Saturday, November 20, 2021

ಹೂ ಕಥೆ

                                             


- ತೇಜರಾಜು. 

     ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು, ಕಾನನದಿ ಮಲ್ಲಿಗೆಯು ಮೌನದಿಂಬಿರಿದು ನಿಜ ಸೌರಭವ ಸೂಸಿ ನಲವಿಂ ಪಿಂತಿರ್ದು, ಡಿವಿಜಿಯವರ ಸಾಲುಗಳು,ಹೂವನು ಮಾರುತ ಹೂವಾಡಗಿತ್ತಿ ಹಾಡುತ ಬರುತಿಹಳು ಎಂಬ ಬಾಲ್ಯದಲ್ಲಿ ಕಲಿತ ಪದ್ಯದ ಸಾಲುಗಳು, ಪ್ರತಿದಿನ ಹೂವಿನ ವ್ಯಾಪಾರಿಗಳು ಮನೆ ಮುಂದೆ ಬಂದಾಗ ನೆನಪಾಗುತ್ತದೆ. ಸಾಲುಗಳ  ಪ್ರಸ್ತಾಪ ಈಗ ಏಕೆ ಬಂದಿತು ಎಂದು ನೀವೇನಾದ್ರೂ ಯೋಚಿಸುತ್ತಿದ್ದರೆ ಅಂಕಣದ ಆಶಯ ಸಂಪೂರ್ಣವಾಗಿ ಹೂಗಳ ಮೇಲೆಯೇ ನಿಂತಿದೆ ಅಂದರೆ ಸರಳವಾಗಿ ಹೇಳುವುದಾದರೆ ಇದೊಂದು ಹೂವಿನ ಕಥೆಯಾಗಿದೆ .

ನಗರದ ವ್ಯಾಪಾರೀ ಮನೋಧರ್ಮದ ಒಳಗೆ ಕರಗಿ ಹೋಗಿರುವ ನಮಗೆ 20ರಿಂದ 30 ಬಗೆಯಾದ ಹೂವುಗಳ ಹೆಸರು ಹಾಗೂ ಅವುಗಳ ಬೆಲೆಯನ್ನು ನೆನಪಿರುವುದೇ ಹೆಚ್ಚು, ಇಂತಹ ಸಂಧಿಗ್ಧ ಸ್ಥಿತಿಯಲ್ಲಿ ಜೀವನ ನಡೆಸುತ್ತಿರುವುದು ನಮ್ಮ ದುರ್ದೈವವೇ ಸರಿ. ಕೆಲವು ದೇವರಿಗೆ ಇಂತಹದ್ದೇ ಆದಂತಹ ಹೂಗಳು ಬೇಕೆಂದು ಕೊಂಡು ಮುಡಿಸುವುದೇನೋ ಸರಿ ಆದರೆ ಅದು ಮರುದಿನ ಬಾಡುತ್ತದೆ ಅದು ನಿಸರ್ಗದ ಸಹಜ ಧರ್ಮ ಹಾಗೆಂದ ಮಾತ್ರಕ್ಕೆ ಅದು ನಿಜವಾಗಿಯೂ ಬೆಲೆಯನ್ನು ಕಳೆದುಕೊಂಡಿತೇ ? ಹಗದ್ರೆ ನಾವು ಯಾಕೆ ದೇವರಿಗೆ ಹೂವನ್ನು ಮುಡಿಸಬೇಕು ? ಹೂವನ್ನು ಬೆಳೆಸಲಿಕ್ಕೆ ಗಿಡ ಎಷ್ಟು ಎನರ್ಜಿ ಹಾಗೂ ಸಮಯವನ್ನು ವಿನಿಯೋಗಿಸುತ್ತದೆ ? ಹೂ ಹೇಗೆ ಬೆಳೆಯುತ್ತದೆ ಅದು ಯಾಕೆ ಬಿಡುತ್ತದೆ ? ಹೂ ಬೆಳೆಯಲು ಮುಖ್ಯ ಕಾರಣವಾದರೂ ಏನು ? ಹಾಗಾದರೆ ಪ್ರಪಂಚದಲ್ಲಿ ಅರಳಿದ ಮೊದಲ ಪುಷ್ಪ ಯಾವುದು ? ಎಂದು ಕಾಡಿಸಿದ ಪ್ರಶ್ನೆಗಳೇ ಅಂಕಣಕ್ಕೆ ನಾಂದಿಯಾಯಿತು.  

ಮೊದಲಿಗೆ ಆಶ್ಚರ್ಯವಾಗುವ ಸಂಗತಿಯೆಂದರೆ ಹೂವು ಬೆಳೆಯದ ಜಾಗವೇ ಇಲ್ಲ, ಅಂದರೆ ಪಶ್ಚಿಮ ಘಟ್ಟದ ಸಾಲುಗಳಲ್ಲಿಯೂ,ನದಿ ತೊರೆ ಕಿನಾರೆ, ಬೆಟ್ಟ, ಬಯಲು, ಸಮುದ್ರ, ಹಿಮಾಪಾತವಾಗುವ ಜಾಗದಲ್ಲಿಯೂ, ಬಿರುಬಿಸಿಲಿನ ಮರುಭೂಮಿಯಲ್ಲಿ ಹೂವು ಅರಳಿ ನಿಲ್ಲುತ್ತದೆ. ಘಟ್ಟಗಳಲ್ಲಿ ಬೆಳೆಯುವ ಕೆಲವು ಹೂಗಳು ಬಯಲು ಸೀಮೆಯಲ್ಲಿಯೂ ಬೆಳೆಯಬಹುದು ಆದರೆ ತಮ್ಮಲ್ಲಿಯೇ ಅನೇಕ ಮಾರ್ಪಾಡುಗಳನ್ನು ಮಾಡಿಕೊಂಡಿರುತ್ತವೆ. ಪಶ್ಚಿಮ ಘಟ್ಟಗಳಲ್ಲಿ ಕಾಣ ಸಿಗುವ ಅಭೂತಪೂರ್ವ ಹೂವುಗಳ ವೈವಿಧ್ಯತೆಯನ್ನು ಕಂಡು ಆನಂದಿಸಬೇಕು.

