- ಎಸ್ ಪಿ ತೇಜರಾಜು.
ಮಕ್ಕಳು ರಾತ್ರಿಯ ಊಟ ಮಾಡದೆ ಹೋದರೆ, ಊಟ ಮಾಡಿಸುತ್ತಿರುವ ತಾಯಿಯೋ ಅಥವಾ ಅಜ್ಜಿಯೋ ಮಾಡುವ ಉಪಾಯ ಏನಿರಬಹುದು ಹೇಳಿ ? 1 ಹಾಡು ಹೇಳಿಕೊಂಡೋ ಅಥವಾ ಕಥೆಯನ್ನು ಹೇಳಿಕೊಂಡೋ ಊಟ ಮಾಡಿಸಬಹುದು ಇದಕ್ಕೂ ಮಕ್ಕಳು ಬಗ್ಗದೆಹೋದರೆ ಅವರು ಮಾಡುವ ಏಕೈಕ ಕೆಲಸವೇ ಮನೆಯಿಂದ ಹೊರಗೆ ಕರೆದುಕೊಂಡು ಹೋಗಿ ಮಕ್ಕಳು ಆಟವಾಡುತ್ತಿರುವುದನ್ನು ತೋರಿಸಿಯೂ ಅಥವಾ ಆಕಾಶವನ್ನು ತೂರಿಸಿಕೊಂಡಂತೂ ಊಟ ಮಾಡಿಸಿಯೇ ಬಿಡುತ್ತಾರೆ. ಹಗದ್ರೆ ಯಾವುದಕ್ಕೂ ಬಗ್ಗದ ಈ ಮಕ್ಕಳು ಆಕಾಶವನ್ನು ನೋಡಿದ ತಕ್ಷಣ ಹೇಗೆ ಸುಮ್ಮನಾಗುತ್ತಾರೆ ಎಂಬ ವಿಷಯದ ಬೆನ್ನುಹತ್ತಿ ಹೊರಟಾಗ ಈ ಅಂಕಣದ ವಿಷಯ ಬೆಣ್ಣೆ ಕದ್ದು ತಿಂದ ಕೃಷ್ಣನ ಬಾಯಿ ತೆರೆದಾಗ ಕಂಡ ವಿಶ್ವದಂತೆ ವಿಷಯ ತೆರೆದುಕೊಳ್ಳುತ್ತಾ ಹೋಗುತ್ತದೆ. ಸೃಷ್ಟಿಯ ಉಗವೇ ಒಂದು ಅದ್ಭುತ ಸಂಯೋಜನೆಯಲ್ಲವೇ ? ಇದನ್ನೇ ವಿಜ್ಞಾನದಲ್ಲಿ Super natural power ಎಂದು ಕರೆಯುವುದು.
ಬಾಲ್ಯದ ಬೇಸಿಗೆ ದಿನದ ನೆನಪುಗಳು ಸ್ಮೃತಿಪಟಲದಲ್ಲಿ ಭದ್ರವಾಗಿರುವುದಕ್ಕೆ ಬಹಳಷ್ಟು ಕಾರಣಗಳಿವೆ, ಅದರಲ್ಲಿಯೂ ರಾತ್ರಿ ಹೊತ್ತು ಅಜ್ಜಿಯೊಂದಿಗೆ ಕಥೆ ಹೇಳಿಸಿಕೊಂಡು( ಚಂದ್ರನಿಗೆ ಏಣಿಹಾಕಿದ ಕಥೆ, ಐರಾವತ ಬಾಲ ಹಿಡಿದ ಕಥೆ, ಪುರಾಣದಲ್ಲಿ ಬರುವ ವರಸಿದ್ದಿವಿನಾಯಕ ಕಥೆ etc ) ತೊಟ್ಟಿ ಮನೆಯೊಳಗೆಯೂ ಅಥವಾ ಹೊರಾಂಡದಲ್ಲಿ ಆಕಾಶವನ್ನು ನೋಡುತ್ತ ಮಲಗಿದ್ದು ನೆನಪಿರಬಹುದು. ಚಂದ್ರನ ಮೇಲ್ಮೈ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಕಾಣಿಸಿದ್ದಿದೆ, ಒಬ್ಬರಿಗೆ ಮಾನವನ ಮುಖಚಹರೆಯಂತೆ ಕಂಡಿದ್ದು, ಇನ್ನು ಕೆಲವರಿಗೆ ಮೊಲದ ಮುಖಚಹರೆಯಂತೆ ಕಂಡಿದ್ದುದುಂಟು. ಇನ್ನು ನಕ್ಷತ್ರಗಳ ವಿಷಯಕ್ಕೆ ಬರುವುದಾದರೆ ಹೇಗೆ ನಕ್ಷತ್ರಗಳನ್ನು ಎಣಿಸಲಿಕ್ಕೆ ಆಗುವುದಿಲ್ಲವೋ ಅಷ್ಟೇ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತಿದ್ದವು. ಸರದಿ ಸಾಲಿನಲ್ಲಿ ಕಾಣುವ ಮೂರು ನಕ್ಷತ್ರಗಳು ಹೇಗೆ ನಮ್ಮ ಪೂರ್ವಜರೆಂದು, ಈ ನಕ್ಷತ್ರಗಳು ಹೇಗೆ ಹೊಳೆಯುತ್ತವೆ ಎಂತಲೂ ? ಅಜ್ಜಿಗೆ ಒಂದಷ್ಟುಗಳಿಗೆ ಕಾಟವನ್ನು ಕೊಟ್ಟು, ಕತ್ತಲೆಯ ಭಯಾನಕ ದೆವ್ವಗಳ ಕಥೆಗಳಿಗೆ ಹೆದರಿ ಬೆಡ್ ಶೀಟ್ ಅನ್ನು ಸಂಪೂರ್ಣವಾಗಿ ಹೊಚ್ಚಿಕೊಂಡು, ರಾತ್ರಿ ಎಚ್ಚರಿಕೆಯಾದರೂ ಕಣ್ಣು ಬಿಡದೆ ಮಲಗಿದ್ದಿರಬಹುದು.
ನಮ್ಮ ಅಜ್ಜಿಯರು ಈ ಚಂದ್ರ, ನಕ್ಷತ್ರಗಳ ಮೇಲೆ ಕಥೆಯನ್ನು ಹೆಣೆದು ಹೇಳಿರಬಹುದು ಆದರೆ ಅದರಲ್ಲಿ ಅಪಾರವಾದ ನಂಬಿಕೆ ಹಾಗೂ ವಿಜ್ಞಾನ ಅಡಕವಾಗಿರುತ್ತಿತ್ತು. ಚಂದ್ರನ ಶ್ವೇತವರ್ಣ ಯಾರನ್ನಾದರೂ ತಣ್ಣಗೆ ಮಾಡಿಬಿಡುತ್ತದೆ. ಚಿರಂಜೀವಿ ಸಪ್ತಋಷಿಗಳ ಕಥೆಯನ್ನ ನೀವು ಕೇಳಿರಬಹುದು ಇದು ಸಂಪೂರ್ಣವಾದ ವಿಜ್ಞಾನವೇ. ಈ ಮುಂದಿನ ಸಾಲುಗಳಲ್ಲಿ ಜ್ಯೋತಿಶಾಸ್ತ್ರಕ್ಕೂ ಹಾಗೂ ವಿಜ್ಞಾನಕ್ಕೂ ಇರುವ ಸಂಬಂಧವನ್ನು ತಿಳಿದುಕೊಳ್ಳೋಣ.
ಜ್ಯೋತಿಷ್ಯಾಸ್ತ್ರವನ್ನು ನಾವು ಭವಿಷ್ಯವನ್ನು ತಿಳಿಯುವ ಪುಸ್ತಕ ಎಂದು ತಪ್ಪು ಅರ್ಥ ಮಾಡಿಕೊಂಡು ಕಡೆಗಣಿಸಿದ್ದೆ ಇದಕ್ಕೆಲ್ಲ ಮೂಲ ಕಾರಣ. ಜ್ಯೋತಿಷ್ಯಾಸ್ತ್ರ ಎಂಬುದು ಶುದ್ಧ ವಿಜ್ಞಾನವೇ - ಒಟ್ಟು 27 ನಕ್ಷತ್ರಗಳನ್ನು ಬಹಳ ಸ್ಪಷ್ಟವಾಗಿ ವ್ಯಾಖ್ಯಾನಿಸಿದ್ದಾರೆ, ಅವುಗಳೆಂದರೆ 1 ಅಶ್ವಿನಿ, 2 ಭರಣಿ, 3 ಕೃತ್ತಿಕಾ, 4 ರೋಹಿಣಿ, 5 ಮಾರ್ಗಶಿರ, 6 ಆರಿದ್ರೆ, 7 ಪುನರ್ವಸು, 8 ಪುಷ್ಯ, 9 ಆಶ್ಲೇಷಾ, 10 ಮಖೇ, 11 ಪೂಬ್ಬೆ, 12 ಉತ್ತರೆ, 13 ಹಸ್ತ, 14 ಚಿತ್ತ, 15 ಸ್ವಾತಿ, 16 ವಿಶಾಖ, 17 ಅನುರಾಧ, 18 ಜೇಷ್ಠ, 19 ಮೂಲ, 20 ಪೂರ್ವಾಷಾಢ, 21 ಉತ್ತರಾಷಾಢ, 22 ಶ್ರವಣ, 23 ಧನಿಷ್ಠಾ, 24 ಶತಭಿಷಾ, 25 ಪೂರ್ವಭಾದ್ರ, 26 ಉತ್ತರಭಾದ್ರ, 27 ರೇವತಿ, ಪ್ರತಿಯೊಂದು ನಕ್ಷತ್ರ ಅದರದ್ದೇ ಆದಂತಹ ಮಹತ್ವವನ್ನು ಹೊಂದಿದೆ.[ 12 ರಾಶಿಗಳು - 1 ಮೇಷ, 2 ಋಷಭ, 3 ಮಿಥುನ, 4 ಕರ್ಕಟಕ, 5 ಸಿಂಹ, 6 ಕನ್ಯಾ, 7 ತುಲಾ, 8 ವೃಶ್ಚಿಕ, 9 ಧನಸ್ಸು, 10 ಮಕರ, 11 ಕುಂಭ, 12 ಮೀನ, 9 ನಕ್ಷತ್ರಗಳು -1 ಸೂರ್ಯ, 2 ಕುಜ, 3 ಶುಕ್ರ, 4 ಚಂದ್ರ, 5 ಬುಧ, 6 ಗುರು, 7 ಶನಿ, 8 ರಾಹು, 9 ಕೇತು ಗಳಿವೆ ] ಮೊದಲಿನಿಂದ 16ನ್ನು ಮಳೆ ನಕ್ಷತ್ರವಾಗಿ ವಿಂಗಡಿಸಲಾಗಿದೆ, ಕೆಲವು ದೇವಸ್ಥಾನಗಳಿಗೆ ಭೇಟಿ ನೀಡಿದಾಗ ನಿಮ್ಮ ರಾಶಿ ನಕ್ಷತ್ರಗಳನ್ನು ಕೇಳಿ ಅದಕ್ಕೆ ಸಂಬಂಧಿಸಿದ ಒಂದು ಗಿಡವನ್ನು ನೆಡಲಿಕ್ಕೆ ಹೇಳುತ್ತಾರೆ, ಇಲ್ಲಿ ಅವರು ಹೇಳುವ ಮರಕ್ಕೂ ಹಾಗೂ ನಕ್ಷತ್ರಕ್ಕೂ ನೇರ ಸಂಬಂಧವಿರುತ್ತದೆ, ಮರಗಳು ವಾತಾವರಣದ ಸಮತೋಲನವನ್ನು ಕಾಪಾಡುತ್ತದೆ ಇದರ ಆಧಾರದ ಮೇಲೆಯೇ ಕಾಲಕಾಲಕ್ಕೆ ಮಳೆಯಾಗುವುದು. ಪುರಾತನ ದೇವಾಲಯಗಳೆಲ್ಲವೂ ವಾಸ್ತು ಪ್ರಕಾರ ( ನಕ್ಷತ್ರಾಧಾರಿತ ) ಇರುವುದರಿಂದಲೇ ನಿಗದಿಪಡಿಸಿದ ದಿನದಂದೇ ಸೂರ್ಯನ ರಶ್ಮಿ ನೇರವಾಗಿ ಗರ್ಭಗುಡಿಯ ವಿಗ್ರಹಕ್ಕೆ ಬೀಳುತ್ತದೆ ಇದು ಪ್ರಾಚೀನರ ಕಟ್ಟಡ ವಿನ್ಯಾಸದ ಅದ್ಭುತವೇ ಸರಿ. ಇನ್ನ ಜ್ಯೋತಿಷ್ಯಶಾಸ್ತ್ರ ಅಮಾವಾಸ್ಯೆ ಹುಣ್ಣಿಮೆ ಯಾವಾಗ ಸಂಭವಿಸುತ್ತದೆ, ಮುಂದೆ ಸಂಭವಿಸಬಹುದಾದ ಗ್ರಹಣ ಯಾವಾಗ ಹಾಗೂ ಎಷ್ಟು ಗಂಟೆಗೆ ಸಂಭವಿಸುತ್ತದೆ ಎಂಬ ಮಾಹಿತಿ ಬಹಳ ಸ್ಪಷ್ಟವಾಗಿ ಗೋಚರವಾಗುತ್ತದೆ.
ನಕ್ಷತ್ರಗಳಿಗೆ ಸಂಬಂಧಪಟ್ಟ ಕೆಲವು ಮಾಹಿತಿಗಳನ್ನು ಸುಮಾರು 5ನೇ ಶತಮಾನದಲ್ಲಿದ್ದಂತಹ ಅಮರಸಿಂಹ ತಾನು ಬರೆದ ನಾಗಲಿಂಗ ಶಾಸನದಲ್ಲಿ ಮುದ್ರಿಸಿದ್ದಾರೆ, ಹೆಚ್ಚಿನ ಮಾಹಿತಿಗಾಗಿ ಅಮರಕೋಶ ಪುಸ್ತಕದ ಪ್ರಥಮ ಕಾಂಡದ ದಿಗ್ವಾ ಅಧ್ಯಾಯದ 15ನೇ ಪುಟ ಸಂಖ್ಯೆಯಲ್ಲಿ ಗಮನಿಸಬಹುದು.
ವೈವಾಹಿತರಿಗೆ ತಿಳಿದಿರಬಹುದು ತಮ್ಮ ಮದುವೆಯ ಸಂದರ್ಭದಲ್ಲಿ ಪುರೋಹಿತರು ಮದುವೆ ಮಂಟಪದ ಹೊರಗೆ ಕರೆದುಕೊಂಡು ಹೋಗಿ ನಕ್ಷತ್ರವನ್ನು ತೋರಿಸುತ್ತಾರೆ ಅದು ಯಾವುದು ಎಂದು ತಿಳಿದಿರಬಹುದೇ? ಅದುವೇ ಅನುರಾಧಾ ನಕ್ಷತ್ರ. ಅನುರಾಧ ನಕ್ಷತ್ರದ ಜೀವನದಂತೆಯೇ ವೈವಾಹಿಕ ಜೀವನ ಸುಖಿಯಾಗಿರಲಿ ಎಂಬುದು ಇದರ ಹಿಂದಿನ ಆಶಯ.
ಜಾನಪದದಲ್ಲಿಯೂ ನಕ್ಷತ್ರಗಳು ಹಾಸುಹೊಕ್ಕಾಗಿವೆ ಅಶ್ವಿನಿ ಮಳೆಗೆ ಭೂಮಿ ನೆನೆಯಿತು, ಭರಣಿ ಮಳಿಗೆ ಭೂಮಿಯೆಲ್ಲಾ ತಂಪಾಯಿತು, ಚಿತ್ತೆ ಮಳೆಗೆ ಚಿಟ್ಟೆಗಳು ಬಂದವು ( ಚಿಟ್ಟೆಗಳ ಜನನದಿಂದ ಹೂಗಳ ಪರಾಗಸ್ಪರ್ಶವಾಗುತ್ತದೆ ) ಕೃತಿಕಾ - ರೋಹಿಣಿ ಮಳೆ ಹಿಡಿದ್ರೆ ಓಣಿಯೆಲ್ಲಾ ಬೆಳೆ ಎಂಬ ಮಾತುಗಳು ನಮ್ಮ ಪೂರ್ವಜರಲ್ಲಿ ಬಳಕೆಯಲ್ಲಿದ್ದವು, ಈಗಲೂ ಕೆಲವು ರೈತರು ಬಳಸುವುದುಂಟು.
ಕೆಳಗೆ ಕೊಟ್ಟಿರುವ ಚಿತ್ರದಲ್ಲಿ ಪಂಚಾಂಗಕ್ಕೆ ಸಂಬಂಧಪಟ್ಟಿದ ನಕ್ಷತ್ರಗಳ ಹೆಸರು ಹಾಗೂ ಅವುಗಳಿಗೆ ಸಂಬಂಧಪಟ್ಟ ಆಕೃತಿಗಳನ್ನು ಗಮನಿಸಬಹುದು.
ಇನ್ನ ಸಪ್ತಋಷಿಗಳ ವಿಷಯಕ್ಕೆ ಬರೋಣ ಪುರಾಣಗಳ ಉಲ್ಲೇಖಗಳ ಪ್ರಕಾರ ಇವರು ಚಿರಂಜೀವಿಗಳು, ವೈದಿಕ ಕ್ಷೇತ್ರದಲ್ಲಿ ಅಗ್ರಗಣ್ಯರು, ಮಹಾಮೇಧಾವಿಗಳು, ಪ್ರಕೃತಿಯ ವಾತಾವರಣವನ್ನು ಸಮತೋಲನದಲ್ಲಿಇಡುವವರು ಎಂದು ಬೃಹದಾರಣ್ಯಕ ಉಪನಿಷತ್ ನಲ್ಲಿ ತಿಳಿದುಬರುತ್ತದೆ.
( ಸಪ್ತ ಎಂದರೆ 7, ವಾರದ 7 ದಿನಗಳೆಂದು ಅರ್ಥಮಾಡಿಕೊಳ್ಳಬಹುದು ) ಆ ಸಪ್ತರ್ಷಿಗಳೇ
1 ಭಾರದ್ವಾಜ 2 ವಿಶ್ವಾಮಿತ್ರ 3 ಕಶ್ಯಪ 4 ಭೃಗು 5 ಜಗದಾಗ್ನಿ 6 ವಶಿಷ್ಠ 7 ಗೌತಮ. ಪ್ರತಿಯೊಬ್ಬ ಮುನಿಯಲ್ಲಿಯೂ ಅಗಾಧವಾದ ವಿಷಯ ಸಂಗ್ರಹವಾಗಿದೆ. ಈ ಸತ್ತ ಋಷಿಗಳನ್ನೇ ಪಾಶ್ಚಾತ್ಯ ಪಂಚಾಂಗದಲ್ಲಿ Polar Bear ಎಂದು ಕರೆಯುತ್ತಾರೆ. ಈ Polar Bear ನಾ 7 ನಕ್ಷತ್ರಗಳ ಚಿಕ್ಕಿಯನ್ನು ಸೇರಿಸಿದಾಗ ಕರಡಿಯ ರೂಪವನ್ನು ತಾಳುತ್ತದೆ.
ಇದರಿಂದ ಉತ್ತರಭಾಗಕ್ಕೆ ಇರುವುದೇ Polar star ಇದನ್ನೇ ಕನ್ನಡದಲ್ಲಿ ಧ್ರುವ ನಕ್ಷತ್ರ ಎಂದು ಕರೆಯುವುದು.
ಮಾನವನ ಬರಿಗಣ್ಣಿಗೆ 6 ಸಾವಿರ ನಕ್ಷತ್ರಗಳು ರಾತ್ರಿಹೊತ್ತು ಗೋಚರಿಸುತ್ತವೆ, ಇದರಲ್ಲಿ 80ರಿಂದ 82 ಹೊಳೆಯುವ ನಕ್ಷತ್ರಗಳಿವೆ, ಇದರಲ್ಲೆಲ್ಲಾ ಶುಬ್ರಮಾನವಾಗಿ ಹೊಳೆಯುವುದೇ ಧ್ರುವ ನಕ್ಷತ್ರ. ಇದು ಅದ್ಭುತವಾದ ಗುಣವನ್ನು ಹೊಂದಿದೆ. ಇವೆಲ್ಲಕ್ಕಿಂತಲೂ ಬಹುಮುಖ್ಯವಾಗಿ ಇದೊಂದು ಸ್ಥಿರ ನಕ್ಷತ್ರ. ( ಬೇರೆ ನಕ್ಷತ್ರಗಳೆಲ್ಲವೂ ಕಾಲಕಾಲಕ್ಕೆ ತಮ್ಮ ಪಥಗಳನ್ನು ಬದಲಿಸುತ್ತಿರುತ್ತದೆ ). ರಾತ್ರಿ ಹೊತ್ತು ಪಶ್ಚಿಮ ದಿಕ್ಕಿಗೆ ನಿಂತು ನೆತ್ತಿಯಮೇಲೆ ಕೈಮಾಡಿ ಉತ್ತರದಿಕ್ಕಿಗೆ ಕೈ ಚಾಚಿದಾಗ ಕಾಣುವುದೇ ಧ್ರುವ ನಕ್ಷತ್ರ. ಈ ಕಾರ್ಯ ನಿಮ್ಮ ತಾಳ್ಮೆಯನ್ನು ಪರೀಕ್ಷಿಸದೇ ಇರದು, ಇದೇ ನಕ್ಷತ್ರಗಳ ಅಧ್ಯಯನದ ಮೊದಲ ಮೆಟ್ಟಿಲು, ಇದರ ಆಧಾರದ ಮೇಲೆ ಮತ್ತೆಲ್ಲಾ ನಕ್ಷತ್ರಗಳನ್ನು ಗುರುತಿಸಿಕೊಳ್ಳಲು ನೆರವಾಗುತ್ತದೆ. ಭೂಮಿಗೆ ಇದು ಸುಮಾರು 111 light years ದೂರದಲ್ಲಿದೆ.
ನೀವು ರಾತ್ರಿಹೊತ್ತು ಕಾಣುವ ಒಂದೇ ಸಾಲಿನಲ್ಲಿರುವ ಮೂರು ನಕ್ಷತ್ರಗಳನ್ನು Oriental belt star ಎಂದು ಗುರುತಿಸಲಾಗುತ್ತದೆ ಇದರ ದಿಕ್ಕಿನ ಆಧಾರದ ಮೇಲೆಯೇ ಈಜಿಪ್ಟ್ ನಲ್ಲಿರುವ ಪಿರಮಿಡ್ಡನ್ನು ಕಟ್ಟಲಾಗಿದೆ ಎಂಬ ಮಾಹಿತಿಯೂ ದೊರಕುತ್ತದೆ.
ಆಕಾಶ ಕಾಯದಲ್ಲಿ ಕೋಟ್ಯಂತರ ನಕ್ಷತ್ರಗಳಿವೆ ಸೂರ್ಯನು ಒಂದು ನಕ್ಷತ್ರ ಎಂತಲೇ ಗುರುತಿಸಲಾಗಿದೆ ಎಂಬ ವಿಷಯ ನಿಮಗೆ ತಿಳಿದಿರಬಹುದು. ನಮ್ಮ ಹ್ಯಾಲಿ ಗ್ಯಾಲಕ್ಸಿಯಲ್ಲಿ ನಮ್ಮ ಸೂರ್ಯನಿಗಿಂತಲೂ ದೊಡ್ಡದಾದ ನಕ್ಷತ್ರಗಳಿವೆ. ಹಗದ್ರೆ ನಕ್ಷತ್ರಗಳಿಗೂ ಸೂರ್ಯನಿಗೂ ಏನಾದರೂ ವ್ಯತ್ಯಾಸವಿದೆಯೇ ? ಇಲ್ಲಿ ಸೂರ್ಯ, ನಕ್ಷತ್ರ ಅಷ್ಟೇ ಅಲ್ಲದೆ ಚಂದ್ರನಿದ್ದಾನೆ ಆತ ಹೇಗೆ ಹೊಳೆಯುತ್ತಾನೆ ? ಆಗಾಗ ನಕ್ಷತ್ರಗಳು ಬೀಳುವುದನ್ನು ನೀವು ನೋಡಿರಬಹುದು ಅಥವಾ ಕೇಳಿರಬಹುದು ಅದು ಹೇಗೆ ಸಾಧ್ಯ ಅಥವಾ ಅದು ನಿಜವೇ ?
ಸೂರ್ಯನಲ್ಲಿ ಪ್ರತಿಕ್ಷಣವೂ ರಾಸಾಯನಿಕ ಕ್ರಿಯೆ ನಡೆಯುತ್ತಿರುತ್ತದೆ, ಪ್ರತಿ ಸೆಕೆಂಡಿಗೆ 600 ton ಹೈಡ್ರೋಜನ್ ಹೀಲಿಯಂ ಆಗಿ ಪರಿವರ್ತನೆಗೊಳ್ಳುತ್ತದೆ. ಇದರಿಂದಲೇ ಭೂಮಿಗೆ ಶಾಖ,ಬೆಳಕು ಎರಡು ಬರುವುದು, ಹೀಗೆ ಸೂರ್ಯನಿಂದ ತಯಾರಾದ ಬೆಳಕು ಭೂಮಿಯನ್ನು ತಲುಪಲು 8 ನಿಮಿಷ 20 ಸೆಕೆಂಡುಗಳು ಆಗುತ್ತದೆ. ಸೂರ್ಯನ ನೇರ ಬೆಳಕು ಭೂಮಿಯ ವಾತಾವರಣದಲ್ಲಿ ಬೆರೆಯುವುದರಿಂದಲೇ ಆಕಾಶ ನೀಲಿಯಾಗಿ ಕಾಣುವುದು, ಸೂರ್ಯನ ಬೆಳಕು ಸರ್ವಕ್ಕೂ ಚೈತನ್ಯವನ್ನು ನೀಡುವುದರಿಂದ ಭಾರತೀಯರು ಎದ್ದ ತಕ್ಷಣ ಸೂರ್ಯನನ್ನು ನಮಿಸುವುದು, ರಥಸಪ್ತಮಿಯಂದು ನಮಿಸುವುದು, ಯೋಗಾಸನದ ಸೂರ್ಯನಮಸ್ಕಾರವು ಇದನ್ನೇ ಒತ್ತಿ ಹೇಳುವುದು.
ಇನ್ನು ಚಂದ್ರನ ವಿಷಯಕ್ಕೆ ಬರುವುದಾದರೆ ಈತನು ಒಂದು ಕಾಲಕ್ಕೆ ಭೂಮಿಯ ಭಾಗವೇ ಕಾಲಕ್ರಮೇಣ ಭೂಮಿಗೆ ಉಲ್ಕೆ ಅಪ್ಪಳಿಸಿದ ಪರಿಣಾಮವಾಗಿ ಚಂದ್ರನಾಗಿ ಮಾರ್ಪಟ್ಟಿದ್ದು. ಈತ ಸ್ವಯಂ ಪ್ರಕಾಶಿತವಾಗಿ ಹೊಳೆಯುವುದು ಕಡಿಮೆಯೇ, ಈತ ಸೂರ್ಯನಿಂದ ಬೆಳಕನ್ನು ಹೀರೆ ರಾತ್ರಿ ಹೊತ್ತು ಭೂಮಿಗೆ ಬೆಳಕನ್ನು ನೀಡುತ್ತದೆ. ಭೂಮಿಯು ಒಂದು ಪಥದಲ್ಲಿ ಚಲಿಸುವಂತೆ ಮಾಡುವುದು ಈತನ ಕಾಯಕ. ಚಂದ್ರನ ಮತ್ತೊಂದು ಮುಖವನ್ನು ನಾವು ಎಂದಿಗೂ ನೋಡಲಿಕ್ಕೆ ಸಾಧ್ಯವಿಲ್ಲ ಏಕೆಂದರೆ ಇದು ಭೂಮಿಯ ರೀತಿ ತನ್ನ ಸುತ್ತ ತಾನು ಪ್ರದಕ್ಷಿಣೆಯನ್ನು ಹಾಕಿಕೊಳ್ಳುವುದಿಲ್ಲ. ಚಂದ್ರನಿಂದಲೇ ಅಮಾವಾಸ್ಯೆ ಹುಣ್ಣಿಮೆಯ ಉಬ್ಬರವಿಳಿತಗಳು ಮೂಡುವುದು. ಈತನ ಬೆಳಕೇ ಸಾಹಿತ್ಯದ ಜಾಗರದ ಹಕ್ಕಿಯ ಆಹಾರ, ಇದರ ಬೆಳಕಿನಿಂದಲೇ ನಿಶಾಚರಿಗಳು ಓಡಾಡುವುದು, ಈತನಿಂದಲೇ ಬ್ರಹ್ಮ ಕಮಲ ರಾತ್ರಿ ರಾಣಿ ಹೂವುಗಳು ಅರಳಿ ಸುವಾಸನೆಯನ್ನು ನೀಡುವುದು, ಮರಗಳಿಗೂ ವಿಶ್ರಾಂತಿ ದೊರಕುವುದು, ಮಾನವನ ಮನಸ್ಸಿಗೆ ಶಾಂತಿ ದೊರಕುವುದು. ( ಚಂದ್ರನಿಗೆ ಸಂಬಂಧಪಟ್ಟ ಮತ್ತಷ್ಟು ಮಾಹಿತಿಗಾಗಿ ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕವನ್ನು ಓದುವುದು )
ಇನ್ನ ನಕ್ಷತ್ರಗಳು ಕೆಲವು ಸ್ವಯಂ ಪ್ರಕಾಶಿತವಾಗಿಯೂ ಹೊಳೆಯುತ್ತದೆ. ಬಿಳಿ ಬಣ್ಣದ ನಕ್ಷತ್ರ ಹೆಚ್ಚು ಬಿಸಿಯಿಂದ ಕೂಡಿರುತ್ತದೆ, ಕೆಂಪು ವರ್ಣದಲ್ಲಿ ಹೊಳೆಯುವ ನಕ್ಷತ್ರ ತಂಪಾಗಿರುತ್ತದೆ, ನೀಲಿ ಬಣ್ಣದಲ್ಲಿ ಹೊಳೆಯುವ ನಕ್ಷತ್ರ ತೀವ್ರ ಬಿಸಿಯಿಂದ ಕೂಡಿರುತ್ತದೆ.
ನೆನಪಿರಲಿ ಬ್ರಿಟಿಷರು ಭಾರತಕ್ಕೆ ಬರುವ ಪೂರ್ವದಲ್ಲಿಯೇ ನೆರೆ ರಾಷ್ಟ್ರಗಳೊಂದಿಗೆ ಅಖಂಡ ಹಿಂದುಸ್ತಾನ ಸಮುದ್ರ ಮಾರ್ಗದ ಮೂಲಕ ವಾಣಿಜ್ಯ-ವ್ಯಾಪಾರ ನಡೆಸುತ್ತಿತ್ತು. ಈ ಹಡಗುಗಳ ಚಲನವಲನಗಳೆಲ್ಲವೂ ಪಂಚಾಂಗದಾರಿತ ನಕ್ಷತ್ರಗಳ ಆಧಾರದ ಮೇಲೆ ಚಲಿಸುತ್ತಿದ್ದವು. ಹಡಗು ಚಾಲಕರೊಂದಿಗೆ ಪಂಚಾಂಗ ಬಲ್ಲವರನ್ನು ಹಡಗಿನಲ್ಲಿಯೇ ಕರೆದುಕೊಂಡು ಹೋಗಲಾಗುತ್ತಿತ್ತು, ಇವರೇ ಬೇರೆ ದೇಶಗಳಿಗೆ ಮಾರ್ಗದ ದಿಕ್ಕನ್ನು ಸೂಚಿಸುತ್ತಿದ್ದರು ಎಂಬ ಮಾಹಿತಿಯೂ ತಿಳಿದುಬರುತ್ತದೆ, ಇಂದಿಗೆ ನಾವು ನೋಡುತ್ತಿರುವ ಅತ್ಯಾಧುನಿಕ ಉಪಕರಣಗಳು ಇಲ್ಲದ ಆ ಕಾಲಕ್ಕೆ ಜ್ಯೋತಿಷ್ಯಶಾಸ್ತ್ರ ಎಂಬುದು ಭಾರತೀಯರು ವಿಶ್ವಕ್ಕೆ ನೀಡಿದ ಜ್ಞಾನಭಂಡಾರ ಎಂಬುವುದನ್ನು ನಾವು ಸ್ಮರಿಸಲೇಬೇಕು.
ಪಾಶ್ಚಾತ್ಯ ದೇಶಗಳ ವಿಜ್ಞಾನ ತೀರಾ ಈಚಿನದು, ಆಕಾಶಕಾಯಗಳ ಬಗ್ಗೆ, ವಿಶ್ವದ ಬಗ್ಗೆ ವಿವರ 16ನೇ ಶತಮಾನಗಳಿಂದ ಈಚೆಗೆ ಬಂದಿರುವಂತಹದು. ಪಾಶ್ಚಾತ್ಯ ರಾಜರ ಆಳ್ವಿಕೆಯಲ್ಲಿ ಕೆಲವು ಮೇಧವಿಗಳು ಸೂರ್ಯನ ಸುತ್ತ ಭೂಮಿ ತಿರುಗುತ್ತದೆ ಎಂಬ ವಿಷಯ ಮಂಡಿಸಿ ಸಾವನ್ನಪ್ಪಿದವರು ಬಹಳ ಮಂದಿ ಇದ್ದಾರೆ, ಅನೇಕ ವಿಜ್ಞಾನಿಗಳು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಅಸುನೀಗಿದರು,Telescopeನಂತಹ ಉಪಕರಣವನ್ನು ತಯಾರಿಸಲಿಕ್ಕೆ ಹಗಲು-ರಾತ್ರಿ ಕಷ್ಟಪಟ್ಟು ಸೋತವರು ಇದ್ದಾರೆ. ಇದು ಮುಂದುವರಿದ ಹಂತಕ್ಕೆ 16ನೇ ಶತಮಾನದ ಆದಿಭಾಗದಲ್ಲಿ ಗೆಲಿಲಿಯೋ ಟೆಲಿಸ್ಕೋಪ್ ಅನ್ನು 1609 ರಲ್ಲಿ ಕಂಡುಹಿಡಿದರು, ಇದರ ಸಹಾಯದಿಂದ ನಕ್ಷತ್ರಗಳ ಗ್ರಹಗಳ ಅಧ್ಯಯನದಲ್ಲಿ ತೊಡಗಿಕೊಂಡರು. ಈ ಹಂತವೇ ಆಧುನಿಕ ವಿಜ್ಞಾನದ ಪ್ರಥಮ ಮೈಲುಗಲ್ಲು. ಇಂದು ನಕ್ಷತ್ರಗಳು ಎಷ್ಟು ಪ್ರಾಮುಖ್ಯತೆಯನ್ನು ಹೊಂದಿದ್ದಾವೆ ಎಂದರೆ ಅನೇಕ ರಾಷ್ಟ್ರಗಳ ರಾಷ್ಟ್ರ ಧ್ವಜದಲ್ಲಿ ತಮ್ಮ ಪಾಲನ್ನು ಹಂಚಿಕೊಂಡಿವೆ.
ನಕ್ಷತ್ರಗಳು ಮಾನವ, ಪ್ರಾಣಿ ಹಾಗೂ ಸಸ್ಯಗಳ ಜೀವನದಲ್ಲಿ ಎಷ್ಟು ಹಾಸುಹೊಕ್ಕಾಗಿದೆ ಎನ್ನುವುದಕ್ಕೆ ಕೆಳಗೆ ಕೊಟ್ಟಿರುವ ಕೆಲವು ನಿದರ್ಶನಗಳು ಸಾಕ್ಷಿಯಾಗುತ್ತವೆ.
ಕೆಲವು ಸಸ್ಯದ ಎಲೆ ಮತ್ತು ಹೂಗಳ ರಚನೆ ನಕ್ಷತ್ರದ ರೂಪವನ್ನೇ ಹೋಲುತ್ತದೆ ಈ ರೂಪವನ್ನು ಸಸ್ಯಗಳು ಹೇಗೆ ಪಡೆದವು ?
ದಾರೆ ಹಣ್ಣು / ಬಿಂಬುಳಿ ಹಣ್ಣು/ ನಕ್ಷತ್ರದ ಹಣ್ಣನ್ನು ನೀವು ತಿಂದಿರಬಹುದು, ಇದರೊಂದಿಗೆ ಒಂದು ಮಸಾಲೆ ಪದಾರ್ಥವನ್ನು ನೋಡಿರಬಹುದು ಇವುಗಳು ನಕ್ಷತ್ರದ ರಚನೆಯನ್ನು ಹೇಗೆ ಪಡೆದವು ?
ಇನ್ನೂ ನಕ್ಷತ್ರದ ರಚನೆಯನ್ನೇ ಹೋಲುವ ಮೀನುಗಳನ್ನು, ಆಮೆಗಳನ್ನು ಹಾಗೂ ಶಂಕುಗಳನ್ನ ಕಡಲತೀರಕ್ಕೆ ಹೋದಾಗ ನೀವು ನೋಡಿರಬಹುದು.
ನಕ್ಷತ್ರದ ಮೂತಿಯನ್ನು ಹೋಲುವ ಪ್ರಾಣಿಯೊಂದಿದೆ, ಇದನ್ನು ಇಂಗ್ಲಿಷ್ ನಲ್ಲಿ Star nosed mole ಎಂದು ಕರೆಯುತ್ತಾರೆ ಆದರೆ ಇದು ನೋಡಕ್ಕೆ ಅಷ್ಟು ಚಂದವಿರದು.
ಇನ್ನು ಇಸ್ಲಾಂ ಧರ್ಮದಲ್ಲಿ ನಕ್ಷತ್ರಕ್ಕೆ ತನ್ನದೇ ಆದಂತಹ ಮಹತ್ವವಿದೆ, ಆದ್ದರಿಂದಲೇ ಅವರ ಬಾವುಟದಲ್ಲಿ ನಕ್ಷತ್ರ ವಿಶೇಷ ಸ್ಥಾನವನ್ನು ಪಡೆದಿದೆ.
ಗ್ರೀಕ್ ನಾಗರಿಕತೆಯ ಸಂದರ್ಭದಲ್ಲಿಯೇ ನಕ್ಷತ್ರದ ಮಹಿಳೆಗೆ ವಿಶೇಷ ಪೂಜೆ ಸಲ್ಲುತ್ತಿತ್ತು ಎಂಬ ಮಾಹಿತಿ ದೊರಕುತ್ತದೆ.
ಹಿಮಾಲಯದ ತಪ್ಪಲಿನಲ್ಲಿರುವ ಕೆಲವು ಕಟ್ಟಡದ ರಚನೆ ವಿಜ್ಞಾನಕ್ಕೆ ಸವಾಲನ್ನು ಒಡ್ಡಿದೆ, ಅಷ್ಟಲ್ಲದೆ ಇವತ್ತು ನಕ್ಷತ್ರದ ಆಕಾರವನ್ನೇ ಹೋಲುವ ಬಹಳಷ್ಟು ಕಟ್ಟಡಗಳು ತಲೆಯೆತ್ತಿವೆ.
ಡಿಸೆಂಬರ್ ತಿಂಗಳ ಕ್ರಿಸ್ಮಸ್ ಮಾಸದಲ್ಲಿ ಪ್ರತಿ ಕ್ರಿಶ್ಚಿಯನ್ ಮನೆಯವರ ಮನೆಯ ಮುಂದೆ ನಕ್ಷತ್ರದ ದೀಪ ನೇತಾಡುತ್ತಿರುವುದಲ್ಲದೆ, ಕ್ರಿಸ್ಮಸ್ ಮರಕ್ಕೆ ಅಳವಡಿಸುವ ನಕ್ಷತ್ರ, ಮರಕ್ಕೆ ಮತ್ತಷ್ಟು ಶೋಭೆಯನ್ನು ತರುತ್ತದೆ.
ಯಾರಿಗೆ ತಾನೇ ಆಭರಣ ಎಂದರೆ ಇಷ್ಟವಿಲ್ಲ ? ವಜ್ರಕ್ಕೆ ಅಳವಡಿಸಿರುವ ನಕ್ಷತ್ರದ ಕಟ್ಟಿಂಗ್ ಹೆಚ್ಚು ಶೋಭೆಯನ್ನು ಆಭರಣಕ್ಕೆ ಕೊಡುತ್ತದೆ.
ಇನ್ನೂ ಬೇಲೂರು ಚೆನ್ನಕೇಶವ ದೇವಾಲಯದ ಕೆತ್ತನೆಯು ನಕ್ಷತ್ರದ ರಚನೆಯನ್ನೇ ಹೋಲುತ್ತದೆ.
ಚಿಕ್ಕಮಗಳೂರಿನಲ್ಲಿರುವ ಮಂಜರಬಾದ್ ಕೋಟೆ ಪ್ರವಾಸಿಗರನ್ನು ಕೈಬಿಸಿ ತನ್ನತ್ತ ಸೆಳೆಯುತ್ತದೆ.
ಇನ್ನು ನಕ್ಷತ್ರದ ಅಚ್ಚು ಮುದ್ರಿಸಿರುವ ವಸ್ತ್ರಗಳು ಹೆಚ್ಚು ಶೋಭೆಯನ್ನು ಪಡೆಯುತ್ತವೆ.
ನಕ್ಷತ್ರಗಳಿಗೆ ಸಂಬಂಧಪಟ್ಟ ವಿಷಯ ಇಷ್ಟಕ್ಕೇ ನಿಂತಿಲ್ಲ, ವಿಶ್ವದಲ್ಲಿ ಕೋಟ್ಯಂತರ ನಕ್ಷತ್ರಗಳಿವೆ, ಇವುಗಳಿಗೆ ಸಂಬಂಧಪಟ್ಟ ಹೊಸ ಹೊಸ ಸಂಶೋಧನೆಗಳು ಇಂದಿಗೂ ನಡೆಯುತ್ತಲೇ ಇವೆ, ನಕ್ಷತ್ರಗಳು ಹೇಗೆ ಉಗಮವಾಗುತ್ತವೆ ? ಅವು ಎಷ್ಟು ವರ್ಷ ಜೀವಿಸುತ್ತವೆ ? ಪ್ರಕಾಶಮಾನವಾಗಿ ಹೊಳೆಲಿಕ್ಕೆ ಕಾರಣವೇನು ? ಇದರೊಂದಿಗೆ ದೂರದ ಹೊಸ ನಕ್ಷತ್ರಗಳನ್ನು ಕಂಡು ಹಿಡಿದು ನಾಮಕರಣವನ್ನು ಮಾಡಲಾಗುತ್ತಿದೆ, ಅಧ್ಯಯನಕ್ಕೆ ಸಹಾಯವಾಗುವ ಅತ್ಯಾಧುನಿಕ ಉಪಕರಣಗಳು ( Telescope ) ಬಂದಿವೆ, ಸಮುದ್ರಯಾನ ನಕ್ಷತ್ರಗಳ ಆಧಾರದ ಮೇಲೆ ಮರೆಯಾಗಿ ರಡಾರ್ ರನ್ನು ಬಳಸಲಾಗುತ್ತಿದೆ. ನಮ್ಮ ಭಾರತದ ಲಡಾಕ್ ನಲ್ಲಿ ವಿಶ್ವದ ನಾಲ್ಕನೇ ಅತಿದೊಡ್ಡ Telescope ಸ್ಥಾಪಿಸಲಾಗಿದೆ.
