Saturday, February 26, 2022

ಕಲ್ಪನೆಯ ವೃಕ್ಷ ಕಲ್ಪವೃಕ್ಷ.

 

                          - ಎಸ್ ಪಿ ತೇಜರಾಜು.

 ಕಲ್ಪನೆಗೆ ನಿಲುಕಿ ಮಾನವನಿಗೆ ಕಲ್ಪಿಸಿದ್ದನ್ನು ಕೊಡುವ ವೃಕ್ಷ ಕಲ್ಪವೃಕ್ಷವಾಗುತ್ತದೆ, ಪ್ರಪಂಚದ ನಾನಾ ಭಾಗಗಳಲ್ಲಿ ವಿವಿಧ ವೃಕ್ಷಗಳನ್ನು ಪೂಜ್ಯ ಭಾವನೆಯಲ್ಲಿ ಕಾಣಲಾಗುತ್ತದೆ, ಜಪಾನಿನಲ್ಲಿ Camphor ಮರವನ್ನು, ಅಮೆರಿಕದಲ್ಲಿ Oak, Pine medicine ಮರವನ್ನು, ಆಫ್ರಿಕಾ - ಮಡಗಾಸ್ಕರ್ ನಲ್ಲಿ Baobab ಮರವನ್ನು, ಭಾರತದಲ್ಲಿ ಆಲದ ಮರವನ್ನು, ಬೌದ್ಧರು ಬೋಧಿ ವೃಕ್ಷವನ್ನು, ಹೀಗೆ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ವೃಕ್ಷಗಳನ್ನು ಹಾಗೂ ಕೆಲವು ಪ್ರದೇಶಗಳನ್ನು ಪವಿತ್ರವನ ( Sacred groves ) ವೆಂದು ಸನಾತನ ಕಾಲದಿಂದ ಪೂಜಿಸಲಾಗುತ್ತಿದೆ.

ನಮ್ಮ ಭಾರತದಲ್ಲಿ ಕಲ್ಪವೃಕ್ಷಕ್ಕೆ ಬಹಳಷ್ಟು ಕಲ್ಪನೆ ಹಾಗೂ ಸ್ಪಷ್ಟರೂಪತೆ ಇಲ್ಲದ ಕಾರಣ ಬಹಳಷ್ಟು ವೃಕ್ಷಗಳನ್ನು ಪವಿತ್ರ ವೃಕ್ಷಗಳೆಂದು ಪೂಜಿಸಿಕೊಂಡು ಬರುತ್ತಿದ್ದೇವೆ, ಅವುಗಳೆಲ್ಲವೂ ಪರಿಸರ ಸುವ್ಯವಸ್ಥೆಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ, ಈ ಸಸಿಗಳನ್ನು ವನಸ್ಪತಿಗಳು ಅಥವಾ Keystone species ಎಂದು ಕರೆಯಲಾಗುತ್ತದೆ ಅವುಗಳೇ ಅರಳಿ, ಅತ್ತಿ, ಆಲ, ಹಲಸು, ಅಶ್ವತ್ಥ etc,,( ಇಂತಹ ಪವಿತ್ರ ವೃಕ್ಷಗಳನ್ನು ಎಂದೆಂದೂ ಕಡಿಯಬಾರದೆಂದು ಜನರಲ್ಲಿ ನಂಬಿಕೆ ಇದೆ  - ಆದರೆ ಅಭಿವೃದ್ಧಿ ಎಂಬ ಹೆಸರಿನಲ್ಲಿ ಇವುಗಳನ್ನು ಕಡೆಯುತ್ತಿರುವುದು ದುರ್ದೈವವೇ ಸರಿ. )