ತಜ್ಞರ ಪ್ರಕಾರ ಪ್ರಪಂಚದಲ್ಲಿ ಒಟ್ಟು 4,00,000 ಕ್ಕಿಂತಲೂ ಮಿಗಿಲಾದ ಹೂ ಬಿಡುವ ಸಸ್ಯ ಜಾತಿಗಳಿವೆ,ಭಾರತದಲ್ಲಿಯೇ ಒಟ್ಟು 18,000 ಹೂ ಬಿಡುವ ಸಸ್ಯ ಜಾತಿಗಳು ಪ್ರಪಂಚದ ಒಟ್ಟು 6 ರಿಂದ 7 ಪ್ರತಿಶತ ಜಾತಿಗಳನ್ನು ಪ್ರತಿನಿಧಿಸುತ್ತದೆ.ಪ್ರಪಂಚದ ಅನೇಕ ಭಾಗಗಳಲ್ಲಿ ಕೆಲವು ಹೂಗಳು ತನ್ನ ಪ್ರಾಬಲ್ಯವನ್ನು ಸವಿಸ್ತಾರವಾಗಿ ಹೆಚ್ಚಿಸಿಕೊಂಡಿದೆ, ಸಾಲಿನಲ್ಲಿ ಮೊದಲಿಗೆ ನಿಲ್ಲುವುದೇ ಗುಲಾಬಿ ಹೂಗಳು ಇಂತಹ ಗುಲಾಬಿ ಹೂಗಳು 300 ಹೆಚ್ಚು ಪ್ರಾಥಮಿಕ ಹಂತದ ಬಣ್ಣಗಳೊಂದಿಗೆ 10,000ಕ್ಕಿಂತಲೂ ಮಿಗಿಲಾದ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ, ಮತ್ತೊಂದು ಡೇರೆ ಹೂವು 100 ಹೆಚ್ಚು ಪ್ರಾಥಮಿಕ ಹಂತದ ಬಣ್ಣಗಳೊಂದಿಗೆ 1000ಕ್ಕಿಂತಲೂ ಮಿಗಿಲಾದ ತಳಿಗಳನ್ನು ಕಾಣುವುದಾಗಿದೆ. ಸುವಾಸನೆ ಇಲ್ಲದ ಮುಳ್ಳಿನ ಗಿಡದಲ್ಲಿ ಬೆಳೆಯುವ ಗುಲಾಬಿ ಹೂಗಳು ಪ್ರಪಂಚದಲ್ಲಿ ತನ್ನ ಪ್ರಾಬಲ್ಯವನ್ನು ಹೇಗೆ ಹೆಚ್ಚಿಸಿಕೊಂಡಿತು ಎಂಬುವುದು ಕುತೂಹಲ ಮೂಡಿಸುವಂತಹ ಪ್ರಶ್ನೆಯಾಗಿದೆ.


ಬಣ್ಣವಿಲ್ಲದ ಹೂವುಗಳೇ ಇಲ್ಲ, ಕೆಲವು ಚಂದ್ರನ ಶ್ವೇತ ವರ್ಣದಿಂದ ಕಂಗೊಳಿಸಿದರೆ ( ಬ್ರಹ್ಮ ಕಮಲ ) ಇನ್ನು ಕೆಲವು ಗಾಢ ಕಪ್ಪು ಬಣ್ಣವನ್ನು ಹೊಂದಿರುತ್ತದೆ, ಕೆಲವು ಸುಗಂಧಭರಿತವಾಗಿದ್ದರೆ ( ಮಲ್ಲಿಗೆ, ಸಂಪಿಗೆ ) ಇನ್ನು ಕೆಲವು ದುರ್ಗಂಧವನ್ನು ಬೀರುತ್ತದೆ ( ಕಾಫ್  ಫ್ಲವರ್ ) ಪರಿಮಳವಿಲ್ಲದ ಕೆಲವು ಹೂಗಳು ಕಣ್ಣಿಗೆ ಆನಂದವನ್ನು ನೀಡುತ್ತದೆ ( ಡೇರೆ ಹೂವು ), ವರ್ಷಕ್ಕೆ ಒಂದು ಬಾರಿ ಮಾತ್ರ ಹೂಬಿಡುವ ( ಮೇ ಫ್ಲವರ್ ), ಇವುಗಳಿಗೆ ತದ್ವಿರುದ್ಧವಾಗಿ ವರ್ಷಕೂಡ ಹೂಬಿಡುವ ಸಸಿಗಳಿವೆ ( ನಿತ್ಯ ಪುಷ್ಪ ), 12 ವರ್ಷಗಳಿಗೊಮ್ಮೆ ಹೂ ಬಿಡುವ ನೀಲಕುರಂಜಿ ಸಸ್ಯಗಳು ನಮ್ಮ ಪಶ್ಚಿಮಘಟ್ಟಗಳಲ್ಲಿವೆ. ಮರದಲ್ಲಿ ಬೆಳೆಯುವ ಹೂಗಳಿವೆ, ಬಳ್ಳಿಗಳಲ್ಲಿ ಬೆಳೆಯುವ ಹೂಗಳಿವೆ, ಮುಳ್ಳಿನ ಗಿಡಗಳಲ್ಲಿ ಬೆಳೆಯುವ ಹೂಗಳಿವೆ, ಪಾಚಿಯಲ್ಲಿ ಬೆಳೆಯುವ ಹೂಗಳಿವೆ, ರಾತ್ರಿಯಲ್ಲಾ ಹರಳಿ ಸುವಾಸನೆಯನ್ನು ಬೀರಿ ಹಗಲು ಮಾಡುವುದರೊಳಗೆ ಬಾಡುವ ರಾತ್ರಿರಾಣಿಯತಹ ಪುಷ್ಪಗಳಿವೆ. ದವಸ ಧಾನ್ಯಗಳ ಸಸಿಗಳಲ್ಲಿಯ ಬೆಳೆಯುವ ಹೂಗಳಿವೆ, ಕೆಲವು ದುಂಬಿಯನ್ನು ಮಾತ್ರ, ಕೆಲವು ಚಿಟ್ಟೆಯನ್ನು ಮಾತ್ರ, ಕೆಲವು ಜೇನುನೊಣಗಳನ್ನು ಮಾತ್ರ ಆಕರ್ಷಿಸುವಂತಹ ಹೂಗಳಿವೆ, ಮುಳ್ಳಿನ ಹೂಗಿಡಗಳಲ್ಲಿ ಹರಳುವ ಪಾಪಸ್ಕಳ್ಳಿ, ಡ್ರಾಗನ್ ಫ್ರೂಟ್ ಗಳಿವೆ. ಸಮುದ್ರದ ಉಪ್ಪು ನೀರಿನಲ್ಲಿಯೂ ಚಂದವಾಗಿ ಹೂ ಅರಳಿ ನಿಲ್ಲುವ ಹವಳದಂಡೆಗಳಿವೆ ಒಟ್ಟಿನಲ್ಲಿ ಹೂಬಿಡದ ಸಸ್ಯವನ್ನು ಹುಡುಕುವುದೇ ಕಷ್ಟವಾಗುತ್ತದೆ. ಮಾನವನ ದುರಾಸೆಗೆ ಅನೇಕ ಹೂ ಗಿಡಗಳು ಅಳಿವಿನಂಚಿಗೆ ಬಂದಿದೆ, ಕೆಲವು ಸಂಸ್ಥೆಗಳಂತೂ ಸುಂದರ ಹೂತೋಟಗಳನ್ನು ನಿರ್ಮಿಸಿ ಹಣಗಳಿಸುವ ಕಲೆಯನ್ನು ಕರಗತ ಮಾಡಿಕೊಂಡಿವೆ.

