ಸಂಬಂಧಗಳು ಕೇವಲ ಮಾನವನಿಗಷ್ಟೇ ಸೀಮಿತವಾಗಿದೆಯೇ ? ಪ್ರಾಣಿಗಳಲ್ಲಿ, ಪಕ್ಷಿಗಳಲ್ಲಿ, ಜಲಚರಗಳಲ್ಲಿ ಸಂಬಂಧಗಳನ್ನು ನಾವು ಸಾಮಾನ್ಯವಾಗಿ ಕಂಡಿರುತ್ತೇವೆ, ಹಾಗಾದರೆ ಸಸ್ಯಗಳಲ್ಲಿ ಸಂಬಂಧಗಳು ಇದೆಯೇ ? ಮುಂದೆ ನೋಡೋಣ.
ಬಾಲ್ಯದಲ್ಲಿ ಈಚಲ ಮರದ ಹಣ್ಣನ್ನು ತಿಂದು ಸಂಭ್ರಮಿಸಿರಬಹುದು, ಬೇಸಿಗೆಯ ಧಗೆ ಹೆಚ್ಚಾಗಿ ತಾಟಿನಿಂಬು ಅಥವಾ ಎಳನೀರನ್ನು ಕುಡಿದಿರಬಹುದು, ಅಡುಗೆಯ ಖಾದ್ಯಕ್ಕೆ ತಾಳೆಯ ಎಣ್ಣೆಯನ್ನು ಉಪಯೋಗಿಸಿರಬಹುದು, ದೇಹದಲ್ಲಿ ಕಬ್ಬಿಣದಂಶ ಹೆಚ್ಚಾಗಲಿ ಎಂದು ಖರ್ಜೂರವನ್ನು ತಿಂದಿರಬಹುದು, ತಾಂಬೂಲ ಪ್ರಿಯರಿಗೆ ಅಡಕೆ ಇರದೇ ತಾಂಬೂಲ ಸಂಪೂರ್ಣವಾಗಿದಿರಬಹುದು. ಮೇಲಿನವುಗಳೆಲ್ಲವೂ ಮಾನವನ ಆಹಾರದೊಳಗೆ ಬೆರೆತು ದೈಹಿಕ ಬೆಳವಣಿಗೆಗೆ ಸಹಕಾರಿಯಾಗಿದೆ.
ಹೇಗೆ ಮನೆಯಲ್ಲಿ ಕಾರ್ಯಕ್ರಮವಾದರೆ ದೂರದ ನೆಂಟರಿಷ್ಟರು, ಸಂಬಂಧಿಕರು ಬಂದು ಸೇರುತ್ತಾರೆಯೋ ಅದನ್ನೇ ಒಂದು ಕುಟುಂಬ ಎಂದು ಕರೆಯುವುದಲ್ಲವೇ ? ಹೀಗೆಯೇ ಸಸ್ಯಗಳೆಲ್ಲವೂ, ಸಸ್ಯ ಸಾಮ್ರಾಜ್ಯದೊಳಗೆ ಸೇರಿದ್ದರೂ, ಅವುಗಳೊಳಗೆ ಪ್ರತ್ಯೇಕ ಪ್ರತ್ಯೇಕ ಮನೆತನ / ಕುಟುಂಬ / ಸಂಬಂಧಿಕರು ಇದ್ದಾರೆ. ಖರ್ಜೂರ ಮರುಭೂಮಿಯಲ್ಲಿ ಬೆಳೆದಿರಬಹುದು, ತೆಂಗು ಬಯಲು ಸೀಮೆಯಲ್ಲಿಯೂ ಬೆಳೆಯಬಹುದು, ಅಡಿಕೆ ಮಲೆನಾಡಿನಲ್ಲಿ ಹೆಚ್ಚು ಕಂಡುಬರುವುದುಂಟು, ತಾಳೆ ಹೊಳೆ ದಂಡೆಯಲ್ಲಿ ಬೆಳೆದಿರಬಹುದು, ಬೈನೇ ಮರದಿಂದ ಸೇಂದಿ ಮಾಡುವುದನ್ನು, ಇನ್ನೂ ಉದ್ಯಾನವನಗಳಲ್ಲಿ ಅಲಂಕಾರಿಕ Royal palm ಮರಗಳು ಇರುವುದನ್ನು ನೋಡಬಹುದು, ಇವುಗಳೆಲ್ಲವೂ ಕಾಂಡಗಳ ಮಧ್ಯದಲ್ಲಿ ಕವಲೊಡೆಯದ, ದಪ್ಪ ಕಾಂಡದ, ನಾರಿನಿಂದ ಕೂಡಿದ, ದೊಡ್ಡ ಎಲೆಗಳುಳ್ಳ ನಿತ್ಯಹರಿದ್ವರಣ ಸಸ್ಯಗಳು. ನೋಡ್ಲಿಕ್ಕೆ ಹೆಚ್ಚುಕಡಿಮೆ ಒಂದೇ ರೀತಿ ಕಾಣುವ ಈ ಸಸ್ಯಗಳು ಅರೆಕೇಸಿಯೇ ಕುಟುಂಬಕ್ಕೆ ಸೇರಿದ ತಾಳೆಯ ಜಾತಿಯ ಮರಗಳು, 2,600 ಕ್ಕೂ ಹೆಚ್ಚು ಅರೆಕೇಸಿಯೇ ಕುಟುಂಬಕ್ಕೆ ಸೇರಿದ ಮರಗಳನ್ನು 200 ಕ್ಕೂ ಹೆಚ್ಚು ತಾಳೆ ಜಾತಿಗಳಾಗಿ ವರ್ಗೀಕರಿಸಲಾಗಿದೆ.
ಅರೆಕೇಸಿಯೇ ಕುಟುಂಬಕ್ಕೆ ಸೇರಿದ ಪಾಮ್ ಮರವು ( ಅಡುಗೆ ಎಣ್ಣೆ ತಯಾರಿಕೆಯಿಂದ ) ಇಂಡೋನೇಷಿಯಾದಂತ ದೇಶಕ್ಕೆ ಕೋಟ್ಯಂತರ ರೂಪಾಯಿ ವ್ಯವಹಾರ ತಂದುಕೊಡುತ್ತದೆ. ಆದರೆ ಏಕ ಜಾತಿಯ ಪಾಮ್ ಮರಗಳ ನೆಡುತೋಪಿನಿಂದಾಗಿ ಅಲ್ಲಿಯ ನಿತ್ಯಹರಿದ್ವರ್ಣ ಕಾಡು ಕಣ್ಮರೆಯಾಗುತ್ತಿದೆ, ಅನೇಕ ಪ್ರಾಣಿಸಂಕುಲ ಕಣ್ಮರೆಯಾಗಿದೆ, ಒರಂಗುಟಾನ್ ಆಹಾರ ಸಿಗದೆ ಸಾವು ಬದುಕಿನ ಮಧ್ಯೆ ಹೋರಾಡುತ್ತಿದೆ. ಅದೇ ಅರೆಕೇಸಿಯೇ ಕುಟುಂಬಕ್ಕೆ ಸೇರಿದ ಖರ್ಜೂರದ ಮರ ಮರುಭೂಮಿಯ ರಾಣಿ ಹಣ್ಣು ಎಂದು ಗುರುತಿಸಲ್ಪಟ್ಟ ಅಲ್ಲಿಯ ಜನರ ಜೀವನ ಮಟ್ಟವನ್ನು ಸುಧಾರಿಸುತ್ತಿದೆ. ನಮ್ಮ ದೇಶದಲ್ಲಿಯೂ ಅಡಿಕೆ ತೆಂಗು ವಾಣಿಜ್ಯ ಸಸ್ಯಗಳಾಗಿದೆ.