ಒಂದು ತಲೆಮಾರಿನವರು ನೆಟ್ಟ ಯಾವುದೇ ವೃಕ್ಷವಾಗಿರಬಹುದು ಅದು 3 - 4 ತಲೆಮಾರುಗಳಿಗೆ ಆಹಾರವನ್ನು ಅನೇಕ ಪ್ರಾಣಿ-ಪಕ್ಷಿಗಳಿಗೆ ಗಾಳಿ, ನೆರಳು, ಆಸರೆಯನ್ನು ನೀಡುತ್ತದೆ, ಈ ಪಟ್ಟಿಯಲ್ಲಿ ಅನೇಕ ವೃಕ್ಷಗಳು ಬಂದರೂ ಸಹ ಒಂದು ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ನಿಭಾಯಿಸಬಲ್ಲ ಶಕ್ತಿ ಇರುವುದು ತೆಂಗಿಗೆ ಎಂಬ ನಂಬಿಕೆ ಪೂರ್ವಜರಲ್ಲಿ ಇದ್ದಿದ್ದರಿಂದ ನಾಡಿನ ಉದ್ದಗಲಕ್ಕೂ ತೆಂಗನ್ನು ಕಾಣಬಹುದು.

ತೆಂಗು ನಿತ್ಯಹರಿದ್ವರ್ಣ ಸಸ್ಯ, ವರ್ಷದ 365 ದಿನವೂ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ, ಐದರಿಂದ ಏಳು ವರ್ಷದಲ್ಲಿ ಮೊದಲಿಗೆ ಕಾಯಿ ಹಿಡಿಯಲು ಪ್ರಾರಂಭವಾಗುವ ವೃಕ್ಷ ಒಂದು ಗರಿಗೆ ಒಂದು ಹೊಂಬಾಳೆಯಂತೆ ಮುಂದಿನ 80ರಿಂದ 100 ವರ್ಷಗಳ ಕಾಲ ಕಾಯಿ ಬಿಡುತ್ತಲೇ ಇರುತ್ತದೆ. ಸಾಮಾನ್ಯವಾಗಿ ಇದು ಹೊಳೆದಂಡೆಯ ಪಕ್ಕದಲ್ಲಿ ಸಮುದ್ರದ ಕಿನಾರೆ, ದಡ, ದ್ವೀಪಗಳಲ್ಲಿ ಬೆಳೆದು ಉಪ್ಪು ನೀರನ್ನು ಕುಡಿದು ಸಿಹಿನೀರನ್ನು ಕಾಯಿ ಒಳಗೆ ತುಂಬುವ ಸಾಮರ್ಥ್ಯವನ್ನು ಹೊಂದಿದೆ. ಈ ವೃಕ್ಷಗಳ ಮೂಲ Central Indo Pacific - ಪ್ರದೇಶ ಎಂದು ತಿಳಿಯುತ್ತದೆ, ಈ ಸಾಲಿನಲ್ಲಿ ಭಾರತವು ಒಂದು. ಇವುಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಅರೆಕೆಸಿಯಾ ಕುಟುಂಬಕ್ಕೆ ಸೇರಿದ್ದು, ತಾಳೆ ಮರ ಜಾತಿ ಎಂದು ವರ್ಗೀಕರಿಸಲಾಗಿದೆ, ಈ ಜಾತಿಗೆ ಸೇರಿದ ವೃಕ್ಷಗಳ ಲಕ್ಷಣಗಳೆಂದರೆ ಕಾಂಡದ ಮಧ್ಯದಲ್ಲೆಲ್ಲಿಯೂ ಕವಲೊಡೆದ, ದಪ್ಪ ಕಾಂಡದ, ನಾರಿನಿಂದ ಕೂಡಿದ, ದೊಡ್ಡ ಎಲೆಗಳುಳ್ಳ ಸಸ್ಯಗಳು.ಈ ವೃಕ್ಷವೊಂದು Angiosperm  ಎಂದರೆ ಹೂ ಹಿಡಿದು ನಂತರ ಕಾಯಿ ಆಗುತ್ತದೆ, ಎಳನೀರು ತುಂಬಿದಾಗ ಇದನ್ನು ಹಣ್ಣು ಎಂತಲೂ, ಬಲಿತಾಗ ಕಾಯಿ ಎಂತಲು ಪರಿಗಣಿಸಲಾಗುತ್ತದೆ.

ತೆಂಗಿನ ಮರದ ಪ್ರತಿಯೊಂದು ಭಾಗವು ಉಪಯೋಗಿಸಲ್ಪಡುವುದರಿಂದ ಈ ವೃಕ್ಷವನ್ನು ಕಲ್ಪವೃಕ್ಷದ ಸಾಲಿಗೆ ಸೇರಿಸಲಾಗಿದೆ, ಭಾರತೀಯರಿಗಂತೂ ಕಾಯಿ ಇರದೆ ಯಾವ ಕಾರ್ಯವೂ ಸಂಪೂರ್ಣವಾಗಲಾರದು. ತೆಂಗಿನ ಮರದ ಉಪಯೋಗಗಳನ್ನು ನೋಡುವುದಾದರೆ :

1 ತೆಂಗಿನ ಗರಿಯನ್ನು ಮದುವೆ ಮುಂಜಿ ಮುಂತಾದ ಶುಭ ಕಾರ್ಯಗಳಲ್ಲಿ ಚಪ್ಪರವಾಗಿ ಬಳಸಲಾಗುತ್ತದೆ,

* ಹಸಿರು ಎಲೆಯ ಮಕ್ಕಳ ಆಟಿಕೆಯಾಗಿ ( ಕೈಗಡಿಯಾರ, ಟೋಪಿಯಾಗಿ, ಗಿಳಿಯನ್ನು ತಯಾರಿಸಲಾಗುತ್ತದೆ )

* ಚಿಗುರು ಎಲೆಯನ್ನು ಭೂತಾರಾಧನೆಯ ಪೂಜೆಯಲ್ಲಿ ಬಳಸಿಕೊಳ್ಳಲಾಗುತ್ತದೆ.

* ಒಣಗಿದ ಕಡ್ಡಿಯಿಂದ ಪೊರಕೆ ತಯಾರಿಸುತ್ತಾರೆ,


2 ತೆಂಗಿನ ನಾರು ಉತ್ತಮ ಜೈವಿಕ ಗೊಬ್ಬರ. ಸಾವಯವ ಕೃಷಿಗೆ ನರ್ಸರಿಯಲ್ಲಿ ಗಿಡ ಬೆಳೆಸಲು ನಾರು ಬೇಕೇ ಬೇಕು. ಕೊಯರ್ ಇಂಡಸ್ಟ್ರಿಯಲ್ಲಿ ಇಂದು ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತದೆ, ನಾರನ್ನ ಇಂದಿಗೂ ಹಳ್ಳಿಯಲ್ಲಿ ಪಾತ್ರೆ ತೊಳೆಯಲು ಉಪಯೋಗಿಸುತ್ತಾರೆ.

3 ತೆಂಗಿನ ಚಿಪ್ಪುಉಷ್ಣವಾಹಕ ಕಾರ್ಖಾನೆಗಳಲ್ಲಿ ಇವುಗಳ ಬೇಡಿಕೆ ಹೆಚ್ಚು. ( ಇದರ ಜ್ವಾಲೆಯ ಬೆಂಕಿ ರಾಕೆಟ್ ವೇಗದಲ್ಲಿ ಉರಿಯುತ್ತದೆ ಇದಕ್ಕೆ ಚಿಪ್ಪಿನಲ್ಲಿ ಅಡಕವಾಗಿರುವ ರಾಸಾಯನಿಕ ಸಮೀಕರಣ ಕಾರಣ)


4 ಇನ್ನು ಕಾಯಿಯ ಉಪಯೋಗ ಬಹು ಬಗೆಯದ್ದು:

* ಕಳಸಕ್ಕೆ, ಪೂಜೆಗೆ ಕಾಯಿ ಇರಲೇಬೇಕು.( ಫಲ ನೀಡಿ ಪಾಪ ಕಳೆದುಕೋ, ಕಾಯಿ ಒಡೆದು ಕಂಟಕ ಕಳೆದುಕೋ ಎಂಬ ನಾಣ್ಣುಡಿ ಪ್ರಸ್ತುತವಾಗಿಯೂ ಬಳಕೆಯಲ್ಲಿದೆ )

* ಪೂಜಾಫಲವಾದವರು 101 ಕೆಲವರು 1001 ಕಾಯಿಯನ್ನು ಓಡೆಸುವವರು ಇದ್ದಾರೆ.

* ಕಾಯಿ ಇಲ್ಲದೆ ಅಡುಗೆ ಆಗುತ್ತದೆಯೇ ?

ಪಲ್ಯಕ್ಕೆ, ಹುಳಿಗೆ, ಸಾರಿಗೆ, ಶಾವಿಗೆಯ ಕಾಯಿ ಹಾಲಿಗೆ, ಪಾಯಸಕ್ಕೆ, ಚಪ್ಪರಿಸಿ ತಿನ್ನುವ ಕಾಯಿ ಹೋಳಿಗೆಗೆ, ಹಲಸಿನ ಊರ್ಣಕ್ಕೆ ಕಾಯಿ ಬೇಕೇ ಬೇಕು.

5 ದೇವಸ್ಥಾನಗಳಲ್ಲಿ ವಿಗ್ರಹಗಳ ಮೂರ್ತಿ ಅಭಿಷೇಕಕ್ಕೆ, ತೀರ್ಥಕ್ಕೆ, ಬೇಸಿಗೆಯ ದಾಹವನ್ನು ನೀಗಿಸಲು ಎಳನೀರು ಬೇಕೇಬೇಕು. ಎಳನೀರು ದೇಹಕ್ಕೆ ಶಕ್ತಿಯನ್ನು, ರೋಗ ನಿರೋಧಕ ಶಕ್ತಿಯನ್ನು ಕೊಡುತ್ತದೆ ( ನಮ್ಮ ಪೂರ್ವಜರು ದೇವಸ್ಥಾನದ ಕಲ್ಲಿನ ಮೇಲೆ ತೆಂಗಿನ ವೃಕ್ಷಗಳನ್ನು, ಕೆಲವು ದೇವಸ್ಥಾನಗಳಲ್ಲಿ ಎಳನೀರು ಗೊಂಚಲನ್ನು ಗೋಪುರದ ಬದಿಗಳಲ್ಲಿ ತೋರಣಗಳಲ್ಲಿ ಕೆತ್ತಿರುವುದನ್ನು ಕಾಣಬಹುದು )

6 ಮರದಲ್ಲಿ ಬಲಿಯಲು ಬಿಟ್ಟ ಕಾಯಿ ಒಣಗಿ ಕೊಬ್ಬರಿ ಆಗುತ್ತದೆ, ಈ ಕೊಬ್ಬರಿಯಿಂದ ದಿನಬಳಕೆಗೆ ಎಣ್ಣೆ, ಸಂಕ್ರಾಂತಿಯ ಎಳ್ಳುನೊಂದಿಗೆ ಬೆರೆಸಿ ಕೊಡಲಾಗುತ್ತದೆ, ಕರ್ಜಿಕಾಯಿ, ಬೆಲ್ಲದ ಮಿಠಾಯಿ,ಕೊಬ್ಬರಿ ಮಿಠಾಯಿ ತಯಾರಿಸುತ್ತಾರೆ, ಇವೆಲ್ಲ ದೇಹಕ್ಕೆ ಎಣ್ಣೆ ಅಂಶವನ್ನು ಸೇರಿಸುತ್ತದೆ.

7 ಮರದಿಂದ ತಾನಾಗಿಯೇ ಉದುರಿದ ಕಾಯಿ ಮತ್ತೊಂದು ಗಿಡವಾಗಿ ಚಿಗುರೊಡೆಯುತ್ತದೆ.

8 ಮರ ಎತ್ತರಕ್ಕೆ ಹಾಗೂ ಬಲಿತಷ್ಟು ಕಾಂಡ ದಪ್ಪವಾಗುತ್ತಾ ಹೋಗುತ್ತದೆ. ಈ ಮರಕ್ಕೆ ಮತ್ತೊಂದು ವಾಣಿಜ್ಯ ಬೆಳೆಯಾದ ಮೆಣಸು ಬಳ್ಳಿಯನ್ನ ಹಬ್ಬಿಸಬಹುದು, ಮರಗಳ ಸಾಲುಗಳ ಮಧ್ಯದಲ್ಲಿ ಅಡಕೆ, ಬಾಳೆ, ಏಲಕ್ಕಿ  ಬೆಳೆಸಬಹುದು.

9 ನೇರವಾಗಿ ಬೆಳೆಯುವ ಮರಗಳ ತುದಿಯಲ್ಲಿ, ಎಲೆಗಳ ಮಧ್ಯದಲ್ಲಿ ಹತ್ತಾರು ಪ್ರಾಣಿ ಪಕ್ಷಿಗಳು ಗೂಡು ಕಟ್ಟಲು ಆಸರೆಯಾಗುತ್ತದೆ, ಕಾಗೆ ಗೂಬೆ ಹೋತಿಕೇತ ಅಳಿಲು ಇರುವುದನ್ನು ಕಂಡಿರಬಹುದು.

10 ನೂರು ವರ್ಷ ದಾಟಿದ ಮರದ ಕಾಂಡವನ್ನು ಹೆಂಚುಗಳ ಅಟ್ಟಣಿಗೆಯಾಗಿ, ತೊಲೆಗಳಾಗಿ, ದನಗಳು ನೀರು ಕುಡಿಯುವ ಬಾನಿಯಾಗಿ ಉಪಯೋಗಿಸುತ್ತಿದ್ದರು, ಇಂದು ತೆಂಗಿನ ಕಟ್ಟಿಗೆಯನ್ನು ಮೇಜು, ಕುರ್ಚಿ, ಕಟ್ಟಡ ನಿರ್ಮಾಣಗಳಲ್ಲಿ, ಹೀಗೆ ದಿನಬಳಕೆಯ ಹತ್ತಾರು ಆಯಾಮಗಳಲ್ಲಿ ತೆಂಗು ಬಹುಪಯೋಗಿಯಾಗಿದೆ.

ತೆಂಗಿನ ಗುಣಧರ್ಮ ಆ ಪ್ರದೇಶದ ಮಣ್ಣಿನ ಆಧಾರದ ಮೇಲೆ ನಿಂತಿರುತ್ತದೆ, ಒಂದೊಂದು ಪ್ರದೇಶದ ಎಳನೀರು ಒಂದೊಂದು ರುಚಿಯನ್ನು ಹೊಂದಿರುತ್ತದೆ, ಗದ್ದೆಯ ಎಳನೀರಿಗೂ ತೋಟದ ಎಳನೀರು ವ್ಯತ್ಯಾಸವಿದೆ, ಕೆಂದೆಳನೀರನ್ನು ಕುಡಿದಿರಬಹುದು,ಮರದ ಸೋಗೆ ಉರಿದು ಬಂದ ಬೂದಿ ಒಂದು ಉತ್ತಮ ಕೀಟನಾಶಕ, ಕೃಷಿಯಲ್ಲಿ ಇಂದಿಗೂ ಬಳಕೆಯಲ್ಲಿದೆ, ತೆಂಗಿನ ಕೃಷಿ ಇಂದು ಏಕ ಜಾತಿಯ ನೀಡುತೋಪಾಗಿ ಮಾರ್ಪಾಡಾಗುತ್ತಿದೆ, ಕೆಲವು ಕಡೆ ತೆಂಗಿನಕಾಯಿ ತಲೆಯ ಮೇಲೆ ಬಿದ್ದು ಸಾವು ಸಂಭವಿಸಿರುವ ಪ್ರಕರಣಗಳು ನಡೆದಿವೆ, ವರ್ಷಕ್ಕೆ ಸರಾಸರಿ ಪ್ರಪಂಚದಲ್ಲಿ 170 ಜನ ಸಾಯುತ್ತಾರೆ ಎಂಬ ಮಾಹಿತಿಯೂ ಇದೆ.

ಸಹಜವಾಗಿ ಹೊಳೆದಂಡೆ, ಸಮುದ್ರಗಳ ತೀರಗಳಲ್ಲಿ, ಕಾಡಿನಲ್ಲಿ ಬೆಳೆಯುವ ತೆಂಗಿನ ಮರ ಮಾನವನ ಕೃಷಿಯಲ್ಲಿ ಪಳಗುತ್ತಾ ಹೋದಂತೆ ವೈವಿಧ್ಯಮಯವಾದ ತೊಡಗಿತು, ಅದರಲ್ಲಿಯೂ ಹೈಬ್ರಿಡ್ ತಳಿಗಳ ಉತ್ಪಾದನೆಯಾದ ಬಳಿಕವಂತೂ ನೆಟ್ಟ ಎರಡೇ ವರ್ಷಗಳಲ್ಲಿ ಮರ ಕಾಯಿ ಹಿಡಿಯಲು ಪ್ರಾರಂಭವಾಗುತ್ತದೆ, ಆದರೆ ಇಂಥ ಮರಗಳ ಎಳನೀರ ರುಚಿ, ಕಾಯಿಯ ಪರಿಮಳ ಕಡಿಮೆ ಹಾಗೂ ಜೀವಿತಾವಧಿ ಅವಧಿಯೂ ತೀರಾ ಕಡಿಮೆ, ಅದೇ ನಾಟಿ ಮರ ನೂರಾರು ವರ್ಷ ಹಣ್ಣು ಕಾಯಿ ಬಿಡುತ್ತಲೇ ಇರುತ್ತದೆ.

ಇಂತಹ ಅಭೂತಪೂರ್ವ ಮರವನ್ನು ನಮ್ಮ ಪೂರ್ವಜರು ದೇವಸ್ಥಾನದಲ್ಲಿ ತಮ್ಮ ಜಮೀನಿನಲ್ಲಿ ನೆಟ್ಟು ಬೆಳೆಸಿದ್ದಾರೆ, ಮರವು ಅವರ ಪೀಳಿಗೆಯನ್ನೇ ಕೈ ಹಿಡಿದು ನಡೆಸಿದೆ, ದೇವರ ನಾಡೆಂದು ಪ್ರಖ್ಯಾತವಾಗಿರುವ ನಮ್ಮ ನೆರೆ ರಾಜ್ಯ ಕೇರಳ ಈ ಮರವನ್ನು Kerala tree of life ಎಂದು ಗುರುತಿಸಿದೆ. ಇಂದು ಪ್ರಪಂಚದ ಎಲ್ಲಾ ಭಾಗಗಳಲ್ಲಿಯೂ ಈ ಮರವನ್ನು ಕಾಣಬಹುದು,ಇದರ ಮಾರುಕಟ್ಟೆಯೂ ಬಹಳ ವಿಸ್ತಾರವಾಗಿ ಹರಡಿಕೊಂಡಿದ್ದು ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಯುತ್ತದೆ. ಕೆಲವು  ತೆಂಗಿನಮರಗಳ ರಚನೆ ಸ್ವಾಮ್ಯ / Copyrigt  ಪಡೆದುಕೊಂಡಿದೆ, ರಾಷ್ಟ್ರದ ಧ್ವಜಗಳಲ್ಲಿ ಸ್ಥಾನವನ್ನು ಪಡೆದಿದೆ, ದೇಶದ ಮರವೆಂಬ ಸ್ಥಾನವನ್ನು ಪಡೆದಿದೆ.

ಅಂದಹಾಗೆ ಕಲ್ಪವೃಕ್ಷಕ್ಕೆ ಸಂಬಂಧಿಸಿದ ಮತ್ತಷ್ಟು ರೋಚಕ ವಿಷಯ ಚರ್ಚಿಸುವುದನ್ನು ಮರೆತೇಬಿಟ್ಟಿದ್ದೇವೆ, ತೆಂಗು ಬುಡದ ಮಧ್ಯದಲ್ಲಿ ಏಕೆ ಕವಲೊಡೆಯುವುದಿಲ್ಲ ? ಇದಕ್ಕೇನಾದರೂ ಕಾರಣ ಇದಿಯಾ ? ಕವಲೊಡೆದರೂ ಎಷ್ಟು ಕವನಗಳನ್ನು ಹೊಡೆಯಬಹುದು ? 

ಕೆಂದೆಳನೀರನ್ನ ಕುಡಿದಿರುತ್ತವೆ, ರುಚಿಯಾಗಿಯೂ ಇರುತ್ತದೆ ಅಲ್ಲವೇ ? ಎಲ್ಲಿಯಾದರೂ Pink ಬಣ್ಣದ ಎಳನೀರಿನ ಕಾಯಿಯನ್ನು ನೋಡಿದ್ದೀರಾ ? ನನಗೂ ಮೊದಲು ಅನುಮಾನ ಎನಿಸಿದರು ವಾಸ್ತವದಲ್ಲಿ ನಿಜವೇ ಆಗಿತ್ತು.

ತೆಂಗಿನಕಾಯಿಯನ್ನು ಹಿಡಿದು ಜಲದ ಮೂಲವನ್ನ ಕೆಲವು ಪರಿಣಿತರು ಕಂಡುಹಿಡಿಯುತ್ತಾರೆ ಎಂದು ಕೆಲವರಲ್ಲಿ ನಂಬಿಕೆಯಿದೆ ಇದು ಎಷ್ಟರಮಟ್ಟಿಗೆ ಸತ್ಯ ಹಾಗೂ ಮಿತ್ಯ ?

ಅದೇನೇ ಇರಲಿ ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ವೃಕ್ಷಗಳು ಕಲ್ಪವೃಕ್ಷ ಆಗಿರಬಹುದು, ಆದರೆ ನಮ್ಮ ದೇಶದ ಮಟ್ಟಕ್ಕೆ ಜನರ ಕಲ್ಪನೆಗೆ ಹತ್ತಿರವಾಗಿರುವ ವೃಕ್ಷವಾಗಿ ತೆಂಗು ಹೆಸರುವಾಸಿಯಾಗಿದೆ, ಒಂದು ಮರ ಒಂದು ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ಮೂರು ನಾಲ್ಕು ತಲೆಮಾರುಗಳನ್ನು ಸಾಕಿ ಸಲಹುತ್ತಿದೆ.


ಧನ್ಯವಾದಗಳು.





7 comments:

  1. Very nice article 👍
    Keep it up

    ReplyDelete
  2. ಲೇಖನ ಚೆನ್ನಾಗಿ ಮೂಡಿ ಬಂದಿದೆ.

    ReplyDelete
  3. Its one of the best article...

    ReplyDelete
  4. ಅತ್ಯಂತ ಉಪಯುಕ್ತವಾದ ಮರ ಎಂದು ತಿಳಿಸಿಕೊಟ್ಟಿದ್ದೀರಿ .
    ಪ್ರತಿ ಮನೆಯಲ್ಲಿಯೂ ಸಹ ಜಮೀನು ಇದ್ದಂತವರು ಒಂದು ಮರವನ್ನು ಜಮೀನಿನ ಬದುಗಳಲ್ಲಿ ಖಾಲಿ ದಿಣ್ಣೆಗಳು
    ಗುಡ್ಡಗಳಲ್ಲಿ ಹಾಕಿದರೆ ಒಂದು ವರ್ಷಕ್ಕೆ 11 ಸಾವಿರ ರೂಪಾಯಿಯಷ್ಟು ಮೌಲ್ಯದ ತೆಂಗಿನಕಾಯಿಯ ಹಣವನ್ನು ಉಳಿಸಬಹುದು.

    ನಾವುಗಳು ಕಾಡುಗಳು ಇರುವ ಪ್ರದೇಶಕ್ಕೆ ಭೇಟಿ ಇತ್ತಾಗ ಹರಿವ ತೊರೆಗಳ ದಡದಲ್ಲಿ ಒಂದೆರಡು ತೆಂಗಿನಕಾಯಿಗಳನ್ನು ಸಿಪ್ಪೆಯ ಜೊತೆಗೆ ಹೂತಿಟ್ಟು ಬಂದರೆ ಅದು ಗಿಡವಾಗಿ ಬೆಳೆದು ಮರವಾಗಿ ಬೆಳೆದು ಪ್ರಾಣಿಗಳಿಗೆ ಪಕ್ಷಿಗಳಿಗೆ ಆಹಾರವಾಗುತ್ತದೆ ಇದಕ್ಕೆ ನಾವು ಖರ್ಚು ಮಾಡಬೇಕಾಗಿರುವುದು ಎರಡು ಸಿಪ್ಪೆ ಸುಲಿದು ಇರದ ತೆಂಗಿನಕಾಯಿಗಳು ...


    ಸಂತೃಪ್ತ ಬದಲಾವಣೆಯ ಆಶಯ.

    ReplyDelete
  5. Very informative article about coconut tree, i liked the way you presented uses of the tree from different sources, i wish you great success

    ReplyDelete