Saturday, February 6, 2021

ರಾಜಲಕ್ಷ್ಮಮ್ಮಣ್ಣಿ


                    

 ಎಸ್ ಪಿ ತೇಜರಾಜು.

  

ಮನೆಯಲ್ಲಿ ಸಂಭ್ರಮದ ವಾತಾವರಣ ಬಂಧುಗಳು ನೆಂಟರಿಷ್ಟರು ಪರಿಚಯಸ್ಥರು ಎಲ್ಲರೂ ಸೇರಿದ್ದರು, ಸುಮಾರು ಹತ್ತು ವರ್ಷಗಳ ಸತತ ನಂಜನಗೂಡು ನಂಜುಂಡೇಶ್ವರನ ಪೂಜಾ ಫಲದಿಂದಾಗಿಯೇ ಮನೆಯಲ್ಲಿ ಹೆಣ್ಣುಮಗಳು ಜನಿಸಿದ್ದಳು. ಮನೆಗೆ ಮೊದಲ ಹೆಣ್ಣುಮಗಳು ಜನಿಸಿದ ಕಾರಣ ಮನೆಯಲ್ಲಿ ನಾಮಕರಣದ ಶಾಸ್ತ್ರ ಜೋರಾಗಿ ನಡೆದಿತ್ತು ಮಗಳು ರಾಜಕುಮಾರಿಯಂತೆ ಬಾಳಲಿ ಎಂದು ಭಾವಿಸಿ ಪೋಷಕರು ರಾಜಲಕ್ಷ್ಮಮ್ಮಣ್ಣಿ ಎಂದು ನಾಮಕರಣ ಮಾಡಿದರು.

ಮಗುವಿನ ಪುಟ್ಟ ಹೆಜ್ಜೆಗಳು ಆಟೋಟ ಪಾಠಗಳನ್ನು ನೋಡುತ್ತಿದ್ದ ಪೋಷಕರಿಗೆ ಸಮಯ ಹೋಗುತ್ತಿದ್ದೆ ತಿಳಿಯುತ್ತಿರಲಿಲ್ಲ. ಮನೆಗೆ ಮೊದಲ ಮಗುವಾಗಿದ್ದ ಕಾರಣ ಎಲ್ಲರ ಪ್ರೀತಿಗೆ ಭಾಜನವಾಗಿತ್ತು. ಅಷ್ಟೇನೂ ಶ್ರೀಮಂತವು ಅಲ್ಲದ ಬಡವರು ಅಲ್ಲದ ಮನೆಯಲ್ಲಿ ಮಗಳು ಸಂಪಾಗಿ ಬೆಳೆಯುತ್ತಿದ್ದಳು, ಇವರ ಪೂರ್ವಜರಿಗೆ ಮೈಸೂರು ಮಹಾರಾಜರ ಕಡೆಯಿಂದ ಬಳುವಳಿಯಾಗಿ ನಂಜನಗೂಡಿಗೆ ಹೊಂದಿಕೊಂಡಂತೆ ಒಂದಷ್ಟು ಜಮೀನು ದೊರಕಿತ್ತು ಅಲ್ಲೊಂದು ಬಾವಿ ತೋಡಿ ತೆಂಗಿನ ತೋಟವನ್ನು ಮಾಡಿದ್ದರು, ತೋಟವು ಕೂಡ ನಾನಾ ಕಾರಣಗಳಿಂದ ಹರಿದುಹಂಚಿ ಛಿದ್ರಗೊಂಡು ಇವರ ಪಾಲಿಗೆ ಉಳಿದಿದ್ದು ಎರಡು ಎಕರೆ ತೆಂಗಿನ ತೋಟವಾಗಿತ್ತು, ತೆಂಗಿನತೋಟವೇ ಇವರ ಜೀವನೋಪಾಯದ ಮೂಲವಾಗಿತ್ತು.

ಅದೊಂದು ಪರ್ವಕಾಲ ಬ್ರಿಟಿಷ್ ಮಿಷನರಿಗಳು ಊರುಗಳಲ್ಲಿ ಶಾಲೆಗಳನ್ನು ಆರಂಭಿಸುತ್ತಿದ್ದವು. ಮಗಳು ಓದಿ ಮಾಡಬೇಕಾಗಿದ್ದಾದರೂ ಏನನ್ನು? ಎನ್ನುವ ಸುತ್ತಮುತ್ತಲ ಜನರೊಂದಿಗೆ ಇವರು ಕೂಡ ಮಗಳು ಮನೆಯಂಗಳದಲ್ಲಿ ಆಟವಾಡಿಕೊಂಡು ಬೆಳೆಯಲಿ ಎಂದುಕೊಂಡು ಸುಮ್ಮನಾದರೂ. ಮಗಳಿಗೂ ಇನ್ನೊಂದು ಕಡೆಯಿಂದ ಇದೇ ಬೇಕಾಗಿತ್ತು.

ಮಗಳು ಕ್ರಮೇಣ ಬೆಳೆಯುತ್ತಿದ್ದಳು ಪಕ್ಕದ ಊರಿನಲ್ಲಿ ತನ್ನ ಬಂಧುಗಳಿದ್ದಾರೆ ಎಂದು ತಂದೆಯೊಂದಿಗೆ ಚಿಕ್ಕ ವಯಸ್ಸಿನಲ್ಲಿ ಹೋಗಿದ್ದು ಬಿಟ್ಟರೆ ಹೊರಗಿನ ಪ್ರಪಂಚದ ಅರಿವೆ ಇರಲಿಲ್ಲ. ಪ್ರತಿವರ್ಷ ನಂಜನಗೂಡು ನಂಜುಂಡೇಶ್ವರನ ರಥೋತ್ಸವ ಸಾಂಗವಾಗಿ ನೆರವೇರುತ್ತಿತ್ತು ಅಂದಿನ ದಿನ ಇವರ ಮನೆಯಲ್ಲಿ ನಾಲ್ಕಾರು ಜನರನ್ನು ಕರೆದು ರಥೋತ್ಸವದ ಊಟವನ್ನು ಬಡಿಸಲಾಗುತ್ತಿತ್ತು.

