-ಎಸ್ ಪಿ ತೇಜರಾಜು.
ಮನಸ್ಸಿನ ಮನೆಯೆಂಬ
ಕನಸಿನ ಕಟ್ಟಡ ಇನ್ಯಾರದೋ
ಮನೆಯಲ್ಲಿ ಮನೆಮಾಡಿದೆ.
ಆಸೆಯ ಎರಡಕ್ಷರವು
ಹಣವೆಂಬ ವಾಸ್ತವ ಸೇರಿ
ನಿರಾಸೆಯ ದ್ಯೋತಕವಾಗಿ
ನನ್ನ ಮನಸೇರಿದೆ.
ಕೂಸಿನ ನಗುವು
ಬೆಳೆಸಿದವರ ನೋವು
ಅಜ್ಜಿಯರ ಹಾಡು
ಬಂಧುಮಿತ್ರರ ಬಂಧನದ ಬೇಡಿ
ಅಳಿಸಿಹೋಗಿದೆ
ನನ್ನ ಮನವ ಅಳಿಸಿಹೋಗಿದೆ.
ಮಳೆ ಹನಿಯ ಸದ್ದು
ಕಾಲ್ಗೆಜ್ಜೆ ನಾದ
ಒರಳು ಕಲ್ಲಿನ ಗುಡುಗುಡು
ಮಾತು ಮೆದುವಾಗಿದೆ
ನನ್ನ ಮನಸ್ಸನ್ನು ಹಸಿ ಮಾಡಿದೆ.
ಪಶುವಿನ ಮೊರೆತ
ಬೆರಣಿ ಒಲೆಯ ಹೊಗೆಯ ಕಾಟ
ತೊಲೆಯ ನಡುವೆ ಹಾಕಿದ
ಜೋಗುಳದ ಮಾಟ ಮಂಕಾಗಿದೆ
ಚಿಮಣಿ ದೀಪದ ಜೊತೆಗೆ ಹಾರಿಹೋಗಿದೆ
ಮತ್ತೊಂದು ಮದುವೆಗೆ
ಸಿಂಗಾರಗೊಂಡು ತನ್ನ
ಕೊಳ್ಳುವವರಿಗೆ ಕಾಯುತ್ತಾ ನಿಂತಿದ್ದೆ...
-ದಶಾನನ.
ಭಾವ ಸಂಯೋಜಿತ ಜೀವನವನ್ನು ನಡೆಸುವುದೇ ಮಾನವನ ಒಂದು ಅದ್ಭುತ ಜೀವನಶೈಲಿಯಾಗಿದೆ. ಹುಟ್ಟುತ್ತಾ ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಎಂದು ಪ್ರಾರಂಭಗೊಳ್ಳುವ ಪ್ರತಿಯೊಬ್ಬ ವ್ಯಕ್ತಿಯು ತಾನು ಮುಂದೆ ಓದಲಿಚ್ಚಿಸುವ ಕ್ಷೇತ್ರಗಳಲ್ಲಿ ಗುರುಗಳನ್ನು ಕಾಣುತ್ತಾರೆ. ಇಲ್ಲಿ ಗುರುಗಳು ಕೇವಲ ಬೋಧಕರಾಗಿರದೆ ಆದರ್ಶ ವ್ಯಕ್ತಿಗಳು ಕೂಡ ಆಗಿರುತ್ತಾರೆ. ಗುರುಗಳ ಸಹಾಯದಿಂದ ನಮ್ಮ ಜ್ಞಾನಭಂಡಾರವನ್ನು ಹೆಚ್ಚಿಸುವುದರ ಜೊತೆಗೆ ನಾವು ಮುಂದೆ ಕೆಲಸ ಮಾಡುವಂತಹ ಕಾರ್ಯಕ್ಷೇತ್ರಕ್ಕೆ ಬೇಗ ಹೊಂದಿಕೊಳ್ಳಲು ಸಹಾಯವಾಗುತ್ತದೆ. ಒಟ್ಟಿನಲ್ಲಿ ದೊಡ್ಡಮಟ್ಟದ ಸ್ಥಾನದಲ್ಲಿ ಹೊರಹೊಮ್ಮಿದ ವ್ಯಕ್ತಿಯೂ ಕೂಡ ತನ್ನ ಜೀವಿತಾವಧಿಯ ಕೊನೆಯವರೆಗೂ ತಾನು ಓದಿದಂತಹ ಸಂಸ್ಥೆ ಹಾಗೂ ಗುರುಗಳನ್ನು ಸ್ಮರಿಸುತ್ತಲೇ ಇರುತ್ತಾರೆ.
