್ನ ಬೇಸಿಗೆಯಲ್ಲಿ ಮಾಡಿಟ್ಟುಕೊಳ್ಳುತ್ತಾರೆ.

17 ಮದುವೆ, ಹಬ್ಬಹರಿದಿನಗಳಲ್ಲಿ ಮನೆಗೆ ಬರುವಂತಹ ಅತಿಥಿಗಳನ್ನು ಆದರದಿಂದ ಯೋಗಕ್ಷೇಮ ವಿಚಾರಿಸುತ್ತಾರೆ, ಹಾಗೂ ಮನೆಗೆ ಬಂದ ಪ್ರತಿಯೊಬ್ಬರಿಗೂ ಏನಾರು ಕೊಟ್ಟು ಕಳಿಸುತ್ತಾರೆ.

18 ಗಣಪತಿ ಹಬ್ಬಕ್ಕೆ ಬೇಕಾದಂತಹ ಎಳ್ಳು, ಸಂಕ್ರಾಂತಿ ಹಬ್ಬಕ್ಕೆ ಬೇಕಾದಂತಹ ಕೊಬ್ಬರಿ ಬೆಲ್ಲ, ನಾಗರಪಂಚಮಿಗೆ ಬೇಕಾದಂತಹ ತಂಬಿಟ್ಟನ್ನು ತಯಾರಿಸುತ್ತಾರೆ.

19 ಮನೆಯಲ್ಲಿ ಜನಿಸುವಂತಹ ಮಗುವಿನ ಆರೈಕೆ ಕಾಳಜಿ ಪೋಷಣೆ ಎಲ್ಲವನ್ನು ನೋಡಿಕೊಳ್ಳುತ್ತಾರೆ.

20 ಮೊಮ್ಮಕ್ಕಳುಗಳಿಗೆ ಆಟಿಕೆಯನ್ನು ತಯಾರಿಸಿಕೊಡುತ್ತಾರೆ.

21 ಮಕ್ಕಳು ಪೀಡಿಸಿದಾಗ ಕಥೆ ಹೇಳುತ್ತಾರೆ.

22 ಬೇಸಿಗೆ ಸಮಯದಲ್ಲಿ ಮೊಮ್ಮಕ್ಕಳೊಂದಿಗೆ ಪ್ರಾಂಗಣದಲ್ಲಿ ಮಲಗುತ್ತಾರೆ.

23 ತಮಗೆ ಆರೋಗ್ಯ ಸರಿ ಇಲ್ಲದೆ ಹೋದರೆ ಊಟ ತಿಂಡಿಗಳಲ್ಲಿಯೇ ಸರಿಪಡಿಸಿಕೊಳ್ಳುತ್ತಾರೆ.

ಹೀಗೆ ಮನೆಯ ಹಿರಿಯ ಅಜ್ಜಿಯಂದಿರು ತಮ್ಮ ಕೆಲಸವನ್ನು ತಾವೇ ಮಾಡಿಕೊಂಡು ಯಾರಿಗೂ ಹೊರೆಯಾಗದೆ ಮರೆಯಾಗುತ್ತಾರೆ. ಇದೆ ಅಲ್ಲವೆ ಸ್ವಾವಲಂಬಿ ಜೀವನ ಎಂದರೆ.

ನಮ್ಮಲ್ಲಿ ಪೋಷಕರು ಕಾರಣಾಂತರಗಳಿಂದ ನಗರಕ್ಕೆ ವಲಸೆ ಬಂದರೂ ಕೂಡ ಅಜ್ಜಿ-ತಾತನವರೊಂದಿಗೆ ಬೆಳೆಸಿದ್ದಾರೆ ಹಾಗೂ ಅವರು ನಮ್ಮನ್ನು ಪ್ರೀತಿಯಿಂದ ಸಾಕಿ ಸಲಹಿದ್ದಾರೆ, ಆದರೆ ಇಂದು ನಗರದಲ್ಲಿ ದಿನೇದಿನೇ ಚಿತ್ರಣ ಬದಲಾಗುತ್ತಲಿದೆ, ಹಿರಿಯರೆಲ್ಲರೂ ಇಂದು old age home ಹಾಗೂ ಮಕ್ಕಳಿಗೆಲ್ಲರಿಗೂ Mobile  ನಾಜಮಾನವಾಗಿಬಿಟ್ಟಿದೆ, ಎಂದು ಮೊಮ್ಮಕ್ಕಳ ಪ್ರೀತಿ ಹಿರಿಯರಿಗೆ ಹಾಗೂ ಹಿರಿಯರು ಪ್ರೀತಿಯ ಮೊಮ್ಮಕ್ಕಳಿಗೆ ದೊರಕುವುದಿಲ್ಲವೋ ಅಂದು ಜನರು ಮಾನಸಿಕ ಕಾಯಿಲೆಗೆ ಬಲಿಯಾಗುತ್ತಾರೆ, ಇಂತಹ ಅನೇಕ ಪ್ರೀತಿಗಳಿಂದ ಮುಕ್ತವಾಗಿರುವಂತಹ ಇಂದಿನ ಪೀಳಿಗೆ ಭವಿಷ್ಯದ ಅರಿವಿಲ್ಲದೆ, ಮುಂದೊಂದು ದಿನದ ರಾಷ್ಟ್ರ ನಿರ್ಮಾಣಕ್ಕೆ ಭದ್ರ ಬುನಾದಿಯನ್ನು ಹಾಕಲು ಸಜ್ಜಾಗುತ್ತಲಿದ್ದಾರೆ, ಆ ಭವಿಷ್ಯದ ರಾಷ್ಟ್ರ ನಿರ್ಮಾಣದ ದಿನಗಳಿಗೆ ಇಂದಿನಿಂದಲೇ ದಿನಗಣನೆ ಪ್ರಾರಂಭವಾಗಿದೆ.

ಅಜ್ಜಿ-ತಾತ ಸಂಬಂಧಿಕರ ಪ್ರೀತಿ ಎಂಬುವುದು ಒಂದು ರೀತಿಯ ಪರಿಸರದ ವ್ಯವಸ್ಥೆ ಇದ್ದ ಹಾಗೆ, ಇದನ್ನ ಅಳಿಸಿ ನಾವೇನನ್ನು ಸಾಧನೆ ಮಾಡಲು ಹೊರಟಿದ್ದೇವೆ ಎನ್ನುವುದಂತೂ ತಿಳಿಯದು, ನೀವೊಮ್ಮೆ ಯೋಚಿಸಿ.


ಧನ್ಯವಾದಗಳು.

ಎಸ್ ಪಿ ತೇಜರಾಜು.

ಸಾವಿರದಮರ ಪರಿಸರಾಸಕ್ತ ಯುವಜನತೆ.

                     












Saturday, May 22, 2021

ನಾ ಹೇಗೆ ಅರ್ಥ ಮಾಡಿಸಲಿ ಈ ವಿಷಯಗಳನ್ನ ? - 3


 ಬೇಸಿಗೆಯಲ್ಲಿ ನಿಸರ್ಗದ ಚಿತ್ತಾರ ಒಂದು ರೀತಿಯಾದರೆ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆಯೇ ಪ್ರತಿ ವೃಕ್ಷವು ಚೈತನ್ಯದಿಂದ ತುಂಬಿ ತುಳುಕುತ್ತಿರುತ್ತದೆ. ಇದೇ ಮಳೆಗಾಲದ ಸಂದರ್ಭ ಬೇಸಿಗೆಯಲ್ಲಿ ಉದುರಿದಂತಹ ಎಲ್ಲ ತರಗೆಲೆಗಳು ಕೊಳೆಯಲು ಅನುಕೂಲವಾದಂತಹ ವಾತಾವರಣವನ್ನು ಸೃಷ್ಟಿಸುತ್ತವೆ. ಇವುಗಳ ನಡುನಡುವೆಯೇ ತಿಂಗಳಾನುಗಟ್ಟಲೆ ನಿದ್ರಾವಸ್ಥೆಗೆ ಜಾರಿದ್ದ ಎರೆಹುಳುಗಳು, ಶಂಕ ಹುಳುಗಳು, ಕಪ್ಪೆ, ಚಿಟ್ಟೆ, ಗೆದ್ದಲು ಹುಳು, ಸಾವಿರಕಾಲಿನ ಹುಳು, Train ಹುಳು ಗೋಚರಿಸುತ್ತವೆ. ಇರುವೆಗಳು ಭೂಮಿಯಲ್ಲಿದ್ದ ತಮ್ಮ ಗೂಡುಗಳನ್ನು ಮರದ ಮೇಲೆ ಎಲೆಗಳಿಂದ ನಿರ್ಮಿಸಿಕೊಳ್ಳುವುದಲ್ಲದೆ, ಮಳೆಗಾಲಕ್ಕೆ ಬೇಕಾದಷ್ಟು ಆಹಾರವನ್ನು ಕಾಲಾಳು ಇರುವೆಗಳು ಸಂಗ್ರಹಿಸುತ್ತವೆ. ಜೇನುಹುಳುಗಳು ಸಹ ತನಗೆ  ಮಳೆಗಾಲಕ್ಕೆ ಆಗುವಷ್ಟು ಆಹಾರವನ್ನು ಸಂಗ್ರಹಿಸಿ ಕೊಂಡಿರುತ್ತದೆ. ಸೊಳ್ಳೆಗಳ ಬೆಳವಣಿಗೆ ಈ ಸಮಯಕ್ಕೆ ಗಣನೀಯವಾಗಿ ಹೆಚ್ಚಾಗಿ ಕಪ್ಪೆ ಬಾವಲಿಗೆ ಆಹಾರವನ್ನು ಒದಗಿಸುತ್ತವೆ.


ಹುಡುಗಾಟದ ಬುದ್ಧಿಯಲ್ಲಿ ಚಿಕ್ಕವನಿದ್ದಾಗ ನಾ ಏಕೆ ಮನೆಯ ಮುಂದೆ ಒಂದು ಬಾವಿಯನ್ನು ತೋಡಿ ಅದರಲ್ಲಿ  ಮೀನು ಆಮೆ ಸಾಕಬಾರದು ಎಂಬ ಕಲ್ಪನೆಯನ್ನು ಮಾಡಿದ್ದೆ ಇದರ ಸಲುವಾಗಿ ಹಾರೆ ಗುದ್ದಲಿ ಹಿಡಿದು ಬಾವಿ ತೋಡಲು ಮುಂದಾದಾಗ ಮನೆಯವರಿಂದ ತೀವ್ರ ಟೀಕೆಗೆ ಗುರಿಯಾದೆ, ಮನೆ ಮುಂದೆ ಹಾಗೆ ವಾಸ್ತು ಪ್ರಕಾರವಿಲ್ಲದೆ ಬಾಗಿ ತೋರಬಾರದು ಎಂದು ಬೈದಿದ್ದರು. ಆದರೂ ಛಲಬಿಡದೆ ಮತ್ತೊಮ್ಮೆ ಪ್ರಯತ್ನಿಸಿದ್ದೆ, ಹತ್ತರಿಂದ ಹದಿನೈದು ದಿನ ಎಡಬಿಡದೆ ಪ್ರತಿದಿನ ಎರಡು ಅಡಿಯಂತೆ 10 ಅಡಿಯವರೆಗೂ ತೋಡಿದ್ದೆ, ಅಷ್ಟರೊಳಗಾಗಿ ನಾನು ಅದರೊಳಗೆ ಮುಳುಗಿದ್ದ ಕಾರಣ, ಮಣ್ಣನ್ನು ಎತ್ತಿ ಹಾಕಲು ಯಾರ ಸಹಾಯವೂ ಇಲ್ಲದಿದ್ದುದು, ಕನಸಿನ ಕಾಮಗಾರಿ ಕನಸಾಗಿಯೇ ಉಳಿಯಿತು, ಇದಾದ ಸ್ವಲ್ಪ ದಿನದ ಬಳಿಕ ಮನೆಯವರು ನಾ ಕಷ್ಟಪಟ್ಟು ತೋಡಿದ್ದ ಈ ಗುಂಡಿಯನ್ನು ಗೊಬ್ಬರದ ಗುಂಡಿಯಾಗಿ ಪರಿವರ್ತಿಸಿದರು.


