- ಎಸ್ ಪಿ ತೇಜರಾಜು.
ಸುಮಾರು ಏಳು ವರ್ಷಗಳ ಹಿಂದೆ ಸ್ನೇಹಿತನ ಜೊತೆಯಲ್ಲಿ ನೀಲಗಿರಿ ಪರ್ವತ ಶ್ರೇಣಿಗಳಲ್ಲಿ ಕಳೆದ ಪ್ರವಾಸ ಕಥನವನ್ನು ಹೋದ ವರುಷ ಲಾಕ್ಡೌನ್ ಸಮಯದಲ್ಲಿ ನಿಮ್ಮ ಮುಂದೆ ಇಟ್ಟಿದೆ, ನೀವೆಲ್ಲರೂ ಓದಿ ಒಳ್ಳೆಯ ಪ್ರತಿಕ್ರಿಯೆಯನ್ನು ನೀಡಿದ್ದೀರಿ ಅದಕ್ಕೆ ನಾನು ಆಭಾರಿಯಾಗಿದ್ದೇನೆ.
ಇಂದು ಬರೆದಿರುವ ಅಂಕಣ ನೀಲಗಿರಿಯ ಪರಿಸರದ ಒಳಹೊಕ್ಕಾಗ ಕಂಡ ಅನುಭವದ ಸಾರವಾಗಿದೆ.
ಊಟಿ / ಉದಕಮಂಡಲದ ಸುತ್ತಲೂ ಯಥೇಚ್ಛವಾಗಿ ನೀಲಗಿರಿ ಮರಗಳು ಇರುವುದರಿಂದ ಇದಕ್ಕೆ ಉದಕಮಂಡಲ ಎಂಬ ಹೆಸರು ಬಂದಿರಬಹುದು ಎಂದು ನಾನು ಭಾವಿಸಿದ್ದೆ ಆದರೆ ಈ ಕೌತುಕದ ಪ್ರಶ್ನೆಗೆ ಮುಂದೆ ಉತ್ತರ ಸಿಗಬಹುದು ಎನಿಸುತ್ತದೆ.
ಈ ನೀಲಗಿರಿ ಪ್ರದೇಶ ಸಮುದ್ರಮಟ್ಟದಿಂದ ಸುಮಾರು 2240 ಮೀಟರ್ಗಳಷ್ಟು ಎತ್ತರದಲ್ಲಿದ್ದು ಹಿಂದೂಸ್ತಾನದ ಹಿಮಾಲಯ ಪರ್ವತಶ್ರೇಣಿಗಳಿಗಿಂತಲೂ ಪುರಾತನವಾದದ್ದು ಎಂಬ ಮಾಹಿತಿ ದೊರಕುತ್ತದೆ. ಇದೊಂದು ಅದ್ಭುತವಾದಂತಹ ಪ್ರದೇಶವೆಂದು ಹೇಳಿದರೆ ತಪ್ಪಾಗಲಾರದು ಏಕೆಂದರೆ ಈ ಪರ್ವತಶ್ರೇಣಿಗಳು ಪೂರ್ವ ಹಾಗೂ ಪಶ್ಚಿಮ ಘಟ್ಟಗಳನ್ನು ಸೇರುವ ಒಂದು ಕೊಂಡಿಯಂತೆ ರೂಪುಗೊಂಡು ಜೀವ ವೈವಿಧ್ಯದ ತವರಾಗಿದೆ.
ಸುತ್ತಲೂ ಕಾಣುವ ಶೋಲಾ ಅರಣ್ಯ ಪರ್ವತಾವಳಿಗಳ ಹಸಿರು ಹೊದಿಕೆಯ ಮೇಲೆ 12 ವರ್ಷಗಳಿಗೊಮ್ಮೆ ಮೇಲೆದ್ದು, ಗಿಡದ ತುಂಬಾ ನೀಲಿಬಣ್ಣದ ಪುಟ್ಟ ಹೂಗಳನ್ನು ತಳೆದು ಬೆಳೆಯುವ, ನೀಲಕುರಂಜಿ ಎಂಬ ಗಿಡ, ಭೂಮಿ ಆಕಾಶವನ್ನು ಒಂದು ಮಾಡಿ ಭೂಲೋಕದಲ್ಲಿಯೇ ಸ್ವರ್ಗವನ್ನೇ ಸೃಷ್ಟಿಸುತ್ತದೆ.