ಪ್ರತಿಯೊಬ್ಬರೂ ಕೂಡ ತಾವು ಬೆಳೆದಂತಹ ಮನೆ, ಓದಿದಂತಹ ಸಂಸ್ಥೆ, ಕೆಲಸ ಮಾಡಿದ ಸ್ಥಳಗಳಲ್ಲಿ ಒಂದು ರೀತಿಯ ಭಾವನೆಗಳು ಬೆರೆತುಕೊಂಡಿರುತ್ತವೆ. ಅಜ್ಜಿಗೆ ಅವರ ಅಜ್ಜಿಯವರು ಕೊಟ್ಟಂತಹ ಕೆಲವು ಅಮೂಲ್ಯ ಕಾಣಿಕೆಗಳನ್ನು ಇಂದಿಗೂ ಹೇಗೆ ಕಾಪಾಡಿಕೊಂಡು ಬಂದಿದ್ದಾರೆಯೋ, ತಾತನಿಗೆ ಅವರ ತಲೆಮಾರುಗಳಿಂದ ಬಂದಂತಹ ಮನೆ, ಜಮೀನುಗಳನ್ನು ಇಂದಿಗೂ ಕಾಪಾಡಿಕೊಂಡು ಬಂದಿರಲು ಮೂಲ ಕಾರಣ ಇದೆ ಭಾವಸಂಯೋಜಿತ ಜೀವನಶೈಲಿಯೇ ಆಗಿದೆ.
ಇಷ್ಟೆಲ್ಲಾ ಭಾವನೆಗಳು ಇರುವುದರಿಂದಲೇ ಪ್ರತಿಯೊಬ್ಬರೂ ಕೂಡ ತಾನೊಂದು ಸೂರು ಕಟ್ಟಬೇಕೆಂದು ಹಂಬಲಿಸುವುದೇನೋ. ಅವರ ಸಾಮರ್ಥ್ಯಕ್ಕೆ ತಕ್ಕ ಹಾಗೆ ಅವರವರ ಕನಸಿನ ಸೂರು ವಿನ್ಯಾಸಗೊಳ್ಳುತ್ತಾ ಹೋಗುತ್ತದೆ. ಅವರು ಆಸ್ತಿಕರೇ ಆಗಿರಲಿ ನಾಸ್ತಿಕರೇ ಆಗಿರಲಿ, ವಾಸ್ತುವನ್ನು ನಂಬುವರೆ ಆಗಿರಲಿ ಅಥವಾ ನಂಬದವರೇ ಆಗಿರಲಿ, ಗೃಹಪ್ರವೇಶ ಮಾಡಿದ ಬಳಿಕವೇ ಮನೆಯಲ್ಲಿ ವಾಸಿಸುವವರಾಗಲಿ ಅಥವಾ ಹಾಗೆಯೇ ವಾಸಿಸುವವರಾಗಲಿ ಒಟ್ಟಿನಲ್ಲಿ ಸೂರು ನೆಲೆಗೊಳ್ಳುತ್ತದೆ.
