Saturday, March 20, 2021

ಬೆಟ್ಟಕ್ಕೆ ಹೋಗ್ಬೇಕೆ ?

 

  
 ಎಸ್ ಪಿ ತೇಜರಾಜು.

 ಸಾಮಾನ್ಯವಾಗಿ ಎಲ್ಲರಿಗೂ ತಮ್ಮ ಊರಿನ  ಸುತ್ತಮುತ್ತಲಿರುವ ಬೆಟ್ಟಗುಡ್ಡಗಳೊಂದಿಗೆ ಒಂದು ರೀತಿಯ ಅಭಿನಾಭಾವ ಸಂಬಂಧ ಬೆಳೆದಿರುತ್ತದೆ, ಇದೇ ರೀತಿಯ ಮೈಸೂರಿನವರೆಗೂ ಕೂಡ ಚಾಮುಂಡಿಬೆಟ್ಟದೊಂದಿಗೆ ಅಭಿನಾಭಾವ ಸಂಬಂಧ ಬೆಳೆದಿದೆ, ಇದು ಎಷ್ಟರ ಮಟ್ಟಿಗೆ ಎಂದರೆ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರ ತನಕ ಯಾವುದೇ ವಿಚಾರವಾಗಲಿ ಅದು ಖುಷಿ ವಿಚಾರವೇ ಆಗಿರಲಿ ಬೇಸರದ ಸಂಗತಿಯೇ ಆಗಿರಲಿ, ಬೆಟ್ಟಕ್ಕೆ ಹೋಗಿ ಬಂದರೆ ಮನಸ್ಸಿಗೆ ಏನೋ ಒಂದು ರೀತಿಯ ಸಮಾಧಾನ ದೊರಕಿದಂತಾಗುತ್ತದೆ.


ನಾವು ಸ್ನೇಹಿತರೊಂದಿಗೆ ಬಾಲ್ಯದಲ್ಲಿ ಶನಿವಾರ ಮಧ್ಯಾಹ್ನದ ತರಗತಿಯನ್ನು ಮುಗಿಸಿಕೊಂಡು, ಮನೆಗೆ ಹೋಗುವ ನೆಪದಲ್ಲಿ ಸ್ನೇಹಿತರೊಂದಿಗೆ ಸೈಕಲ್ ಹೊಡೆದುಕೊಂಡು ಚಾಮುಂಡಿ ಬೆಟ್ಟವನ್ನು ನೋಡಿಕೊಂಡು ಮನೆಗೆ ಹಿಂತಿರುಗುವುದು ತಡವಾಗಿ, ಬೆಟ್ಟಕ್ಕೆ ಸ್ನೇಹಿತರೊಂದಿಗೆ ಹೋಗಿರುವ ಮಾಹಿತಿ ಯಾರಿಂದಲೂ ಮನೆಯವರು ತಿಳಿದು, ಮನೆ ಸೇರಿದ ಬಳಿಕ ಚೆನ್ನಾಗಿಯೇ ಒದೆ ತಿಂದದ್ದಿದೆ, ಒದೆ ಕೇವಲ ಬೆಟ್ಟಕ್ಕೆ ಹೋಗಿ ಬಂದಿದ್ದಕಲ್ಲದ ಮತ್ತೊಂದು ದಿನ ಕುಕ್ಕರಹಳ್ಳಿ ಕೆರೆಗೆ ಹೋಗಿ ಬಂದಿದ್ದಕ್ಕೆ ಒದೆ ತಿಂದದ್ದಿದೆ, ಒದೆ ತಿಂದಿದ್ದಕ್ಕೆ ಮೂಲ ಕಾರಣ ನಾವು ಸೈಕಲ್ ನಲ್ಲಿ ಹೋಗಿದ್ದಕ್ಕಲ್ಲದೆ ಬೇರೆಯದ್ದೇ ಕಾರಣವಿದೆ ಅದುವೇ:


1 ಚಾಮುಂಡಿಬೆಟ್ಟದಲ್ಲಿ ಆಗಗ ಚಿರತೆ ಕಾಣಿಸಿಕೊಳ್ಳು ಕೊಳ್ಳುತ್ತಿದುದ್ದು.

2 ಕುಕ್ಕರಹಳ್ಳಿ ಕೆರೆಯಲ್ಲಿ ಮೊಸಳೆ ಕಂಡುಬಂದಿದ್ದು.


ನಾವಂತೂ ಒದೆ ತಿಂದ ಬಳಿಕವೂ ಮನೆಯವರಿಗೆ ತಿಳಿಯದ ಹಾಗೆ ಸ್ನೇಹಿತರೊಂದಿಗೆ, ತಮ್ಮಂದಿರೊಂದಿಗೆ ಚಾಲೆಂಜ್ ನಲ್ಲಿ ಸೈಕಲನ್ನು ಎಲ್ಲಿಯೂ ನಿಲ್ಲಿಸದೆ ಬೆಟ್ಟದ ಮೇಲಿರುವ ದೇವಸ್ಥಾನದ ಗೋಪುರದ ಮುಂದೆಯೇ ಸೈಕಲ್ ನಿಲ್ಲಿಸಿದ ನಿದರ್ಶನಗಳಿವೆ. ಅದರಲ್ಲಿಯೂ ಮನೆಯವರು ಆಗೊಮ್ಮೆ ಈಗೊಮ್ಮೆ ಕೊಡುವ ಒಂದೊಂದು ರೂಪಾಯಿಯನ್ನು ಕೂಡಿಟ್ಟು, 5 ರೂಪಾಯಿಯನ್ನು ಜೇಬಿನಲ್ಲಿಟ್ಟುಕೊಂಡು ದೇವಸ್ಥಾನದ ಬಳಿಯಿರುವ ಚುರುಮರಿ ಅಂಗಡಿಯಲ್ಲಿ ಚುರುಮರಿ ತಿಂದದ್ದು ಈಗಲೂ ಬಾಯಿನೀರು ತರಿಸುತ್ತದೆ.


ಬೆಟ್ಟಕ್ಕೆ ಪ್ರವಾಸ ಕೇವಲ ಶಾಲೆದಿನಗಳಿಗೆ ಸೀಮಿತವಾಗಿರದೆ, ವಿದ್ಯಾರ್ಥಿ ಜೀವನದುದ್ದಕ್ಕೂ ಅನೇಕಬಾರಿ ಸ್ನೇಹಿತರೊಂದಿಗೆ ಮೆಟ್ಟಿಲು ಹತ್ತಿ ಬೆಟ್ಟವನ್ನು ವೀಕ್ಷಿಸಿದ್ದಿದೆ.