ಈ ಪ್ರದೇಶ ಪಶ್ಚಿಮ ಹಾಗೂ ಪೂರ್ವ ಘಟ್ಟಗಳ ಸಂಗಮವಾಗಿರುವುದರಿಂದ ಎರಡು ಬಗೆಯಾದ ಜೀವವೈವಿಧ್ಯವನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ. ಅದು ಪ್ರಾಣಿ ವೈವಿಧ್ಯವೇ ಆಗಿರಬಹುದು ಅಥವಾ ಸಸ್ಯ ವೈವಿಧ್ಯವೇ ಆಗಿರಬಹುದು.
ವ್ಯಾಸಂಗದ ದೃಷ್ಟಿಕೋನದಲ್ಲಿ ಏಳು ವಿವಿಧ ಬಗೆಯ ಕಾಡುಗಳನ್ನು ಅಂದರೆ ನಿತ್ಯಹರಿದ್ವರ್ಣ, ಅರೆಹರಿದ್ವರ್ಣ, ಶೋಲಾ ಕಾಡುಗಳು, ಎಲೆ ಉದುರುವ ಕಾಡುಗಳು, ಕುರುಚಲು ಕಾಡುಗಳು ಇಲ್ಲಿದೆ. ಇಲ್ಲಿಯ ದೊಡ್ಡ ಬೆಟ್ಟ ಹೆಸರಿಗೆ ತಕ್ಕ ಹಾಗೆಯೇ ಸಮುದ್ರಮಟ್ಟದಿಂದ ಸುಮಾರು 2640 ಮೀಟರ್ ಎತ್ತರವಾಗಿದ್ದು ಪಶ್ಚಿಮ ಹಾಗೂ ಪೂರ್ವ ಘಟ್ಟಗಳಲ್ಲಿ ಮೂರನೇ ಅತ್ಯಂತ ಎತ್ತರವಾದ ಪರ್ವತವಾಗಿದೆ.
ಎತ್ತರದ ಗಿರಿಶಿಖರಗಳ ಮೇಲೆ ಕಾಣಿಸುವ ಪ್ರದೇಶ ಶೋಲಾ ಅರಣ್ಯ ಪ್ರದೇಶಗಳಿಂದ ಆವೃತವಾಗಿದ್ದು ಮಳೆಗಾಲದಲ್ಲಿ ಬಿದ್ದ ನೀರನ್ನು ಭೂಮಿಯೊಳಗೆ ಇಂಗಿಸುವ ಕಾಯಕವನ್ನು ಕೋಟ್ಯಂತರ ವರ್ಷಗಳಿಂದ( ಕರ್ನಾಟಕದಲ್ಲಿ ಕಾಣಸಿಗುವ ಕುದುರೆಮುಖದ ರೀತಿ) ಮಾಡುತ್ತಾ ಬಂದಿದೆ. ಇದರ ನಂತರದ ವಲಯದಲ್ಲಿ ಕಾಣಸಿಗುವ ಪ್ರದೇಶ ನಿತ್ಯಹರಿದ್ವರ್ಣ ಕಾಡುಗಳಿಂದ ಆವೃತವಾಗಿದ್ದು ಬೇಸಿಗೆ ಕಾಲದಲ್ಲಿಯೂ ಬಿಸಿಲು ಭೂಮಿಯನ್ನು ತಕಲಾರದಷ್ಟು ದಟ್ಟವಾಗಿ ಬೆಳೆದಿರುತ್ತದೆ ಇದು ಎಲ್ಲ ರೀತಿಯ ಪ್ರಾಣಿವರ್ಗ ಸಸ್ಯವರ್ಗಗಳನ್ನು ತನ್ನೊಳಗೆ ( ನಮ್ಮಲ್ಲಿ ಕಾಣಸಿಗುವ ಆಗುಂಬೆ ಹಾಗೂ ದೇವರಕಾಡುಗಳ ರೀತಿ) ಅಡಗಿಸಿಕೊಂಡಿರುತ್ತದೆ. ಇದರಿಂದ ಮುಂದುವರೆದಂತೆ ಅಂದರೆ ಘಟ್ಟದಿಂದ ಕೆಳಗಿಳಿಯುತ್ತಿದ್ದಂತೆ ಅರೆ ಹರಿದ್ವರ್ಣ ಹಾಗೂ ಎಲೆಯುದುರುವ ಕಾಡುಗಳನ್ನು ಕೊನೆಯದಾಗಿ ಕುರುಚಲು ಕಾಡುಗಳನ್ನು ಕಾಣಬಹುದಾಗಿದೆ. ಇಂತಹ ಭವ್ಯವಾದ ಕಾಡುಗಳೇ ನಮ್ಮ ದಕ್ಷಿಣ ಭಾರತದ ನದಿಗಳ ಜನ್ಮಸ್ಥಳವಾಗಿರುತ್ತದೆ.
ಅಧ್ಯಯನದ ಪ್ರಕಾರ 3300 ಹೆಚ್ಚು ಬಗೆಯ ಸಸ್ಯ ಜಾತಿಗಳು, 175ಕ್ಕೂ ಹೆಚ್ಚು ಬಗೆಯ ಆರ್ಕಿಡ್ಸ್ ಗಳು, 350ಕ್ಕೂ ಹೆಚ್ಚು ಬಗೆಯ ಪಕ್ಷಿಗಳು, 316 ಕ್ಕೂ ಹೆಚ್ಚು ಬಗೆಯ ಚಿಟ್ಟೆಗಳು,100 ಬಗೆಯ ಸಸ್ತನಿಗಳು, 80 ಬಗೆಯ ಸರಿಸೃಪಗಳು, 39ಕ್ಕೂ ಹೆಚ್ಚು ಬಗೆಯ ಮೀನುಗಳು, 31 ಬಗೆಯ ಉಭಯಚರಗಳು ಇಲ್ಲಿವೆ.
ಟೊಡ ಹಾಗೂ ಕುರುಬ ವರ್ಗಕ್ಕೆ ಸೇರಿದವರು ಇಲ್ಲಿಯ ಮೂಲ ನಿವಾಸಿಗಳು ಎಂದು ಗುರುತಿಸಲಾಗಿದ್ದು ಇವರ ಆಚಾರ ವಿಚಾರಗಳೆಲ್ಲವೂ ಇಲ್ಲಿಯ ಭೌಗೋಳಿಕ ಪ್ರದೇಶಕ್ಕೆ ಪೂರಕವಾಗಿರುವಂತಿದೆ. ಇವರ ಗೃಹನಿರ್ಮಾಣವು ಇಂಗ್ಲಿಷ್ ಪದದ ಉಲ್ಟಾ ಯು ಆಕಾರದಲ್ಲಿದ್ದು, ಎಮ್ಮೆಗಳನ್ನು ದೇವರ ರೂಪದಲ್ಲಿ ಪೂಜಿಸಲಾಗುತ್ತದೆ. ಬ್ರಿಟೀಷರಿಗಿಂತಲೂ ಮುಂಚಿಗೆ ಬಂದ ಪೋರ್ಚುಗೀಸರಿಂದ ಉಡುಗೆ ತೊಡುಗೆಗಳೊಂದಿಗೆ ಕೇಶವಿನ್ಯಾಸವು ಅವರದನ್ನೇ ಸ್ವಲ್ಪಮಟ್ಟಿಗೆ ಹೋಲುತ್ತದೆ. ಇವರು ಧರಿಸುವ ಬಟ್ಟೆಗಳು ಸೂಕ್ಷ್ಮ ಕುಸುರಿ ಕಲೆಯಿಂದ ಕೂಡಿದ್ದು ಬಟ್ಟೆ ನೇಯುವವರ ಜಾಣ್ಮೆ ತಾಳ್ಮೆಯನ್ನು ಪರೀಕ್ಷಿಸುತ್ತದೆ.