ಹೂಗಳು ಇಂತಿಷ್ಟೇ ವರ್ಷಕಾಲದಲ್ಲಿ ಭೂಮಿಯಲ್ಲಿ ಬೆಳೆಯಿತು ಎಂಬ ಮಾಹಿತಿ ಸಿಗುವುದು ಕಷ್ಟಸಾಧ್ಯವಾಗುತ್ತದೆ ಏಕೆಂದರೆ ಹೂಬಿಡುವ ಸಸ್ಯಗಳು ಭೂಮಿಗೆ 13 ಕೋಟಿ ವರ್ಷಗಳ ಹಿಂದೆಯೇ ಬಂದರೆ ಮಾನವ 70 ಲಕ್ಷ ವರ್ಷಗಳ ಹಿಂದೆ ಬಂದಿರುವವನಾಗಿದ್ದಾನೆ. ಪ್ರಪಂಚದ ವಿವಿಧೆಡೆಗಳಲ್ಲಾದ ಮಾನವನ ಬೆಳವಣಿಗೆ ಅದರಲ್ಲಿಯೂ ಆತ ಒಂದು ಕಡೆ ನೆಲೆಯೂರಿ ಕೃಷಿ ಪ್ರಾರಂಭಿಸಿದ ಬಳಿಕ ಇವನ ಜೀವನದೊಂದಿಗೆ ಕೃಷಿಯ ಧವಸಧಾನ್ಯಗಳಲ್ಲಿಯೂ ಅನೇಕ ಬದಲಾವಣೆಗಳಾಗಿವೆ. ಸುತ್ತಲೂ ಚಂದದಿಂದ ಬೆಳೆಯುತ್ತಿದ್ದ ಹೂ ಸಸಿಗಳು ಮಹಿಳೆಯರಿಗೆ ಇಷ್ಟವಾಗಿ ಮುಂದೆ ಅದು ದೇವರಿಗೂ ಸಮರ್ಪಣೆಯಾಯಿತು ಎಂಬುದು ಸಾಮಾನ್ಯ ನಂಬಿಕೆಯಾಗಿದೆ.


ನಮ್ಮ ಸನಾತನ ನಾಗರಿಕತೆಯನ್ನು ನೋಡುವುದಾದರೆ ಹೂಗಳು ಮಾನವ ಜೀವನದ ಹಾಸುಹೊಕ್ಕಾಗಿ ಬೆಳೆದುನಿಂತಿದೆ. ಮನೆಯ ಅಲಂಕಾರಕ್ಕೂ, ದೇವರಪೂಜೆಗೂ, ಶಿಲಾಶಾಸನಗಳ ಕೆತ್ತನೆಯಲ್ಲಿಯೂ, ಧಾರ್ಮಿಕ, ಸಾಮಾಜಿಕ, ಆರ್ಥಿಕ, ರಾಜಕೀಯ, ಪೌರಾಣಿಕ, ರಾಜರ ಅರಮನೆಯ ಸುತ್ತ ಉದ್ಯಾನವನದ ಅಲಂಕಾರಕ್ಕಾಗಿ ಹೂ ಸಸಿಗಳನ್ನು ಬೆಳೆಸುವುದರೊಂದಿಗೆ, ಮೂಲ ದಕ್ಷಿಣ ಭಾರತವನ್ನು ನೋಡುವುದಾದರೆ 8ನೇ ಶತಮಾನದ ಕಾಲದಲ್ಲಿಯೇ ನಂದನವನ ಎಂಬ ಹೂತೋಟವನ್ನು ಬೆಳೆಸಲಿಕ್ಕೆ ರಾಜರು ಭೂಮಿಯೊಂದಿಗೆ ಹಣವನ್ನು ದತ್ತಿ ಕೊಡುತ್ತಿದ್ದರು, ನಂದನವನದಲ್ಲಿ ಬೆಳೆಯುವ ಪತ್ರ ಪುಷ್ಪಗಳನ್ನು, ಹೂವು ಹಣ್ಣುಗಳನ್ನು ಇಂತಹದ್ದೆ ದೇವಸ್ಥಾನಕ್ಕೆ ಮುಡುಪಾಗಿಡಬೇಕೆಂಬ ಕಟ್ಟುನಿಟ್ಟಿನ ಕ್ರಮಗಳೊಂದಿಗೆ ನಂದನವನದಲ್ಲಿ ಇಂತಹದ್ದೇ ಪತ್ರ ಪುಷ್ಪವನ್ನು ಬೆಳೆಸಬೇಕೆಂಬ ಕಟ್ಟುನಿಟ್ಟಿನ ಕ್ರಮಗಳು ಇದ್ದು, ಕಿಡಿಗೇಡಿಗಳು ನಂದನವನ್ನು ಹಾಳು ಮಾಡಿದರೆ ಅವರಿಂದ ದಂಡದೊಂದಿಗೆ  ಶಿಕ್ಷೆಯನ್ನು ವಿಧಿಸಲಾಗುತ್ತಿತ್ತು ಎಂದು ಶಾಸನಗಳಲ್ಲಿ ಉಲ್ಲೇಖವಾಗಿದೆ.