ಅಜ್ಜಿ ಮನೆಗೆ ಬಂದಾಗಲೆಲ್ಲ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆಯ Roundನಲ್ಲಿ ಎಲ್ಲಾ ಗಿಡಮರಬಳ್ಳಿಗಳು ಪಕ್ಷಿಗಳನ್ನು ಸೂಕ್ಷ್ಮವಾಗಿ ಗ್ರಹಿಸುತ್ತಾರೆ ಹಾಗೂ ಈ ಸಲ ಮನೆಗೆ ಯಾವ ಪಕ್ಷಿ ಹೊಸದಾಗಿ ಬಂದಿದೆ ಯಾವ ಪಕ್ಷಿಯ  ಮೊಟ್ಟೆ ಇಟ್ಟು ಮರಿಮಾಡಿ ಹಾರಿಹೋಯಿತು, ಯಾವ ಪಕ್ಷಿ ಹೊಸ ಗೂಡು ಕಟ್ಟಿದೆ, ಹೊಸ ಪಕ್ಷಿಯ ಶಬ್ದ ಎಲ್ಲಿಯಾದರೂ ಕೇಳಿಸುತ್ತಿದೆಯೇ, ಯಾವುದಾದರೂ ಮರದ ಬೆಳವಣಿಗೆ ಕುಂಠಿತವಾಗುತ್ತಿದೆಯಾ, ಅವುಗಳಿಗೆ ಯಾವುದಾದರೂ ಕೀಟಬಾಧೆ ಇದೆಯೇ, ಯಾವುದಾದರೂ ಬಳ್ಳಿ ಆಸರೆ ಗಿಡವನ್ನು ಬೇಡುತ್ತಿದೆಯೇ, ಯಾವುದಕ್ಕೆ ನೀರು ಹೆಚ್ಚಾಗಿದೆ ಇನ್ನು ಯಾವುದಕ್ಕೆ ಕಡಿಮೆಯಾಗಿದೆ, ಯಾವುದಕ್ಕೆ ಪೋಷಕಾಂಶ ಆವಶ್ಯಕತೆಯಿದೆ, ಇನ್ನಾವುದಕ್ಕೆ ಇಲ್ಲ ಹೀಗೆ ಹತ್ತಾರು ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಿ ನಮ್ಮೊಂದಿಗೆ ಚರ್ಚಿಸುತ್ತಾರೆ, ಊರಿನಲ್ಲಿದ್ದಾಗ ಹೆಂಚಿನ ಮನೆಯ ಸಂದುಗಳಲ್ಲೆಲ್ಲಾ ಗುಬ್ಬಿಗಳ ಗೂಡು ಕಟ್ಟಿರುತ್ತಿದ್ದರು ಹಾಗೂ ಹೆಂಚುಗಳ ಸಂಧಿಯಲ್ಲಿ ಆಗಾಗ ಹಾವುಗಳು ಸೇರಿಕೊಳ್ಳುತ್ತಿದ್ದವು ಎಂದು ನೆನಪಿಸಿಕೊಳ್ಳುತ್ತಿರುತ್ತಾರೆ.( ಅಜ್ಜಿಯ ಸೂಕ್ಷ್ಮ ಗ್ರಹಿಕೆಯ ಕುರಿತಾಗಿ ಬಹಳಷ್ಟು ವಿಷಯಗಳಿವೆ, ಮುಂದೆ ಬರುವ ಅಂಕಣಗಳಲ್ಲಿ ಸವಿಸ್ತಾರವಾಗಿ ತಿಳಿದುಕೊಳ್ಳೋಣ)


ಬೇಸಿಗೆ ಮಳೆಗಾಲ ಮುಗಿದು ಚಳಿಗಾಲ ಪಕ್ಷಿಗಳಿಗೆ ಪ್ರಶಾಂತವಾದ ವಾತಾವರಣವನ್ನು ಕಲ್ಪಿಸಿಕೊಡುತ್ತದೆ, ಇದೇ ಸಮಯದಲ್ಲಿ ಬಹಳಷ್ಟು ವಲಸೆ ಪಕ್ಷಿಗಳು ಕೂಡ ಕಾಣಸಿಗುತ್ತವೆ, ಆಹಾರದ ಲಭ್ಯತೆಗೆ ತಕ್ಕನಾಗಿ ಗೂಡು ಕಟ್ಟಿ ಮೊಟ್ಟೆಯಿಟ್ಟು ಮರಿಮಾಡುತ್ತವೆ, ದುರ್ದೈವದ ಸಂಗತಿಯೆಂದರೆ ಇದೇ ಸಂದರ್ಭದಲ್ಲಿ ಬರುವಂತಹ ದೀಪಾವಳಿ ಹಬ್ಬ ಇಂದು ಶಬ್ದ ಮಾಲಿನ್ಯದಿಂದ ಕೂಡಿದ್ದು ಬಹಳಷ್ಟು ಪಕ್ಷಿಗಳ ಜೀವಕ್ಕೆ ಕುತ್ತು ಬಂದೊದಗಿದೆ. ಮೊದಲೇ ತಿಳಿಸಿದಂತೆ ನಮ್ಮ ನಗರದ ಚಿತ್ರಣ ಈಗ ಸಂಪೂರ್ಣವಾಗಿ ಬದಲಾಗಿದೆ ತೋಟವಿದ್ದ ಜಗವೆಲ್ಲ ಸಂಪೂರ್ಣವಾಗಿ ನಗರವಾಗಿ ಬೆಳವಣಿಗೆ ಹೊಂದಿದೆ, ಅಲ್ಲಲ್ಲಿ ಅಳಿದುಳಿದಿರುವ ಪ್ರದೇಶಗಳಲ್ಲಿ ಒಂದಷ್ಟು ಗಿಡಮರಗಳು ಮಾತ್ರ ಕಾಣುತ್ತಿದೆ, ಪ್ರತಿದಿನವೂ ಕಾಣಸಿಗುತ್ತಿದ್ದ ಮೊಲ, ಹಾವು, ಮುಂಗುಸಿ, ನವಿಲುಗಳು  ಕಣ್ಮರೆಯಾಗಿದೆ, ಬಹಳಷ್ಟು ಸಂಖ್ಯೆಯಲ್ಲಿದ್ದ ಮಂಗಟ್ಟೆಗಳು( Gray hornbill ) ಇಂದು ಬೆರಳೆಣಿಕೆಗೆ ಬಂದು ತಮ್ಮ ಅವನತಿಯ ದಿನಗಳನ್ನು ಎಣಿಸುತ್ತಿದೆ, ಮನೆಯ ಸುತ್ತಲೂ ಹಾರಾಡುತ್ತಿದ್ದ ಗುಬ್ಬಿಗಳು ಕಣ್ಮರೆಯಾಗುತ್ತಿದೆ, ಈ ವಿಚಾರಗಳು ನಿಜವಾಗಿಯೂ ಪರಿಸರ ಪ್ರೇಮಿಗಳಿಗೆ ನಿರಾಸೆಯನ್ನುಂಟು ಮಾಡುತ್ತಿವೆ.


ಇವುಗಳನ್ನು ಉಳಿಸುವ ನಿಟ್ಟಿನಲ್ಲಿ ಮಾಡಿದಂತಹ ಒಂದು ಸಣ್ಣ ಪ್ರಯತ್ನ ಯಶಸ್ವಿಯಾಗಿದೆ, ಮೊದಲು ಪಕ್ಷಿಗಳಿಗಾಗಿ ಮನೆಯ ಮೇಲಿನ ತಾರಸಿಯಲ್ಲಿ ಒಂದಿಷ್ಟು ಅಕ್ಕಿ ಕಾಳನ್ನು ಚೆಲ್ಲಲಾಗುತ್ತಿತ್ತು ಇದರೊಂದಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಯಿತು, ಮೊದಮೊದಲು ಪಕ್ಷಿಗಳು ಬಾರದೆ ಹೋದರು ಕಾಲಕ್ರಮೇಣ ನಿಧಾನವಾಗಿ ಬರಲಾರಂಭಿಸಿದವು, ಕಣ್ಮರೆಯಾಗಿದ್ದಂತಹ ಗುಬ್ಬಿ ಬಂದು ನೀರು ಕುಡಿದಾಗ ನಮಗೆ ದಾಹ ನಿವಾರಣೆಯಾಯಿತು ಎಂದೆನಿಸಿತು, ಪಾರಿವಾಳ, ಕಾಗೆ, ಗಿಳಿ, ಬುಲ್ ಬುಲ್, ಪಾರಿವಾಳ, ಮೈನಾ, ಕೋಗಿಲೆ, ಹದ್ದು, ಕಾಲಕ್ರಮೇಣ ನಿಧಾನವಾಗಿ ಇವುಗಳು ಕೂಡ ನೀರು ಕುಡಿಯಲು ಧಾವಿಸಿ ಬರಲಾರಂಭಿಸಿದವು, ಇದರೊಂದಿಗೆ ಪಕ್ಷಿಗಳು ನಿಧಾನವಾಗಿ ಮನೆಯಲ್ಲಿರುವ ಗಿಡ ಮರಗಳ ಮೇಲೆ ಗೂಡು ಕಟ್ಟಲು ಪ್ರಾರಂಭಿಸಿದವು, 2 ಸಂಖ್ಯೆಯಲ್ಲಿದಂತಹ ಗುಬ್ಬಿ ಇಂದು ಅವುಗಳ ಸಂಖ್ಯೆ ಹತ್ತಕ್ಕೆ ಏರಿದೆ, ಮೂಲೆಯಲ್ಲಿ ಅಡಗಿ ಕುಳಿತಿದ್ದಂತಹ ಗಿಳಿಗಳು ಬರಲಾರಂಭಿಸಿವೆ, ಅಪರೂಪದಲ್ಲಿ ಅಪರೂಪ ವಿರಳದಲ್ಲಿ ವಿರಳವಾಗಿ ಮಂಗಟ್ಟೆಗಳು ನೀರು ಕುಡಿಯಲು ಬಂದಾಗ ಸಿಗುವಂತಹ ಆನಂದಕ್ಕೆ ಬೆಲೆಕಟ್ಟಲಾಗದಷ್ಟಗುತ್ತದೆ. ಆದರೆ ನಗರದ ಬೆಳವಣಿಗೆಯಿಂದ ಪಕ್ಷಿಗಳ ಮೂಲ ನೆಲೆಗೆ ದಕ್ಕೆ ಆಗುತ್ತಿರುವುದು ನಿಜಕ್ಕೂ ಶೋಚನೀಯ ಸಂಗತಿ. ಇದರೊಂದಿಗೆ ಮನೆಯ ಮುಂದಿಟ್ಟಿರುವ ನೀರಿನ ಮಡಿಕೆಯಲ್ಲಿ ದಿನ ಪ್ರತಿ ರಸ್ತೆಯಲ್ಲಿ ಓಡಾಡುವ ನಾಯಿ, ಬೆಕ್ಕು, ದನ, ಕರು ಒಂದು ಸ್ವಲ್ಪ ನೀರು ಕುಡಿದ ಮನೆಯ ಮುಂದೆ ಇರುವ ಮರಗಳ ನೆರಳಿನಲ್ಲಿ ಸ್ವಲ್ಪಕಾಲ ಕಳೆದು ಹೊರಡುತ್ತವೆ.