ಪೋರ್ಚುಗೀಸರ ಪ್ರಭಾವ ಕಡಿಮೆಯಾಗಿ ಎಂದು ಬ್ರಿಟಿಷರ ಆಳ್ವಿಕೆ ಹೆಚ್ಚಾಗತೊಡಗಿತೋ ಅಲ್ಲಿಂದ ಇಲ್ಲಿಯ ಚಿತ್ರಣವೇ ವಿಭಿನ್ನವಾಗಿ ಬದಲಾವಣೆಯಾಗತೊಡಗುತ್ತದೆ, ಸದಾ ವಿಲಾಸಿ ಜೀವನ, ಕಾಡುಪ್ರಾಣಿಗಳನ್ನು ಗುಂಡಿಕ್ಕಿ ಕೊಲ್ಲುವ ಪರಿ ಹಾಗೂ ಹಣದ ಅಮಲಿನಲ್ಲಿ ತೇಲುತ್ತಿದ್ದ ಇವರ ಜೀವನ ಶೈಲಿ 1800 ಇಸವಿಯ ಆಸುಪಾಸಿನಲ್ಲಿಯೇ ವಾಲ್ಪರೈ ನಂತಹ ಗೊಂಡಾರಣ್ಯಗಳನ್ನು ಕಡೆದು ಟೀ ತೋಟಗಳು ಹಾಗೂ ನೀಲಗಿರಿ, ಅಕೇಶಿಯಾ ಏಕ ಜಾತಿಯ ನೆಡುತೋಪುಗಳ ನೆಡುವ ಕಾಯಕ ಉದಕಮಂಡಲದವರೆಗೂ ವಿಸ್ತರಿಸುತ್ತದೆ.
ಈ ನಿಟ್ಟಿನಲ್ಲಿ ಬಿಸಿಲೆ ಭೂಮಿಗೆ ಬೀಳದಷ್ಟು ದಟ್ಟವಾಗಿದ್ದ ಗೊಂಡಾರಣ್ಯ ಬಯಲಾಗುತ್ತದೆ, ನೂರಾರು ವರ್ಷಗಳಿಂದ ಸಾವಿರಾರು ಪ್ರಾಣಿ-ಪಕ್ಷಿಗಳಿಗೆ ಆಸರೆಯಾಗಿದ್ದ ಅಜಾನುಬಾಹು ಮರಗಳು ಧರೆಗೆ ಉರುಳುತ್ತದೆ, ರಸ್ತೆ ಸಂಪರ್ಕವಾಗುತ್ತದೆ, ಚಹ ತೋಟಗಳೊಂದಿಗೆ ಏಕ ಜಾತಿಯ ನೀಲಗಿರಿ ಮರಗಳ ಸಾಲುಗಳು ತಲೆಯೆತ್ತುತ್ತವೆ, ನದಿ ನೀರನ್ನು ತಡೆಹಿಡಿಯಲು ಕಟ್ಟಿದ ಸಾಲು ಅಣೆಕಟ್ಟುಗಳು ಮತ್ತಷ್ಟು ಗೊಂಡಾರಣ್ಯವನ್ನು ತನ್ನೊಳಗೆ ಆಹುತಿ ಪಡೆಯುತ್ತದೆ, ರಾಜ್ಯ ದೇಶ ಹಾಗೂ ವಿದೇಶಗಳಿಗೂ ವ್ಯಾಪಾರ ಹೆಚ್ಚಾಗಿ ದಿನೇದಿನೇ ಜನದಟ್ಟಣೆಯೂ ಹೆಚ್ಚಾಗುತ್ತದೆ, ಸದ್ದುಗದ್ದಲ ಹೆಚ್ಚಾಗಿ ಮೂಕಪ್ರಾಣಿಗಳ ವೇದನೆ ಯಾರಿಗೂ ತಿಳಿಯದೆ ಮರೆಯಾಗಿಬಿಡುತ್ತವೆ. ಇದರೊಂದಿಗೆ ನಡೆದ ಮತ್ತೊಂದು ದುರ್ದೈವದ ಸಂಗತಿಯೆಂದರೆ ಪ್ರವಾಸೋದ್ಯಮ ಅಭಿವೃದ್ಧಿ ಇದರ ಮುಖೇನ ಕಾಡುಗಳ ಮಧ್ಯದಲ್ಲಿ ರೆಸಾರ್ಟ್ಗಳು ನಿರ್ಮಾಣವಾಗುತ್ತದೆ, ಉಗಿಬಂಡಿಯಲ್ಲಿ ಕುಳಿತು ನಿಸರ್ಗವನ್ನು ಆನಂದಿಸುವ ಕಾಮಗಾರಿ ಮತ್ತದೇ ಕಾಡಿನ ಮಧ್ಯೆ ನೆರವೇರುತ್ತದೆ.