ಮೂಲ ರಾಮಾಯಣದ ಸುಂದರಕಾಂಡದಲ್ಲಿ ಬರುವ ದಂಡಕಾರಣ್ಯ, ಗಜಾರಣ್ಯಗಳಲ್ಲಿ ಸೀತೆ ಆಕರ್ಷಿತರಾದ ಹೂ ಸಸಿಗಳನ್ನು,ಶಬರಿ ರಾಮನಿಗಾಗಿ ನೀಡಿದ ಹೂ ಹಣ್ಣುಗಳನ್ನು, ಆಂಜನೇಯ ಹೊತ್ತು ತಂದ ವಿಂಧ್ಯಗಿರಿ ಪರ್ವತದ ಗಿಡಮೂಲಿಕಾ ಸಸಿಗಳನ್ನು,ರಾವಣನ ಆಸ್ಥಾನದಲ್ಲಿ ಅಚ್ಚುಕಟ್ಟಾಗಿ ಬೆಳೆಸಿದ್ದಂತಹ ಅಶೋಕವನದ ಸಸ್ಯಗಳನ್ನು, ಮಠ, ಗುರುಕುಲಗಳ ಸುತ್ತ ಬಿಡಿಸುತ್ತಿದ್ದ ಹೂವು ಗಿಡಗಳನ್ನು, ಆಯುರ್ವೇದದಲ್ಲಿ ಬಳಕೆಯಾದ ಹೂಗಳ ಮಾಹಿತಿ ದೊರಕುತ್ತದೆ.

ರಾಜರ ಆಳ್ವಿಕೆಯಕಾಲದಲ್ಲಿ ಯುದ್ಧದಲ್ಲಿ ಗೆದ್ದು ಬಂದಾಗ ರಾಜನಿಗೆ ಇಂತಹ ಹೂವಿನ ಹಾರವನ್ನ್ನೇಹಾಕಬೇಕೆಂಬ ಪ್ರತೀತಿ, ತಮ್ಮ ರಾಷ್ಟ್ರ ಲಾಂಛನಗಳಲ್ಲಿ ಬಳಕೆಯಾದ ಹೂಗಳು, ಚಿತ್ರಪಟಗಳಲ್ಲಿ ಕಂಡುಬಂದ ಹೂಗಳ ವರ್ಣಚಿತ್ರ, ಅರಮನೆಯ ಸುತ್ತ ವನವಿಹಾರಕ್ಕೆ ನಿರ್ಮಿಸಿಕೊಂಡ ಹೂ ಗಿಡಗಳು, ರಾಣಿಯರಿಗಾಗೆಂದೇ ನಿರ್ಮಿಸಿದ ಪ್ರತ್ಯೇಕ ಹೂದೋಟಗಳು ಇದ್ದವು. ಇಂತಹ ತೋಟಗಳನ್ನು ಪ್ರಪಂಚದ ನಾನಾ ಅರಮನೆಗಳಲ್ಲಿ ನೋಡಲು ಇಂದಿಗೂ ಕಾಣಸಿಗುತ್ತದೆ, ಇದೇ ಕಾಲಘಟ್ಟದಲ್ಲಿ ಜನಸಾಮಾನ್ಯರು ರಾಶಿವನ, ನಕ್ಷತ್ರವನ, ನವಗ್ರಹ ವನ, ಎಂಬ ಕಲ್ಪನೆಗಳಲ್ಲಿ ಅನೇಕ ಹೂಗಿಡಗಳನ್ನು ಸಂಪ್ರದಾಯದ ಹೆಸರಿನಲ್ಲಿ ಸಂರಕ್ಷಿಸುವ ಕಾರ್ಯಗಳು ನಡೆದಿದ್ದವು.