ಈ ಸುಂದರ ಸೃಷ್ಟಿಯಲ್ಲಿ ಒಂದಾದ ಪ್ರಾಣಿ ಪಕ್ಷಿಗಳು ನಮ್ಮಿಂದ ಹೆಚ್ಚೇನು ಬಯಸಲಾರರು, ಸ್ವಲ್ಪವೇ ಸ್ವಲ್ಪ ಪ್ರೀತಿ ಕಾಳಜಿ ತೋರಿಸಿಬಿಟ್ಟರೆ ಅವುಗಳು ನಮ್ಮಿಂದ ದೂರವಾಗಲು ಬಯಸುವುದೇ ಇಲ್ಲ, ಮನೆಗೆ ಬರುವಂತಹ ಬಹಳಷ್ಟು ಸ್ನೇಹಿತರು ನೆಂಟರು ಎಲ್ಲರೂ ಮನೆ ಹೊರಗೆ ಹೆಚ್ಚು ಕಾಲ ಕಳೆಯಲು ಇಷ್ಟಪಡುತ್ತಾರೆ, ನಿಜವಾಗಿಯೂ  ಈ ಮರ-ಗಿಡ ಬಳ್ಳಿಗಳು ಬೆಳವಣಿಗೆ ನಮ್ಮನ್ನು ಮೂಕರನ್ನಾಗಿಸುತ್ತವೇ, ಇನ್ನು ರಸ್ತೆಯ ಅಂಚಿನಲ್ಲಿರುವ ಮೂರ್ನಾಲ್ಕು ಮರಗಳು ಸದಾ ನೆರಳು ಕೊಡುವುದರಿಂದ ದಾರಿಹೋಕರು, ವೃದ್ಧರು, ತರಕಾರಿ ವ್ಯಾಪಾರಿಗಳು, ಒಂದೆರಡು ನಿಮಿಷ ನಿಂತು ಸಮಾಧಾನತಂದುಕೊಳ್ಳುತ್ತಾರೆ, ಮಕ್ಕಳು ಇದರಡಿಯಲ್ಲಿ ಆಟವಾಡಲು ಬಯಸಿದರೆ ಇನ್ನೂ ಕೆಲವರು ನೆರಳಿನಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿಕೊಳ್ಳುತ್ತಾರೆ, ಇನ್ನು ಕೆಲ ಸಂದರ್ಭಗಳಲ್ಲಿ ಮಹಿಳೆಯರು ಮರಗಳ ಅಡಿಯಲ್ಲಿ ನಿಂತು ಯೋಗಕ್ಷೇಮ ವಿಚಾರಿಸಿಕೊಳ್ಳುವ ಸ್ಥಳಗಳು ಆಗುತ್ತವೆ. ನಮ್ಮಿಂದ ಏನನ್ನು ಬಯಸದ ವೃಕ್ಷಗಳು ಸದಾ ಪರೋಪಕಾರಿಯಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತವೆ.





ಇಷ್ಟೆಲ್ಲಾ ವಿಷಯಗಳನ್ನು ಕೇಳಿ ತಿಳಿದುಕೊಂಡು ಕೆಲವರು ಮನೆಯ ಜಗಲಿ ಕಟ್ಟೆಯ ಮೇಲೆ ಕುಳಿತು ಮರಗಿಡಬಳ್ಳಿಗಳುನ್ನು ಗಮನಿಸಿ ಮಾತನಾಡಲು ಪ್ರಾರಂಭಿಸಿ ವಿಳ್ಯ, ತೆಂಗು, ಅಡಕೆ, ಮಾವು, ಸೀಬೆ, ಹೀಗೆ ಹತ್ತಾರು ಪವಿತ್ರ ಗಿಡಗಳು ನಿಮ್ಮ ಮನೆಯಲ್ಲಿ ಬೆಳೆಯುತ್ತಿವೆ ನೀವೇ ನಿಜಕ್ಕೂ ಪುಣ್ಯವಂತರು ಎಂದು ಹೇಳುವವರಿದ್ದಾರೆ, ಇನ್ನು ಕೆಲವರು ಇವುಗಳನ್ನೆಲ್ಲವನ್ನೂ ತೆರವುಗೊಳಿಸಿ ಮನೆಯಾದರೂ ಕಟ್ಟಿ ಬಾಡಿಗೆ ಬರುತ್ತದೆ ಎಂದು ಉಪದೇಶ ನೀಡಿದವರು ಇದ್ದಾರೆ, ಇವರುಗಳಿಗೆ ನಾ ಹೇಗೆ ಮೇಲೆ ತಿಳಿಸಿದ ಅಷ್ಟು ವಿಷಯಗಳನ್ನು ಅರ್ಥಮಾಡಿಸಲಿ, ತಿಳಿಸಿದರು ಇವರು ಅರ್ಥ ಮಾಡಿಕೊಳ್ಳುವ ಪರಿ ಆದರೂ ಎಂತಹದ್ದು? ನಿಜವಾಗಿಯೂ ತಿಳಿಯದು.


ಪ್ರತಿ ಮರ, ಗಿಡ, ಬಳ್ಳಿ ,ಒಂದು ಹುಲ್ಲು ಕಡ್ಡಿಯೂ ಕೂಡ ಚಿಗುರೊಡೆದು ಹೂಬಿಟ್ಟು ನಿಂತಾಗ ಅದರಿಂದ ನಮಗೆ ದೊರಕುವ ಆನಂದ, ಒಂದು ಬಳ್ಳಿಯ ಇನ್ನೊಂದು ಮರದ ನೆರವಿನಿಂದ ಮತ್ತಷ್ಟು ಎತ್ತರಕ್ಕೆ ಬೆಳೆದಾಗ ನಾವೇ ಇನ್ನಷ್ಟು ಎತ್ತರಕ್ಕೆ ಬೆಳೆದೋ ಎನ್ನಿಸುವ ಸಮಾಧಾನ, ಒಂದು ಹೊಸ ಪಕ್ಷಿಯ ಕೂಗಿದಾಗ ಸಿಗುವ ಆನಂದ, ಮೊಟ್ಟೆ ಇಟ್ಟು ಮರಿ ಮಾಡಿ ಮರಿಗಳನ್ನು ತನ್ನೊಂದಿಗೆ ಆಗಸದಲ್ಲಿ ಹಾರಾಡಿಸುವಾಗ ನಾವೇ ಬಾನಿನಲ್ಲಿ  ಹಾರಾಡುತ್ತಿದ್ದೇವೆ ಎಂದು ಭಾಸವಾಗುವ ಕಲ್ಪನೆ, ಒಂದೇ ಒಂದು ಪುಟ್ಟ ಜೇನು, ಇರುವೆ, ಅಳಿಲಿನಿಂದ ಸಿಗುವ ಆನಂದ ಮತ್ತಾವ ಹೋಲಿಕೆಗೂ ನಿಲುಕತಕ್ಕದ್ದು.


ಕೊನೆಯದಾಗಿ ಈ ಮೇಲೆ ತಿಳಿಸಿದ ವಿಷಯಗಳನ್ನು ನಾ ಹೇಗೆ ಇತರರಿಗೆ ಅರ್ಥಮಾಡಿಸಲಿ ?


ಕೆಲವೊಮ್ಮೆ ಮನೆಯಲ್ಲಿ ಮರಗಳು ಉದುರಿಸಿದಂತಹ ಎಲೆಗಳು ಬಹಳಷ್ಟು ಹೆಚ್ಚಾಗಿ ಕಸ ಗುಡಿಸುವುದು ಕಷ್ಟವೆನಿಸಿದಾಗ, ಇನ್ನು ಕೆಲವೊಮ್ಮೆ ಹೆಗ್ಗಣಗಳ ಕಾಟ ಹೆಚ್ಚಾದಾಗ, ಅಕ್ಕ ನಮ್ಮ ಮೇಲೆ ಎರಗಿದ್ದಿದೆ ಇವುಗಳ ನಡುವೆ ಎಷ್ಟೇ ಕಷ್ಟವಾದರೂ ಪಕ್ಷಿಗಳನ್ನು ನೋಡುತ್ತಾ ಸಮಾಧಾನ ತಂದುಕೊಳ್ಳುತ್ತಾರೆ. ಅದಕ್ಕಾಗಿಯೇ ಈ ಅಂಕಣವನ್ನು ಅಕ್ಕನವರಿಗೆ (ತಾಯಿ) ಅವರಿಗೆ ಸಮರ್ಪಿಸುತ್ತಿದ್ದೇನೆ.

ಧನ್ಯವಾದಗಳು.

ಎಸ್ ಪಿ ತೇಜರಾಜು.

ಸಾವಿರದ ಮರ ಪರಿಸರಾಸಕ್ತ ಯುವಜನತೆ.


Saturday, May 15, 2021

ನಾ ಹೇಗೆ ಅರ್ಥ ಮಾಡಿಸಲಿ ಈ ವಿಷಯಗಳನ್ನ ? - 2

                   


 ಪ್ರತಿದಿನ ಸೂರ್ಯೋದಯವಾಗುವ ಮುನ್ನವೇ ಕೆಲ ಸ್ನೇಹಿತರು ಚಿಲಿಪಿಲಿಗುಟ್ಟುತ್ತಲಿರುತ್ತಾರೆ, ಹಿಂದಿನ ದಿನ ಸೂರ್ಯಸ್ತವಾಗುವ ಕೆಲಹೊತ್ತು ಇರುವಾಗಲೇ ಕೊನೆಯ Roundನಲ್ಲಿ ಒಂದಿಷ್ಟು ಊಟ ಇಲ್ಲವಾದರೆ ಒಂದೆರಡು ಗುಟುಕು ನೀರು ಕುಡಿದು ಪುರ್ರೆಂದು ಹಾರಿ ಬಂದು ಗೂಡು ಸೇರಿಕೊಳ್ಳುತ್ತವೆ, ಪ್ರತಿ ಪಕ್ಷಿಗಳು ಮತ್ತೊಂದು ಪಕ್ಷಿಗಳಿಗಿಂತ ವಿಭಿನ್ನವಾಗಿರುವುದರಿಂದ ಕೆಲವು ಪಕ್ಷಿಗಳು ಒತ್ತೊತ್ತಾಗಿ ಬಾಗುವ ಕೊಂಬೆಯ ಮೇಲೆ ಕಣ್ಣು ಮುಚ್ಚಿ ತಪಸ್ಸು ಮಾಡುತ್ತಾ ಕುಳಿತಿದ್ದು, ಚಳಿ ಇನ್ನಷ್ಟು ಹೆಚ್ಚಾದಾಗ ಇನ್ನೂ ಅಂಟಿಕೊಂಡು ಕುಳಿತುಕೊಳ್ಳುತ್ತವೆ, ಕೆಲವು ಪಕ್ಷಿಗಳು ತಾವೇ ಹೆಣೆದ ಗುಂಡಾಕಾರದ ಅಥವಾ ತಟ್ಟೆಯಾಕಾರದ ಗೂಡಿನಲ್ಲಿ ಕುಳಿತುಕೊಳ್ಳುತ್ತವೆ ಇನ್ನು ಕೆಲವು ಮರದ ಪೊಟರೆಗಳಲ್ಲಿ, ಕೆಲವು ಮರಕುಟಿಕ ಕುಟ್ಟಿ ಗೂಡು ಮಾಡಿ ಖಾಲಿ ಇರುವ ಮರಗಳಲ್ಲಿ, ಪೊದರುಗಳ ಮಧ್ಯ, ಇನ್ನು ಕೆಲವು ಮಣ್ಣಿನ ಗೂಡುಗಳಲ್ಲಿ ಅಥವಾ ಏಕಾಂಗಿಯಾಗಿಯೂ ತನಗೆ ಸುರಕ್ಷಿತ ವೆನಿಸುವ  ಜಾಗಗಳಲ್ಲಿ ರಾತ್ರಿಯನ್ನು ಕಳೆಯುತ್ತವೆ.