ಈ ಮೇಲೆ ತಿಳಿಸಿದ ಮರಗಳೆಲ್ಲವೂ ತಾಳೆ ಜಾತಿಗೆ ಸೇರಿದ ಮರಗಳಾದರೂ ಮತ್ತೊಂದು ತಾಳೆಯ ಗಿಡವಿದೆ ಅದು ನನ್ನ ತಾಳ್ಮೆಯನ್ನು ಪರೀಕ್ಷಿಸಿಯೇ ಬಿಟ್ಟಿತು. Technology era ದಲ್ಲಿ ಇರುವ ನಮಗೆ ಕುಳಿತಲ್ಲಿಂದಲೇ ಬೇಕಾದ ಪದಾರ್ಥಗಳನ್ನು ತರಿಸಿಕೊಳ್ಳಬಹುದು, ಓದುವ ಆಸಕ್ತಿ ಇರುವವರು ಇಡೀ ಪುಸ್ತಕವನ್ನು ಮೊಬೈಲ್ನಲ್ಲಿ ಓದಿ ಮುಗಿಸಬಹುದು. ಆದರೆ ನಮ್ಮ ಪೂರ್ವಜರ ಪರಿಸ್ಥಿತಿಯ ಇವತ್ತಿನ ರೀತಿ ಇರಲಿಲ್ಲ ಮೊದಲು ಕಲ್ಲುಗಳ ಮೇಲೆಯೂ, ಶಾಸನಗಳಲ್ಲಿಯೂ, ಮುಂದೆ ಓಲೆ / ತಾಳೆ ಗರಿಯಲ್ಲಿ ಮುಂದಿನ ಪೀಳಿಗೆಗಾಗಿ ತಮ್ಮ ಜ್ಞಾನಭಂಡಾರವನ್ನು ಮುದ್ರಿಸುತ್ತಿದ್ದರು.
ತಾಳೆ ಪ್ರತಿಗಳಿಗೆ ಬಳಸಿದಂತಹ ಎಲೆಗಳು ಯಾವುದು ಎಂದು ತಿಳಿಯಹೊರಟಾಗ ನಿಜವಾದ ಚಾಲೆಂಜಿಂಗ್ ಟಾಸ್ಕ್ ಎದುರಾಯಿತು, ಒಬ್ಬೊಬ್ಬರು ಒಂದೊಂದು ರೀತಿಯ ಮರಗಳ ಹೆಸರನ್ನು ಹೇಳಲು ಪ್ರಾರಂಭಿಸಿದರು, ಒಬ್ಬರು Ola palnt ಎಂದರೆ ಮತ್ತೊಬ್ಬರು Borassus flabellifer, ತಾಟಿನಿಂಬು ಗಿಡದ ಎಲೆ, Asian palmyar palm ಎಂದು, Palm ಮರ ಎಂದರು, ಕೇದಿಗೆ ಸಸ್ಯದ ಎಲೆಗಳು ಎಂದರು ಆದರೆ ಕೇದಿಗೆ ಸಸ್ಯ ತಾಳೆ ಜಾತಿಗೆ ಸೇರಿದ ಗಿಡವಾಗಿರಲಿಲ್ಲ ಇದರ ಮಧ್ಯದಲ್ಲಿ ತೆಂಗು, ಅಡಕೆ, ಖರ್ಜೂರದ ಎಲೆಗಳು ಅದನ್ನೇ ಹೊಲಿದರು ಇವು ತಾಳೆಗರಿಗೆ ಯೋಗ್ಯವಾದ ಎಲೆಗಳಲ್ಲ ಇವು ಬೇಗ ಹಾಳಾಗುತ್ತವೆ, ಹಾಗಾದರೆ 200 ಜಾತಿಯ ತಾಳೆ ಗಿಡಗಳಲ್ಲಿ ತಾಳೆ ಪ್ರತಿಗಳನ್ನು ತಯಾರಿಸಲಿಕ್ಕೆ ಬಳಸಿದಂತಹ ಗಿಡಗಳು ಯಾವುದಿರಬಹುದು ?
ಪಶ್ಚಿಮ ಘಟ್ಟಗಳ ಸಾಲುಗಳಲ್ಲಿ ರಾರಾಜಿಸುತ್ತಿದ್ದ ಮರಗಳ ಸಾಲುಗಳಲ್ಲಿ ಒಂದಾನೊಂದು ಕಾಲಕ್ಕೆ ತಾಳೆ ಜಾತಿಯ ಮರಗಳು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದ್ದವು, ಇವುಗಳಲ್ಲಿ Asian palmyra palm ( ತಾಟಿನಿಂಬು ) ಹಾಗೂ Taliopt palm ಎಂಬ ಎರಡು ವಿಧವಾದ ಮರಗಳಿವೆ, ಎರಡು ನಿತ್ಯಹರಿದ್ವರ್ಣ ಮರಗಳು ಬೃಹತ್ತಾದ ಎಲೆಗಳನ್ನು ಹೊಂದಿರುತ್ತವೆ.