ಆಯುರ್ವೇದ ಸಂಬಂಧಿ ಚರಕ, ಶುಶೃಷ, ಧನ್ವಂತರಿಯ ಗ್ರಂಥಗಳಲ್ಲಿಯೂ ಹೂವಿನ ಶಲಾಕೆ, ದಳ, ಮೊಗ್ಗು, ಬಳಕೆಯ ಉಲ್ಲೇಖಗಳಿವೆ. ಧಾರ್ಮಿಕವಾಗಿ ಇಂತಹ ದೇವರಿಗೆ ಇಂತಹ ಪುಷ್ಪವನ್ನು ಸಮರ್ಪಿಸುವುದರರೊಂದಿಗೆ ( ಶಿವನಿಗೆ ತುಂಬೆ ಹೂವು ) ದೇವಸ್ಥಾನದ ಸುತ್ತಲ ಕೆತ್ತನೆಗಳಲ್ಲಿ ಅಪ್ಸರೆಯರು ಮುಡಿದ ಹೂಗಳನ್ನು, ಅಜಂತ ಎಲ್ಲೋರ ಬೇಲೂರು ಹಳೆಬೀಡಿನಂತಹ ದೇವಸ್ಥಾನದ ಕಲ್ಲಿನ ಕೆತ್ತನೆಗಳಲ್ಲಿ ಹೂವನ್ನು ಅರಳಿಸಿದ್ದಾರೆ. ಇಂದು ನಾವು ಕಾಣುವ ರಾಜಕೀಯ ಪಕ್ಷಗಳಲ್ಲಿಯೂ ಹೂಗಳ ಚಿಹ್ನೆಯನ್ನು ಬಳಸಲಾಗಿದೆ, ಇದರೊಂದಿಗೆ ರಾಷ್ಟ್ರದ ಹೂವನ್ನು ಇಂತಹದ್ದೇ ಎಂದು ಗುರುತಿಸಿಕೊಂಡಿದ್ದೇವೆ. ಆರ್ಥಿಕ ದೃಷ್ಟಿಕೋನದಲ್ಲಿ ನೋಡಿದರೆ ಐಷಾರಾಮಿ ವಿಲ್ಲಾಗಳ ಸುತ್ತ ಬೆಲೆಬಾಳುವ ಹೂ ಗಿಡಗಳಿಂದ ಲಕ್ಷಾಂತರ ರೂಪಾಯಿ ವ್ಯಾಪಾರವಾಗುತ್ತದೆ, ಹೂ ಬಳಸಲಾಗದ ಮದುವೆಯನ್ನೇ ನಾವು ಕಾಣಲು ಸಾಧ್ಯವೇ ಇಲ್ಲ ಇದರಲ್ಲಿ ಲಕ್ಷಾಂತರ ರೂಪಾಯಿಯ ವ್ಯಾಪಾರ ನಡೆಯುತ್ತದೆ. ಪ್ರಪಂಚದಲ್ಲಿ ಪ್ರತಿವರ್ಷ 15 ಬಿಲಿಯನ್ ಡಾಲರ್ ಗಿಂತಲೂ ಹೆಚ್ಚಿನದಾಗಿ ಹೂಗಳ ವ್ಯಾಪಾರ ನಡೆಯುತ್ತದೆ. ಹೂವಿನ ಮಕರಂದದಿಂದ ಜೇನುಹುಳುಗಳು ಸಂಗ್ರಹಿಸಿದ ಜೇನುತುಪ್ಪದ ವ್ಯಾಪಾರವೇ ಪ್ರತಿವರ್ಷ ಪ್ರಪಂಚದಲ್ಲಿ 7.8 ಬಿಲಿಯನ್ ಡಾಲರ್ ಗಳು ಮೀರುತ್ತದೆ. ಖಾಸಗಿ ಕಂಪನಿಗಳು ಟುಲಿಪ್ ನಂತಹ ಹೂ ತೋಟಗಳ ನಿರ್ಮಿಸಿ. ಪ್ರಪಂಚದ ನಾನಾ ಮೂಲಗಳಿಂದ ಜನರು ಆಗಮಿಸುವ ರೀತಿ ಜಾಹೀರಾತು ನೀಡಿ ಕೋಟ್ಯಾನುಕೋಟಿ ಎಕ್ಸಿಬಿಷನ್ ನಿಂದ ಹಣ ಗಳಿಸುತ್ತಾರೆ. ಪ್ರಪಂಚದ ಒಟ್ಟು ಕೇಸರಿ ವ್ಯಾಪಾರ 374.6 ಮಿಲಿಯನ್ ಯುಎಸ್ ಡಾಲರ್ ಆಗಿದೆ.ಹೂವಿನ ಪರ್ಫ್ಯೂಮ್ ತಯಾರಿಕೆಯಲ್ಲಿಯೂ ಮಿಲಿಯನ್ ಗಟ್ಟಲೆ ವ್ಯಾಪಾರ ನಡೆಯುತ್ತದೆ. ಪ್ರದೇಶವಾರು ಬಟಾನಿಕಲ್ ಗಾರ್ಡನ್ಗಳಿಂದ ಬಹಳಷ್ಟು ಹಣ ಸರ್ಕಾರವನ್ನು ಸೇರುತ್ತದೆ.

ಇಷ್ಟೆಲ್ಲಾ ವಿಷಯಗಳನ್ನು ತಿಳಿದುಕೊಂಡೆವಲ್ಲವೇ ಹಾಗಾದರೆ ಈಗ ಸ್ವಲ್ಪ ಹಿಂದಕ್ಕೆ ಹೋಗೋಣ ಅಂದರೆ ಪ್ರಪಂಚದ ಮೊಟ್ಟಮೊದಲು ಅರಳಿದ ಪುಷ್ಪ ಯಾವುದೆಂಬ ಮಾಹಿತಿಯನ್ನು ಹುಡುಕುತ್ತಾ - ಪ್ರಪಂಚದ ನಾನಾ ಮೂಲೆಗಳಲ್ಲಿ ಅನೇಕ ವಿಜ್ಞಾನಿಗಳು ವಿಷಯವಾಗಿ ಅನೇಕ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಪುರಾತನ ಪುಸ್ತಕಗಳಲ್ಲಿ ನಮೂದಿಸಲಾದ ಹೂಗಳ ಹೆಸರುಗಳನ್ನು ಹುಡುಕಿ, ಶಾಸನಗಳ ಬೆನ್ನುಹತ್ತಿ ಬಹಳಷ್ಟು ಸುದೀರ್ಘ ಅಧ್ಯಯನಗಳು ನಡೆದಿವೆ ಇದರ ಸಲುವಾಗಿ ಕೆಲವು ಮಾಹಿತಿಗಳು ಲಭ್ಯವಿದೆ. ಸಸ್ಯ ವಿಜ್ಞಾನಕ್ಕೆ ಭರತಖಂಡದ ಕೊಡುಗೆ ಅಪಾರವಾಗಿದೆ ಉಪನಿಷತ್ತಿನಲ್ಲಿಯೂ, ಸುರಪಾಲನ  ವೃಕ್ಷಾಯುರ್ವೇದಲ್ಲಿಯೂ, ಸಸಿಗಳಿಗೆ ಜೀವವಿದೆ ಎಂದು ಪ್ರತಿಪಾದಿಸಿದ ಜಗದೀಶ ಚಂದ್ರ ಬೋಸರು, ಬಿಜಿಎಲ್ ಸ್ವಾಮಿ ಅಂತಹ ಸಸ್ಯವಿಜ್ಞಾನಿಗಳು ನಮ್ಮವರೇ