ಒಂದು ಪ್ರದೇಶ ಮತ್ತೊಂದು ಪ್ರದೇಶಕ್ಕೆ ಹೇಗೆ ಭೌಗೋಳಿಕವಾಗಿ ವಿಭಿನ್ನವಾಗಿರುತ್ತದೆ ಅದೇ ರೀತಿ ಮನೆಗಳ ವಿನ್ಯಾಸವು ಕೂಡ ವಿಭಿನ್ನವಾಗಿರುತ್ತದೆ. ಮಲೆನಾಡಿನ ಬೆಟ್ಟಗುಡ್ಡಗಳ ನಡುವೆ ಅಡಕೆ, ಬಾಳೆ, ಏಲಕ್ಕಿ, ಕಾಫಿ ತೋಟಗಳ ಮಧ್ಯದಲ್ಲಿ ವಿಶಾಲ ಪ್ರಾಂಗಣಉಳ್ಳ ಎರಡು ಮೂರು ಅಂತಸ್ತಿನ ಮನೆಗಳೇ ಆಗಿರಲಿ, ಕರಾವಳಿ ತೀರದ ತೆಂಗಿನತೋಟದ ಮಧ್ಯದ ವಿಶಾಲ ಮನೆಯೇ ಆಗಿರಲಿ, ಬಯಲುಸೀಮೆಯ ಜಗಲಿಕಟ್ಟೆ ಮನೆಗಳೇ ಆಗಿರಲಿ, ಉತ್ತರ ಕರ್ನಾಟಕದ ಕಲ್ಲಿನಕೋಟೆ ಮನೆಗಳೇ ಆಗಿರಲಿ, ಕಾಕನಕೋಟೆ ಸುತ್ತಮುತ್ತಲಿನ ಹಾಡಿ ರೀತಿಯ ಮನೆ ನಿರ್ಮಾಣ ವಿಭಿನ್ನವಾಗಿರುತ್ತದೆ.
ಮನೆಗಳ ವಾಸ್ತುವಿನ್ಯಾಸ ಪ್ರದೇಶದಿಂದ ಪ್ರದೇಶಕ್ಕೆ ಹೇಗೆ ವಿಭಿನ್ನವಾಗಿರುತ್ತದೆ ಅದೇ ರೀತಿ ದೇವಾಲಯಗಳ ವಾಸ್ತು ವಿನ್ಯಾಸವು ಕೂಡ ವಿಭಿನ್ನವಾಗಿರುತ್ತದೆ. ಐಹೊಳೆ ಪಟ್ಟದಕಲ್ಲಿನ ದೇವಾಲಯಗಳ ವಾಸ್ತು ವಿನ್ಯಾಸವೇ ಆಗಿರಲಿ, ಬೇಲೂರು ಹಳೇಬೀಡು ದೇವಾಲಯದ ಸೂಕ್ಷ್ಮ ಕೆತ್ತನೆಗಳ ದೇವಾಲಯಗಳೇ ಆಗಿರಲಿ, ಮಲೆನಾಡು ಹಾಗೂ ಕರಾವಳಿ ಭಾಗದ ಬೃಹತ್ ದೇವಾಲಯಗಳಮೇಲಿನ ನಯವಾದ ಕಾವಿಕಲೆಯ ರಚನೆಗಳೇ ಆಗಿರಲಿ ವಿಭಿನ್ನವಾಗಿರುತ್ತದೆ. ಇದರೊಟ್ಟಿಗೆ ದಕ್ಷಿಣ ಭಾರತದ ಅರಮನೆ ವಾಸ್ತು ವಿನ್ಯಾಸದ ಶೈಲಿಯು ಉತ್ತರಭಾರತದ ಅರಮನೆ ನಿರ್ಮಾಣಕ್ಕಿಂತ ವಿಭಿನ್ನವಾಗಿರುತ್ತದೆ. ಅದೇನೇ ಇರಲಿ ಕಾಲ ಉರುಳಿದಂತೆ ವಾಸ್ತು ವಿನ್ಯಾಸದಲ್ಲಿ ಅನೇಕ ಬದಲಾವಣೆಗಳು ಬಂದು ಇಂದು ಅತ್ಯಾಧುನಿಕ ತಂತ್ರಜ್ಞಾನಕ್ಕೆ ತಕ್ಕ ಹಾಗೆ ಹಾಗೂ ಐಷಾರಾಮಿ ಜೀವನಕ್ಕೆ ಹೊಂದಿಕೊಳ್ಳುವಂತೆ ವಾಸ್ತು ಮಾರ್ಪಟ್ಟಿರುವುದೇನು ಸುಳ್ಳಲ್ಲ.
