Friday, March 11, 2022

ಮಹಾಮಂಗಳಾರತಿಯಾಗದೆ ಪೂಜೆ ಸಂಪನ್ನಗೊಳ್ಳದು.

 

                   
    

                           - ಎಸ್ ಪಿ ತೇಜರಾಜು.

 ಅಸೈನ್ಮೆಂಟ್ ಬರೆಯದೇ ಹೋದರೆ ವಿದ್ಯಾರ್ಥಿಗಳಿಗೆ ಶಿಕ್ಷಕರಿಂದ ಮಹಾಮಂಗಳಾರತಿಯಾಗಿರುತ್ತದೆ, ಮಕ್ಕಳು ಪೋಲಿ ಬೀಳುತ್ತಿದ್ದರೆ ಪೋಷಕರು ಪೂಜೆ ಮಾಡಿಯೇ ಮಾಡುತ್ತಾರೆ, ಆಫೀಸ್ ನಲ್ಲಿ ಕೆಲಸ ಸರಿಹೋಗದೆ ಇದ್ದಾಗ ಮ್ಯಾನೇಜರ್, ಕಳ್ಳರು / ಶಿಷ್ಟಾಚಾರ / ಸಮಾಜದ ವ್ಯವಸ್ಥೆಯನ್ನು ಹಾಳು ಮಾಡುತ್ತಿರುವವರಿಗೆ ಪೊಲೀಸರು, ಹೀಗೆ ನಾನಾ ಹಂತಗಳ ಹುದ್ದೆಗಳಲ್ಲಿ, ನಾನಾ ಹಂತದ ವಯಸ್ಸಿನಲ್ಲಿ ನಾನಾ ವಿಧವಾದ ಪೂಜೆ-ಪುನಸ್ಕಾರ ಮಹಾಮಂಗಳಾರತಿ ನೆರವೇರುತ್ತಿರುತ್ತದೆ. ಇವುಗಳೆಲ್ಲವೂ ಒಂದು ವಿಧವಾದ ಮಂಗಳಾರತಿಯೇ ಆದರೂ ವೈದಿಕ ಸಂಸ್ಕೃತಿಯಲ್ಲಿ ಮತ್ತೊಂದು ಆಯಾಮವೂ ಇದೆ.

ಮನೆಯವರೊಂದಿಗೆ ಯಾವುದಾದರೂ ತೀರ್ಥಕ್ಷೇತ್ರ ಪ್ರವಾಸ ಕೈಗೊಳ್ಳುವಾಗ ವಾಹನಕ್ಕೆ ಪೂಜೆ, ಚಕ್ರ ನಿಂಬೆಹಣ್ಣಿನ ಮೇಲೆ ಸಾಗಿಯೇ ಯಾತ್ರೆ ಪ್ರಾರಂಭಗೊಳ್ಳುವುದು, ಆಯುಧ ಪೂಜೆಯಲ್ಲಿ ಕುಂಬಳಕಾಯಿ ಹೊಡೆಯದೆ ಪೂಜೆ ಸಂಪೂರ್ಣವಾಗದು, ಪೂಜೆಯಿಂದಲೇ ಹೋಮ ಪ್ರಾರಂಭವಾಗುವುದು, ಈ ಪೂಜೆ ಎಂಬ ವಿಷಯ ಅವರವರ ಆಚರಣೆಗಳಿಗೆ ತಕ್ಕಹಾಗೆ ವೈವಿಧ್ಯಮಯವಾಗುತ್ತಾ ಹೋಗುತ್ತದೆ ಕೆಲವರು ಧೂಪ, ಊದುಗಡ್ಡಿ, ತುಪ್ಪದಾರತಿ ಮಾಡ್ತಾರೆ. ಇನ್ನು ಊರುಗಳಲ್ಲಿ ನಡೆಯುವ ಕಾಳಿಯ ಆರಾಧನೆ ಮತ್ತೊಂದು ವಿಧ, ಮೈಮೇಲೆ ದೇವರು ಬರುವುದು, ಯಂತ್ರ-ತಂತ್ರ ಮಂತ್ರಗಳಲ್ಲಿ ಬಲಿಪೂಜೆ ಮಗದೊಂದು ಮುಖ, ಹೀಗೆ ಹತ್ತಾರು ಆಯಾಮಗಳಿದ್ದರೂ ಸಹ ಪೂಜೆ ಮಾಡುವಾಗ ವಿವಿಧ ವಸ್ತುಗಳು ಒಂದು ಕಡೆ ಬಂದು ಸೇರುವುದಂತೂ ನಿಜ.

