Thursday, November 3, 2022

ನಾನು ಯಾರು ?

                                  


 ನಾನು ನಿಮ್ಮೊಳಗೊಬ್ಬ ಶ್ರೀಸಾಮಾನ್ಯ, ಬಾಲ್ಯದಿಂದಲೂ ಇದ್ದ ಒಂದು ಸಣ್ಣ ಬರವಣಿಗೆಯಂಬ ಬಯಕೆಗೆ ಲಾಗ್ದೌನ್ ಮುನ್ನಡಿಯನ್ನು ಹಾಡಿತು, ಅಲ್ಲಿಂದ ಪ್ರಾರಂಭವಾದ ಪುಟ್ಟ ಪಯಣ ಇಂದು ಐವತ್ತು ಅಂಕಗಳು ಪ್ರಕಟಗೊಂಡಿದೆ ಎಂಬ ವಿಷಯ ನನಗೂ ಕೂಡ ನಿಜಕ್ಕೂ ಆಶ್ಚರ್ಯವೆನಿಸುತ್ತದೆ.

ಓದಿ ಬೆಳೆದದ್ದೆಲ್ಲ ಮೈಸೂರಿನಲ್ಲಿ, ಮೈಸೂರು ವಿಶ್ವವಿದ್ಯಾನಿಲಯದ ಗಂಗೋತ್ರಿಯಲ್ಲಿ, ವಾಣಿಜ್ಯ ವಿಭಾಗದಲ್ಲಿ ಸ್ನಾತಕೋತರ ಪದವಿಯನ್ನು ಗಳಿಸಿ, ಖಾಸಗಿ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿದವನು, ಕ್ಷಮಿಸಿ ಇಲ್ಲಿ ಹೆಚ್ಚಿನದಾಗಿ ನನ್ನ ಬಗ್ಗೆ ಹೇಳುವುದಕ್ಕಿಂತ ಅಂಕಣ ಬೆಳೆದು ಬಂದ ಹಾದಿಯನ್ನ ಹೇಳಲಿಕ್ಕೆ ನನಗೆ ಬಹಳ ಸಂತೋಷವೆನಿಸುತ್ತದೆ.

ಬಾಲ್ಯದಿಂದಲೂ ಕನ್ನಡ ಪುಸ್ತಕಗಳನ್ನು ಓದಿದ ಹವ್ಯಾಸ, ಅಂಕಣ ಬರವಣಿಗೆಗೆ ಮೂಲ ಕಾರಣ, ಮೊದಲಂತೂ ಪ್ರಥಮ ಅಂಕಣ ಪ್ರಕಟಗೊಳ್ಳುವ ಪೂರ್ವದಲ್ಲಿ ನಾನು ಬರೆದ ಅಂಕಣವನ್ನೇ 100 ಬಾರಿ ಓದಿ, ಒಂದಷ್ಟು ಸ್ನೇಹಿತರೊಂದಿಗೆ ಹಾಗೂ ಶಿಕ್ಷಕರೊಂದಿಗೆ ಚರ್ಚಿಸಿ ಆನಂತರ ಪ್ರಕಟಿಸಲಾಗಿತ್ತು, ಅಂಕಣಗಳನ್ನು ಬರೆಯುವ ಮೂಲ ಉದ್ದೇಶ ಪ್ರಕೃತಿ ಹಾಗೂ ನಿಸರ್ಗದಲ್ಲಿ ಅಡಕವಾಗಿರುವ ಕೌತುಕಗಳನ್ನು ತಿಳಿಯುವುದು, ಈ ಸಾಲಿನಲ್ಲಿಯ ನಾವು ದಾಪುಗಾಲನ್ನಿಡುತ್ತಿರುವುದು ನಿಜಕ್ಕೂ ಖುಷಿಯ ವಿಚಾರ.

ಅಂಕಣದ ತಿರುಳು :

ಅಂಕಣಗಳನ್ನು ಬರೆದೆ ಎಂದು ಹೇಳಿಕೊಳ್ಳುವುದಕ್ಕಿಂತ ಇದರಿಂದ ನಾನು ಕಲಿತದ್ದೇ ಹೆಚ್ಚು, ಒಂದು ಅಂಕಣ ಪರಿಪೂರ್ಣತೆಯನ್ನು ಪಡೆಯಬೇಕು ಅಥವಾ ಚಂದವಾಗಿ ಹೊರಹೊಮ್ಮಬೇಕೆಂದಾಗ ಹತ್ತಾರು ಅಂಶಗಳನ್ನು / ಆಯಾಮಗಳನ್ನು ಪರಿಗಣಿಸಬೇಕಾಗುತ್ತದೆ.

