ಕಾಲೇಜಿನ ಗ್ರೂಪ್ ಡಿಸ್ಕಶನ್ ಮುಗಿಸಿ ಮನೆ ಸೇರಿದಾಗ ರಾತ್ರಿ 8.30 ಆಗಿತ್ತು, ಹೊಟ್ಟೆ ನಿಧಾನವಾಗಿ ಹಸಿಯಲಾರಂಭಿಸಿತ್ತು. ಚಪ್ಪಲಿ ಬಿಡುವ ಜಾಗದಲ್ಲಿ ಯಾವುದೋ ಒಂದು ಹೆಣ್ಣುಮಗುವಿನ ಪುಟ್ಟ ಪಾದರಕ್ಷೆಗಳು ಕಾಣಿಸಿದವು. ಆಜುಬಾಜಿನ ಮನೆಯ ಮಕ್ಕಳದಿರಬಹುದೆನಿಸಿತು. ಕೈ ಕಾಲು ತೊಳೆದು ಒಳಗೆ ಪ್ರವೇಶಿಸಿದೆ ಆಟವಾಡುತ್ತಿದ್ದ ಅಕ್ಕನ ಮಗಳು ಓಡಿಬಂದು ಅಪ್ಪಿಕೊಂಡಳು, ಇಷ್ಟು ಹೊತ್ತು ನೀನು ಎಲ್ಲಿಗೆ ಹೋಗಿದ್ದೆ? ನಾನು ಬಂದಿದ್ದು ನಿನಗೆ ತಿಳಿಯಲಿಲ್ಲವೇ? ಎಂದು ಮಾತನಾಡಿಸಿದಳು.
ಸಾಮಾನ್ಯವಾಗಿ ಮನೆಗೆ ಬಂದವರ ಕುಶಲೋಪರಿಯನ್ನು ವಿಚಾರಿಸುವಂತೆ ಹೇಗಿದ್ದೀಯಾ? ಯಾವಾಗ ಬಂದೆ? ಯಾರು ಜೊತೆ ಬಂದೆ? ಶಾಲೆ ಮುಗಿಯಿತಾ? ಇನ್ನು ಎಷ್ಟು ದಿನ ರಜಾ? ಎಷ್ಟನೇ ಕ್ಲಾಸು? ಯಾವ ಸ್ಕೂಲು? ಸ್ಕೂಲ್ ಡೇಲಿ ಯಾವ ಡ್ಯಾನ್ಸ್ ಮಾಡಿದ್ದೆ? ಸ್ಕೂಲಲ್ಲಿ ನಿನಗೆ ಎಷ್ಟು ಜನ ಫ್ರೆಂಡ್ಸ್ ಇದ್ದಾರೆ? ಈ ಮಾತುಗಳ ನಡುವೆಯೇ ತೊಟ್ಟಿದ್ದ ಬಟ್ಟೆ ಬದಲಿಸಿದ್ದಾಯಿತು.
ಮಾವ ನಿಮಗೆ ಹೊಸ ಫ್ರೆಂಡನ್ನು ಪರಿಚಯ ಮಾಡಿಸಿ ಕೊಡುತ್ತೇನೆಂದು ಮನೆಯ ಹೊರ ಕರೆದುಕೊಂಡು ಹೋದಳು ಯಾರಿರಬಹುದೆಂದು ಯೋಚಿಸುತ್ತಿದ್ದಾಗಲೇ ಪುಟ್ಟ ನಾಯಿ ಮರಿಯನ್ನು ಎತ್ತಿ ತೋರಿಸಿದಳು. ಈಕೆ ಮನೆಗೆ ಬಂದಿದ್ದು ಸಂಜೆ ಆಗಿದ್ದರಿಂದ ನಾಯಿಮರಿಯ ಜೊತೆ ಆಟಮಾಡಿಕೊಂಡಿದ್ದಳು ಇದಕ್ಕೆ ಸ್ವೀಟಿ ಎಂದು ಕೂಡ ನಾಮಕರಣ ಮಾಡಿದ್ದಳು. ಅಯ್ಯೋ ಪಾಪ ಇದಕ್ಕೆ ಹೊಟ್ಟೆ ಹಸಿವಾಗಿರಬಹುದೆಂದು ಯಾವುದೋ ಪ್ಲಾಸ್ಟಿಕ್ ಡಬ್ಬವನ್ನು ಹುಡುಕಿ ಹಾಲನ್ನು ಸುರಿದಳು. ಅದೂ ಕುಡಿದು ಇವಳೊಂದಿಗೆ ಆಟವಾಡುತ್ತಿತ್ತು,ನಂತರ ಒಂದು ಗೋಣಿಚೀಲವನ್ನು ಹುಡುಕಿ ತಟ್ಟಿ ಮಲಗಿಸುತ್ತಿದ್ದಳು.