ಇವುಗಳ ನಡುನಡುವೆ ದೇಶದಲ್ಲಿ ಸ್ವಾತಂತ್ರ್ಯಸಂಗ್ರಾಮದ ಕೂಗು ಬಹಳ ಹೆಚ್ಚಾಗಿದ್ದರಿಂದ ನಿಸರ್ಗ ಉಳಿಸುವುದರ ಬಗ್ಗೆ ಗಮನ ಕಡಿಮೆ ಇರುತ್ತದೆ. 1947 ರಲ್ಲಿ ಬ್ರಿಟಿಷರನ್ನು ದೇಶದಿಂದ ಹೊರಗೆ ಕಳುಹಿಸಿದ ನಂತರ ದೇಶದ ಅಭಿವೃದ್ಧಿ ಎಂಬ ಹೆಸರಿನಲ್ಲಿ ಬ್ರಿಟಿಷರಿಗಿಂತ ನಾವೇನು ಕಡಿಮೆ ಎಂಬಂತೆ ಅರಣ್ಯನಾಶ ಹೆಚ್ಚಾಗಿ ನೀಲಗಿರಿ, ಅಕೇಶಿಯ, ಓಕೆ ಮರಗಳನ್ನು ಬೆಳೆಸುವ ಯೋಜನೆಗಳಿಗೆ ಚಾಲನೆ ದೊರಕುತ್ತದೆ.1986ರಲ್ಲಿ ಪರಿಸರ ಸಂರಕ್ಷಣಾ ಕಾಯ್ದೆ ಬರುವವರೆಗೂ ವಿವಿಧ ಯೋಜನೆ, ಕಾಮಗಾರಿಗಳಿಗಾಗಿ ಕಾಡನ್ನು ಹೇಳಹೆಸರಿಲ್ಲದಂತೆ ಕಡಿಯಲಾಗುತ್ತದೆ.
ಇಂದು ಈ ಭವ್ಯ ಉದಕಮಂಡಲ ಮೂರು ರಾಜ್ಯಗಳೊಂದಿಗೆ ( ಕರ್ನಾಟಕ, ತಮಿಳುನಾಡು, ಕೇರಳ) ತನ್ನ ಗಡಿಯನ್ನು ಹಂಚಿಕೊಂಡಿದ್ದು ವ್ಯಾಪಾರ ವಾಣಿಜ್ಯೋದ್ಯಮದ ಕೇಂದ್ರಬಿಂದುವಾಗಿ ಮಾರ್ಪಾಡಾಗಿದೆ. ಇಲ್ಲಿಯ ನಿಸರ್ಗದ ಭವ್ಯತೆ ಕಣ್ಮರೆಯಾಗಿ ಇಲ್ಲಿಯ ಮೂಲ ನಿವಾಸಿಗಳಲ್ಲಿ ಅನಿವಾರ್ಯವಾಗಿ ಇಂದಿನ ಜೀವನಶೈಲಿಗೆ ಮಾರ್ಪಾಡಾಗಲೇ ಬೇಕಾದಂತಹ ಪರಿಸ್ಥಿತಿ ಬಂದೊದಗಿದೆ.
