Sunday, January 3, 2021

ಯುವ ಚೇತನ 1

                  
                   ಎಸ್ ಪಿ ತೇಜರಾಜು.

 ಪದವಿಯ ಎರಡನೇ ವರ್ಷ ಮುಗಿಯುವುದರೊಳಗಾಗಿ ರಾಷ್ಟ್ರೀಯ ಸೇವಾ ಯೋಜನೆಯ[NSS] ಒಂದೆರಡು ಗ್ರಾಮ ಶಿಬಿರಗಳು[ village camp], ರಾಜ್ಯಮಟ್ಟದ ಶಿಬಿರ ಗಳಲ್ಲಿ[state level camp] ಭಾಗವಹಿಸಿದ್ದೆ, ರಾಷ್ಟ್ರಮಟ್ಟದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಪದವಿ ಪೂರ್ವದಲ್ಲಿಯೇ ಕನಸು ಕಂಡಿದ್ದರೂ ಅದಕ್ಕೆ ಬಹಳಷ್ಟು ಮಾನದಂಡಗಳು ಇರುವುದರಿಂದ ನಾನು ಹೋಗಲಾಗುವುದಿಲ್ಲವೆಂದೇ ಭಾವಿಸಿ ಸುಮ್ಮನಾಗಿಬಿಟ್ಟಿದ್ದ ಆದರೂ ಇರಲಿ ಎಂದು ಹೇಳಿ ಪದವಿ ಕಾಲೇಜಿನ NSS ಸಂಯೋಜನಾಧಿಕಾರಿಗಳಾಗಿದ್ದಂತಹ  ಉಮಾಶಂಕರ್ ಸರ್ ಬಳಿ ಹೋಗಿ ಯಾವುದಾದರೊಂದು ನ್ಯಾಷನಲ್ ಲೆವೆಲ್ ಕ್ಯಾಂಪ್ ಇದ್ದರೆ ಹೇಳಿ ನಾನು ಹೋಗುತ್ತೇನೆ ಎಂದು ಕೇಳಿಕೊಂಡಿದ್ದೆ.

 ಡಿಸೆಂಬರ್ ನ ರಜಾ ದಿನಗಳನ್ನು ಕಳೆಯುತ್ತಿದ್ದೆ,ಇನ್ನೇನು ರಾಷ್ಟ್ರೀಯ ಶಿಬಿರ ಕನಸಾಗಿಯೇ ಉಳಿಯಬಹುದು ಎಂದು ಭಾವಿಸಿ ಸುಮ್ಮನಾಗಿ ಬಿಟ್ಟಿದ್ದೆ 2016 ಡಿಸೆಂಬರ್ ನ ಎರಡನೆಯ ವಾರ ಸರ್ ಕಡೆಯಿಂದ ಕರೆ ಬಂದಿತು, ಸರ್ ಮಾತನಾಡುತ್ತಾ ನಿಮ್ಮ ಪೋಷಕರು ಒಪ್ಪುವುದಾದರೆ  ರಾಷ್ಟ್ರೀಯ ಶಿಬಿರಕ್ಕೆ ಹೋಗುತ್ತೀಯಾ ಎಂದು ಕೇಳಿದರು? ಮೊದಲೇ ಕಾತರದ ಬಕ ಪಕ್ಷಿಯಂತೆ ಕಾಯುತ್ತಿದ್ದ ನನಗೆ ಪೋಷಕರು ಒಪ್ಪದೇ ಹೋದರೆ ಏನಂತೆ ನಾನು ಹೋಗುತ್ತೇನೆ ಎಂದು ದೃಢ ನಿರ್ಧಾರವನ್ನು ಮಾಡಿ ಹೋಗುತ್ತೇನೆ ಎಂದು ಹೇಳಿದೆ. ಮಾತನಾಡಿದ ಬಳಿಕ ಇದೆಲ್ಲವೂ ನಿಜವೋ ಅಥವಾ ನನ್ನ ಭ್ರಮೆಯೇ ಎಂದು ಭಾವಿಸಿದರೂ ವಾಸ್ತವದಲ್ಲಿ ಸತ್ಯವೇ ಆಗಿತ್ತು.

 ದುರ್ದೈವದ ಸಂಗತಿಯೆಂದರೆ ಈ ಕರೆ ಬಂದ ಒಂದು ವರ್ಷದ ಹಿಂದಷ್ಟೇಯೇ ನಮ್ಮ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನ್ಯಾಷನಲ್ ಸೈನ್ಸ್ ಕಾಂಗ್ರೆಸ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಆದರೆ ಅದೇ ಸಮಯಕ್ಕೆ ಕಾಲೇಜಿನ ಸ್ನೇಹಿತರೆಲ್ಲರೂ ಪ್ರವಾಸಕ್ಕೆ ಹೋಗುತ್ತಿದ್ದ ಕಾರಣ ಅವಕಾಶದಿಂದ ವಂಚಿತವಾಗಿದ್ದ, ಈ ಕಾರ್ಯಕ್ರಮಕ್ಕೆ ದೇಶದ ಮೂಲೆ ಮೂಲೆಗಳ ವಿವಿಧ ವಿಶ್ವವಿದ್ಯಾನಿಲಯಗಳಿಂದ ವಿದ್ಯಾರ್ಥಿಗಳು ಆಗಮಿಸಿದ್ದರು ಇವರನ್ನು ನೋಡಿಕೊಳ್ಳಲಿಕ್ಕೆ ನನ್ನ ಇತರ NSS ಸ್ನೇಹಿತರು ಸ್ವಯಂಸೇವಕರಾಗಿ ಭಾಗವಹಿಸಿದ್ದರು. ನಮ್ಮ ಪಕ್ಕದಲ್ಲೇ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಲಾಗಲಿಲ್ಲವಲ್ಲ ಎಂಬ ಕೊರಗಿದ್ದ ನಡುವೆ ಒಂದೇ ಒಂದು ಕರೆ ನನ್ನ ಆಕಾಂಕ್ಷೆಗಳನ್ನೆಲ್ಲಾ ಇನ್ನೊಂದು ಕಡೆ ಸಾರ್ಥಕಪಡಿಸಿಕೊಳ್ಳಬಹುದಲ್ಲ ಎಂದು ಖುಷಿಯಾಯಿತು.

 ಕರೆಗೆ ಒಪ್ಪಿಗೆ ನೀಡಿದ್ದರಿಂದ ನನ್ನ ಹೆಸರು ರಾಷ್ಟ್ರೀಯ ಶಿಬಿರಕ್ಕೆ ಭಾಗವಹಿಸುವವರ ಪಟ್ಟಿಯಲ್ಲಿ ಸೇರಿಕೊಂಡಿತು, ಈ ಶಿಬಿರದಲ್ಲಿ ಭಾಗವಹಿಸಲು ನನಗೆ ಅವಕಾಶಸಿಕ್ಕಿದ್ದು ಅದೃಷ್ಟವೇ ಸರಿ, ಏಕೆಂದರೆ ಮೈವಿವಿದಲ್ಲಿ NSS ನ ಸ್ವಯಂಸೇವಕರು ಸಾವಿರಾರು ಸಂಖ್ಯೆಯಲ್ಲಿ ಇದ್ದರು ಅದರಲ್ಲಿ ಕೇವಲ ಹತ್ತು ಜನರನ್ನು ಮಾತ್ರ ಆಯ್ಕೆ ಮಾಡಲಾಗಿತ್ತು. ಈ 10 ಸ್ವಯಂಸೇವಕರು ಕೂಡ ವಿವಿಧ ಕಾಲೇಜುಗಳ, ವಿವಿಧ ವಿಭಾಗದ ವಿದ್ಯಾರ್ಥಿಗಳಾಗಿದ್ದು ಅದರಲ್ಲಿ 5 ಹುಡುಗರು ಇನ್ನ 5  ಹುಡುಗಿಯರಿಗೆ ಅವಕಾಶ ನೀಡಲಾಗಿತ್ತು. ಶಿಬಿರಕ್ಕೆ ಎರಡೇ ಎರಡು ವಾರ ಉಳಿದಿದ್ದರಿಂದ ಸಕಲ ಸಿದ್ಧತೆಗಳೆಲ್ಲವೂ ಭರದಿಂದಲೇ ಸಾಗಿದವು.[submission of parents letter, to and fro exp charges etc,,,,]

 ಒಟ್ಟು ಆರು ದಿನಗಳ ರಾಷ್ಟ್ರೀಯ ಯುವಜನ ಕಾರ್ಯಕ್ರಮ[NYF -National youth festival] ಹೋಗಿಬರಲು ನಾಲ್ಕು ದಿನ ಸೇರಿ ಹತ್ತುದಿನಗಳಾಗುತ್ತದೆ ಎಂದು ಭಾವಿಸಲಾಗಿತ್ತು. ಈ ಬಾರಿ ದೂರದ ಹರಿಯಾಣದಲ್ಲಿ ಕಾರ್ಯಕ್ರಮ ನಡೆಯುತ್ತಿದೆ ಎಂದು ಕೇಳಿ ನಿಜಕ್ಕೂ ಸಂತಸವಾಯಿತು. ಶೀರ್ಷಿಕೆಯಂತೆ ಕಾರ್ಯಕ್ರಮವನ್ನು ಯುವ ಜನತೆಗಾಗಿ ಪ್ರತಿವರ್ಷ ವಿವೇಕಾನಂದರ ಹುಟ್ಟುಹಬ್ಬದ ಸ್ಮರಣಾರ್ಥ ಆಚರಿಸಲಾಗುತ್ತದೆ. 