ಆಶಾಡ ಮಾಸದಲ್ಲಂತೂ (Mansoon period) ಬೆಟ್ಟ ಹಚ್ಚಹಸಿರಿನಿಂದ ಕುಡಿದ್ದು ಕಣ್ಣಿಗೆ ಆನಂದವನ್ನು ನೀಡುತ್ತದೆ, ಚಿಕ್ಕವಯಸ್ಸಿನಲ್ಲಿ ನೋಡಿರುವಂತೆ ಇದೆ ಆಷಾಡದ ಸಮಯದಲ್ಲಿ ಬೆಟ್ಟದ ಮೂರು ನಾಲ್ಕು ಕಡೆಗಳಲ್ಲಿ ಸಣ್ಣದಾಗಿ ಝರಿಗಳು ಬೆಟ್ಟದ ಮೇಲಿಂದ ಸಂದಿಗೊಂದಿಗಳಲ್ಲಿ ಹರಿದು ಕೆಳಗಿರುವ ಕೆರೆಯನ್ನು ಸೇರುತ್ತಿತ್ತು. ಒಂದಂತು ಬೆಟ್ಟದ ತುದಿಯಿಂದ ದೇವಸ್ಥಾನಕ್ಕೆ ಸ್ವಲ್ಪ ದೂರದಲ್ಲಿರುವ ಪುಷ್ಕರಣಿಗೆ ನೀರು ಸೇರುತ್ತಿದ್ದರೆ, ಮತ್ತೊಂದು ಬೆಟ್ಟದ ಪಶ್ಚಿಮ ದಿಕ್ಕಲ್ಲಿರುವ ಕೆಳಬದಿಯ ಕೆರೆಯನ್ನು ಸೇರುತ್ತಿತ್ತು, ಹೀಗೆ ಮತ್ತೆರಡು ಝರಿಗಳು ದೇವಸ್ಥಾನದ ಹಿಂಬದಿಯಿಂದ ಉತ್ತನಹಳ್ಳಿ ದಿಕ್ಕಿಗೆ ಹೋಗುವ ಮಾರ್ಗದಲ್ಲಿರುವ ಒಂದೆರಡು ಕ್ವಾರೆಗಳನ್ನು ಸೇರುತ್ತಿತ್ತು. ಆಗ ನಗರ ಬೆಳವಣಿಗೆ ಕೇವಲ ಒಂದು ದಿಕ್ಕಿಗೆ ಸೀಮಿತವಾಗಿದ್ದರಿಂದ, ಅದರಲ್ಲಿಯೂ ನಮ್ಮ ಮನೆಗಳನ್ನು ಹುಡುಕುವ ಕಾಯಕ ನಿಜವಾಗಿಯೂ ಮಜಾ ಕೊಡುತ್ತಿತ್ತು.


ಬೆಟ್ಟ ಹೇಗೆ ಧಾರ್ಮಿಕವಾಗಿ ಶ್ರೀಮಂತಿಕೆಯನ್ನು ಹೊಂದಿದೆಯೋ ಇದೇ ರೀತಿ ನೈಸರ್ಗಿಕವಾಗಿಯೂ ಶ್ರೀಮಂತವಾಗಿತ್ತೆಂದು ಕೇಳಿ ತಿಳಿದಾಗ ನಿಜವಾಗಿಯೂ ಖುಷಿಯೆನಿಸುತ್ತದೆ. ಮೈಸೂರಿನ ಮಹಾರಾಜರು ಬೆಟ್ಟದ ನೈಸರ್ಗಿಕ ಸಂಪತ್ತಿಗೆ ಯಾವುದೇ ಹಾನಿಯಾಗದಂತೆ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದಾರೆ, ಪ್ರವಾಸಿಗರ ದೃಷ್ಟಿಕೋನವನ್ನು ನೆನಪಿನಲ್ಲಿಟ್ಟುಕೊಂಡು 1001 ಮೆಟ್ಟಿಲುಗಳನ್ನು ನಿರ್ಮಿಸಿದ್ದು, ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ, ಮೆಟ್ಟಿಲು ಏರುವವರಿಗೆ ಬಿಸಿಲು ತಾಗದಿರಲಿ ಎಂದು ಆಜುಬಾಜಿನಲ್ಲಿ ಮರಗಳನ್ನು ನಡೆಸಲಾಗಿದೆ, ಹೀಗೆ ಅದೆಷ್ಟು ಸುಸ್ಥಿರ ಅಭಿವೃದ್ಧಿ ಕಾರ್ಯಗಳು ದೊಡ್ಡ ದೇವರಾಜ ಒಡೆಯರ ಕಾಲದಲ್ಲಿ, 3ಕೃಷ್ಣರಾಜ ಒಡೆಯರ್ ಕಾಲದಲ್ಲಿ, ಹೀಗೆ ಅನೇಕ ರಾಜರಿಂದ ಅಭಿವೃದ್ಧಿಕಾರ್ಯಗಳು ನಡೆದಿವೆ.


ಬೆಟ್ಟದ ನೈಸರ್ಗಿಕ ಶ್ರೀಮಂತಿಕೆಯನ್ನು ನೋಡುವುದಾದರೆ ಬೆಟ್ಟಕ್ಕೆ 800 Million years  ಎಂದು ಅಂದಾಜಿಸಲಾಗಿದೆ. ಹಾಗೂ ಸಮುದ್ರ ಮಟ್ಟದಿಂದ 3689 ಅಡಿ ಎತ್ತರವಿದ್ದು, 91 ಕುಟುಂಬಕ್ಕೆ ಸೇರಿದಂತಹ 442 ಕ್ಕೂ ವಿವಿಧ ಜಾತಿಯ ಸಸ್ಯವರ್ಗ( Ref K B Sadananda and Sampathkumar ), 44 ಕುಟುಂಬಕ್ಕೆ ಸೇರಿದಂತಹ 150ಕ್ಕೂ ಹೆಚ್ಚು ಜಾತಿಯ ಪಕ್ಷಿವರ್ಗ, 153ಕ್ಕೂ ಹೆಚ್ಚಿನ ಜಾತಿಯ ಚಿಟ್ಟೆವರ್ಗದೊಂದಿಗೆ ಪ್ರಾಣಿಗಳಾದಂತಹ ಉಡಾ, ಹಾವು, ಮುಳ್ಳಂದಿ, ಇರುವೆ ಬಾಕ, ಕಾಡುಹಂದಿ, ಗುಳ್ಳೆ ನರಿ, ತೋಳ, ಚಿರತೆ ಹಾಗೂ ಇನ್ನಿತರ ಪ್ರಾಣಿಗಳಿಗೆ ಆಶ್ರಯವನ್ನು ನೀಡಿದೆ. ಇದರೊಂದಿಗೆ ಶತಮಾನಗಳ ಹಿಂದೆ ಬ್ರಿಟಿಷರ ಕಾಲದಲ್ಲಿ ಅಭಿವೃದ್ಧಿಯಂಬ ಹೆಸರಿನಲ್ಲಿ ನೀಲಗಿರಿ ಮರಗಳನ್ನು, ಗ್ಲಿರಿಸಿಡಿಯಾ/ ಗೊಬ್ಬರ ಗಿಡದ ಬೀಜವನ್ನು ಬೆಟ್ಟದ ಸುತ್ತಲೂ ಚೆಲ್ಲಲಾಗಿದೆ ಇದು ಮಳೆಗಾಲದಲ್ಲಿ ಚಿಗುರಿ ಎಲ್ಲೆಂದರಲ್ಲಿ ರಾರಾಜಿಸುತ್ತದೆ. ಇಷ್ಟೆಲ್ಲ ಭವ್ಯತೆ ಇರುವುದರಿಂದಲೇ ಬೆಟ್ಟವನ್ನು 2001ರಲ್ಲಿ Reserve forest  ಎಂದೂ  ಘೋಷಿಸಿದ್ದು ಅದು ಕೇವಲ ನಾಮಕಾವಸ್ಥೆಗಾಗಿ ಉಳಿದಿದೆ.


ದೇವಸ್ಥಾನದ ಧಾರ್ಮಿಕ ವಿಧಿವಿಧಾನಗಳು ಇಂದಿಗೂ ಕೂಡ ಮುನ್ನಡೆಯುತ್ತಿದೆ, ಪ್ರವಾಸಿಗರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ, ದಸರಾ ಸಮಯದಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ಪ್ರತಿದಿನ ದೇವಸ್ಥಾನ ಭೇಟಿ ನೀಡುತ್ತಿದ್ದಾರೆ, ಇದರಿಂದ ದೇವಸ್ಥಾನದ ಆದಾಯ ಪ್ರತಿವರ್ಷವೂ ಹೆಚ್ಚಾಗುತ್ತಿದೆ, ಹೋದ ವರುಷ 23 ಕೋಟಿ ರೂಪಾಯಿಗಳನ್ನು ಸಂಗ್ರಹವಾಯಿತೆಂದು ದಾಖಲಾಗಿದೆ. ಇಷ್ಟೆಲ್ಲ ವರಮಾನ ಇರುವಾಗ ಅಭಿವೃದ್ಧಿಯ ಕಾರ್ಯಗಳು ನಡೆಯದೇ ಇರುತ್ತವೆಯೇ?


ಅಭಿವೃದ್ಧಿ ಎಂಬ ಹೆಸರಿನಲ್ಲಿ ಬೆಟ್ಟದ ಮೇಲೆ ತರಹೇವಾರಿ ಕಾಮಗಾರಿಗಳು ತಲೆಯೆತ್ತಿದೆ, ಕಳೆದ ಕೇವಲ ಹತ್ತು ವರ್ಷಗಳಲ್ಲಿ ಬೆಟ್ಟ ಎಂದೂ ಕಂಡರಿಯದಂತಹ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ, ಮೂರ್ನಾಲ್ಕು Teliphone tower  ತಲೆಯೆತ್ತಿದೆ, ಕಸವು (ಪ್ಲಾಸ್ಟಿಕ್) ದಿನೇ ದಿನೇ ಹೆಚ್ಚಾಗುತ್ತಿದೆ, ಕಳೆದ ಕೇವಲ ಎರಡು ವರ್ಷಗಳಲ್ಲಿ 80 ಕೋಟಿ ರೂಪಾಯಿಗಳನ್ನು ಅಭಿವೃದ್ಧಿ ಎಂಬ ಹೆಸರಿನಲ್ಲಿ ಮೇಲ್ಭಾಗದ ಬೆಟ್ಟವನ್ನು ಸಮಗೊಳಿಸಿ 600 ಕಾರುಗಳನ್ನು ನಿಲ್ಲಿಸಬಹುದಾದಂತಹದು ಸುಸರ್ಜಿತ Multilevel parking ಅನ್ನು,116 ಮಳಿಗೆಗಳನ್ನು, ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಮತ್ತಷ್ಟು ವಿಸ್ತರಿಸುತ್ತ, ನಗರದ ಸೌಂದರ್ಯವನ್ನು ಸವಿಯಲ್ಲಿ ಎಂದು View point ಗಳನ್ನು, ಬಿದ್ದ ಮಳೆಹನಿ ಎಲ್ಲಿಯೂ ನಿಲ್ಲದ ರೀತಿ ರಸ್ತೆಯ ಇಕ್ಕೆಲಗಳಲ್ಲಿ ಸುಸಜ್ಜಿತ concrete ಮೋರಿಗಳನ್ನು ನಿರ್ಮಿಸಿದ್ದು ಮಳೆನೀರಿಗೆ ಮತ್ತಷ್ಟು ವೇಗ ದೊರಕಿದಂತಾಗಿದೆ. ಈ ಅಭಿವೃದ್ಧಿ ಎಂಬ ಹೆಸರಿನಲ್ಲಿ, ವಿನಿಯೋಗಿಸುತ್ತಿರುವ ಹಣವೂ ಕೂಡ ಅನೇಕ ಜನರ ಕೈ ಸೇರುತ್ತಿರುವುದರಿಂದ ಎಲ್ಲಿಯೂ ಅಭಿವೃದ್ಧಿ ಕಾಮಗಾರಿಗಳಿಗೆ ಅಡಚಣೆಯಾಗಿದೆ ಮುನ್ನಡೆಯುತ್ತಲಿವೆ.