ಪ್ರಸ್ತುತವಾಗಿ ಮೊಟ್ಟಮೊದಲ ಪುಷ್ಪ ಯಾವುದು ಎಂಬ ಹುಡುಕಾಟದಲ್ಲಿ ಪ್ರಪಂಚದ ನಾನಾ ವಿಜ್ಞಾನಿಗಳ ಪಟ್ಟಿಯೇ ತೆರೆದುಕೊಳ್ಳುತ್ತದೆ. UNESCO ರೆಕಾಗ್ನಿಸ್ ಮಾಡಿರುವ 218 ನ್ಯಾಚುರಲ್ ಹೆರಿಟೇಜ್ ಸೈಟ್ ಗಳಲ್ಲಿ ನಡೆದಂತಹ ಪ್ರಯತ್ನ ಕೆಲವು ಮಾಹಿತಿಗಳನ್ನು ಕೊಡುತ್ತಾ ಹೋಗುತ್ತದೆ, ಇಂತಹ 218 ನ್ಯಾಚುರಲ್ ಹೆರಿಟೇಜ್ ಗಳಲ್ಲಿ ಒಂದಾದ ಹಿಮಾಲಯ ಮೌಂಟನ್ಸ ಸರಣಿಯಲ್ಲಿ ಕಂಡುಬರುವಂತಹ ಒಂದು ಅಭೂತಪೂರ್ವ ಸ್ಥಳವೇ HENGDUAN MOUNTAINS ಪ್ರದೇಶ ಸಮುದ್ರ ಮಟ್ಟದಿಂದ ಸುಮಾರು 14,000 ಅಡಿಗಳಷ್ಟು ಎತ್ತರದಲ್ಲಿದೆ ಇಲ್ಲಿಯ ವಾತಾವರಣ ವೈವಿಧ್ಯಮಯವಾಗಿದೆ ಇದೇ ಸರಣಿಯಲ್ಲಿ ಹರಿಯುವಂತಹ 3 ನದಿಗಳು ಪ್ರಪಂಚದ ಮೂರನೇ ಒಂದು ಭಾಗದ ಜನಕ್ಕೆ ನೀರನ್ನು ಒದಗಿಸುತ್ತದೆ.


ಭಾರತ ಉತ್ತರ ಭಾಗಕ್ಕೆ ಮತ್ತಷ್ಟು ಮ್ಯಾಗ್ನೆಟಿಕ್ ಬಲವಿರುವುದರಿಂದ ಪ್ರದೇಶ ಮತ್ತಷ್ಟು ಎತ್ತರವಾಗಿ ಬೆಳೆಯುತ್ತಲೇ ಇದೆ, ಅದಲ್ಲದೆ ಪ್ರದೇಶದ ಒಂದು ಗುಡ್ಡ ಸಂಪೂರ್ಣವಾಗಿ ಯಾವಾಗಲೂ ಹಿಮದಿಂದ ಆವೃತವಾಗಿ ಮೈನಸ್ ತಾಪಮಾನವಿದ್ದರೆ ಕೆಳಗಿನ ಪ್ರದೇಶ ಬಿರುಬೇಸಿಗೆಯಂತೆ ಗೋಚರಿಸುತ್ತದೆ. ಇಷ್ಟೆಲ್ಲಾ ವೈವಿಧ್ಯತೆ ಇರುವುದರಿಂದಲೇ ಇಲ್ಲಿಯ ಹೂಬಿಡುವ ಸಸ್ಯ ಜಾತಿಗಳ ಸಂಪತ್ತು ಕೂಡ ವೈವಿಧ್ಯಮಯವಾಗಿದೆ ಇಲ್ಲಿ ಒಟ್ಟು 10,000 ಕ್ಕೂ ಹೆಚ್ಚು ಬಗೆಯ ಹೂ ಬಿಡುವ ಸಸ್ಯ ಜಾತಿಗಳು ಕಾಣಸಿಗುತ್ತದೆ.