 ಕಾರ್ಯಕ್ರಮಕ್ಕೆ ಕೇವಲ ಒಂದು ವಾರ ಉಳಿದಿತ್ತು ಹರಿಯಾಣಕ್ಕೆ ಹೋಗುತ್ತಿದ್ದರಿಂದ 5-6 ಜೊತೆಯ ಬಟ್ಟೆಯನ್ನು Pack ಮಾಡಿಕೊಳ್ಳಲಾಯಿತು. ಕಾರ್ಯಕ್ರಮದ ಒಂದು ದಿನ ದೇಶದ ನಾನಾ ಮೂಲೆಗಳಿಂದ ಬಂದಂತಹ ವಿದ್ಯಾರ್ಥಿಗಳು ಅವರ ಪ್ರಾದೇಶಿಕ ಉಡುಗೆ-ತೊಡುಗೆಗಳನ್ನು ತೊಡುವಂತೆ ಸೂಚಿಸಲಾಗಿತ್ತು, ಅದರಂತೆ ಮೈವಿವಿಯ ವಿದ್ಯಾರ್ಥಿಗಳಾದ ನಾವು ಮೈಸೂರು ಪೇಟ, ಪಂಚೆ, ಶಾಲುಗಳನ್ನು ತೆಗೆದುಕೊಂಡಿದ್ದೆವು. ಕೊನೆಗೆ ದಿನಾಂಕವೆಲ್ಲವೂ ನಿಗದಿಯಾಗಿ ಶಿಬಿರಕ್ಕೆ ಹೊರಡುವ ವಿದ್ಯಾರ್ಥಿಗಳು ಹಿಂದಿನ ದಿನ ಮೈಸೂರಿನ NSS ಆಫೀಸ್ನಲ್ಲಿ ಮಾರ್ಗದರ್ಶನಗಳನ್ನೊಳಗೊಂಡ ಕಾರ್ಯಕ್ರಮವನ್ನು ಭಾಗವಹಿಸಿ ಮರುದಿನ ಬೆಳಿಗ್ಗೆ ಇಲ್ಲಿಂದಲೇ ಹರಡುವಂತೆ ಸೂಚಿಸಲಾಗಿತ್ತು, ದಿನಾಂಕ 08-01-2017 ರಂದು ಸಂಜೆ 4 ಗಂಟೆಯಿಂದ ಸ್ವಯಂಸೇವಕರು ಕಚೇರಿಗೆ ಬರಲಾರಂಭಿಸಿದರು.

 ಸಂಜೆ 6:00 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಯಿತು ಮೈವಿವಿಯ NSS ಸಂಯೋಜನಾದಿಕಾರಿಗಳು ವಿದ್ಯಾರ್ಥಿಗಳನ್ನುದ್ದೇಶಿಸಿ ಕಿವಿಮಾತುಗಳನ್ನು ಹೇಳಿದರು, ಇದರೊಂದಿಗೆ ಕಾರ್ಯಕ್ರಮಕ್ಕೆ ನಿಮ್ಮ ಜೊತೆ ಬರುತ್ತಿರುವಂತಹ Coordinatorವರು ಯಾರು? ತಲುಪಬೇಕಾದ ಮಾರ್ಗ ಯಾವುದು? ನೀವು ಮೊದಲು ಎಲ್ಲಿಗೆ ತಲುಪಬೇಕು? ಪಯಣ ಎಷ್ಟು ದಿನವಾಗುತ್ತದೆ? ಕಾಯ್ದಿರಿಸಿರುವ ರೈಲ್ವೆ ಟಿಕೆಟ್ ಯಾರ ಬಳಿ ಇರುತ್ತದೆ? ಅದರಲ್ಲಿ ನಿಮ್ಮ ಸೀಟುಗಳು ಯಾವುವು? ಸದಾ ಜೊತೆಯಲ್ಲಿ ಇಟ್ಟುಕೊಳ್ಳಬೇಕಾದ ಮೂಲ ದಾಖಲಾತಿಗಳು ಯಾವುವು? ಕಾರ್ಯಕ್ರಮದಲ್ಲಿ ನೀವು ಹೇಗೆ ನಡೆದುಕೊಳ್ಳಬೇಕು? ಶಿಬಿರದಲ್ಲಿ ನಿಮ್ಮ ಜವಾಬ್ದಾರಿಗಳೇನು? ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಹೇಗೆ? ಯಾವ ಯಾವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ? ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿ ಕಳೆದುಕೊಂಡರೆ ಅದಕ್ಕೆ ನೀವೇ ಜವಾಬ್ದಾರರು ಎಂಬಿತ್ಯಾದಿ ಮಾರ್ಗದರ್ಶನವನ್ನು ನೀಡುವುದರ ಮೂಲಕ ಕಾರ್ಯಕ್ರಮ 7:30 ತಕ್ಕೆ ಮುಕ್ತಾಯವಾಯಿತು.