ನಮ್ಮ ಭಾರತದಲ್ಲಿ ತಾಳೆ ಪ್ರತಿಗಳ ತಯಾರಿಕೆಯಲ್ಲಿ ತಾಟಿನಿಂಬು ಮರದ ಎಲೆಯನ್ನು ಬಳಸಿದ್ದು ಹೆಚ್ಚು, ಈ ಮರ ಕೇವಲ ತಾಳೆಗರಿ ಕೆಲಸಕ್ಕೆ ಮಾತ್ರ ಉಪಯೋಗಿಸಲ್ಪಟ್ಟಿದಲ್ಲದೆ
1 ಇದೊಂದು ಅದ್ಭುತವಾದಂತಹ ಔಷಧೀಯ ಸಸ್ಯ ಗುಪ್ತ ರೋಗಗಳಿಗೆ ರಾಮಬಾಣ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
2 ರಾಜ-ಮಹಾರಾಜರ ಛತ್ರಿಗಳಲ್ಲಿ ಈ ಮರದ ಎಲೆಗಳನ್ನು ಬಳಸಲಾಗುತ್ತಿತ್ತು.
3 ಕೃಷಿ ನಾಟಿ ಸಂದರ್ಭದಲ್ಲಿ ಗೊರಬಾಗಿ ಬೆಳಕೆ.
4 ಬ್ರಿಟಿಷರು ಈ ಮರದ ದಿಮ್ಮಿಗಳನ್ನು ಬೀದಿದೀಪ ಕಂಬಗಳಾಗಿ ಬಳಸುತ್ತಿದ್ದರು.
5 ಬೀಜಗಳನ್ನು ಅಂಗಿಯ ಗುಂಡಿಯಾಗಿ,
6 ಮಣ್ಣಿನ ಪಾತ್ರೆಯ ಮುಚ್ಚಳವಾಗಿ,
7 ಸಿಡಿಮದ್ದು ತಯಾರಿಕೆಯಲ್ಲಿ,
8 ಯಕ್ಷಗಾನದಲ್ಲಿ ನವಿಲುಗರಿಗಳಿಂದ ಅಲಂಕೃತವಾಗಿ,
9 ಶ್ರೀರಾಮ ವನವಾಸದಲ್ಲಿದ್ದಾಗ ಕುಟೀರ ನಿರ್ಮಾಣಕ್ಕಾಗಿ ಈ ಮರವನ್ನು ಬಳಸಲಾಗಿತ್ತು,
10 ಗೆದ್ದಲು ನಿವಾರಕವಾಗಿ ಎಲೆಯ ಬಳಕೆ,
11 ಹೂಗಳು ಅರಳಿದಾಗ ಇಡೀ ಕಾಡು ಪರಿಮಳದಿಂದ ಕೂಡಿರುತ್ತಿತ್ತು. ಇದರ ಹಣ್ಣು ಹತ್ತಾರು ಪ್ರಾಣಿ-ಪಕ್ಷಿಗಳಿಗೆ ಆಹಾರ.
12 ಮರ ಸದೃಢವಾಗಿ ಮಣ್ಣಿನಲ್ಲಿ ನಿಲ್ಲುವುದರಿಂದ ಮಣ್ಣಿನ ಸವಕಳಿಯನ್ನು ತಡೆಗಟ್ಟುತಿತ್ತು.
ಇಷ್ಟೆಲ್ಲಾ ಬಳಕೆಯಲ್ಲಿದ್ದ ಮರ ಅತಿಯಾದ ಕಾಡಿನ ಕಡಿತದಿಂದಾಗಿ ಕಣ್ಮರೆಯಾದತೊಡಗಿತು, ಇದರೊಂದಿಗೆ ತಾಳೆಗರಿಯ ಜಾಗವನ್ನು ಕಾಗದ ಆಕ್ರಮಿಸಿದ್ದರಿಂದ, ಜನರಿಂದ ಇದು ನಿಧಾನವಾಗಿ ಮರೆಯಾಗತೊಡಗಿತು.