ನಮ್ಮ ಬಳಿ ನಕ್ಷತ್ರ ವೀಕ್ಷಣೆಗೆ ಸಣ್ಣದಾದ ಟೆಲಿಸ್ಕೋಪ್ ಇಲ್ಲವೆಂದು ಕೊರಗುವುದು ಬೇಡ, ನಮ್ಮ ಕಣ್ಣಿಗೆ ಗೋಚರಿಸುತ್ತಿರುವುದೇ ನಮ್ಮ ಪೂರ್ವಜರು ಜ್ಯೋತಿಷ್ಯಾಸ್ತ್ರದಲ್ಲಿ ನಮೂದಿಸಿದ್ದಾರೆ ಸಾಧ್ಯವಾದರೆ ಪ್ರಾದೇಶಿಕ ಪಂಚಾಂಗವನ್ನು ತೆಗೆದುಕೊಂಡು ಓದಿ, ( ಮೈಸೂರಿನ ಒಂಟಿಕೊಪ್ಪಲ್ ಪಂಚಾಂಗ ) ಭಾರತೀಯರೇ ಅಭಿವೃದ್ಧಿಪಡಿಸಿದ Sky app ಅಪ್ಲಿಕೇಶನ್ Playstore ನಲ್ಲಿದೆ ಅದರ ಉಪಯೋಗವನ್ನು ಪಡೆದುಕೊಳ್ಳಬಹುದು, ಕಾಂಕ್ರೀಟ್ ಕಾಡಿನ ಮಧ್ಯ ಬೆಳೆಯುವ ಮಕ್ಕಳಿಗೆ ಆಕಾಶದ ಬಗ್ಗೆ ಮಾಹಿತಿಯ ಕೊರತೆಯಾಗಿದೆ, ಇದಕ್ಕಿಂತಲೂ ಹೆಚ್ಚಿನದಾಗಿ ನಗರದ ಲೈಟ್ ಪಲ್ಯೂಷನ್ ( Light pollution ) ಆಕಾಶವನ್ನು ನೋಡಲಿಕ್ಕೆ ತಡೆಯುಂಟುಮಾಡುತ್ತಿದೆ. ಸಾಧ್ಯವಾದರೆ ಈ ತಿಂಗಳಿಂದಲೇ ನಕ್ಷತ್ರಗಳ ಬಗ್ಗೆ ವಿಷಯಗಳನ್ನು ಕಲೆಹಾಕುತ್ತಾ ಹೋಗೋಣ ಇನ್ನೇನು ಕೆಲವೇ ದಿನಗಳಲ್ಲಿ ಮಕ್ಕಳಿಗೆ ಬೇಸಿಗೆಯ ರಜೆಯೂ ಬರುತ್ತದೆ ಅಂಥ ಸಂದರ್ಭದಲ್ಲಿ ತಮ್ಮ ಊರುಗಳಿಗೆ ಕರೆದುಕೊಂಡು ಹೋದಾಗ ಅಥವಾ ಮಕ್ಕಳೊಂದಿಗೆ ಚಾರಣವನ್ನು ಕೈಗೊಳ್ಳಿ ಇದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗುತ್ತಾರೆ ಜೊತೆಗೆ ನಕ್ಷತ್ರಗಳಿಗೆ ಸಂಬಂಧಪಟ್ಟ ಒಂದು ಜಾಲವೇ ತೆರೆದುಕೊಂಡಂತಾಗುತ್ತದೆ.
ನಮ್ಮದು ಶ್ರೇಷ್ಠ ಅವರದು ಕನಿಷ್ಠ ಎಂದು ವಾದ ಮಾಡುವುದು ಒಳಿತಲ್ಲ ಬದಲಿಗೆ, ನಮ್ಮ ಪ್ರಾದೇಶಿಕ ಜ್ಞಾನವನ್ನು ಗೌರವಿಸೋಣ, ಪಾಶ್ಚಾತ್ಯರ ವಿಷಯವನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ ಯಾವುದನ್ನೇ ಮಾಡಿದರು ನಮ್ಮ ಜ್ಞಾನಾಭಿವೃದ್ಧಿ ಆಗುವುದೇ ತಾನೆ ? ಈ ವಿಷಯಗಳೊಂದಿಗೆ ನಮ್ಮ ದೇಶದ ಕಾರ್ಯನಿರತವಾಗಿರುವ ವಿಜ್ಞಾನಿಗಳು, ಗಗನಯಾತ್ರಿಗಳನ್ನು ಸ್ಮರಿಸೋಣ.
ಅಂದಹಾಗೆ ಇವತ್ತಿನ ರಾತ್ರಿ ಆಕಾಶದಲ್ಲಿ ನಡೆಯುವ ಸ್ವಾರಸ್ಯಕರ ವಿದ್ಯಮಾನದ ಬಗ್ಗೆ ತಿಳಿದಿದೆ ಎಂದು ಭಾವಿಸುತ್ತೇನೆ, ಇವತ್ತು ಗೋಚರಿಸುವ ಚಂದ್ರ Pink moon ಆಗಿರುತ್ತದೆ ತಪ್ಪದೆ ನೋಡಿ.
ನಕ್ಷತ್ರ ಹಾಗೂ ಚಂದ್ರನಿಗೆ ಸಂಬಂಧಪಟ್ಟ ಜಾಲವನ್ನು ಅರ್ಥ ಮಾಡಿಕೊಳ್ಳಲಿಕ್ಕೆ ಹಗಲು ಕಳೆದು ರಾತ್ರಿ ಆಗಲೇಬೇಕು, ಹಗಲಷ್ಟೇ ರಾತ್ರಿಯನ್ನು ಗೌರವಿಸೋಣ ಮಿನುಗು ನಕ್ಷತ್ರದ ನಕ್ಷತ್ರಗಳಂತೆ ನಾವು ಮಿನುಗೋಣ.
ಧನ್ಯವಾದಗಳು.

















Amazing
ReplyDelete