ಒಂದು ಜಾತಿಗೆ ಸೇರಿದ ಹೂವೆ ಬೇರೆ ಬೇರೆ ಪ್ರದೇಶದಲ್ಲಿ ಬೇರೆ ಬೇರೆ ಬಣ್ಣಗಳಿಂದ ಕೂಡಿರುತ್ತದೆ. ಒಂದು ಬಣ್ಣ ಇರುವ ಹಾಗೆ ಮತ್ತೊಂದು ಇಲ್ಲ ಮತ್ತೊಂದು ಇರುವಾಗ ಮಗದೊಂದು ಇರುವುದಿಲ್ಲ,ನೂರಾರು ಬಣ್ಣದ ಹೂವುಗಳು ಕಾಣಸಿಗುತ್ತವೆ. ಇಂತಹ ಪ್ರದೇಶದಲ್ಲಿ ನಡೆದ ಒಂದು ವೈಜ್ಞಾನಿಕ ವರದಿ ಶಿಲೆಯೊಳಗೆ ಹುದುಗಿಹೋಗಿದ್ದಂತಹ ಒಂದು ಪಳೆಯುಳಿಕೆಯ ಸಹಾಯದ ಮೂಲಕ ಇದೇ ಪ್ರಪಂಚದ ಮೊದಲ ಹೂವೆಂದು ಸಧ್ಯಕ್ಕೆ ತಿಳಿಯಲಾಗಿದೆ. ಮೊದಲ ಹೂ ಎಂದು ಸಾಬೀತಾದರೂ ಹೂವಿನ ಹೆಸರು ARCHAEFRUCTUS ಸುಂಗ್ ರವರು ನಡೆಸಿದ ಅಧ್ಯಯನ ಪ್ರಕಾರ ಸಸ್ಯವು ಸುಮಾರು 125 ಮಿಲಿಯನ್ ವರ್ಷಗಳ ಹಿಂದೆ ಇತ್ತು ಎಂದು ತಿಳಿಸಲಾಗಿದೆ



ಸಸ್ಯದ ಬಗ್ಗೆ ತಿಳಿಯುವಾಗ ಬಹಳಷ್ಟು ಮಹತ್ವಪೂರ್ಣ ವಿಷಗಳು ಗಮನಕ್ಕೆ ಬಂದವು ಸಸಿಗಳು ಭೂಮಿಗೆ ಬಂದಕಾಲಘಟ್ಟದಲ್ಲಿ ಯಾವುದಕ್ಕೂ ಹೂಗಳು ಇರಲಿಲ್ಲ, ಕಾಲಕ್ರಮೇಣ ಹೂಗಳು ಬಿಡಲು ಪ್ರಾರಂಭವಾದವು, ಕಾಲಘಟ್ಟಕ್ಕೆ ಹೂ ಗಳನ್ನು ಸೇರುವಂತಹ ಯಾವ ಜಂತುಹುಳುಗಳು ಇರಲಿಲ್ಲ, ಗಿಡ ಹೂ ಬಿಡಲು ಪ್ರಾರಂಭವಾಗಿದ್ದೆ ಒಂದು ರೋಚಕದ ಪಯಣ ಅದರಲ್ಲಿಯೂ ಹೂ ಬಿಟ್ಟ ಬಳಿಕ ನಡೆದಂತಹ ಪರಾಗಸ್ಪರ್ಶ (ಪಾಲಿನೇಷನ್) ಪ್ರಕ್ರಿಯೆ ಎಲ್ಲವೂ ಗಾಳಿಯ ಸಹಾಯದಿಂದಲೇ ನಡೆದದ್ದು,ಇದು ಕಾಲಕ್ರಮೇಣ ಹೂವು ಮೊಗ್ಗಾಗಿ, ಮುಗ್ಗು ಹಣ್ಣಾಗಿ, ಹಣ್ಣಿನೊಳಗೆ ಬೀಜ ಸೇರಿ ತನ್ನ ಮುಂದಿನ ಪೀಳಿಗೆಯನ್ನು ಸದೃಢವಾಗಿ ಇಡುವಂತಹ ಒಂದು ಸುಭದ್ರ ಕವಚ. ( ಪರಾಗಸ್ಪರ್ಶ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬ ಮಾಹಿತಿ ನಾವು ಬಾಲ್ಯದಲ್ಲಿ ಶಾಲಾ ದಿನಗಳಲ್ಲಿಯೇ ಓದಿರುತ್ತೇವೆ ಆದರೆ ಅರ್ಥವಾಗಿರುವುದಿಲ್ಲ ನಮ್ಮ ಗುರುಗಳು ಇವುಗಳನ್ನು ದಾಸವಾಳದ ಹೂವಿನ ಚಿತ್ರವನ್ನು ಬರೆದು ತೋರಿಸಿದ್ದರು ಎಲ್ಲರಿಗೂ ನೆನಪಿರಬಹುದು.) ಇಂತಹ ಕಾಲಘಟ್ಟದಲ್ಲಿಯೇ ಅನೇಕ ಹವಾಮಾನ ವೈಪರೀತ್ಯಗಳ ಉದಾಹರಣೆಗಳನ್ನು ತಮ್ಮ ಸ್ಮೃತಿಪಟಲದಲ್ಲಿ ಇಟ್ಟುಕೊಂಡ ಮರಗಳು ಬೀಜ ಹಾಳಾಗದ ರೀತಿ, ಎಂದು ಚಿಗುರೊಡೆಯಬೇಕೆಂಬ ಸ್ಪಷ್ಟ ಮಾಹಿತಿಯ ಬಳಿಕವೇ ಬೀಜ ಮರದಿಂದ ಮುಂದೆ ಸಾಗುತ್ತಿತ್ತು, ಇವೆಲ್ಲವೂ ಮರಗಳಲ್ಲಿಯೂ ಬುದ್ಧಿಶಕ್ತಿಯ ಇದೇ ಎಂಬ ಸ್ಪಷ್ಟ ನಿದರ್ಶನ.