ಬೆಟ್ಟದ ಮೇಲೆ ಹಾಗೂ ಬೆಟ್ಟದ ಕೆಳಗೆ ಸುತ್ತಲೂ ನಗರದ ಬೆಳವಣಿಗೆ ದಿನೇದಿನೇ ವಿಸ್ತರಿಸುತ್ತಲೇ ಇದೆ, ವ್ಯವಸ್ಥೆಯೆಂಬ ಅಭಿವೃದ್ಧಿ ಹೆಸರಿನಲ್ಲಿ ಬೆಟ್ಟವನ್ನು ಬುಡಮೇಲು ಮಾಡುವ ಅವ್ಯವಸ್ಥೆ ಕಾಮಗಾರಿಗಳು ತಲೆಯೆತ್ತುತ್ತಿವೆ, ದೂರದಿಂದ ವಲಸೆ ಬರುವ ಪಕ್ಷಿಗಳು ಗಣನೀಯವಾಗಿ ಕಡಿಮೆಯಾಗಿದೆ, ಪ್ರಾಣಿಗಳ ಸಂಖ್ಯೆಯಂತೂ ಬೆರಳೆಣಿಕೆಗೆ ಬಂದಿದೆ, ಗಿಡಮೂಲಿಕ ಸಸಿಗಳು ಕಣ್ಮರೆಯಾಗುತ್ತಲಿದೆ, ಸಂಪೂರ್ಣವಾಗಿ ಬಿದ್ದ ಮಳೆನೀರು ಮೋರಿ ಸೇರುತ್ತಲಿದೆ, ಬೆಟ್ಟದ ಮೇಲಿನಿಂದ ಹರಿಯುತ್ತಿದ್ದ ಝರಿಗಳು ಒಣಗಿ ನಿಂತಿವೆ, ಸುತ್ತಲಿದ್ದ ಕೆರೆಯ ಜಾಗಗಳು ಬಡಾವಣೆಗಳಾಗಿ ಮಾರ್ಪಾಡಾಗುತ್ತಲಿವೆ, ಬೇಸಿಗೆಯಲ್ಲಿ ಕಿಡಿಗೇಡಿಗಳ ಬೆಂಕಿಯಿಂದ ಇರುವ ಕುರುಚಲು ಗಿಡಗಳು ಬೂದಿಯಾಗುತ್ತಲಿದೆ, ರಾಜಕಾರಣಿಗಳು ಬೆಟ್ಟವನ್ನು ಜೀವವೈವಿಧ್ಯ ತಾಣವಾಗಿ ಮಾಡಬೇಕೋ ಇಲ್ಲವೋ ಎಂಬ ತೊಳಲಾಟಗಳಲ್ಲಿ ಅನೇಕ ವರ್ಷಗಳನ್ನು ಕಳೆದಿದ್ದಾರೆ, 80 ಕೋಟಿ ಅಭಿವೃದ್ಧಿ ಎಂಬ ಹೆಸರಿನಲ್ಲಿ ವಿನಿಯೋಗಿಸುವ ಅರ್ಧ(40 crore) ಹಣವನ್ನು ಜೀವವೈವಿಧ್ಯದ ಅಭಿವೃದ್ಧಿಗೆ ಮೀಸಲಿಟ್ಟಿದ್ದರೆ  ಇದರ ಭವ್ಯತೆ ಇನ್ನಷ್ಟು ಹೆಚ್ಚಾಗುತ್ತಿತ್ತು ಎಂದೆನಿಸುತ್ತದೆ, ಅಥವಾ ಒಂದು ವಾಹನಕ್ಕೆ ಒಂದು ಮರದಂತೆ 600 ವಿಧವಿಧ ಜಾತಿಯ ಹೊಸ ಗಿಡಗಳನ್ನು ನೆಟ್ಟು ಕೇವಲ ಐದು ವರ್ಷ ನೀರುಣಿಸಿದ್ದರೆ ನೂರಾರು ಪ್ರಾಣಿ ಪಕ್ಷಿಗಳಿಗೆ ಆಶ್ರಯ ನೀಡಿದಂತಾಗುತ್ತಿತ್ತಲ್ಲವೇ ?


ಈ ಮಾನವನ ದುರಾಸೆಗೆ ಬೆಟ್ಟವೇ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲಾಗದೆ ದಿನೇ ದಿನೇ ಕರಗುತ್ತಲಿದೆ, ಕೇವಲ ಒಂದು ವರ್ಷದ ಹಿಂದಿನ ತನಕವೂ ಕೂಡ ನನ್ನ ವಾಹನದಲ್ಲಿ ದೇವಸ್ಥಾನದ ಗೋಪುರದ ಮುಂದೆಯೇ ನಿಲ್ಲಿಸುತ್ತಿದ್ದದ್ದು, ಈಗ ಇನ್ನೆಲ್ಲಿಯೋ ದೂರದಲ್ಲಿ ನಿಲ್ಲಿಸಿ ನನ್ನ ವಾಹನಕ್ಕೆ ನಾನೇ ಹಣವನ್ನು ಕಟ್ಟಿ, ದೇವಸ್ಥಾನಕ್ಕೆ ಹೋಗಬೇಕಾದ ಪರಿಸ್ಥಿತಿ ಬಂದೊದಗಿದೆ, ಹಣ ಕಟ್ಟಿ ಹೋಗಬೇಕೆಂದೇನೂ ಬೇಸರವಿಲ್ಲ, ಬದಲಿಗೆ ನಮ್ಮ ಸ್ವಂತಿಕೆಯನ್ನು ದಿನೇದಿನೇ ಕಳೆದುಕೊಳ್ಳುತ್ತಿದ್ದೆವಲ್ಲ ಎಂದು ಬೇಸರವಾಗುತ್ತದೆ. ಹೇಗೆ ನನ್ನ ಬಾಲ್ಯದ ದಿನಗಳು ಮರಳಿ ಬರಲು ಸಾಧ್ಯವಿಲ್ಲವೋ ಅದೇ ರೀತಿ ಮುಂದಿನ ದಿನಗಳಲ್ಲಿ ಬೆಟ್ಟವನ್ನು ಅದರ ನಿಜ ಸ್ವರೂಪದಲ್ಲಿ ನೋಡುವುದು ಕನಸಾಗಿಯೇ ಉಳಿಯಬಹುದು.


ಮೈಸೂರಿನ ಯಾವ ದಿಕ್ಕಿನಲ್ಲಿ ನಿಂತಾಗಲೂ ನನಗೆ ಸದಾ ಕಾಣುವ ಚಾಮುಂಡಿ ಬೆಟ್ಟವನ್ನು ನೋಡಿದಾಗ ಕನಿಕರಹುಟ್ಟಿ ಕಾಡುವ ಪ್ರಶ್ನೆಯೆಂದರೆ ನಿಜವಾಗಿಯೂ ಬೆಟ್ಟಕ್ಕೆ ಹೋಗಬೇಕಾ?