ಕೆಲವು ಹಿರಿಯರು ಮಾತನಾಡುವುದನ್ನು ಆಲಿಸಿರಬಹುದು, ಯಾರೋ ಹೊರಗಿನ ದೇಶದ ಜನರು ಬಂದರಂತೆ, ಊರ ಜನರನ್ನು ಒಂದು ಕಡೆ ಸೇರಿಸಿ ನಾವು ನಿಮಗೆಲ್ಲಾ ಒಂದು ಮಾಜಿಕ್ ಮಾಡಿ ತೋರಿಸುತ್ತೇವೆ ಎಂದರಂತೆ, ಸುಮಾರು ಹೊತ್ತು ಅನೇಕ ಪ್ರಯೋಗಗಳನ್ನು ಮಾಡಿ ಕೊನೆಯದಾಗಿ ಯಾವುದೋ ಒಂದು ಬಿಳಿ ಪದಾರ್ಥದ ವಸ್ತುವನ್ನು ಡಬ್ಬದಿಂದ ಜೋಪಾನವಾಗಿ ತೆಗೆದು ತಮ್ಮ ಕೈ ಮೇಲೆ ಇಟ್ಟುಕೊಂಡು ಬೆಂಕಿಯನ್ನು ಇನ್ನೇನು ಹತ್ತಿರಕ್ಕೆ ಹಿಡಿಯುತ್ತಿದ್ದಂತೆಯೇ ಹತ್ತಿಕೊಂಡು ಉರಿಯಲು ಆರಂಭವಾಯಿತಂತೆ, ಹೀಗೆ ಉರಿಯುತ್ತಿರುವ ಜ್ವಾಲೆಯನ್ನು ತೆಗೆದುಕೊಂಡು ತಮ್ಮ ನಾಲಿಗೆ ಮೇಲೆ ಇಟ್ಟುಕೊಂಡಂತೆ ಅದನ್ನು ಅಲ್ಲಿಂದ ತೆಗೆದು ನೆಲದ ಮೇಲೆ ಇಡುತ್ತಿದ್ದಂತೆಯೇ ಧಗಧಗನೆ ಉರಿದು ಸ್ವಲ್ಪವೂ ಶೇಷ ಉಳಿಯದಂತೆ ಕಣ್ಮರೆಆಯಿತಂತೆ, ಕಣ್ಣುಮುಂದೆಯೇ ನಡೆದ ಈ ವಿಸ್ಮಯ ಘಟನೆ, ಬಂದವರು ಹಿಂತಿರುಗಿ ಹೋಗಿ ಅನೇಕ ವರ್ಷಗಳ ಆದರೂ ತಮ್ಮನ್ನು ಕಾಡಿ ನಾಲ್ಕಾರು ಜನ ಸೇರಿದಾಗ ಈ ವಿಷಯದ ಮೇಲೆ ಚರ್ಚೆಆಗುತ್ತಿತ್ತು. ಅಂದು ನಮಗೆ ಕಾಡಿದ ಆ ವಸ್ತು ಇಂದು ಜನರಿಗೆ ಸಾಮಾನ್ಯವಾಗಿಹೋಗಿದೆ ಎಂದು ಹೇಳುವುದನ್ನು ಕೇಳಿರಬಹುದು.