1 ಅಂಕಣ ಬರಹಗಾರನಿಗಿಂತ ಓದುಗನಿಗೆ ಹೆಚ್ಚು ಆತ್ಮೀಯವೆನಿಸಬೇಕು,

2 ಅಂಕಣದ ಪೀಠಿಕೆ ಅಂತಿಮಕ್ಕೆ ನೇರ ಸಂಬಂಧವನ್ನು ಹೊಂದಿರಬೇಕು.

3 ಅಂಕಣದ ವಿಷಯ ವೈವಿಧ್ಯಮಯವಾಗಿರಬೇಕು,

4 ಅಂಕಣದ ಪದಬಳಕೆ ಸುಲಭವಾಗಿದ್ದು ಎಲ್ಲರಿಗೂ ಅರ್ಥವಾಗುವಂತಿರಬೇಕು,

5 ಅಂಕಣದಲ್ಲಿ ಬಳಸಿರುವ ಚಿತ್ರಗಳು ಅಂಕಣಕ್ಕೆ ಪೂರಕವಾಗಿರಬೇಕು,

6 ಅಂಕಣದ ವ್ಯಾಕರಣ ಸ್ಪಷ್ಟವಾಗಿರಬೇಕು,

7 ಓದುವ ಮಧ್ಯದಲ್ಲಿ ಬೇಸರವೆನಿಸಬಾರದು,

8 ಅಂಕಣದ ಆಳ ಅಗಲ ಒಂದು ಪರಿದಿಯಲ್ಲಿರಬೇಕು,

9 ಅಂಕಣ ಓದುಗರಿಗೆ ಮುಜುಗರವೆನಿಸಬಾರದು,

10 ಅಂಕಣ ಪುರಾವೆಯನ್ನುಳಗೊಡು, ಸತ್ಯತೆಯಿಂದ ಕೂಡಿರಬೇಕು.

ಇದರೊಂದಿಗೆ ಮತ್ತಷ್ಟು ನಾನ ವಿಷಯಗಳನ್ನು ಬರಹಗಾರ ನೆನಪಿಟ್ಟುಕೊಂಡು ಬರವಣಿಗೆಗೆ ಮುಂದಾದಾಗ ಸುದೀರ್ಘ ಸಮಯವನ್ನು ತೆಗೆದುಕೊಳ್ಳುತ್ತದೆ, ನನಗಂತೂ ಮೊದಮೊದಲು ಒಂದು ಅಂಕಣವನ್ನು ಬರೆಯಲಿಕ್ಕೆ 10 ದಿನಗಳ ಸಮಯಾಕಾಶ ತೆಗೆದುಕೊಳ್ಳುತ್ತಿತ್ತು ಏಕೆಂದರೆ ನಾನು ಬರೆಯುವ ಅಂಕಣದ ಕ್ರಮ ಈ ಕೆಳಕಂಡಂತಿರುತ್ತದೆ,

ಮೊದಲು ವಿಷಯದ ಆಯ್ಕೆ, ಆನಂತರ ಅದಕ್ಕೆ ಸಂಬಂಧಪಟ್ಟ ವೈವಿಧ್ಯಮಯ ವಿಷಯ ಹಾಗೂ ಚಿತ್ರಗಳನ್ನು ಕಲೆ ಹಾಕುವುದು, ಈ ವಿಷಯಗಳನ್ನೆಲ್ಲವನ್ನು ಪೋಣಿಸಿ ಅಂಕಣದ ಅಳತೆಗೆ ಇಳಿಸಿಕೊಳ್ಳುವುದು, ಕ್ರಮೇಣ ಅಂಕಣಕ್ಕೆ ಒಂದು ಸ್ವರೂಪವನ್ನು ಕೊಟ್ಟು ಕರಡು ಪ್ರತಿ ತಯಾರಿಸಿಕೊಳ್ಳುವುದು ಇದಾದ ನಂತರ ಮೂರ್ನಾಲ್ಕು ಬಾರಿ ಅಂಕಣವನ್ನು ಓದಿ ವ್ಯಾಕರಣ, ಸಾಲುಗಳು ಹೆಚ್ಚು ಕಡಿಮೆ ಆಗದಂತೆ ಒಂದಕ್ಕೊಂದು ಪೂರಕವಾಗಿರುವಂತೆ ಸರಿ ಇದೆಯೇ ಎಂದು ಖಚಿತಪಡಿಸಿಕೊಂಡು, ಸ್ನೇಹಿತನೊಟ್ಟಿಗೆ ಚರ್ಚಿಸಿ ಆನಂತರ ಅದರಲ್ಲಿ ಮತ್ತಷ್ಟು ವಿಷಯಗಳನ್ನು ಪೋಣಿಸುವುದಾಗಲಿ ತೆಗೆಯುವುದಾಗಲಿ ನೆರವೇರಿಸಿ ಕೊನೆಯದಾಗಿ ಅಂತಿಮ ಪ್ರತಿಯನ್ನು ಮಾಡಿ ಮೂರ್ನಾಲ್ಕು ಬಾರಿ ಓದಿ ಖಚಿತಪಡಿಸಿಕೊಂಡ ನಂತರ ಅಂಕಣ ಪ್ರಕಟಗೊಳ್ಳಲು ಸಿದ್ಧವಾಗುತ್ತದೆ, ಕೊನೆಯದಾಗಿ ಅಂಕಣ ಪ್ರಕಟಗೊಳ್ಳುವ ದಿನ ಮತ್ತೊಮ್ಮೆ ಓದಿ ಖಾತ್ರಿಪಡಿಸಿಕೊಂಡ ನಂತರ ಅಂಕಣ ನಿಮ್ಮ ಕೈ ಸೇರುವುದು.

ಅಂಕಣ ಪ್ರಕಟಗೊಂಡ ಪ್ರಾರಂಭದಿಂದಲೂ ನಿಮ್ಮ ಪ್ರತಿಕ್ರಿಯೆಗಳಿಗೆ ನಾನು ಆಭಾರಿಯಾಗಿದ್ದೇನೆ, ನೀವಿಲ್ಲದಿದ್ದರೆ ಈ ಅಂಕಣಗಳು ಇಷ್ಟೊಂದು ವೈವಿಧ್ಯಮಯವಾಗಿ ಇರುತ್ತಿರಲಿಲ್ಲ ಅದಕ್ಕಾಗಿ ನನ್ನ ಕಡೆಯಿಂದ ನಿಮಗೆ ಅನಂತಾನಂತ ಧನ್ಯವಾದಗಳು.

ನಿಮ್ಮ ಪ್ರೋತ್ಸಾಹದ ಫಲದಿಂದ ಎರಡು ವರ್ಷದ ಸಮಯದಲ್ಲಿ 50 ಅಂಕಣಗಳು ಅದರಲ್ಲಿ 5 ಪುಟ್ಟ ಕವಿತೆಗಳು, NSSಗೆ ಸಂಬಂಧಪಟ್ಟ 3 ಅಂಕಣ, ಪುಸ್ತಕಗಳಿಗೆ, ಮಕ್ಕಳಿಗೆ, ಸಮಯಕ್ಕೆ, ಚಲನಚಿತ್ರಕ್ಕೆ, ಭಾಷೆಗೆ, ಇದರೊಟ್ಟಿಗೆ ಪುಟ್ಟ ಕಾದಂಬರಿ, ಪ್ರವಾಸಿ ಕಥನಗಳು ಹಾಗೂ ಪ್ರಕೃತಿಗೆ ಸಂಬಂಧಪಟ್ಟ ನಾನ ಆಯಾಮಗಳಾದ ಪ್ರಾಣಿ, ಪಕ್ಷಿ, ಹೂಗಳು, ಮೀನುಗಳು, ಮರಗಳು, ನಕ್ಷತ್ರ, ಶಿಲೆ, ಮಣ್ಣು, ಭತ್ತ, ತಾಳೆ, ಅಭಿವೃದ್ಧಿಗೆ ಸಂಬಂಧಪಟ್ಟಂತೆ ವಿವಿಧ ಮಜಲುಗಳ ಪರಿಸರದ ವಿವಿಧ ಆಯಾಮಗಳ ಪರಿಚಯವನ್ನು ಮಾಡಿಕೊಂಡಿದ್ದೇವೆ.

