Saturday, April 3, 2021

ಆ ನಿನ್ನ ಸೇವೆಗೆ ನಾ ಏನ ಕೊಡಲಿ ?


.                               
                              ಎಸ್ ಪಿ ತೇಜ ರಾಜು.

ನಾ ಲೋಕ ಕಾಣುವ ಮುನ್ನ ನನ್ನ ತಾಯಿಯನು

ಮಡಿಲಲ್ಲಿ ಬೆಳೆಸಿದಾಕೆ ನೀನು

ಅವಳಾಟದ ಏಳುಬೀಳುಗಳನ್ನು ತಿದ್ದಿ-ತೀಡಿ

ಬೆಳೆಸಿದಾಕೆ ನೀನು

ಆ ನಿನ್ನ ಸೇವೆಗೆ ನಾ ಏನ ಕೊಡಲಿ ?


ನಿನ್ನ ಮಡಿಲಲಿ ಬೆಳೆದಾಕೆಗೆ ತರುಲತೆ ಬಳ್ಳಿಗಳಲಿ

ಬೆಳೆದ ಹಣ್ಣು ಹಂಪಲನ್ನು ಉಣಬಡಿಸಿದೆ ನೀನು

ಬಿದ್ದ ಗಾಯಕ್ಕೆ ಗಿಡಮೂಲಿಕೆ ಔಷಧೀಯ

ತೋರಿಸಿಕೊಟ್ಟು ಉಪಚರಿಸಿದೆ ನೀನು.

ಆ ನಿನ್ನ ಸೇವೆಗೆ ನಾ ಏನ ಕೊಡಲಿ ?


ಕಾಡಿನಲ್ಲಿ ಅಲೆವಾಗ ಸ್ವಚ್ಛಂದವಾಗಿ ನಲಿಯುವ

ಪ್ರಾಣಿ-ಪಕ್ಷಿ, ಖಗ ಮೃಗ ಪರಿಚಯಿಸಿದೆ ನೀನು,

ಬಾನಲ್ಲಿ ಭೋರ್ಗರೆದ ಗುಡುಗಿನ ಶಬ್ದಕ್ಕೆ

ಹೆದರದಂತೆ ಮಡಿಲಲ್ಲಿ ಹಾರೈಕೆಗೈದೆ ನೀನು,

ಆ ನಿನ್ನ ಸೇವೆಗೆ ನಾ ಏನ ಕೊಡಲಿ ?


ನಿನ್ನ ಮಗಳು ಬೆಳೆದು ನನ್ನನ್ನು ಹಡೆದಾಗ

ನಮ್ಮಿಬ್ಬರನ್ನು ಅಕ್ಕರೆಯಿಂದ ಪೋಷಿಸಿದೆ ನೀನು,

ತಾಯಿಗೆ ತೋರಿದ ಪ್ರೀತಿಯಷ್ಟನ್ನು ನನಗೂ

ತೋರಿ ಮಡಿಲಲ್ಲಿ ಬೆಳೆಸಿರುವೆ ನೀನು,

ಆ ನಿನ್ನ ಸೇವೆಗೆ ನಾ ಏನ ಕೊಡಲಿ ?


ನಾ ಬೆಳೆದು ನಿನ್ನ ಜಗತ್ತಿನಲ್ಲಿ ಅಲೆವಾಗ ನನ್ನೊಂದಿಗೆ,

ನೂರಾರು ಕೋಟಿ ಜೀವಿಗಳಿಗೆ ಆಶ್ರಯ ನೀಡಿರುವೆ ನೀನು

ನನ್ನ ತಾಯಿಯಷ್ಟೇ ನಿರ್ಲಿಪ್ತ ಸೇವೆಯೇ ನಿನ್ನದು,

ನನಗೆ ನೀನು ಬೇರೆಯಲ್ಲ ಆಕೆ ಬೇರೆಯಲ್ಲ,

ನಿನ್ನೆಲ್ಲ ಲಕ್ಷಣಗಳನ್ನು ಅವಳಲ್ಲಿ ಕಂಡಿಹೆನು,

ಆ ನಿನ್ನ ಸೇವೆಗೆ ನಾ ಏನ ಕೊಡಲಿ ?


ನೀ ಸದಾ ಹಳೆಬೇರು ಹೊಸಚಿಗುರು ಚಿರಯೌವನ ತಾರೆ, 

ಕೊನೆಯಿಲ್ಲದ ನಿನ್ನ ಯೌವ್ವನ ಶಾಶ್ವತವಾಗಿಹುದು,

ನಾವೆಲ್ಲ ನಿನ್ನ ಮಡಿಲ ಕೈಗೊಂಬೆಗಳು,

ನೀ ಬೆಳೆಸಿದಂತೆ ನಾವು ಬಾಳುವೆವು,

ನಿನ್ನ ಪ್ರೀತಿ ವಾತ್ಸಲ್ಯಕ್ಕೆ ಚಿರಋಣಿಯಾಗಿಹೆವು,

ಕೈಬೀಸಿ ಕರೆದಾಗ ಹರುಷದಿ ನಿನ್ನ ಮಡಿಲ ಸೇರುವೆವು.


ಆ ನಿನ್ನ ಅಕ್ಕರೆಯ ಸೇವೆಗೆ ನಾ ಏನ ಕೊಡಲಿ ?



 

No comments:

Post a Comment