Saturday, January 9, 2021

ಯುವ ಚೇತನ 2



                        ಎಸ್ ಪಿ ತೇಜರಾಜು.

 ಹರಿಯಾಣ ತಲುಪಿ ಅಲ್ಲಿಂದ ರೋತಕ್ ಗೆ ಹೊರಡುವ ಬಸ್ ಹಿಡಿದು ಮಹರ್ಷಿ ದಯಾನಂದ ವಿಶ್ವವಿದ್ಯಾನಿಲಯವನ್ನು ತಲುಪುವಷ್ಟರಲ್ಲಿ ಸಂಜೆ 5 ಗಂಟೆ ಆಗಿತ್ತು, ರಿಜಿಸ್ಟ್ರೇಷನ್ ಗಾಗಿ ನಮ್ಮನ್ನು ಕರೆದೊಯ್ಯಲು ಬಂದಂತಹ NSS ಅಧಿಕಾರಿಯೊಬ್ಬರು  ನಾವು ಮಧ್ಯಾಹ್ನ ಊಟ ಮಾಡಿಲ್ಲವೆಂದು ತಿಳಿದು ಬಿಸಿಬಿಸಿ ಸಮೋಸ ಚಹಾ ವನ್ನು ತರಿಸಿಕೊಟ್ಟರು, ಮೊದಲೇ ಚಳಿಯಿಂದ ನಡುಗಿದ್ದ ನಮಗೆ ಬಿಸಿ ಚಹಾ ಆಹ್ಲಾದಕರ ಎನಿಸಿತು. ಇದಾದ ಬಳಿಕ ರಿಜಿಸ್ಟ್ರೇಷನ್ ಪ್ರೋಸೆಸ್ ಗಳನ್ನು ಮುಗಿಸುತ್ತಿದ್ದಂತೆ ಎಲ್ಲರಿಗೂ ID ಕಾರ್ಡ್, ಎರಡು ಜೊತೆ ಬಟ್ಟೆಯನ್ನುಳಗೊಂಡ ಕಿಟ್ ಬ್ಯಾಗನ್ನು ವಿತರಿಸಿದರು. ನಂತರ ಎಲ್ಲರನ್ನೂ ಬಸ್ನಲ್ಲಿ  ಕರೆದುಕೊಂಡು ನಾವು ತಂಗಬೇಕಾದಂತಹ ಹಾಸ್ಟೆಲ್ ನ ಬಳಿ ಬಿಟ್ಟು ರಾತ್ರಿ ಭೋಜನಕ್ಕೆ ಕರೆದುಕೊಂಡು ಹೋಗಲು ಮತ್ತದೇ ಬಸ್ ಬರುತ್ತದೆ, ಹಾಗೂ ತಪ್ಪದೇ ಎಲ್ಲರೂ ಭೋಜನದ ಟೋಕನ್ ಗಳನ್ನು ತರುವಂತೆ ಹೇಳಿದರು. ಇಲ್ಲಿ ಹುಡುಗರಿಗೆ ಹಾಗೂ ಹುಡುಗಿಯರಿಗೆ ಪ್ರತ್ಯೇಕವಾದ ಹಾಸ್ಟೆಲ್ ನಲ್ಲಿ ದಾಖಲಾತಿಗಳನ್ನು ಪರಿಶೀಲಿಸಿದ ನಂತರ ರೂಮ್ ಕೀ ಯನ್ನು ನೀಡಿದರು. ಮೂರು ದಿನ ಒಂದೇ ಸಮನೆ ಪ್ರಯಾಣ ಮಾಡಿದ್ದ ನಮಗೆ ಐದು ನಿಮಿಷ ಬೇರೆಡೆ ಕುಳಿತುಕೊಂಡರೂ ಸಹ ಟ್ರೈನ್ನಲ್ಲೆ ಕುಳಿತಂತೆ ಭಾಸವಾಗುತ್ತಿತ್ತು. ಎಲ್ಲರೂ ಒಂದರ್ಧಗಳಿಗೆ ರೆಸ್ಟ್ ತೆಗೆದುಕೊಂಡು ಕಿಟ್ ನಲ್ಲಿ ನೀಡಿದಂತಹ ದಪ್ಪ ಬಟ್ಟೆಯ ಉಡುಪುಗಳನ್ನು ಧರಿಸಿಕೊಂಡು ಚಳಿಯ ಸೆಳೆತದಿಂದ ಸ್ವಲ್ಪಮಟ್ಟಿಗೆ ಹೊರಬಂದೆವು.

ಎಂಟು ಗಂಟೆಗೆ ಸರಿಯಾಗಿ ಬಸ್ ಬಂದು ಹಾಸ್ಟೆಲ್ ಬಳಿ ನಿಂತಿತು ಎಲ್ಲರೂ ಊಟದ ಟೋಕನ್ ಗಳನ್ನು ತೆಗೆದುಕೊಂಡಿರುವುದಾಗಿ ಖಾತ್ರಿಪಡಿಸಿಕೊಂಡು ಊಟಕ್ಕೆ ಹೊರಟೆವು, ಸುತ್ತಲೂ ಕತ್ತಲು ಆವರಿಸಿದ್ದ ಕಾರಣ ನಾವು ಯಾವ ರಸ್ತೆಯಲ್ಲಿ ಚಲಿಸುತ್ತಿದ್ದೇವೆಂದು ತೋಚದೆ ಹೋಯಿತು, ಆದರೂ ಯಾವುದೋ ಭವ್ಯ ವೇದಿಕೆಯಂತಿದ್ದಂತಹ ಜಾಗದಲ್ಲಿ, ಬಿಸಿ ಬಿಸಿ ಊಟ ಮುಗಿಸಿಕೊಂಡು ಮರಳಿ ಹಾಸ್ಟೆಲ್ ಸೇರಿ ಸ್ನೇಹಿತರೊಂದಿಗೆ ಒಂದಷ್ಟುಗಳಿಗೆ ಹರಟುತ್ತಾ, ದಪ್ಪಗಿದ್ದ ಬೆಡ್ ಶೀಟ್ ಗಳನ್ನು ಹೊದ್ದುಕೊಂಡು ಮಲಗಿದೆವು.

ಬೆಳಗಿನ ಜಾವ 5:30 ಎಚ್ಚರವಾಯಿತು, ಚಳಿಗೆ ಇಷ್ಟು ಬೇಗ ಯಾರು ಏಳುವ ಕುರುಹು ಕಾಣಲಿಲ್ಲ, ಹಾಸ್ಟೆಲ್ ಸಂಪೂರ್ಣವಾಗಿ ನಿಶಬ್ದದಲ್ಲಿ ಮುಳುಗಿತ್ತು, ಕಿಟಕಿಯ ಗಾಜು ಮಂಜಿನ ಹನಿಗಳಿಂದ ಆವೃತವಾಗಿದ್ದು ಹೊರಗೆ ಏನಿದೆ ಎಂಬ ಕುರುಹು ಸಿಗದಂತಾಯಿತು, ಇದರ ನಡುವೆಯೂ ಒಂದಷ್ಟು ಹಕ್ಕಿಗಳು ಚಿಲಿಪಿಲಿ ಗುಡುತ್ತಿದ್ದವು, ಪೇಸ್ಟು ಬ್ರಷ್ ನ್ನು ಎತ್ತಿಕೊಂಡು ರೂಮಿನಿಂದ ಹೊರ ನಡೆದು ಬಚ್ಚಲಿಗೆ ಹತ್ತಿರವಾಗುತ್ತಿದ್ದಂತೆಯೇ ಶೀತಗಾಳಿ ಮೈಯನ್ನುಕ್ಕಿ ನಡುಗಲಾರಂಭಿಸಿತು, ಬ್ರಷ್ ನ್ನು ತೊಳೆಯೋಣವೆಂದು ನಲ್ಲಿಯಿಂದ ನೀರು ತಿರುಗಿಸಿದ್ದೇತಡ ರೆಫ್ರಿಜರೇಟರ್ ನಲ್ಲಿ ಇಟ್ಟಿರುವ ನೀರಿನಂತೆ ತಣ್ಣಗೆ ಬರಲಾರಂಭಿಸಿತು, ಸ್ನಾನ ಮಾಡಲೆಂದು ಹೋದ ನನಗೆ ಚಳಿ ತಾಳಲಾರದೇ ಎರಡು ನಿಮಿಷದಲ್ಲಿ ಕೈಕಾಲು ಮುಖ ತೊಳೆದು ರೂಮಿಗೆ ಹಿಂತಿರುಗಿ ಬೆಚ್ಚಗೆ ಹೊದ್ದು ಕುಳಿತಿದ್ದೆ, ಏಳು ಗಂಟೆಗೆ ಒಬ್ಬೊಬ್ಬರಾಗಿ ಎಲ್ಲರೂ ಎದ್ದು ಬಚ್ಚಲಿಗೆ ಹೋಗಿ ಎರಡು ನಿಮಿಷದಲ್ಲಿ ಹಿಂತಿರುಗುತ್ತಿದ್ದರು. 8:30 ಎಲ್ಲರೂ ರೆಡಿಯಾಗಿ ಉಪಹಾರದ ಟೋಕನ್ ಗಳನ್ನು ಹಿಡಿದು ಬಸ್ ಹತ್ತಿದೆವು, ತೆರಳುವ ಹಾದಿಯ ಸುತ್ತಲೂ ಮಂಜುಮುಸುಕಿದ್ದ ಕಾರಣ ನಾವು ಯಾವ ರಸ್ತೆಯಲ್ಲಿ ಚಲಿಸುತ್ತಿದ್ದೆವೆಂದು ತಿಳಿಯದಾಯಿತು.