ಅಮ್ಮು ನಾಯಿಯನ್ನು ಹಾಗೆಲ್ಲ ಮುಟ್ಟಬಾರದು ಹೋಗಿ ಅದನ್ನು ಹೊರಗೆ ಬಿಟ್ಟು ಕೈ ತೊಳೆದುಕೊಂಡು ಬಾ ಎಂದೆ, ಅದಕ್ಕವಳು ಸಮ್ಮತಿಸಿ ಹೊರಗೆ ಬಿಟ್ಟು ಬಂದಳು. ಅನೇಕ ವರ್ಷಗಳಿಂದ ನಾಯಿಯನ್ನು ಕಾಂಪೌಂಡ್ ಒಳಗೆ ಸೇರಿಸಿದ ನಮ್ಮ ಮನೆಯವರು ಈಕೆಯ ಆಟದಲ್ಲಿ ಮರೆತಿದ್ದರು.
ಸಮಯವಾದ್ದರಿಂದ ಊಟಕ್ಕೆ ಎಲ್ಲರೂ ಕುಳಿತೆವು ಊಟದ ಮಧ್ಯದಲ್ಲಿ ನೀನು ಮೊದಲು ನಾನು ಮೊದಲು ಎಂಬ ಸಣ್ಣ ಪುಟ್ಟ ಆಟಗಳು ನಡೆದವು. ಊಟವಾದ ಬಳಿಕ ಆಕೆಗೆ ಮತ್ತದೇ ನಾಯಿಯ ಚಿಂತೆ, ಮಾವ ನಾಯಿಮರಿಯ ಪೇರೆಂಟ್ಸ್ ಕೂಡ ಇದರೊಟ್ಟಿಗೆ ಇದ್ದಿದ್ದರೆ ಒಟ್ಟಿಗೆ ಮಲಗಿಸಬಹುದು ಎಂದು ಹೇಳಿದ ಮಾತನ್ನು ಕೇಳಿ ಎಲ್ಲರೂ ನಕ್ಕೆವು.ಊಟ ಮುಗಿದು ವಾಕಿಂಗ್ ಮಾಡಿ ಎಲ್ಲರೂ ಮಲಗಲು ಸಿದ್ಧರಾಗುತ್ತಿದ್ದರು, ಸಂಜೆಯಿಂದ ಆಟವಾಡಿದ್ದರಿಂದ ಈಕೆಗೂ ನಿದ್ದೆ ಚೆನ್ನಾಗಿ ಹತ್ತಿತು, ರಾತ್ರಿಯೆಲ್ಲ ನಾಯಿಯದೆ ಕನವರಿಕೆ.
ಬೆಳಿಗ್ಗೆ ವಾಕಿಂಗ್ ಮುಗಿಸಿ ಮನೆಗೆ ಬರುವಷ್ಟರಲ್ಲಿ ಎದ್ದು ಏನನ್ನೋ ಹುಡುಕುತ್ತಿದ್ದಳು, ನಾಯಿಯನ್ನೇ ಹುಡುಕುತ್ತಿರಬಹುದೆಂದು ಭಾವಿಸಿದ್ದು ನಿಜವಾಗಿತ್ತು, ಮನೆಯಲ್ಲಿ ಎಲ್ಲರನ್ನು ವಿಚಾರಿಸಿದಳು, ಅಕ್ಕಪಕ್ಕದ ಸ್ನೇಹಿತರನ್ನು ವಿಚಾರಿಸಿದಳು, ಸುತ್ತಮುತ್ತಲ ಸ್ನೇಹಿತರೊಟ್ಟಿಗೆ ತಾನು ಹೋಗಿ ಹುಡುಕಿದಳು, ಎಲ್ಲಿಯೂ ನಾಯಿ ಸಿಗಲಿಲ್ಲವಾದ್ದರಿಂದ ಬೇಸರಗೊಂಡಳು. ಅಷ್ಟರಲ್ಲಾಗಲೇ ಮಗಳನ್ನು ಮನೆಗೆ ಕರೆದುಕೊಂಡು ಬಾ ಎಂದು ಅಕ್ಕನ ಕರೆ ಬಂದಿತ್ತು. ಅಮ್ಮು ಇಂದು ಇಲ್ಲಿಯೇ ಉಳಿ, ಸಂಜೆ ನಾನೇ ಚಾಕಲೇಟ್ ತಂದು ಕೊಡುತ್ತೇನೆ, ನಾಳೆ ನಾನೇ ಕರೆದುಕೊಂಡು ಹೋಗಿಬಿಡುತ್ತೇನೆ ಎಂದು ಹೇಳಿ ಕಾಲೇಜಿಗೆ ನಡೆದೆ.
ಸಂಜೆ ನಾನು ಹಿಂತಿರುಗುವುದನ್ನು ಕಾಯುತ್ತಿದ್ದಳು, ದೂರದಿಂದಲೇ ಬರುವುದನ್ನು ಗ್ರಹಿಸಿ ಮತ್ತದೇ ನಾಯಿಮರಿಯೊಂದಿಗೆ ಆಟವಾಡುತ್ತಿರುವುದನ್ನು ಬಿಟ್ಟು ಓಡಿಬಂದು ಅಪ್ಪಿಕೊಂಡುಳು, ನಿರೀಕ್ಷಿಸಿದ್ದ ಚಾಕ್ಲೇಟ್ ಕೈಸೇರಿದಾಗ ಮತ್ತಷ್ಟು ಸಂತೋಷಗೊಂಡಳು,ಇತರರಿಗೂ ಹಂಚಿ ತಾನು ತಿಂದಳು, ನಂತರ ಸೈಕಲ್ ಹೊಡೆದು, ಶಟಲ್ ಕಾಕ್ ಆಡಿ ಕೈ ಕಾಲು ತೊಳೆದು ಊಟಕ್ಕೆ ಕುಳಿತೆವು, ಈಕೆಗೆ ಇಷ್ಟವಾದ ಅಡುಗೆಯೂ ತಯಾರಾಗಿ ಊಟ ಮುಗಿದಿತ್ತು. ಇಷ್ಟರಲ್ಲಾಗಲೇ ಮಗಳನ್ನು ಕರೆದುಕೊಂಡು ಬರುವಂತೆ ಅಕ್ಕನ ಕರೆ ಬಂದಿತ್ತು ಬೆಳಿಗ್ಗೆ ಕರೆದುಕೊಂಡು ಬರುತ್ತೇನೆಂದು ಹೇಳಿ ಮಲಗಿದೆ.
ಬೆಳಕರೆದು ಸ್ನಾನ, ಕಾಫಿ, ತಿಂಡಿಯು ಮುಗಿದಿತ್ತು, ಎರಡು ದಿನ ನಮ್ಮೊಟ್ಟಿಗೆ ಆಟವಾಡಿಕೊಂಡಿದ್ದ ಅಕ್ಕನ ಮಗಳು ನಮ್ಮೆಲ್ಲ ಚಿಂತೆಗಳನ್ನು ಮರೆಸಿದ್ದಳು, ಈಕೆಯ ಆಟದಲ್ಲಿ ನಾವು ಕೂಡ ಮಕ್ಕಳಾಗಿದ್ದೆವು, ಇನ್ನೆರಡು ದಿನ ಮನೆಯಲ್ಲಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂಬುವುದು ಎಲ್ಲರ ಭಾವನೆಯಾಗಿತ್ತು, ಈಕೆಗೂ ತಾನು ಆಟವಾಡಿಸುತ್ತಿದ್ದಂತಹ ನಾಯಿಮರಿ, ಹಿಂದಿನ ದಿನ ಕಂಡಂತಹ ಪುಟ್ಟ ಪಕ್ಷಿಗಳು, ಸುತ್ತಮುತ್ತಲ ಮನೆಯ ಸ್ನೇಹಿತರನ್ನು ಬಿಟ್ಟು ಹೋಗಲು ಮನಸ್ಸಿರಲಿಲ್ಲ, ಹೇಗೋ ಬಟ್ಟೆ ಬದಲಿಸಿ ಹೊರಡಲು ಸಿದ್ಧವಾಗಿದ್ದಾಯ್ತು, ಬೈಕ್ ಸ್ಟಾರ್ಟ್ ಮಾಡಿದೆ, ಶರ್ಟನ್ನು ಗಟ್ಟಿಯಾಗಿ ಹಿಡಿದು ಹಿಂದೆ ಕುಡಿದುಕೊಂಡುಳು, ಇವಳು ಆಟವಾಡಿಸಿದ ನಾಯಿಮರಿ ಕುಯ್ಯಿ ಕುಯ್ಯಿ ಎನ್ನುತ್ತಿತ್ತು, ಎಲ್ಲರಿಗೂ ಟಾಟಾ ಹೇಳಿ, ಸ್ವೀಟಿ ಬಾಯ್ ಎಂದು ಹೇಳಿದಳು, ಬೈಕ್ ನಿಧಾನವಾಗಿ ಮುನ್ನಡೆಯುತ್ತಿತ್ತು ನಾಯಿಮರಿ ಹಿಂಬಾಲಿಸುತ್ತಿತ್ತು.
ಬೈಕ್ ಚಲಿಸುತ್ತಿತ್ತು ಮನೆಗೆ ಇನ್ನಷ್ಟು ಹತ್ತಿರವಾಗುತ್ತಲಿತ್ತು, ಈಕೆಯ ಮಾತು ಮುಂದುವರೆದಿತ್ತು, ಮಾವ ನಾಯಿಮರಿಯನ್ನು ಚೆನ್ನಾಗಿ ನೋಡಿಕೋ, ಹಾಲು ಬಿಸ್ಕೆಟ್ಟನ್ನು ಸರಿಯಾದ ಸಮಯಕ್ಕೆ ಹಾಕು, ವಾರಕ್ಕೊಮ್ಮೆ ಬೆಚ್ಚಗಿನ ನೀರಿನಲ್ಲಿ ಸ್ನಾನಮಾಡಿಸು, ಗುಬ್ಬಚ್ಚಿಗಳಿಗೆ ಅಕ್ಕಿಯನ್ನು ಆಕು, ಮುಂದಿನ ಸಲ ಬಂದು ನೋಡುತ್ತೇನೆ, ಮಾವ ನಮ್ಮ ಮನೆಗೆ ಬಂದು ಒಂದೆರಡು ದಿನ ಉಳಿದುಕೋ ಎಂದು ಹೇಳಿದಳು, ಮೊದಲೇ ಈಕೆಯನ್ನು ಕಳುಹಿಸಿಕೊಡಲು ಮನಸ್ಸಿರಲಿಲ್ಲ ಅದರೊಟ್ಟಿಗೆ ಈ ರೀತಿಯಾದಂತಹ ಮಾತುಗಳು ನನ್ನನ್ನು ಮೂಕಗೊಳಿಸಿ ಮನಸನ್ನು ಭಾರವಾಗಿಸಿ, ನೇತ್ರಗಳನ್ನು ಹಸಿಯಾಗಿದ್ದವು.
ಅಂತೂ ಮನೆ ತಲುಪಿದ್ದಾಯಿತು, ಗಂಟಲು ಒಣಗಿ ಮೌನ ಇನ್ನಷ್ಟು ಹೆಚ್ಚಾಗಿ ಮನಸ್ಸು ಭಾರವೆನಿಸಿತು. ಈಗಲೂ ಅವಳನ್ನು ಬಿಟ್ಟು ಹೋಗುವ ಮನಸ್ಸಿರಲಿಲ್ಲ, ಅಕ್ಕ ಮಾತನಾಡಿಸುತ್ತಿದ್ದರು, ಕಾಲೇಜಿಗೆ ಸಮಯವು ಆಗಿತ್ತು, ಮುಂದಿನ ರಜಕ್ಕೆ ಕರೆದುಕೊಂಡು ಬರುವಂತೆ ಹೇಳಿ ಹೊರನಡೆದೆ, ಈಕೆಯು ನನಗೆ ಟಾಟಾ ಮಾಡಿ ಕಳುಹಿಸಿಕೊಟ್ಟಳು. ಅಂದಿನ ದಿನದ ಕಾಲೇಜಿನ ಪಾಠ ಪ್ರವಚನಗಳೆಲ್ಲವೂ ಮೌನದಲ್ಲಿಯೇ ಮುಂದುವರೆದಿತ್ತು.
ಇದೊಂದೇ ಘಟನೆ ಮಕ್ಕಳ ನಿಷ್ಕಲ್ಮಶ ಪ್ರೀತಿಯ ಭಾವ ಅರ್ಥವಾಗುವಂತೆ ಮಾಡಿತ್ತು. ಅದಕ್ಕೋಸ್ಕರವಾಗಿಯೇ ಹೇಳುವುದೇನೋ ಮಕ್ಕಳು ದೇವರ ಸಮಾನರೆಂದು, ಇವರೇ ಅಲ್ಲವೆ ನಿಜವಾದ ವಿಶ್ವಮಾನವರು.
ಹುಟ್ಟುತ್ತಾ ಪ್ರತಿಯೊಂದು ಮಗುವು ವಿಶ್ವಮಾನವನೆ, ಬೆಳೆಯುತ್ತಾ ಸಂಬಂಧವೆಂಬ ಕೋಟೆಯ ಪರಿಧಿಯೊಳಗೆ ಬೆಳೆಯುತ್ತದಷ್ಟೇ. ಸಂಬಂಧಗಳು ಎಂಬುದು ಮಾನವನೇ ಸೃಷ್ಟಿಸಿಕೊಂಡ ಒಂದು ಅದ್ಭುತ ಬಂಧ, ಇದು ನಾವು ಇರುವ ವಾಸ್ತವದ ಸಂಕೇತವಾಗಿದೆ, ಕೆಲವು ಬಾರಿ ನಮ್ಮ ಪೂರ್ವಜರ ಮೂಲವನ್ನು ಹುಡುಕುತ್ತಾ ಹೋದರೆ ನಾಲ್ಕರಿಂದ ಐದು ತಲೆಮಾರುಗಳ ಹಿಂದಿನವರೆಗೆ ಮಾಹಿತಿ ತಿಳಿಯುತ್ತದೆ ಇದರ ಹಿಂದಿನದನ್ನು ಹುಡುಕುವ ಕೆಲಸ ತ್ರಾಸವೆನಿಸುತ್ತದೆ. ಒಟ್ಟಿನಲ್ಲಿ ಅಣ್ಣ- ತಮ್ಮ, ಅಕ್ಕ- ತಂಗಿ, ತಂದೆ-ತಾಯಿ, ತಾತ- ಅಜ್ಜಿ, ದೊಡ್ಡಪ್ಪ-ದೊಡ್ಡಮ್ಮ,ಚಿಕ್ಕಪ್ಪ-ಚಿಕ್ಕಮ್ಮ, ಅತ್ತೆ- ಮಾವ, ಭಾವ- ಮೈದುನ, ಅಳಿಯ- ಸೊಸೆ, ಮಗ- ಮಗಳು ಎಂಬ ಸಂಬಂಧಗಳು ಒಗ್ಗಟ್ಟನ್ನು ಪ್ರದರ್ಶಿಸುವಂತಹದ್ದಾಗಿದೆ. ಒಬ್ಬರಿಗೆ ಮತ್ತೊಬ್ಬರು ಸಹಾಯವನ್ನು ಮಾಡಿಕೊಂಡು ಜೀವನವನ್ನು ನಡೆಸುವಂತಹ ಅದ್ಭುತ ಕಲೆಯಾಗಿದೆ.