 ನೆರೆದಿದ್ದ ಸ್ವಯಂಸೇವಕರು ವಿವಿಧ ಕಾಲೇಜಿನ ( ಹಾಸನ, ಮಂಡ್ಯ, ಮೈಸೂರು), ವಿವಿಧ ವಿಭಾಗದವರಾಗಿದ್ದರಿಂದ( B,com.B,sc.B,ca. BA)ಎಲ್ಲರಿಗೆ ಎಲ್ಲರೂ ಹೊಸ ಪರಿಚಯ ಎನಿಸಿತ್ತು, ಚಹ ಹೀರುತ್ತಾ ಪರಿಚಯ ಮಾಡಿಕೊಂಡರೂ ಯಾರೂ ಹೆಚ್ಚೇನು ಆತ್ಮೀಯರೆಂದೆನಿಸಲಿಲ್ಲ. ರಾತ್ರಿಯ ಊಟವನ್ನು ಮುಗಿಸಿ, ಒಂದಷ್ಟು ಹೊತ್ತು ಹರಟೆ ಹೊಡೆಯುತ್ತಾ ಬೆಳಿಗ್ಗೆ ಬೇಗ ಎದ್ದು ಬೆಂಗಳೂರಿಗೆ ಹೊರಡುವ ಸಲುವಾಗಿ ಮಲಗಿದ್ದಾಯಿತು, ಒಂದು ವಿಶ್ವವಿದ್ಯಾಲಯದಿಂದ ಕೇವಲ 10 ವಿದ್ಯಾರ್ಥಿಗಳಿಗೆ ಮಾತ್ರ ಶಿಬಿರಕ್ಕೆ ಅವಕಾಶ ನೀಡಲಾಗಿತ್ತು ಆದರೆ ನಮ್ಮ 10 ವಿದ್ಯಾರ್ಥಿಗಳಲ್ಲಿ ಒಂದು ಹುಡುಗ ಕೊನೆಗಳಿಗೆಯಲ್ಲಿ ಕಾರಣಾಂತರಗಳಿಂದ ಶಿಬಿರಕ್ಕೆ ಬರಲಾಗದೆ ಹೊರಗುಳಿದ. ಆದುದರಿಂದ ನಾಲ್ಕು ಜನ ಹುಡುಗರು ಐದು ಜನ ಹುಡುಗಿಯರನ್ನುಳಗೊಂಡ ಗುಂಪು ಬೆಳಿಗ್ಗೆ 5 ಗಂಟೆಗೆ ಮೈಸೂರು ರೈಲ್ವೆ ಸ್ಟೇಷನ್ ತಲುಪಿ ಮೊದಲ ರೈಲಿನಲ್ಲಿ ಬೆಂಗಳೂರು ತಲುಪಿದ್ದಾಯ್ತು.

 ದಿನಾಂಕ  09-01-2017 ರಂದು ಬೆಂಗಳೂರು ತಲುಪಿದ ನಮ್ಮ ಗುಂಪು ತುಮಕೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಹಾಗೂ ಅವರ co-ordinator ನೊಂದಿಗೆ ನಮ್ಮ ಮುಂದಿನ ಪಯಣವಾಗಿತ್ತು, ಎಷ್ಟು ಹೊತ್ತಾದರೂ ಇವರು ಬಾರದ ಕಾರಣ NSS ಆಫೀಸ್ ಗೆ ಕರೆ ಮಾಡಿ ವಿಚಾರಿಸಿಕೊಂಡಿದ್ದಾಯಿತು, ಇದಾದ ಸ್ವಲ್ಪ ಹೊತ್ತು ಕಾದ ಬಳಿಕ ತುಮಕೂರು ವಿಶ್ವವಿದ್ಯಾನಿಲಯದ NSS co-ordinator ನೊಂದಿಗೆ ಅವರ ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಬರಲಾರಂಭಿಸಿದರು,ಸಮಯ ಆಗುತ್ತಲೇ ಇತ್ತು ಟ್ರೈನ್ ಹೊರಡಲು ಇನ್ನೇನು ಸ್ವಲ್ಪಗಳಿಗೆ ಉಳಿದಿತ್ತು. ಭಾರದ ಒಂದಿಬ್ಬರು ವಿದ್ಯಾರ್ಥಿಗಳಿಗೆ ಕರೆಮಾಡಿ ಕೇಳಿ ವಿಚಾರಿಸಿದರು ಟ್ರೈನ್ ಹೊರಡಲಿಕ್ಕೆ ಇನ್ನೇನು 5 ನಿಮಿಷ ಉಳಿದಿರುವ ಹಾಗೆ ಬಂದು ಟ್ರೈನ್ ಸೇರಿದರು, ಎಲ್ಲರೂ ತಮ್ಮ ತಮ್ಮ ಲಗೇಜುಗಳನ್ನು ಸರಿಪಡಿಸಿಕೊಂಡು ತಮ್ಮ ಸೀಟುಗಳಲ್ಲಿ ಕುಳಿತುಕೊಳ್ಳುತ್ತಿದ್ದರು, ಮೈವಿವಿ ಒಂಬತ್ತು ವಿದ್ಯಾರ್ಥಿಗಳೊಂದಿಗೆ ತುವಿವಿ 10 ವಿದ್ಯಾರ್ಥಿಗಳು ಹಾಗೂ NSS co-ordinator ಆಗಿ ಬಂದಿದಂತಹ ರೇಖಾ ಮೇಡಂ ಹಾಗೂ ಅವರ ಪುಟ್ಟ ಮಗಳನ್ನು ಸೇರಿ ಒಟ್ಟು 21 ಜನರ ಪಯಣ ಚೆನ್ನೈ ಕಡೆಗೆ ಪ್ರಾರಂಭವಾಯಿತು.