ಶತಮಾನಗಳುರುಳಿದರೂ, ತಲೆಮಾರುಗಳು ಕಳೆದರೂ ಕೂಡ ತಮ್ಮ ಜೀವನಶೈಲಿಯನ್ನು ಯಥಾವತ್ತಾಗಿ ಪಾಲಿಸಿಕೊಂಡು ತಮ್ಮ ಸ್ವಂತಿಕೆಯನ್ನು ಉಳಿಸಿಕೊಂಡು ಶಿಸ್ತಿನ ಸಿಪಾಯಿಗಳ ರೀತಿಯ ಜೀವನ ನಡೆಸುತ್ತಿವೆ. ಪಕ್ಷಿಗಳಿಗೆ ಒಮ್ಮೆ ಸೂರ್ಯ ಪಡುವಣದಲ್ಲಿ ಮುಳುಗಿದರೆ ಮುಗಿಯಿತು ಅದೇನೇ ಕೆಲಸ ಕಾರ್ಯಗಳಿದ್ದರೂ ಅವುಗಳು ಬಿಟ್ಟು ಗೂಡು ಸೇರಿಕೊಳ್ಳುತ್ತವೆ, ಇವುಗಳದೆಷ್ಟು ನಿಪುಣತನ ಹಾಗೂ ಜಾಗೃತ ಪ್ರಜ್ಞೆ ಎಂದರೆ ಅನಿವಾರ್ಯದ ಕೆಲಸವಾದರೂ ಕೂಡ ದಿನ ಮುಗಿಯುವುದರೊಳಗಾಗಿ ಕೆಲಸ ಮುಗಿಸಲು ಪ್ರಯತ್ನಪಡುತ್ತವೆ. ಹಗಲಿನಲ್ಲಿ ಎಚ್ಚರ ಇರುವ ಪಕ್ಷಿಗಳಿಗೆ ಹೊರತಾಗಿ ಇರುಳಿನಲ್ಲಿ ಎಚ್ಚರವಿರುವ ಪಕ್ಷಿಗಳ ದಿನಚರಿಯೇ ಬೇರೆಯದ್ದು, ಹಗಲಿನಲ್ಲಿ ಚಟುವಟಿಕೆಯಿಂದ ಕೂಡಿರುವ ಪಕ್ಷಿಗಳು ಬೆಳಿಗ್ಗೆ ಮುಂಚಿತವಾಗಿಯೇ ಎದ್ದು ತಮ್ಮ ಸುಶ್ರಾವ್ಯವನ್ನು  ಹೊರಡಿಸುತ್ತಾ ದೂರದಲ್ಲಿ ಕುಳಿತಿರುವ ತನ್ನ ಬಂಧುಗಳು ಅಥವಾ ಸ್ನೇಹಿತರಿಗೂ ಕರೆನೀಡಿ ಅಂದಿನ ದಿನಚರಿಯನ್ನು ಖಾತ್ರಿಪಡಿಸಿಕೊಳ್ಳುತ್ತಾವೆ.


ಪಕ್ಷಿಗಳು ಬಾನಿನಲ್ಲಿ ಎಷ್ಟು ಎತ್ತರಕ್ಕೆ ಹಾರಿದರು ಕೂಡ ತಾನು ಉಳಿಯುವ ಅಥವಾ ಮಲಗುವ ಜಾಗವನ್ನು ನಿರ್ದಿಷ್ಟಪಡಿಸಿ ಕೊಂಡಿರುತ್ತವೆ ಅದಕ್ಕೆ ಬಹಳಷ್ಟು ಕಾರಣಗಳು ಇವೆ ಬೇಟೆ ಪ್ರಾಣಿಗಳ ( ಹಾವು, ಬೆಕ್ಕು, ಅಂಟೆಗೊದ್ದ, ಹದ್ದು, ಬಾವಲಿ ಇತ್ಯಾದಿ) ಕಾಟ, ತಾನು ಗೂಡುಕಟ್ಟುವ ಮರಕ್ಕಿರುವ ಅಪಾಯ, ಜನರ ಓಡಾಟ, ಸಣ್ಣ ಟೊಂಗೆಗಳು ತಮ್ಮ ಭಾರವನ್ನು ತಡೆಯುವ ಸಾಮರ್ಥ್ಯ, ಎಲೆಯ ಮರೆ, ಮರಿ ಪಕ್ಷಿಗಳ ಹಾರೈಕೆ ಕಾಳಜಿ, ಆಹಾರದ ಲಭ್ಯತೆಯ ಹೀಗೆ ಹತ್ತಾರು ಬಗೆಯ ಮುಂಜಾಗ್ರತ ಕ್ರಮವನ್ನು ಅನುಸರಿಸುತ್ತವೆ, ದುರ್ದೈವದ ಸಂಗತಿಯೆಂದರೆ ಇಷ್ಟೆಲ್ಲಾ ಮುಂಜಾಗ್ರತಾ ಕ್ರಮವನ್ನು ಅನುಸರಿಸಿದ್ದರೂ ಕೂಡ ಕೆಲವೊಮ್ಮೆ ಬೇಡ ಪ್ರಾಣಿಗಳಿಗೆ ಬಲಿಯಾಗಿ ಬಿಡುತ್ತವೆ.


ಮನೆಯ ಮುಂದಿರುವ ಕೆಲವು ಮರಗಳಿಗೆ ಕಾಯಂ ಪಕ್ಷಿ ಸದಸ್ಯರಿದ್ದಾರೆ, ಕೆಲವು ತಾವು ಗೂಡು ಕಟ್ಟಿರುವ ಮರವನ್ನು ಹೊರತುಪಡಿಸಿ ಮತ್ತಾವುದೆ ಮರಕ್ಕೆ ಹೋಗುವುದಿಲ್ಲ, ಹೋದರು ಯಾವುದೇ ಇತರ ಪಕ್ಷಿಗಳಿಗೆ ತೊಂದರೆ ಕೊಡದೆ ಹಾರಿ ಬಂದು ಕುಳಿತುಬಿಡುತ್ತದೆ. ಬುಲ್ ಬುಲ್ ಪಕ್ಷಿ, ಕಾಡು ಪಾರಿವಾಳ,Sun bird, Indian silver bird, common tailor bird, ನಿಂಬೆ ಸೀಬೆ ಬೆಟ್ಟದನೆಲ್ಲಿ ಮರದಲ್ಲಿಯೇ ವಿಶೇಷವಾಗಿ ಗೂಡುಕಟ್ಟಲು ಪ್ರಯತ್ನಪಡುತ್ತವೆ. ಬುಲ್ಬುಲ್ ಪಕ್ಷಿಯಂತೂ ತಲೆಮಾರುಗಳಿಂದಲೂ ಕೂಡ ನಿಂಬೆ ಗಿಡವನ್ನು ಬಿಟ್ಟು ಬೇರೆ ಮರದ ಮೇಲೆ ಕಟ್ಟಿದಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿಯೆ, ಪಾರಿವಾಳವಂತು ತಾನು ಭಾರ ಇರುವ ಕಾರಣ ಸೀಬೆ ಗಿಡದ ಮೇಲೆ ತಟ್ಟೆಯಾಕಾರದ ಗೂಡು ಕಟ್ಟುತ್ತದೆ. ಇನ್ನುಳಿದ ಪುಟ್ಟ ಪಕ್ಷಿಗಳು ಬಾಗುವ ತುತ್ತತುದಿಯ ಗೊಂಬೆಯ ತುದಿಯಲ್ಲಿ ಪುಟ್ಟದಾದ ಗೂಡನ್ನು ಹೆಣೆದುಕೊಳ್ಳುತ್ತದೆ, ಕೆಲವು ಜಾತಿಯ ಪಕ್ಷಿಗಳಲ್ಲಿ ಗಂಡು ಮಾತ್ರ ಗೂಡು ಹೆಣೆದರೆ  ಇನ್ನು ಕೆಲವುಗಳಲ್ಲಿ ಗಂಡು-ಹೆಣ್ಣು ಎರಡು ಸೇರಿ ಗೂಡುಗಳನ್ನು ನಿರ್ಮಿಸಿಕೊಳ್ಳುತ್ತವೆ, ಹೆಣ್ಣು ಗೂಡಿನಲ್ಲಿ ಕುಳಿತು ಗೂಡು ಹೆಣೆದರೆ ಇದಕ್ಕೆ ಬೇಕಾದಂತಹ ಕಡ್ಡಿ, ಹುಲ್ಲು, ಹತ್ತಿಯನ್ನು ದೂರದಿಂದ ಗಂಡು ಹಕ್ಕಿ ತಂದುಕೊಡುತ್ತದೆ. ಈ ಎಲ್ಲಾ ಪಕ್ಷಿಗಳ ಆದ್ಯತೆ ಗೂಡುಗಳನ್ನು ಸುರಕ್ಷಿತ ಹಾಗೂ ಶುಚಿತ್ವವನ್ನು ಕಾಪಾಡಿಕೊಳ್ಳುವುದಾಗಿರುತ್ತದೆ, ಗೂಡು ಕಟ್ಟಿ ಮೊಟ್ಟೆ ಇಡುವ ತನಕ ಸದಾ ಸುರಕ್ಷತೆಯ ಕಡೆಗೆ ಗಮನ ಹರಿಸುತ್ತಲೆ ಇರುತ್ತವೆ ಮೊಟ್ಟೆ ಇಟ್ಟ ಬಳಿಕ ಮೊಟ್ಟೆಗಳಿಗೆ ಕಾವು ಕೊಡುವುದು, ಬಿಸಿಲಿನಿಂದ ರಕ್ಷಣೆ, ಮಳೆಯಿಂದ ನೆನೆಯದ ರೀತಿ ಸುರಕ್ಷತೆ, ಚಳಿ ಹೆಚ್ಚಾದಾಗ ಬೆಚ್ಚಗಿರಿಸಲು ಹತ್ತಿಯ ಲಭ್ಯತೆ, ಎಲ್ಲವನ್ನೂ ನೋಡಿಕೊಳ್ಳುತ್ತಲೇ ಇರುತ್ತದೆ ಮೊಟ್ಟೆ ಒಡೆದು ಮರಿಗಳು ಹೊರಗೆ ಬಂದಾಗ ಅವುಗಳಿಗೆ ಬೇಕಾದಂತಹ ಆಹಾರ, ಭಾಷೆ, ಹಾರುವ ಕ್ರಮ ಎಲ್ಲವನ್ನೂ ಒಂದೊಂದಾಗಿ ಹೇಳಿಕೊಡಲು ಪ್ರಾರಂಭಿಸುತ್ತದೆ. ಹಾರುವ ಪಾಠವನ್ನು ಹೇಳಿಕೊಡುವಾಗಲಂತೋ ಪೋಷಕರು ಮೈಯೆಲ್ಲ ಕಣ್ಣು ಮಾಡಿಕೊಂಡಿರುತ್ತವೆ.


ಪ್ರತಿ ಪಕ್ಷಿಯು ತನ್ನದೇ ಆದಂತಹ ಆಹಾರಕ್ರಮವನ್ನು ಅನುಸರಿಸಿಕೊಂಡು ಬಂದಿದೆ, ಹಾಗೂ ಇವುಗಳ ಆಹಾರಕ್ರಮವನ್ನು ಆಧರಿಸಿ ಅವುಗಳ ದೇಹ ರಚನೆಯು ಮಾರ್ಪಾಡಾಗಿದೆ,Sun bird ನಂತಹ ಪುಟ್ಟ ಪಕ್ಷಿಗಳು ಹೂವಿನ ಮಕರಂದವನ್ನು ಹೀರಲು ನಳಿಕೆಯಕಾರದ ಕೊಕ್ಕನ್ನು ಹೊಂದಿದ್ದರೆ, ಪಾರಿವಾಳ ಗುಬ್ಬಿಗಳು ದವಸ ಧಾನ್ಯವನ್ನು ತಿನ್ನುತ್ತವೆ, ಇನ್ನು ಈ ಗಿಳಿಗಳು ಸೀಬೆಹಣ್ಣಿಗೆ ಮುತ್ತಿಗೆ ಇಟ್ಟರೆ, ಬುಲ್ಬುಲ್ ಪಕ್ಷಿಯಂತೂ ಸದಾ ಸೀತಾಫಲ ಹಣ್ಣಿನ ಸೀಸನ್ ಗಾಗಿ ಕಾಯುತ್ತಿರುತ್ತದೆ, ಕೆಲವು ಬಾರಿ ಈ ಪಕ್ಷಿಯ ಚುರುಕು ಮೆಣಸಿನಕಾಯಿ ಕೆಂಪಾದಾಗ ಕಾದುಕುಳಿತು ತಿಂದಿದ್ದ ನಿದರ್ಶನಗಳಿವೆ, ನಮ್ಮ Common tailor bird  ಅಂತೂ ಎಲೆ ಮರಗಳಲ್ಲಿ ಅಡಗಿ ಕುಳಿತಿರುವ ಸಣ್ಣಪುಟ್ಟ ಹುಳ ಹುಪ್ಪಟೆಗಳನ್ನು ತಿನ್ನಲು ಹಾತೊರೆಯುತ್ತಿರುತ್ತದೆ. King fisher bird ಕೂಡ ಹುಳ ಹುಪ್ಪಟೆಗಳನ್ನು ತಿನ್ನಲು ಆಸೆ ಪಡುತ್ತದೆ, ಇನ್ನು ಕೆರೆಯಲ್ಲಿ ವಾಸಿಸುವ ಪಕ್ಷಿಗಳ ಆಹಾರ ಕ್ರಮವಂತೂ ಬಹಳ ವಿಭಿನ್ನವಾಗಿರುವಂತಹದ್ದು ಇವುಗಳಲ್ಲಿ ಕೆಲವು ಮರಿ ಮೀನುಗಳನ್ನು, ಕಪ್ಪೆಗಳನ್ನು, ನೀರಿನ ಮೇಲೆ ತೇಲುವ ಕೆಲವು ಹುಳು ಹುಪ್ಪಟೆಗಳನ್ನು ತಿಂದು ಬದುಕುತ್ತವೆ. ಕೆಲವು ಪಕ್ಷಿಗಳ ಹಿಕ್ಕೆಯಂತು ಬಹಳ ಕಠಿಣ ಅದರಲ್ಲಿಯೂ King fisher bird ಹಿಕ್ಕೆ ಏನಾದರೂ ವಾಹನಗಳ ಮೇಲೆ ಬಿದ್ದರೆ ನೀರು ಹಾಕಿ ತೊಳೆದರೂ ಹೋಗುವುದಿಲ್ಲ ಅಷ್ಟು ಗಾಢವಾಗಿರುತ್ತದೆ.