ವರ್ಷಗಳು ಉರುಳುತ್ತಿದ್ದವು ಮಗಳು ಬೆಳೆಯುತ್ತಿದ್ದಳು ಮದುವೆಯೊಂದನ್ನು ಮಾಡಿ ಮುಗಿಸಿದರೆ  ಕೈ ಕಳೆದುಕೊಂಡಂತಾಗುತ್ತದೆ ಎಂದು ಭಾವಿಸಿ ಈಕೆಯ ತಂದೆ ಪಕ್ಕದ ಹಳ್ಳಿಯ ಒಬ್ಬ ವರನನ್ನು ಹುಡುಕಿ ವಿಚಾರಿಸಿದ್ದರು. ಒಂದೆರಡು ಮಾತುಕತೆಯಲ್ಲಿಯೇ ಹುಡುಗನ ಮನೆಯವರು ಚೆನ್ನಾಗಿದ್ದಾರೆ ಎಂದು ತಿಳಿದು ಮದುವೆಯನ್ನು ಮಾಡಿ ಮುಗಿಸಿದರು. ಎಷ್ಟೇ ಆದರೂ ಏಕ ಪುತ್ರಿ ಅಲ್ಲವೇ ಮಗಳನ್ನು ಅಳಿಯಂದಿರ ಮನೆಗೆ ಕಳುಹಿಸಿಕೊಡಲು ಕಂಬನಿಯ ಕೋಡಿಯೇ ಹರಿದಿತ್ತು. ಮಗಳಿಗೆ ಹೊಸಮನೆಯಲ್ಲಿ ತೊಂದರೆಯಾಗಬಾರದೆಂದು ನಂಜನಗೂಡಿನ ಸಂತೆಯಲ್ಲಿ ಒಂದು ಎತ್ತಿನ ಗಾಡಿಯ ತುಂಬಾ ಒಂದೆರಡು ಟ್ರಂಕು, ಬಟ್ಟೆ, ಪಾತ್ರೆ ಪಗಾರಗಳನ್ನು ತುಂಬಿಸಿ ಮಗಳನ್ನು ಗಂಡನ ಮನೆಗೆ ಕಳುಹಿಸಿ ಕೊಡಲಾಯಿತು.

ಮತ್ತೊಂದು ಮನೆಗೆ ಸೊಸೆಯಾಗಿ ಹೋಗಿದ್ದ ಈಕೆಗೆ ತಾಯಿ ಹೇಳಿಕೊಟ್ಟ ಕಿವಿ ಮಾತುಗಳೆಲ್ಲವೂ ನೆನಪಿನಲ್ಲಿದ್ದವು. ಮನೆಯಲ್ಲಿ ಹಿರಿಯರ ಮಾತಿಗೆ ಗೌರವವನ್ನು ಕೊಟ್ಟಿಕೊಂಡು ಯಾರಿಗೂ ಹಿಂತಿರುಗಿ ಮಾತನಾಡದೆ ಎಲ್ಲರೊಂದಿಗೆ ಹೊಂದಿಕೊಂಡು ಹೋಗುತ್ತಿದ್ದಳು,ಕ್ರಮೇಣ ಮನೆಯ ಕೆಲಸಗಳೆಲ್ಲವೂ ಸೇರಲಾರಂಭಿಸಿದವು, ಬಾವಿಯಿಂದ ನೀರನ್ನು ಸೇದಿ ತರುವುದು, ಬಟ್ಟೆ ಪಾತ್ರಗಳನ್ನು ತೊಳೆಯುವುದು, ಅಡುಗೆಮಾಡುವುದು, ಬಂದ ಅತಿಥಿಗಳ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಹೀಗೆ ಎಲ್ಲ ಕೆಲಸಗಳನ್ನು ನಿಭಾಯಿಸುತ್ತಿದ್ದಳು. ಗಂಡನ ಮನೆಯಲ್ಲಿ ಈಕೆಗೆ ಒಂದು ಸಂತಸದ ವಿಚಾರವೆಂದರೆ ಪ್ರತಿವರ್ಷ ನಂಜನಗೂಡಿನ ಜಾತ್ರೆಗೆ ಎಲ್ಲರೂ ಎತ್ತಿನ ಗಾಡಿಯಲ್ಲಿ ಹೋಗುತ್ತಿದ್ದದ್ದು, ಮನೆಯ ಕೆಲಸಗಳಲ್ಲಿಯೇ ಸಮಯ ಉರುಳಿ ಹೋಗುತ್ತಿದ್ದ ಈಕೆಗೆ ಜಾತ್ರೆಯ ದಿನಗಳು ಸಂಭ್ರಮದ ದಿನಗಳಾದವು. ತೇರು ಎಳೆಯಲು ಬಂದ ಜನಸಾಗರವನ್ನು ನೋಡುವುದೇ ಒಂದು ಆಶ್ಚರ್ಯ ಜಾತ್ರೆಯಲ್ಲಿ ತಿರುಗಾಡುವುದು ಒಂದು ರೀತಿಯ ಆನಂದ, ಮನೆಗೆ ಬೇಕಾದ ಪದಾರ್ಥಗಳನ್ನುಗಳನ್ನೆಲ್ಲವನ್ನು ಖರೀದಿಸಿ ಜಾತ್ರೆ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದರು.

ಮನೆ ಮನೆತನಗಳೆಲ್ಲವೂ ವಿಶಾಲವಾಗಿಯೇ ಇತ್ತು ವಿಶಾಲವಾದ ಮನೆ, 25 ಎಕರೆ ಜಮೀನು, ಕೆಲಸದವರು, ಆಳು ಕಾಳು, ಮನೆಯಲ್ಲಿ ಗಂಡನ ಅಜ್ಜಿ-ತಾತ, ಅತ್ತೆ ಮಾವ ಅವರ 10 ಮಕ್ಕಳನ್ನೊಳಗೊಂಡ  ಒಂದು ಕೂಡು ಕುಟುಂಬವಾಗಿತ್ತು. ತಾನು ಮನೆಗೆ ಸೊಸೆಯಾಗಿ ಹೋಗುವ ಮುನ್ನ ಗಂಡನ ಅಣ್ಣನಿಗೆ ವಿವಾಹವಾಗಿ ಹಿರಿಯ ಸೊಸೆ ಮನೆಯನ್ನು ನಿರ್ವಹಿಸಿಕೊಂಡು ಹೋಗುತ್ತಿದ್ದರು. ಈಗ ಮನೆಯಲ್ಲಿ ಜನ ಹೆಚ್ಚಾದ ಕಾರಣ ಅಡಿಗೆ ಕೆಲಸಕ್ಕೆ ಅತ್ತೆಯೊಂದಿಗೆ ಹಿರಿಯ ಹಾಗೂ ಕಿರಿಯ ಸೊಸೆ ನೆರವಾಗುತ್ತಿದ್ದರು. ಇಷ್ಟೆಲ್ಲ ಜನರಿಗೆ ಮೂರು ಹೊತ್ತು ಅಡಿಗೆ ಮಾಡುವುದರಲ್ಲಿ ದಿನ ಹುರುಳಿ ಹೋಗುತ್ತಿದ್ದೆ ತಿಳಿಯುತ್ತಿರಲಿಲ್ಲ. ತನ್ನ ಯೋಗಕ್ಷೇಮವನ್ನು ವಿಚಾರಿಸಲು ಬಂದ ತಂದೆಗೆ ಕೆಲಸದ ನಿಮಿತ್ತ ಬಿಡುವು ಮಾಡಿಕೊಳ್ಳಲಾಗದಷ್ಟು ಕೆಲಸ. ಮಗಳನ್ನು ರಾಜಕುಮಾರಿಯಂತೆ ಬೆಳೆಸಿದ ತಂದೆಗೆ ಇವುಗಳನ್ನು ಕಂಡು ಮರುಗಿ ಹಾಸಿಗೆ ಹಿಡಿದ ಒಂದು ವರ್ಷದಲ್ಲಿಯೇ ಕೊನೆಯುಸಿರೆಳೆದರು.