ನಿಮ್ಮ ಪ್ರೋತ್ಸಾಹ ಹಾಗೂ ಸಲಹೆಗಳು ಹೀಗೆ ಮುಂದುವರೆಯಲಿ, ನಿಮ್ಮೊಳಗೆ ಬಹಳಷ್ಟು ಸ್ನೇಹಿತರು ಈ ಅಂಕಣಗಳನ್ನೆಲ್ಲವನ್ನು ಸೇರಿಸಿದಂತೆ ಒಂದು ಪುಸ್ತಕದ ರೂಪದಲ್ಲಿ ತರಲು ಸಲಹೆಗಳನ್ನು ನೀಡಿದ್ದೀರಿ, ಇದಕ್ಕೆ ಪೂರಕ ಬೆಂಬಲ ಹಾಗೂ ಸಮಯ ನೋಡಿಕೊಂಡು ಪ್ರಕಟಿಸಲು ಪ್ರಯತ್ನ ಪಡುತ್ತೇನೆ, ಮತ್ತಷ್ಟು ಅಂಕಣಗಳನ್ನು  ಬರೆಯಲು ನೀವು ಅಪೇಕ್ಷಿಸಿದ್ದೀರಿ ಈ ನಿಮಿತ್ತ ಈಗಾಗಲೇ ಬಹಳಷ್ಟು ಅಂಕಣಗಳಿಗೆ ಪೀಠಿಕೆಯನ್ನು ನೀಡಿ ಮುಖ್ಯ ಅಂಶಗಳನ್ನು ಕಲೆ ಹಾಕಿದ್ದೇನೆ ಸಮಯ ಮಾಡಿಕೊಂಡು ಅಂಕಣವನ್ನು ಬರೆದು ಅವುಗಳನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳುತ್ತೇನೆ.

ಮತ್ತೊಮ್ಮೆ ಅನಂತಾನಂತ ಧನ್ಯವಾದಗಳು.

ಎಲ್ಲೆಡೆಯೋ ಹಸಿರು ಹೆಚ್ಚಲಿ.

- ಎಸ್ ಪಿ ತೇಜರಾಜು.

3 comments:

  1. ನಿಮ್ಮ ಅಂಕಣದ ವಿಷಯ ವಸ್ತುಗಳ ಮೇಲೆ ನಮಗೆ ಅಗಾಧವಾದ ಗೌರವ ಪೂರಕ ಮನೋಭಾವ ಬೆಳೆಸಿಕೊಳ್ಳುತ್ತಿದ್ದೇನೆ ಇನ್ನೂ ಹೆಚ್ಚಿನ ಬರವಣಿಗೆಯ ಮೂಲಕ ಪರಿಸರಾತ್ಮಕ ವಿಷಯಗಳನ್ನು ,
    ಕೌತುಕಗಳನ್ನು ನಮ್ಗಳೊಂದಿಗೆ ನಿಮ್ಮ ಅಂಕಣಗಳ ಬೆಳಕಿನೊಂದಿಗೆ ಹಂಚಿಕೊಳ್ಳಿ..

    ಹರಿವ ನೀರಿನ ಹಾಗೆ ಸಾಗಲಿ ನಿಮ್ಮ ಬರವಣಿಗೆಯ ಪಯಣ..

    ReplyDelete
  2. ಪರಿಸರ ಸ್ನೇಹಿಯಾದ ನೀವು ಅನೇಕ ಅಂಕಣಗಳನ್ನು ಹಂಚಿಕೊಂಡಿದ್ದೀರ. ನಿಮ್ಮ ಅಂಕಣಗಳಿಂದ ಬಹಳಷ್ಟು ವಿಷಯಗಳನ್ನು ತಿಳಿದುಕೊಂಡಿದ್ದೇನೆ. ಹೀಗೆ ನಿಮ್ಮ ಬರವಣಿಗೆಯ ಪಯಣವು ಸೂರ್ಯ ಚಂದ್ರ ಇರುವವರೆಗೂ ಸಾಗಲಿ

    ReplyDelete
  3. No doubt, you are doing a fabulous job by writing on nature by enjoying it to it's core, keep going

    ReplyDelete