ಒಂದೊಮ್ಮೆ ಬುಲ್ಬುಲ್ ಹಕ್ಕಿಯಂತೂ ನಿಂಬೆ ಗಿಡದಲ್ಲಿ ಗೂಡುಕಟ್ಟಿ ಮೊಟ್ಟೆ ಇಟ್ಟು ಮರಿಗಳು ಹೊರ ಬರುತ್ತಿದ್ದಂತೆ ಆರೈಕೆ ಪ್ರಾರಂಭಿಸಿ 15 ದಿನ ಆಗುವುದರೊಳಗೆ ಮಾಂಸದ ಮುದ್ದೆಯಾಗಿದ್ದ ಮೂರು ಮರಿ ಪಕ್ಷಿಗಳ ಮೈಮೇಲೆ ನಿಧಾನವಾಗಿ ಪುಕ್ಕ ಬರಲು ಪ್ರಾರಂಭವಾಯಿತು, ಇನ್ನೇನು ಒಂದು ವಾರದೊಳಗಾಗಿ ಪಕ್ಷಿಗಳು ರೆಕ್ಕೆ ಬಿಚ್ಚಿ ಹಾರಲು ಸಿದ್ಧವಾಗುತ್ತದೆ ಎಂಬ ಸಂತಸದ ದಿನಗಳಿಗಾಗಿ ದಿನಗಣನೆ ಆರಂಭವಾಗುತ್ತಿದ್ದಂತೆಯೇ, ಎಲ್ಲಿಯೋ ಒಂದು ಮರೆಯಲ್ಲಿ ಹೊಂಚುಹಾಕುತ್ತಿದ್ದ ಬೆಕ್ಕು, ತಾಯಿ ಪಕ್ಷಿ ಹಾರಿ ಹೋಗುವುದನ್ನೇ ಕಾದು ಕುಳಿತು, ಗಿಡದಿಂದ ಗೂಡನ್ನು ಕಿತ್ತು 3 ಮರಿ ಪಕ್ಷಿಗಳನ್ನು ತನ್ನ ಉಗುರುಗಳಿಂದ ಹೊಡೆದು, ರಕ್ತ ಜಿಮ್ಮಿ ಹೊರಬರುತ್ತಿದ್ದಂತೆಯೇ, ಬಾಯಲ್ಲಿ ಹಿಡಿದು, ಕೆಲವೇ ದಿನಗಳ ಹಿಂದೆ ತಾನು ಜನ್ಮ ನೀಡಿದ ಮೂರು ಪುಟ್ಟ ಮರಿ ಬೆಕ್ಕುಗಳಿಗೆ ಈ ಮೂರು ಪಕ್ಷಿಗಳನ್ನು  ಉಣಬಿಡಿಸುವುದನ್ನು ಕಂಡು ಅದನ್ನು ಕೊಂದುಬಿಡಬೇಕು ಎನ್ನುವಷ್ಟು ಕೋಪ ತಾರಕಕ್ಕೇರಿತ್ತು. ಆದರೆ ಅಷ್ಟು ಹೊತ್ತಿಗಾಗಲೇ ಸನ್ನಿವೇಶ ಕೈ ಮೀರಿ ಹೋಗಿತ್ತು, ಮರಿ ಪಕ್ಷಿಗಳನ್ನು ಅರಸಿ ಬಂದ ತಾಯಿ ಬುಲ್ಬುಲ್ ಹಕ್ಕಿ ದಿಗಿಲುಗೊಂಡು ತನ್ನ ಮರಿ ಪಕ್ಷಿಗಳಿಗಾಗಿಯೇ ಆತರಿಸಿ ರಾತ್ರಿಯಾಗುವವರೆಗೂ ಕೂಗಿ, ಹುಡುಕಿ ಆಯಾಸ ಗೊಂಡಿತ್ತು, ಈ ಘಟನೆ ನಡೆದಾಗ ನಾವು ಚಿಕ್ಕವರಾಗಿದ್ದರಿಂದ ಒಂದೆರಡು ದಿನ ಕಣ್ಣೀರು ಸುರಿಸಿ, ಊಟವನ್ನು ಸರಿಯಾಗಿ ಸೇವಿಸದೆ ಮಲಗಿದ್ದಾಗಿತ್ತು, ನಿಜಕ್ಕೂ ನಮ್ಮ ಜೀವನದಲ್ಲಿ ಈ ಘಟನೆ ಮನಕಲಕುವ ವಿಷಯವಾಗಿಯೇ ಉಳಿಯಿತು.


ಹೇಗೆ ಮನೆಯಲ್ಲಿ ನಾಯಿಗಳು ಇದ್ದರೆ ದಾರಿಹೋಕರು ಅಥವಾ ಯಾರಾದರೂ ಹೊಸಬರು ಬಂದರೆ ಬೊಗಳುತ್ತವೆಯೋ ಹಾಗೂ ನಮ್ಮ ಮಾತುಗಳನ್ನು ಅವುಗಳು ಹಾಗೂ ಅವುಗಳ ಮಾತುಗಳನ್ನು ನಾವು ಹೇಗೆ ಗ್ರಹಿಸಲು ಪ್ರಯತ್ನಪಡುತ್ತೇವೆ ಅದೇ ರೀತಿ ಪಕ್ಷಿಗಳಿಗೆ ನಾವು ಅವುಗಳ ಹತ್ತಿರವಾಗುತ್ತಾಹೋದಂತೆ ಅವುಗಳು ನಮಗೆ ನಿಧಾನವಾಗಿ ಹೊಸ ಹೊಸ ಅನುಭವಗಳನ್ನು ನೀಡುತ್ತಾ ಹೋಗುತ್ತವೆ, ಪ್ರಥಮವಾಗಿ ಸದಾ ಪಕ್ಷಿಗಳು ನಮ್ಮ ಚಟುವಟಿಕೆಗಳನ್ನು ಗ್ರಹಿಸುತ್ತಿರುತ್ತದೆ, ಒಮ್ಮೆ ನಮ್ಮ ಉಪಟಳ ಅವುಗಳಿಗೆ ಇಲ್ಲ ಎಂದು ಗ್ರಹಿಸಿದ ಬಳಿಕ ಅವುಗಳ ಚಲನವಲನಗಳನ್ನು ತಮ್ಮಿಷ್ಟದಂತೆ ಪಾಲಿಸುತ್ತವೆ. ಇಷ್ಟು ದಿನ ನಮ್ಮ ಒಡನಾಟದಲ್ಲಿಯೇ ಇರುವ ಪಕ್ಷಿಗಳಿಗೆ ನಮ್ಮ ನೆರವು ಅವುಗಳಿಗೆ ಇದೆ ಎಂದು ತೋರುತ್ತದೆ, ಅವುಗಳ ಭಾಷೆಯ ಸಂಪೂರ್ಣವಾಗಿ ನಮಗೆ ಅರ್ಥವಾಗದೇ ಹೋದರೂ ಸಹ ಅಪಾಯ ಬಂದೊದಗಿದಾಗ ಅವುಗಳು ಕೂಗುವ ರೀತಿ ಬದಲಾಗಿರುತ್ತದೆ. ಈ ಸಂದರ್ಭದಲ್ಲಿ ನಾವು ಹೋಗಿ ನೋಡಿದರೆ ನಾವು ಮೊದಲೇ ಗ್ರಹಿಸಿರುವಂತ ಅವುಗಳಿಗೆ ಯಾವುದೋ ಮತ್ತೊಂದು ಪಕ್ಷಿಯಿಂದ ತೊಂದರೆಯಾಗುತ್ತಿರುತ್ತದೆ ಅಥವಾ ಇದರ ಸ್ಥಳವನ್ನು ಆಕ್ರಮಿಸಲು ಹೊಂಚುಹಾಕುತ್ತಿರುತ್ತದೆ ಅಥವಾ ಇದರ ಊಟವನ್ನು ಕಬಳಿಸಲು ಪ್ರಯತ್ನಪಡುತ್ತದೆ ಇನ್ನು ಕೆಲವು ಬಾರಿ ಅವುಗಳ ಮರಿಗಳನ್ನ ಎತ್ತುಕೊಂಡು ಹೋಗಲು ಹೊಂಚು ಹಾಕುತ್ತಿರುತ್ತದೆ. ಇಂತಹ ಸನ್ನಿವೇಶಗಳು ಬಂದಾಗ ನಮ್ಮನ್ನು ಸದಾ ಕೂಗಿ ಕರೆಯುತ್ತವೆ ಈ ಮೂಲಕ ಇವುಗಳ ಮಾತುಗಳನ್ನು ನಮಗೆ ಸದಾ ಅರ್ಥಮಾಡಿಸಲು ಏನೇನು ಹೊಸಹೊಸ ಪ್ರಯೋಗಗಳನ್ನು ಈ ಪಕ್ಷಿಗಳು ನಡೆಸುತ್ತಲೇ ಇರುತ್ತವೆ.


ಈ ಕಾಡು ಪಾರಿವಾಳಗಳು ನಾವು ತೊಂದರೆ ಕೊಡುವುದಿಲ್ಲ ಎಂದು ಗ್ರಹಿಸಿ ನಮ್ಮ ಹತ್ತಿರ ಬರುವ ಪರಿ,Sun bird  ನಂತಹ ಪುಟ್ಟ ಪಕ್ಷಿಗಳು ವಾಹನದ Mirror ನಲ್ಲಿ ತನ್ನ ಪ್ರತಿಬಿಂಬವನ್ನು ಕಂಡು ಒಂದೆರಡು ಬಾರಿ ಅದನ್ನು ಕುಟ್ಟಿ mirror ನ ಹಿಂದೆ ಹಾರಿಬಂದು ನೋಡಿದರೆ ಯಾವುದೇ ಪಕ್ಷಿ  ಇರದಿರುವುದನ್ನು ಕಂಡು ಪುರ್ರೆಂದು ಹಾರಿ ಹೋಗುವ ಬಗೆ, ಕಾಗೆಯಂತೂ ತನಗೆ ಸಿಕ್ಕಿರುವ ಚೂರು ಆಹಾರವನ್ನು ತನ್ನ ಸ್ನೇಹಿತರಿಗೆ ಕೊಡಬೇಕೆಂದು ಕೂಗಿ ಕರೆಯುವ ಪರಿ, ತನಗೆಲ್ಲಿ ದವಸ ಕಡಿಮೆಯಾಗುತ್ತದೆಂದು ಹೊಸ ಗಿಳಿಯನ್ನು ಕಂಡಾಗ ಕಿರುಚುವ ಪರಿ, ಕೋಳಿ ತನ್ನ ಕಾಲುಗಳಿಂದ ಸ್ವಲ್ಪ ಮಣ್ಣನ್ನು ತೆಗೆದ ತಕ್ಷಣ ಮರಿಗಳು ಬಂದು ಏನಾದರೂ ಇದೆಯೇ ಎಂದು ಹುಡುಕುವ ಪರಿ, ಅರಳಿದ ಹೂಗಳನ್ನು ಹರಸಿ ಬರುವ ದುಂಬಿಗಳ ನಾದ, ಬುಲ್ಬುಲ್ ಪಕ್ಷಿ ಸೀತಾಫಲ ಮಾವು ಮಾಗಿ ಹಣ್ಣಾಗುವ ಸುವಾಸನೆಯನ್ನು ಗ್ರಹಿಸುವ ಪರಿ, ಪ್ರಥಮ ಮಳೆ ಬಿದ್ದಾಗ ಭೂಮಿಯಿಂದ ಹೊರಬರುವ ಮಣ್ಣಿನ ಸುವಾಸನೆ, ಹಾಗೂ ಪ್ರಥಮ ಮಳೆಗೆ ಭೂಮಿಯಿಂದ ಹೊರನಡೆದ ಚಿಟ್ಟೆಗಳನ್ನು ಹುಡುಕಿ ಕಾದು ತಿನ್ನುವ ಹಕ್ಕಿಗಳ ಪರಿ, ಇನ್ನು ರಾತ್ರಿ ಪಾಳಿಯ ಹಕ್ಕಿಗಳಾದ ಬಾವಲಿಯ ದಿನಚರಿಯ ನಿಜಕ್ಕೂ ವಿಸ್ಮಯಕಾರಿ ಸಂಗತಿಯೇ ಸರಿ.