  ಹೊರಗೆ ಕೌಂಟರ್ನಲ್ಲಿ ನಮ್ಮ ಟೋಕನ್ ಗಳನ್ನು ನೀಡಿದ ಬಳಿಕ ಊಟದ ಹಾಲಿಗೆ ಎಂಟ್ರಿ ಸಿಕ್ಕಂತಾಯಿತು, ರಾತ್ರಿ ಅಸ್ಪಷ್ಟವಾಗಿ ಕಾಣಿಸಿದ್ದಂತಹ ಈ ವೇದಿಕೆ ಈಗ ಸ್ಪಷ್ಟವಾಗಿ ಕಾಣಲಾರಂಭಿಸಿತು, ಸುಮಾರು ಮೂರು ಎಕರೆ ಜಾಗದಲ್ಲಿ ಭವ್ಯವಾದ ಪೆಂಡಾಲ್ನೊಳಗೆ, ದೇಶದ ನಾನಾ ಮೂಲೆಗಳಿಂದ ಬಂದಿದಂತಹ ವಿದ್ಯಾರ್ಥಿಗಳಿಗೆ ವಿಧವಿಧವಾದ ಉಪಹಾರವನ್ನು ಮಾಡಲಾಗಿತ್ತು, ಯಾರಿಗೆ ಎಷ್ಟು ಬೇಕೋ ಅಷ್ಟನ್ನು ಯಾವುದೇ ಸಂಕೋಚವಿಲ್ಲದೆ ತಿನ್ನಬಹುದಿತ್ತು, ಎಲ್ಲವೂ ಸಂಪೂರ್ಣವಾಗಿ ಬಫೆ ಸಿಸ್ಟಮ್ ಆಗಿತ್ತು, ಇಲ್ಲಿ ಉಪಹಾರಕ್ಕೆಂದು ತರಹೇವರಿ ಹಣ್ಣುಗಳು( ಸೇಬು, ಕಿತ್ತಳೆ,,), ಫ್ರೂಟ್ ಜಾಮ್, ಬ್ರೆಡ್, ಹಾಲು, ಶಾವಿಗೆ, ಇಡ್ಲಿ, ಉಪ್ಪಿಟ್ಟು, ಜಾಮೂನು, ಜಿಲೇಬಿ, ರಸಗುಲ್ಲ ಹೀಗೆ 20ಕ್ಕಿಂತಲೂ  ಹೆಚ್ಚು ತೆರವಾದ ಉಪಹಾರ ಮಾಡಲಾಗಿತ್ತು, ಜೀವನದಲ್ಲಿ ಮೊದಲ ಬಾರಿಗೆ ಇಷ್ಟು ದೊಡ್ಡ ಊಟದ ಕೌಂಟರ್ ಅನ್ನು ನೋಡಿದ್ದು ನಿಜಕ್ಕೂ ಆಶ್ಚರ್ಯವೆನಿಸಿತು, ಎಲ್ಲರೂ ತಿಂಡಿ ಮುಗಿಸಿ ಕಾರ್ಯಕ್ರಮಕ್ಕೆ ಹೊರಡಲು ಸಿದ್ದರಾದೆವು, ನಾವು ನಿಂತಿದ್ದ ಸ್ವಲ್ಪ ದೂರದಲ್ಲಿಯೇ ನಮ್ಮನ್ನು ಹೊರತುಪಡಿಸಿ ಯಾರೋ ಕನ್ನಡದಲ್ಲಿ ಮಾತನಾಡುತ್ತಿರುವುದು ಆಸ್ಪಷ್ಟವಾಗಿ ಕೇಳಿಸುತ್ತಿತ್ತು, ಹತ್ತಿರಕ್ಕೆ ಹೋಗಿ ನೋಡುತ್ತಿದ್ದಂತೆ ಅವರೆಲ್ಲರೂ ನಾವು ಬಾರಿಸಿದಂತೆ ಕನ್ನಡಿಗರೇ ಆಗಿದ್ದರು, ನಾಲ್ಕು ದಿನಗಳಿಂದ ಸುತ್ತಲೂ ಅನ್ಯ ಭಾಷಿಕರನ್ನು ಕಂಡ ನಮಗೆ ಕನ್ನಡ ಮಾತನಾಡುವವರು ಸಿಕ್ಕಕೂಡಲೇ ನಿಜಕ್ಕೂ ಪರಮಾನಂದವಾಯಿತು, ಇವರೆಲ್ಲರೂ ನಮ್ಮಂತೆಯೇ ಉತ್ತರ ಕರ್ನಾಟಕದ ವಿವಿಧ ಕಾಲೇಜುಗಳಿಂದ ಬಂದಂತಹ NSS ವಿದ್ಯಾರ್ಥಿಗಳಾಗಿದ್ದರು.

ಮೊದಲ ದಿನದ ಕಾರ್ಯಕ್ರಮ ಮುಖ್ಯ ವೇದಿಕೆಯನ್ನು ಹೊರತುಪಡಿಸಿ ನಾಲ್ಕೈದು ಕಡೆಗಳಲ್ಲಿ ಆಯೋಜಿಸಲಾಗಿತ್ತು, ಅಂದಿನ ಕಾರ್ಯಕ್ರಮ ನಾವು ಉಳಿದಿದ್ದ ಹಾಸ್ಟೆಲ್ನ ಪಕ್ಕದಲ್ಲೇ ಇದ್ದಂತಹ ಆಡಿಟೋರಿಯಂನಲ್ಲಿ ನಡೆಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ನಮ್ಮೊಟ್ಟಿಗೆ ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಸೇರಿ 40 ಜನರ ಗುಂಪಾಗಿ ಒಟ್ಟಿಗೆ ಕುಳಿತಿದ್ದೆವು. ಕಾರ್ಯಕ್ರಮ ಪ್ರಾರಂಭಗೊಂಡು ರಾಷ್ಟ್ರಮಟ್ಟದ NSS ಅಧಿಕಾರಿಗಳು ರಾಷ್ಟ್ರೀಯ ಸೇವಾ ಯೋಜನೆ ನಡೆದು ಬಂದ ಹಾದಿ, ರಾಷ್ಟ್ರಮಟ್ಟದ ಯುವಜನತೆಯನ್ನುಳಗೊಂಡ ಕಾರ್ಯಕ್ರಮ ನಡೆಸುವ ಉದ್ದೇಶ ಹಾಗೂ ಇಂದಿನ ಯುವಜನತೆಗೆ ಇರುವ ಜವಾಬ್ದಾರಿಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿಯನ್ನು ನೀಡಲಾಯಿತು, ಇದಾದ ಬಳಿಕ ಎಲ್ಲರೂ ಊಟಕ್ಕೆ ತೆರಳಿದೆವು. 