ಈ ಬಾರಿಯ ಬೇಸಿಗೆರಜಕ್ಕೆ ಅಕ್ಕನ ಮಗಳ ಜೋತೆಗೆ ಮಗನು ಬಂದಿದ್ದ ನಮಗೆ ಸಂಭ್ರಮ ಇಮ್ಮಡಿಸಿತ್ತು, ಒಂದೆರಡು ದಿನ ಉಳಿಸಿಕೊಳ್ಳೋಣವೆಂದು ಭಾವಿಸಿದ್ದೆ ಆದರೆ ಕರೋನಾದ ಕಾರಣಾಂತರಗಳಿಂದ ಆಗಲಿಲ್ಲ, ಅವರಿದ್ದ ಸ್ವಲ್ಪ ಹೊತ್ತನ್ನು ಖುಷಿಯಿಂದ ಕಳೆದಿದ್ದಾಯಿತು. ಮನೆಯ ಸುತ್ತ ಒಂದು ಪ್ರದಕ್ಷಿಣೆಯನ್ನು ಹಾಕಿ ನಾಯಿಯನ್ನು ಹುಡುಕಿದಳು ಅವಳು ಹೋದ ಒಂದೆರಡು ದಿನಕ್ಕೆ ಆ ನಾಯಿಮರಿಯೂ ಕೂಡ ಓಡಿಹೋಗಿತ್ತು, ಅದೇನೇ ಇರಲಿ ಮಕ್ಕಳ ಮುಗ್ಧತೆ ನಮಗೆ ತಿಳಿಯದ ಹಾಗೆ ಸಂಬಂಧವನ್ನು ಅರ್ಥಮಾಡಿಸಿದ್ದವು. ನಾವು ಚಿಕ್ಕವರಲ್ಲಿ ನೆಂಟರಿಷ್ಟರ ಮನೆಯಲ್ಲಿ ಉಳಿದಾಗ ಅವರಿಗೂ ಹೀಗೆನಿಸಿತೇನೋ, ಇದೆಲ್ಲವೂ ಕಾಲಚಕ್ರದ ಕೊಡುಗೆ.
ಕಾಲ ಉರುಳಿದಂತೆ ಕಾಲಚಕ್ರದಲ್ಲಿ ನಾವು ಲೀನವಾಗುತ್ತೇವೆ, ಆದರೆ ಮಾನವ ಕಲ್ಪಿತ ಈ ಸಂಬಂಧಗಳು ಮುಂದಿನ ತಲೆಮಾರುಗಳಿಗೆ ಮುಂದುವರೆಯುತ್ತಾ ಹೋಗುತ್ತದೆ.
ಧನ್ಯವಾದಗಳು.

True relationship stay forever its not imagination good one teju
ReplyDeleteVery nice
ReplyDeleteNice experience with family story
ReplyDeleteNice
ReplyDeleteGood one teju
ReplyDelete👌👌
ReplyDeleteSuper teju
ReplyDeleteEvery possibility to become columnist try for it
ReplyDeleteEvery possibility to become columnist try for it
ReplyDeleteHi Tejraj.Really praise worthy. I was expecting this kind of write up since our return. You full filled the desire. Thanks a lot.It inspires some one,some where- sending it to some newspaper.
ReplyDelete