ಈಕೆ ಸೊಸೆಯಾಗಿ ಬಂದ ಒಂದು ವರ್ಷದೊಳಗೆ ಮೈದುನನಿಗೆ ಮಗು ಜನಿಸಿತ್ತು ಮನೆಗೆ ಮೊದಲ ಮಗುವಾದ ಕಾರಣ ಎಲ್ಲರ ಮುಖದಲ್ಲಿ ಮಂದಹಾಸ, ಸಂಭ್ರಮ ಆದರೆ ಸಂಭ್ರಮದ ಹಿಂದೆ ಬಹಳಷ್ಟು ಮನೆ ಕೆಲಸಗಳು  ಇರುತ್ತಿದ್ದವು. ಮುಂದಿನ ವರ್ಷ ತನಗೂ ಮಗು ಜನಿಸಬಹುದು ಎಂಬ ಸಂತೋಷದಲ್ಲಿ ಎಷ್ಟೇ ಕಷ್ಟವಾದರೂ ಕೆಲಸಗಳನ್ನು ಮಾಡಿ ಮುಗಿಸುತ್ತಿದ್ದಳು. ಮುಂದಿನ ಸತತ ಎಂಟು ವರ್ಷಗಳು ಮನೆಯಲ್ಲಿ ಸಂಭ್ರಮ ತುಂಬಿ ತುಳುಕುತ್ತಿತ್ತು ಗಂಡನ ಬಳಿಕ ಜನಿಸಿದಂತಹ 8 ಹೆಣ್ಣುಮಕ್ಕಳನ್ನು ವರ್ಷಕ್ಕೆ ಒಬ್ಬರಂತೆ ಮದುವೆಯನ್ನು ಮಾಡಿ ಮುಗಿಸುತ್ತಿದ್ದರು. ಸಂಭ್ರಮದಲ್ಲಿ ಒಂದು ಮದುವೆಗೆ 2-3 ಎಕರೆಯಂತೆ ಜಮೀನನ್ನು ಮಾರಲಾಗುತ್ತಿತ್ತು. ಎಲ್ಲ ಎಂಟು ಮಕ್ಕಳು ಮದುವೆಯಾದ ಮುಂದಿನ ವರ್ಷ ಬಾಣಂತನಕ್ಕೆಂದು ತವರು ಸೇರುತ್ತಿದ್ದರು, ಇವರೆಲ್ಲರ ಬಾಣಂತನವನ್ನು ಮಾಡಿಮುಗಿಸುವುದರೊಳಗೆ ಒಂಬತ್ತು ವರ್ಷಗಳು ಉರುಳಿ ಹೋಗಿದ್ದವು. ಇಷ್ಟು ವರ್ಷಗಳಾದರೂ ತನಗಿನ್ನು ಮಗು ಜನಿಸಿದ ಇಲ್ಲವೆಂದು ಇದ್ದ ದೇವರಿಗೆಲ್ಲಾ ಹರಕೆಯನ್ನು ಹೊತ್ತು ಸೋತು ಸುಣ್ಣವಾಗಿ ಹೋಗಿದ್ದಳು ಗಂಡನಿಗೂ, ಅವರ ಮನೆಯವರಿಗೂ ಕೂಡ ಈಕೆಯ ಮೇಲೆ ಒಂದು ರೀತಿಯ ತಾತ್ಸಾರ ಮೂಡಿತ್ತು.

ತನ್ನ ಮಗಳಿಗೂ ಮಗುವಾಗಲಿಲ್ಲವೆಂಬ ಬೇಸರದಲ್ಲಿ ಈಕೆಯ ತಾಯಿಯ ಮೂಲೆ ಸೇರಿದಳು ಸುಮಾರು ಹತ್ತು ವರ್ಷಗಳ ಬಳಿಕ ತವರಿಗೆ ಬಸವಳಿದು ಹಿಂದಿರುಗಿದ ಮಗಳನ್ನು ನೋಡಿ ತಾಯಿ ಬಾಚಿ ತಬ್ಬಿಕೊಂಡು ಕಣ್ಣೀರ ಹೊಳೆಯೇ ಸುರಿಸಿದ್ದಾಯಿತು.

ಮಕ್ಕಳ ಮದುವೆಗೆಂದು ಮಾವ 20 ಎಕರೆ ಜಮೀನನ್ನು ಮಾರಿದ್ದಾಗಿತ್ತು. ನಡುವೆ ಮಾವನ ಪೋಷಕರು ಕೂಡ ಅಸುನೀಗಿದ್ದರು. ಮನೆಯ ಹೆಣ್ಣುಮಕ್ಕಳೆಲ್ಲರೂ  ಗಂಡನ ಮನೆಗೆ ಹಿಂತಿರುಗಿದ್ದರು. ಮನೆಯಲ್ಲಿ ಇಂದು ಕೊಂಚ ಖರ್ಚುಗಳು ಕಡಿಮೆಯಾಗಿದ್ದವು. ಉಳಿದ 5 ಎಕರೆ ತೆಂಗಿನತೋಟ ಮನೆಯನ್ನು ನಿರ್ವಹಿಸಿಕೊಂಡು ಹೋಗುತ್ತಿತ್ತು. ಅದು ಯಾವ ದೇವರ ಫಲವೋ ತಿಳಿಯದು ಅಂತೂ ಕೊನೆಗೆ ಹತ್ತು ವರ್ಷಗಳ ತರುವಾಯ ಈಕೆಗೂ ವರಮಹಾಲಕ್ಷ್ಮಿ ವ್ರತದ ಶುಕ್ರವಾರದಂದೇ ಹೆಣ್ಣುಮಗಳು ಜನಿಸಿದಳು. ಈಕೆಗೆ ಸಂತಸ ಮುಗಿಲು ಮುಟ್ಟಿತ್ತು, ಮನೆಯವರಿಗೂ ಈಕೆಯ ಮೇಲೆ ನಿಧಾನವಾಗಿ ಪ್ರೀತಿ ಬೆಳೆಯಲಾರಂಭಿಸಿತು, ಕೊನೆಗೂ ತನ್ನ ಕರುಳ ಬಳ್ಳಿ ಬೆಳೆಯಿತಲ್ಲ ಎಂಬ  ಸಂತೋಷದಲ್ಲಿ ಮಗಳಿಗೆ ಮಹಾಲಕ್ಷ್ಮಿ ಎಂದೇ ನಾಮಕರಣ ಮಾಡಿದರು.

ಮಗಳು ಬೆಳೆಯುತ್ತಿದ್ದಳು ಸಂತಸದಲ್ಲಿ ದಿನಕಳೆದು ವರುಷಗರುಳುತ್ತಿದ್ದವು, ನಡುವೆ ಮಾವನೂ ಕೂಡ ಅಸುನೀಗಿದ್ದರು, ಘಟನೆಯಾದ ಮುಂದಿನ ವರ್ಷ ಮೈದುನ ಆಸ್ತಿಯನ್ನು ಭಾಗ ಮಾಡಿಕೊಂಡು ಮಾರಿ ಬೆಂಗಳೂರು ಸೇರಿದ್ದರು ಅಲ್ಲಿಯೇ ಅವರ ಮಕ್ಕಳ ಕಾಲೇಜು ವಿದ್ಯಾಭ್ಯಾಸ ಮುಂದುವರೆದಿತ್ತು, ಈಗ ಇಷ್ಟು ದೊಡ್ಡ ಮನೆಯಲ್ಲಿ ಉಳಿದಿದ್ದು ಮಗಳು, ಗಂಡ, ಅತ್ತೆ ತನ್ನನ್ನು ಒಳಗೊಂಡಂತೆ ನಾಲ್ಕು ಜನ ಮಾತ್ರ. ಉಳಿದ ಎರಡೂವರೆ ಎಕರೆ ತೆಂಗಿನ ತೋಟ ಮನೆಯನ್ನು ನಿರ್ವಹಿಸಿಕೊಂಡು ಹೋಗುತ್ತಿತ್ತು, ಮಗಳು ತನ್ನಂತೆ ಆಗಬಾರದೆಂದು ಭಾವಿಸಿ ರಾಜಲಕ್ಷ್ಮಮ್ಮಣ್ಣಿ ತಾನು ಜಮೀನಿನಲ್ಲಿ ರಟ್ಟೆ ಮುರಿದು ಗಿಡಗಳಿಗೆ ನೀರುಣಿಸಿ ಋತುಗಳಿಗೆ ಸರಿಯಾಗಿ ಬಿಡುವ ಹಣ್ಣುಗಳನ್ನು ಮಾರಿಯ ಹಣಗಳಿಸಿ ಮಗಳನ್ನು ಪಿಯುಸಿಯವರೆಗೆ ಓದಿಸಿದ್ದ ಆಯ್ತು. ಒಳ್ಳೆ ಹುಡುಗನನ್ನು ಹುಡುಕಿ ಮಗಳಿಗೆ ಮದುವೆ ಮಾಡಿದರೆ ಮನೆಗೆ ಒಳ್ಳೆಯ ಅಳಿಯನು ಆಗುತ್ತಾನೆ ಜೊತೆಗೆ ಒಳ್ಳೆಯ ಅಳಿಯ ಮಗನಂತೆ ಬಲ ಬರುತ್ತದೆ ಎಂದು ಹೇಳಿ ಮೈಸೂರಿನಲ್ಲಿದ್ದ ತಮ್ಮ ದೂರದ ಸಂಬಂಧಿಗಳನ್ನು ಸಂಪರ್ಕಿಸಿ ಸರಕಾರಿ ಕೆಲಸದಲ್ಲಿದ್ದ ಹುಡುಗನನ್ನು ಹುಡುಕಿ ಇದ್ದ ಎರಡೂವರೆ ಎಕರೆ ಜಮೀನಿನಲ್ಲಿ ಒಂದುವರೆ ಎಕರೆ ಜಮೀನನ್ನು ಮಾರಿ ಮದುವೆ ಮಾಡಿ ಮುಗಿಸಿದರು. ಅಳಿಯಂದಿರು ಕೂಡ ಬಹಳ ಸೌಮ್ಯ ಸ್ವಭಾವದವರು ಅವರ ಪೋಷಕರಿಗೆ ಈತ ಏಕ ಪುತ್ರನಾಗಿದ್ದ ಕಾರಣ ಇವರಿಗೆ ಬಲಬಂದಂತಾಗಿತ್ತು.

ತನ್ನಂತೆಯೇ ಬಹಳ ತಡವಾಗಿಯೇ ಮಗಳಿಗೆ ಮಕ್ಕಳಾದರೆ ಎಂಬ ಚಿಂತೆಯಲ್ಲಿದ್ದ ರಾಜಲಕ್ಷ್ಮಮ್ಮಣ್ಣಿ ಮಗಳ ಮದುವೆಯಾದ ಒಂದೇ ವರ್ಷದಲ್ಲಿ ಸಂತಸದ ವಿಷಯ ಮುಟ್ಟಿತು ಮೊದಲ ಒಂದೆರಡು ಬಾಣಂತನ ಚೆನ್ನಾಗಿಯೇ ನಡೆದವು ಐದು ಮೊಮ್ಮಕ್ಕಳ ಬಾಣಂತನ ಮುಗಿಯುವುದರೊಳಗೆ ಸಾಕು ಸಾಕೆನಿಸಿತ್ತು, ಇದ್ದ ಆಸ್ತಿ ದಿನೇದಿನೇ ಕರಗುತ್ತಿದ್ದದ್ದನ್ನು ಗಮನಿಸುತ್ತಿದ್ದ ಗಂಡ ಎಲ್ಲರೊಟ್ಟಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ.

ಅತ್ತೆ ಮಾವನವರನ್ನು ಊರಿನಲ್ಲಿ ಉಳಿಸಿದರೆ ಸರಿ ಕಾಣುವುದಿಲ್ಲವೆಂದು ಭಾವಿಸಿದ್ದ ಅಳಿಯನವರು ಇದ್ದ ಜಮೀನು ಮನೆಯನ್ನು ಮಾರಿ ಮೈಸೂರಿನ ಹೊರವಲಯದ ಒಂದು 30-40 ರೇವಿನ್ಯೂ ಸೈಟನ್ನು ಇವರ ಹೆಸರಿನಲ್ಲಿ ತೆಗೆದು ತಾವು ಸ್ವಲ್ಪ ಹಣವನ್ನು ಸೇರಿಸಿ ಗೌರ್ಮೆಂಟ್ ಆಫೀಸ್ ಕಿಟಕಿ-ಬಾಗಿಲುಗಳನ್ನು ಒಳಗೊಂಡಂತೆ 15-10  ಮನೆಯನ್ನು ನಿರ್ಮಿಸಿಕೊಟ್ಟರು. ಸದಾ ಪ್ರೀತಿ-ವಿಶ್ವಾಸದಿಂದ ಹಳ್ಳಿಯ ಜನರೊಂದಿಗೆ ಮಾತನಾಡಿಕೊಂಡು ಜೀವನ ನಡೆಸಿದ ಇವರಿಗೆ ಜನರೇ ಕಾಣದ ನಿರ್ಜನ ಪ್ರದೇಶ ಸ್ಮಶಾನದಂತೆ ತೋರುತ್ತಿತ್ತು, ತಮ್ಮ ಸ್ವಂತಿಕೆಯನ್ನು ಕಳೆದುಕೊಂಡೆವಲ್ಲ ಎಂಬ ಭಾವದಲ್ಲಿ ಜೀವನ ಕಲಿಯಲಾರಂಭಿಸಿದರು.

ಮನೆ ಸಾಧಾರಣವಾಗಿಯೇ ಇತ್ತು, ನೀರಿನ ಸಂಪರ್ಕವಿರಲಿಲ್ಲ ದೂರದ ಬೋರ್ವೆಲ್ ನಿಂದ ನೀರನ್ನು ಹೊತ್ತು ತರಬೇಕಾಗಿತ್ತು, ವಿದ್ಯುತ್ ಶಕ್ತಿಯ ಸಂಪರ್ಕವೂ ಇರಲಿಲ್ಲ, ಗ್ಯಾಸ್ ಸಿಲಿಂಡರ್ ಅಂತೂ ಕೇಳುವಂತೆಯೇ ಇಲ್ಲ ಸುತ್ತಮುತ್ತಲ ಜಾಲಿ ಗಿಡಗಳನ್ನು ಕಡೆದು ತಂದು ಅಡಿಗೆ ಮಾಡಿಕೊಳ್ಳುತ್ತಿದ್ದರು, ಇದರೊಟ್ಟಿಗೆ ಮನೆಗೆ ಶೌಚಾಲಯದ ವ್ಯವಸ್ಥೆಯೂ ಇರಲಿಲ್ಲ, ಮಗಳು ತಿಂಗಳಿಗೊಮ್ಮೆ ಬಂದವ ದಿನಿಸಿ ಪದಾರ್ಥಗಳನ್ನು ಕೊಟ್ಟು ಹೋಗುತ್ತಿದ್ದಳು, ಕೈಯಲ್ಲಿ ಒಂದು ರೂಪಾಯಿ ಹಣವಿಲ್ಲದ ಅಮ್ಮಣ್ಣಿಯ ಗಂಡ ಎದುರಿಗೆ ಸಿಕ್ಕವರಿಗೆಲ್ಲಾ ಬಾಯಿಗೆ ಬಂದಹಾಗೆ ಬಯ್ಯುತ್ತಿದ್ದರು, ಇಷ್ಟೆಲ್ಲಾ ಸಂಕಟಗಳನ್ನು ಕಣ್ಣಾರೆ ಕಂಡ ಅತ್ತೆ ಹಾಸಿಗೆ ಹಿಡಿದು ಅಸುನೀಗಿದರು, ಒಂದು ವರ್ಷದ ತರುವಾಯ ಯಾರೋ ಹಳ್ಳಿಯವರು ಇವರನ್ನು ಹುಡುಕಿಕೊಂಡು ಬಂದು ಮಾತನಾಡುವಾಗ ವಿಷಯ ತಿಳಿಯಿತು, ಆರು ತಿಂಗಳ ಹಿಂದೆ ಈಕೆಯ ತಾಯಿಯೂ ಕೂಡ ಅಸುನೀಗಿದ್ದರು. ಕೊರಗು ಯಾರನ್ನು ತಾನೇ ಬಿಟ್ಟಿತು? ಈಕೆಯನ್ನು ಕಾಡಲಾರಂಭಿಸಿದವು.

ವಯಸ್ಸಾಗುತ್ತಿದ್ದಂತೆ ಜನರಿಗೆ ಶಕ್ತಿ ಏನಾದರೂ ಹೆಚ್ಚಾಗುತ್ತದೆ ? ಅದೇ ರೀತಿ ಇವರಿಗೂ ಕೂಡ ಶಕ್ತಿಯು ಕುಂದಲಾಆರಂಭಿಸಿತು, ನಗರ ಬೆಳೆಯುತ್ತಿತ್ತು ಇವರ ಬಡತನ ಮಾತ್ರ ದಿನೇದಿನೇ ಇನ್ನಷ್ಟು ಹದಗೆಡುತ್ತಿತ್ತು, ಇದ್ದಿದ್ದು ನಾಲ್ಕೇ ಸೀರೆ ಅದರಲ್ಲಿ 2 ಪ್ರತಿದಿನ ಉಡಲಿಕ್ಕೆ ಹಾಗೂ ಇನ್ನೆರಡು ಹಬ್ಬ-ಹರಿದಿನಗಳಲ್ಲಿ ಊಡಲಿಕ್ಕೆಂದು, ಪ್ರತಿದಿನ ಉಪಯೋಗಿಸುವ 2 ಸೀರೆಗಳು ಕೂಡ ಸೌದೆ ಒಲೆಯ ಮಸಿಯನ್ನು ತುಂಬಿಕೊಂಡಿದ್ದವು, ನೀಳವಾಗಿದ್ದ ದೇಹ ನಿಧಾನವಾಗಿ ಬಾಗಲಾರಂಭಿಸಿತ್ತು, ಎಣ್ಣೆ ಕಾಣದ ಕೂದಲು ಬಿಳಿಯಾಗತೊಡಗಿದ್ದವು, ಮೊಮ್ಮಕ್ಕಳು ಬೆಳೆಯುತ್ತಿದ್ದರು, ತನ್ನ ತವರು ಹೇಳಹೆಸರಿಲ್ಲದ ಹಾಗೆ ಅವನತಿಯನ್ನು ಹೊಂದಿತ್ತು, ಗಂಡನ ಹೊಡೆತ ಬೆನ್ನುಮೂಳೆಯನ್ನು ಭಾವಿಸಿದ್ದವು, ಅಪೌಷ್ಟಿಕ ಆಹಾರ, ಸ್ವಲ್ಪವೂ ಸುಧಾರಣೆ ಕಾಣದ ಮನೆ, ತನಗೆ ಆರೋಗ್ಯ ಸರಿ ಇಲ್ಲದೆ ಹೋದರೂ ತಾಯಿ ಎಂದು ನೋಡಿಕೊಳ್ಳದ ಮಗಳು, ಹಗಲೆಲ್ಲ ಮಲಗಿ ರಾತ್ರಿ ಎಚ್ಚರವಾಗುವ ಗಂಡನಿಗೆ ಮಧ್ಯರಾತ್ರಿಯಲ್ಲಿ ಎರಡು ಬಾರಿ ಬಿಸಿ ನೀರು ಅಡಿಗೆಯನ್ನು ಮಾಡಿ ಕೊಡದೆ ಹೋದರೆ ಏಟುಗಳು ಬೀಳುತ್ತಿದ್ದವು. ಇಷ್ಟೆಲ್ಲಾ ಕಷ್ಟಕಾರ್ಪಣ್ಯಗಳನ್ನು ಅನುಭವಿಸುತ್ತಿರುವ ಈಕೆಯನ್ನು ಕಂಡು ಸುತ್ತಮುತ್ತಲಿನ ಜನರು ಶೌಚಾಲಯ ಹಾಗೂ ನೀರಿನ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದರು.

ಎಷ್ಟೇ ಬಡತನ ಬಂದರು ಇತರರೊಂದಿಗೆ ತೋಡಿ ಕೊಳ್ಳದ ಈಕೆ ಗೌರಿ ಹಬ್ಬ ಬಂತೆಂದರೆ ಸಾಕು ಏನೋ ಸಡಗರ-ಸಂಭ್ರಮದಿಂದಿರುತ್ತಿದ್ದರು, ಹಬ್ಬಕ್ಕೆ ಹದಿನೈದು ದಿನ ಇರುವಂತೆಯೇ ಸುಣ್ಣ ಬೇಯಿಸಿ ಮನೆಗೆ ಬೆಳೆಯುತ್ತಿದ್ದರು. ಹಬ್ಬದ ಹಿಂದಿನ ದಿನ ಮನೆಗೆ ತೋರಣವನ್ನು ಕಟ್ಟಿ ಸಿಂಗರಿಸುತ್ತಿದ್ದರು. ಹಬ್ಬದ ದಿನದಂದು ಪ್ರತಿದಿನವೂ ಹೇಳುವುದಕ್ಕಿಂತ ಮುಂಚಿತವಾಗಿಯೇ ಎದ್ದು ಮನೆಯನ್ನು ಶುಚಿಗೊಳಿಸಿ ಸ್ನಾನ ಮಾಡಿ ಟ್ರಂಕಿನಲ್ಲಿ ಮಡಚಿಟ್ಟಿದ್ದ ಸೀರೆಯನ್ನು ಉಟ್ಟು, ಬಣ್ಣ ಮಾಸಿದ ಕಿವಿಯೋಲೆ, ಮೂಗುತಿ, ಕಾಲುಂಗುರ, ಹಸಿರು ಬಳೆಯನ್ನು ತೊಟ್ಟು, ತನ್ನ ಕೈತೋಟದಲ್ಲಿ ಬೆಳೆದ ಒಂದೆರಡು ಹೂ ಗಿಡಗಳಿಂದ ಹೂ ಕಿತ್ತು ಕಟ್ಟಿ, ದೇವರಿಗೂ ಮುಡಿಸಿ ತಾನು ಮುಡಿದುಕೊಂಡು, ಹಣೆಗೆ ಹಾಗೂ ಮಾಂಗಲ್ಯಕ್ಕೆ ಕುಂಕುಮವಿಟ್ಟು, ಪೂಜೆ ಮಾಡಿ, ಪಕ್ಕದ ದೇವಸ್ಥಾನಕ್ಕೆ ಹೋಗಿ ಕೈಮುಗಿದುಕೊಂಡು ಬಂದು ಮನೆಯ ಸುತ್ತುಮುತ್ತಲ ಮಕ್ಕಳಿಗೆ ಸಿಹಿಯನ್ನು ಹಂಚುತ್ತಿದ್ದರು. ತನ್ನೆಲ್ಲಾ ಕಷ್ಟಗಳನ್ನು ಮರೆತು ಹಬ್ಬದ ದಿನವನ್ನು ಆಚರಿಸುವ ಈಕೆಯನ್ನು ಅಂದು ಯಾರೇ ಕಂಡರು ಸಾಕ್ಷಾತ್ ಗೌರಿಯನ್ನು ಪ್ರತ್ಯಕ್ಷವಾಗಿ ಕಂಡಂತೆ ಭಾವಿಸುತ್ತಿದ್ದರು. ವಯಸ್ಸಾದ ಮೇಲೆ ದೇವರಲ್ಲಿ ಬೇಡುವುದಾದರೂ ಏನಿದೆ ? ಪ್ರತಿಬಾರಿಯ ದೇವರಿಗೆ ಕೈ ಮುಗಿದಾಗ ಬೇಡಿಕೊಳ್ಳುತ್ತಿದ್ದು ಒಂದು ಬಯಕೆ ಅದುವೇ ಮುತ್ತೈದೆ ಸಾವು.

ಜಯಲಕ್ಷ್ಮಮ್ಮಣ್ಣಿ ಬಾರಿಯ ಗೌರಿ ಹಬ್ಬವನ್ನು ಮುಗಿಸುವುದರೊಳಗೆ 60 ಸಂವತ್ಸರಗಳನ್ನು ದಾಟಿ ದ್ದಾಗಿದೆ, ತನ್ನ ಜೀವನದಲ್ಲಿ ಅನೇಕ ಹುಣ್ಣಿಮೆಗಳನ್ನು ಕಂಡ ಈಕೆ ಸುಖದ ದಿನಗಳಿಗಿಂತ ಕಷ್ಟದ ದಿನಗಳನ್ನು ಹೆಚ್ಚಾಗಿ ಕಳೆದಿದ್ದಾಳೆ, ತನ್ನ ಪರಿದಿಯ ಒಳಗಿನ ದೇವಾಲಯಗಳನ್ನು ನೋಡಿದ್ದು ಬಿಟ್ಟರೆ ದೂರದ ಧರ್ಮಸ್ಥಳ, ಸುಬ್ರಹ್ಮಣ್ಯ, ದೇವಾಲಯಗಳೆಲ್ಲವೂ ಬೇರೆ ದೇಶದಲ್ಲಿಯೇ ಇದೆ ಎಂದು ಭಾವಿಸಿದ್ದಾರೆ, ನಗರದ ಮನೆಯೊಳಗೆ ಜೀವಿಸಿದ್ದ ಈಕೆಗೆ ಫಿಲಂ ಥಿಯೇಟರ್ ಎಂದರೆ ಏನು ಎಂದೇ ತಿಳಿಯದು. ಮಗಳು ಮೊಮ್ಮಕ್ಕಳು ವರ್ಷಕ್ಕೊಂದೇ ಬಂದರೆ ಹೆಚ್ಚು, ಎಷ್ಟೇ ಆದರೂ ಮಗಳಿಗೆ ಆಕೆಯ ಮಕ್ಕಳ ಭವಿಷ್ಯ ಮುಖ್ಯವಲ್ಲವೇ?

ಅದೊಂದು ದಿನ ರಾತ್ರಿ ಗಂಡನ ರಂಪಾಟ ಹೆಚ್ಚಾಗಿದೆ ಮಧ್ಯರಾತ್ರಿ ಇರಬಹುದು ತಾನು ನಿಶಕ್ತನಾಗಿದ್ದೇನೆ ಎಂದು ಗಂಡನಿಗೆ ಹೇಳಿದರು ಬಿಸಿನೀರು ಹಾಗೂ ಅಡಿಗೆ ಮಾಡುವಂತೆ ಒತ್ತಾಯಿಸುತ್ತಿದ್ದಾನೆ, ಆಗುವುದಿಲ್ಲ ಎಂದು ಹೇಳಿದ ಹೆಂಡತಿಗೆ ಕಾಲಲ್ಲಿ ವದ್ದು ಮಾತಿನಚಕಮಕಿ ತಾರಕಕ್ಕೇರಿದೆ, ಸುತ್ತಮುತ್ತಲಿನ ಜನರು ಈಕೆಯ ಗಂಡನನ್ನು ಸಮಾಧಾನ ಪಡಿಸಲಿಕ್ಕೆ ಪ್ರಯತ್ನಿಸಿ ಪ್ರಯೋಜನವಿಲ್ಲದೆ ಹಿಂದಿರುಗಿದ್ದಾರೆ, ಇವರ ಮಾತಿನ ಚಕಮಕಿಯಲ್ಲಿ ಗಂಡನ ಬಾಯಿಂದ ಬಂದ ಒಂದೇ ಒಂದು ಪದ ಸಂಸಾರದ ನೋವನ್ನು ಹೊರತಂದಿದೆ, ಗಂಡನಿಂದ ಹೊರಬಂದ ಸೂಳೆಮಗ ಎಂದ ಮಾತು ಕಿವಿಗೆ ಬೀಳುತ್ತಿದುದ್ದೆತಡ ಮಕ್ಕಳನ್ನು ಮಾಡಿಕೊಳ್ಳಲಾಗದ ದೌರ್ಬಲ್ಯ ಇದ್ದಿದ್ದು ನಿನಗೆ ನನಗಲ್ಲ, ನಿಮ್ಮ ಮನೆಯವರೆಲ್ಲ ನನ್ನ ಮೇಲೆ ಗೂಬೆ ಕೂರಿಸಿದರು, ಎಲ್ಲವನ್ನು ಮೌನವಾಗಿಯೇ ನಾನು ಸ್ವೀಕರಿಸಿದ, ಹಳ್ಳಿಯಲ್ಲಿದ್ದಾಗ ಪಂಚೆ ಹರಿದುಕೊಂಡು ಬೇರೆಯವರೊಂದಿಗೆ ಮಲಗಿದ

ಸೂಳೆಮಗ ನೀನು ನಾನು ನಿಜವಾಗಿಯೂ ಪತಿವ್ರತೆ ನನ್ನನ್ನು ಹಳಿಯುವ ಯೋಗ್ಯತೆಯೂ ನಿನಗಿಲ್ಲ ಎಂಬ ಮಾತುಗಳು ಎಲ್ಲರ ಕಿವಿಯನ್ನು ಮುಟ್ಟಿದವು.

ರಾಜಲಕ್ಷ್ಮಮ್ಮಣ್ಣಿ ಸೋತು ಸುಣ್ಣವಾಗಿ ಇಂದು ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದಾಳೆ, ತಾನು ಮಲಗಿರುವ ಜಾಗದಲ್ಲಿ ಎಲ್ಲವೂ ಆಗಬೇಕು, ಕೇವಲ ಎದ್ದು ಕುಳಿತುಕೊಳ್ಳಲೂ ಚೈತನ್ಯವಿಲ್ಲ, ಆಹಾರವನ್ನು ಸೇವಿಸುವುದಿರಲಿ ನೀರನ್ನು ಗುಟುಕಿಸಿಕೊಳ್ಳಲು ಆಗುತ್ತಿಲ್ಲ, ಮಗಳು ಮೊಮ್ಮಕ್ಕಳು ಬೆಳಿಗ್ಗೆ ರಾತ್ರಿ ಊಟ ಕೊಟ್ಟು ಹೋಗುತ್ತಾರೆ ಆದರೆ ಅವರಿಗೆ ತಿನ್ನಿಸಲಿಕ್ಕೆ ಸಮಯವಿಲ್ಲ, ರಾಜಲಕ್ಷ್ಮಮ್ಮಣ್ಣಿ ಜೀವನದಲ್ಲಿ ಕಳೆದ ಕೆಲ ದಿನಗಳನ್ನು ನೆನಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಳೆ ಆದರೆ ಬರೀ ನೋವನ್ನೇ ತುಂಬಿರುವ ಜೀವನವನ್ನು ನೆನಪಿಸಿಕೊಂಡು ದುಃಖಿಸುತ್ತಾಳೆ, ಆಕ್ರಂದನವನ್ನು ಕಂಡು ದೇವರಿಗೆ ಮರುಕ ಹುಟ್ಟಿರಬಹುದು ಎಂದೆನಿಸುತ್ತದೆ ಯಾರೋ ನಾಲ್ಕನೇ ವ್ಯಕ್ತಿಯ ಮುಖಾಂತರ ಇಷ್ಟು ವರ್ಷ ನಡೆದ ಘಟನಾವಳಿಗಳೆಲ್ಲ ಮೈದುನನ ಮಕ್ಕಳಿಗೆ ತಿಳಿದಿದೆ, ತನ್ನ ಜೀವನದ ಬಹುಪಾಲು ಸಮಯವನ್ನೆಲ್ಲವನ್ನು ಬೇರೆಯವರಿಗಾಗಿ ಮುಡಿಪಾಗಿಟ್ಟ ಈಕೆಯ ಬಗ್ಗೆ ವಿಷಯ ತಿಳಿದು ಮರುಕಗೊಂಡ ತಾವು ತಮ್ಮ ಮನೆಯಲ್ಲಿ ನೋಡಿಕೊಂಡರಾಯಿತು ಎಂದು ಹೇಳಿ ಕರೆದುಕೊಂಡು ಹೋಗಲು ಬಂದಿದ್ದಾರೆ, ಈಕೆಯ ದಾರುಣ ಪರಿಸ್ಥಿತಿಯನ್ನು ಕಂಡು ಕೂಡಲೇ ಒಂದು ಬಾಡಿಗೆ ಕಾರನ್ನ ಕರೆದು ಮನೆಯ ಮುಂದೆ ನಿಲ್ಲಿಸಿದ್ದಾರೆ, ಸಂಪೂರ್ಣ ಹಣ್ಣಾಗಿರುವ ಮುದುಕಿಯನ್ನು ಒಂದು ಶುಭ್ರವಾದ ಬಟ್ಟೆಯ ಮೇಲೆ ಮಲಗಿಸಿ ಕಾರಿನ ಮಧ್ಯ ಸೀಟಿನಲ್ಲಿ ಮಲಗಿಸಿದ್ದಾರೆ, ಕತ್ತಲ ಕೋಣೆಯಲ್ಲಿಯೇ ಬಹಳಷ್ಟು ದಿನಗಳನ್ನು ಕಳೆದ ಈಕೆ ಹೊರಗಿನ ಬೆಳಕಿಗೆ ಕಣ್ಣು ಬಿಡುವುದು ಕಷ್ಟಕರವಾಗಿದೆ, ಮತ್ತೊಮ್ಮೆ ನಾನು ಮನೆಗೆ ಹಿಂತಿರುಗಲಾರೆ ಎಂಬ ನಂಬಿಕೆಯಲ್ಲಿ ಕೊನೆಯಬಾರಿಗೆ ತನ್ನ ಮನೆಯನ್ನು ನೋಡೋಣವೆಂದು ಕಣ್ಣು ಹೊರಳಿಸುತ್ತಿದ್ದಾಳೆ, ಮನೆಯು ಸಂಪೂರ್ಣವಾಗಿ ಧೂಳಿನಿಂದ ಅವೃತವಾಗಿದೆ, ತಾನೆ ನೀರುಉಳಿಸಿ ಬೆಳೆಸಿದ ಹೂವಿನಗಿಡಗಳು ಒಣಗಿಹೋಗಿದೆ, ಹಣ್ಣಿನ ಗಿಡಗಳು ನೀರು ಕಾಣದೆ ಜೋತುಬಿದ್ದಿದೆ, ಮನೆಯು ಜನರು ವಾಸಿಸುವ ಮನೆಯಂತೆ ಕಾಣದೆ ಭೂತಬಂಗಲೆಯಂತೆ ಕಾಣಿಸುತ್ತಿದೆ, ಭಾವೋದ್ರೇಕ ಹೆಚ್ಚಾಗಿ ಕಣ್ಣೀರಧಾರೆ ಮೌನವಾಗಿ ಹರಿಯುತ್ತಲಿದೆ.

ಕಾರಿನಲ್ಲಿ ಬೆಂಗಳೂರಿಗೆ ಪಯಣ ಆರಂಭವಾಗಿದೆ, ಹಳೆಯ ಡಾಕ್ಟರ್ಸ ರಿಪೋರ್ಟ್ ಗಳನ್ನು ಮೈದುನನ ಮಗಳು ನೋಡಿಕೊಂಡು ತನ್ನ ಚಿಕ್ಕಮ್ಮನ ಬಳಿ ನಿಧಾನವಾಗಿ ಮಾತನಾಡಿಸುತ್ತಿದ್ದಾಳೆ, ಬಹಳ ವರ್ಷಗಳ ಹಿಂದೆ ಒಂದು ಗುಪ್ತ ಕಾಯಿಲೆಯ ಬಂದಿತ್ತಂತೆ ಅದನ್ನು ಬೇರೆಯವರಿಗೆ ಹೇಳಿಬಿಟ್ಟರೆ ಬೇರೆಯವರು ನಿನ್ನನ್ನು ಮಾತನಾಡಿಸುವುದಿಲ್ಲವೆಂದು ಮಗಳು ಹೇಳಿದ್ದರಿಂದ ಯಾರಿಗೂ ಹೇಳಿಕೊಳ್ಳದೆ ನರಳುತ್ತಿದ್ದರಂತೆ, ನಾಲ್ಕು ವರ್ಷಗಳ ಹಿಂದೆಯೇ ಡಾಕ್ಟರ್ಸ್ ರಿಪೋರ್ಟ್ ನಲ್ಲಿ ಕಾಯಿಲೆಯನ್ನು ಖಚಿತವಾಗಿ ನಮೂದಿಸಲಾಗಿತಂತೆ, ಅದು ಇಂದು 4ನೇ ಹಂತ ತಲುಪಿದೆ, ರಿಪೋರ್ಟ್ ನಲ್ಲಿ ಗರ್ಭಕೋಶದ ಕ್ಯಾನ್ಸರ್ ಎಂದು ನಮೂದಿಸಿರುವುದನ್ನು ಕಂಡ ಮೈದುನ ಮಗಳು ಕಣ್ಣೀರಿನ ಮಡುವಿನಲ್ಲಿ ಮೌನವಾಗಿದ್ದಾಳೆ, ಕಾರ್ ಇನ್ನಷ್ಟು ವೇಗವಾಗಿ ಚಲಿಸುತ್ತಲಿದೆ, ಜಯಲಕ್ಷ್ಮಮ್ಮಣ್ಣಿ ಕೊನೆಯ ಆಸೆಯಾದ ಮುತ್ತೈದೆ ಸಾವಿಗಾಗಿ ದಿನಗಣನೆ ಆರಂಭವಾಗಿದೆ.


         ಧನ್ಯವಾದಗಳು.


( ಕಥೆ ಎಂದಾದರೂ ಸ್ವೀಕರಿಸಿ ಅಥವಾ ಕಾದಂಬರಿ ಎಂದಾದರೂ ಸ್ವೀಕರಿಸಿ, ಶೀರ್ಷಿಕೆಯೊಂದನ್ನು ಕೊಟ್ಟು ಬರೆಯಲಿಕ್ಕೆ ಕುಳಿತೆ ಕಥೆ ಸುತ್ತಮುತ್ತಲ ನಾಲ್ಕಾರು ಘಟನಾವಳಿಗಳನ್ನು ಆಧರಿಸಿ ಹೆಣೆದುಕೊಂಡು ಹೋಯಿತು)

1 comment:

  1. ಕಥೆ ಮುಗಿದಿದೆ ಹೊಸದೊಂದು ದಿಕ್ಕಿನೆಡೆಗೆ ನನಗೆ ತಿಳಿಯುತ್ತಿಲ್ಲ ಯಾವ ಆಕರವನ್ನು ಆದರಿಸಿ ಸಾಗುತ್ತಿದೆ ಈ ನಮ್ಮ ಬದುಕು ಮೊದಲೆಲ್ಲಿ ಕೊನೆಯಲ್ಲಿ ಸಾರ್ಥಕತೆಯ ಸೊಗಡು ರಾಜ ಲಕ್ಕಮ್ಮಣ್ಣಿಯ ಮಡಿಲಲ್ಲಿ.....


    ನಿಮ್ಮ ಬರವಣಿಗೆ ಮುಂದುವರೆಯಲಿ ನನಗೆ ಬಿಡುವಾದಾಗ ನಾ ಬರೆಯುವೆ ನಿಮಗೆ ಬಿಡುಗಡೆಯ ಸಂದೇಶ

    ReplyDelete