Saturday, January 29, 2022

ಪ್ರವಾಸವೆಂಬ ಪೆಡಂಭೂತ.

                   

                        - ಎಸ್ ಪಿ ತೇಜರಾಜು.


  ಯಾವ ಮಕ್ಕಳಿಗೆ ತಾನೆ ಶಾಲಾ ಪ್ರವಾಸ ಎಂದರೆ ಇಷ್ಟವಾಗುವುದಿಲ್ಲ ಹೇಳಿ? ಯಾವ ಯುವಜನತೆಗೆ ತಾನೆ ಚಾರಣ ಎಂದರೆ ಇಷ್ಟವಾಗುವುದಿಲ್ಲ ಹೇಳಿ? ಯಾವ ಗೃಹಸ್ಥರಿಗೆ ತಾನೇ ತೀರ್ಥಕ್ಷೇತ್ರಗಳ ಪ್ರವಾಸ ಎಂದರೆ ಇಷ್ಟವಾಗುವುದಿಲ್ಲ ಹೇಳಿ? ಬಹುಶಹ ಎಲ್ಲ ಧರ್ಮಗಳಲ್ಲಿಯೂ ಜೀವನದಲ್ಲಿ ಒಮ್ಮೆಯಾದರೂ ಕೆಲವು ತೀರ್ಥಕ್ಷೇತ್ರಗಳ ಬೇಟಿಯ ಮಹತ್ವವನ್ನು ಎತ್ತಿ ಹಿಡಿಯುತ್ತದೆ.

ಕೆಲವು ಬಾರಿ ಪ್ರವಾಸ ಕೈಗೊಂಡಾಗ ದೈಹಿಕವಾಗಿ ಆಯಾಸವಾಗಬಹುದು ಆದರೆ, ಪ್ರವಾಸಕ್ಕೆ ಹೊರಡುವ ಮೊದಲು ಇರುವ ಹುಮ್ಮಸ್ಸು ಎಲ್ಲವನ್ನು ಹಾಗೂ ಪ್ರವಾಸದ ಕೊನೆಯಲ್ಲಿ ಸಿಗುವ ಒಂದು ಸಣ್ಣ ಖುಷಿಯಲ್ಲಿ ಎಲ್ಲ ದೈಹಿಕ ಆಯಾಸಗಳು ಮರೆಯಾಗುತ್ತವೆ.

ನಮ್ಮ ಭರತಖಂಡದಲಂತೂ ಧರ್ಮಿಕವಾಗಿ ಎಲ್ಲರೂ ಸದೃಢರಾಗಿರುವುದರಿಂದ, ದೇವರೆಂಬ ಶಕ್ತಿಗೆ ತಲೆಬಾಗುವುದು ಸರ್ವೇಸಾಮಾನ್ಯ, ಸಣ್ಣಪುಟ್ಟ ಜಾತ್ರೆಗಳಿಂದ ಹಿಡಿದು ಕೋಟ್ಯಾಂತರ ಜನ ಸೇರುವ ಕುಂಭಮೇಳ, ಶ್ರವಣ ಬೆಳಗೊಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ಯಾವುದೇ ಕುಂದು ಕೊರತೆ ಇಲ್ಲದೆ ಸಾಂಗವಾಗಿ ನಡೆದು ಹೋಗುತ್ತದೆ. ಇವುಗಳೆಲ್ಲವೂ ನೆನ್ನೆ ಮೊನ್ನೆ ಪ್ರಾರಂಭವಾದದ್ದಲ್ಲದೆ ಸನಾತನ ಕಾಲದಿಂದಲೂ ನಡೆದುಬಂದಿರುವಂತಹದ್ದು, ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲೇಬೇಕೆಂದು ಇಂದಿಗೂ ಕೂಡ ಕೋಟ್ಯಾಂತರ ಜನ ಸಾವಿರಾರು ಮೈಲಿ ತಿಂಗಳಾನುಗಟ್ಟಲೆ ಬರಿಗಾಲಿನಲ್ಲಿ ನಡೆದುಕೊಂಡು ಬರುವುದಲ್ಲದೆ, ವಿದೇಶಿಯರನ್ನು ಕೈಬೀಸಿ ಕರೆಯುತ್ತದೆ. ಈ ಆಚರಣೆಯ ಪುಣ್ಯಸ್ನಾನ ಮಾನಸಿಕ ಹಾಗೂ ಅಧ್ಯತ್ಮಿಕ ಶಕ್ತಿಯನ್ನು ಹೆಚ್ಚಿಸುತ್ತದೆ.