ಈ ವಸ್ತು ಮತ್ತಾವುದೂ ಅಲ್ಲ ಪ್ರತಿದಿನವೂ ನಮ್ಮ ಬಳಕೆಯಲ್ಲಿರುವ ಸಸ್ಯಜನ್ಯವಾದ ಕರ್ಪೂರ. ಮನೆಯಲ್ಲಿ ಕುಳಿತು ದಿನಕ್ಕೆ ಐದರಿಂದ ಹತ್ತು ಸಾವಿರ ರೂಪಾಯಿ ಸಂಪಾದಿಸಬಹುದು ಎಂಬ ಜಾಹೀರಾತುಗಳನ್ನು ನೀವು ನೋಡಿರಬಹುದು ಅದರಲ್ಲಿ ಕರ್ಪೂರ ಕಟಿಂಗ್ ಮಿಷಿನ್ ಬಳಸಿ ಗಟ್ಟಿ ಕರ್ಪೂರವನ್ನು ಅಚ್ಚುಗಳಾಗಿ ಕತ್ತರಿಸಿ ನಡೆಸುವ ವ್ಯವಹಾರವು ಒಂದು.

ಕರ್ಪೂರ ಸಸ್ಯಜನ್ಯವಾದದ್ದು ಇದನ್ನು Lauraceae ಕುಟುಂಬಕ್ಕೆ ಸೇರಿದ Cinnamomum Camphora ಎಂಬ ಮರದಿಂದ ತಯಾರಿಸಲಾಗುತ್ತದೆ( ನೋಡಲಿಕ್ಕೆ ಚಿಕ್ಕೆ ಮರೆತಂತೆ ಕಾಣುತ್ತದೆ ). ಇದೊಂದು ನಿತ್ಯಹರಿದ್ವರ್ಣ ಸಸ್ಯ ಜಪಾನ್ ದೇಶದಲ್ಲಿ ಈ ಸಸ್ಯವನ್ನು ನಮ್ಮ ದೇಶದಲ್ಲಿ ಅರಳಿ ಮರವನ್ನು ಪೂಜಿಸಿದ ಹಾಗೆ ಪೂಜಿಸಲಾಗುತ್ತದೆ.

ಸುಮಾರು ಐದುನೇ ಶತಮಾನದಲ್ಲಿದ್ದಂತಹ ಅಮರಸಿಂಹ ಬರೆದ ನಾಗಲಿಂಗ ಶಾಸನದ ಪ್ರಥಮ ಕಾಂಡದ ಧೀವರ್ಗ ಅಧ್ಯಯದ 23ನೇ ಪುಟದಲ್ಲಿ ಪಚ್ಚಕರ್ಪೂರದ ಉಲ್ಲೇಖ ದೊರಕುತ್ತದೆ, ಈ ಕರ್ಪೂರವನ್ನು ಅದರಲ್ಲಿ ದಾಮೋದಿ ಮುಖ ವಾಸನ ಎಂದು ವ್ಯಾಖ್ಯಾನಿಸಲಾಗಿದೆ ಅಂದರೆ ಪರಿಮಳಯುಕ್ತ ದ್ರವ್ಯ, ಹಾಗಾದರೆ ಈ ಕರ್ಪೂರ 5ನೇ ಶತಮಾನದಲ್ಲಿಯೇ ಬಳಕೆಯಲ್ಲಿದ್ದು, ಕಾಲಕ್ರಮೇಣ ಜನರಿಂದಮರೆಯಾಗಿ ಮತ್ತೆ ಈ ಶತಮಾನದಲ್ಲಿ ಜನರ ಬಳಕೆಗೆ ಬಂದಿತೇ ? ಎಂಬ ಸಂಶಯಗಳು ಮೂಡುತ್ತವೆ.