ಈಗ ಬೆಟ್ಟಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಪ್ರಚಲಿತ ವಿದ್ಯಾಮಾನವೆಂದರೆ ಬೆಟ್ಟಕ್ಕೆ ರೋಪ್ ವೇ  ಬೇಕೋ ಅಥವಾ ಬೇಡವೋ ಎನ್ನುವುದು, ಈ ರೀತಿ ಅಭಿವೃದ್ಧಿಯ ಹೆಸರಿನಲ್ಲಾಗುತ್ತಿರುವ ಬದಲಾವಣೆಯನ್ನು ನೀವು ನೋಡಬೇಕಾದಲ್ಲಿ ನೀವೊಮ್ಮೆ ಬೆಟ್ಟಕ್ಕೆ ಹೋಗಿಬನ್ನಿ.


ಅಭಿವೃದ್ಧಿ ಎಂಬುದು ಕೇವಲ ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾಗಿರದೆ ಪ್ರಪಂಚದ ಎಲ್ಲಾ ಭಾಗಗಳಲ್ಲಿಯೂ ನಡೆಯುತ್ತಿದ್ದು, ಸ್ಥಳೀಯರ ಹಾಗೂ ನಿಸರ್ಗದ ಸ್ವಾತಂತ್ರ್ಯವನ್ನು ಕಬಳಿಸಿ ಕೊಳ್ಳಲಾಗುತ್ತಿದೆ ಎಂದೆನಿಸುತ್ತಿದೆ.


ಧನ್ಯವಾದಗಳು.






Saturday, March 6, 2021

ಕಾಲಾಯ ತಸ್ಮೈ ನಮಃ.

                                                                       
                                                            ಎಸ್ ಪಿ ತೇಜರಾಜು.
                                                             
 ಒಂದಲ್ಲ ಒಂದು ರೀತಿಯ ಖರ್ಚುಗಳ ಮೇಲೆ ಖರ್ಚುಗಳನ್ನು ಮಾಡಿಸುವಂತಹ ಈ ಹಬ್ಬ- ಆಚರಣೆಗಳು ಮಧ್ಯಮ ವರಮಾನದ ಜನರಿಗೆ ನಿಜವಾಗಿಯೂ ಬೇಕಾಗಿತ್ತೆ? ಬಡವರೇನು ಇರುವುದರಲ್ಲಿಯೇ ಹಬ್ಬವನ್ನು ಮುಗಿಸುತ್ತಾರೆ ಆದರೆ ಶ್ರೀಮಂತರ ಕಥೆ ಹಾಗಲ್ಲವಲ್ಲ, ಅವರಿಗೆ ಆದಾಯವು ಹೆಚ್ಚು ಅದನ್ನು ಖರ್ಚು ಮಾಡಿ ಆನಂದಿಸಬೇಡವೇ? ಅದೇನೇ ಇರಲಿ ನಮ್ಮ ಹಿರಿಯರಲ್ಲಿಯೂ ಶ್ರೀಮಂತರು ಬಡವರು ಎಲ್ಲರೂ ಇದ್ದರಲ್ಲವೇ? ಹಾಗೆಂದುಕೊಂಡು ಅವರೇನು ಹಬ್ಬಗಳನ್ನು ಆಚರಿಸದೆ ಇದ್ದರೆ? ಇಲ್ಲವಲ್ಲ. ನಮ್ಮ ಪೂರ್ವಜರು ಪ್ರಾರಂಭಿಸಿದ ಆಚರಣೆಗಳೆಲ್ಲವೂ ಆಡಂಬರ ತೋರ್ಪಡಿಕೆಗಳಿಗಲ್ಲದೆ ಮನಸ್ಸಿನ ಸುಖ ಶಾಂತಿ ನೆಮ್ಮದಿಗಾಗಿ ಪ್ರಾರಂಭಿಸಿದ್ದಲ್ಲದೆ ಮತ್ತೆನು? ಹಾಗಾದರೆ ನಾವೇಕೆ ಇದನ್ನು ಅರ್ಥಮಾಡಿಕೊಳ್ಳದೆ ಮರಳುವಂತೆ ವರ್ತಿಸುತ್ತಿದ್ದೇವೆ ?

 ಅಜ್ಜಿ ಆಗಾಗ ಕೆಲ ಸನ್ನಿವೇಶಗಳನ್ನು ಹೇಳುತ್ತಿರುತ್ತಾರೆ ವರ್ಷದ ಮೊದಲ ಹಬ್ಬವಾದ ಯುಗಾದಿ, ಮಧ್ಯದಲ್ಲಿ ಬರುವ ದಸರಾ ಸಮಯದ ಪಿತೃಪಕ್ಷ, ಕೊನೆಯ ಹಬ್ಬವಾದ ದೀಪಾವಳಿಯಲ್ಲಿ ಮನೆಯಲ್ಲಿ ಖರ್ಚುಗಳು ಇರುತ್ತಿದ್ದವೆ ಹೊರತು ಮಿಕ್ಕೆಲ್ಲಾ ಹಬ್ಬಗಳು ಅಷ್ಟೇನು ಖರ್ಚುಎಂದೆನಿಸುತಿರಲಿಲ್ಲ, ಇಂದಿನವರು ಟಿವಿಯನ್ನು ನೋಡಿಕೊಂಡು ಗುರೂಜಿ ಈ ಪೂಜೆಯನ್ನು ಮಾಡಲಿಕ್ಕೆ ಹೇಳಿದ್ದಾರೆ, ಪಕ್ಕದ ಮನೆಯವರು ಮಾಡುತ್ತಿದ್ದಾರೆ ನಾವು ಯಾರಿಗೆ ಕಮ್ಮಿ ಎಂಬಂತೆ ತೋರ್ಪಡಿಕೆಗೆ ಹಬ್ಬಗಳು ಬಂದುನಿಂತಿದೆ.

 ನಾವುಗಳು (ಅಜ್ಜಿಯ ಮಾತುಗಳು) ಮಳೆಗಾಲ ಬಂತೆಂದರೆ ಸಾಕು ಭೂಮಿತಾಯಿಯನ್ನು ಪೂಜಿಸಿ ತೋಟ, ಗದ್ದೆ, ಜಮೀನಿನ ಕೆಲಸಗಳು ಪ್ರಾರಂಭಿಸಿ ಬೆಳೆ ಬಂದನಂತರ ಕಟಾವುಮಾಡಿ,ಚಳಿಗಾಲದಲ್ಲಿ ಮತ್ತೊಂದು ಬೆಳೆ ಬೆಳೆದು ಅದನ್ನು ಕೂಡ ಬೇಸಿಗೆಯಲ್ಲಿ ಮುಗಿಸಿ ಉಳಿದ ಸಮಯವನ್ನು ಊರ ಹಬ್ಬ ಜಾತ್ರೆ ಇನ್ನಿತರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದೆವು. ಈ ಜಾತ್ರೆಗೆ ಬಂದಂತಹ ಎಲ್ಲರೂ ಒಂದಲ್ಲ ಒಂದು ರೀತಿಯ ಸ್ವಯಂ ಸೇವಕರಂತೆ ಒಂದುಗೂಡಿ ಕೆಲಸವನ್ನು  ವಿಭಾಗಿಸಿಕೊಳ್ಳುತ್ತಿದ್ದರು, ಊರ ಜನರಿಂದಲೇ ದವಸ ಧಾನ್ಯಗಳನ್ನು ಸಂಗ್ರಹಿಸಿ, ಜಾತ್ರೆಗೆ ಬಂದ ಜನರ ಊಟೋಪಚಾರಗಳನ್ನು ನೋಡಿಕೊಳ್ಳುತ್ತಿದ್ದರು. ಜಾತ್ರೆಯ ಕೊನೆಯ ದಿನ ತೇರು ರಥಬೀದಿಯಿಂದ ಊರನ್ನು ಒಂದು ಪ್ರದಕ್ಷಿಣೆ ಹೊಡೆದು ನಂತರ ದೇವಸ್ಥಾನಕ್ಕೆ ಬಂದು ನಿಂತಬಳಿಕ ಜಾತ್ರೆ ಮುಕ್ತಾಯವಾಗುತ್ತಿತ್ತು. ಇದಾದ ಬಳಿಕ ಅಂದು ಸಂಜೆ ಮಠಗಳಲ್ಲಿ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪೌರಾಣಿಕ ನಾಟಕಗಳು ಆಯಾಯ ಪ್ರದೇಶಕ್ಕೆ ಹೊಂದಿಕೊಂಡಂತೆ ಇತರ ಕಾರ್ಯಕ್ರಮಗಳು ನೆರವೇರುತ್ತಿದ್ದವು.

 ಹಾಗಾದರೆ ಒಂದಲ್ಲ ಒಂದು ರೀತಿಯ ಹಬ್ಬಗಳು ಪ್ರತಿಮಾಸವು ಬರುತ್ತಿದೆಯಲ್ಲ ಅವುಗಳನ್ನು ನಾವು ಹೇಗೆಲ್ಲ ಆಚರಿಸಬಹುದು ಎಂಬ ಮಾತಿಗೆ, ಆಚರಣೆಗಳ ಒಳಾರ್ಥವನ್ನು ಗ್ರಹಿಸುವುದರ ಮೂಲಕ ಹಬ್ಬಗಳ ಮಹತ್ವವನ್ನು ತಿಳಿಯುವುದು ಎಂದಾಯಿತು.

* ಪ್ರತಿಶತ ಬಹುಪಾಲು ನಮ್ಮ ಹಬ್ಬಗಳೆಲ್ಲ ಪ್ರತಿ ಮಾಸದ ಶುಕ್ಲಪಕ್ಷದಲ್ಲಿ ಬರುವುದು ಹೆಚ್ಚು ಇದರ ಒಳಾರ್ಥ ಕೃಷ್ಣ ಪಕ್ಷ ಮುಗಿದ ಬಳಿಕ ಚಂದ್ರ ಹೇಗೆ ಪರಿಪೂರ್ಣವಾಗಿ ನಮಗೆ ಗೋಚರಿಸಲು ಪ್ರಾರಂಭಿಸುತ್ತಾನೆಯೋ ಅದೇ ರೀತಿ ನಮ್ಮ ಜೀವನವು ಪೂರ್ಣತೆಯಿಂದ ಕೂಡಿರಲಿ ಎಂಬುದಾಗಿದೆ.( ಶುಕ್ಲಪಕ್ಷದಲ್ಲಿ ಆಚರಿಸಲ್ಪಡುವ ಬಹುದೊಡ್ಡ ಹಬ್ಬ ದಸರಾ ನವರಾತ್ರಿ)

* ಸಂಕ್ರಾಂತಿಯ ಸಮಯದಲ್ಲಿ ಹಗಲಿನಲ್ಲಿ ಬಿಸಿಲು ಹೆಚ್ಚಿದ್ದು ಹಾಗೂ ಬೆಳಿಗ್ಗೆ ರಾತ್ರಿ ಚಳಿ ಇರುವ ಕಾರಣ ಎಳ್ಳುಬೆಲ್ಲದ ಜೊತೆ ನಾನಾ ರೀತಿಯ ಎಣ್ಣೆ ಕಾಳುಗಳನ್ನು ಸೇವಿಸುವುದರ ಮೂಲಕ ದೇಹದಲ್ಲಿ ಎಣ್ಣೆ ಅಂಶವನ್ನು ಕಾಪಾಡಿಕೊಳ್ಳುವುದು, ಮನೆಯ ಹಸುಗಳಿಗೆ ಅರಿಶಿಣವನ್ನು ಬೆಳೆಯುವುದರ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವುದು.

* ಯುಗಾದಿ ಹಬ್ಬ ಹಿಂದೂ ಪಂಚಾಂಗದ ಪ್ರಕಾರ ಚೈತ್ರಮಾಸದಲ್ಲಿ ಆಚರಿಸಲ್ಪಡುವ ಹಬ್ಬವಾಗಿದ್ದು  ಅಂದು ಮನೆಯವರೆಲ್ಲರೂ ಹೊಸಬಟ್ಟೆಯನ್ನುಟ್ಟು ಬೇವು-ಬೆಲ್ಲವನ್ನು ತಿನ್ನುವುದರ ಮೂಲಕ ಜೀವನದಲ್ಲಿ ಬರುವಂತಹ ಸುಖದುಃಖಗಳನ್ನು ಸಮಾನವಾಗಿ ಸ್ವೀಕರಿಸುವುದು.

* ಚೈತ್ರ, ವೈಶಾಖ, ಜೇಷ್ಠ ಮಾಸಗಳಲ್ಲಿ ಬಯಲುಸೀಮೆ, ಕರಾವಳಿ, ಮಲೆನಾಡಿನ ಊರುಗಳಲ್ಲಿ ದೇವರ ಜಾತ್ರೆಗಳನ್ನು ಮುಗಿಸಿ ಕಥೆ, ಪುರಾಣ, ನಾಟಕ, ಕೀರ್ತನೆ, ಭಜನೆಗಳಲ್ಲಿ ಜನರು ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಮೂಲಕ ತಮ್ಮ ಪರಂಪರೆಯನ್ನು ತಲೆತಲಾಂತರಗಳಿಂದ ಮುಂದುವರಿಸಿಕೊಂಡು ಹೋಗುತ್ತಿದ್ದರು. ಈ ಸಮಯದಲ್ಲಿಯೇ ಪಂಚಾಂಗವಾದರಿತ ಮೊದಲ ಹಾಗೂ ದೊಡ್ಡ ಮಳೆಯಾದ ಅಶ್ವಿನಿ, ಭರಣಿ, ಕೃತ್ತಿಕಾ ಮಳೆಗಳು ಧರೆಗುರುಳುತ್ತಿದ್ದವು.

* ಆಶಾಡ ಹಾಗೂ ಶ್ರಾವಣಮಾಸದಲ್ಲಿ ತಂಪಾದ ಗಾಳಿಯನ್ನು ಬೀಸಿಕೊಂಡು ಸೋನೆಮಳೆಯೊಂದಿಗೆ ರೋಹಿಣಿ, ಮಾರ್ಗಶಿರ, ಅರ್ಧ, ಪುನರ್ವಸು ಮಳೆಯಿಂದಾಗಿ ಕೃಷಿ ಕೆಲಸಗಳು ಪ್ರಾರಂಭವಾಗುತ್ತದೆ. ಹಾಗೂ ಈ ಶ್ರಾವಣಮಾಸದಲ್ಲಿ ಅನೇಕ ಮನೆಗಳಲ್ಲಿ  ಮದುವೆ-ಮುಂಜಿಯಂತಹ ಶುಭಕಾರ್ಯಗಳು ನಡೆಯುತ್ತವೆ.

* ಭಾದ್ರಪದ ಹಾಗೂ ಆಶ್ವಯುಜ ಮಾಸದಲ್ಲಿ ಗಣಪತಿ ಹಬ್ಬ, ನಾಗರ ಹಬ್ಬ, ದಸರಾ, ದೀಪಾವಳಿ ಹಬ್ಬ ನಡೆಯುತ್ತದೆ. ಈ ಮಾಸದಲ್ಲಿಯೇ ಪುಷ್ಯ ಆಶ್ಲೇಷ, ಮಖ,ಫುಫಾ, ಉಫಾ, ಹಸ್ತ, ಚಿತ್ತೆ ನಕ್ಷತ್ರವಾದರಿತ ಮಳೆಯಿಂದ ಕೃಷಿ ಕಾಯಕ ಬಿರುಸಿನಿಂದ ಸಾಗುತ್ತದೆ ಹಸ್ತ ಮಳೆ ಸಮಯದಲ್ಲಿ ಬೆಳೆ ಕಟಾವಾಗಿ, ಚಿತ್ತೆ ಮಳೆಗೆ ಹುಳಗಳು ಚಿಟ್ಟೆಗಳಾಗಿ ಮಾರ್ಪಟ್ಟು, ವನಸ್ಪತಿ ಸಸ್ಯಗಳು ಓಡಮೂಡಿದ ಹಣ್ಣುಗಳನ್ನುತಿನ್ನುತ್ತಾ ಸ್ವಾತಿ, ವಿಶಾಖ ಮಳೆಯಲ್ಲಿ ಮರೆಯಾಗುತ್ತವೆ.

* ಭಾದ್ರಪದ ಮಾಸದಲ್ಲಿ ಹೆಚ್ಚಾದ ಇಲಿಗಳ ಉಪಟಳವನ್ನು ತಡೆಯಲು ಹಾವುಗಳನ್ನು ಪೂಜಿಸಲಾಗುತ್ತಿತ್ತು, ಇವತ್ತಿನ ರೀತಿ ಲೀಟರುಗಟ್ಟಲೆ ಹಾಲನ್ನು, ಡಾಲ್ಡಾ ತುಪ್ಪವನ್ನು ಕೃತಕ ಹುತ್ತಗಳಿಗೆ ಸುರಿಯುತ್ತಿರಲಿಲ್ಲ.

* ದೀಪಾವಳಿ ಹಬ್ಬ ನಾಲ್ಕು ದಿನದ ಆಚರಣೆಯಾಗಿದ್ದು, ಮಳೆಗಾಲದಿಂದ ಚಳಿಗಾಲಕ್ಕೆ ಬದಲಾಗುತ್ತಿರುವ ವಾತಾವರಣಕ್ಕೆ ದೇಹ ಹೊಂದಿಕೊಂಡಲೆಂದೇ ಎಣ್ಣೆ ಸ್ನಾನವನ್ನು ಮಾಡಲಾಗುತ್ತಿತ್ತು.

* ಕಾರ್ತಿಕ ಮಾಸದ ಪ್ರತಿದಿನವೂ ಮನೆಯನ್ನು ದೀಪಗಳಿಂದ ಸಿಂಗರಿಸಲಾಗುತ್ತಿತ್ತು. ಧನುರ್ಮಾಸದ ಸಮಯದಲ್ಲಿ ಸೂರ್ಯೋದಯಕ್ಕೆ ಮುಂಚೆ ಅರಳಿ ಮರ ಪ್ರದಕ್ಷಿಣೆ ಮಾಡಲಾಗುತ್ತಿತ್ತು.

* ಪ್ರತಿ ಹಬ್ಬಗಳ ಆಚರಣೆಯಲ್ಲಿಯೂ ವಾತಾವರಣಕನುಕೂಲವಾಗುವಂತೆ ದೇಹಕ್ಕೆ ಬೇಕಾಗುವಂತಹ ಪೌಷ್ಟಿಕಾಂಶವುಳ್ಳ ಆಹಾರವನ್ನು  ಸೇವಿರಿಸಲಾಗುತ್ತಿತ್ತು.

* ಹಬ್ಬದ ದಿನಗಳು ಮಾತ್ರವಲ್ಲದೆ ಪ್ರತಿದಿನವೂ ಮನೆಯನ್ನು ಸ್ವಚ್ಛಗೊಳಿಸಿ ಹೊರಾಂಗಣವನ್ನು ಸಗಣಿಯಿಂದ ಸಾರಿಸುವ ಮೂಲಕ ಕ್ರಿಮಿಕೀಟಳಿಂದ ರಕ್ಷಣೆ ಪಡೆಯಲಾಗುತ್ತಿತ್ತು.

 ಹೀಗೆ ಈ ಹಬ್ಬಗಳೆಲ್ಲವೂ ಪ್ರತಿ ಸಂವತ್ಸರವು ಮರುಕಳಿಸುತ್ತಲಿವೆ, ಇವುಗಳ ಒಳಾರ್ಥವನ್ನು ನಾವಿಂದು ಗ್ರಹಿಸಬೇಕಾಗಿದೆ.
 
ಇಷ್ಟೆಲ್ಲಾ ಹಬ್ಬಗಳ ಜೊತೆಯಲ್ಲಿ ನಾವು ಆಚರಿಸುವ ಮತ್ತೊಂದು ಹಬ್ಬವೆಂದರೆ ಮಹಾಶಿವರಾತ್ರಿ, ಈ ಶಿವರಾತ್ರಿ ಹಬ್ಬದ ವೈಶಿಷ್ಟವೇ ವಿಭಿನ್ನ, ಹಬ್ಬದ ದಿನದಿಂದ ಸೂರ್ಯ ತನ್ನ ಪ್ರಕರತೆಯನ್ನು ಇನ್ನಷ್ಟು ಹೆಚ್ಚಿಸುತ್ತಾನೆ, ಅಂದು ಪ್ರಪಂಚದ ನಾನಾ ಮೂಲೆಯ ಶಿವದೇವಾಲಯಗಳಲ್ಲಿ ಪೂಜೆ ನೆರವೇರುತ್ತದೆ, ಕೆಲ ದೇವಾಲಯಗಳ ವಾಸ್ತುಶಿಲ್ಪ ಎಷ್ಟು ಸ್ವಾರಸ್ಯಕರವಾಗಿದೆ ಎಂದರೆ ಮಹಾಶಿವರಾತ್ರಿಯ ಹಬ್ಬದ ದಿನದಂದೇ ಸೂರ್ಯನ ರಶ್ಮಿಗಳು ಶಿವಲಿಂಗದ ಮೇಲೆ ಬೀಳುವಂತೆ ನಿರ್ಮಿಸಲಾಗಿದೆ. ಪುರಾಣಗಳಲ್ಲಿ ಉಲ್ಲೇಖಿಸಿರುವಂತೆ ಬ್ರಹ್ಮ ಸೃಷ್ಟಿಕರ್ತನಾದರೆ, ವಿಷ್ಣು ಇವುಗಳನ್ನು ಕಾಪಾಡುತ್ತಾನೆ, ಆದರೆ ಶಿವ ಸೃಷ್ಟಿಕರ್ತನ ಪ್ರತಿಯೊಂದು ಸೃಷ್ಟಿಯ ಕಾಲ ನಿರ್ಣಾಯಕನಾಗಿರುತ್ತಾನೆ.

 ಮೂಲತೋ ಬ್ರಹ್ಮರೂಪಾಯ, ಮಧ್ಯತೋ ವಿಷ್ಣು ರೂಪಿಣಿ, ಅಗ್ರತೋ ಶಿವರೂಪಾಯ ವಕ್ಷರಾಜತೆಯೇ ನಮಹ ಎಂಬ ವೃಕ್ಷವಾಧಾರಿತ ಶ್ಲೋಕ ಒಂದಿದೆ, ಅರಳಿಮರ ಸದೃಢವಾಗಿ ನಿಲ್ಲಲು ಭದ್ರ ಬುನಾದಿಯನ್ನು ನೀಡಿದ ಬೇರುಗಳನ್ನು ಬ್ರಹ್ಮನಿಗೆ ಹೋಲಿಸಲಾಗಿದೆ, ಹೆಮ್ಮರವಾಗಿ ಕವಲೊಡೆದು ಶಾಕೋಪ ಶಾಖೆಯನ್ನು ದೂರಕ್ಕೆ ಚಾಚಿಕೊಂಡಿರುವ ರೆಂಬೆಕೊಂಬೆಗಳನ್ನು ಭದ್ರವಾಗಿ ಹಿಡಿದಿಟ್ಟಿರುವ ಕಾಂಡವನ್ನು ವಿಷ್ಣುವಿಗೆ ಹೋಲಿಸಲಾಗಿದೆ, ಮರದ ತುಂಬಾ ಹಸಿರು ಎಲೆಗಳಿಂದ ಕಂಗೊಳಿಸಿ ಜನರಿಗೆ ನೆರಳು, ಗಾಳಿ, ಆಹಾರವನ್ನು ಕೊಟ್ಟು ಮರಕ್ಕೂ ಕೂಡ ಬೇಕಾದ ಆಹಾರವನ್ನು ತಯಾರಿಸಿ ಕೊನೆಗೆ ತನ್ನ ಕಾಯಕವನ್ನು ಮುಗಿಸಿ ಮಣ್ಣಿನಲ್ಲಿ ಮಣ್ಣಾಗುವ ಹೊಸಚಿಗುರು ಹಳೇಬೇರ ಕಾಲ ನಿರ್ಧಾರಕ ಶಿವನೇ ಎನ್ನುವುದು ಶ್ಲೋಕವಾದರೂ, ವಾಸ್ತವವು ಇದೆ ಅಲ್ಲವೇ? ( ಅಂದರೆ ಶಿವನ ಒಳಾರ್ಥ ಕಾಲ ) ಇದೇ ಅಲ್ಲವೇ ಕಾಲಾಯತಸ್ಮೈನಮಃ ಅಂದರೆ.

 ಶಿವನನ್ನು ಲಿಂಗದ ರೂಪದಲ್ಲಿ ಪೂಜಿಸಲಾಗುತ್ತದೆ ಹಾಗೂ ಈತ ಅಭಿಷೇಕಪ್ರಿಯ ಎಂತಲೂ ನಂಬಲಾಗಿದೆ, ಇದರ ಒಳಾರ್ಥ ಬೇಸಿಗೆಯಲ್ಲಿ ಶಿವಲಿಂಗದ ನೀರನ್ನು ಹೆಚ್ಚೆಚ್ಚು ಸೇವಿಸುವುದರ ಮೂಲಕ ಈ ಬೇಸಿಗೆಯ ಸಮಯದಲ್ಲಿ ದೇಹದಲ್ಲಿ ನೀರಿನಂಶವನ್ನು ಕಾಪಾಡಿಕೊಳ್ಳುವುದು ಇದರ ರಹಸ್ಯವಲ್ಲದೆ ಮತ್ತೇನು?

 ಎಲ್ಲರಿಗೂ ಮಹಾಶಿವರಾತ್ರಿಯ ಶುಭಾಶಯಗಳು.

 ಧನ್ಯವಾದಗಳು.