ದೇಶದಲ್ಲಿ ಬ್ರಿಟಿಷರ ಆಳ್ವಿಕೆ ಪ್ರಾರಂಭವಾಗುತ್ತಿದ್ದಂತೆ ಧಾರ್ಮಿಕವಾಗಿ ಬಹಳಷ್ಟು ಹಿನ್ನಡೆಗಳು ಆದರೂ ಕೂಡ ಇಷ್ಟೊಂದು ಸದೃಡವಾದ ಸನಾತನ ಧರ್ಮಗಳ ಪರಂಪರೆ ಮರೆಮಾಚದೆ ಜೀವಂತವಾಗಿ ಮುನ್ನಡೆಯುತ್ತಾ ಬಂದಿರುವುದು ನಿಜಕ್ಕೂ ಆಶ್ಚರ್ಯಕರ. ಬ್ರಿಟಿಷರ ಆಳ್ವಿಕೆಯ ಬಹಳ ಪ್ರಬಲವಾಗುತ್ತಿದ್ದಂತೆಯೇ, ಇವರ ಪಾಶ್ಚಿಮಾತ್ಯ ನಿಲುವುಗಳು ಇಲ್ಲಿಯ ಜನರನ್ನು ಮೂರ್ಖರನ್ನಾಗಿಸಲು ತೊಡಗಿದವು, ಹೆಚ್ಚು ಹೆಚ್ಚು ಹಣ ಸಂಪಾದಿಸಿ ಶ್ರೀಮಂತರಾಗಬೇಕೇನ್ನುವ ಬಯಕೆ ಮೂಡಲಾರಂಭಿಸಿತು. ಇವರ ಕೊಳ್ಳುಬಾಕತನ, ಕೈಗಾರಿಕರಣ ಇಲ್ಲಿಯ ಸಂಪತ್ತನ್ನು ಕೊಳ್ಳೆ  ಹೊಡೆಯ ತೊಡಗಿದವು.

ತಮ್ಮ ಒಂದು ಸುತ್ತಿನ ಪರಿಧಿಯೊಳಗಷ್ಟೇ ಜೀವನವನ್ನೂ ನಡೆಸುತ್ತಿದ್ದಂತ ಜನರ ಮನಸ್ಥಿತಿ ಬದಲಾಗತೊಡಗಿತು, ಹಣಗಳಿಕೆಗೆ ಇವರು ತೋರಿ ಕೊಟ್ಟ ಮಾರ್ಗದಲ್ಲಿ ನಡೆಯತೊಡಗಿದರು. ಶ್ರೀಮಂತ ಕಾಡುಗಳನ್ನು ಕಡೆದರು ಕಾಫಿ ಟೀ ಎಸ್ಟೇಟ್ ಮಾಡಿದರು, 1864 ರಲ್ಲಿ ಅರಣ್ಯ ಇಲಾಖೆ ಪ್ರಾರಂಭಿಸಿ ನಮ್ಮ ಶ್ರೀಮಂತ ಅರಣ್ಯಗಳಲ್ಲಿ ಬೆಳೆದಂತಹ ಗಟ್ಟಿಮುಟ್ಟಾದ ಮಹಾಗನಿ ಮರಗಳನ್ನು ರೈಲ್ವೆ ಕಾಮಗಾರಿಗಾಗಿ ಬೆಳೆಸಿದರು, ಮಿಲಿಯನ್ ಗಟ್ಟಲೆ ಬಿದಿರನ್ನು ಕಾಗದ ಕಾರ್ಖಾನೆಗೆ ಸರಬರಾಜು ಮಾಡಿದರು, ಗೊಂಡಾರಣ್ಯಗಳನ್ನೆಲ್ಲಾ ನೆಲಸಮಗೊಳಿಸಿ ಅಕೇಶಿಯಾ ನೀಲಗಿರಿ ಏಕಸ್ವಾಮ್ಯ ಸಾಮ್ರಾಜ್ಯವನ್ನು ಸೃಷ್ಟಿಸಿದರು, ಕಾಡುಗಳನ್ನು ಆಕ್ರಮಿಸಿ ಅಲ್ಲಿಂದ ಹೊರಬರಲು ಪ್ರಯತ್ನ ಪಡುವ ಪ್ರಾಣಿ-ಪಕ್ಷಿಗಳನ್ನು ಗುಂಡಿಕ್ಕಿ ಕೊಂದುಹಾಕಿದರು, ಹೆಚ್ಚು ಬೆಳೆ ತೆಗೆಯಲೆಂದು ಭೂಮಿಗೆ ವಿಷ ಉಣಿಸಿದರು,  ಬೆಟ್ಟಗುಡ್ಡಗಳನ್ನು ಉರುಳಿಸಿದರು, ಚಿನ್ನ ಬೆಳ್ಳಿ ತಾಮ್ರ ಕಬ್ಬಿಣ ಹೀಗೆ ಹತ್ತಾರು ಲೋಹಗಳಿಗಾಗಿ ಭೂಮಿಯ ಒಡಲನ್ನು ಬಗೆದರು. ಸಾಲದಕ್ಕೆ ಇವೆಲ್ಲವನ್ನೂ ತಮ್ಮ ಸಾಧನೆ ಎಂಬಂತೆ ಹುಬ್ಬಿ ಆಕಾಶಕ್ಕೇರಿದರು.

ಎಂದೂ ನೆಲಕ್ಕೆ ಬಿಸಿಲೇ ಬೀಳದ ಕಾಡುಗಳಲ್ಲಿ ರಸ್ತೆಗಳು ಪ್ರಾರಂಭಗೊಳ್ಳುತ್ತಹೋದವೋ ಅಂದಿನಿಂದ ಜೀವವೈವಿಧ್ಯ ಕಣ್ಮರೆಯಾಗತೊಡಗಿತು, ಹತ್ತಾರು ದಿನ ಪ್ರಯಾಣ ಮಾಡಿ  ತಲುಪಬೇಕಾದಂತಹ ಜಾಗಕ್ಕೆ ಎರಡು-ಮೂರು ದಿನಗಳಲ್ಲಿ ತಲುಪುತ್ತಿದ್ದುದು ಎಲ್ಲರಿಗೂ ಖುಷಿಯ ವಿಚಾರವೆನಿಸಿತು. ಯಾವಾಗ ದೇಶದ ಮೂಲೆ ಮೂಲೆಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗತೊಡಗಿತೊ ಅಂದಿನಿಂದ ಜನರ ಧಾವಂತ ಜೀವನ ಪ್ರಾರಂಭವಾಯಿತು. ಇದೇ ಸಮಯಕ್ಕೆ ವಿಮಾನಗಳ ಪ್ರಯಾಣ ಬಹಳಷ್ಟು ವೇಗವನ್ನು ಪಡೆದು ಪ್ರಪಂಚದ ಯಾವುದೇ ಮೂಲೆಗಾದರೂ ಒಂದೇ ದಿನದಲ್ಲಿ ತಲುಪಬಹುದಾದ ಸುಲಭಮಾರ್ಗ ದೊರಕಿತು.

ಬ್ರಿಟಿಷರು ತಮ್ಮ ಪ್ರವೃತ್ತಿಯಂಬ ಹವ್ಯಾಸದಲ್ಲಿ ಕಾಡುಮೇಡುಗಳಲ್ಲಿ ಕಂಡಂತಹ ಸುಂದರ ಹಾಗೂ ರಮಣಿಯ ಪ್ರದೇಶಗಳನ್ನು ದಾಖಲಿಸತೊಡಗಿದರು, ಇದರಲ್ಲಿಯು ಹೇಗಾದರು ಮಾಡಿ ಹಣಗಳಿಸಬೇಕೆಂದು ಪ್ರವಾಸೋದ್ಯಮ ಎಂಬ ಹೆಸರು ಇಟ್ಟು, ಕಾಡು ಕಡಿದು ರಸ್ತೆ ಮಾಡಿ ಐಷಾರಾಮಿ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾರಂಭಿಸಿದರು, ಎಂದು ಜನರ ಹೆಜ್ಜೆ ಕಾಣದ ಪ್ರದೇಶಗಳಲ್ಲಿ ಜನದಟ್ಟನೆ ಹೆಚ್ಚಾಗಿ, ಕಸದ ರಾಶಿ ಹೆಚ್ಚಾಗತೊಡಗಿತು, ಪ್ರಾರಂಭದಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತಿದೆ ಎಂದುಕೊಂಡರು ಸಹ ಸುಸ್ಥಿರ ಅಭಿವೃದ್ಧಿ ಎಂಬ ಹೆಸರಿನಲ್ಲಿ ಎಲ್ಲವೂ ನಶಿಸಲಾರಂಭಿಸಿದವು, ಅಷ್ಟರೊಳಗಾಗಿ ಇಲ್ಲಿಯ ಜನ ಬ್ರಿಟಿಷರ ರೀತಿ ನೀತಿಗಳಿಗೆ ಪರಿವರ್ತನೆಯಾಗತೊಡಗಿದರು.

ಇಂದು ಅನೇಕ ದೇಶಗಳು ಪ್ರವಾಸೋದ್ಯಮದಿಂದಲೇ ಹಣಗಳಿಸಿ ಶ್ರೀಮಂತರಾಗಿದ್ದರು, ಕೆಲ ದೇಶಗಳು ತಮ್ಮ ದೇಶದಲ್ಲಿ ಪ್ರವಾಸೋದ್ಯಮದಿಂದಾದ ವ್ಯತಿರಿಕ್ತ ಪರಿಣಾಮದಿಂದಾಗಿ ಭಾರೀ ನಷ್ಟವನ್ನು ಅನುಭವಿಸಿ ಪ್ರಕೃತಿ ವಿಕೋಪಕ್ಕೆ ಎಣೆ ಮಾಡಿಕೊಂಡು ಪ್ರವಾಸೋದ್ಯಮಕ್ಕೆ ಬಾಗಿಲು ಮುಚ್ಚಿರುವ ರಾಷ್ಟ್ರಗಳ ಪಟ್ಟಿ ದೊಡ್ಡದೇ ಇದೆ.

ನಮ್ಮ ರಾಷ್ಟ್ರದಲ್ಲಿ ನಡೆದ ಒಂದೇ ಒಂದು ಸಣ್ಣ ಉದಾಹರಣೆಯೆಂದರೆ ವಾಲ್ಪರೈ ತಂದ ಅಭಿವೃದ್ಧಿಯ ದುರಂತ ಜ್ವಲಂತ ಸಾಕ್ಷಿಯಾಗಿ ನಮ್ಮ ಮುಂದಿದೆ. ಹಾಗೂ ಇಂದಿಗೂ ಹಿಮಾಲಯ ಪರ್ವತಾವಳಿಗಳಿಂದ ಸಂಧ್ಯಾ ಪರ್ವತ, ವಿಂಧ್ಯ ಪರ್ವತ, ಕರಾವಳಿ ಹಾಗೂ ನದಿ ಪಾತ್ರಗಳು ಮಲಿನದಿಂದ ತುಂಬಿತುಳುಕುತ್ತಿವೆ. ಇವುಗಳಿಗೆಲ್ಲಾ ಉತ್ತರಿಸುವವರಾದರೂ ಯಾರು ?

ನಮ್ಮ ರಾಜ್ಯದ ರಾಜಧಾನಿಯನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ರಾಷ್ಟ್ರದ ಹಾಗೂ ರಾಜ್ಯಗಳ ಪ್ರಖ್ಯಾತ ಕಚೇರಿಗಳು ಎಲ್ಲಿವೆ, ಅರಣ್ಯ ಇಲಾಖೆ, ಜೀವವೈವಿಧ್ಯ ಮಂಡಳಿ, ಮರಮುಟ್ಟು ವಿಜ್ಞಾನ ಕೇಂದ್ರ, ನೀರಾವರಿ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಮಂಡಳಿ, ಕೇಂದ್ರ ಹವಾಮಾನ ವೈಪರೀತ್ಯ ಕಚೇರಿ, ಭೂವಿಜ್ಞಾನ ಮಂಡಲಿ, ಪ್ರವಾಸೋದ್ಯಮ ಇಲಾಖೆ, ಹೀಗೆ ನೂರಾರು ಸರಕಾರಿ ಕಚೇರಿಗಳೊಂದಿಗೆ, ಲೆಕ್ಕಕ್ಕೆ ಸಿಗದಷ್ಟು ಐಟಿ-ಬಿಟಿ ಕಂಪನಿಗಳ ತವರಾಗಿದೆ, ಹಾಗೂ ಇಲ್ಲಿರುವ ಹತ್ತಾರು ವಿಶ್ವವಿದ್ಯಾಲಯಗಳು ಕೆಲಸಕ್ಕೆ ಬೇಕಾದಂತಹ ಮಾನವ ಬಂಡವಾಳವನ್ನು ಸೃಷ್ಟಿಸುತ್ತಲಿದೆ. ಈ ಸಲ ಉತ್ತಮ ನಾಗರಿಕ ಅಥವಾ ಮಾನವ ಬಂಡವಾಳ ಇದ್ದರೂ ಕೂಡ ನಾವು ಸಾಧಿಸಿದ್ದಾದರೂ ಏನನ್ನ? ಇದ್ದ ಕೆರೆಗಳನ್ನು ಮುಚ್ಚಿ ಅಪಾರ್ಟ್ಮೆಂಟ್ ಮಾಡಲಾಯಿತು, ಉಳಿದಿರುವ ಕೆರೆಗಳಿಗೆ ಕೊಳಚೆ ನೀರನ್ನು ಬಿಡಲಾಯಿತು, ನದಿ ಮೂಲಗಳನ್ನು ಬರೆದು ಮಾಡಿದ್ದು, ದಿನೇ ದಿನೇ ಜನಸಂಖ್ಯೆ, ವಾಹನಗಳ ಸಂಖ್ಯೆ ಹೆಚ್ಚು ಮಾಡಿಕೊಂಡು, ಶಬ್ದ ಮಲಿನ್ಯ ವಾಯುಮಾಲಿನ್ಯಕ್ಕೆ ಕಾರಣವಾದದ್ದು, ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪ್ರಪಂಚದ ಮೂಲೆ ಮೂಲೆಯನ್ನು ತಲುಪುವಂತೆ ಮಾಡಿದ್ದು, ಇದರೊಳಗೆ ಕೆಲವಷ್ಟು ಜನ ಮೋಸ ವಂಚನೆ ಮಾಡಿ ಹಣ ಮಾಡಿಕೊಂಡು ಶ್ರೀಮಂತರಾದರು, ಇದೆ ತಾನೇ ನಮ್ಮ ಸುಸ್ಥಿರ ಅಭಿವೃದ್ಧಿಯೆಂದರೆ ?

ಇಂದು ಮೈಸೂರು ನಗರವನ್ನು ಬೆಂಗಳೂರು ನಗರದ ವೇಗಕ್ಕೆ ತಕ್ಕಂತೆ ಅಭಿವೃದ್ಧಿಗೊಳಿಸಲಾಗುತ್ತಿದೆ, ದಶ ಪಥದ ರಸ್ತೆ ಕಾಮಗಾರಿ ಮುಕ್ತಾಯ ಹಂತ ತಲುಪಿದೆ. ನಾವೇನಾದರೂ ಮೈಸೂರು ನಗರವನ್ನು ಬೆಂಗಳೂರು ನಗರದಂತೆ ಮಾಡಲು ಹೊರಟಿದ್ದೇವೆ ಎಂಬ ಭಯ ಕಾಡಲಾರಂಭಿಸುತ್ತಿದೆ. ವಾಸ್ತವದಲ್ಲಿ ಪ್ರವಾಸೋದ್ಯಮ ಹೆಸರಿನಲ್ಲಿ ನಡೆಯುತ್ತಿರುವ ಹೆಲಿಟೂರಿಸಂನಂತಹ ಕಾಮಗಾರಿಗಳನ್ನು ನೋಡುತ್ತಿದ್ದರೆ ನಾವು ಬೆಂಗಳೂರು ನಗರದಂತೆ ಆಗುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿವೆ. ಈ ಅಭಿವೃದ್ಧಿ ಕಾಮಗಾರಿಗಳೆಲ್ಲವೂ ಯಾರಿಗೋಸ್ಕರ? ನಾವು ಯಾವ ದಿಕ್ಕಿನಲ್ಲಿ ನಡೆಯಲಾರಂಭಿಸಿದ್ದೇವೆ ಎಂಬುದೇ ತಿಳಿಯದಂತಾಗಿದೆ.

ಈ ಎಲ್ಲಾ ಘಟನಾವಳಿಗಳನ್ನು ಪಕ್ಷಿಯ ದೃಷ್ಟಿಕೋನದಿಂದ (Bird eye view) ನೋಡುವುದಾದರೆ, ನಾವಿಂದು ಜಗತ್ತಿಗೆ ಮುಕ್ತವಾಗಿ ತೆರೆದುಕೊಂಡರೂ ಕೂಡ ಬಹಳಷ್ಟು ಪ್ರದೇಶಗಳು ಗೋಚರವಾಗದ ಎಲೆಮರೆಯ ಕಾಯಿಯಂತಿವೆ, ಕನಿಷ್ಠಪಕ್ಷ ಅವುಗಳನ್ನುದರೂ ನಾವಿಂದು ಉಳಿಸಿಕೊಳ್ಳಬೇಕಾಗಿದೆ, ಒಮ್ಮೆ ಇಂಥ ಪ್ರದೇಶಗಳಲ್ಲಿ ಮನುಷ್ಯ ಕಾಲಿಟ್ಟರೆ ಮುಗಿಯಿತು ಅದು ಸರ್ವನಾಶವೇ ಆಗಿಬಿಡುತ್ತದೆ, ಇವುಗಳೆಲ್ಲವನ್ನು ನೋಡುತ್ತ ಹೋದರೆ ಪರಿಸರದಲ್ಲಿ ಅಡಕವಾಗಿರುವ ಬಹಳಷ್ಟು ಗುಟ್ಟುಗಳನ್ನು ಗೌಪ್ಯವಾಗಿಯೇ ಬಿಡಬೇಕಾಗುತ್ತದೆ.

ಅಭಿವೃದ್ಧಿಯೆಂಬ ಹೆಸರಿನಲ್ಲಿ ನಾವಿಷ್ಟು ವರ್ಷ ಪ್ರಕೃತಿಯನ್ನು ಕಡೆಗಣಿಸಿದ್ದರ ಪರಿಣಾಮವಾಗಿಯೇ, ಕಣ್ಣಿಗೆ ಕಾಣದ ಪುಟ್ಟ ವೈರಸ್ ಪ್ರಪಂಚದಾದ್ಯಂತ ಜನರ ಮಾರಣಹೋಮ ನಡೆಸುತ್ತಲಿದೆ, ಈಗಲಾದರೂ ನಾವು ಎಚ್ಚರಿಸಿ ಕೊಳ್ಳದೆ ಹೋದರೆ ಬಾರಿ ದುರ್ಘಟನೆಗೆ ಸಾಕ್ಷಿಯಾಗಲಿದ್ದೇವೆ, ಇದು ನಮಗೊಂದು ಎಚ್ಚರಿಕೆಯ ಗಂಟೆಯಾಗಿದೆ, ಪ್ರಕೃತಿಯನ್ನು ಹತ್ತಿರ ಹತ್ತಿರ ಮಾಡಿಕೊಂಡು ಬದುಕುವ ಕಾಲಘಟ್ಟ ಬಂದೊದಗಿದೆ, ನಾವಿಂದು ಈ ವಿಷಯಗಳನ್ನು ಗಂಭೀರವಾಗಿ ಅರ್ಥಮಾಡಿಕೊಳ್ಳಲೇಬೇಕಾಗಿದೆ.

ಪ್ರತಿವರ್ಷ ಜನವರಿ 25 ನೇ ತಾರೀಕನ್ನು ಪ್ರವಾಸೋದ್ಯಮ ದಿನವೆಂದು ಆಚರಿಸುತ್ತಿದ್ದೇವೆ ಈ ನಿಟ್ಟಿನಲ್ಲಿ ಒಂದು ಪರಾಮರ್ಶೆಯನ್ನು ಮಾಡಬೇಕೆನಿಸುತ್ತದೆ. 

ನೀವೊಮ್ಮೆ ಯೋಚಿಸಿ.

ಈ ಮೂಲಕ ಪ್ರವಾಸವೆಂಬ ಪೆಡಂಭೂತವನ್ನು ತಕ್ಕಮಟ್ಟಿಗಾದರೂ ಅರ್ಥ ಮಾಡಿಸಿದ್ದೇನೆ ಎನಿಸುತ್ತದೆ.

ಧನ್ಯವಾದಗಳು.



16 comments:

  1. ತುಂಬಾ ಚೆನ್ನಾಗಿದೆ....

    ReplyDelete
  2. ಡಿಯರ್ ತೇಜರಾಜ್

    ಹೊಂದಾಣಿಕೆಯ ಭಾಗವಾಗಿಯೇ ಮನುಷ್ಯ ಕೂಡ ಇಲ್ಲಿರುವನು. ಇಲ್ಲಿ ಎಲ್ಲವು ಮನುಷ್ಯ ಕೇಂದ್ರಿತವಾಗಿಯೇ ತಿರುಚಲಾಗುತ್ತಿದೆ. ಹಾಗಂತ ಇರುವ ವ್ಯವಸ್ಥೆಯನ್ನು ಇರುವಂತೆಯೇ ಬಿಡಲಿಕ್ಕಾಗದು. ಇದು ಪ್ರಕೃತಿ ವಿರೋಧವಾಗಿಯು ಮಾರ್ಪಡಾಗುತ್ತದೆ. ಅಂತೆಯೇ ನಿನ್ನ ಕಾಳಜಿಗೆ ನನ್ನ ಅಭಿಮತವಿದೆ.

    ReplyDelete
  3. Sir ಹಸಿರು ನಿಂದಲೆ ಉಸಿರು. ಎಂಬ ಅರಿವು ಯಾರಿಗೆ ಬರುವುದೋ ಆವಾಗಲೇ ಈ ಜಗತ್ತು ಬೆಳಗುತ್ತದೆ.ಅಲ್ಲಿಯವರೆಗೂ ಮಾನವರು ಬದಕ್ಕಿದ್ದು ಸತ್ತ ಹಾಗೆಯೇ...,, ಕಾಡಿಂದಾ ನಾವು.. ನಮ್ಮಿಂದ ಕಾಡು ಅಲ್ಲಾ... ನೀ ಅರಿತವ ನಾಗು ಎಲೇ ಮಾನವಾ....🙏🙏

    ReplyDelete
  4. ಅದ್ಭುತವಾದ ಲೇಖನ ತೇಜಸ್.. ನಿನ್ನ ಬರವಣಿಗೆಯ ತೀಕ್ಷ್ಣತೆ, ಪದಪುಂಜ ಜೋಡಣೆ, ಸರಳವಾದ ಭಾಷಾ ಪ್ರಯೋಗ ನಿನ್ನ ಈ ಪ್ರಯತ್ನಕ್ಕೆ ನನ್ನ ಅಭಿನಂದನೆಗಳು

    ReplyDelete
  5. You have clearly stated how British and modern materialistic approach devastated indian eco system in the last century and the present time, excellent writing, go ahead

    ReplyDelete
  6. 💐Very Nice My Dear Friend...🙏🏻❤🙂

    ReplyDelete