 ಊಟಕ್ಕೆ ತೆರಳುವ ಸಂದರ್ಭದಲ್ಲಿ ನಮ್ಮೊಟ್ಟಿಗೆ ಬೇರೆ ರಾಜ್ಯದ ಸ್ನೇಹಿತರೆಲ್ಲರೂ ನಿಧಾನವಾಗಿ ಪರಿಚಯವಾಗಲಾರಂಭಿಸಿದರು, ಮಧ್ಯಾಹ್ನ ಊಟದ ಕೌಂಟರ್ ಅನ್ನು ಎರಡು ಭಾಗಗಳಾಗಿ ವಿಭಾಗಿಸಲಾಗಿತ್ತು, ಎಡಬಾಗದಲ್ಲಿ ಮಾಂಸಹಾರ ಊಟವನ್ನು, ಬಲಭಾಗದಲ್ಲಿ ಸಸ್ಯಾಹಾರ ಊಟವನ್ನು ಆಯೋಜಿಸಲಾಗಿತ್ತು, ನಮ್ಮ ಜೊತೆ ಬಂದವರಲ್ಲಿ ಪ್ರತಿಶತ 90 ಭಾಗ ಸ್ನೇಹಿತರು ಎಡಬದಿಗೆ ತಿರುಗಿದರೆ, ಮೇಡಮ್ ನೊಂದಿಗೆ ನಾನು ಹಾಗೂ ಇತರ ಸ್ನೇಹಿತರು ಬಲಬದಿಗೆ ನಡೆದವು, ಎಡಬಾಗದ ಕೌಂಟರ್ ನಲ್ಲಿ ವಿದ್ಯಾರ್ಥಿಗಳಿಗೆ ಜಾಗ ಸಾಕಾಗದೆ ತುಂಬಿ ತುಳುಕುತ್ತಿದ್ದಾರೆ, ಬಲಭಾಗದಲ್ಲಿ ಎಲ್ಲರೂ ಕುಳಿತು ಊಟ ಮಾಡುವಷ್ಟು ಜಾಗವಿತ್ತು, ಸಸ್ಯಹಾರಿಗಳಿಗೆ ಮೂರ್ನಾಲ್ಕು ತರಹದ ಪಾಯಸಗಳು, ಐದಾರು ಬಗೆಯ ಸ್ವೀಟ್ ಗಳು,ತರಹೇವಾರಿ ಹಣ್ಣು-ತರಕಾರಿಗಳು, ಮೂರ್ನಾಕು ಬಗೆಯ ರೋಟಿ, ಪೂರಿ, ರುಮಾಲ್ ರೊಟ್ಟಿಗಳು, ಅದಕ್ಕೆ ಐದಾರು ತರಹದ ಗೊಜ್ಜುಗಳು, ನಾಲ್ಕೈದು ಬಗೆಯ ಕಾಳು ಪಲ್ಯ, ಸಾಂಬಾರುಗಳು, ಗಟ್ಟಿಮೊಸರು ಇದರ ಪಟ್ಟಿ ಹೀಗೆ ಬೆಳೆಯುತ್ತಾ ಹೋಗಿತ್ತು,ಕೊನೆಗೆ ಎಲ್ಲರೂ ಊಟ ಮುಗಿಸಿ ಕಾರ್ಯಕ್ರಮದಲ್ಲಿ ಬಂದು ಕುಳಿತುಕೊಂಡಿದ್ದರು ಮಾಂಸಾಹಾರ ಊಟ ಮಾಡಿದಂತಹ ವಿದ್ಯಾರ್ಥಿಗಳು ಅವನು ಅಷ್ಟು ತಿಂದರು ಇವರು ಇಷ್ಟು ತಿಂದರೂ ಎಂದು ಗೇಲಿ ಮಾಡಿಕೊಂಡು ಊಟದ ಘನತೆಯ ಬಗ್ಗೆ ಗುಣಗಾನ ಮಾಡುತ್ತಲೇ ಇದ್ದರು. ಕಾರ್ಯಕ್ರಮ ವಿವಿಧ ಮಜಲುಗಳನ್ನು ದಾಟಿ 6:00 ಗಂಟೆಗೆ ಮುಕ್ತಾಯಗೊಂಡಿತು. ಅಂದು ನಮ್ಮೊಟ್ಟಿಗೆ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಸ್ನೇಹಿತರಾದ ಕಾರಣ ಕಾಂಪಿಟೇಷನ್ನಲ್ಲಿ ವಿವಿಧ ಭಾಷೆಯ ಹಾಡುಗಳನ್ನು ಹಾಡುವ ಮೂಲಕ ದಿನ ಕಳೆದಿದ್ದೆ ತಿಳಿಯದಂತಾಯಿತು.

ಮರುದಿನ ಸಂಕ್ರಾಂತಿ ಹಬ್ಬವಿದ್ದಕಾರಣ ಎಲ್ಲರೂ ತಮ್ಮ ತಮ್ಮ ಪ್ರಾದೇಶಿಕ ಹುಡುಗೆ ತೊಡುಗೆಗಳನ್ನು ತೊಡುವಂತೆ ಸೂಚಿಸಲಾಗಿದ್ದರಿಂದ ಎಲ್ಲ ವಿದ್ಯಾರ್ಥಿಗಳು ಬೆಳಿಗ್ಗೆ ಬೇಗ ಎದ್ದು ಸ್ನಾನ ಮುಗಿಸಿ ತಮ್ಮೂರಿನ ಉಡುಪುಗಳನ್ನು ತೊಟ್ಟು ಉಪಹಾರದ ಕೌಂಟರ್ ಬಳಿ ತೆರಳಲಾರಂಭಿಸಿದರು, ಮೈಸೂರನ್ನು ಪ್ರತಿನಿಧಿಸಿದ್ದ ನಮ್ಮ ಗುಂಪಿನ ಹುಡುಗರು ಮೈಸೂರು ಪೇಟ, ಬಿಳಿ ಅಂಗಿ, ಪಂಚೆ, ಧೋತಿಯನ್ನುಟ್ಟಿದ್ದರೆ, ಹುಡುಗಿಯರು ಮೈಸೂರು ರೇಷ್ಮೆ ಸೀರೆಯನ್ನು ಉಟ್ಟು ಸಿಂಗರಿಸಿಕೊಂಡಿದ್ದರು, ದೇಶದ ನಾನಾ ಮೂಲೆಯ ವಿವಿಧ ಪ್ರಕಾರಗಳ ವಸ್ತ್ರವನ್ನು ತೊಟ್ಟು ಉಪಹಾರದ ಕೌಂಟರ್ ಬಳಿ ಬಂದಂತಹ ವಿದ್ಯಾರ್ಥಿಗಳು ಉಪಹಾರವನ್ನು ಮರೆತು ಫೋಟೋಶೂಟ್ ನಲ್ಲಿ ಮುಳುಗಿಹೋಗಿದ್ದರು. ಅಂದು ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಗೆ ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದಂತಹ ಸೋನಲ್ ಮನ್ ಸಿಂಗ್ ಅವರನ್ನು ಆಮಂತ್ರಿಸಲಾಗಿತ್ತು, ಅವರು ಭಾರತದ ವಿವಿಧ ಪ್ರಾಕಾರದ ನೃತ್ಯಶೈಲಿಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ನೀಡಿದರು, ಕಾರ್ಯಕ್ರಮ ಮುಗಿದು ಅವರನ್ನು ಮಾತನಾಡಿಸಲು ಹೋದ ನನ್ನನ್ನು ಕಂಡು ನೀನು ಮೈಸೂರಿನವರೇ ಎಂದು ಪ್ರಶ್ನಿಸಿದರು? ಇವರಿಗೆ ಹೇಗೆ ತಿಳಿಯಿತು ಎಂದುಕೊಳ್ಳುತ್ತಿದ್ದ ನನಗೆ ತಲೆಯ ಮೇಲಿದ್ದ ಪೇಟ ನೆನಪಾಯಿತು, ನಮ್ಮ ಸಂಸ್ಕೃತಿಯನ್ನು ದೂರದವರು ಗುರುತಿಸುತ್ತಾರಲ್ಲ? ಇದರ ಮಹಿಮೆ ಎಷ್ಟಿರಬಹುದು ಎಂದು ತಿಳಿದು ನಮ್ಮ ಸಂಸ್ಕೃತಿಯ ಮೇಲೆ ಮತ್ತಷ್ಟು ಗೌರವ ಹೆಚ್ಚಾಯಿತು.

ಸಂಕ್ರಾಂತಿ ಹಬ್ಬವನ್ನು ದೇಶದ ಉದ್ದಗಲಕ್ಕೂ ನಾನಾ ಹೆಸರುಗಳ ಮೂಲಕ  ಆಚರಿಸುವುದರಿಂದ ಎಲ್ಲರೂ ಮುಖದಲ್ಲಿ ಸಡಗರ- ಸಂಭ್ರಮ ಎದ್ದುಕಾಣುತ್ತಿತ್ತು, ತಮಿಳುನಾಡಿನಿಂದ ಬಂದಂತಹ ವಿದ್ಯಾರ್ಥಿಗಳು ಪಕ್ಕದ ಮಾರ್ಕೆಟ್ ನಿಂದ ಒಂದು ಮಡಿಕೆಯನ್ನು ತಂದು ಅದರಲ್ಲಿ ಸಿಹಿ ಪೊಂಗಲ್ ಅನ್ನು ಮಾಡಿ ಎಲ್ಲರಿಗೂ ಹಂಚಿ ಪೊಂಗಲೋ ಪೊಂಗಲ್ ಎಂಬ ಉದ್ಘಾರ ಮೊಳಗಿಸುತ್ತಿದ್ದರೆ, ನಮ್ಮ ಕರ್ನಾಟಕದ ಸ್ನೇಹಿತರು ಎಲ್ಲರಿಗೂ ಎಳ್ಳು-ಬೆಲ್ಲವನ್ನು ಹಂಚುತ್ತಿದ್ದರು, ಅಂದು ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಹರಿಯಾಣ ಸರ್ಕಾರ ಎಳ್ಳುನ್ನೊಳಗೊಂಡ ಸಿಹಿ ತಿನಿಸನ್ನು ಕೊಡುವುದರ ಮೂಲಕ ಹಬ್ಬವನ್ನು ಆಚರಿಸಲಾಯಿತು. ಹಬ್ಬದ ವಿಶೇಷವಾಗಿ ಅಂದು ಬೆಳಿಗ್ಗೆಯಿಂದ ರಾತ್ರಿಯವರೆಗೆ ತರಹೇವಾರಿ ಭೋಜನವನ್ನು ಮಾಡಿಸಲಾಗಿತ್ತು.

ಪ್ರತಿವರ್ಷ 12ನೇ ಜನವರಿಯಂದು ದೇಶ ಕಂಡ ಅಪ್ರತಿಮ ಸಂತ ಸ್ವಾಮಿ ವಿವೇಕಾನಂದರ ಜನ್ಮದಿನದ ಸ್ಮರಣಾರ್ಥ ರಾಷ್ಟ್ರೀಯ ಯುವಜನ ಕಾರ್ಯಕ್ರಮವನ್ನು ಆಯೋಜಿಸುವಂತೆ, ಈ ಬಾರಿಯೂ ಕ್ರೀಡಾ ಹಾಗೂ ಯುವಜನ ಸಬಲೀಕರಣ ಮಂತ್ರಾಲಯ ಭಾರತ ಸರ್ಕಾರ ಹಾಗೂ ಮಹರ್ಷಿ ದಯಾನಂದ ವಿಶ್ವವಿದ್ಯಾನಿಲಯ, ಹರಿಯಾಣ ಸರ್ಕಾರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ,ನೆಹರು ಯುವ ಕೇಂದ್ರ ಹಾಗೂ ಇತರ ವಿದ್ಯಾರ್ಥಿಗಳನ್ನುಳಗೊಂಡಂತೆ ಕಾರ್ಯಕ್ರಮವನ್ನು ವಿಶಾಲ ಆವರಣದ ಭವ್ಯ ವೇದಿಕೆಯಮೇಲೆ ಆಯೋಜಿಸಲಾಗಿತ್ತು, ಅಂದಿನ ಹರಿಯಾಣದ ಮುಖ್ಯಮಂತ್ರಿಗಳಾಗಿದಂತಹ ಮನೋಹರ್ ಲಾಲ್ ಅವರು 21ನೇ ಯುವಜನೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಡಿಯೋಕಾನ್ಫರೆನ್ಸ್ ನ ಮೂಲಕ ಯುವ ಜನತೆಯನ್ನುದ್ದೇಶಿಸಿ ಡಿಜಿಟಲ್ ಇಂಡಿಯಾದ ಮೂಲಕ ಕ್ಯಾಶ್ ಲೆಸ್ ಎಕಾನಮಿ ಗೆ ಕರೆ ನೀಡಿದರು, ಇದರೊಂದಿಗೆ ಸ್ವಾಮಿವಿವೇಕಾನಂದರು ಯುವಕರಿಗೆ ನೀಡಿದ ಕರೆಯನ್ನು ಹಾಗೂ ಭವ್ಯ ಭಾರತಕ್ಕೆ ಇವರು ನೋಡಿದ ಕೊಡುಗೆಯನ್ನು ಸ್ಮರಿಸಲಾಯಿತು. ಈ ಉದ್ಘಾಟನಾ ಕಾರ್ಯಕ್ರಮದ ಬಳಿಕ ದಿನವಿಡಿ ವಿವಿಧ ಕಲಾ ಪ್ರಕಾರಗಳ ಕಾರ್ಯಕ್ರಮಗಳು ನಡೆದವು.

ದಿನಾಂಕ 13 ನೇ ತಾರೀಖಿನಂದು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದಂತಹ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮದ ಜೊತೆಗೆ, ಮುನಾಲ್ಕು ಕಡೆಗಳಲ್ಲಿ ಡಿಜಿಟಲ್ ಇಂಡಿಯಾ, ರಕ್ಷಣಾ ಇಲಾಖೆ, ಡಿಜಿಟಲ್ ಹರಿಯಾಣ, ಮೇಕ್ ಇನ್ ಇಂಡಿಯಾ, ಬಿಸಿಗಾಳಿಯ ಆಕಾಶ ಪುಟ್ಟಿ [Hot ait balloon] ,ಸ್ವಾಮಿ ವಿವೇಕಾನಂದರಿಗೆ ಸಂಬಂಧಪಟ್ಟ ಹಾಗೆ ಪ್ರದರ್ಶನವನ್ನು [Exhibition] ಆಯೋಜಿಸಲಾಗಿತ್ತು, ಇವುಗಳಿಗೆ ಭೇಟಿ ನೀಡಿ ಪಕ್ಕದಲ್ಲಿದ್ದ ಮಾರ್ಕೆಟ್ ವೀಕ್ಷಿಸಲೆಂದು ಹೋದೆವು, ಭಾನುವಾರವಾದ ಕಾರಣ ಎಲ್ಲ ಅಂಗಡಿ ಮಳಿಗೆಗಳು ಬಾಗಿಲು ಮುಚ್ಚಿದ್ದರೂ ಅಲ್ಲೊಂದು-ಇಲ್ಲೊಂದು ತೆರೆದಿದ್ದ ಕೆಲ ಅಂಗಡಿಗಳಲ್ಲಿ ಮನೆಗೆ ಬೇಕಾದಂತಹ ಕೆಲವು ವಸ್ತುಗಳನ್ನು ಕೊಂಡೆವು, ನಡೆದು ಮಾರ್ಕೆಟ್ನಲ್ಲಿ ತಿರುಗಿ ದಾಹವಾಗಿ ನೀರುಕುಡಿಯಲೆಂದು ಪಾನಿಪುರಿ ಅಂಗಡಿ ಹತ್ತಿರ ಬಂದಾಗ ಬಹಳ ವಿಶೇಷ ರೀತಿಯಲ್ಲಿ ಪಾನಿಪುರಿ ಮಾಡುತ್ತಿದ್ದದ್ದನ್ನು ನೋಡಿ ಸ್ನೇಹಿತರೆಲ್ಲರೂ ಜಮಾಯಿಸಿ ರುಚಿಯಾಗಿದೆ ಎಂದು ಒಬ್ಬೊಬ್ಬರೇ 2-3 ಪ್ಲೇಟ್ ಸವಿದು ಸಂಜೆಯೊಳಗಾಗಿ ಹಾಸ್ಟೆಲ್ ಸೇರಿದೆವು, ಮರುದಿನವೇ ಕಾರ್ಯಕ್ರಮದ ಕೊನೆಯ ದಿನವಾಗಿದ್ದರಿಂದ ಎಲ್ಲರೂ ಬ್ಯಾಕ್ ಪ್ಯಾಕ್ ಮಾಡಿಕೊಳ್ಳುತ್ತಿದ್ದರು, ಸುಮಾರು ನಾಲ್ಕೈದು ದಿನಗಳಿಂದ ನಮ್ಮನ್ನು ನೋಡಿದ್ದ ಪೊಲೀಸರು ಪರಿಚಯವಾಗಿದ್ದರು, ಇಷ್ಟು ದಿನ ಬೇರೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಎನಿಸಿಕೊಂಡಿದ್ದವರು ಸ್ನೇಹಿತರಾಗಿದ್ದರು, ರಾತ್ರಿ ಎಲ್ಲರೂ ಸ್ವಲ್ಪ ಹೆಚ್ಚಾಗಿಯೇ ಊಟ ಮಾಡಿಕೊಂಡು  ನಾವು ಉಳಿದಿದ್ದ ಹಾಸ್ಟೆಲ್ನಲ್ಲಿನ ಎದುರು ಬೇರೆ ರಾಜ್ಯದ ಸ್ನೇಹಿತರು ಕೂಡ ಜಮಾಯಿಸಿ ಫೈಯರ್ ಕ್ಯಾಂಪ್ ಮಾಡಿ ಕುಣಿದು ಕುಪ್ಪಳಿಸಲಾಯಿತು, ನಡುಗುವ ಚಳಿಗೆ ಈ ಫೈಯರ್ ಕ್ಯಾಂಪ್ ನಿಜಕ್ಕೂ ಆಹ್ಲಾದಕರವೆನಿಸಿತು.

ಮರುದಿನ ಬೆಳಿಗ್ಗೆ ಎಲ್ಲರೂ ಬೇಗ ಎದ್ದು ಉಳಿದಿದ್ದ ಎರಡೇ ಎರಡು ಊಟದ ಟೋಕನ್ ಗಳನ್ನು ನೋಡುತ್ತ ಹರಟೆ ಹೊಡೆಯುತ್ತಿದ್ದರು, ಅಂದಿನ ರಾತ್ರಿಯೇ ದೆಹಲಿಯಿಂದ ಬೆಂಗಳೂರಿಗೆ ಹೊರಡುವ ಟ್ರೈನ್ ರಿಸರ್ವೇಷನ್ ಮಾಡಿಸಿದ್ದಕಾರಣ ನಾವಿದ್ದ ಜಾಗದಿಂದ ಮರಳಿ ದೆಹಲಿಗೆ ಹೋಗಬೇಕಾಗಿತ್ತು, ತಿಂಡಿ ಮುಗಿಸಿಕೊಂಡು ಉಳಿದ ಕಟ್ಟಕಡೆಯ ಮಧ್ಯಾಹ್ನದ ಊಟದ ಟೋಕನ್ ಅನ್ನು ಇತರ ರಾಜ್ಯದ ಸ್ನೇಹಿತರಿಗೆ ನೀಡಿ, ನಾವು ಹೊರಡುವುದಾಗಿ ತಿಳಿಸಿ, ಮೈಸೂರಿಗೆ ಬಂದಾಗ ಕರೆ ಮಾಡುವುದನ್ನು ಮರೆಯದಿರಿ ಎಂದು ಫೋನ್ ನಂಬರ್ ಗಳನ್ನು ವಿನಿಮಯ ಮಾಡಿಕೊಂಡು, ಸರ್ಟಿಫಿಕೇಟ್ಗಳನ್ನು ಸಂಗ್ರಹಿಸಿ, ನಮ್ಮ ಲಗೇಜುಗಳೊಂದಿಗೆ ದೆಹಲಿ ಬಸ್ ಹತ್ತಿ ಕುಳಿತೆವು. ನಾವು ಬೆಳಿಗ್ಗೆಯೇ ಹೊರಟ ಕಾರಣ ಮಧ್ಯಾಹ್ನದ ಒಳಗಾಗಿ ದೆಹಲಿಯನ್ನು ತಲುಪಿದೆವು, ರಾತ್ರಿ 9:30 ಕ್ಕೆ ಇರುವ ರೈಲಿಗೆ ಇಷ್ಟೊತ್ತುನಿಂದಲೇ ಕಾದುಕುಳಿಯುವುದು ಬೇಸರವೆಂದರಿತು ಸುತ್ತಮುತ್ತಲು ಇರುವ ಕೆಲ ಪ್ರವಾಸಿ ತಾಣಗಳಿಗೆ ಹೋಗೋಣವೆಂದು ಎರಡು ಕ್ಯಾಬ್ ಗಳನ್ನು ಮಾಡಿಕೊಂಡು ನಮ್ಮೆಲ್ಲಾ ಲಗೇಜ್ ಗಳನ್ನು ಅದರೊಳಗೆ ತುಂಬಿದೆವು. 

ಮೊದಲು ನಾವು ವೀಕ್ಷಿಸಿದ ಪ್ರವಾಸಿತಾಣ ದೇಶದ ಸ್ವತಂತ್ರ ಹೋರಾಟಕ್ಕಾಗಿ ದುಡಿದ ಅನೇಕ ಮಹನೀಯರ ಸ್ಮರಣಾರ್ಥ ನಿರ್ಮಿಸಲಾಗಿದ್ದ ಇಂಡಿಯಾ ಗೇಟ್, ನಂತರ ಗಾಂಧೀಜಿಯವರನ್ನು ಸಮಾಧಿ ಮಾಡಿದಂತಹ ರಾಜ್ ಘಾಟ್, ಹುಮಾಯೂಟೂಂಬ್ ನೋಡಿಕೊಂಡು, ಸುಮಾರು ಸಂಜೆ 6 ರಿಂದ 7 ಗಂಟೆಯ ಒಳಗೆ ತಮಗೆ ಬೇಕಾದಂತಹ ವಸ್ತುಗಳನ್ನು ಚಾಂದಿನಿ ಚೌಕ್ ನಲ್ಲಿ ತೆಗೆದುಕೊಂಡು ಎಂಟು ಗಂಟೆ ಒಳಗಾಗಿ ಹಿಂತಿರುಗಿ ರೈಲ್ವೆ ಸ್ಟೇಷನ್ ತಲುಪೂಣವೆಂದು ನಿರ್ಧರಿಸಿ ಅಂಡರ್ ಗ್ರೌಂಡ್ ಮಾರ್ಕೆಟ್ ಆದ ಚಾಂದಿನಿ ಚೌಕ್ ಪ್ರವೇಶಿಸಿದೆವು, ಅಷ್ಟೇನೂ ಶುಭ್ರವಾಗಿರದೆ ಗಲೀಜಿನಿಂದ ಕೂಡಿದ್ದ ಮಾರ್ಕೆಟ್ ನ ಹೊಳಗೆ ಹೆಚ್ಚು ಸಮಯ ಕಳೆಯಲಾಗದೆ ತಮಗೆ ಬೇಕಾದಂತಹ ವಸ್ತುಗಳನ್ನು 7 ಗಂಟೆಯ ಒಳಗಾಗಿಯೇ ತೆಗೆದುಕೊಂಡು ಕೆಲ ಸ್ನೇಹಿತರು ಹೊರ ನಡೆದಿದ್ದರು, ಹೊರಗೆ ಬಹಳಷ್ಟು ಚಳಿ ಇದ್ದ ಕಾರಣ ಆದಷ್ಟು ಬೇಗ ರೈಲ್ವೆಸ್ಟೇಷನ್ ತಲುಪೂಣವೆಂದು 7:30 ಸಮಯಕ್ಕೆ ಎಲ್ಲರೂ ಹೊರನಡೆದಿದ್ದರೂ ಇನ್ನಿಬ್ಬರು ಹುಡುಗಿಯರು ಮಾತ್ರ ಕಾಣದಂತಾದರು, ಇವರಿಗಾಗಿ ಮತ್ತೊಮ್ಮೆ ಮಾರ್ಕೆಟ್ಟನ್ನು ಎಲ್ಲರೂ ಸುತ್ತಿದ್ದಾಯ್ತು ಎಲ್ಲಿ ನೋಡಿದರೂ ಇವರ ಸುಳಿವೇ ಇಲ್ಲ, ರೈಲಿಗೆ ಸಮಯವಾಗುತ್ತಲಿದೆ, ದೆಹಲಿಯಲ್ಲಿ ಟ್ರಾಫಿಕ್ ಜಾಮ್ ಆದರೆ ತಲುಪಲಾಗುವುದಿಲ್ಲವಲ್ಲ ಎಂಬ ಮತ್ತೊಂದು ಚಿಂತೆ, ಚಾರ್ಜ್ ಇಲ್ಲದೆ ಇವರ ಫೋನ್ ಗಳು ಕೂಡ ಸ್ವಿಚ್ ಆಫ್ ಆಗಿವೆ, ಇದರೊಂದಿಗೆ ಎಲ್ಲರಿಗೂ ಕೋಪ ನೆತ್ತಿಗೇರಿದೆ, ಕೊನೆಯ ಬಾರಿ ನಾನು ಮೇಡಮ್ ನವರೊಂದಿಗೆ ಮಾರ್ಕೆಟ್ ಮೊಳಗೆ ಹುಡುಕಿ ಬರೋಣವೆಂದು ನಡೆದೆವು ಎಲ್ಲಿಯೂ ಇದರ ಸುಳಿವು ಕಾಣದೆ ಬೇಸರವಾಯಿತು, ಕೊನೆಗೆ ಮಾರ್ಕೆಟ್ ನ ಮೂಲೆಯೊಂದರಲ್ಲಿ ಯಾರೋ ಹುಡುಗಿಯರು ತಮಗೆ ಬೇಕಾದಂತಹ ವಸ್ತುಗಳನ್ನು ತೆಗೆದುಕೊಳ್ಳುತ್ತಿರುವಂತೆ ಕಾಣಿಸಿತು, ಹತ್ತಿರಕ್ಕೆ ಹೋಗಿ ನೋಡಿದರೆ ನಾವು ಹುಡುಕುತ್ತಿದ್ದ ಹುಡುಗಿಯರೇ ಆಗಿದ್ದರು ಮೊದಲೇ ಸಮಯವಾಗಿದೆ ಎಂಬ ಕೋಪವಿದ್ದನಮಗೆ ಸ್ಥಳದಲ್ಲಿಯೇ ಬೈದು ಕರೆದುಕೊಂಡು ಹೊರನಡೆದಿದ್ದಾಯಿತು, ಸಮಯ 8.30 ದಾಟಿತ್ತು, ಕಾಣೆಯಾಗಿದ್ದ ಹುಡುಗಿಯರು ಮೌನವಾಗಿ ಕಣ್ಣೀರು ಸುರಿಸುತ್ತಿದ್ದರು, ನಮಗಾಗಿ ಡ್ರೈವರ್ ಕಾಯುತ್ತಲೇ ಇದ್ದರು, ಸಮಯವಾದರೆ ನಾವು ಜವಾಬ್ದಾರರಲ್ಲ ಎಂದು ಹೇಳಿ ಎಲ್ಲರನ್ನೂ ಕುಳ್ಳಿರಿಸಿಕೊಂಡು ನಡೆದರು, ನಮ್ಮ ಪರಿಸ್ಥಿತಿಯನ್ನು ನೋಡಿ ಡ್ರೈವರ್ಗೆ ಕನಿಕರ ಹುಟ್ಟಿತು ಎಂದೆನಿಸುತ್ತದೆ, ನಮಗಾಗಿ ಸುತ್ತಿ ಬಳಸಿಕೊಂಡು 9:10 ರೈಲ್ವೆ ಸ್ಟೇಷನ್ ತಲುಪಿಸಿದರು, ಸಮಯಕ್ಕೆ ಮುಂಚಿತವಾಗಿಯೇ ಕರೆದುಕೊಂಡು ಬಿಟ್ಟಂತಹ  ಡ್ರೈವರ್ ಗೆ ಈ ಸಂದರ್ಭದಲ್ಲಿ ನಾವೆಷ್ಟು ಕೃತಜ್ಞತೆ ಸಲ್ಲಿಸಿದರು ಅದು ಕಡಿಮೆಯೇ ಎಂದೆನಿಸುತ್ತಿತ್ತು, ರೈಲು ಆಗಲೇ ಸ್ಟೇಷನ್ ನಲ್ಲಿ ಬಂದು ನಿಂತಿತ್ತು, ಪ್ರಯಾಣಿಕರು ಜಮಾಯಿಸಿ ಹತ್ತುತಿದ್ದರು, ನಾವು ತೆಗೆದುಕೊಂಡು ಹೋದಂತಹ ಬ್ಯಾಗ್ ಗಳೆಲ್ಲವನ್ನೂ ಸ್ಕ್ಯಾನ್ ಮಾಡಿದ ಬಳಿಕವೇ ಒಳಗೆ ಬೀಳುತ್ತಿದ್ದರಿಂದ ಸಮಯವಾಗಿ ಟ್ರೈನ್ ಕೂ ಎಂದು ಶಬ್ದವನ್ನು ಮಾಡಿಬಿಟ್ಟಿತು, ಎಲ್ಲರೂ ಒಂದೇ ಉಸಿರಿಗೆ ಬ್ಯಾಗ್ ಗಳನ್ನು ಟ್ರೈನ್ ಒಳಗೆ ಎಸೆದು ಹತ್ತಿಕೊಂಡೆವು, ಟ್ರೈನ್ ಮುನ್ನಡೆಯುತ್ತಾ ಮತ್ತಷ್ಟು ವೇಗವನ್ನು ಪಡೆಯಿತು, ಎಲ್ಲರೂ ಕೊನೆಗೆ ಟ್ರೈನ್ ಹತ್ತಿದೆವಲ್ಲ ಎಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದರು.

ರೈಲಿನಲ್ಲಿ ಎಷ್ಟೊತ್ತು ಹುಡುಕಿದರು ಕೆಲವರ ಸೀಟ್ ನಂಬರ್ ತಿಳಿಯದೇ ಹೋಯಿತು ಕೊನೆಗೆ ಎರಡು ಮೂರೂ ಬಾರಿ ಹುಡುಕಿದ ಬಳಿಕ ತಿಳಿಯಿತು, ನಾವಿದ್ದ 21 ಜನರ ಪೈಕಿ 18 ಜನರಿಗೆ ಎರಡನೇ  ಭೋಗಿಯಾಗಿದ್ದು ಇನ್ನುಳಿದ ಮೂವರಿಗೆ ಹದಿಮೂರನೆ ಭೋಗಿಯಾಗಿತ್ತು, ನಾಲ್ಕೈದು ದಿನಗಳಿಂದ ಒಂದೇ ಸಮನೆ ಮಾಂಸಹಾರ ಸೇವಿಸಿದ್ದ ಕೆಲ ಹುಡುಗರು ಹುಷಾರಿಲ್ಲದೆ ಆಯಾಸಗೊಂಡು ನರಳುತ್ತಿದ್ದರು ಅವರಿಗೆ ಫಸ್ಟ್ ಹೆಡ್ ಬಾಕ್ಸ್ನಲ್ಲಿದ್ದಂತಹ ಕೆಲ ಮಾತ್ರೆಗಳನ್ನು ಕೊಟ್ಟು ಸಮಾಧಾನ ತಂದು ಕೊಳ್ಳುವ ಹಾಗೆ ಹೇಳಿದ್ದಾಯಿತು, ಯಾರು ಸಂಜೆಯಿಂದ ಏನು ತಿಂದಿರದ ಕಾರಣ ಎಲ್ಲರಿಗೂ ಹೊಟ್ಟೆ ಹಸಿಯಲಾರಂಭಿಸಿತು, ಬ್ಯಾಗಿನಲ್ಲಿ ಅಳಿದುಳಿದು ವಿಕ್ಕಿದಂತಹ ಬನ್ನು, ಬಿಸ್ಕೆಟ್, ರಸ್ಕ್, ಹಣ್ಣುಗಳನ್ನು ತಿಂದು ಬೆಳಿಗ್ಗೆ ನೋಡಿಕೊಂಡರಾಯಿತು ಎಂದು ಹೇಳಿ ಸುಮ್ಮನಾದೆವು, ಮೇಡಂ ಅವರೊಂದಿಗೆ 17 ಜನ ಎರಡನೇ ಬೋಗಿಯಲ್ಲಿ ಉಳಿದರೆ, ನಾನು ಮತ್ತು ನನ್ನ ಇಬ್ಬರು ಸ್ನೇಹಿತರು 13ನೇ ಭೋಗಿಗೆ ನಡೆದೆವು, ಈ ಬೋಗಿಯ ಪಕ್ಕದಲ್ಲಿ ಟಾಯ್ಲೆಟ್ ಇದ್ದಿದ್ದರಿಂದ ನಮಗೆ ಬಹಳಷ್ಟು ಹಿಂಸೆ ಎನಿಸಿತು, ಇದರೊಂದಿಗೆ ಪಾನ್ ಪರಾಗ್, ಸಿಗರೇಟ್ ನ ವಾಸನೆ, ಬೋಗಿಯೊಳಗೆ ತಣ್ಣನೆ ಬೀಸಿ ಬರುತ್ತಿದ್ದ ಗಾಳಿ, ಜನರ ಗದ್ದಲ ತಲೆ ಕೆಡಿಸಿದಂತಾಯಿತು, ಹೇಗೋ ಕಷ್ಟಪಟ್ಟು ಇರುಳು ಕಳೆದು ಬಿಡೋಣ ಎಂದುಕೊಳ್ಳುತ್ತಿದ್ದಂತೆ ಟಿಕೆಟ್ ಕಲೆಕ್ಟರ್ ಟಿಕೆಟ್ಗಳನ್ನು ಕೇಳಿದರು, ನಮ್ಮ ಬಳಿ ಇರದ ಟಿಕೆಟ್ ಅನ್ನು ನಾವು ಹೇಗೆ ತಾನೇ ತೋರಿಸೇವು? ಟಿಕೆಟ್ ಮುಂದಿನ ಬೋಗಿಯ ನಮ್ಮವರೊಂದಿಗೆ ಇದೆ ಎಂದು ಹೇಳಿದರೂ ನಂಬದ ಟಿಕೆಟ್ ಕಲೆಕ್ಟರ್ ನ ಬಳಿ ಎದುರು ಮಾತನಾಡಲಾಗದೆ ವಾಟ್ಸಪ್ನಲ್ಲಿ ಫೋಟೋ ಕಳಿಸಿಕೊಡು ತೋರಿಸಿದ್ದಾಯಿತು. ಕೊನೆಗೆ ಹೇಗೋ ಕಷ್ಟಪಟ್ಟು ರಾತ್ರಿಯೆಲ್ಲಾ ಒದ್ದಾಡಿ ನಿದ್ರೆ ಮಾಡಲಾಗಿದೆ ಬೆಳಿಗ್ಗೆ ಎದ್ದು ಎರಡನೇ ಭೋಗಿಗೆ ಹೋಗಿ ಮಲಗಿದ್ದಾಯಿತು. ಇಷ್ಟೆಲ್ಲಾ ಆಗುವುದರೊಳಗೆ ಹತ್ತು ದಿನ ಕಳೆದೆಹೋಗಿತ್ತು, ಮನೆಯವರು ಕರೆ ಮಾಡಿ ಎಂದು ಹಿಂತಿರುಗುವುದಾಗಿ ವಿಚಾರಿಸಿಕೊಳ್ಳುತ್ತಲೇ ಇದ್ದರು, ಮರುದಿನ ಬೆಂಗಳೂರಿಗೆ ತಲುಪುತ್ತೇವೆ ಎಂದು ಕೇಳಿದ ಮೇಲೆ ಸುಮ್ಮನಾದರು.

ಬೆಂಗಳೂರನ್ನು ತಲುಪುವ ಹಿಂದಿನ ದಿನ ಸಂಪೂರ್ಣವಾಗಿ ಜರ್ನಿಯಲ್ಲಿಯೇ ಕಳೆದುಹೋಯಿತು, ಮರುದಿನ ಬೆಳಿಗ್ಗೆ ರೈಲು ರಾಯಚೂರನ್ನು ದಾಟಿ ಮುನ್ನಡೆಯುತ್ತಿತ್ತು, ಎಲ್ಲರೂ ಎದ್ದು 10 ದಿನದ ಜರ್ನಿಯನ್ನು ನೆನಪಿಸಿಕೊಳ್ಳುತ್ತಿದ್ದರು, ಅಂದು ಎಲ್ಲರ ಸಮ್ಮುಖದಲ್ಲಿ ಹಾಡು, ಟೀಕೆ, ಹಾಸ್ಯಗಳೆಲ್ಲವೂ ಹೆಚ್ಚಾಗಿ, ಇಡೀ ರೈಲಿನಲ್ಲಿಯೇ ನಮ್ಮ ಬೋಗಿಯ ಗದ್ದಲ ಹೆಚ್ಚಾಗಿತ್ತು, ಅಂತೂ ರೈಲು ಮಧ್ಯಾನ್ಹದ ಹೊತ್ತಿಗೆ ಬೆಂಗಳೂರನ್ನು ತಲುಪುತ್ತಿದ್ದಂತೆಯೇ ಎಲ್ಲರ ಮುಖದಲ್ಲಿ ಬೇಸರ ತುಂಬಿತ್ತು, ಕೆಲವರ ಕಣ್ಣುಗಳು ಒದ್ದೆಯೇ ಆಗಿಬಿಟ್ಟವು, ಭಾರವಾದ ಮನಸ್ಸಿನಲ್ಲಿ ಎಲ್ಲರೂ ಮೌನವಾಗಿಯೇ ಇದ್ದೆವು, ನಮ್ಮನ್ನು ಸೌಖ್ಯವಾಗಿ ಕರೆದುಕೊಂಡು ಹೋಗಿ ಬಂದಂತಹ ತುಮಕೂರಿನ NSS co-ordinator ಆಗಿದ್ದಂತಹ ರೇಖಾ ಮೇಡಂ ನವರಿಗೆ ನಮಿಸಿದ ಬಳಿಕ ಅವರು ತುಮಕೂರಿನ ವಿದ್ಯಾರ್ಥಿಗಳೊಂದಿಗೆ  ಹಿಂತಿರುಗಿದರು, ನಾವು ಮೈಸೂರಿನವರೆಲ್ಲರೂ ಇನ್ನೊಂದು ಟ್ರೈನ ಹತ್ತಿ ಮಾರ್ಗದುದ್ದಕ್ಕೂ ಒಬ್ಬೊಬ್ಬರಾಗಿ ಇಳಿದು ಕೊನೆಗೆ ಮೈಸೂರು ನಿಲ್ದಾಣ ತಲುಪಿದವರು ಮೂರುಜನ ಆಗಿದ್ದೆವು, ಮೈಸೂರಿನ NSS ಆಫೀಸ್ ಗೆ ಕರೆ ಮಾಡಿ ಎಲ್ಲರೂ ಸುರಕ್ಷಿತವಾಗಿ ಹಿಂತಿರುಗಿದ್ದೇವೆ ಎಂದು ಹೇಳಿ, ಸಂಜೆಯೊಳಗಾಗಿ ಎಲ್ಲರೂ ಮನೆ ಸೇರಿಕೊಂಡೆವು. ಮನೆ ಸೇರಿದ ಸ್ವಲ್ಪ ಹೊತ್ತಿನಲ್ಲಿಯೇ ದೇಶದ ನಾನಾ ವಿಶ್ವವಿದ್ಯಾನಿಲಯಗಳ ಸ್ನೇಹಿತರನ್ನೊಳಗೊಂದು ವಾಟ್ಸಪ್ ಗ್ರೂಪ್ ಕ್ರಿಯೇಟ್ ಆಗಿ ಸಾವಿರಾರು ಮೆಸೇಜ್ ಗಳು ಬರಲಾರಂಭಿಸಿದವು.

ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮಕ್ಕೆ ಮೈಸೂರು ವಿಶ್ವವಿದ್ಯಾನಿಲಯದಿಂದ ಭಾಗವಹಿಸಿದ್ದ ನಮ್ಮ ಸ್ನೇಹಿತರ ಗುಂಪು,ನಾನಾ ಕಾರಣಗಳಿಂದ ಒಮ್ಮೆಯೂ ಒಟ್ಟಿಗೆ ಸಿಗಲಿಕ್ಕೆ ಆಗದೆ ಹೋದರು ಆಗೊಮ್ಮೆ ಈಗೊಮ್ಮೆ ಕೆಲ NSS ಕಾರ್ಯಕ್ರಮಗಳಲ್ಲಿ, ಸ್ನೇಹಿತರ ವಿವಾಹಗಳಲ್ಲಿ, ಉತ್ತರ ಕರ್ನಾಟಕದ/ತುಮಕೂರಿನ NSS ಸ್ನೇಹಿತರು ಮೈಸೂರಿಗೆ ಬಂದಾಗ ಅಥವಾ ಮೈಸೂರಿನವರು ತುಮಕೂರಿಗೆ ಹೋದಾಗ ಸ್ನೇಹಿತರು ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಕಾರ್ಯಕ್ರಮ ಮುಗಿದು ಏಳು ವರ್ಷಗಳು ಕಳೆಯುತ್ತಾ ಬಂದರು ನಮ್ಮ ನೆನಪುಗಳು ಮಾತ್ರ ಸ್ಮೃತಿಪಟಲದಲ್ಲಿ ಹಸಿಯಾಗಿದೆ.

ಸ್ವಾಮಿ ವಿವೇಕಾನಂದರ ಜನ್ಮದಿನದ ಸ್ಮರಣಾರ್ಥ ಪ್ರತಿವರ್ಷ ಜನವರಿ 12ನೇ ತಾರೀಕಿನಂದು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ. ಕಾರ್ಯಕ್ರಮಕ್ಕೆ ನಾನು ಹೋಗದೆ ಇದ್ದಿದ್ದರೆ ಅಥವಾ ನನಗೆ ಅವಕಾಶವೇ ಸಿಗದಿದ್ದಿದ್ದರೆ ಅಥವಾ ಸರಕಾರವೇ ಈ ಕಾರ್ಯಕ್ರಮವನ್ನು ಆಯೋಜಿಸಿದೆ ಇದ್ದಿದ್ದರೆ, ಇಷ್ಟೆಲ್ಲ ಅನುಭವಗಳಿಂದ ವಂಚಿತನಾಗುತ್ತಿದ್ದೆ. 

ಕಾರ್ಯಕ್ರಮವನ್ನು ಪ್ರತಿ ವರ್ಷ ದೇಶದ ನಾನಾ ಮೂಲೆಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ ಈ ಮೂಲಕ ಸ್ವಾಮಿ ವಿವೇಕಾನಂದರು ಯುವ ಜನತೆಗೆ ನೀಡಿರುವ ಕರೆಯನ್ನು ಸ್ಮರಿಸಲಾಗುತ್ತದೆ.

ಧನ್ಯವಾದಗಳು.

ಎಲ್ಲರಿಗೂ ರಾಷ್ಟ್ರೀಯ ಯುವ ದಿನದ ಶುಭಾಶಯಗಳು.

[ ನಾನು ಈ ಶಿಬಿರಕ್ಕೆ ಹಾಜರಾಗಲು ಮೂಲ ಕಾರಣಕರ್ತರು NIE ಪ್ರಥಮ ದರ್ಜೆ ಕಾಲೇಜಿನ NSS ಸಂಯೋಜನಾಧಿಕಾರಿಗಳಾಗಿದ್ದಂತಹ ಉಮಾಶಂಕರ್ ಸರ್ ಅವರಿಗೆ ನನ್ನ ಅನಂತ ಅನಂತ ಧನ್ಯವಾದಗಳು.

ಮೈಸೂರು ವಿಶ್ವವಿದ್ಯಾನಿಲಯದಿಂದ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮಕ್ಕೆ ಭಾಗವಹಿಸಿದವರು ತೇಜ ರಾಜು, ಚಂದನ್, ಮಿಥುನ್, ಸುನಂದ ರಾಜು, ಸ್ಪೂರ್ತಿ, ಹೇಮಾವತಿ, ವೀಣಾ, ರಮ್ಯಾ, ಮೇಘನಾ.

ತುಮಕೂರು ವಿಶ್ವವಿದ್ಯಾಲಯದಿಂದ ಭಾಗವಹಿಸಿದವರು ಶಿವು, ಸಿದ್ದರಾಜು, ಮಂಜ, ಪಾಪಣ್ಣ, ನವೀನ್, ಬೃಂದಾ, ತೇಜಸ್ವಿನಿ, ರಚನಾ, ಅನುಸೂಯ, ಅನು.

ನಮ್ಮ ಜೊತೆ ಬಂದಂತಹ ತುಮಕೂರು ವಿಶ್ವವಿದ್ಯಾಲಯದ NSS co-ordinator ರೇಖಾ ಮೇಡಂ.]

ಈ ಕಾರ್ಯಕ್ರಮ ಮುಗಿದ ಹತ್ತೇ ದಿನಕ್ಕೆ ಜಿಲ್ಲಾಮಟ್ಟದ NSS ಶಿಬಿರವನ್ನು ಎಚ್ ಡಿ ಕೋಟೆಯ ಬಳಿ ಆಯೋಜಿಸಲಾಗಿತ್ತು ಇದಕ್ಕೂ ನಾನು ಭಾಗವಹಿಸಿದ್ದೆ, ಆದರೆ ಕೆಲವೇ ದಿನಗಳಿಂದಷ್ಟೇ ಅಷ್ಟು ದೊಡ್ಡ ಕಾರ್ಯಕ್ರಮ ನೋಡಿ ಬಂದ ನನಗೆ ಈ ಕಾರ್ಯಕ್ರಮ ಸ್ವಲ್ಪ ಕಷ್ಟವೆನಿಸಿತು. ಅದೇನೇ ಇರಲಿ ವರ್ಷಕ್ಕೊಮ್ಮೆ ರಾಷ್ಟ್ರಪತಿ ಭವನದಲ್ಲಿ NSS ಕಾರ್ಯಕ್ರಮನ್ನು ಆಯೋಜಿಸಲಾಗುತ್ತದೆ ಇದಕ್ಕೆ ನನಗೆ ಅವಕಾಶ ಸಿಗುತ್ತದೆಯೋ ಇಲ್ಲವೋ ನನಗಂತೂ ತಿಳಿಯದು ಆದರೆ ಭಾಗವಹಿಸಬೇಕೆಂಬ ಆಸೆಯೊಂದಿದೆ.

ಅಂಕಣವನ್ನು ನನ್ನೆಲ್ಲಾ ರಾಷ್ಟ್ರೀಯ ಸೇವಾ ಯೋಜನೆಯ ಸ್ನೇಹಿತರಿಗಾಗಿ ಸಮರ್ಪಿಸಲಾಗಿದೆ.











5 comments:

  1. Hi,Tejraj.Really praise worthy effort. I always expected this kind of write up since our return from Haryana.you full filled my long cherished dream. Thank you.sena it to some newspaper,it may inspire some one somewhere. Rekha Gubbi

    ReplyDelete
  2. ಜೀವನದ ಅತ್ಯದ್ಭುತ ಕ್ಷಣಗಳು ಮತ್ತೆ ಕಣ್ಣ ಮುಂದೆ ಬಂದಂತಾಯಿತು

    ReplyDelete
  3. Super and amazing experience you have shared.

    ReplyDelete