 ರೈಲು ಬೆಂಗಳೂರನ್ನು ಬಿಟ್ಟ ಸ್ವಲ್ಪ ಹೊತ್ತಿನಲ್ಲಿಯೇ ಎಲ್ಲರ ಉಪಹಾರವು ಆಯಿತು, ಮೈಸೂರಿನಿಂದ ಹೊರಟ ವಿದ್ಯಾರ್ಥಿಗಳಾದ ನಮಗೆ ನಾವೇ ಹೊಸಬರು, ಇದರೊಂದಿಗೆ ತುಮಕೂರಿನ ಹೊಸ ವಿದ್ಯಾರ್ಥಿಗಳು ಸರಿ ಸೇರಿ ಹೊಸಬರ ಹಿಂಡೇ ಆಯಿತು, ಕೆಲವರು ಮೊಬೈಲ್ ಹಿಡಿದುಕೊಂಡು ಸ್ವಲ್ಪಗಳಿಗೆ ಕಳೆದರು, ಇನ್ನು ಕೆಲವರು ಅವರವರ ಕೆಲಸಗಳಲ್ಲಿ ಮಗ್ನರಾದರು, ನನಗೂ ಕಿಟಕಿಯ ಪಕ್ಕದ ಕುರ್ಚಿ ದೊರಕಿದ್ದರಿಂದ ನಮ್ಮ ಗುರುಗಳು ಕೊಟ್ಟಿದ್ದಂತಹ ಪುಸ್ತಕವನ್ನು ಓದುತ್ತ ಕುಳಿತಿದ್ದೆ, ಅಪರಿಚಿತ ವಿದ್ಯಾರ್ಥಿಗಳೇ ಆದರೂ ಎಷ್ಟು ಹೊತ್ತಿನ ತನಕ ಮೌನವಾಗಿಯೇ ಇದ್ದಾರೂ? ಮಧ್ಯಾಹ್ನದವರೆಗೂ ಮೌನ ಮುಂದುವರೆದರೂ ಊಟವಾದ ನಂತರ ಎಲ್ಲರೂ ಪರಿಚಯಗೊಳ್ಳುತ್ತಾ ನಿಧಾನವಾಗಿ ಮಾತು ಪ್ರಾರಂಭಗೊಂಡು ಸಂಜೆಯಷ್ಟರಲ್ಲಾಗಲೇ ತಾರಕಕ್ಕೇರುತ್ತಿತ್ತು. ರೈಲು ಸಂಜೆಯವರೆಗೂ ಪಯಣ ಬೆಳೆಸಿ ಚೆನ್ನೈ ತಲುಪಿತು. ಎಲ್ಲರೂ ರಾತ್ರಿ ಊಟ ಮುಗಿಸಿಕೊಂಡು ದೆಹಲಿಗೆ ಹೊರಡುವ ರೈಲಿಗಾಗಿ ಕಾಯುತ್ತಿದ್ದೆವು ಇದರ ನಡುವೆಯೇ ಮೈವಿವಿ ಯ ಬಿಕಾಂ ರಿಸಲ್ಟ್ ಹೊರೆ ಬಂದಿದ್ದರಿಂದ ಮನೆಯವರಿಗೆ ಫೋನ್ ಮಾಡಿ ತಿಳಿಸಿದ್ದಾಯಿತು. ರೈಲಿನಲ್ಲಿ ನಮ್ಮೆಲ್ಲರದ್ದು ರಿಸರ್ವೇಶನ್ ಟಿಕೆಟ್ ಆಗಿದ್ದರಿಂದ ಯಾವುದೇ ಗೋಜುಗಳಿಲ್ಲದೆ ಟ್ರೈನ್ ಬಂದ ಬಳಿಕ ಅವರವರ ಸೀಟ್ ಸಂಖ್ಯೆಯ ಅನುಸಾರ ಕುಳಿತುಕೊಂಡು ಲಗೇಜ್ ಸರಿ ಮಾಡಿಕೊಳ್ಳುವುದರೊಳಗೆ ಟ್ರೈನ್ ಕೂಗಿ ದೂರದ ಡೆಲ್ಲಿಗೆ ಪಯಣ ಪ್ರಾರಂಭಿಸಿತು. ಎಲ್ಲರೂ ಒಮ್ಮೆ ಮನೆಗೆ ಕರೆ ಮಾಡಿ ವಿಷಯ ಮುಟ್ಟಿಸಿ ಮಲಗಿದರು.

