ಎಸ್ ಪಿ ತೇಜರಾಜು.
ಆಷಾಢ ಮಾಸ ಬಂತೆಂದರೆ ಸಾಕು ಎಲ್ಲಾ ಸಸ್ಯ ಕೋಟಿ ಜೀವಸಂಕುಲಗಳಿಗೆ ಸಂತಸದ ಕಾಲ, ತಂಪಾದ ಗಾಳಿ, ಸೋನೆಮಳೆ ಯಾವ ಸಮಯದಲ್ಲಾದರೂ ಸುರಿಯಬಹುದು,ಇದೆ ಮಾಸಕ್ಕೆ ಸಂಬಂಧಿಸಿದಂತೆ ಮೂರು ಮಳೆನಕ್ಷತ್ರಗಳು ಸಾಧಾರಣ ಆದ್ರಾ೯ ಮಳೆ ಸಂಪೂರ್ಣ ಪುನರ್ವಸು ಹಾಗೂ ಭಾಗಶಃ ಪುಷ್ಯ ಮಳೆ. ಈ ಆಷಾಢ ಮಾಸವು ಖಗ-ಮೃಗ, ಪಶು-ಪಕ್ಷಿ, ಕ್ರಿಮಿ-ಕೀಟ, ಸಸ್ಯಗಳೊಂದಿಗೆ ಮಾನವರಿಗೂ ಕೂಡ ಚೈತನ್ಯವನ್ನು ನೀಡುವಂತಹದ್ದು ಪ್ರತಿ ಶುಕ್ರವಾರ ತಾಯಿ ಚಾಮುಂಡೇಶ್ವರಿಯ ಆರಾಧನೆ, ಮೈಸೂರು ರಾಜಮನೆತನದವರಿಂದ ಚಾಮುಂಡಿಬೆಟ್ಟದಲ್ಲಿ ವೈಭವೋಪೇರಿತವಾದ ವರ್ಧಂತಿ ಉತ್ಸವ, ಪೂಜೆ ಪುನಸ್ಕಾರಗಳು ನಡೆಯುತ್ತದೆ, ನೂರಾರು ಭಕ್ತಮಂಡಳಿಗಳಿಂದ ಪ್ರಸಾದ, ಸಿಹಿ ವಿತರಣೆ ಸಾಮಾನ್ಯವಾಗಿ ಎಲ್ಲ ಕಡೆಯೂ ನಡೆಯುವಂತಹದ್ದು. ಈ ಎಲ್ಲ ಚಟುವಟಿಕೆಗಳು ಸುಖ, ಶಾಂತಿ, ಸಮೃದ್ಧಿಯ ಸಂಕೇತವಾಗಿದೆ.
ಇಂದು ಆಷಾಢಮಾಸ ಕೃಷ್ಣಪಕ್ಷದ ತ್ರಯೋದಶಿ[ ಬರೆಯುತ್ತಿರುವ ದಿನದಂದು] ಎಂದಿನಂತೆ ಸೂರ್ಯ ಮುಳುಗಿ ಕತ್ತಲಾವರಿಸುತ್ತಿತ್ತು ಎಲ್ಲಾ ಪಕ್ಷಿಗಳು ಸುಶ್ರಾವ್ಯವನ್ನು ನಿಲ್ಲಿಸಿ ಗೂಡುಸೇರಿದ್ದವು, ಮೌನ ಹೆಚ್ಚಾಗಿ ಕತ್ತಲು ಗಾಢವಾಗುತ್ತಿತ್ತು, ಗೂಬೆ, ಬಾವಲಿಗಳು ಆಕಾಶದಲ್ಲಿ ಹಾರಾಡತೊಡಗಿದವು, ಹೆಗ್ಗಣ, ಹಂದಿ ಇನ್ನಿತರ ನಿಶಾಚರ ಪ್ರಾಣಿಗಳು ಆಹಾರವನ್ನು ಹುಡುಕುವ ಕಾಯಕದಲ್ಲಿ ಮಗ್ನವಾಗಿದ್ದವು.