ಭೂಮಿಯು ಪ್ರಕೃತಿಮಾತೆ ಕೊಟ್ಟಂತಹ ಒಂದು ಅದ್ಭುತ ಕಾಣಿಕೆ. ಇದು ಹಿಂದೆ ಯಾರ ಸ್ವತ್ತು ಆಗಿರಲಿಲ್ಲ ಸಾಗುವಳಿಗಾಗಿ ಆದಿಮಾನವ ಕಾಡು ಕಡಿದು ಆಹಾರಧಾನ್ಯವನ್ನು ಬೆಳೆದುಕೊಂಡು ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗುತ್ತಿದ್ದ. ನಾಗರಿಕತೆಯ ಬೆಳವಣಿಗೆ, ರಾಜರಾಳ್ವಿಕೆ, ನಗರಗಳ ಬೆಳವಣಿಗೆಯಿಂದಾಗಿ ಭೂಮಿಯು ಮಾನವನ ಹೆಸರಿಗೆ ಹಸ್ತಾಂತರಿಸಲಾಯಿತು. ಇದೇ ಮುಂದೆ ಆತನ ಹೆಸರಿನಲ್ಲಿ ಸರ್ಕಾರದ ದಾಖಲೆಗಳಲ್ಲಿ ನಮೂದಿಸಲಾಯಿತು.
ಇಂದಿಗೂ ಒಬ್ಬ ವ್ಯಕ್ತಿ ತನ್ನ ಜಮೀನನ್ನು ಮತ್ತೊಬ್ಬರಿಗೆ ಮಾರುವಾಗ ಸರಕಾರದಪತ್ರದಲ್ಲಿ ನಮೂದಿಸುವಂತಹ ಪದ ಬಳಕೆಯನ್ನು ಕಂಡಾಗ ಶ್ಲಾಗನೀಯವೆನಿಸುತ್ತದೆ. ಜಮೀನು ಖರೀದಿದಾರನು ಸಂಪೂರ್ಣವಾಗಿ ಹಣವನ್ನು ಮಾರುವವನಿಗೆ ಸಂದಾಯವಾದ ಬಳಿಕ ಆತನಿಗೆ ಆ ಜಮೀನಿನ ಮೇಲೆ ಇರುವ ಸಂಪೂರ್ಣವಾದಂತಹ ಅಧಿಕಾರ ಬಿಟ್ಟು ಕೊಟ್ಟಿರುತ್ತಾನೆ. ಈ ಪ್ರದೇಶದಲ್ಲಿ ಸಿಗುವಂತಹ ಯಾವುದೇ ನಿಧಿ, ನಿಕ್ಷೇಪ, ಜಲ, ತರು, ಪಾಷಣಾದಿ ಅಷ್ಟಭೋಗ ತೇಜ ಸ್ವಾಮ್ಯಕ್ಕೆ ಅವುಗಳ ಆದಿ, ಕ್ರಯ, ದಾನ, ಪರಿವರ್ತನೆಗಳೆಂಬ ವ್ಯವಹಾರ ಚತುಷ್ಟಯಕ್ಕು ಖರೀದಿದಾರರು ಭಾದ್ಯಾನಾಗಿರುತ್ತಾನೆ. ಇನ್ನುಮುಂದೆ ಸರಕಾರಿ ಕಂದಾಯವನ್ನು ಪಾವತಿಸಿಕೊಂಡು ನಿಮ್ಮ ಇಚ್ಛಾನುಸಾರ ನಿಮ್ಮ ಪುತ್ರ- ಪೌತ್ರ ವಂಶಪಾರಂಪರ್ಯವಾಗಿ ಸುಖದಿಂದ ಅನುಭವಿಸಬಹುದು ಎಂದು ಬರೆದು ಕೊಡಲಾಗುತ್ತದೆ. ಇದರ ಹೊರತಾಗಿಯೂ ಏನಾದರೂ ಸಮಸ್ಯೆಗಳು ಬಂದಲ್ಲಿ ಅದನ್ನು ತನ್ನ ಸ್ವಂತ ಹಣದಲ್ಲಿ ಬಗೆಹರಿಸಿ ಕೊಡುವುದಾಗಿ ನಮೂದಿಸಲಾಗಿರುತ್ತದೆ. ಒಟ್ಟಿನಲ್ಲಿ ಈ ಸರಕಾರಿ ದಾಖಲೆಗಳ ಉದ್ದೇಶವೂ ಕೂಡ ಭೂಮಿಯನ್ನು ವಂಶಪಾರಂಪರ್ಯವಾಗಿ ಮುಂದುವರಿಸಿಕೊಂಡು ಹೋಗಬೇಕೆಂಬುದೇ ಆಗಿದೆ.