ಮುಂದುವರಿಯುವುದು,

ಧನ್ಯವಾದಗಳು.


ಎಸ್ ಪಿ ತೇಜರಾಜು.

ಸಾವಿರದ ಮರ ಪರಿಸರಾಸಕ್ತ ಯುವಜನತೆ.







Saturday, May 8, 2021

ನಾ ಹೇಗೆ ಅರ್ಥ ಮಾಡಿಸಲಿ ಈ ವಿಷಯಗಳನ್ನ ? - 1

        


 ದಿವಂಗತ ತಾತನವರು( ತಾಯಿಯವರ ತಂದೆ)  ಸಹ್ಯಾದ್ರಿಯ ಮಡಿಲಲ್ಲಿ Forest guard ಆಗಿದ್ದುಕೊಂಡು ಕಾಡು ಮೇಡುಗಳನ್ನು ನೋಡಿಕೊಳ್ಳುತ್ತಾ ಜೀವನ ನಡೆಸಿದವರು, ಅಜ್ಜಿಯವರು ಕೂಡ ತಾತನವರು ಇರುವವರೆಗೂ ಸಹ್ಯಾದ್ರಿಯ ಬೆಟ್ಟ-ಗುಡ್ಡಗಳ ಮೇಲೆ ಇದ್ದಂತಹ ಒಂದೊಂದೇ ಮನೆಗಳಲ್ಲಿ ಜೀವನ ನಡೆಸಿದವರು, ಅಕ್ಕ ( ತಾಯಿ) ಯವರೊಂದಿಗೆ ಅವರ ಅಕ್ಕ ತಂಗಿ,ಅಣ್ಣ, ತಮ್ಮಂದಿರೆಲ್ಲರೂ ಇದೇ ಸಹ್ಯಾದ್ರಿಯ ಮಡಿಲಲ್ಲಿ ಜನಿಸಿ, ಶಾಲೆಯ ಮೆಟ್ಟಿಲೇರಿ, ಸತತ ಸುರಿಯುವ ಮಳೆಯಲ್ಲಿ ಮಿಂದು, ಸುತ್ತಲು ಬೆಳೆಯುವ ಹಣ್ಣು ಹಂಪಲುಗಳನ್ನು ತಿಂದು ಕೊಂಡು, ಮನೆಯ ಹಿಂದೆ ಹಿತ್ತಿಲಲ್ಲಿ ನಾಲ್ಕಾರು ಬಗೆಯ ಹಣ್ಣು ಹೂಬಿಡುವ ಸಸಿಗಳನ್ನು ನೆಟ್ಟು ಬೆಳೆಸಿದವರು.

ಇನ್ನು ತಾತ ಅಜ್ಜಿ (ತಂದೆಯವರ ಕಡೆಯಿಂದ)  ಕರ್ನಾಟಕದ ಊಟಿ ಎಂದೇ ಕರೆಯುವ ಹಾಸನ ಜಿಲ್ಲೆಯ ಶಾಂತಿಗ್ರಾಮದವರು, ಕಷ್ಟದಲ್ಲಿ ಇದ್ದು ಮಗ್ಗದ ಕೆಲಸ, ರಸ್ತೆ ಕೆಲಸ, ಮಲೆನಾಡ ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಾ ಸ್ವಲ್ಪ ಜಮೀನನ್ನು ಮಾಡಿಕೊಂಡು ಜೀವನ ಕಟ್ಟಿಕೊಂಡವರು, ಮನೆಯ ಮಕ್ಕಳೆಲ್ಲರೂ ಜಮೀನು ಕೆಲಸವನ್ನು ನೋಡಿಕೊಳ್ಳುತ್ತಾ, ಸಂತೆ ಜಾತ್ರೆಗಳಲ್ಲಿ ಅಂಗಡಿಯನ್ನು ತೆರೆದು, ಹಲಸಿನ ಹಣ್ಣನ್ನು ಮಾರಿ, ಸೈಕಲ್ ಶಾಪ್ ನೊಂದಿಗೆ ದಿನಸಿ ಅಂಗಡಿಯನ್ನು ತೆರೆದರು, ಮನೆಯಲ್ಲಿ ತಮ್ಮೊಂದಿಗೆ ಹಸು, ಕರು, ನಾಯಿ, ಬೆಕ್ಕು, ಪಾರಿವಾಳ ಹೀಗೆ ಹತ್ತಾರು ಪಕ್ಷಿಗಳನ್ನು ಸಾಕಿದವರು, ಹೀಗೊಮ್ಮೆ ಜಮೀನಿನಲ್ಲಿ ಮರಕುಟುಕ ಪಕ್ಷಿಯನ್ನು ಹಿಡಿದು, ಮನೆಗೆ ತಂದು ಮರದ ಪೆಟ್ಟಿಗೆಯಲ್ಲಿ ಕೂಡಿಹಾಕಿ, ರಾತ್ರಿ ಇರುವುದನ್ನು ಖಾತ್ರಿಪಡಿಸಿಕೊಂಡು ಬೆಳಗ್ಗೆ ನೋಡುವಷ್ಟರಲ್ಲಿ ಮರದ ಪೆಟ್ಟಿಗೆಯನ್ನು ಕುಟ್ಟಿ ಹಾರಿಹೋಗಿತ್ತು, ಹೀಗೆ ಇವರೆಲ್ಲರೂ ಈ ರೀತಿಯಾದಂತಹ ಹತ್ತಾರು ಹುಡುಗಾಟದ ಘಟನೆಗಳಿಗೆ ಭಾಗಿಯಾದವರು, ಮುಂದೆ ಬೆಳೆಯುತ್ತಾ ಉದ್ಯೋಗವನ್ನರಸಿ ನಗರ ಸೇರಿದವರು.

ಹುಟ್ಟಿದ/ಬೆಳೆದ ಗುಣ ಎಲ್ಲಿ ತಾನೇ ಬಿಡಲು ಸದ್ಯ, ಊರು ಬಿಟ್ಟು ನಗರ ಸೇರಿ ಬೆವರು ಸುರಿಸಿ ದುಡಿದು ಮನೆ ಕಟ್ಟಿದರು, ಮನೆಯ ಸುತ್ತಲಿದ್ದ ವಿಶಾಲ ಜಾಗದಲ್ಲಿ ನಾಲ್ಕಾರು ಬಗೆಯ ಗಿಡಗಳನ್ನು ಬೆಳೆಸಿದರು. ಈ ಮನೆಯ ಗೃಹಪ್ರವೇಶದ ವೇಳೆಯ ನಾನು ನನ್ನ ತಂಗಿ ಇಬ್ಬರೂ ಚಿಕ್ಕವರು, ಹೆಚ್ಚೇನು ಚಿಕ್ಕವರಲ್ಲ ನಾನು 7ನೇ ತರಗತಿ ಆಕೆ 5ನೇ ತರಗತಿ, ಶಾಲೆಯು ಮನೆಯಿಂದ ಎರಡು ಕಿಲೋಮೀಟರ್ ದೂರವಿದ್ದುದರಿಂದ ಪ್ರತಿದಿನವೂ ನಡೆದುಕೊಂಡು ಹೋಗಿ ಬರುತ್ತಿದ್ದೆವು,ಮಳೆಗಾಲದಲ್ಲಂತೂ ಮಳೆಯಲ್ಲಿ ನೆನೆದು ಬರುವುದೇ ಒಂದು ಮಜಾ.

ನಾವಿದ್ದ ಮನೆಯ ಸುತ್ತಮುತ್ತಲೂ ಅಷ್ಟೇನೂ ಜನದಟ್ಟನೆ, ಮನೆಗಳು ಇರದೆ ಸುತ್ತಲು ತೋಟದಿಂದ ಆವೃತವಾಗಿತ್ತು, ನಾವು ಕೂಡ ಮನೆಯ ಮುಂದಿದ್ದ ಜಾಗದಲ್ಲಿ ಪ್ರತಿಬಾರಿಯೂ ಹೊಸ ಹೊಸ ಪ್ರಯೋಗಗಳನ್ನು ನಡೆಸುತ್ತಲೇ ಇದ್ದೆವು, ಇಲ್ಲಿಯ ಪ್ರದೇಶ ಸಂಪೂರ್ಣವಾಗಿ ಕೆಂಪು ಮಣ್ಣಿನಿಂದ ಆವೃತವಾಗಿದ್ದರೂ ಸಹ, ಒಂದಾನೊಂದು ಕಾಲಕ್ಕೆ ಸುಣ್ಣ ಸುಡುತ್ತಿದ್ದ ಜಾಗವಾಗಿ, ಮುಂದೆ ಕಲ್ಲಿದ್ದಲು ಉಗಿಬಂಡಿಯ ಬೂದಿಯನ್ನು ಸುರಿದ ಕಾರಣ ಬೂದಿ ಗುಂಡಿಯಾಗಿ ಮಾರ್ಪಾಡಾಗಿತ್ತು, ಈಗಲೂ ಇಲ್ಲಿಯ ಪ್ರದೇಶಕ್ಕೆ ಬೂದಿ ಗುಂಡಿ ಎಂದು ಕರೆಯುವವರು ಬಹಳಷ್ಟು ಮಂದಿ ಇದ್ದಾರೆ.

ಗೃಹಪ್ರವೇಶ ಆದ ಬಳಿಕ ಪ್ರಥಮವಾಗಿ ಸುತ್ತಲು ಇದ್ದ ಜಾಗಕ್ಕೆ ಹುರುಳಿ,ಹೆಸರು,ಬೀನಿಸ್ ಬೀಜವನ್ನು ಚೆಲ್ಲಿದ ಕಾರಣ ಒಂದರ ಪಕ್ಕ ಮತ್ತೊಂದರಂತೆ ಹೇರಳವಾಗಿ ಹಬ್ಬಿ, ಪಕ್ಕದಲ್ಲಿದ್ದ ಜಾಗಕೆಲ್ಲ ನುಗ್ಗಿ ಬೆಳೆದು ಭೂಮಿಯೇ ಕಾಣದ ರೀತಿ ಬೆಳೆದು ನಿಂತಿತು, ಒಂದೆರಡು ಮಳೆಯಾಗಿ ಹೂ ಹಿಡಿದು ಕಾಯಿಯಾಗುವ ವೇಳೆಗೆ ಹುಳ ಕೀಟಗಳು ಇಡೀ ಬಳ್ಳಿಯನ್ನು ತಿಂದು ಮುಗಿಸಿದವು, ಕೊನೆಗೆ ಇವುಗಳ ಉಪಟಳ ತಾಳಲಾರದೆ ಎಲ್ಲಾ ಬಳ್ಳಿಯನ್ನು ಕಿತ್ತು ಸುಡಲಾಯಿತು.

ಈ ಬಾರಿ ಅಕ್ಕ ಹೇಳಿದ ಹಾಗೆ ಭೂಮಿಯನ್ನು ಚೆನ್ನಾಗಿ ಒಣಗಲು ಬಿಟ್ಟು ಸುತ್ತಲೂ ಪರಂಗಿ ಬೀಜಗಳನ್ನು ಚೆಲ್ಲಲಾಯಿತು, ಈ ಬೀಜಗಳು ಮೊಳಕೆಯೊಡೆದು ಒಂದರ ಪಕ್ಕ ಮತ್ತೊಂದರಂತೆ ಒತ್ತೊತ್ತಾಗಿ ಬೆಳೆಯಲಾರಂಭಿಸಿದರು ಬೀಜ ಬಿತ್ತು ಆರು ತಿಂಗಳಾದ ಬಳಿಕ ಫಲಕೊಡಲು ಪ್ರಾರಂಭವಾಗಿದ್ದು, ಪ್ರತಿದಿನವೂ ಹೊಟ್ಟೆತುಂಬುವಷ್ಟು ದೊಡ್ಡ ಗಾತ್ರದ ಹಣ್ಣನ್ನು ನೀಡಲಾರಂಭಿಸಿತು, ಪ್ರತಿದಿನ ಮೂರರಿಂದ ನಾಲ್ಕು ಹಣ್ಣುಗಳನ್ನು ಮರದಿಂದ ಕೇಳಿಸಲೇ ಇದ್ದವು, ಇದರ ಹೊರತಾಗಿಯೂ ಬಹಳಷ್ಟು ಹಣ್ಣನ್ನು ವ್ಯಾಪಾರಕ್ಕೂ, ಸ್ನೇಹಿತರು, ಸಂಬಂಧಿಕರಿಗೂ ಕೊಟ್ಟು ಉಳಿದ,ಅದೆಷ್ಟೋ ಹಣ್ಣುಗಳನ್ನು ನಾನಾ ವಿಧವಾದ ಪಕ್ಷಿಗಳು ಅಳಿಲು ಪ್ರತಿದಿನ ಬಂದು ತಿನ್ನುತ್ತಿದ್ದವು, ದುರ್ದೈವದ ಸಂಗತಿಯೆಂದರೆ ಎರಡು ವರ್ಷ ಒಂದೇ ಸಮನೆ ಹೇರಳವಾಗಿ ಹಣ್ಣು ಕೊಡುತ್ತಿದ್ದ ಮರಗಳಿಗೆ ಇದ್ದಕ್ಕಿದ್ದ ಹಾಗೆ ಎಲ್ಲಿಂದಲೋ ಒಂದೇಸಮನೆ ಕೀಟಗಳು ಮರವನ್ನು ಮುತ್ತಿ ಇಡೀ ಮರವನ್ನೇ ಹಾಳು ಮಾಡುತ್ತಿದ್ದವು, ಇವುಗಳ ಉಪಟಳ ಕೈಮೀರಿದಾಗ ದೊಡ್ಡದೊಂದು ಗುಂಡಿ ತೋಡಿ ಎಲ್ಲವನ್ನೂ ಕಡಿದು ಅದರೊಳಗೆ ತುಂಬಬೇಕಾಯಿತು, ಆಗ ಮೊದಲಿನಂತೆ ಜಾಗ ಸಂಪೂರ್ಣವಾಗಿ ಬೋಳಾಯಿತು.

ಈ ಬಾರಿಯ ಸಂಪೂರ್ಣವಾಗಿ ಹೂಗಿಡಗಳನ್ನು ನೆಡೋಣ ಎಂದು ತೀರ್ಮಾನಿಸಿ ಎರಡು-ಮೂರು ಬಗೆಯ ಗುಲಾಬಿ, ಚಂಡು ಹೂವು, ದಾಸವಾಳ, ತುಳಸಿ, ಹರಳು, ಒಂದು ಸೀಬೆ ಗಿಡ ಒಂದು ನಿಂಬೆ ಗಿಡವನ್ನು ಒಂದೆರಡು ಕುಂಬಳ ಬಳ್ಳಿಯ ಬೀಜಗಳನ್ನು ನೆಟ್ಟೆವು, ಇವುಗಳೆಲ್ಲವೂ ಒಂದು ವರ್ಷ ಆಗುವುದರೊಳಗೆ ಎತ್ತರಕ್ಕೆ ಬೆಳೆಯಲು ಪ್ರಾರಂಭಿಸಿದವು, ಈ ಹೂವಿನ ಗಿಡಗಳು ಹೇರಳವಾಗಿ ಹೂ ಬಿಡುತ್ತಿದ್ದ ಕರಣ ನಮ್ಮ ಮನೆಯ ಪೂಜೆಗೂ ಆಗಿ ಉಳಿದ ಅದೆಷ್ಟೋ ಹೂವುಗಳನ್ನು ದಾರಿಹೋಕರು ಕೀಳುತ್ತಿದ್ದರು, ಹೇರಳವಾಗಿ ಬಿಡುತ್ತಿದ್ದ ಹೂವುಗಳನ್ನು ಅಕ್ಕ ಕಿತ್ತು ಪ್ರತಿದಿನವೂ ಕಟ್ಟಿ ಹೂವಿನ ಹಾರವನ್ನು ಮಾಡಿ ಹತ್ತಿರದಲ್ಲಿದ್ದ ದೇವಸ್ಥಾನಕ್ಕೂ ಕೊಡಲಾಗುತ್ತಿತ್ತು, ಈ ಬೃಹದಾಕಾರವಾಗಿ ಬೆಳೆದ ಕುಂಬಳ ಬಳ್ಳಿಯನ್ನು ಮನೆಯ ತಾರಸಿಯ ಮೇಲೆ ಹಬ್ಬಿಸಿದ ಕಾರಣ ಆಶ್ಚರ್ಯವಾಗುವ ರೀತಿಯಲ್ಲಿ ದೊಡ್ಡ ದೊಡ್ಡ ಗಾತ್ರದ ಸಿಹಿಗುಂಬಳ ಕಾಯಿಯನ್ನು ಬಿಡಲಾರಂಭಿಸಿತು,  ಮನೆಯ  ಪ್ರತೀತಿಯಂತೆ ಬೆಳೆದ ಮೊದಲ ಫಲ ಅಥವಾ ಪುಷ್ಪವನ್ನು ದೇವಸ್ಥಾನಕ್ಕೆ ಕೊಡುವಂತೆ ಈ ಬಾರಿಯ ಕುಂಬಳಕಾಯಿಯನ್ನು ಕೊಡಲಿಕ್ಕೆ ಹೋದಾಗ ಇಷ್ಟು ದೊಡ್ಡ ಗಾತ್ರದ ಕುಂಬಳಕಾಯಿಯನ್ನು ನೋಡಿ ಅರ್ಚಕರೇ ಆಶ್ಚರ್ಯಕ್ಕೊಳಗಾಗಿದ್ದರು. ಕೆಲವು ಕುಂಬಳಕಾಯಂತೂ 3ರಿಂದ 5 ಕೆಜಿ ಇರುವ ತನಕ ದೊಡ್ಡದಿರುತ್ತಿದ್ದವು, ಇವುಗಳನ್ನು ಬಹಳಷ್ಟು ಜನರಿಗೂ ಕೂಡ ಕೊಡಲಾಗುತ್ತಿತ್ತು. ಸ್ವಲ್ಪ ತಿಂಗಳಾದ ಬಳಿಕ ಈ ಗಿಡಗಳಿಗೂ ಹುಳ ಹಿಡಿದ ಕಾರಣ ಎಲ್ಲವನ್ನು ಕಿತ್ತುಹಾಕಲಾಯಿತು.

ಹಿಂದಿನ ಬಹಳಷ್ಟು ನಿದರ್ಶನಗಳನ್ನು ಕಂಡ ನಮಗೆ ನಾವು ಮಾಡುತ್ತಿರುವ ಕೃಷಿ ನಿಜವಾಗಿಯೂ ಸರಿಯೇ ಎಂಬ ಹುಳು ತಲೆ ತಿನ್ನಲು ಪ್ರಾರಂಭಿಸಿದಾಗ ಸತ್ಯಾನ್ವೇಷಣೆಗೆ ಮುಂದಾದೆ ಆಗ ನಮ್ಮ ಕರ್ನಾಟಕ ಕೃಷಿ ಪಂಡಿತ ನಾಡೋಜ ನಾರಾಯಣ ರೆಡ್ಡಿ ಅವರ ಆದರ್ಶಗಳಲ್ಲಿ ಬೆಳಕು ಚೆಲ್ಲುತ್ತಾ ಹೋದಂತೆ ಸತ್ಯ ಅರಿವಾಗತೊಡಗಿತು, ಪ್ರಾರಂಭದಲ್ಲಿ ಪೋಷಕರು ಒಪ್ಪದೇ ಹೋದರು ಕೃಷಿಯನ್ನು ಕೃಷಿ ಪಂಚಾಂಗದಂತೆ ಮಾಡುತ್ತಿದ್ದುದರಿಂದ ಪ್ರತಿನಿತ್ಯ ಸತ್ಯ ಅರಿವಾಗುತ್ತಿದೆ.

ಈಗ ಮನೆಮುಂದಿನ ಚಿತ್ರಣ ಮೊದಲಿಗಿಂತಲೂ ಬಹಳಷ್ಟು ವಿಭಿನ್ನವಾಗಿದೆ, ಹಲವಾರು ಬಗೆಯ ಹೂವು ಹಣ್ಣಿನ ಗಿಡಗಳು ಹೆಮ್ಮರವಾಗಿ ಮಾರ್ಪಾಡಾಗಿವೆ, ಸೀಬೆ ಹಾಗೂ ನಿಂಬೆ ಹಳೆಯ ಮರಗಳಾದರೆ ಇವುಗಳೊಂದಿಗೆ ಸೀತಾಫಲ, ಬೆಟ್ಟದನೆಲ್ಲಿ, ಮಾವಿನಮರ, ಸಪೋಟ, ಹೊಂಗೆ, ಬೇವು, ಕರಿಬೇವು ಬಹಳ ಹೊತ್ತೊತ್ತಾಗಿ ಬೆಳೆಯಲಾರಂಭಿಸಿದೆ ಕೆಲವೊಮ್ಮೆ ಜಾಗದ ಕೊರತೆಯ ಕಾರಣದಿಂದಾಗಿ ಪ್ರತಿಯೊಂದು ಮರವು ನಾಮುಂದು ತಾಮುಂದು ಎಂದು ಆಗಸ ಮುಟ್ಟುವ ಭರದಲ್ಲಿ ಬೆಳೆಯಲಾರಂಭಿಸಿದೆ. ನೋಡುನೋಡುತ್ತಿದ್ದಂತೆಯೇ ನಾವು ನೆಟ್ಟ ಪುಟ್ಟ ಗಿಡ ಇಂದು ಹೆಮ್ಮರವಾಗಿ ಬೆಳೆಯುತ್ತಿರುವುದನ್ನು ಕಂಡರೆ ಮನಸ್ಸಿಗೆ ಏನೋ ಒಂದು ರೀತಿಯ ಆನಂದ ಎನಿಸುತ್ತದೆ.

ಅಕ್ಕಪಕ್ಕದ ಮನೆಯವರು ಕೆಲವು ಬಾರಿ ಮನೆಗೆ ಬಂದು ಉಪದೇಶಗಳನ್ನು ನೀಡುತ್ತಾರೆ ಮನೆಯಲ್ಲಿ ಆ ಮರ ಇರಬಾರದು ಈ ಮರಗಳು ಇರಬಾರದು ಮನೆಯಲ್ಲಿ  ಅಶಾಂತಿ ನೆಲೆಸುತ್ತದೆ, ಹಾವುಗಳು ಸೇರಿಕೊಂಡುಬಿಡುತ್ತವೆ, ಗಿಡಗಳ ಬೇರುಗಳು ಮನೆಯನ್ನೇ ಬುಡಮೇಲು ಮಾಡುತ್ತವೆ, ಈ ಗಿಡಗಳಿದ್ದು ಏನು ಪ್ರಯೋಜನ ಎಲ್ಲವನ್ನು ಕಡಿದು ಮುಂದೆ ಇರುವ ಜಾಗದಲ್ಲಿ ಮನೆಯನ್ನಾದರೂ ಕಟ್ಟಿದರೆ ಬಾಡಿಗೆ ಆದರೂ ಬರುತ್ತದೆ ಎಂದು ಹೇಳುತ್ತಾರೆ, ಆದರೆ ಇವರೆಲ್ಲರೂ ಯಾವುದಾದರೂ ಹಬ್ಬಗಳು ಬಂದರೆ ಸಾಕು ಆ ಗಿಡದ ಎಲೆಗಳು ಬೇಕು ಈ ಗಿಡದ ಚಿಗರೆ ಬೇಕು ಎಂದು ಕೇಳುತ್ತಾರೆ, ಕೆಲವು ಬಾರಿ ನಾವು ಕೇಳುವ ತನಕ ಸುಮ್ಮನಿದ್ದ ತಿರುಗಿ ಮಾತನಾಡಿ ಕಳುಹಿಸಿದ ಅದೆಷ್ಟೋ ನಿದರ್ಶನಗಳಿವೆ.