ನಾನೇ ಶ್ರೇಷ್ಠ ಎಂದು ಬೀಗುವ ಮಾನವ ಕೋಟ್ಯಾನುಕೋಟಿ ವರ್ಷಗಳ ಮಾಹಿತಿಯನ್ನು ತಮ್ಮ ಸ್ಮೃತಿಪಟಲದಲ್ಲಿ ಇಟ್ಟುಹೊಂದಿರುವಂತಹ ಮರಗಳಿಂದ ಕಲಿಯಬೇಕಾಗಿರುವುದು ಬಹಳ ಇದೆ. ಅಡ್ವಾನ್ಸ್ ಟೆಕ್ನಾಲಜಿಯಲ್ಲಿ ಬೀಗುತ್ತಿರುವ ನಮಗೆ 300 ವಿವಿಧ ಬಣ್ಣಗಳ ಗುಲಾಬಿ ಹೇಗೆ ಬೆಳೆಯಿತು ಎಂಬ ಸೃಷ್ಟಿಯನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಬಹಳಷ್ಟು ಹೊತ್ತಿನಿಂದ ಅಂಕಣವನ್ನು ಓದುತ್ತಿದ್ದೀರಾ ಹಾಗಾದರೆ ಈಗ ಹೇಳಿ ಅಂಕಣ ಮುಂದುವರೆಸಲೆ ? ಅಂಕಣ ಇನ್ನು ಮುಗಿದಿಲ್ಲ ಆದರೆ ಇನ್ನಷ್ಟು ಕುತೂಹಲ ಕೆರಳಿಸುವ ಪ್ರಶ್ನೆಗಳ ಮೂಲಕ ಮತ್ತಷ್ಟು ವಿಷಯಗಳನ್ನು ನಾವು ತಿಳಿಯಪಟ್ಟರೆ ಅಂಕಣ ಸಾರ್ಥಕತೆಯನ್ನು ಪಡೆಯುತ್ತದೆ.

ಎಲ್ಲಾ ದೇವರಿಗೂ ಪದ್ಮ ( ಕಮಲ ) ಪೀಠವೇಬೇಕು ಎಂಬುವುದು ಏತಕ್ಕೆ ? ಇದರ ಹಿಂದಿನ ರಹಸ್ಯವಾದರೂ ಏನು ? ಏಕೆ ಗುಲಾಬಿ ಬಹು ಜನರ ಪರಿಚಿತ ಹೂವಾಗಿ ಗಮನಸೆಳೆಯಿತು ? ಪ್ರಪಂಚದಲ್ಲಿ ಅತ್ಯಂತ ಬೆಲೆಬಾಳುವ ಪುಷ್ಪ ಯಾವುದು ? ಹೂಬಿಡಲು ಗಿಡ ಎಷ್ಟು ಎನರ್ಜಿಯನ್ನು ಉಪಯೋಗಿಸುತ್ತದೆ ? ಮಠದ ಸುತ್ತ ಏಕೆ ಹೂಗಿಡಗಳನ್ನು ಬೆಳೆಸುತ್ತಾರೆ ? ನಮ್ಮ ಭಾರತದಲ್ಲಿಯ ಹೂವಿಗೆ ಸಂಬಂಧಿ ಚಿತ್ರ ತೆರೆಗೆ ಬಂದಿದೆ ಅದು ಯಾವುದು ? ಹಾಗಾದರೆ ಈಗ ಹೇಳಿ ದೇವರಿಗೆ ಹೂವನ್ನು ಮೂಡಿಸಬೇಕು ? ಒಣಗಿದ ಬಳಿಕ ಅದನ್ನು ತೆಗೆಯಬೇಕ ? ಹೂವಿಗೆ ಬೆಲೆಕೊಟ್ಟು ಖರೀದಿಸಲು ನಿಜವಾಗಿಯೂ ಸಾಧ್ಯವೇ ? HENGDUAN MOUNTAINSಗಳಿಗಿಂತಲೂ ಅತಿ ಹಳೆಯದು ನಮ್ಮ ಪಶ್ಚಿಮಘಟ್ಟ ಇಲ್ಲಿ ಏನಾದ್ರೂ ನಿಜವಾಗಿಯೂ ಪ್ರಪಂಚದ ಮೊಟ್ಟ ಮೊದಲ ಹೂವಿನ ಕುರುಹು ಸಿಗುತ್ತದೆಯೇ

( Western Ghats )

HENGDUAN MOUNTAINS ಸರಣಿಯ ಹಿಮಾಲಯದ ತಪ್ಪಲಿನಲ್ಲಿ ಇರುವುದರಿಂದ ಜೀವನದಲ್ಲಿ ಒಮ್ಮೆಯಾದರೂ ಹೋಗಿ ನೋಡಬೇಕೆಂದು ಆಸೆ ಇದೆ ಇದು ನಮ್ಮ ಭಾರತದ ಅರುಣಾಚಲ ಪ್ರದೇಶದಿಂದ ಬಹಳ ಹತ್ತಿರವಾಗಿಯೇ ಏನೋ ಇದೆ ಆದರೆ ಜಾಗ ಪ್ರಸ್ತುತ ಚೀನಾದವರ ಸುಪರ್ದಿಯಲ್ಲಿದೆ ರಾಜಕೀಯ ದೃಷ್ಟಿಕೋನದಿಂದ ಅವರೇನೂ ನಮ್ಮ ವಿರೋಧಿಗಳೆ ಸರಿ ಆದರೆ ನಿಸರ್ಗ ಅಥವಾ ಪರಿಸರ ಪ್ರಿಯರಿಗೆ ಯಾವ ಬಾರ್ಡರ್ ಗಳ ಅಡೆತಡೆಗಳಿವೆ ? ಆದರೆ ಜೀವನದಲ್ಲಿ ಪ್ರದೇಶಕ್ಕೆ ಹೋಗಲಿಕ್ಕೆ ಆಗುತ್ತದೆಯೋ ಇಲ್ಲವೋ ತಿಳಿಯದು ಆದರೆ ನಮ್ಮ ಮಗ್ಗುಲಲ್ಲೇ ಇರುವ ಹಿಮಾಲಯ ಶಿಖರ ಕ್ಕಿಂತಲೂ ಅತ್ಯಂತ ಹಳೆಯದಾದ ಪಶ್ಚಿಮ ಘಟ್ಟವನ್ನು ಸಂಪೂರ್ಣ ಸುತ್ತಿ ಅದನ್ನೇ ಆನಂದಿಸಬೇಕೆಂಬು ಆಸೆ ಇದೆ.

ಧನ್ಯವಾದಗಳು.







5 comments: