Saturday, April 10, 2021

ಆಗೋಚರತೆಯೊಳಗಿನ ಆದರ್ಶ.


 ಎಸ್ ಪಿ ತೇಜರಾಜು.

 ಮಕ್ಕಳನ್ನು ನಾವು ಚಿಕ್ಕವಯಸ್ಸಿನಲ್ಲಿ ಯಾವ ಪರಿಸರದಲ್ಲಿ ಬೆಳೆಸುತ್ತೇವೆ ಎಂಬ ಆಧಾರದ ಮೇಲೆಯೇ ತಾನೆ ಅವರು ಬೆಳವಣಿಗೆ ಹೊಂದುವುದು? ಆ ಬೆಳವಣಿಗೆಯಲ್ಲಿ ಕಲಿತ ವಿದ್ಯೆಯ ಆಧಾರದ ಮೇಲೆಯೇ ತಾನೆ ಅವರ ಮುಂದಿನ ಭವಿಷ್ಯ ನಿರ್ಧರಿಸುವುದು? ಹಾಗಾದರೆ ಈ ಮಕ್ಕಳ ಬೆಳವಣಿಗೆ ಹಂತದಲ್ಲಿ ನಾವು ಕಲಿಸ ಬೇಕಾಗಿರುವುದಾದರೂ ಏನನ್ನು? ಮಕ್ಕಳು ಅಳುತ್ತವೆ ಎಂದು ಅವರ ಕೈಗೆ ಮೊಬೈಲ್ಗಳನ್ನು ಕೊಡುವುದೋ? ಅಥವಾ ಅಳುತ್ತಲೇ ಇರಲಿ ಎಂದು ಸುಮ್ಮನಾಗುವುದೋ?

 ರಾಮಕೃಷ್ಣ ಪರಮಹಂಸರು, ಸ್ವಾಮಿ -ವಿವೇಕಾನಂದರು, ಶಿವಾಜಿ ಮಹಾರಾಜ್, ಮಹಾತ್ಮ ಗಾಂಧೀಜಿ ಹೀಗೆ ಹತ್ತು ಹಲವು ಮಹಾನ್ ವ್ಯಕ್ತಿಗಳ ಪೋಷಕರು ಇವರನ್ನು ಹೇಗೆ ಬೆಳೆಸಿದರು? ಕೆಲವೊಂದಿಷ್ಟು ಆದರ್ಶಗಳ ಆಧಾರದ ಮೇಲೆ ತಾನೆ? ಹಾಗಾದರೆ ನಾವೇಕೆ ಆ ಆದರ್ಶಗಳನ್ನು ಕಲಿಯಬಾರದು? ಕಲಿಯಲಿಕ್ಕೆ ಯಾವುದೇ ಅಡೆತಡೆಗಳಿಲ್ಲದೆ ಮನಸ್ಸೊಂದಿರಬೇಕಷ್ಟೆ ತಾನೇ? ಹಾಗಾದರೆ ನಾವೇಕೆ ಪ್ರಯತ್ನಿಸಬಾರದು ?

 ಮಹಾನ್ ವ್ಯಕ್ತಿಗಳ ಪೋಷಕರು ತಮ್ಮ ಮಕ್ಕಳು ಚಿಕ್ಕವರಿರುವಾಗ ದಯೆಯೇ ಧರ್ಮದ ಮೂಲ, ನಿಸರ್ಗವೇ ನಮ್ಮ ತಾಯಿ, ಅತಿಥಿಗಳೇ ನಮ್ಮ ದೇವರು, ನಾವೆಲ್ಲರೂ ದೇವರ ಮುಂದೆ ಸಮಾನರು,ಶತ್ರುವೇ ಆಗಿರಲಿ ಅವರಿಗೆ ಎಂದು ಕೇಡು ಬಯಸದಿರು ಎಂಬ ಕೆಲವೊಂದಿಷ್ಟು ನೀತಿ ಕಥೆಗಳನ್ನು ಹೇಳುತ್ತಿದ್ದರು, ಇದರೊಂದಿಗೆ ಆದರ್ಶ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಹೇಳುವುದರ ಮೂಲಕ ನೀವು ಇದೇ ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದುದರಿಂದಲೇ ತಾನೇ ಅವರು ಮುಂದೊಂದು ದಿನ ಇನ್ನೊಬ್ಬರಿಗೆ ಮಾರ್ಗದರ್ಶನವಾಗಿದ್ದು.

 ಎಷ್ಟೇ ಆದರೂ ನಮ್ಮ ಈ ನೆಲ ಸರ್ವಜನಾಂಗದ ಶಾಂತಿಯ ತೋಟ ಎಂಬ ಆಧಾರದ ಮೇಲೆ ತಾನೇ ನೆಲೆನಿಂತಿರುವುದು. ನಮ್ಮ ಸುತ್ತಮುತ್ತಲೇ ಅನೇಕ ಮತ, ಪಂಥ, ಧರ್ಮಗಳ ಧರ್ಮಗ್ರಂಥಗಳು ಅವರ ಆಚಾರ - ವಿಚಾರಗಳು ವಿಶಿಷ್ಟವಾಗಿದ್ದರೂ ಕೂಡ ಕೊನೆಗೆ ದಯೆಯೇ ಧರ್ಮದ ಮೂಲ ಎಂಬುದನ್ನು ಸಾರುವುದಲ್ಲವೇ.

 ಈ ಭರತ ಖಂಡದಲ್ಲಿ ಅಡಗಿರುವ ಅಪಾರ ಜ್ಞಾನಭಂಡಾರವನ್ನು ಗ್ರಹಿಸಲೆಂದೇ ಪಶ್ಚಿಮ ದೇಶದವರು ಸಂಸ್ಕೃತವನ್ನು ಕಲಿತು ಶ್ಲೋಕದ ರೂಪದಲ್ಲಿರುವ ವೇದ, ಶಾಸ್ತ್ರ, ಪುರಾಣ ಸಾಹಿತ್ಯವನ್ನು ಅಧ್ಯಯನಮಾಡಿ ತಮ್ಮ ಭಾಷೆಗಳಿಗೆ ಭಾಷಾಂತರಿಸಿಕೊಂಡು ಮೇಧಾವಿಗಳಾಗಿ, ಹಿಂತಿರುಗಿ ನಮಗೆ ಬೋಧಿಸುತ್ತಿದ್ದಾರೆ. ಅದರಲ್ಲಿಯೂ ನಮ್ಮ ಧರ್ಮಗ್ರಂಥಗಳಾದಂತಹ ರಾಮಾಯಣ, ಮಹಾಭಾರತದಲ್ಲಿ ಅಡಗಿರುವಂತಹ ಜೀವನದ ರಹಸ್ಯವನ್ನು ತಿಳಿಸಿದ ವಾಲ್ಮೀಕಿಯವರನ್ನು ಸ್ಮರಿಸಿದ್ದಾರೆ, ಈ ಧರ್ಮ ಗ್ರಂಥವನ್ನು ಓದಿ ಅರ್ಥೈಸಿಕೊಂಡರೆ ಸಾಕು ಜೀವನದಲ್ಲಿ ಬರಬಹುದಾದಂತಹ ಯಾವುದೇ ಕಷ್ಟ  ಕಾರ್ಪಣ್ಯಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದಾಗಿರುವುದೇ ಇದಕ್ಕೆ ಉದಾಹರಣೆ.

ವಾಲ್ಮೀಕಿಯವರು ರಾಮಾಯಣದಲ್ಲಿ ಹೇಳಿರುವಂತೆ ರಾಮಾಯಣವನ್ನು ಅಥವಾ ಅದರ ಒಂದು ಶ್ಲೋಕವನ್ನು ಅಥವಾ ಒಂದು ಪಾದವನ್ನು ಭಕ್ತಿಯಿಂದ ಹೇಳಿದವನು ಬ್ರಹ್ಮನ ಲೋಕಕ್ಕೆ ಹೋಗುವನು ಬ್ರಹ್ಮನು ಅವನನ್ನು ಪೂಜಿಸುವನು ಎಂದು ಉತ್ತರಕಾಂಡದ ಕೊನೆಯಲ್ಲಿ ಹೇಳಲಾಗಿದೆ. ಈ ಮೂಲಕ ರಾಮಾಯಣ-ಮಹಾಭಾರತ ಪುಸ್ತಕಗಳಲ್ಲಿ ಜೀವನದ ಸಾರವನ್ನು ಎತ್ತಿ ಹಿಡಿಯಲಾಗಿದೆ.

ರಾಮ ಎಂದಕೂಡಲೇ ಎಡಪಂಥೀಯರಿಗೆ ಒಂದುರೀತಿಯ ತಾತ್ಸರ್ಯ ಇರಬಹುದು ಆದರೆ ನಮಗೆ ಬೇಕಾಗಿರುವುದು ಆದರ್ಶ ತಾನೇ? ಈ ಒಳ್ಳೆಯ ಆದರ್ಶವನ್ನು ನಾವು ಯಾರಿಂದ ತೆಗೆದುಕೊಂಡರೂ ಸ್ವಸ್ಥ ಸಮಾಜವನ್ನು ನಿರ್ಮಿಸಬಹುದಲ್ಲವೇ, ಹಾಗಾದರೆ ಶ್ರೀರಾಮನಲ್ಲಿರುವ ಕೆಲವು ಆದರ್ಶ ಗುಣಗಳನ್ನು ನೋಡೋಣ:

1 ಪಿತೃವಾಕ್ಯ ಪರಿಪಾಲಕ, ತಾನೆಂದೂ ಪೋಷಕರ ಮಾತನ್ನು ತಿರಸ್ಕರಿಸಿದವನಲ್ಲ.

2 ತಂದೆಯವರಿಗೆ ಅನೇಕ ಪಟ್ಟದ ರಾಣಿಯರೊಂದಿಗೆ ಇತರ ರಾಣಿಯರಿದ್ದರು ಸಹ, ಈತ ಏಕಪತ್ನೀವ್ರತಸ್ಥನಾಗಿ ಜೀವನ ನಡೆಸಿದ್ದು.

3 ತಮ್ಮಂದಿರ ಮೇಲೆ ಅಪಾರ ಪ್ರೀತಿ ಕಾಳಜಿಯನ್ನು ಇಟ್ಟಿದ್ದು.

4 ಹನುಮಂತನ ಸೇವೆಗಾಗಿ ತನ್ನನ್ನೇ ತಾನು ಸಮರ್ಥಿಸಿಕೊಂಡಿದ್ದು.

5 ಮಾಂಸಹಾರಿಯಾಗಿದ್ದರೂ ಪಟ್ಟಾಭಿಷೇಕವಾದ ಬಳಿಕ ಮಾಂಸಾಹಾರವನ್ನು ತ್ಯಜಿಸಿದ್ದು.

6 ಪ್ರತಿಯೊಬ್ಬರನ್ನು ಗೌರವದಿಂದ ಕಾಣುತ್ತಿದ್ದುದು.

7 ತನಗಾಗಿ ಕಾದಿದ್ದ ಶಬರಿಯನ್ನು ಬೇಟಿಯಾಗಿದ್ದು.

8 ದುಷ್ಟರ ಸಂಹಾರಕ್ಕಾಗಿ ಕಾಡು ಮೇಡು ಅಲೆದದ್ದು.

9 ಇತಿಹಾಸ ಸೃಷ್ಟಿಸುವಂತಹ ಸೇತುವೆ ನಿರ್ಮಾಣ ವಾಗಿದ್ದು.

10 ಪ್ರಜೆಗಳ ಯೋಗಕ್ಷೇಮಕ್ಕಾಗಿ ಶ್ರಮಿಸಿದ್ದು.

ಹೀಗೆ ಮೊದಲಾದ ಕಾರಣಗಳೇ ಜನರಿಗೆ ರಾಮ ಆದರ್ಶ ವ್ಯಕ್ತಿಯಂತೆ ಕಂಡಿದ್ದು, ಅದಕ್ಕೆಂದೇ ರಾಮಜನ್ಮಭೂಮಿಯಾದಂತಹ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಇಷ್ಟೆಲ್ಲಾ ಧರಣಿ ಹೋರಾಟಗಳು ನಡೆದದ್ದು, ಅದೇನೇ ಇರಲಿ ಯಾವ ಧರ್ಮವು ಸರ್ವಶ್ರೇಷ್ಠವು ಅಲ್ಲ ಕನಿಷ್ಠರೂ ಅಲ್ಲ, ಬದಲಿಗೆ ಪ್ರತಿಯೊಬ್ಬ ಮಾನವನಲ್ಲಿರುವ ಪ್ರೀತಿ ವಿಶ್ವಾಸವನ್ನುಗಳಿಸಿಕೊಂಡು, ಇತರರಿಗೆ ಕೈಲಾದ ಸಹಾಯವನ್ನು ಮಾಡಿಕೊಂಡು ಜೀವನ ಸಾರ್ಥಕ ಪಡಿಸಿಕೊಳ್ಳುವುದಾಗಿದೆ. 

ಸೂಕ್ಷ್ಮವಾಗಿ ಗಮನಿಸುವುದಾದರೆ, ನಾವು ಯುಗಾದಿ ಹಬ್ಬಕ್ಕೂ ಮುನ್ನ ದೇಶದ ಉದ್ದಗಲಕ್ಕೂ ಹೋಳಿ ಅಥವಾ ಕೆಲ ಹಳ್ಳಿಗಳಲ್ಲಿ ಉಯ್ಯೋ ಉಯ್ಯೋ ಮಳೆರಾಯ ಹಬ್ಬವನ್ನು ಆಚರಿಸಿದ್ದೆವು, ಈ ಬೇಸಿಗೆ ಸಮಯದಲ್ಲಂತೂ  ಈ ಹಬ್ಬ ಎಲ್ಲ ಮಕ್ಕಳಿಗೂ ಬಹಳ ಖುಷಿಯನ್ನು ನೀಡಿತು, ಈ ಹಬ್ಬದ ಒಳ ರಹಸ್ಯ ಧಾರ್ಮಿಕ ಆಚರಣೆ ಒಂದು ಬದಿ ಆದರೆ ಬೇಸಿಗೆಯಲ್ಲಿ ಮಕ್ಕಳು ನೀರಿನಲ್ಲಿ ಆಟವಾಡಿದರು ಸಹ ಯಾವುದೇ ಸಣ್ಣಪುಟ್ಟ ಕಾಯಿಲೆಗಳಿಗೆ ಒಳಗಾಗದಿರುವುದೇ ಆಗಿದೆ.

ಹೀಗೆ ನೀವೇನಾದರೂ ಚೈತ್ರಮಾಸ ಮೊದಲ ಹಬ್ಬವಾದ ಯುಗಾದಿಯ ಬಿಸಿಲಿನಲ್ಲಿಯೂ ಸಹ ನಳನಳಿಸಿ ಚಿಗುರುವ ವೃಕ್ಷಗಳ ಆನಂದವನ್ನು ಗ್ರಹಿಸಲು ಪ್ರಯತ್ನಪಟ್ಟರೆ ಅಥವಾ ಈ ಬೇಸಿಗೆ ಸಮಯದಲ್ಲಿ ಪಾನಕ ಅಥವಾ ಮಜ್ಜಿಗೆಯನ್ನು ದಣಿದವರಿಗೆ ಕೊಟ್ಟು ಅವರ ಬಾಯಾರಿಕೆಯನ್ನು ಸ್ವಲ್ಪವಾದರೂ ಕಡಿಮೆ ಮಾಡಲು ಪ್ರಯತ್ನಿಸಿದರೆ, ಅಥವಾ ಇದೇ ಸಂದರ್ಭದಲ್ಲಿ ಬಾಯಾರಿ ದಣಿದಿರುವ ಪ್ರಾಣಿ-ಪಕ್ಷಿಗಳಿಗೆ ಆಹಾರ ನೀರನ್ನು ನೀಡಿ ಅದರ ಬಾಯಾರಿಕೆಯನ್ನು ಸ್ವಲ್ಪವಾದರೂ ಕಡಿಮೆ ಮಾಡಿದರೆ ನಿಮ್ಮೊಳಗಿನ ರಾಮನನ್ನು ಜಾಗೃತಗೊಳಿಸಿದಂತಾಗುತ್ತದೆ,  ಹಾಗೂ ನಮ್ಮನ್ನು ಸದಾ ಹಿಂಬಲಿಸುವ ಮುಂದಿನ ಪೀಳಿಗೆಗೆ ಸನ್ಮಾರ್ಗವನ್ನು ಕಲಿಸಿ ಕೊಟ್ಟಂತಾಗುತ್ತದೆ, ಹೀಗೆ ಈ ರೀತಿಯ ಕಾರ್ಯಗಳಲ್ಲಿ ಅಡಕವಾಗಿರುವಂತಹ ಆಗೋಚರತೆಯೊಳಗಿನ ರಾಮನ ಆದರ್ಶವನ್ನು ನಾವು ಅರಿತಂತಾಗುತ್ತದೆ.

ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ಹಾಗೂ ಮುಂದೆ ಬರುವ ರಾಮನವಮಿಯ ಹಬ್ಬದ ಶುಭಾಶಯಗಳು

ಧನ್ಯವಾದಗಳು. 





7 comments:

  1. ಅರ್ಥಗರ್ಭಿತವಾದ ಸಾಲುಗಳು

    ReplyDelete
  2. ಈ ದಶಕದ ಜನಸಾಮಾನ್ಯರು ಮಕ್ಕಳ ಬುದ್ಧಿವಂತಿಕೆಯನ್ನು ಕೇವಲ ಪುಸ್ತಕಗಳಲ್ಲಿ ವಿದ್ಯೆಯ ಮುಖಾಂತರ ಅಳೆಯಲು ಪ್ರಾರಂಭಿಸಿದ್ದಾರೆ.

    ಆದರೆ ಅದಕ್ಕೂ ಮಿಗಿಲಾದ ಪ್ರಾಕೃತಿಕ ಸಂಬಂಧವನ್ನು ಪರಸ್ಪರತೆಯ ಮನೋಭಾವನೆಯನ್ನು ಸಹಪಾಠಿಗಳ ,
    ಗಿಡಮರ ಪಕ್ಷಿಗಳ ಒಡನಾಟವನ್ನು ತುಂಬಾ ದೂರ ತಳ್ಳಿ ಮಾನವ ನಿರ್ಮಿತ ವಸ್ತುಗಳ ಮೇಲೆ ಅಗಾಧವಾದ ನಂಬಿಕೆ ವಿಶ್ವಾಸ ಇಟ್ಟುಕೊಂಡಿದ್ದಾರೆ .

    ಇದು ಕೇವಲ ಕಾಲ್ಪನಿಕ ವಾಗದೆ ಅವಶ್ಯಕತೆಯನ್ನು ಪೂರೈಸಿಕೊಳ್ಳು ಅಂತದ್ದು ಆಗಿದೆ .
    ಆದರೆ ಈ ರೀತಿಯ ಲಕ್ಷಣಗಳು ಆರೋಗ್ಯಕರ ಪರಿಸರಕ್ಕೆ ಕುಂದುಕೊರತೆಗಳನ್ನು ಉಂಟುಮಾಡುತ್ತದೆ ಎಂಬುದು ನನ್ನ ವಾದ .
    ಬಲಿಷ್ಠ ಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಸಹ ಪ್ರಕೃತಿಯ ಜೊತೆ ಸಹಬಾಳ್ವೆಯಿಂದ ಬದುಕುವ ಅವಶ್ಯಕತೆ ಅದರ ಅಗತ್ಯತೆ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿ ತೃಣ ಪ್ರಾಣಿ-ಪಕ್ಷಿಗಳಿಂದ ಗಿಡಮರಗಳಿಂದ ದೈತ್ಯ ಪ್ರಾಣಿ ಯವರೆಗೆ ಸುಖಕರವಾದ ಪ್ರಶಾಂತವಾದ ಜೀವನವನ್ನು ನಡೆಸಬಹುದಾಗಿದೆ
    ಇದಕ್ಕೆ ನೀವು ಹೇಳಿರುವ ಅನೇಕ ಆದರ್ಶಗಳು ಪೂರಕವಾಗಿವೆ ಇದನ್ನು ಪಾಲಿಸುವ ಕರ್ತವ್ಯ ಶೇಕಡ 10 ಭಾಗವಾದರೂ ನಮ್ಮದಾಗಬೇಕಿದೆ...irm

    ReplyDelete