 ಪ್ರತಿದಿನ ಬೆಳಿಗ್ಗೆ ಏಳುವಂತೆ ಐದು ಮೂವತ್ತಕ್ಕೆ ಎಚ್ಚರವಾಯಿತು, ಎದ್ದು ನಿತ್ಯಕರ್ಮಗಳನ್ನೆಲ್ಲ ಮುಗಿಸಿಕೊಂಡು ಬಂದು ಪುಸ್ತಕವನ್ನು ಓದುತ್ತಾ ಕುಳಿತಿದ್ದೆ, ರೈಲಿನೊಳಗೆ ಬೀಸಿ ಬರುತ್ತಿದ್ದ ತಣ್ಣನೆಯ ಗಾಳಿಯ ಮಲಗಿದ್ದವರನ್ನು ಇನ್ನಷ್ಟು ಬೆಚ್ಚಗೆ ಹೋಚ್ಚಿಕೊಂಡು ಮಲಗುವಂತೆ ಮಾಡುತ್ತಿತ್ತು, ಅಂತೂ ನಿಧಾನವಾಗಿ ಒಬ್ಬರೇ ಎದ್ದು ತಿಂಡಿ ಮುಗಿಸುವುದರೊಳಗೆ ಹತ್ತು ಗಂಟೆದಾಟಿತ್ತು, ರೈಲು ಊರು, ತಾಲೂಕು, ಜಿಲ್ಲೆ, ರಾಜ್ಯಗಳ ಗಡಿದಾಟುತ್ತಿದ್ದಂತೆ ಎಲ್ಲರೂ ಫೋನ್ ಗಳಿಗೆ Welcome to our state  ಎಂಬ ಮೆಸೇಜ್ಗಳು ಬರುತ್ತಿದ್ದವು. ನಿಧಾನವಾಗಿ ಪ್ರಾರಂಭಗೊಂಡಂತಹ ವಿದ್ಯಾರ್ಥಿಗಳ ಮಾತುಗಳು ತಾರಕಕ್ಕೇರಿ ಅದು ಹಾಡು, ಅಂತ್ಯಕ್ಷರಿ ಹೀಗೆ ನಾನಾ ರೀತಿಯ ಪ್ರಕಾರಗಳನ್ನು ಪಡೆದು, ಬೋಗಿಯಲ್ಲಿ ಗದ್ದಲವನ್ನು ಸೃಷ್ಟಿಸಿದವು ಇವುಗಳ ನಡುವೆ ದಿನ ಕಳೆದಿದ್ದು ತಿಳಿಯಲಿಲ್ಲ.

 ಮಾರನೆಯ ಬೆಳಿಗ್ಗೆ 10ಗಂಟೆಗೆ ರೈಲು ದೆಹಲಿ ರೈಲ್ವೆ ನಿಲ್ದಾಣವನ್ನು ತಲುಪಬಹುದು ಎಂದು ಭಾವಿಸಿದ್ದೆವು, ರಾತ್ರಿ ಸಾಧಾರಣವಾಗಿಯೇ ಹೊಚ್ಚಿಕೊಂಡು ಮಲಗಿದ್ದ ನಮಗೆ, ಬೆಳಗಿನ ಜಾವ ಸುಮಾರು ನಾಲ್ಕು ಗಂಟೆಗೆ ಶೀತಗಾಳಿ ಬೀಸಲಾರಂಭಿಸಿ ಹೊಚ್ಚಿಕೊಂಡು ಮಲಗಿದ್ದ ಬೆಡ್ ಶೀಟ್ ಒಳಗೆಲ್ಲ ಚಳಿ ತೂರಿ ಎಲ್ಲರ ನಿದ್ದೆ ಕೆಡಿಸಿದ್ದವು, ಬಿಸಿನೀರು,ಇನ್ನಷ್ಟು ಬೆಡ್ ಶೀಟುಗಳು ಬೇಕೆನಿಸುತ್ತಿತ್ತು, 5:00  ಗಂಟೆಯಷ್ಟುರೊಳಗೆ ಟೋಪಿ, ಹ್ಯಾಂಡ್ ಗ್ಲೌಸ್, ಸಾಕ್ಸ್ ಮಾರುವವರನ್ನು ಕಂಡಿದ್ದೇ ತಡ, ಎದ್ದು ನಾಮುಂದು ತಾಮುಂದು ಎಂಬಂತೆ ಎರಡೆರಡು ಜೊತೆ ತೆಗೆದುಕೊಂಡು ಹಾಕಿ ಮತ್ತೊಮ್ಮೆ ಮಲಗಿದರು.

 8 ಗಂಟೆಯಾಗುತ್ತಿದ್ದಂತೆ ಎಲ್ಲರೂ ಚಹಾ ಹೀರಿ ಕುಳಿತುಕೊಂಡಿದ್ದೆವು, ಇನ್ನೇನು ಕೆಲವೇ ಗಂಟೆಗಳಲ್ಲಿ ರೈಲು ಡೆಲ್ಲಿ ರೈಲ್ವೆ ಸ್ಟೇಷನ್ ತಲುಪುತ್ತದೆ ಎಂದು ಖಾತ್ರಿಪಡಿಸಿಕೊಂಡು ಬ್ಯಾಗ್ ಗಳನ್ನು ಸರಿಪಡಿಸಿಕೊಳ್ಳುತ್ತಿದ್ದೆವು. 9 ಗಂಟೆಗೆ ರೈಲು ನಿಲ್ದಾಣವನ್ನು ತಲುಪಿತು ಬ್ಯಾಗ್ ಗಳನ್ನು ಎತ್ತಿಕೊಂಡು ಎಲ್ಲರೂ ಬಸ್ ನಿಲ್ದಾಣದ ಬಳಿ ನಡೆದೆವು. ಬೆಳಕು ಮೂಡಿದ್ದರೂ ಚಳಿಯೇ ಹೆಚ್ಚಾಗಿದ್ದ ಕಾರಣ ಎಲ್ಲರೂ ನಡುಗುತ್ತಿದ್ದೆವು. ಎಲ್ಲರೂ ತಿಂಡಿ ಮುಗಿಸಿಕೊಂಡು ಬಸ್ ಹತ್ತಿ ಕುಳಿತುಕೊಂಡೆವು.

  ಬಸ್ಸ್ ಸ್ವಲ್ಪ ಹೊತ್ತಿನಲ್ಲಿಯೇ ನಗರವನ್ನು ಪ್ರದಕ್ಷಿಣೆ ಹಾಕಿಕೊಂಡು, ಯಾವುದೋ ಫ್ಲೈಓವರ್ ಯನ್ನೆರೀ, ಮತ್ತೆಲ್ಲೋ ಅಂಡರ್ ಗ್ರೌಂಡ್ ನಲ್ಲಿ ಚಲಿಸಿ, ಅನೇಕ ಮೆಟ್ರೋ ಸ್ಟೇಷನ್ ಗಳ ನಡುವೆ ದಾಟಿ, ಇತರ ವಾಹನಗಳ ಹಿಂದೆ ಹೀಗೆ ತಿರುಗಿ ಹಾಗೆ ಹೊರಳಿ, ಎಡಬಲದ ರಸ್ತೆಗಳನ್ನು ದಾಟುತ್ತಾ, ವಾಹನಗಳ ಹಿಂದೆ ಮುಂದಿನವರಷ್ಟೇ ವೇಗವಾಗಿ ಚಲಿಸಿ, ಹಾರ್ನ್ ಹೊಡೆದು, ಹಂಪ್ಸ್ಗಳನ್ನರಿಸಿ, ಎರಡು ನಿಮಿಷಗಳಿಗೊಂದರಂತೆ ನೂರು ಸಿಗ್ನಲ್ ಗಳನ್ನು ದಾಟುತ್ತಾ ಏನಪ್ಪಾ ಇಷ್ಟೆಲ್ಲಾ ವಾಹನಗಳು ಇದೆಯಲ್ಲ ಎಂದುಕೊಂಡು ಒಮ್ಮೆ ನಮ್ಮ ಮೈಸೂರನ್ನು ನೆನಪಿಸಿಕೊಂಡಾಗ ನಮ್ಮೂರೇ ನಮಗೆ ಮೇಲು ಎಂದನಿಸಿತು. ಇಷ್ಟೆಲ್ಲ ವಾಹನಗಳ ನಡುವೆ ನಮ್ಮನ್ನು ಸುರಕ್ಷಿತವಾಗಿ ಕೊಂಡೊಯ್ಯುತ್ತಿದ್ದ ಚಾಲಕನ ಚಾಕ ಚಕ್ಯತೆಯನ್ನು ನಿಜವಾಗಿಯೂ ಮೆಚ್ಚಬೇಕಾದ್ದು.

 ದೇಶದ ರಾಜಧಾನಿಯನ್ನು ಪ್ರಥಮಬಾರಿ ನೋಡುತ್ತಿದ್ದ ನಮಗೆ ಎಲ್ಲೆ ತಲೆಯೆತ್ತಿದರು ಗಗನಚುಂಬಿ ಕಟ್ಟಡಗಳು, ಸರ್ಕಾರಿ ಕಛೇರಿಗಳು, ವಿವಿಧ ಖಾಸಗಿ ಸಂಸ್ಥೆಯ ಮುಖ್ಯ ಕಚೇರಿಗಳು, ಐಷಾರಾಮಿ ಬಂಗಲೆಗಳು, ಅದ್ದೂರಿ ಆಹ್ವಾನ ನೀಡುವ ಹೋಟೆಲ್ ಗಳು, ಎಷ್ಟು ದೂರ ಕಣ್ಣು ಹೊರಳಿಸಿದರು ಊರಬ್ಬದ ಜಾತ್ರೆಗೆ ಸೇರಿದಷ್ಟೇ ಜನದಟ್ಟಣೆ, ಫುಟ್ಪಾತ್ ನ ಸಣ್ಣ ಅಂಗಡಿಗಳು, ಅಂಡರ್ ಗ್ರೌಂಡ್ ಮಳಿಗೆಗಳು, ದಾರಿಹೋಕರು ಪಾನ್ ಪರಾಗ್ ಜಗಿದು ರಸ್ತೆಯಮೇಲೆ ಉಗಿದು ರಸ್ತೆಯಲ್ಲೆಲ್ಲ ಕೆಂಬಣ್ಣಕ್ಕೆ ತಿರುಗಿಸಿರುವ ದೃಶ್ಯ ಎಲ್ಲೆಡೆಯೂ ರಾರಾಜಿಸುತ್ತಿತ್ತು.

 ನಗರದ ಹೊರ ಬರುವಷ್ಟರಲ್ಲಾಗಲೇ ಮಧ್ಯಾಹ್ನ ಕಳೆದಿತ್ತು, ದೂರದಲ್ಲೊಂದು ಮೈಸೂರಿನ ಚಾಮುಂಡಿಬೆಟ್ಟಕ್ಕಿಂತಲೂ ಸ್ವಲ್ಪ ದೊಡ್ಡದಾದ ಬೆಟ್ಟ ಕಂಡ ರೀತಿಯಲ್ಲಿ ಭಾಸವಾಯಿತು, ಬಸ್ ಅದರ ಸಮೀಪ ತಲುಪುತ್ತಿದ್ದಂತೆಯೇ ದುರ್ಗಂಧದ ನಾಥ ಎಲ್ಲರಿಗೂ ಮೂಗು ಮುಚ್ಚುವಂತೆ ಮಾಡಿತು, ಅದು ನಾವು ಗ್ರಹಿಸಿದ ಹಾಗೆ ನೈಸರ್ಗಿಕ ಬೆಟ್ಟವಾಗಿರದೇ ಬೆಟ್ಟವನ್ನೇ ಹೋಲುವ ಡೆಲ್ಲಿ ಜನರು ಬಳಸಿ ಬಿಸಾಕಿದಂತಹ ಕಸದರಾಶಿಯಾಗಿತ್ತು, ಬಸ್ ಚಲಿಸಿ ಹರಿಯಾಣ ತಲುಪುವುದರೊಳಗೆ ಸಂಜೆಯಾಗಿತ್ತು.


ಮುಂದುವರೆಯುವುದು,,,,,,,

10 comments:

  1. ಜೀವನದ ಮುಖ್ಯ, ಮತ್ತು ಮರೆಯಲಾಗದ ಅಧ್ಯಾಯ

    ReplyDelete
  2. ಸವಿ ನೆನಪುಗಳನ್ನು ಅಕ್ಷರ ರೂಪದಲ್ಲಿ ಮೂಡಿಸಿ ನೆನಪಿನ ಸುಂದರ ಪುಟಗಳನ್ನು ಕೆದಕಿ ತೆಗೆದ ನಿನಗೆ ಧನ್ಯವಾದಗಳು.

    ReplyDelete
  3. ನನ್ನ ಜಿವನದಲ್ಲಿ ಎಂದು ಮರೆಯಲಾಗದ ದಿನಗಳು ಅಂದರೆ ಅದು 21ರ ರಾಷ್ಟ್ರೀಯ NSS ಕಾರ್ಯಕ್ರಮದಲ್ಲಿ ಭಾಗವಹಿಸಿ ದ್ದು

    ReplyDelete

  4. ಪ್ರೀತಿಯ ತೇಜು,
    ನಿನ್ನ ಜೀವನೋತ್ಸಾಹ,ಬದುಕಿನ ಬಗ್ಗೆ ನಿಮಗೆ ಇರುವ ಕುತೂಹಲ ನಿನ್ನ ಬರವಣಿಗೆಯಲ್ಲಿ ಕಾಣುತ್ತದೆ.
    ನಿಮಗೆ ಒಳ್ಳೆಯದಾಗಲಿ.ಮುಂದಿನ ದಿನಗಳಲ್ಲಿ ದೇವರು ನಿಮ್ಮ ಎಲ್ಲಾ ಸದ್ಭಯಕೆಗಳನ್ನು ಪೂರೈಸಿ ಕಾಪಾಡಲಿ.

    ReplyDelete
  5. ತುಂಬಾ ಚೆನ್ನಾಗಿದೆ.

    ReplyDelete
  6. ಧನ್ಯವಾದಗಳು ತೇಜು ನಿಮ್ಮ ಅನುಭವಗಳನ್ನು ಈ ಬರವಣಿಗೆಯ ಮೂಲಕ ಪ್ರಸ್ತುತ ಪಡಿಸಿದಕ್ಕೆ ಹಾಗೂ ನಮ್ಮೊಂದಿಗೆ ಹೊಂಚಿಕೊಂಡಿದ್ದಕ್ಕೆ ಇನ್ನೂ ಹೆಚ್ಚು ಹೆಚ್ಚು ತಿಳಿಸಬೇಕೆಂದು ಆಶಿಸುತ್ತೇನೆ.

    ReplyDelete
  7. ಉತ್ತಮವಾಗಿದೆ ತೇಜು

    ReplyDelete
  8. Hi,Tejraj.Really praise worthy effort. I was expecting this kind of write up since last four years. You full filled my long cherished desire. Thanks a lot. Send it to some newspaper as it can inspire some one somewhere. Rekha Gubbi

    ReplyDelete