ಮನೆಯಲ್ಲಿ ಒಂದು ಮಗು ಜನಿಸಿದಾಗ ಎಲ್ಲರಿಗೂ ಹೇಗೆ ಸಂತೋಷವಾಗುತ್ತದೆ ಅದೇ ರೀತಿ ಒಂದು ಹೊಸ ಮನೆಯನ್ನು ಕಟ್ಟಿದಾಗಲು ಕೂಡ ಎಲ್ಲರಿಗೂ ಸಂತೋಷವಾಗುತ್ತದೆ. ಮಗುವಿಗೆ ನಾಮಕರಣ ಶಾಸ್ತ್ರ ಮುಗಿದು, ಪುಟ್ಟ ಹೆಜ್ಜೆಗಳನ್ನು ಇಡಲು ಪ್ರಾರಂಭಿಸಿ, ಮನೆಸುತ್ತ ಅಂಬೆಗಾಲನಿಟ್ಟುಕೊಂಡು, ತೊದಲು ನುಡಿಗಳನ್ನು ನುಡಿಯುತ್ತಾ ಮೇಲಿದ್ದು ನಿಲ್ಲಲು ಪ್ರಯತ್ನಿಸುತ್ತದೆ. ಇದಕ್ಕೇನು ಬಡವ-ಶ್ರೀಮಂತನೆಂಬ ವ್ಯತ್ಯಾಸವಿಲ್ಲ. ಗುಡಿಸಲೆ ಆಗಿರಲಿ, ಪುಟ್ಟಮನೆ ಆಗಿರಲಿ ಅಥವಾ ಅರಮನೆಯೇ ಆಗಿರಲಿ ಈ ಬೆಳವಣಿಗೆಯಿಂದ ಹೊರತಾಗಿಲ್ಲ.
ಮನೆ ಕಟ್ಟಿದಷ್ಟು ವಿಶಾಲವಾಗಿರುತ್ತದೆ ಆದರೆ ಮಗುವಿನ ಬೆಳವಣಿಗೆ ಋತುವಿನಿಂದ ಋತುವಿಗೆ ಹೆಚ್ಚುತ್ತಾ ಹೋಗುತ್ತದೆ. ರಾತ್ರಿ ಅಜ್ಜಿಯ ಬಾಯಿಂದ ಕೇಳಿದ ಸಣ್ಣಕಥೆಗಳೇ ಆಗಿರಲಿ, ಗುಡುಗಿನ ಶಬ್ದಕ್ಕೆ ಬೆಚ್ಚಿದ ನೆನಪಾಗಿರಲಿ, ಮಳೆಗಾಲದಲ್ಲಿ ಮನೆಯ ಮುಂದೆ ಹರಿಯುವ ಪುಟ್ಟ ಹಳ್ಳದಲ್ಲಿ ಹರಿಬಿಟ್ಟ ಕಾಗದದ ದೋಣಿಯ ನೆನಪೇ ಆಗಿರಲಿ ಚಳಿಗಾಲದಲ್ಲಿ ಬಿಸಿ ಬಿಸಿ ಬಜ್ಜಿ ಮಾಡಿಸಿಕೊಂಡ ತಿಂದ ನೆನಪೇ ಆಗಿರಲಿ, ಓಲೆ ಹತ್ತಿಸಲು ಹೋಗಿ ಕಿಡಿ ಕೈ ಮೇಲೆ ಹಾರಿ ನರಕಯಾತನೆ ಪಟ್ಟಿದ್ದರೂ ಕೂಡ ಕೆಂಡದಲ್ಲಿ ಸುಟ್ಟು ತಿಂದ ಗೇರುಬೀಜ, ಆಲೂಗೆಡ್ಡೆ, ಗೆಣಸಾಗಿರಲಿ, ಹುಳಿ ಮಾವಿನಕಾಯಿಯ ಉಪ್ಪಿನಕಾಯಿ ಮಾಡಿಟ್ಟ ಜಾಡಿಯು ಇನ್ನೊಂದು ಕಥೆಯನ್ನು ನೆನಪಿಸುತ್ತದೆ. ಒರಳು ಕಲ್ಲಿನಲ್ಲಿ ಕುಟ್ಟಿದ ಹುಣಸೆಹಣ್ಣಿಗೆ ಉಪ್ಪು ಖಾರದ ಪುಡಿ ಹಾಕಿ ತಿಂದ ನೆನಪು ಇಂದಿಗೂ ಬಾಯಲ್ಲಿ ನೀರೂರಿಸುತ್ತದೆ. ಮನೆಯ ಪ್ರಾಂಗಣದಲ್ಲಿ ಸ್ನೇಹಿತರೊಟ್ಟಿಗೆ ಲಗೋರಿ, ಸಾಕೋ ಬೇಕೋ ಆಡುತ್ತಿರುವಾಗ ಬಿದ್ದು ಚರ್ಮ ತರಚಿ ತುಂಬೆ ರಸ ಹಾಕಿದಾಗ ಚೀರಿದ ನೆನಪು ಇಂದಿಗೂ ಹಸಿಯಾಗಿದೆ. ರಾತ್ರಿ ಚಿಮಣಿ ದೀಪವನ್ನು ಹಿಡಿದು ಓಡಾಡುತ್ತಿರುವಾಗ ನಮ್ಮ ನೆರಳನ್ನೇ ಕಂಡು ಭೂತವೆಂದು ಭಾವಿಸಿದ್ದೆದೆ. ಬೇಸಿಗೆಯ ರಜೆಯಲ್ಲಿ ಮನೆಯ ಮೇಲೆ ಹಪ್ಪಳ-ಸಂಡಿಗೆ ಒತ್ತಿ ಮಾಡಿ ಒಣಗಿಸಿದ ನೆನಪುಗಳಿವೆ. ರಾತ್ರಿ ಕಾಣಿಸಿಕೊಳ್ಳುವಂತಹ ಬೆಳಕಿನ ಹುಳುಗಳನ್ನು ಕಂಡಾಗ ಆಶ್ಚರ್ಯವಾಗಿದ್ದು ಇದೆ ಹಾಗೂ ಅವುಗಳನ್ನು ಹಿಡಿಯುವ ಸಾಹಸ ಮಾಡಿದ್ದಿದೆ. ನೆಂಟರಿಷ್ಟರು ಮನೆಗೆ ಬಂದಾಗ ಎಲ್ಲರೂ ಕೈ ಜೋಡಿಸಿ ಮಾಡಿದಂತಹ ಒತ್ತು ಶಾವಿಗೆ ಕಾಯಿರಸ ಬಾಯಲ್ಲಿ ನೀರೂರಿಸುತ್ತದೆ. ರಾತ್ರಿ ಊಟ ಮಾಡದೆ ಮಲಗಿರುವಾಗ ಅಮ್ಮ ಚಂದ್ರನನ್ನು ತೋರಿಸಿ ಇನ್ನೆರಡು ತುತ್ತು ಊಟವನ್ನು ಹೆಚ್ಚಿಗೆ ತಿನ್ನಿಸಿದ ನೆನಪುಗಳಿವೆ. ರಾತ್ರಿ ಊಟ ಮಾಡದೆ ಮಲಗಿದರೆ ಗುಮ್ಮ ಬಂದು ನಮ್ಮನ್ನು ಎತ್ತಿಕೊಂಡು ಹೋಗುತ್ತಾನೆಂದು ಹೇಳಿದಂತ ಕಥೆ ಇಂದಿಗೂ ನೆನಪಿನಲ್ಲಿದೆ.
ಮಕ್ಕಳು ಬೆಳೆದು ದೊಡ್ಡವರಾಗಿ ಹೇಗೆ ಮದುವೆಗೆ ಸಿಂಗರಿಸಿ ಸಿದ್ದಗೊಳ್ಳುತ್ತಾರೆಯೋ ಅದೇ ರೀತಿ ಮನೆಯೂ ಕೂಡ ತೆಂಗಿನ ಚಪ್ಪರ, ತಳಿರು ತೋರಣ, ಹೂವಿನಹಾರ ಎಲ್ಲವನ್ನೂ ಹೊದ್ದು ಸಿಂಗಾರಗೊಳ್ಳುತ್ತದೆ,ಬಂದು ಹೋದಂತಹ ಎಲ್ಲಾ ಸ್ನೇಹಿತರು, ಬಂಧು ಮಿತ್ರರಿಗೆ ಇದೆ ಮನೆ ಸಾಕ್ಷಿಯಾಗಿರುತ್ತದೆ. ಸ್ವಲ್ಪ ವರ್ಷದ ಬಳಿಕ ಮತ್ತೊಂದು ತೊಟ್ಟಿಲು ಶಾಸ್ತ್ರಕ್ಕೆ ಸಿದ್ಧಗೊಳ್ಳುತ್ತದೆ. ಮುಂದೆ ಮನೆಯ ಹಿರಿಯರೊಬ್ಬರು ಅಸುನೀಗಿದಾಗ ಮನೆಯವರೊಂದಿಗೆ ಮನೆಯುಕೂಡ ಮೌನದ ಮಡುವಿನಲ್ಲಿ ಮುಳುಗುತ್ತದೆ. ಈ ರೀತಿ ಮನೆ ಎಲ್ಲಾ ಕಾರ್ಯಕ್ರಮಗಳಿಗೂ ಸಾಕ್ಷಿಯಾಗಿರುತ್ತದೆ. ಮೊಮ್ಮಕ್ಕಳು ಮನೆಯನ್ನು ಮಾರಿ ವಿದೇಶಗಳಲ್ಲಿ ನೆಲೆಸುವಂತಹ ಸಂದರ್ಭಗಳಲ್ಲಿಯೂ ಕೂಡ ಇದೇ ಮನೆ ಮೌನವಾಗಿ ಎಲ್ಲವನ್ನೂ ಸ್ವೀಕರಿಸುತ್ತದೆ.
ಮಾನವ ಹೇಗೆ ತನ್ನೆಲ್ಲ ಮಜಲುಗಳನ್ನು ದಾಟಿ ಪಂಚಭೂತಗಳಲ್ಲಿ ಲೀನವಾಗುತ್ತಾನೆಯೋ ಅದೇ ರೀತಿ ಮನೆಯೂ ಕೂಡ ಶಿಥಿಲಾವಸ್ಥೆಗೆ ತಲುಪಿ ಅದೇ ಜಾಗದಲ್ಲಿ ಮತ್ತೊಂದು ಮನೆ ನಿರ್ಮಾಣವಾಗುತ್ತದೆ. ಇಲ್ಲಿ ಬದಲಾಗಿದ್ದು ಮನೆ ಹೊರತು ಭಾವನೆಗಳಲ್ಲ ಭಾವನೆಗಳು ಎಂದೆಂದಿಗೂ ಶಾಶ್ವತ ಹಾಗೂ ಜೀವಂತ. ಭಾವನೆಗಳೆಂಬುವುದು ಮಾನವ ಜೀವನದ ಅವಿಭಾಜ್ಯಅಂಗ ಆದ್ದರಿಂದಲೇ ಭಾವನೆಗಳಿಗೆ ಬೆಲೆ ಕಟ್ಟಲಾಗುವುದಿಲ್ಲ.
ಇಷ್ಟೆಲ್ಲವನ್ನೂ ನೆನಪಿಸಿದಂತಹ ಸ್ನೇಹಿತನ ಕವಿತೆ ನಿಜಕ್ಕೂ ಶ್ಲಾಘನೀಯ. ಇಂತಹ ಭಾವನಾತ್ಮಕ ಕವಿತೆಗಳು ವಾಸ್ತವ ಹಾಗೂ ನಿರಂತರ.

This comment has been removed by the author.
ReplyDeletemeaningful article keep it up
ReplyDelete💐💐
ReplyDeleteNice
ReplyDelete