ತಾಳೆ ಮರವ ಗುರುತಿಸಿದ್ದಾಯಿತು ಆದರೆ ತಾಳೆ ಎಲೆಗಳನ್ನು ತಾಳೆ ಪ್ರತಿಗಳಾಗಿ ತಯಾರಿಸುವುದು ಹೇಗೆ ? ಈ ಕೆಲಸ ಮತ್ತಷ್ಟು ಕುತೂಹಲವನ್ನು ಕೆರಳಿಸುತ್ತದೆ.
ಮರದಿಂದ ಎಲೆಗಳನ್ನು ಕತ್ತರಿಸಿಕೊಂಡು ಪ್ರತಿ ಎಲೆಗಳನ್ನು ತುಂಡರಿಸಿಕೊಂಡು ಬಳೆಯ ಆಕಾರದಲ್ಲಿ ಸುತ್ತಬೇಕು, ಇದನ್ನು ಕುದಿಯುತ್ತಿರುವ ಅಲೋವೆರಾ ನೀರಿನೊಂದಿಗೆ ಸ್ವಲ್ಪ ಹೊತ್ತು ಬೇಯಿಸಿ ನಂತರ ಗಾಳಿಯಲ್ಲಿ ಒಣಗಿಸಿ, ಶಾಸನಗಳಿಗೆ ಸೂಕ್ತವಾಗುವ ಅಳತೆಯಲ್ಲಿ ತುಂಡರಿಸಿಕೊಂಡು ಪ್ರತಿಗಳನ್ನು ಒಂದರ ಹಿಂದೆ ಜೋಡಿಸುತ್ತಾ ಭಾರವಿರುವ ವಸ್ತುವಿನ ಕೆಳಗೆ ಇಟ್ಟಾಗ ಹಾಳೆಯ ರೀತಿಯ ಮಾರ್ಪಾಡಾಗುತ್ತದೆ, ಈ ಪ್ರತಿಗಳಿಗೆ ಮೇಲೆ ಕಬ್ಬಿಣದ ಸೂಜಿಗಳಿಂದ ಒತ್ತಿದಾಗ ಅಕ್ಷರದ ರೂಪದಲ್ಲಿ ಕಾಣಿಸತೊಡಗುತ್ತವೆ, ಈ ಅಕ್ಷರಗಳು ಸ್ಪಷ್ಟವಾಗಿ ಕಾಣಲಿಕ್ಕೆ ಕಪ್ಪು ಬಣ್ಣ ಹಚ್ಚಿ ಆನಂತರ ಹರಿಶಿಣ ಮಿಶ್ರಿತ ಬಟ್ಟೆಯಲ್ಲಿ ಸವರಿ ಒಣಗಿಸಿ ಇಟ್ಟುಕೊಳ್ಳಬೇಕು ಹೀಗೆ ಮಾಡಿದಲ್ಲಿ ಹತ್ತಾರು ವರ್ಷ ಪ್ರತಿಗಳು ಸುರಕ್ಷಿತವಾಗಿರುತ್ತದೆ.
ಇಷ್ಟೆಲ್ಲಾ ಪ್ರಕಾರವನ್ನು ಅನುಸರಿಸಿ ತಮ್ಮ ಜ್ಞಾನಭಂಡಾರವನ್ನು ಮುಂದಿನ ಪೀಳಿಗೆಗಾಗಿ ವರ್ಗಾಯಿಸಿದ ನಮ್ಮ ಪೂರ್ವಜರ ಕಾಯಕ ( ತಾಳೆ ಎಲೆಗಳನ್ನು ಪ್ರತಿಗಳಾಗಿ ಮಾರ್ಪಡಿಸಿದ ಕಲೆ ಎಲ್ಲಕ್ಕೂ ಹೆಚ್ಚಿನದಾಗಿ ಅವರ ತಾಳ್ಮೆ ) ಸ್ಮರಣೀಯ. ಅತಿಯಾದ ಅರಣ್ಯನಾಶದಿಂದ ತಾಳೆ ಮರಗಳು ಕಣ್ಮರೆಯಾಗುತ್ತಿರುವ ಈ ದಿನಗಳಲ್ಲಿ ಹೊಸ ಪ್ರತಿಗಳು ತಯಾರಿಕೆ ಹಾಗೂ ಬಳಕೆ ಇಲ್ಲದೆ ಹೋದರೂ ಇರುವ ಪ್ರತಿಗಳ ಸಂರಕ್ಷಣೆಯ ಕಾಯಕದಲ್ಲಿ ಅನೇಕ ಮಠ-ಮಂದಿರ ಸಂಸ್ಥೆಗಳು ಕಾರ್ಯಪ್ರವೃತ್ತವಾಗಿದೆ, ಮೈಸೂರಿನಲ್ಲಿರುವ Oriental Research Institute ಈ ಪ್ರತಿಗಳನ್ನು ಡಿಜಿಟಲ್ ಸ್ ಮಾಡುತ್ತಿದೆ, ಪ್ರತಿಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕಚೇರಿಯ ಅವಧಿಯಲ್ಲಿ ಸಂಸ್ಥೆಗೆ ಭೇಟಿ ನೀಡಬಹುದು.
ಎಲೆಮರೆ ಕಾಯಿಯಂತಿರುವ ಪ್ರೊಫೆಸರ್ ಎಸ್ ಎ ಕೃಷ್ಣಯ್ಯ ಎಂಬುವವರು ಈ ಪ್ರತಿಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಉಚಿತವಾಗಿ ತಾಳಿ ಪ್ರತಿಗಳ ಸಂಸ್ಕರಣೆಯನ್ನು ಜನರಿಗೆ ಮಾಡಿಕೊಡುತ್ತಿದ್ದಾರಷ್ಟೇಅಲ್ಲದೆ ತಾಳೆಮರ ಬೆಳಸುವವರಿಗೆ ಬೀಜಗಳನ್ನು ಹಾಗೂ 49,000 ಕ್ಕೂ ಅಧಿಕ ಮರಗಳನ್ನು ದೇಶದುದ್ದಕ್ಕೂ ನಡೆಸಿ ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ, ನಿಜಕ್ಕೂ ಇವರ ಕಾಯಕ ಸ್ಮರಣೀಯ.
ಜಾಗ ಇರುವಲ್ಲಿ ಇಂತಹ ಒಂದೊಂದು ತಾಳೆ ಮರಗಳನ್ನು ಬೆಳೆಸಿ ಪೋಷಿಸಿದ್ದಲ್ಲಿ ಕಣ್ಮರೆಯಾಗುತ್ತಿರುವ ಮರ ಉಳಿಸಿಕೊಂಡತಾಗುತ್ತದೆ, ಇತಿಹಾಸದ ಪುಟ ಸೇರುತ್ತಿರುವ ಶಾಸನಗಳ ಬಗ್ಗೆ ಒಲವು ಮೂಡುತ್ತದೆ, ಒಂದು ಕಾಲಕ್ಕೆ ಗತ ವೈಭವದ ಉನ್ನತ ಹಂತದಲ್ಲಿದ್ದ ತಾಳೆಗರಿಯ ಕಾಲವನ್ನು ಸ್ಮರಿಸಿದಂತಾಗುತ್ತದೆ, ಮಕ್ಕಳಿಗೆ ಅರಿವು ಮೂಡುತ್ತದೆ, ಹಾಗೂ ಇವುಗಳ ಸಂರಕ್ಷಣೆಯಲ್ಲಿ ನಮ್ಮದು ಒಂದು ಅಳಿಲು ಸೇವೆಯಾಗುತ್ತದೆ.
ಧನ್ಯವಾದಗಳು.
Nice
ReplyDeleteThis comment has been removed by the author.
ReplyDeletenice explaination
DeleteYou have written this article very well, you have given lot of information about "Thale Gida" and importance of correlation between different plant families.
ReplyDelete