( ಪೂಜನೀಯ ಮರವೆಂದು 1000 ವರ್ಷದ ಮರವನ್ನು ಜಪಾನೀಯರು ಕಡಿಯದೇ ರೈಲ್ವೆ ಸ್ಟೇಷನ್ ಮಧ್ಯದಲ್ಲಿಯೇ ಉಳಿಸಿ ಸಂರಕ್ಷಿಸಿಕೊಂಡು ಬಂದಿರುವುದೇ ಇದಕ್ಕೆ ನಿದರ್ಶನ ) ಈ ಮರ ಜಪಾನ್, ಕೊರಿಯಾ, ವಿಯೆಟ್ನಾಂ, ದೇಶಗಳಲ್ಲಿ ಹೆಚ್ಚು ಕಂಡುಬಂದು ಭಾರತದಲ್ಲಿ ಇವುಗಳು ಬೆಳೆಯುವ ಹವಾಗುಣ ಹೊಂದಿದ್ದರೂ ಕಾಣಿಸಿಕೊಳ್ಳುವುದು ತೀರಾ ಕಡಿಮೆ, ಈ ಸಸ್ಯ ಚೀನಾದ Yangtze ನದಿಯ ಇಕ್ಕೆಲುಗಳೇ ಮೂಲ ಪ್ರದೇಶ ಎಂದು ಹೇಳಲಾಗುತ್ತದೆ. ( ಹಾಗಾಗಿಯೇ ನಮ್ಮ ಅಜ್ಜಂದಿರು ಹೇಳುತ್ತಿದ್ದ ಕರ್ಪೂರವನ್ನು ವಿದೇಶಿಯರು ತಂದಿದ್ದು ಎಂದು ಹೇಳುವ ತರ್ಕ ತಾಳೆಯಾಗುತ್ತದೆ. ಕರ್ಪೂರ ನಮ್ಮ ದೇಶದ್ದಲ್ಲ ಎಂದು ಬೇಸರ ಪಡೆದುಕೊಳ್ಳುವುದು ಬೇಡ, ದೀಪದಷ್ಟೇ  ಉಜ್ವಲವಾಗಿ ಬೆಳಕನ್ನು ನೀಡಬಲ್ಲ ಚಿಗುರಲೆ  ನಮ್ಮ ದೇಶದ್ದು ಒಂದಿದೆ ಆ ಗಿಡದ ಬಗ್ಗೆ ಸವಿಸ್ತಾರವಾಗಿ ಮುಂದೊಂದು ಅಂಕಣದಲ್ಲಿ ತಿಳಿದುಕೊಳ್ಳೋಣ )


ಈ ಕರ್ಪೂರ ಮರದಲ್ಲಿ ರಾಸಾಯನಿಕ ( C10H160 ) ಅಂಶ ಅತ್ಯಧಿಕವಾಗಿದೆ, ಇದು ಮರದ ಕಾಂಡ, ತೊಗಟೆ ಶೇಖರವಾಗಿರುವದಲ್ಲದೆ ಎಲೆಯ ಹಿಂಬದಿಯೂ ಇರುವುದು ಗೋಚರಿಸುತ್ತದೆ. ಕರ್ಪೂರ ತಯಾರಿಕೆಯು ಕೆಲವು ನೈಸರ್ಗಿಕ ಹಂತವನ್ನು ಒಳಗೊಂಡಿದೆ ಮೊದಲು ಬಲಿತ ಮರಗಳನ್ನು ಗುರುತಿಸಿಕೊಂಡು ಕಾಂಡ ಕೊಂಬೆಗಳನ್ನು ಬೇರ್ಪಡಿಸಿಕೊಳ್ಳಬೇಕು, (ಎಲೆಯನ್ನು ಹೊರತುಪಡಿಸಿ) ದಿಮ್ಮಿಗಳನ್ನು ಸಣ್ಣ ಸಣ್ಣ ಚೆಕ್ಕೆ / ಬಿಲ್ಲೆಗಳಾಗಿ ಮಾಡಿಕೊಂಡು ಕುದಿಯುವ ನೀರಿನಲ್ಲಿ ಚೆನ್ನಾಗಿ ಬೇಯಿಸಬೇಕು, ಚೆನ್ನಾಗಿ ಬೆಂದಿರುವುದನ್ನು ಗುರುತಿಸಿಕೊಂಡು ಇಡಿ ಹಂಡೆಯ ಸಮೇತ ತಣ್ಣಗಾಗಲು ಬಿಡಬೇಕು, ಈ ಕಾಯಕ ಬಹಳಷ್ಟು ಅನುಭವ ಹಾಗೂ ಜಾಗರೂಕತೆಯನ್ನು ಬಯಸುತ್ತದೆ. ಹೀಗೆ ತಣ್ಣಗಾಗಲಿಟ್ಟ ಹಂಡೆಯ ಮೇಲೆ ನಿಧಾನವಾಗಿ ತೇಲು ಪದಾರ್ಥ ಮೂಡುತ್ತದೆ ( ಸಮುದ್ರದ ನೀರಲ್ಲಿ ಉಪ್ಪನ್ನು ತೆಗೆಯುವ ಬಗೆಯನ್ನು ನೆನಪಿಸಿಕೊಳ್ಳಿ ) ಈ ಪದಾರ್ಥ ತಯಾರಾಗಲು ಸುಮಾರು ಒಂದು ವಾರ ಸಮಯ ತೆಗೆದುಕೊಳ್ಳುತ್ತದೆ, ನಂತರ ಈ ತೇಲು ಪದಾರ್ಥವನ್ನು ಸಂಗ್ರಹಿಸಿ ವಿವಿಧ ಗಾತ್ರಗಳಿಗೆ ತಕ್ಕಂತೆ ಅಚ್ಚು ಮಾಡಲಾಗುತ್ತದೆ, ಈ ದ್ರಾವಣದಿಂದ ಹೊರಬಂದ ಗಟ್ಟಿ ಪದಾರ್ಥವೇ ಕರ್ಪೂರ,  ಇಂದಿಗೂ ಚೈನಾದಲ್ಲಿ ಅನೇಕ ಮನೆತನದವರು ವಂಶಪಾರಂಪರ್ಯವಾಗಿ ನೈಸರ್ಗಿಕವಾಗಿ ಕರ್ಪೂರವನ್ನು ತಯಾರಿಸುವರು ಕಾಣಸಿಗುತ್ತಾರೆ, ಇದು ಬಹಳ ಮನ್ನಣೆಯನ್ನು ಪಡೆದಿದೆ ಏಕೆಂದರೆ ಅವರು ಯಾವುದೇ ರಾಸಾಯನಿಕ ಬಳಸದೆ ಕರ್ಪೂರ ತಯಾರಿಸುತ್ತಾರೆ, ಇವು   ಪಚ್ಚೆಕರ್ಪೂರವನ್ನೇ ಹೋಲುತ್ತದೆ, ಹಾಗೂ ಮೌಲ್ಯವೂ ಹೆಚ್ಚು.

ಕರ್ಪೂರದ ಬಳಕೆ : ಕರ್ಪೂರವನ್ನು ಅನೇಕ ಬಳಕೆಗೆ ಉಪಯೋಗಿಸಲಾಗುತ್ತದೆ.

ಕರ್ಪೂರ ತಯಾರಿಕೆಯಲ್ಲಿ ಬಹಳಷ್ಟು ಉಪಉತ್ಪನ್ನಗಳು ಕೂಡ ದೊರೆಯುತ್ತವೆ.

1 ಕರ್ಪೂರ ದ್ರಾವಣ ಕೀಲು ನೋವುಗಳ ನಿವಾರಕವಾಗಿ ಬಳಸಲಾಗುತ್ತದೆ. ( ನೀಲಿಗಿರಿ ಎಣ್ಣೆಯ ರೀತಿ )

2 ಇದೇ ಕರ್ಪೂರದ ದ್ರಾವಣವನ್ನು ಮರಗಳಿಗೆ ಕೀಟನಾಶಕವಾಗಿ ಬಳಸಲಾಗುತ್ತದೆ.

3 ಮನೆಯಲ್ಲಿ ಜಿರಳೆಗಳು ಬರಬಾರದೆಂದು ಬಟ್ಟೆಗಳ ಮಧ್ಯದಲ್ಲಿರುವ ಇಡುವ ನುಸಿಗುಳಿಗೆಯೂ ಇದರ ಉತ್ಪನ್ನವೇ.

4 ಇದೊಂದು ಉತ್ತಮ ಶೀತ ನಿವಾರಕ, ದೇವಸ್ಥಾನಗಳಲ್ಲಿ ಕೊಡುವ ತೀರ್ಥದಲ್ಲಿಯೂ ಬಳಕೆಯಲ್ಲಿದೆ. ( ನೆನಪಿರಲಿ ತಿರುಪತಿಯ ಲಾಡು ತಿಂದಿರುತ್ತೇವೆ ಅದರಲ್ಲಿಯೂ ಪಚ್ಚೆ ಕರ್ಪೂರ ಬಳಸಲಾಗಿರುತ್ತದೆ.)