1986 ರಲ್ಲಿ ಪರಿಸರಾಸಕ್ತರ ಶ್ರಮದಿಂದಾಗಿ ಭಾರತ ಸರ್ಕಾರ 5500 ಸ್ಕ್ವೇರ್ ಕಿಲೋಮೀಟರ್ ಪ್ರದೇಶವನ್ನು ದೇಶದ ಮೊಟ್ಟಮೊದಲ ನೀಲಗಿರಿ ಬಯೋಸ್ಪಿಯರ್ ರೀಸರ್ವೆ ( Nilgiries biosphere reserve ) ಎಂದು ಘೋಷಿಸಲಾಗುತ್ತದೆ.
ಅನೇಕ ಒತ್ತಡಗಳಿಂದ ಸಿಲುಕಿರುವ ಈ ಪ್ರದೇಶ ಸರಕಾರಿ ದಾಖಲಾತಿಗಳ ಪ್ರಕಾರವೇ 132 ಹೆಚ್ಚು ಬಗೆಯ ಸಸ್ಯಗಳು, 10ಕ್ಕೂ ಹೆಚ್ಚು ಬಗೆಯ ಪಕ್ಷಿಗಳು, 12ಕ್ಕೂ ಹೆಚ್ಚು ಬಗೆಯ ಪ್ರಾಣಿಗಳು ಅವನತಿಯ ಹಾದಿಯಲ್ಲಿದೆ. ಇದರ ಹೊರತಾಗಿಯೂ ಅಳಿದುಳಿದಿರುವ ಅರಣ್ಯದ ಭವ್ಯತೆಯನ್ನು ನೋಡಿ UNESCO ವಲ್ಡ್ ಹೆರಿಟೇಜ್ ಸೈಟ್ ( World Heritage Site ) ಎಂದು ಗುರುತಿಸಿದೆ.
ಪರಿಸರವನ್ನು ಉಳಿಸಲೇಬೇಕೆಂಬ ಮಹಾ ಕಾಳಜಿಯುಳ್ಳ ಜನತೆಯಿಂದ ಅಳಿವಿನಂಚಿನಲ್ಲಿರುವ ಸಸ್ಯವರ್ಗಗಳನ್ನು ಬೆಳೆಸಿ ಪೋಷಿಸಲಾಗುತ್ತಿದೆ, ತರುಣ್ ಚಂದ್ರ ಎಂಬುವವರು ತಮ್ಮ ಸ್ವಂತ ಜಮೀನಿನಲ್ಲಿ ಇಂತಹ ಅದ್ಭುತ ಕಾಯಕವನ್ನು ಮಾಡಿದ್ದಾರೆ. ಇದರೊಂದಿಗೆ ಕೊಯಂಬತ್ತೂರಿನಿಂದ ಕೇವಲ 32 ಕಿಲೋಮೀಟರ್ ದೂರದಲ್ಲಿರುವ NBNP ( Nilgities Biosphere Nature Park ) ಸಂಸ್ಥೆ ಅಳಿವಿನಂಚಿನಲ್ಲಿರುವ ಅನೇಕ ಸಸ್ಯ ವರ್ಗವನ್ನು ಪೋಷಿಸಿ ಬೆಳೆಸಿಕೊಂಡು ಬಂದಿದ್ದಾರೆ, ನೇಚರ್ ಕನ್ಸರ್ವೇಷನ್ ಎಂಬ ಮತ್ತೊಂದು ಸಂಸ್ಥೆ ( Nature Conservation ) ಪರಿಸರ ಉಳಿಸುವ ಕಾಯಕವನ್ನು ಮಾಡುತ್ತಿದೆ ಇದರೊಂದಿಗೆ ಅನೇಕ ಜನರು ಹಾಗೂ ಸಂಸ್ಥೆಗಳು ಎಲೆಮರೆಯ ಕಾಯಿಗಳಂತೆ ಈ ಕಾಯಕವನ್ನು ಮಾಡುತ್ತಾ ಬಂದಿದ್ದಾರೆ.
