Thursday, March 10, 2022

ತಿಳಿಯದೆ ಇರುವುದೇ ? ಮೃಷ್ಟಾನ್ನ ಭ್ರಷ್ಟಭೋಜನದ ಸವಿಯ.

 

                            - ಎಸ್ ಪಿ ತೇಜರಾಜು.

ಅನ್ನ ಎಲ್ಲಿಯದೋ ಭತ್ತ ಎಲ್ಲಿಯದೋ,

ಎತ್ತಣದ ಗೊಬ್ಬರವೋ ಎತ್ತಣದ ನೀರೋ,

ಯಾರಾರ ದುಡಿಮೆಯ ಫಲವೋ ಊಟ ನಮ್ಮದಾಗಲು,

ಋಣವೆಂಬುದು ಕಣ್ಣಿಗೆ ಕಾಣದ ಗುಪ್ತಗಾಮಿನಿ.


 ನಿಮಗೆ ತಿಳಿದಿದೆಯೇ ? ಒಂದು ಹುಲ್ಲು ಜಾತಿಗೆ ಸೇರಿದ  ಸಸ್ಯದಿಂದ ಪ್ರತಿವರ್ಷ 510 ಮಿಲಿಯನ್ ಮೆಟ್ರಿಕ್ ಟನ್ ನಷ್ಟು ಧಾನ್ಯ ಇಳುವರಿ ತೆಗೆಯಲಾಗುತ್ತದೆ, ಇದರ ವ್ಯಾಪಾರದ ಪ್ರತಿವರ್ಷ 396.688 million USD ಪ್ರಪಂಚದಾದ್ಯಂತ ನಡೆಯುತ್ತದೆ. ಅದು ಮತ್ತಾವುದೂ ಅಲ್ಲ ನಮ್ಮ ದೇಶದಲ್ಲಿಯೂ ಬೆಳೆಯಲಾಗುವ ಭತ್ತ. ಈ ಬತ್ತವೆ ಪ್ರಪಂಚದ ಎರಡನೇ ಅತಿ ಹೆಚ್ಚು ಉತ್ಪಾದಿಸಲ್ಪಡುವ ಧಾನ್ಯವಾಗಿದೆ.

ಇಂದು ಅಕ್ಕಿ ಬಳಕೆ ಇರದೇ ಯಾವ ಕಾರ್ಯಕ್ರಮ ತಾನೆ ಪೂರ್ಣವಾಗುತ್ತದೆ ಹೇಳಿ ? ಅಷ್ಟು ಪ್ರಾಮುಖ್ಯತೆಯನ್ನ ಬತ್ತ ಪಡೆದುಕೊಂಡಿದೆ, ಯಾವುದೇ ಕಾರ್ಯಕ್ರಮವಾಗಿರಲಿ ಅಲ್ಲಿ ಅನ್ನದ ಅಡಿಗೆ ತಯಾರಾಗಿಯೇ ಇರುತ್ತದೆ, ದೇವಸ್ಥಾನದಲ್ಲಿ ಪ್ರಸಾದವಾಗಿ ಕೊಡುವ ತುಪ್ಪದೊಂದಿಗೆ ಬೆರೆಸಿದ ಅನ್ನ ಮೃಷ್ಟಾನ್ನವಾಗುತ್ತದೆ, ಮೇಲುಕೋಟೆಯ  ಪುಳಿಯೋಗರೆಗೆ ಅನ್ನ ಬೇಕೇ ಬೇಕು, ಸಂಕ್ರಾಂತಿಗೆ ಪೊಂಗಲ್ ಮಾಡಿದೆ ಹಬ್ಬ ಮುಗಿಯುತ್ತದೆ ? ನಾಗರ ಪೂಜೆಗೆ, ಮಾರಮ್ಮ ದೇವರ ತಮ್ಮಟಕ್ಕೆ, ಹುರಿದಕ್ಕಿ ಪಾಯಸಕ್ಕೆ, ಮೊಡಲು ತುಂಬುವ ಶಾಸ್ತ್ರಕ್ಕೆ, ಅಕ್ಷರ ಅಭ್ಯಾಸಕ್ಕೆ, ಸೀಮಂತ, ಹಸೆಮಣೆ ಶಾಸ್ತ್ರಕ್ಕೆ, ಟೈಂಪಾಸಿಗೆ ತಿನ್ನುವ ಪುರಿಗೆ, ಒಟ್ಟಿನಲ್ಲಿ ಯಾವುದೇ ಕಾರ್ಯಕ್ರಮವಿರಲಿ ಅಲ್ಲಿ ಬತ್ತದ ಬಳಕೆ ಇದ್ದೇ ಇರುತ್ತದೆ.

ನಿಜ ಎಲ್ಲಾ ಜನರು ಅನ್ನವನ್ನು ಸೇವಿಸುತ್ತಾರೆ, ಎಲ್ಲ ಕಾರ್ಯಕ್ರಮದಲ್ಲಿ ಅಕ್ಕಿ ಬಳಕೆಯಾಗುತ್ತದೆ ಎಂಬ ವಿಷಯ ಸಾಮಾನ್ಯವೇ ಆಗಿರಬಹುದು, ಆದರೆ ಸೋಜಿಗದ ಸಂಗತಿಯೆಂದರೆ ಒಂದು ಹುಲ್ಲು ಜಾತಿಗೆ ಸೇರಿದ ಸಸ್ಯದ ತೆನೆಯೊಳಗೆ ನೀರು ಹಾಲಗಿ ಪರಿವರ್ತನೆ ಆಗಬೇಕು, ಆ ಹಾಲು ತೆನೆ ಅಮೃತತ್ವವನ್ನು ಪಡೆದು ಅಕ್ಕಿಯಾಗಿ ಮಾರ್ಪಾಡಾಗಬೇಕು, ಇದುವೇ ಈ ಸಸ್ಯದ ವೈಶಿಷ್ಟ್ಯ, ಹಾಗಾದರೆ ಈ ಮಾರ್ಪಾಡು ಗಿಡದಲ್ಲಿ ಹೇಗೆ ಆಗುತ್ತದೆ ? ಪೈರು ಹೇಗೆ ಬೆಳೆಯುತ್ತದೆ ? ಈ ಹುಲ್ಲಿನ ಮೂಲ ಎಲ್ಲಿಯದು ? ಇಂದು ಮೂರುಹೊತ್ತು ತಿನ್ನಲು ಸಿಗುವ ಅಕ್ಕಿ ಸಾಮಾನ್ಯವಾಗಿದ್ದು ಯಾವಾಗ ? ನಮ್ಮ ದೇಶದಲ್ಲಿ ಪ್ರಖ್ಯಾತವಾಗಿದ್ದು ಹೇಗೆ ? ಬತ್ತದ ರುಚಿ ಕೇವಲ ಮನುಷ್ಯನ ಬಾಯಿಗೆ ಮಾತ್ರ ರುಚಿಸಿದೆಯೇ ? ಇಂತಹ ಹತ್ತಾರು ಕುತೂಹಲಕರ ಸಂಗತಿಯೇ ಈ ಅಂಕಣದ ವಿಷಯ.

ಭತ್ತ ಒಂದು ಅರೆ ಜಲಸಸ್ಯ/ Semi acquatic plant, ನದಿದಂಡೆಯಲ ಇಕ್ಕೆಲಗಳಲ್ಲಿ ಸಾಮಾನ್ಯವಾಗಿ ಬೆಳೆಯುವ ಸಸ್ಯ, ಏಷ್ಯಾ ಖಂಡದ ಭೂಭಾಗದಲ್ಲಿ ನೈಸರ್ಗಿಕವಾಗಿ ಬೆಳೆಯುವ ಸಸ್ಯವಾದರೂ ಇದರ ಮೂಲ ದಕ್ಷಿಣ ಚೈನಾದ ಯಾಂಗ್ಟ್ಜಿ ನದಿಯ ಜಲಾನಯನ ಪ್ರದೇಶ ಎಂದು ತಿಳಿಯುತ್ತದೆ, ಸುಮಾರು 14 ಸಾವಿರ ವರ್ಷಗಳ ಹಿಂದೆ ಭತ್ತವನ್ನು ಕೃಷಿಯಲ್ಲಿ ಬೆಳೆಯಲು ಪ್ರಾರಂಭವಾಯಿತು, ಇದಕ್ಕೂ ಹಿಂದೆ ಬಿದಿರಿನ ಅಕ್ಕಿಯನ್ನು ಆಹಾರವಾಗಿ ಬಳಕೆಯಲ್ಲಿತ್ತು. ಕಾಲಕ್ರಮೇಣ ಭತ್ತ ಏಷ್ಯಾಖಂಡದ ಅನೇಕ ಭೂಭಾಗಗಳಲ್ಲಿ ಬೆಳೆಯಲು ಪ್ರಾರಂಭಿಸಿದರು, ಮುಂದೆ ಜಾಗತಿಕ ಮಾರುಕಟ್ಟೆಯ ತೆರೆಯುತ್ತಾ ಹೋದಂತೆ ಹೆಚ್ಚೆಚ್ಚು ಜನರ ಒಡಲನ್ನು ತುಂಬಲಾರಂಭಿಸಿತು.

ಕಾಡುಗಳಲ್ಲಿ ನೈಸರ್ಗಿಕವಾಗಿ ಬೆಳೆಯುವ ಭತ್ತ ಬಿಸಿಲು ಮಳೆಯನ್ನು ಸಹಿಸಿ ಬದುಕುತ್ತದೆ, ಇದು ಸುಮಾರು 12 ಅಡಿಯವರೆಗೂ ಬೆಳೆಯುವ ಸಾಮರ್ಥ್ಯವಿದೆ, ಬೇರು 8 ಚದರ ಅಡಿ ವಿಸ್ತೀರ್ಣವನ್ನು ಹೊಂದಿ,150 ದಿನಗಳಲ್ಲಿ ತೆನೆ ಹಿಡಿಯುತ್ತದೆ. ಎತ್ತರ ಹಾಗೂ ಸದೃಢವಾಗಿ ಬೆಳೆಯಲು ಆ ಪ್ರದೇಶದ ಹವಾಗುಣ ಹಾಗೂ ಮಣ್ಣಿನ ಸಾವಯವ, ಜೈವಿಕ ಗುಣಮಟ್ಟ ಮುಖ್ಯ ಪಾತ್ರವನ್ನು ವಹಿಸುತ್ತದೆ, ನೈಸರ್ಗಿಕವಾಗಿ 1 ಲಕ್ಷಕ್ಕೂ ಹೆಚ್ಚು ವೈವಿದ್ಯಮಯವಾದ ಭತ್ತ ದೊರೆಯುತ್ತದೆ ಅದರಲ್ಲಿ 40000 ಮಾನ್ಯತೆ ಪಡೆದ ತಳಿಗಳಿವೆ, ಇನ್ನು ತೆನೆಯಲ್ಲಿ ಹಾಲು ಕಟ್ಟುವ ಕ್ರಿಯೆ ಅದ್ಭುತ ಸಂಯೋಜನೆ, ಭತ್ತ ಒಂದು ದೃಮ / Angiosperm ಆಗಿರುವುದರಿಂದ ಭತ್ತದ ತೆನೆಯಲ್ಲಿ ಹೂ ಹಿಡಿದು ಜೇನಿನ ಮೂಲಕ ಪರಾಗಸ್ಪರ್ಶಕ್ರಿಯೆ ನಡೆದು ಹೂ ಭತ್ತವಾಗಿ ಮಾರ್ಪಾಡಾಗುತ್ತದೆ ಇಂತಹ ಬಲು ಸೂಕ್ಷ್ಮವಾದ ಕಾರ್ಯವನ್ನು ಮಾಡುವುದರಲ್ಲಿ ಜೇನುಹುಳುಗಳು ಮಹತ್ತರ ಪಾತ್ರವನ್ನು ವಹಿಸುತ್ತವೆ.


ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಭತ್ತವು ಒಂದು ಹುಲ್ಲಿನ ತಳಿ, ಮೂಲ ಹುಲ್ಲಿನಲ್ಲಿ ಸುಮಾರು 12000 ಜಾತಿಗಳಿವೆ, ಬಿದಿರೂ ಕೂಡ ಹುಲ್ಲಿನ ಜಾತಿಗೆ ಸೇರಿದ್ದು ಈ ಬಿದಿರಿನಲ್ಲಿ ಸುಮಾರು 1000 ಜಾತಿಗಳಿದ್ದು ಭಾರತದಲ್ಲಿಯ ಸುಮಾರು 136 ಪ್ರಭೇದದ ಬಿದಿರು ಕಾಣಸಿಗುತ್ತದೆ.

ಭತ್ತದ ಪರಿಮಳಕ್ಕೆ ಮಾರುಹೋಗದ ಜನರೇ ಇಲ್ಲ, ಭತ್ತ ಮೂಲವಾಗಿ ಕಾಡುಗಳಲ್ಲಿ ಬೆಳೆದು ತೆನೆ ಹಿಡಿಯುವ ಸಂದರ್ಭದಲ್ಲಿ ಸೂಸುವ ಪರಿಮಳ ಎಷ್ಟೇ ದೂರದಲ್ಲಿರುವ ಪ್ರಾಣಿಯನ್ನಾದರೂ ಆಕರ್ಷಿಸದೆ ಇರದು ಆ ಪಟ್ಟಿಯಲ್ಲಿ ಆನೆಯದ್ದೇ ಮೊದಲ ಸ್ಥಾನ, ಜಿಂಕೆ, ಮೊಲ, ಹಂದಿ ಇನ್ನು ಮೊದಲಾದ ಪ್ರಾಣಿ-ಪಕ್ಷಿಗಳನ್ನು ಆ ಜಾಗಕ್ಕೆ ಬಂದು ಸೇರುತ್ತವೆ. ನೀವು ಹಾಕುವ ಅಕ್ಕಿಯನ್ನೇ ತಾನೇ ಗುಬ್ಬಿ ಬಹಳ ಇಷ್ಟಪಟ್ಟು ತಿನ್ನುವುದು ? ಬರಗಾಲದಲ್ಲಿ ಕಾಡಿನಲ್ಲಿ ಬಿರಿದ ಬಿದಿರಕ್ಕಿಯನ್ನು ತಿನ್ನಲು( ಇಲಿ, ಹೆಗ್ಗಣ, ಕ್ರಿಮಿಕೀಟ, ಜಂತುಹುಳುಗಳು) ಕಾಡಿನ ಪ್ರಾಣಿಗಳ ಹಿಂಡು ಬಂದು ಸೇರುತ್ತವೆ.

ಬಿದಿರಕ್ಕಿ, ಬತ್ತಕ್ಕಿಂತಲೂ ಬಹಳ ಶ್ರೇಷ್ಠ ಸ್ಥಾನವನ್ನು ಪಡೆದಿದೆ, ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ, ಬೊಜ್ಜು ಕರಗುತ್ತದೆ, ರಕ್ತ ಶುದ್ಧಿಯಾಗುತ್ತದೆ, ಉಸಿರಾಟದ ತೊಂದರೆ ದೂರವಾಗುತ್ತದೆ, ಇದು ಯಥೇಚ್ಛವಾದ ಪೋಷಕಾಂಶವನ್ನು ಒಳಗೊಂಡಿದೆ, ರಾಜಮಹಾರಾಜರು ಇದನ್ನು ಹೆಚ್ಚು ಬಳಸುತ್ತಿದ್ದರು ಆದರೆ ಈ ಅಕ್ಕಿ ( ಸುಮಾರು 30 ಅಥವಾ 40 ವರ್ಷಗಳಿಗೊಮ್ಮೆ ) ಸಿಗುವುದು ಬಹಳ ವರ್ಷಗಳಿಗೆ ಒಮ್ಮೆ ಎಂಬ ಮಿತಿಯಿಂದಾಗಿ ಸಾಮಾನ್ಯ ಭಕ್ತ ಹೆಚ್ಚು ಪ್ರಚಲಿತವಾಯಿತು.

ಮೊದಲು ನಮ್ಮ ಪೂರ್ವಜರು ಕೃಷಿಯಲ್ಲಿ ಭತ್ತವನ್ನು ಸಾವಯವ ರಾಗಿ ಬೆಳೆಯುವ ರೀತಿಯಲ್ಲಿ ಹೊಲದಲ್ಲಿ ಬೆಳೆಯಲು ಪ್ರಾರಂಭಿಸಿದರು ( ಫುಕೋಕು ಅವರ ಒಂದು ಹುಲ್ಲಿನ ಕ್ರಾಂತಿ ಪುಸ್ತಕ, ನಾಡೋಜ ನಾರಾಯಣ ರೆಡ್ಡಿಯವರ ನೆಲದೊಡಲ ಚಿಗುರು ಹಾಗೂ ಈ ಭೂಮಿ ಈ ಸಸ್ಯ ಪುಸ್ತಕ ಓದಬಹುದು ) ಕಾಲಕ್ರಮೇಣ ಬಹಳಷ್ಟು ಕಾರಣಗಳಿಂದ ಈ ಪದ್ಧತಿ ತಿರುಚಲ್ಪಟ್ಟ, ವೈಜ್ಞಾನಿಕ ಅಥವಾ ಆಧುನಿಕ ಕೃಷಿ ಎಂಬ ಹೆಸರಿನಿಂದಾಗಿ, ಹೊಲದಲ್ಲಿ ಬೆಳೆಯಬಹುದಾದ ಭತ್ತವನ್ನು 24*7 ನೀರು ನಿಲ್ಲುವ ಗದ್ದೆಯಲ್ಲಿ ಬೆಳೆಯಲು ಪ್ರಾರಂಭಿಸಿದರು, ವರ್ಷಕ್ಕೆ ಮೂರು ಬಾರಿ ಬೆಳೆ ತೆಗೆಯಲು ಆರಂಭಿಸಿದರು, ತಳಿ ಅಭಿವೃದ್ಧಿಯಿಂದಾಗಿ 12 ಅಡಿಯವರೆಗೆ ಬೆಳೆಯುತ್ತಿದ್ದ ಸಸ್ಯ ಎರಡು ಅಡಿಗೆ ಇಳಿಯಿತು, 8 ಚದರ ಅಡಿಯವರೆಗೂ ವಿಸ್ತರಿಸಿದ್ದ ಬೇರು 1 ಚದರ ಅಡಿಗೆ ಸೀಮಿತವಾಯಿತು, ಈ ಬೆಳವಣಿಗೆಯ ಕಟಾವಿಗೂ ಅನುಕೂಲವಾಯಿತು, ಇಳುವರಿ ಹೆಚ್ಚಾಗಲೆಂದು ರಾಸಾಯನಿಕ - ಕೀಟನಾಶಕಗಳ ಬಳಕೆ ದುಪ್ಪಟ್ಟಿತು, ಗಿಡಕ್ಕೆ ರೋಗವೇ ಹಿಡಿಯಬಾರದೆಂದು BT ಅಕ್ಕಿ ಚಲಾವಣೆಗೆ ತಂದರು, ಇಷ್ಟೆಲ್ಲ ಬೆಳವಣಿಗೆಯ ಸಲುವಾಗಿ ದೇಶದ ಜನರಿಗೆ ಮೂರು ಹೊತ್ತು ಅನ್ನದ ಊಟ ಸಿಗುವಷ್ಟು ಇಳುವರಿ ಹೆಚ್ಚಾಯಿತು.

ನಿಮ್ಮ ಅಜ್ಜಿ ತಾತಂದಿರು ಮಾತನಾಡುವುದನ್ನ ನೀವು ಕೇಳಿರಬಹುದು,ಇವರು ಕೃಷಿ ಮಾಡುತ್ತಿದ್ದ ಸಂದರ್ಭದಲ್ಲಿ ಅಕ್ಕಿ ಬಳಕೆ ಕೇವಲ ಹಬ್ಬದ ದಿನಗಳಿಗೆ ಮಾತ್ರ ಸೀಮಿತವಾಗಿರುತ್ತಿತ್ತು, ಇನ್ನುಳಿದದಿನಗಳಲ್ಲಿ ರಾಗಿ ಊಟವೇ ಹೆಚ್ಚಾಗಿತ್ತು, ಸಾಂಪ್ರದಾಯಿಕ ದೇಸಿ ಭತ್ತ ಮಾತ್ರ ಅಂದು ದೊರೆಯುತ್ತಿದ್ದುದರಿಂದ ಅಕ್ಕಿ ಬಹಳ ಪರಿಮಳ ಹಾಗೂ ರುಚಿಕರವಾಗಿರುತ್ತಿತ್ತು ಆದರೆ ಇಂದು ದೊರೆಯುತ್ತಿರುವ ಅಕ್ಕಿಯಲ್ಲಿ ರುಚಿ ಇರಲಿ ಯಾವುದೇ ಪೋಷಕಾಂಶವು ಇಲ್ಲ.( ಪಂಚನದಿಗಳ ನಾಡು ಎಂದು ಕರೆದುಕೊಳ್ಳುವ ಪಂಜಾಬ್ ಹಸಿರು ಕ್ರಾಂತಿಯ ರಾಸಾಯನಿಕ ಕೃಷಿಯಿಂದಾಗಿ ಭೂಮಿಯಲ್ಲಿ ಸತ್ವ ಕಳೆದುಹೋಗಿ ಇಂದು ಬೆಳೆ ಬೆಳೆಯಲಾರದ ಪರಿಸ್ಥಿತಿಗೆ ಬಂದು ನಿಂತಿದೆ)

ಭಾರತ ಸ್ವಾತಂತ್ರ ಪಡೆದ ಸಂದರ್ಭದಲ್ಲಿ ಹೆಚ್ಚಾದ ಜನಸಂಖ್ಯೆ ಹಾಗೂ ಆಹಾರ ಧಾನ್ಯಗಳ ಕೊರತೆಯಿಂದಾಗಿ ಜನ ಸಾಯುವ ಹಂತವನ್ನು ತಲುಪಿದಾಗ ಬಂದಿದ್ದೆ ಪಡಿತರ ವ್ಯವಸ್ಥೆ ಇದು ದೇಶದ ಉದ್ದಗಲಕ್ಕೂ ಹರಡಿಕೊಂಡು ಜನರ ಮನ್ನಣೆ ಪಡೆಯಿತು, ಪಡಿತರ ವ್ಯವಸ್ಥೆಯ ಕಾಯಿದೆಯಲ್ಲಿ ಉತ್ತಮ Raw rice ಜನರ ಕೈ ಸೇರಬೇಕು ಎಂದಿದ್ದರೂ ಸಹ ಎಂತಹ ಅಕ್ಕಿ ಜನರ ಕೈ ಸೇರುತ್ತಿದೆ ಎಂದು ನಿಮಗೆ ಅನುಭವವಾಗಿರಬಹುದು.

ಭತ್ತದ ಕೃಷಿ ದೇಶದ ಮೂಲೆ ಮೂಲೆಯನ್ನು ತಲುಪಿದೆ, ಈ ಕೃಷಿಯ ಮಾಹಿತಿಗಾಗಿ ಕೃಷಿ ಇಲಾಖೆಯಲ್ಲಿ ಪ್ರತ್ಯೇಕವಾದ ಮಾಹಿತಿ ಕೇಂದ್ರವಿದೆ, ಭತ್ತ ಖರೀದಿಸಲು ಮಾರಲು ಪ್ರತ್ಯೇಕ  ಮಾರುಕಟ್ಟೆಯ ವ್ಯವಸ್ಥೆಯೂ ಇದೆ, ಉತ್ತಮ ತಳಿ, ರಾಸಾಯನಿಕಗಳ ವ್ಯಾಪಾರ ಜೋರಾಗಿ ನಡೆಯುತ್ತಲೇ ಇದೆ, ಸಂಸ್ಕರಿಸಲು ದೊಡ್ಡ ದೊಡ್ಡ ಕೈಗಾರಿಕೆಗಳಿಗೆ, ಕೈಗಾರಿಕೆಯಲ್ಲಿ ಸಂಸ್ಕರಿಸುವಾಗ ದೊರಕುವ ಸಣ್ಣ ಕಣವು ವ್ಯಾಪಾರವಾಗುತ್ತದೆ, ನುಚ್ಚು ಕೋಳಿಗೆ, ಭತ್ತದ ಹೊಟ್ಟು ಎಣ್ಣೆ ತಯಾರಿಕೆಗೆ, ಪಾಲಿಶ್ ಆದ ಅಕ್ಕಿ ನಮ್ಮ ಕೈ ಸೇರುತ್ತದೆ.

ಪ್ರಪಂಚದಲ್ಲಿ ಪ್ರತಿ ವರ್ಷ450 - 550 ಮಿಲಿಯನ್ ಮೆಟ್ರಿಕ್ ಟನ್ ಭತ್ತದ ಇಳುವರಿ ತೆಗೆಯಲಾಗುತ್ತಿದೆ, ಅದರಲ್ಲಿಯೇ ಚೈನಾ 204.3 ಮಿಲಿಯನ್ ಮೆಟ್ರಿಕ್ ಟನ್ ಉತ್ಪಾದಿಸಿ ಮೊದಲ ಸ್ಥಾನದಲ್ಲಿದ್ದರೆ, ಭಾರತ 152.6  ಮಿಲಿಯನ್ ಮೆಟ್ರಿಕ್ ಟನ್ ಉತ್ಪಾದಿಸಿ ಎರಡನೇ ಸ್ಥಾನದಲ್ಲಿದೆ. ಈ ಉತ್ಪಾದನೆಯಲ್ಲಿ ಸುಮಾರು 52 ಮಿಲಿಯನ್ ಮೆಟ್ರಿಕ್ ಟನ್ ವೆಸ್ಟ್ ಬೆಂಗಾಲ್ ನಲ್ಲಿ ಬೆಳೆಯಲಾಗುತ್ತದೆ, ಉಳಿದ ಭಾಗವನ್ನು ಇತರ ರಾಜ್ಯಗಳಲ್ಲಿ ಇಳುವರಿ ತೆಗೆಯಲಾಗುತ್ತದೆ. ನಮ್ಮ ರಾಜ್ಯದ ಗಂಗಾವತಿಯನ್ನು ರಾಜ್ಯದ ಅನ್ನದ ಬಟ್ಟಲು ಎಂದೂ ಕರೆಯಲಾಗುತ್ತದೆ, ಕಾರಟಗಿಯಲ್ಲಿ ರೈಸ್ ಟೆಕ್ನಾಲಜಿ ಪಾರ್ಕ್ ( Rice technology parak ), ಸ್ಪೆಷಲ್ ರೈಸ್ ಸೋನ್ ( Special rice zone ) ಇದೆ.

ಭತ್ತಕ್ಕೆ ಎಷ್ಟು ಪ್ರಾಮುಖ್ಯತೆ ಇದೆಯೋ ಅಷ್ಟೇ ಅದರ ಹುಲ್ಲಿಗೂ ಕೂಡ ಇದೆ, ಮನುಷ್ಯರು ಪೌಷ್ಟಿಕಾಂಶವಾಗಿ ಹೇಗೆ ಡ್ರೈಫ್ರೂಟ್ಸ್ ಅನ್ನು ತಿನ್ನುತ್ತಾರೆ ಅದೇ ರೀತಿ ಒಣಗಿದ ಹುಲ್ಲನು ದನಗಳು ಇಷ್ಟಪಟ್ಟು ತಿನ್ನುತ್ತವೆ, ಚೆನ್ನಾಗಿ ತೆನೆಹೊತ್ತ ಹುಲ್ಲು ಮನೆಯ ತೋರಣವಾಗುತ್ತದೆ.

ಭತ್ತದ ಸಂರಕ್ಷಣೆಗೆಂದೇ ನಮ್ಮ ಹಳ್ಳಿಮನೆಗಳಲ್ಲಿ ವಾಡೆಗಳಿವೆ.

ಜಪಾನಿನ ಜನರು ಭತ್ತದ ಗದ್ದೆಗಳಲ್ಲಿ ಚಿತ್ರಗಳನ್ನು ಅರಳಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ ಇದನ್ನ ನೋಡಲಿಕ್ಕೆ ಪ್ರಪಂಚದ ನಾನಾ ಮೂಲೆಗಳಿಂದ ಜನ ಬಂದು ಸೇರುತ್ತಾರೆ, ವಹಿವಾಟು ಕೂಡ ನಡೆಯುತ್ತದೆ,

ಒಂದು ವರ್ಷದ ಹಿಂದೆಯಷ್ಟೇ ಕರ್ನಾಟಕದಲ್ಲಿ ಒಬ್ಬ ಕೃಷಿಕ ಬೆಟ್ಟದಮೇಲೆ ಹೃದಯದ ಆಕಾರದ ಗದ್ದೆಯನ್ನು ಮಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇನ್ನು ಕೆಲವು ಬಾರಿ ನೀವು ಗಮನಿಸಿರಬಹುದು ಗದ್ದೆಯ ಮಧ್ಯದಲ್ಲಿ ಹುಲ್ಲುಗಳು ಗಾಳಿಯ ರಭಸಕ್ಕೆ ನೆಲಕೆ ಬಾಗಿರುತ್ತವೆ ಇವುಗಳನ್ನು ಏರಿಯಲ್ ವ್ಯೂ ನಿಂದ ನೋಡಿದಾಗ ಕೆಲವು ಆಕೃತಿಯನ್ನು ಹೋಲುತ್ತವೆ, ಇವುಗಳನ್ನು ಏಲಿಯನ್ ಮಾಡಿದವು ಎಂದು ಕೆಲವರು ನಂಬುವುದು ಉಂಟು. ಹೀಗೆ ಹತ್ತಾರು ವಿಚಾರಗಳು ಭತ್ತಕ್ಕೆ ಸೇರಿವೆ.

ಅಂಕಣದ ವಿಷಯ ಇಷ್ಟಕ್ಕೇ ಮುಗಿಯಲಿಲ್ಲ,

ಯಾವುದೇ ದೇವರ ಪ್ರತಿಷ್ಠಾಪನೆಗೆ, ಆಶೀರ್ವಾದ ಪಡೆಯುವಾಗ ಉಪಯೋಗಿಸಲ್ಪಡುವ ಅಕ್ಷತೆಗೆ, ಪುರಾಣಗಳಲ್ಲಿ ಉಲ್ಲೇಖವಾಗಿರುವ ಕೆಲವು ಘಟನೆಗಳು, ಪುರಂದರದಾಸರ ಘಟನೆಯಲ್ಲಿ ಬರುವ ಭತ್ತ ಹಾಗು  ರಾಗಿಯ ನಡುವೆ ನಡೆದ ಕದನ, ಭತ್ತದ ಉತ್ತಮ ಇಳುವರಿಗಾಗಿ ನಾಗರಾಜನಿಗೆ ಸಲ್ಲುವ ಪೂಜೆ, ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟಲು ರಾತ್ರಿಯೆಲ್ಲ ಮರದ ಅಟ್ಟಣಿಗೆಯ ಮೇಲೆ ಕೂರುವ ಜನ, ಗ್ರಾಹಕನ ಕೈ ಸೇರುವ ತನಕ ಮಧ್ಯದಲ್ಲಿ ಆಗುವ ಪೋಲೊ, ಮೂರು ಹೊತ್ತು ಬಾಯಿ ಚಪಲಕ್ಕೆ ಬಾಸುಮತಿ ಅಕ್ಕಿಯ ಬಿರಿಯಾನಿ ತಿಂದು ಮಧುಮೇಹಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಜನ, ಹೀಗೆ ನೂರಾರು ಘಟನೆಗಳು ಈ ಭತ್ತದೊಂದಿಯ ಬೆರೆತುಹೋಗಿದೆ.



ವೈವಿಧ್ಯಮಯವಾದ ದೇಸಿ ಭತ್ತದ ತಳಿಗಳನ್ನು ಉಳಿಸಬೇಕೆಂದು ಪರಿಶ್ರಮಪಟ್ಟ ಅನೇಕ ರೈತರಿದ್ದಾರೆ, ಸತ್ಯನಾರಾಯಣ ಎಂಬುವರು 650ಕ್ಕೂ ಹೆಚ್ಚು ದೇಸಿ ಜಾತಿಯ ತಳಿಗಳನ್ನು, ಪರಮೇಶ್ ರಾವ್ ಎಂಬುವರು 160, ಶಂಕರಲಿಂಗಟಿ ಎಂಬವರು 108, ದೇಸಿ ತಳಿಗಳನ್ನು ಸಂರಕ್ಷಿಸಿದ್ದಾರೆ, ಭತ್ತ ಒಕ್ಕಣೆ ಮಾಡಿ ಪೂಜೆ ಮಾಡುವ ಸಂದರ್ಭದಲ್ಲಿ ಭತ್ತ ತುಂಬಿರುವ ಕೊಳಗಕ್ಕೆ ಕಲ್ಪರುಕ್ಷ / ತೆಂಗಿನ ಮರದ ಹೊಂಬಾಳೆಯನ್ನು ಇಟ್ಟು ಪೂಜಿಸುತ್ತಾರೆ, ಹಾಗಾಗಿ ಇಲ್ಲಿಯ ಭತ್ತಕ್ಕೂ ಕಲ್ಪವೃಕ್ಷಕ್ಕೂ ಅವಿನಾಭಾವ ಸಂಬಂಧ ಇರಬಹುದೇ ?


ಪ್ರಪಂಚದಲ್ಲಿ ಪ್ರತಿ ವರ್ಷ 510 ಮಿಲಿಯನ್ ಮೆಟ್ರಿಕ್ ಟನ್ ಭತ್ತ ಉತ್ಪತ್ತಿಯಾಗುತ್ತಿದ್ದರೂ ಸಹ ಪ್ರತಿದಿನ 60 ಕೋಟಿ ಜನ ಒಂದು ಹೊತ್ತಿನ ಊಟ ಇಲ್ಲದೆ ಹಸಿದು ಮಲಗುತ್ತಾರೆ, ಇದು ದುರ್ದೈವವೇ ಸರಿ.

ಹಣ ಇರುವವರಿಗೆ ಮತ್ತಷ್ಟು ಹಣ ಸೇರುತ್ತಿದೆ ಇವರು ಯಾವುದೇ ಸಣ್ಣಪುಟ್ಟ ಕಾರ್ಯಕ್ರಮವಾಗಿರಲಿ ಬಹಳ ವಿಜೃಂಭಣೆಯಿಂದ ಮಾಡುತ್ತಾರೆ, ಇವರು ಕಾರ್ಯಕ್ರಮಗಳನ್ನು ಮಾಡುವುದು ಬೇಡ ಎಂದೇನು ಹೇಳುವುದು ಇಲ್ಲ, ಆದರೆ ಇಂತಹ ಕಾರ್ಯಕ್ರಮಗಳಿಗೆ ಬರುವವರು ಎಲೆಯ ಮೇಲೆ ಊಟ ಹಾಕಿಸಿಕೊಂಡು ಬಿಡುವ ವಿಚಾರ ನಿಜಕ್ಕೂ ಖೇದಕರ ಸಂಗತಿ. ಇಂತಹ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಿ ನಾವು ಕೂಡ ಎಷ್ಟು ಬೇಕೋ ಅಷ್ಟನ್ನೇ ಹಾಕಿಸಿಕೊಂಡು ಊಟ ಮಾಡಿದ್ದಲ್ಲಿ ಆರೋಗ್ಯವೂ ಚೆನ್ನಾಗಿರುತ್ತದೆ, ನಮ್ಮವರು ಸುಭಿಕ್ಷವಾಗಿರುತ್ತಾರೆ.

ಕೊನೆದಾಗಿ ಒಂದು ಮಾತು ದಿವಂಗತ ನಾರಾಯಣ ರೆಡ್ಡಿಯವರು ಸದಾ ಒಂದು ಮಾತನ್ನ ಹೇಳುತ್ತಿದ್ದರು,

"ಅನ್ನ ತಿಂದು ಮೆತ್ತಗಾದ ಹಿಟ್ಟು ತಿಂದು ಗಟ್ಟಿಯಾದ" ಈ ಹಾದಿಯಲ್ಲಿ ನಾವು ಕೂಡ ಸಿರಿಧಾನ್ಯಗಳನ್ನು ಆಹಾರದಲ್ಲಿ ಬಳಸೋಣ, ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳೋಣ.

ಅಂಕಣ ರುಚಿಸಿತು ಎಂಬುದು ನನ್ನ ಭಾವನೆ.

ಧನ್ಯವಾದಗಳು.

3 comments:

  1. ಸಾಕಷ್ಟು ಅಧ್ಯಯನ ಮಾಡಿ ಬರೆದಿರುವ ಈ ಅಂಕಣ ತುಂಬಾ ಅರ್ಥಪೂರ್ಣವಾದದ್ದು

    ReplyDelete
  2. ಈ ಅಂಕಣ ಬಹಳ ಚೆನ್ನಾಗಿದೆ

    ReplyDelete