ಎಂದಿನಂತೆ ಸುತ್ತಮುತ್ತಲಿನ ಜನರು ದಿನನಿತ್ಯದ ಕಾಯಕವನ್ನು ಮುಗಿಸಿ ಊಟ ಮಾಡಿ ನಿದ್ದೆಯಲ್ಲಿ ಜಾರಿದ್ದರು. ನಡುರಾತ್ರಿ ಇರಬಹುದು ಆದರೆ ಸರಿಯಾಗಿ ಸಮಯ ತೋಚದು ಒಂದರ ಹಿಂದೆ ಮತ್ತೊಂದರಂತೆ 20ರಿಂದ 30 ನಾಯಿಗಳು ಬೊಗಳುತ್ತಿದ್ದವು. ಈ ನಿಶಬ್ದ ವಾತಾವರಣದಲ್ಲಿ ಇಷ್ಟು ಪ್ರಮಾಣದ ಶಬ್ದ ಒಮ್ಮೆಲೆ ಕಿವಿಯೊಳಗೆ ತೋರಿದ್ದರಿಂದ ನಿದ್ದೆ ಪಟ್ಟನೆ ಹಾರಿಹೋಯಿತು. ಈ ಹಾಳು ಸುಡುಗಾಡು ನಾಯಿಗಳಿಗೆ ಏನು ಬಂದಿದೆಯೋ ತೋಚದು ಇಷ್ಟುಹೊತ್ತಿನಲ್ಲಿ ಇವುಗಳ ಕಣ್ಣಿಗೆ ಏನು ಗೋಚರಿಸಿತೋ ತಿಳಿಯದು ಅಮಾವಾಸ್ಯೆಯ ರಾತ್ರಿಗೆ ಕೇವಲ ಒಂದು ರಾತ್ರಿ ಉಳಿದಿರುವುದು ಅದಕ್ಕೇನಾದರೂ ಇವುಗಳು ಈ ರೀತಿ ಬೊಗಳುತ್ತಿವೆಯೇ? ಅಥವಾ ಯಾರಾದರೂ ಇಷ್ಟುಹೊತ್ತಿನಲ್ಲಿ ಓಡಾಡುತ್ತಿದ್ದಾರೆಯೇ? ಏನಾದರೂ ಕಳ್ಳಕಾಕರು ಇದ್ದಿರಬಹುದೇ? ನಿಜವಾಗಿಯೂ ಏನಾದರೂ ದೆವ್ವ ಭೂತಗಳು ಈ ನಾಯಿಗಳ ಕಣ್ಣಿಗೆ ಪ್ರತ್ಯಕ್ಷವಾಗಿಬಿಟ್ಟವೆ? ಹೀಗೆ ಹತ್ತಾರು ಪ್ರಶ್ನೆಗಳು ತಲೆಯನ್ನು ತೋರಿ ನಿದ್ದೆಯನ್ನು ಕೆಡಿಸುತ್ತಿದ್ದವು.
ಹಾಸಿಗೆಯಿಂದ ಎದ್ದು ಮನೆಯ ಮುಖ್ಯದ್ವಾರದ ಪಕ್ಕದ ಕಿಟಕಿಯನ್ನು ತೆಗೆದು ಬೆಳಕು ಹತ್ತಿಸಿ ನೋಡಿದ್ದಾಯಿತು. ನಾಯಿಗಳು ಮತ್ತಷ್ಟು ಜೋರಾಗಿ ಬೋಗಳಲಾರಂಬಿಸಿದವು. ಒಂದೆರಡು ಬಾರಿ ಗದರಿಸಿದಾಗ ಸ್ವಲ್ಪ ಪ್ರಮಾಣದಲ್ಲಿ ನಾಯಿಗಳು ಕೂಗುವುದನ್ನು ನಿಲ್ಲಿಸಿದವು 15 ನಿಮಿಷಗಳ ಬಳಿಕ ಮತ್ತೆ ಕೂಗಲಾರಂಭಿಸಿದವು ಕೋಪ ನೆತ್ತಿಗೇರಿ ಬಾಗಿಲು ತೆಗೆದು ಅವುಗಳನ್ನು ಓಡಿಸಿ ಬರೋಣವೆಂದು ನಿರ್ಧರಿಸಿದೆ. ಬಾಗಿಲು ತೆಗೆಯುವ ಶಬ್ದಕ್ಕೆ ಮನೆಯವರು ಎಚ್ಚರವಾಗಿ ಅವರ ನಿದ್ದೆಯು ಹಾಳಾಗುತ್ತದೆ ಎಂದು ಭಾವಿಸಿ ಸುಮ್ಮನೆ ಹೋಗಿ ಮಲಗಿದೆ.
ಒಂದೈದು ನಿಮಿಷ ನಾಯಿಗಳು ಬೊಗಳುವುದನ್ನು ಮುಂದುವರೆಸಿದವು ಮತ್ತೊಮ್ಮೆ ಗದರಿಸಿದಾಗ ಎಲ್ಲವೂ ಸುಮ್ಮನಾದವು ಇದಾದ ಬಳಿಕ ನಿಶಬ್ದ, ಮೌನ, ಬಳಿಕ ಕಪ್ಪೆಗಳ ಹಿಂಡು ವಟಗುಡಲಾರಂಭಿಸಿದವು, ಪಕ್ಕದ ಮನೆಯ ವಯಸ್ಸಾದ ಮುದುಕ ಇನ್ನೇನು ಸ್ವಲ್ಪ ಹೊತ್ತಿನಲ್ಲಿಯೇ ಸತ್ತು ಹೋಗುವವನ ರೀತಿಯಲ್ಲಿ ಕೆಮ್ಮುತ್ತಿದ್ದ, ಇನ್ನೆಲ್ಲೋ ದೂರದಲ್ಲಿ ಬೆಕ್ಕುಗಳು ಅರಚುತ್ತಿದ್ದವು, ಇನ್ನಾರದೋ ಮನೆಯಲ್ಲಿ ನಲ್ಲಿಯ ನೀರು ಒಂದೇ ಸಮನೆ ಸೋರಿಹೋಗುತ್ತಿತ್ತು. ಬಾವಲಿಗಳು ಚಿರುತಿದ್ದವು. ಈ ಎಲ್ಲ ಶಬ್ದಗಳ ನಡುವೆ ನಿದ್ದೆ ಸಂಪೂರ್ಣವಾಗಿ ಭಗ್ನಗೊಂಡು ಹಾಸಿಗೆ ಮೇಲೆ ಹೊರಳಾಡುವಂತೆಮಾಡಿತು.
ಸಾಮಾನ್ಯವಾಗಿ ರಾತ್ರಿ ಹೊತ್ತು ನಾಯಿಗಳು ಬೊಗಳುತ್ತಿದ್ದವು ಆದರೆ ಎಂದೂ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ ಆದರೆ ಇಂದು ಬೊಗಳಿದ ನಾಯಿ ನಮ್ಮ ರಸ್ತೆಯದ್ದೆ ಆಗಿತ್ತು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರಿಂದಲೂ ಕೂಡ ಪ್ರೀತಿಯನ್ನು ಸಂಪಾದಿಸಿತ್ತು. ಇದಕ್ಕೊಂದು ನಿಯತ್ತಿನ ಬುದ್ಧಿ ಇತ್ತು ಅದರ ಊಟದ ಬಟ್ಟಲಿಗೆ ಹಾಕಿದರೆ ಮಾತ್ರವೇ ಅದು ಊಟ ಮಾಡುತ್ತಿತೆ ಹೊರತು ಯಾವ ಮಕ್ಕಳ ಕೈಯಿಂದ ಎಂದೂ ಬಿಸ್ಕೆಟ್ ಆಗಲಿ ಮತ್ತೊಂದನ್ನೇ ಆಗಲಿ ಕಿತ್ತು ತಿಂದಿರುವುದನ್ನು ಯಾರೂ ನೋಡಿರಲಿಲ್ಲ. ಮಕ್ಕಳಿಗೂ ಈ ನಾಯಿಯನ್ನು ಕಂಡರೆ ಅಷ್ಟೇ ಅಕ್ಕರೆ. ಮಕ್ಕಳು ಆಟವಾಡುತ್ತಿರುವಾಗ ಅವರ ಬಳಿ ಹೋಗುತ್ತಿತ್ತು ಮಕ್ಕಳೆಲ್ಲರೂ ಸೇರಿ ಅದಕ್ಕೆ ಕುಂಕುಮ ಬಳಿದು ಕೂದಲು ಬಾಚಿ ಕಳಿಸುತ್ತಿದ್ದರು. ಯಾರಾದರೂ ದೊಡ್ಡವರನ್ನು ಕಂಡರೆ ಬಾಲಮುದುಡಿಕೊಂಡು ಅವರ ಹಿಂದೆ ನಡೆದುಕೊಂಡು ಹೋಗುತ್ತಿತ್ತು.
ಈ ಹೆಣ್ಣು ನಾಯಿ ಮೂಲತಃ ನಮ್ಮ ನಗರದೇನಲ್ಲ. ಯಾರದೋ ಶ್ರೀಮಂತರ ಮನೆಯವರದಾಗಿರಬೇಕೆಂದೆನಿಸುತ್ತದೆ. ಈಗ ಇದಕ್ಕೆ ಒಂದು ಹತ್ತು ವರ್ಷದ ಆಜುಬಾಜಿನ ವಯಸ್ಸಾಗಿರಬಹುದು. ಎಂದೋ ತಪ್ಪಿಸಿಕೊಂಡು ನಮ್ಮ ರಸ್ತೆಗೆ ಸೇರಿ ಅದು ಸುಮಾರು ಏಳು ವರ್ಷಗಳನ್ನೇ ಕಳೆದಿತ್ತು. ಆಯಾಸಗೊಂಡ ನಾಯಿಯನ್ನು ಕಂಡು ಯಾರೋ ಎರಡು ಮೂರು ದಿನ ಹಾಲು ನೀಡಿದ್ದರಿಂದ ಈ ರಸ್ತೆಯ ಸ್ವಂತ ನಾಯಿಯಾಗಿ ಉಳಿಯಿತು. ದೀಪಾವಳಿಯ ಪಟಾಕಿ ಶಬ್ದವೆಂದರೆ ಇದಕ್ಕೆ ಬಹಳ ಹೆದರಿಕೆ ಕೆಲವು ವರ್ಷಗಳ ಹಿಂದೆ ಪಟಾಕಿಯ ಶಬ್ದ ಮಿತಿಮೀರಿದಾಗ ಎಲ್ಲೋ ಕಾಣೆಯಾಗಿತ್ತು. ಮೂರ್ನಾಲ್ಕು ದಿನ ಯಾರ ಕಣ್ಣಿಗೂ ಬಿದ್ದಿರಲಿಲ್ಲ, ಮಕ್ಕಳೆಲ್ಲರೂ ಹುಡುಕಲಾರಂಭಿಸಿದರು ಯಾರೋ ದಾರಿಹೋಕರ ಕಣ್ಣಿಗೆ ರಾಜಕಾಲುವೆಗಳ ಕೆಸರಿನಲ್ಲಿ ಸಿಲುಕಿಕೊಂಡಿದ್ದ ನಾಯಿಯನ್ನು ಕಂಡರು. ಇದಾದಬಳಿಕ ಕೆಸರಿನಲ್ಲಿ ಸಿಲುಕಿದ ಈ ನಾಯಿಗೆ ಬಿಸಿನೀರಿನ ಸ್ನಾನ ಹಾಲು, ಬನ್ನು, ಬಿಸ್ಕೆಟ್ಟು ಎಲ್ಲವನ್ನೂ ನೀಡಿದ್ದರಿಂದ ಮಾರನೆದಿನ ಎದ್ದು ನಡೆಯಲಾರಂಭಿಸಿತು. ಇಂತಹ ಅನೇಕ ಘಟನೆಗಳಿಂದಾಗಿ ಈ ನಾಯಿ ಎಲ್ಲರಿಗೂ ಚಿರಪರಿಚಿತ. ಇಷ್ಟೆಲ್ಲಾ ಪ್ರೀತಿಪಾತ್ರವಾದ ನಾಯಿಗೆ ಎಲ್ಲರೂ ಮುದ್ದಾಗಿ ಅವಲಕ್ಕಿ ಎಂದು ಕರೆಯುತ್ತಿದ್ದರು.
ಈ ನಾಯಿ ಬೊಗಳಿದ್ದರಿಂದಲೇ ನನಗೆ ಸಂಶಯವಿನಿಸಿತೆ ಹೊರತು ಮತ್ತೇನಲ್ಲ. ಹೇಗೋ ರಾತ್ರಿ ಕಳೆದು ಬೆಳಕರೆಯಲಾರಂಭಿಸಿತು ಸುಮಾರು 5.30 ಬೆಳಗಿನ ಜಾವ ಒಂದು ಕಡೆ ಕೋಳಿಗಳು ಕೂಗುತ್ತಿದ್ದವು ಇನ್ನೊಂದು ಕಡೆ ನವಿಲು, ಪಕ್ಷಿಗಳು ಇoಪಾದ ಗಾನವನ್ನು ಮೊಳಗಿಸುತ್ತಿದ್ದವು. ಹಸುಗಳು ಅಂಬಾ ಎಂದು ಕೂಗುತ್ತಿದ್ದವು ಅಲ್ಲಲ್ಲಿ ನಾಯಿಗಳು ನಗರದ ಪ್ರದಕ್ಷಿಣೆ ಮಾಡುತ್ತಿದ್ದವು. ಈ ಹಸುಗಳನ್ನು ಸಾಕಿದವರು ಒಂದು ಹಸಿವಿಗೆ ಒಂದು ನಾಯಿಯಂತೆ ಹಸುಗಳು ಮೇಯಲು ಹೋದಾಗ ಅವುಗಳನ್ನು ಕಾಯುವಂತೆ ನಾಯಿಗಳನ್ನು ಪಳಗಿಸಿದ್ದರು ಈ ರೀತಿಯ ನಾಯಿಗಳೇ 15ರಿಂದ 20ರ ಮೇಲಿತ್ತು.
ದನಕಾಯುವ ಕಾಯಕದಲ್ಲಿ ಪಳಗಿದ್ದ ನಾಯಿಗಳ ಪೂರ್ವಜರೆಲ್ಲರೂ ಇಲ್ಲಿಯ ಗದ್ದೆ ತೋಟಗಳಲ್ಲಿ ಹಾರಿ, ನೆಗೆದು, ನುಸುಳಿ ಬೆಳೆದಿದ್ದವು ಎಂತಹ ಕಷ್ಟದ ಪರಿಸ್ಥಿತಿಯಲ್ಲಿಯೂ ಗೆದ್ದು ಬರುತ್ತಿದ್ದವು. ಇಲ್ಲಿಯ ಹಾವು-ಮುಂಗುಸಿ, ತೋಳಗಳು ಜೊತೆ ಸೆಣೆಸಾಡಿ ಜಯಶಾಲಿಯಾಗಿದ್ದವು. ಎಲ್ಲಾ ಸೂಕ್ಷ್ಮತೆಯನ್ನು ಗ್ರಹಿಸುವಂತಹ ಪ್ರಾಣಿಗಳಾಗಿದ್ದವು.
15 ರಿಂದ 20 ವರ್ಷಗಳ ಹಿಂದೆ ಈ ಪ್ರದೇಶದ ಒಂದು ಭಾಗದಲ್ಲಿ ಭತ್ತ, ಕಬ್ಬನ್ನು ಬೆಳೆಯುತ್ತಿದ್ದರು. ಮತ್ತೊಂದು ಕಡೆ ಪುದಿನಾ, ಮೂಲಂಗಿ, ಸೊಪ್ಪು, ತರಕಾರಿಗಳನ್ನು ಕೂಡ ಬೆಳೆಯುತ್ತಿದ್ದರು. ಇದರ ಪಕ್ಕದಲ್ಲಿಯೇ ಮರಗಳು ಒತ್ತೊತ್ತಾಗಿ ಬೆಳೆದು ಕಾಡಿನಂತೆ ಗೋಚರಿಸುತ್ತಿತ್ತು ನೂರಾರು ವರ್ಷಗಳ ದೈತ್ಯ ಮರಗಳು ಇಲ್ಲಿದ್ದವು. ಇನ್ನ ಸುತ್ತಮುತ್ತಲು ತೆಂಗು, ಬಾಳೆ, ಅಡಿಕೆ, ವೀಳ್ಯ, ಮಾವು, ಹಲಸು, ಸೀಬೆ, ಹೇರಳಿ, ಬ್ಯಾಲ, ಬಿದಿರಿನ ಜೊತೆಗೆ ಅರಳಿ, ಹತ್ತಿ,ಆಲದ ಮರಗಳನ್ನೊಳಗೊಂಡ ತೋಟಗಳನ್ನು ಮಾಡಿಕೊಂಡಿದ್ದರು. ನವಿಲು, ಜಿಂಕೆ, ಹಾವು-ಮುಂಗುಸಿ, ತೋಳ, ಮೊಲ ಇನ್ನಿತರ ಪ್ರಾಣಿಗಳು ಇಲ್ಲಿಯ ಸಾಮಾನ್ಯ ಪ್ರಾಣಿಗಳಾಗಿದ್ದು. ಮೂವತ್ತರಿಂದ ನಲವತ್ತು ಬಗೆಯ ಪಕ್ಷಿಗಳು ಇಲ್ಲಿದ್ದವು. ಇದರ ಪಕ್ಕದಲ್ಲಿಯೇ ಒಂದು ವಿಶಾಲ ಕೆರೆಯುಇತ್ತು ಏಡಿ, ಮೀನು, ಆಮೆ, ನೀರುಹಾವು ಹೀಗೆ ಇನ್ನಿತರ ಹತ್ತಾರು ಜಲಚರಗಳು ವಾಸಿಸುತ್ತಿದ್ದವು. ವರ್ಷವಿಡಿ ಈ ಕೆರೆ ಸುತ್ತಮುತ್ತಲ ಪ್ರದೇಶಕ್ಕೆ ಜೀವಜಲವನ್ನು ಸರಬರಾಜು ಮಾಡುತ್ತಿತ್ತು.
ಒಂದಾನೊಂದು ಕಾಲಕ್ಕೆ ಮೈಸೂರು ನಗರದ ಹೊರವಲಯವೆನಿಸಿಕೊಂಡಿದ್ದ ಈ ಪ್ರದೇಶ ಇಂದು ನಗರದ ಪರಿಧಿಯೊಳಗೆ ಸೇರಿಕೊಂಡಿದೆ. ಬಹಳ ಹಿಂದೆ ಹತ್ತಿಪ್ಪತ್ತು ಮನೆಗಳು ಮಾತ್ರ ಎಲ್ಲಿದ್ದವು. ಸುಣ್ಣ ತಯಾರಿಸುವುದು ಇಲ್ಲಿಯವರ ಕಾಯಕವಾಗಿತ್ತು. ಪ್ಲೇಗ್ ಮಹಾಮಾರಿಯ ಹೊಡೆತದಿಂದಾಗಿ ಇಲ್ಲಿಯ ಜನ ಸ್ಥಳಾಂತರಿಸಿದರು. ಇಂದಿಗೂ ಅವರು ವಾಸಿಸಿದಂತಹದ ಮನೆ, ಸುಣ್ಣ ಸುಟ್ಟ ಜಾಗ ಎಲ್ಲವೂ ಪಾಳುಬಿದ್ದ ಸ್ಥಿತಿಯಲ್ಲಿ ಇದೆ. ಸ್ಟೀಮ್ ಎಂಜಿನ್ ಬೂದಿಯನ್ನು ತಂದು ಈ ಪ್ರದೇಶಕ್ಕೆ ಸುರಿಯುತ್ತಿದ್ದರಿಂದ ಬೂದಿಗುಂಡಿ ಎಂದು ಈ ಪ್ರದೇಶಕ್ಕೆ ಕರೆಯುತ್ತಾರೆ.
ನಗರ ಬೆಳೆಯತೊಡಗಿತು, ಜನದಟ್ಟಣೆ ಹೆಚ್ಚಾಗತೊಡಗಿತು, ಇದರ ಸಲುವಾಗಿ ಮನೆಗಳು ಹೆಚ್ಚಾದವು, ಮನೆಗಳು ಹೆಚ್ಚಾದ್ದರಿಂದ ವಾಹನಗಳು ಕೂಡ ಹೆಚ್ಚಾದವು, ಇಷ್ಟೆಲ್ಲಾ ಪ್ರದೇಶಕ್ಕೆ ಇದ್ದಿದ್ದು ಎರಡೇ ಎರಡು ಕೊಳವೆ ಬಾವಿಗಳು ನಂತರ ರಸ್ತೆಗೊಂದು ನಲ್ಲಿಯಂತೆ, ಇಂದು ಪ್ರತಿಯೊಂದು ಮನೆಗೂ ನೀರು ಸರಬರಾಜಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಎಲ್ಲರ ಮನೆಯಲ್ಲಿಯೂ ಟಿವಿ, ಪ್ರಿಡ್ಜ್, ವಾಷಿಂಗ್ ಮಷೀನ್ಗಳು ರಾರಾಜಿಸುತ್ತಲಿವೆ.
ನಟ್ಟನಡು ಬೇಸಿಗೆಯಲ್ಲಿಯೂ ಭೂಮಿಗೆ ಬೆಳಕು ಸ್ಪರ್ಶಿಸಲಾಗದ್ದಂತಿದ್ದ ತೆಂಗು, ಬಾಳೆ, ಅಡಕೆ, ಪ್ರದೇಶ ಇಂದು ಅನೇಕ ಬಡಾವಣೆಗಳಾಗಿ ಮಾರ್ಪಾಡುಗೊಂಡಿದೆ[ ಹೆಸರುಗಳು ಬೇಡ]. ಇನ್ನು ಕೆಲ ಭಾಗದ ಜಾಗ ಮಕ್ಕಳು, ಮೊಮ್ಮಕ್ಕಳು ಹಾಗೂ ಮರಿಮಕ್ಕಳಿಗಾಗಿ ಛಿದ್ರಗೊಂಡಿದೆ. ಕೆರೆಗೆ ನೀರು ಹರಿದು ಬರುತ್ತಿದ್ದ ಜಾಗದಲ್ಲಿ ದೊಡ್ಡ ದೊಡ್ಡ ಅಪಾರ್ಟ್ಮೆಂಟ್ಗಳು ತಲೆಯೆತ್ತಿದೆ. ಇದರಿಂದ ಕೆರೆಯ ಕುರುಹೇ ಇಲ್ಲದಂತೆ ಆಗಿದೆ. ಒತ್ತೊತ್ತಾಗಿ ಕಾಡಿನಂತೆ ಗೋಚರಿಸುತ್ತಿದ್ದ ವೃಕ್ಷಗಳನ್ನು ನಾನಾ ಕಾರಣಗಳಿಂದ ಕಡಿಯಲಾಗಿದೆ. ಮೂರರಿಂದ ನಾಲ್ಕು ಅಡಿ ಬೆಳೆಯುತ್ತಿದಂತಹ ಹುತ್ತಗಳು ಸಂಪೂರ್ಣವಾಗಿ ಮರೆಮಾಚಿದೆ. ಮನೆಗೊಂದು ಬೋರ್ವೆಲ್ಗಳು ಬಂದು ಅಂತರ್ಜಲ ಬತ್ತಲಾರಂಭಿಸಿದೆ. ಡಾಂಬರು ರಸ್ತೆ ಎಲ್ಲ ಪ್ರದೇಶಕ್ಕೂ ವಿಸ್ತರಿಸಿದೆ. ಬಿದ್ದ ಒಂದು ಹನಿ ಮಳೆ ನೀರು ಕೂಡ ಎಲ್ಲಿಯೂ ಇಂಗದ ಹಾಗೆ ಮೋರಿ ಸೇರುವ ಯೋಜನೆ ನಡೆಯುತ್ತಿದೆ. ಮರಗಳಿದ್ದ ಜಾಗದಲ್ಲಿ ಲೈಟ್ ಕಂಬಗಳು ರಾರಾಜಿಸುತ್ತಿವೆ.
ನಗರೀಕರಣದಿಂದಾಗಿ ಸಂಪೂರ್ಣ ಹಸಿರು ಹೊಂದಿದ ಪ್ರದೇಶ ಛಿದ್ರಗೊಂಡಿದೆ. 40ಕ್ಕೂ ಹೆಚ್ಚು ಬಗೆಯ ಪಕ್ಷಿಗಳು ಇದ್ದಂತಹ ಈ ಪ್ರದೇಶ ಅವುಗಳ ಆಹಾರ ವಸತಿಯ ಕೊರತೆಯಿಂದಾಗಿ ಇಪ್ಪತ್ತಕ್ಕೆ ಇಳಿದಿದೆ ಪ್ರತಿದಿನದ ಕೂಳಿಗಾಗಿ ಕಾಯುತ್ತಿರುವ ಈ ಪಕ್ಷಿಗಳಿಗೆ ಉತ್ತರಿಸುವವರಾರು? ಮೊಲ, ಜಿಂಕೆ, ತೋಳ, ಮುಂಗುಸಿಗಳು ಇಂದು ಕುರುಹಿಲ್ಲದಾಗಿವೆ ಇವುಗಳಿಗೆ ಉತ್ತರಿಸುವವರಾರು? ನಾಲ್ಕು ಅಡಿಯವರೆಗೆ ಬಹಳ ಸುಂದರವಾಗಿ ಹುತ್ತವನ್ನು ಕಟ್ಟುತ್ತಿದಂತಹ ಗೆದ್ದಲು ಹುಳುಗಳು ರಾಸಾಯನಿಕಗಳ ಬಳಕೆಯಿಂದ ಸಾವನ್ನಪ್ಪಿದೆ ಇವುಗಳಿಗೆ ಉತ್ತರಿಸುವವರಾರು? ಸದಾ ನೀರಿನಲ್ಲಿ ಆಟವಾಡಿಕೊಂಡಿದಂತಹ ಕಪ್ಪೆ, ನೀರುಹಾವು, ಮೀನು, ಆಮೇಗಳು ಕೆರೆ ಬತ್ತಿದ್ದರಿಂದ ಕಣ್ಮರೆಯಾಗಿದೆಯಲ್ಲಾ ಇವುಗಳಿಗೆ ಉತ್ತರಿಸುವವರಾರು? ಸದಾ ಪರೋಪಕಾರಿಯಾಗಿ ಪರಿಸರಕ್ಕೆ ಪ್ರಾಣಿ ಪಕ್ಷಿಗಳಿಗೂ ಮಾನವರಿಗೂ ಹಣ್ಣು, ಶುದ್ಧಗಾಳಿ, ನೆರಳು ನೀಡುತ್ತಿದ್ದ ಅಜಾನುಬಾಹು ಮರಗಳು ಧರೆಗುರುಳಿತಲ್ಲ ಅವುಗಳಿಗೆ ಉತ್ತರಿಸುವವರಾರು? ಇಂದಿಗೂ ಪ್ರತಿದಿನವೂ ವಾಹನಗಳಿಗೆ ಸಿಲುಕಿ ಕಪ್ಪೆ, ಹಾವುಗಳು ಸಾಯುತ್ತಿವೆಯಲ್ಲ ಇವುಗಳಿಗೆ ಉತ್ತರಿಸುವವರಾರು?
ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವವರು ಇಂದು ಯಾರು ಇಲ್ಲ ಆದರೂ ಸಹ ಕರ್ನಾಟಕ ಅರಣ್ಯ ಇಲಾಖೆಯವರು ಸಣ್ಣ ಪ್ರಮಾಣದಲ್ಲಿ ಸಣ್ಣ ಪ್ರದೇಶದಲ್ಲಿ ಸಾಲುಮರದ ತಿಮ್ಮಕ್ಕ ಉದ್ಯಾನವನವನ್ನು ಮಾಡಿದ್ದಾರೆ ಇದು ನಿಜಕ್ಕೂ ಶ್ಲಾಘನೀಯ. ಇದರಿಂದ ವಿವಿಧ ರೀತಿಯ ಪಕ್ಷಿಗಳು ಮತ್ತೆ ಬರಲಾರಂಭಿಸಿವೆ. ಕಣ್ಮರೆಯಾಗಿದ್ದ ನವಿಲುಗಳು ಮತ್ತೆ ಬರಲಾರಂಭಿಸಿದೆ.ಈ ಮಾದರಿಯನ್ನು ಸುತ್ತಮುತ್ತಲೂ ಛಿದ್ರಗೊಂಡಿರುವ ಪ್ರದೇಶಕ್ಕೆ ವಿಸ್ತರಿಸಿದ್ದೆಆದಲ್ಲಿ ಕುರುಹು ಇಲ್ಲದೆ ಬತ್ತಿರುವ ಕೆರೆಯಲ್ಲಿ ನೀರು ತುಂಬಬಹುದು, ಕಣ್ಮರೆಯಾದ ಪ್ರಾಣಿಗಳು ಮತ್ತೆ ತಮ್ಮ ಪ್ರದೇಶಕ್ಕೆ ಹಿಂದಿರುಗಬಹುದು. ಆಹಾರ ಸರಪಳಿ ಸರಿಹೊಂದದೆ ಜೀವ ವೈವಿಧ್ಯ ಸುಭಿಕ್ಷವಾಗಿರುವುದು. ಇದರಿಂದ ನಗರದ ಜನರಿಗೆ ಶುದ್ಧ ಗಾಳಿಯೂ ದೊರಕಿದಂತಾಗುತ್ತದೆ. ನಿಧಾನವಾಗಿ ಅಂತರ್ಜಲ ಮಟ್ಟವು ಹೆಚ್ಚಗಬಹುದು. ಜೀವವೈವಿಧ್ಯವೆಂದರೆ ಏನು ಎಂದು ತಿಳಿಯದ ಜನರಿಗೆ ಜ್ಞಾನಾಭಿವೃದ್ಧಿಯ ಪ್ರದೇಶವಾಗಬಹುದು. ಸಮಯ ಓಡುತ್ತಲಿದೆ ನಗರದ ಬೆಳವಣಿಗೆಯ ದಿನೇ ದಿನೇ ಹೆಚ್ಚಾಗುತ್ತಲಿದೆ. ಇಂದು ಪರಿಸರಾಸಕ್ತರು ಅರಣ್ಯ ಇಲಾಖೆಯವರು ತೆಗೆದುಕೊಳ್ಳುವ ನಿರ್ಧಾರಗಳು ಮುಂದಿನ ತಲೆಮಾರುಗಳಿಗೆ ಮಾದರಿಯಾಗಬಹುದು. ಈ ಪ್ರಯೋಗವನ್ನು ಕೈಗೊಳ್ಳಲು ಇದೇ ಸರಿಯಾದ ಸಮಯ. ಸಾಮೂಹಿಕವಾಗಿ ಸಾರ್ವಜನಿಕರು,ಪರಿಸರಾಸಕ್ತರು ಹಾಗೂ ಅರಣ್ಯ ಇಲಾಖೆಯವರು ಕೈ ಜೋಡಿಸಿ ಈ ಮಾದರಿಯನ್ನು ಮಾಡಿದ್ದೆ ಆದಲ್ಲಿ ದೇಶಕ್ಕೆ ಮಾದರಿಯಾಗಬಹುದು ಒಮ್ಮೆ ಯೋಚಿಸಿ.
ಧನ್ಯವಾದಗಳು.

Uttharisalu samayada avashyakathe ella
ReplyDeleteKaarana kaledogiruvudu bari samayavalla ....samaaja !
Adu samayada jothegalla
Tanna aasegalannu eedeerisikolluvudaralli
Thorpadikeya badukalli
Ghanathe emba onalalli
Indhina anaagareekara
Kaiyalli javaabdaarigalu
Silukive
Aa javaabdaarigala varathaagi
Parisarada sambandagalu
Kanasallu kaanalaagadastu
Doora hulidaagide
Hulidiruvudonde
Namma ulivigaagi
Andare
Parisaropaadiyaagi
Badukuliyalu
Eruvudannaadaru ulisalikke
Prayathna padabekaagide....
Detailed description, good writing
ReplyDeleteDetailed description, good writing
ReplyDeleteDetailed description, good writing
ReplyDeleteNice
ReplyDeleteSpr dude
ReplyDeleteGood thinker
ReplyDeleteSuper
ReplyDelete