ಹೊರಗಿನವರದು ಏನೇ ವಿಚಾರವಾಗಲಿ ನನ್ನ ಹವ್ಯಾಸದಂತೆ ಸಮಯ ಮಾಡಿಕೊಂಡು Bike trip, Treking ಹೋಗಿ ಬರುವಾಗ ಅಲ್ಲಿಯ ನೆನಪಿಗಾಗಿ ಬಗೆಬಗೆಯ ಗಿಡವನ್ನು ತಂದು ಗಿಡಗಳನ್ನು ನೆಡಲಾಗುತ್ತಿದೆ, ಇದರಿಂದಾಗಿ ಮನೆಯಲ್ಲಿ ಮಲೆನಾಡ ಸಸಿಗಳಾದ ಅಡಕೆ, ಕಾಫಿ, ಮೈಸೂರು ವೀಳ್ಯದೆಲೆ, ರಾಮಫಲದ ಜೊತೆಗೆ ತಂದೆಯವರು 2016ರಲ್ಲಿ 18 ಬಾರಿ ಶಬರಿಮಲೆ ಯಾತ್ರೆಯನ್ನು ನೆರವೇರಿಸಿದ ನೆನಪಿಗಾಗಿ ಎರಡು ತೆಂಗಿನ ಗಿಡಗಳನ್ನು ನೆಡಲಾಯಿತು ಇವುಗಳು ಕೂಡ ಇನ್ನೇನು ಹೂವು ಹಿಡಿಯಲು ದಿನಗಣನೆ ಆರಂಭವಾಗಿದೆ.

ಇದೇ ಹೋದವರ್ಷ 2020 ಮೇ ತಿಂಗಳಲ್ಲಿ, ಲಾಕ್ಡೌನ್ ಆಗುವ ಒಂದು ವಾರ ಹಿಂದೆಯಷ್ಟೇ, ಆಗುಂಬೆಯ ಮಳೆಗಾಡಿನ ಬೆಟ್ಟ-ಗುಡ್ಡಗಳನ್ನು ಏರಿ ಇಳಿದು, ಅಲ್ಲಿಯ ಒಂದಿಷ್ಟು ಜೀವವೈವಿಧ್ಯದ ಬಗ್ಗೆ ಅರಿತುಕೊಂಡು ಹಿಂತಿರುಗಿ ಬರುವಾಗ ಫಾರೆಸ್ಟ್ ಡಿಪಾರ್ಟ್ಮೆಂಟ್ ನ ನರ್ಸರಿಯಿಂದ ಬಹಳಷ್ಟು ವೈವಿಧ್ಯಮಯವಾದಂತಹ ಕಾಡು ಸಸಿಗಳನ್ನು ತಂದು ನೆಡಲಾಯಿತು. ಮೊದಲೇ ಇರುವಷ್ಟು ಮರಗಳಿಗೆ ಇನ್ನಷ್ಟು ಮಗಳು ಸೇರಿಕೊಂಡು ಈಗ ಮನೆಯೇ ಗೋಚರಿಸದಷ್ಟು ಹಸಿರಿನಿಂದ ಆವೃತವಾಗಿದೆ.

ನಾ ಕಂಡ ವಿಸ್ಮಯ.

ಹೇಗೆ ನಮ್ಮ ಬೆಳವಣಿಗೆಗೆ ಆಹಾರ ಮುಖ್ಯವೋ ಅದೇ ರೀತಿಯ ಪ್ರತಿ ಸಸ್ಯದ ಬೆಳವಣಿಗೆಗೆ ನೀರಿನೊಂದಿಗೆ ಬಹಳಷ್ಟು ಪೋಷಕಾಂಶಗಳ ಅಗತ್ಯವಿರುತ್ತದೆ, ಇವುಗಳಿಗೆಲ್ಲಕ್ಕಿಂತಲೂ ಬಹುಮುಖ್ಯವಾಗಿ  ಮಣ್ಣು ಸದಾ ಜೀವಂತವಾಗಿರಬೇಕಾಗುತ್ತದೆ, ಇವುಗಳಲ್ಲಿ ಕೋಟ್ಯಾಂತರ ಸೂಕ್ಷ್ಮಜೀವಿಗಳು ವಾಸವಿದ್ದು( ಎರೆಹುಳು,ಗೆದ್ದಲುಹುಳು, ನಾಲ್ಕಾರು ಬಗೆಯ ಇರುವೆಗಳು, ಕಪ್ಪೆ, ಚಿಟ್ಟೆ, ಜೇನು, ಹುಳು-ಹುಪ್ಪಟೆಗಳು) ಮರದಿಂದ ಉದುರಿದ ತರಗೆಲೆಗಳನ್ನು ತಿಂದು, ಮಣ್ಣ ನೀರನ್ನು ಹಿಡಿದಿಟ್ಟುಕೊಳ್ಳುವ ಸ್ಪಂಜಿನ ರೀತಿ ಸತ್ವಭರಿತವನ್ನಾಗಿ ಮಾಡುತ್ತದೆ. ಇವುಗಳೊಂದಿಗೆ ಗಿಡಗಳು ಬೆಳೆಯುವ ಕ್ರಮ, ಬಿಸಿಲಿನ ಪ್ರಮಾಣ, ಅಂತರ, ಬೇರಿನ ಆಳ ಅಗಲ, ಬಳ್ಳಿಗಳನ್ನು ಮರಗಳಿಗೆ ಪೂರಕವಾಗಿ ಹಬ್ಬಿಸುವ ಕ್ರಮ, ಹೆಚ್ಚು ಬಿಸಿಲು ಕೇಳದ ಗಿಡಗಳು, ಹೆಚ್ಚು ನೀರನ್ನು ಹೀರುವ ಸಸಿಗಳು, ಕೀಟಗಳ ಕಾಟ, ಸಣ್ಣಪುಟ್ಟ ಗಿಡಮೂಲಿಕ ಸಸಿಗಳು, ಹೂ ಬಿಡುವ ಗಿಡಗಳು ಹೀಗೆ ಹತ್ತಾರು ಸಸಿಗಳು ಒಂದಕ್ಕೊಂದು ಅರ್ಥೈಸಿಕೊಂಡು ಪೂರಕವಾಗಿ ಬೆಳೆಯುವುದು ನಿಜಕ್ಕೂ ವಿಸ್ಮಯಕಾರಿ ಸಂಗತಿ ಅಲ್ಲದೆ ಮತ್ತೇನು?

ಸುಮಾರು ಹದಿನಾಲ್ಕು ಸಂವತ್ಸರಗಳನ್ನು ಪೂರೈಸಿದ ನಮ್ಮ ಮನೆ ಹತ್ತಾರು ವರ್ಷಗಳ ಸೀಬೆ ಸೀತಾಫಲ ನಿಂಬೆ ಗಿಡಗಳನ್ನು, ಏಳೆಂಟು ವರ್ಷಗಳ ಮಾವು ಕರಿಬೇವು ನೆಲ್ಲಿ ಸಪೋಟ ಬೇವು ಹೊಂಗೆ, ಐದಾರು ವರ್ಷಗಳ ತೆಂಗು, ಎರಡು ಮೂರು ವರ್ಷಗಳ ಅಡಿಕೆ ಕಾಫಿ ದಾಳಿಂಬೆ ಹಾಗೂ ನಾಲ್ಕಾರು ಜಾತಿಯ ಕಾಡು ಸಸಿಗಳನ್ನು ಪೋಷಿಸಿ ಬೆಳೆಸಿದೆ, ಇದರೊಂದಿಗೆ ನಮ್ಮನ್ನು ಕೂಡ ಅದರೊಂದಿಗೆ ಪೂರಕವಾಗಿ ಬೆಳೆಯುವಂತೆ ಅವಕಾಶವನ್ನು ಮಾಡಿಕೊಟ್ಟಿದೆ, ನಾವು ನೆಟ್ಟ ಪುಟ್ಟ ಸಸಿಗಳು ನಮ್ಮ ಎತ್ತರವನ್ನು ಮೀರಿ ಬೆಳೆದಾಗ ದೊರೆಯುವ ಆನಂದ ಎಲ್ಲಕ್ಕೂ ಮೀರಿದ್ದಾಗಿರುತ್ತವೆ.

ಈ ಪ್ರಕೃತಿಯ ವೈಭೋಗವೆ ವಿಶಿಷ್ಟವಾಗಿರುವಂತಹದ್ದು, ಪ್ರತಿ ಮಾಸವು ಎಲ್ಲಾ ಗಿಡದಲ್ಲಿಯೂ ಒಂದಲ್ಲ ಒಂದು ರೀತಿಯ ಹೊಸರೂಪವನ್ನು ತಾಳುತ್ತಲೇ ಇರುತ್ತದೆ, ಕೆಲವು ಬೇಸಿಗೆಯ ಬಿಸಿಲನ್ನು ಹೆಚ್ಚು ಹೀರಿಕೊಂಡು ಚಿಗುರಿದರೆ ಇನ್ನು ಕೆಲವು ಮಳೆಗಾಲ ಪ್ರಾರಂಭವಾಗುತ್ತಿದ್ದಂತೆಯೇ ಚಿಗುರಿ ನಿಲ್ಲುತ್ತದೆ, ನೋಡುನೋಡುತ್ತಿದ್ದಂತೆಯೇ ಹೂ ಹಿಡಿದು ಕಾಯಿಯಾಗಿ ನಾನಾಬಗೆಯ ಜೇನು, ಪಕ್ಷಿಗಳನ್ನು ಆಕರ್ಷಿಸಿ ಆಹಾರ ವಸತಿಯನ್ನು ಕಲ್ಪಿಸಿಕೊಡುತ್ತದೆ, ಇದೇ ಹಂತ ಮುಂದಿನ ನೂರಾರು ಘಟನಾವಳಿಗಳಿಗೆ ಪೂರಕವಾದ ವಾತಾವರಣನ್ನು ಕಲ್ಪಿಸಿಕೊಡುತ್ತದೆ, ಇಷ್ಟೆಲ್ಲಾ ವಿಷಯಗಳನ್ನು ನಾನು ಪ್ರಸ್ತಾಪ ಮಾಡಬೇಕಾದದ್ದು ಮುಂದಿನ ಅಂಕಣದ ನೆರವಿಗೋಸ್ಕರ, ಮುಂದಿನ ಅಂಕಣ ಬಹಳಷ್ಟು ನಿದರ್ಶನವಾಧಾರಿತವಾಗಿದ್ದು ಹೆಚ್ಚೇನು ಪೀಠಿಕೆ ಕೊಡದೆ ನೇರವಾಗಿ ವಿಷಯವನ್ನು ಪ್ರಸ್ತಾಪಿಸಲು ಬಯಸುತ್ತೇನೆ, ವಿಷಯಗಳನ್ನು ಬಹಳ ಸರಳ ಭಾಷೆಯಲ್ಲಿ  ಪ್ರಸ್ತಾಪಿಸಬೇಕಾಗಿರುವುದು ನನಗೆ ನಿಜಕ್ಕೂ ಸವಾಲಿನ ಕೆಲಸವಾಗಬಹುದು, ಎಲ್ಲವನ್ನು ಕಾದು ನೋಡೋಣ.

ಧನ್ಯವಾದಗಳು.

ಎಸ್ ಪಿ ತೇಜರಾಜು. 

ಸಾವಿರದಮರ ಪರಿಸರಾಸಕ್ತ ಯುವಜನತೆ.