ಬಣ್ಣ ಬಣ್ಣದ ಜೀವನಕ್ಕೆ ಮಾರುಹೋಗುವ ಯುವಜನತೆಯಲ್ಲಿಯೂ, ಭವಿಷ್ಯದ ಭದ್ರ ಬುನಾದಿಯಾದ ಚಿಕ್ಕ ಮಕ್ಕಳಲ್ಲಿಯೂ ಪರಿಸರದ ಬಗ್ಗೆ ಆಸಕ್ತಿ ಬೆಳೆಸಿದ್ದಲ್ಲಿ ಹಾಗೂ ಎಲ್ಲರೊಂದಿಗೆ ನಾವು ಕೂಡ ಪರಿಸರ ಸಂರಕ್ಷಣೆಯಲ್ಲಿ ಮುಕ್ತವಾಗಿ ಪಾಲ್ಗೊಳ್ಳುವುದರಿಂದ ಮಾತ್ರ ಪರಿಸರವನ್ನು ಉಳಿಸಿ ಬೆಳೆಸಬಹುದಾಗಿದೆ.
ಹಾಗಾದರೆ ಈಗ ಹೇಳಿ ನಾನು ನಿಮ್ಮನ್ನು ಈ ಪ್ರದೇಶದ ಭವ್ಯತೆಯನ್ನು ನೋಡಿ ಆನಂದಿಸಲಿ ಎನ್ನಲೋ ? ಅಥವಾ ಕಳೆದುಕೊಂಡಿರುವ ಪಾಲನ್ನು ನೋಡಿ ಮರುಕಗೊಳ್ಳಲಿ ಎನ್ನಲೋ ????? ಸ್ವಾತಂತ್ರ ನಿಮ್ಮದು.
ಎಲ್ಲರಿಗೂ 75ನೇ ಸ್ವತಂತ್ರೋತ್ಸವದ ಪೂರ್ವಭಾವಿ ಶುಭಾಶಯಗಳು.
ಧನ್ಯವಾದಗಳು.





ಬಹಳ ಚಂದ
ReplyDeleteknow more knowledge about neelagiri mountains
ReplyDeleteI request you to share this with popular newspaper websites, this writing deserves it
ReplyDeleteಪೂರ್ವದ ಇತಿಹಾಸ ಬೇಟಿಯ ನಂತರ ತಿಳಿದಾಗ,
ReplyDeleteಅಳಿದುಹೋದ ಪರಿಸರದ ಸಂಸ್ಕೃತಿಯು- ಮನಕೆ ಸುಳಿದಾಗ ,
ಒಂದು ಕ್ಷಣ ಯೋಚಿಸಿದೆ...
ಉಳಿದಿರುವುದು ಒಂದೇ ದಾರಿ ಇರುವುದನ್ನು ಪೋಷಿಸಿ ಸಂರಕ್ಷಿಸಿ
ನೀಲಗಿರಿಗೆ ಆದಂತಹ ದುರ್ಗತಿ ನಮ್ಮ ಊರಿನ ಅಕ್ಕಪಕ್ಕದ ಗಿರಿ ಶೃಂಗ ಗಳಿಗೆ ಆಗದಿರುವ ರೀತಿ ಅರಿವು ಮೂಡಿಸಬೇಕಿದೆ ಕಾಪಾಡಬೇಕಿದೆ...
ಬಹಳ ಚೆನ್ನಾಗಿದೆ
ReplyDeleteGood informative and great collection sir thank you ��.. God created this beautiful world though man can harm this with his selfishness but God can re create it in an unexpected ways... Let's serve this green as much as possible to us to have a healthy and beautiful world for us and too next upcoming generations.
ReplyDeleteThis comment has been removed by the author.
ReplyDelete