5 ನಮ್ಮ ಸುತ್ತಮುತ್ತಲಿರುವ ವಿಷಕಾರಿ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ, ಆದುದರಿಂದಲೇ ಹೋಮಗಳಲ್ಲಿ ಬಳಕೆಯಾಗುತ್ತದೆ.

6 ಕರ್ಪೂರದ ಜ್ವಾಲೆ ನಮ್ಮ ಸುತ್ತ ಧನಾತ್ಮಕ ಸಂಚಲನ ಮೂಡಿಸುತ್ತದೆ, ಜೊತೆಗೆ ಇದು ಸ್ವಲ್ಪವೂ ಶೇಷ ಉಳಿಯದೆ ಇರುವುದರಿಂದ ದೇವಸ್ಥಾನಗಳ ಪೂಜೆಗಳಲ್ಲಿ ಬಳಸಲಾಗುತ್ತದೆ.

7 ವಾತಾವರಣದಲ್ಲಿ ತೆರೆದು ಇಟ್ಟರೆ ರಾಸಾಯನಿಕ ಕ್ರಿಯೆಗೆ ಒಳಗಾಗಿ ಕರಗಿಹೋಗುತ್ತದೆ.( ತೆರೆದಿಟ್ಟ ಕರ್ಪೂರ ಕರಗಿ ಹೋಗುವುದನ್ನು ನೀವು ಗಮನಿಸಿರುತ್ತೀರಿ )

ಇಂದು ಪ್ರಪಂಚದ ಎಲ್ಲ ಮೂಲೆಗಳಲ್ಲಿಯೂ ಕರ್ಪೂರದ ಮಾರುಕಟ್ಟೆ ತೆಗೆದುಕೊಂಡಿದೆ, ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ (BSE)  ರಿಜಿಸ್ಟರ್ ಆಗಿರುವ ಕಾಂಚಿ ಕರ್ಪೂರಂ 311 ಕೋಟಿ ಮಾರ್ಕೆಟ್ ವ್ಯಾಲ್ಯೂ ಅನ್ನು ಹೊಂದಿದೆ. ( Feb 22 ) ಲಕ್ಷಾಂತರ ಜನರಿಗೆ ಉದ್ಯೋಗವಕಾಶವನ್ನು ಕೊಟ್ಟಿದೆ, ಗುಡಿ ಕೈಗಾರಿಕೆಯಲ್ಲಿ ಇವುಗಳ ಪಾತ್ರವು ಹೆಚ್ಚಾಗುತ್ತಲಿದೆ. ಕರ್ಪೂರ ತಯಾರಿಕೆಯ ಉದ್ಯಮ ಬಹು ಜನರು ಜೀವನದಲ್ಲಿ ಕರಗಿ ಹೋಗಿದೆ, ಚೈನಾ ಇದರ ವ್ಯಾಪಾರದಲ್ಲಿ ಮುಂಚೂಣಿಯಲ್ಲಿದೆ. ನೆನಪಿರಲಿ ಕರ್ಪೂರದ ಮಾರುಕಟ್ಟೆ ಪ್ರಪಂಚದಲ್ಲಿ ಸವಿಸ್ತಾರವಾಗಿ ಹರಡುತ್ತಿರುವುದರಿಂದ Camphor trees  ಮಾರಣಹೋಮ ನಡೆಯುತ್ತಿದೆ ಇದು ಕರ್ಪೂರ ಮಾರುಕಟ್ಟೆಯ ಹಿಂದಿರುವ ಕರಾಳ ಮುಖ.

ಭಾರತೀಯರಿಗಂತೂ ಈ ಕರ್ಪುರ ಜೀವನದಲ್ಲಿ ಬಿಡಿಸಲಾರದಷ್ಟು / ದೂರ ಮಾಡಲಾರದಷ್ಟು ಹಾಸುಹೊಕ್ಕಾಗಿದೆ, ಪೂಜೆ ಅದರಲ್ಲಿಯೂ ಕರ್ಪೂರದ ಮಹಾಮಂಗಳಾರತಿ ಉತ್ಕೃಷ್ಟ ಸ್ಥಾನವನ್ನು ಪಡೆದುಕೊಂಡಿದೆ, ಇದಾದ ನಂತರವೇ ಪೂಜೆಯ ಸಂಪೂರ್ಣವಾಗುವುದು ಎಂಬ ನಂಬಿಕೆ ಬೆಳೆದುಬಂದಿದೆ.( ಕೆಲವು ದೇವರಿಗೆ ಕರ್ಪೂರದ ಪೂಜೆ ನಿಷಿದ್ಧ)

ಬಹು ಆಯಾಮಗಳಲ್ಲಿ ಮಹಾಮಂಗಳಾರತಿಯ ಬಗ್ಗೆ ತಿಳಿದುಕೊಂಡಿದ್ದೇವೆ ಸದ್ಯಕ್ಕೆ ಅಂಕಣಕ್ಕೆ ಇತಿ ಹೇಳುವುದೇ? ಕರ್ಪೂರದೊಂದಿಗೆ ಭಕ್ತಿಭಾವಗಳು ಬೆಳೆದುಬಂದಿವೆ, ಕರ್ಪೂರವನ್ನು ಸುಡುವುದರಿಂದ ನಮ್ಮ ಸುತ್ತಮುತ್ತಲೂ ಧನಾತ್ಮಕ ಶಕ್ತಿ ಸೇರಬಹುದು, ವಾತಾವರಣ ಶುದ್ಧವಾಗಬಹುದು, ನಂಬಿಕೆಗಳನ್ನು ದೂಷಿಸುವುದಂತು ಬೇಡವೇ ಬೇಡ, ಕರ್ಪೂರ ಸುಡುವುದಕ್ಕೂ ಮರ ಕಡಿಯುವುದಕ್ಕೆ ನೇರ ಸಂಬಂಧವಿದೆ ಎಂಬುದನ್ನ ಅರ್ಥಮಾಡಿಕೊಂಡು ನಮ್ಮ ಹಂತದಲ್ಲಿಯೇ ಎಷ್ಟು ಸಾಧ್ಯವೋ ಅಷ್ಟ ಕರ್ಪೂರವನ್ನು ಸುಡುವುದನ್ನು ಕಡಿಮೆ ಮಾಡಿಕೊಂಡರೆ ಮರವು ಉಳಿದಂತಾಗುತ್ತದೆ. 

ನೀವೊಮ್ಮೆ ಯೋಚಿಸಿ,

ಅಂಕಣ ಇಲ್ಲಿಗೆ ಮುಗಿದಿಲ್ಲ, ನೀವ ಗಮನಿಸಿರಬಹುದು ಬೆಂಕಿ ಕಡ್ಡಿಯನ್ನು ಹಚ್ಚಿ ಕೆಳಮುಖವಾಗಿ ಹಿಡಿದುಕೊಂಡಾಗ ಮಾತ್ರ ಅದರ ಕಡ್ಡಿ ಸಂಪೂರ್ಣವಾಗಿ ಉರಿಯುತ್ತದೆ, ಇಲ್ಲವಾದರೆ ಅರ್ಧಕ್ಕೆ ನಿಂತುಹೋಗುತ್ತದೆ, ಗಂಧದ ಕಡ್ಡಿಯನ್ನು ಹಚ್ಚಿ ನೇರವಾಗಿ ಇಡುತ್ತೇವೆ ಹಾಗಾದರೆ ಕೆಳಮುಖವಾಗಿ ಇದು ಹೇಗೆ ಉರಿಯುತ್ತದೆ ? ಇದಕ್ಕೂ ಗುರುತ್ವಾಕರ್ಷಣೆಗೆ ಏನಾದ್ರು ಸಂಬಂಧ ಇದೆಯಾ ? ಬೆಂಕಿಯನ್ನು ಹಚ್ಚಿದ ತಕ್ಷಣ ದೀಪದಂತೆ ಉರಿಯುವ ನಮ್ಮ  ದೇಶಿಯ ಮರದ ಚಿಗುರು  ಯಾವುದು ಅದು ಹೇಗೆ ಉರಿಯುತ್ತದೆ ಎಂದು ಕುತೂಹಲಕಾರಿ ವಿಷಯದ ಬಗ್ಗೆ ಮುಂದೊಂದು ಅಂಗಳದಲ್ಲಿ ತಿಳಿಯೋಣ.


ಧನ್ಯವಾದಗಳು.



1 comment: