Friday, July 1, 2022

ಮಣ್ಣಿಂದ ಕಾಯ ಮಣ್ಣಿಂದ.



                     -  ಎಸ್ ಪಿ ತೇಜರಾಜು.

 ದಾಸರ ಪದಗಳಲ್ಲಿ ಒಂದಾದ ಮಣ್ಣಿಂದ ಕಾಯ ಮಣ್ಣಿಂದ ಗೀತೆಯನ್ನು ಕೇಳಿರಬಹುದು, ಜಾನಪದದಲ್ಲಿ ಬೆಳಗಾಗೆದ್ದು ಕುಂಬಾರಣ್ಣ, ಬೆಳಗಾಗಿ ಎದ್ದು ಯಾರ್ಯಾರ ಮುಖ ನೋಡಲಿ ಎಳ್ಳು ಜೀರಿಗೆ ಬೆಳೆಯೋ ಭೂಮ್ತಾಯಿನಾ ಎದ್ದೊಂದುಗಳಿಗೆ ನೆನೆದೇನು ಎಂಬ ಗೀತೆಯನ್ನು, ಈಳೆ ನಿಂಬೆ ಮಾವು ಮಾದಲಿಕೆಗೆ ಹುಳಿ ನೀರೆರೆದವರಾರಯ್ಯ ? ಎಂಬ ವಚನವನ್ನು, ಕುವೆಂಪು ರಚಿತ ಉಳುವ ಯೋಗಿಯ ನೋಡಲ್ಲಿ, ಡಾಕ್ಟರ್ ರಾಜಕುಮಾರ್ ಅವರ ಹಾಡಿರುವ ಆಗದು ಎಂದು ಕೈ ಕಟ್ಟಿ ಕುಳಿತರೆ, ನಾವಿರುವ ತಾಣವೆ ಗಂಧದ ಗುಡಿ ಎಂಬ ಗೀತೆಗಳನ್ನು ನೀವು ಆಲಿಸಿರಬಹುದು, ಈ ಗೀತೆಗಳೆಲ್ಲವೂ ಜನಪ್ರಿಯವಾದದ್ದು ಮಣ್ಣಿನ ಶ್ರೇಷ್ಠತೆಯಿಂದ ತಾನೇ ?

ಮಣ್ಣಿಲ್ಲಿ ಅಂತಹ ವಿಷಯ ಏನಿದೆ ಎಂದು ಭಾವಿಸಿ ಸುಮ್ಮನಾಗಿಬಿಡುತ್ತೇವೆ ಆದರೆ ಈ ಮಣ್ಣು ಎಷ್ಟು ವಿಷಯಗಳಲ್ಲಿ ಕಲೆತು ಬೆರೆತು ಕರಗತವಾಗಿದೆ ಎಂದರೆ ನಮ್ಮ ದೇಹದ ಪ್ರತಿ ಜೀವಕೋಶದಲ್ಲಿಯೂ ಮಣ್ಣಿನ ಕಣಗಳು ಅಡಕವಾಗಿದೆ.

ಭೂಮಿಯ ಮೇಲೆ ಮಣ್ಣೇ ಸರ್ವಸ್ವ, ಹೌದು ನಿಜ ಅಲ್ಲವೇ ? ಮಣ್ಣಿಂದಲೇ ಮರ-ಗಿಡಗಳು, ಮಣ್ಣಿಂದಲೇ ಆಹಾರ, ಮಣ್ಣಿಂದಲೇ ನೀರು, ಮಣ್ಣಿಂದಲೇ ನಾವು, ಇದೇ ಮಣ್ಣನ್ನು ಬಳಸಿಯೇ ಅಲ್ಲವೇ ಮಾನವ ಮನೆ-ಮಠ, ಮಡಕೆ, ಹೆಂಚನ್ನು ಮಾಡಿದ್ದು ? ಈ ಮಣ್ಣೊಳಗೆ ತಾನೇ ಗಿಡಗಳಿಗೆ ಬೇಕಾದಂತಹ ಸಮಸ್ತ ಪೋಷಕಾಂಶಗಳು ಅಡಕವಾಗಿದ್ದು, ಅಂತರ್ಜಲ ಸೇರಿದ್ದು, ಮಣ್ಣ ಮಗ ಕೆಸರಲ್ಲಿ ಬೆರೆತು ತಾನೆ ಶ್ರೀಮಂತನಾಗಿದ್ದು, ಸ್ತ್ರೀಯರು ಬಲು ಇಷ್ಟ ಪಡುವ ಚಿನ್ನ, ಬೆಳ್ಳಿ, ವಜ್ರ ಬಗೆಬಗೆಯ ಲೋಹಗಳು ದೊರಕಿದ್ದು, ಪ್ರಪಂಚದ ಎತ್ತರದ ಪ್ರತಿಮೆ ಇರುವುದು ಈ ಮಣ್ಣ ಮೇಲೆಯೇ ತಾನೇ ?

ಎಲ್ಲಕ್ಕಿಂತ ಮಿಗಿಲಾಗಿ ಭೂಮಿಯ ಮೇಲಿರುವ ಸಕಲ ಚರಾಚರ ವಸ್ತುಗಳು ಕೂಡ ಹುಟ್ಟಿರುವುದು ಈ ಮಣ್ಣಿಂದಲೇ, ಉಸಿರು ನಿಂತಾಗ ಕೊನೆಗೆ ಸೇರುವುದು ಈ ಮಣ್ಣಲ್ಲೇ, ಇಷ್ಟೆಲ್ಲಾ ಕಾರಣಗಳಿಂದಲೇ ಮಣ್ಣು ಮಾನವನ ಜೀವನದಲ್ಲಿ ಜೀವಂತಿಕೆಯನ್ನು ಪಡೆದುಕೊಂಡಿದೆ. 

ಕಟ್ಟಡ ಮಣ್ಣ ಮೇಲೆ ನಿಂತಿರುವುದರಿಂದ ಜೀವಂತಿಕೆಯನ್ನು ಪಡೆದುಕೊಳ್ಳಬಹುದೆಂದಾದರೆ, ಮಣ್ಣಿಗೆ ಜೀವಂತಿಗೆ ಹೇಗೆ ಬಂದಿತು ? ಮಣ್ಣಿನ ನಿಜವಾದ ಜೀವಂತಿಕೆಗೆ ಎಂದರೇನು ? ಮಣ್ಣು ನಿಜವಾಗಿಯೂ ಜೀವಿಸುತ್ತದ ? ಹಾಗಾದರೆ ಅದು ಹೇಗೆ ಜೀವಿಸುತ್ತದೆ ? ಇಂತಹ ಅನೇಕ ಕುತೂಹಲ ಸಂಗತಿಯ ಆಗರವೇ ಇಂದಿನ ಅಂಕಣ.

ಭೂಮಿ ಉಗಮವಾಗಿ ಸುಮಾರು 4.5 ಬಿಲಿಯನ್ ವರ್ಷಗಳಾಗಿದೆ, ಇದರಲ್ಲಿ ಸುಮಾರು 1.5 ಬಿಲಿಯನ್ ವರ್ಷಗಳ ಹಿಂದೆ ಭೂಮಿಯ ಮೇಲೆ ಮಣ್ಣಿನ ಪದರ ರಚನೆಯಾಗಿ ಜೀವ ಚಕ್ರ ಪ್ರಾರಂಭವಾಗತೊಡಗಿತು, ಮಣ್ಣು ಭೂಮಿಯ ಮೇಲಿನ ತೆಳುವಾದ ಮೇಲ್ಪದರ, ( ಮಾನವನ ದೇಹದ ಮೇಲಿರುವ ಚರ್ಮದ ಹಾಗೆ ) ಇದು ಸಾವಯವ ವಸ್ತು, ಖನಿಜ, ಅನಿಲ, ದ್ರವಗಳ ಸಮ್ಮಿಶ್ರಣ, ತರಗೆಲೆ, ಕೊಳೆತ ಪ್ರಾಣಿಗಳ ದೇಹ ಮಣ್ಣೊಳಗೆ ಸಮ್ಮಿಶ್ರಣವಾಗಿದೆ ಮಣ್ಣು ಮತ್ತಷ್ಟು ಜೀವಂತಿಕೆಯನ್ನು ಪಡೆಯುತ್ತದೆ.

ಮಣ್ಣು ಶಿಲೆಗಳ ಉಪ ಉತ್ಪನ್ನ, 1 CM ಮಣ್ಣು ತಯಾರಾಗಲು 400 ರಿಂದ 500 ವರ್ಷ ಸಮಯ ತೆಗೆದುಕೊಳ್ಳುತ್ತದೆ. ಸತ್ವಯುತ 1ಗ್ರಾಂ ಮಣ್ಣಿನಲ್ಲಿ 2.5 ಬಿಲಿಯನ್ micro-organisms ಜೀವಿಸುತ್ತವೆ. ಮಣ್ಣು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಭಿನ್ನವಾಗುತ್ತಾ ಹೋಗುತ್ತದೆ, ರುಚಿ, ಬಣ್ಣ, ಸತ್ವ, ರಚನೆ ಆಧಾರದ ಮೇಲೆ ಮುಖ್ಯವಾಗಿ 6 ವಿಧವಾಗಿ ವಿಂಗಡಿಸಲಾಗಿದೆ.1 ಮೆಕ್ಕಲು ಮಣ್ಣು, 2 ಕೆಂಪು ಮಣ್ಣು,3 ಕಪ್ಪು ಮಣ್ಣು,4 ಲ್ಯಾಟರೈಟ್ ಮಣ್ಣು,5 ಮರುಭೂಮಿ ಮಣ್ಣು, 6 ಅರಣ್ಯ ಮಣ್ಣು. 
 

ಸತ್ವಯುತ ಮಣ್ಣು ಕೇವಲ 100 ಸೆಂಟಿಮೀಟರ್ ಮಾತ್ರ ಇದ್ದು ಅದರಲ್ಲಿ ಮೊದಲ 50 CM ಮಣ್ಣು ಬಹಳ ಶ್ರೀಮಂತವಾಗಿರುತ್ತದೆ ಈ ಸಂಪತ್ತು ಗಿಡಮರಗಳ ಬೆಳವಣಿಗೆ ಬಹುಮುಖ್ಯವಾಗಿರುತ್ತದೆ, ಮಣ್ಣು ಖನಿಜ ಸಂಪನ್ಮೂಲಗಳಿಂದಲೂ ಆವೃತವಾಗಿದೆ ಅವುಗಳೆಂದರೆ  ಮೆಗ್ನೀಷಿಯಂ, ಮ್ಯಾಂಗನೀಸ್, ಕ್ಯಾಲ್ಸಿಯಂ, ಐರನ್, ಜಿಂಕ್, ಕಾಪರ್, ಸಿಲ್ವರ್, ಇತ್ಯಾದಿ, ಇಷ್ಟೆಲ್ಲಾ ಅಂಶಗಳು ಮಣ್ಣಲ್ಲಿ ಇದ್ದಿದ್ದರಿಂದ ಕರ್ನಾಟಕ ಗಂಧದಗುಡಿಯಾದದ್ದು.

ಇನ್ನೂ ಕೃಷಿಯ ವಿಷಯಕ್ಕೆ ಬರುವುದಾದರೆ ಮಣ್ಣಿರದೆ ಯಾವ ಬೆಳೆಯನ್ನು ಬೆಳೆಯಲಿಕ್ಕೆ ಸಾಧ್ಯವಿಲ್ಲ, ಇಡೀ ಪ್ರಪಂಚಕ್ಕೆ ಮಾದರಿಯಾದ ಕೃಷಿ ಪದ್ಧತಿ ಇದ್ದಿದ್ದು ನಮ್ಮ ಭಾರತದಲ್ಲಿ, ಇದಕ್ಕೆ ಬಹಳ ಪುರಾವೆ ಹಾಗೂ ಉಲ್ಲೇಖಗಳು ದೊರಕುತ್ತದೆ, ಸುಮಾರು ಹತ್ತನೇ ಶತಮಾನದ ಕಾಲದಲ್ಲಿಯೇ ಇಲ್ಲಿಯ ಸುರಪಾಲ ತನ್ನ ವೃಕ್ಷಾಯುರ್ವೇದ ಮೂಲಕ ಪಂಚಭೂತಗಳಲ್ಲಿ ಒಂದಾದ ಮಣ್ಣಿನ ಬಗ್ಗೆ ಸವಿಸ್ತಾರವಾಗಿ ಚರ್ಚಿಸಿದ್ದಾರೆ, ಮಣ್ಣಿನ ರಚನೆ, ಧರ್ಮ, ಭೌಧಿಕ ಗುಣಧರ್ಮ, ಗಿಡಗಳ ಆಯ್ಕೆ, ಮಣ್ಣಿನ ಆಧಾರದ ಮೇಲೆ ಗಿಡಗಳನ್ನು ಬೆಳೆಯುವ ಕ್ರಮ, ಮಣ್ಣು ಹಾಗು ಗಿಡದ ಪೋಷಣೆ, ಮಳೆ, ನಕ್ಷತ್ರ, ಉಳುಮೆ ಮಾಡಬೇಕಾದಂತಹ ದಿನ, ಹೀಗೆ ಹತ್ತಾರು ವಿಷಯಗಳ ಬಗ್ಗೆ ಬಹಳ ವಿಸ್ತೃತವಾಗಿ ವೃಕ್ಷಾಯುರ್ವೇದದಲ್ಲಿ ತಿಳಿಸಲಾಗಿದೆ, ಇದಲ್ಲದೆ, ಅಥರ್ವವೇದ, ವರಹಮಿಹಿರರ ಬೃಹತ್ ಸಂಹಿತೆ, ಸಾರಂಗಧರನ ಸಾರಂಗಧರ ಪದ್ಧತಿ ಕೃಷಿಯ ಬಗ್ಗೆ ಮಾಹಿತಿ ದೊರಕುತ್ತದೆ.

                          

ಮಾನವ ತಯಾರಿಸಿದ ಕೆಲವು ವಸ್ತುಗಳನ್ನು ಹೊರತುಪಡಿಸಿ ಪ್ರಕೃತಿಯಲ್ಲಿ ದೊರಕುವ ಎಲ್ಲ ವಸ್ತುಗಳು ನೂರಕ್ಕೆ ನೂರು ಪ್ರತಿಶತ ಜೈವಿಕ ಕ್ರಿಯೆಯಲ್ಲಿ ವಿಲಿನವಾಗುತದೆ, ಅರ್ಥಾರ್ಥ ಭೂಮಿಯ ಮೇಲೆ ತ್ಯಾಜ್ಯ ಎನ್ನುವುದು ಯಾವುದೂ ಇಲ್ಲ. ಇಲ್ಲಿ ಬಹಳ ದೊಡ್ಡದಾಗಿ ಬೆಳೆದ ಮರವು ಕೊನೆಗೊಂದು ದಿನ ಮಣ್ಣಲ್ಲಿ ಲೀನವಾಗುತ್ತದೆ, ಮಣ್ಣಿನಲ್ಲಿ ಅಡಕವಾಗಿರುವ ಸೂಕ್ಷ್ಮಾಣುಜೀವಿಗಳು ಬೇರನ್ನು ತಿಂದು ಸೃಷ್ಟಿಯಾಗುವ ಜಾಗದ ಮೂಲಕ ಮಳೆ ನೀರು ನೇರವಾಗಿ ಅಂತರ್ಜಲ ಸೇರುತ್ತದೆ, ಇದೇ ಮಣ್ಣಲಿ ಗೆದ್ದಲು ಹುಳುಗಳು ಗೂಡು ನಿರ್ಮಿಸುತ್ತದೆ ಇದರಲ್ಲಿ ಹಾವುಗಳು ಬಂದು ಸೇರುತ್ತವೆ, ಎರೆಹುಳು ಕೊಳೆತ ವಸ್ತುವನ್ನು ತಿಂದು ಮಣ್ಣನ್ನು ಮತ್ತಷ್ಟು ಸಮೃದ್ಧಿಯಾಗಿಸುತ್ತದೆ, ಮಳೆಗಾಲ ಮುಗಿಯುತ್ತಿದ್ದಂತೆ ಶಂಖದಹುಳು ಮಣ್ಣಿನೊಳಗೆ ನಿದ್ರಾವಸ್ಥೆಗೆ ಹೋಗುತ್ತದೆ, ಒಣಗಿನಿಂತ ಭೂಮಿಗೆ ವರ್ಷದ ಪ್ರಥಮ ಮಳೆಯಾದಾಗ ಮಣ್ಣಿನ ಸುವಾಸನೆ ಎಲ್ಲೆಡೆಯೂ ಪಸರಿಸುತ್ತದೆ, ಚಿಟ್ಟೆಗಳು ಹಾರಲು ಪ್ರಾರಂಭಿಸುತ್ತದೆ.

ಮಣ್ಣು ಕೇವಲ ಕೃಷಿಗಷ್ಟೇ ಸೀಮಿತವಾಗಿರದೆ ಆಯುರ್ವೇದದಲ್ಲಿಯೂ ಬಳಕೆಯಲ್ಲಿತ್ತು ಶುಶೃಷ ಹಾಗೂ ಧನ್ವಂತ್ರಿ ಮಣ್ಣಿನ ಸ್ನಾನಕ್ಕೆ ಆದ್ಯತೆಯನ್ನು ನೀಡಿದ್ದು ಮಣ್ಣಿನ ಸ್ನಾನದಿಂದ ಆಗುವ ಪ್ರಯೋಜನಗಳನ್ನು ತಿಳಿಸಿದ್ದಾರೆ.

ಈ ಮಣ್ಣು ಬಹಳಷ್ಟು ಘಟನೆಗಳಿಗೆ ಸಾಕ್ಷೀಭೂತವಾಗಿದೆ ಹಿಂದೂಗಳ ನಂಬಿಕೆಯ ಪ್ರಕಾರ ಹೇಳುವುದಾದರೆ ವಿಷ್ಣುವಿನ ಅವತಾರ, ರಾಮಾಯಣ, ಮಹಾಭಾರತ, ಕುರುಕ್ಷೇತ್ರ ಯುದ್ಧ ನಡೆದಿದ್ದು ಈ ಮಣ್ಣಿನ ಮೇಲೆ, ಹಾಗೂ ಮಣ್ಣಿಗಾಗಿಯೇ, ರಾಮಾಯಣದ ಸುಂದರಕಾಂಡದಲ್ಲಿ ಬರುವ ಗೊಂಡಾರಣ್ಯ, ವಿಂದ್ಯಾರಣ್ಯ, ಹರ್ಬಧಾರಣೆಯ, ನೇಮಿಕಾರಣ್ಯ, ದಂಡಕಾರಣ್ಯ ದಂತಹ ಅರಣ್ಯವು ಸೃಷ್ಟಿಯಾಗಿದ್ದು ಈ ಮಣ್ಣು ಮೇಲೆ.

ಪ್ರಪಂಚದ ಅತ್ಯಂತ ಎತ್ತರದ ಶಿಖರ ನಿಂತಿರುವುದು ಈ ಭೂಮಿಯ ಮೇಲೆ, ಚಂದ್ರನೂ ಭೂಮಿಯ ಒಂದು ಭಾಗವೇ, ಸಮುದ್ರದ ಆಳವನ್ನು ನಾವು ಕಂಡುಹಿಡಿಯದೆ ಇರಬಹುದು ಆದರೆ ಅದರ ಆಳದಲ್ಲಿರುವುದು ಭೂಮಿಯೇ.

ಹೂವಿಗೆ ಪರಿಮಳ ಬಂದಿದ್ದು ಮಣ್ಣಿನಿಂದಲೇ, ಹೂವಿಗೆ ಬಣ್ಣದ ಮೆರಗು ಬಂದಿದ್ದು ಮಣ್ಣಿನಿಂದಲೇ, ಹೂ ಹಿಡಿದು ಕಾಯಿಯಾಗಿ ಮಾರ್ಪಾಡಾಗುವಗ ಸೇರಲ್ಪಟ್ಟ ಸಿಹಿ, ಹುಳಿ, ಉಪ್ಪು ಸೇರಿದ್ದು ಮಣ್ಣಿನಿಂದಲೇ, ಸೂರ್ಯಕಾಂತಿಗೆ ಎಣ್ಣೆ ಅಂಶ ಬಂದಿದ್ದು ಮಣ್ಣಿನಿಂದಲೇ, ಇವು ಕಣ್ಣಿಗೆ ಗೋಚರಿಸುವ ಆಹಾರವಾದರೆ, ಕಣ್ಣಿಗೆ ಗೋಚರಿಸದೆ ಭೂಮಿಯೊಳಗೆ ಆಹಾರದ ಮತ್ತೊಂದು ಖಜಾನೆಯಾದ ಗೆಡ್ಡೆಗೆಣಸು ಬೆಳವಣಿಗೆಗೆ ಸಹಕರಿಸಿದ್ದು ಮಣ್ಣೆ, ನಾವು ಬಳಸಲ್ಪಡುವ ಚಿನ್ನ, ಖನಿಜ ಸಂಪನ್ಮೂಲಗಳು, ಪೆಟ್ರೋಲ್ ದೊರೆತಿದ್ದು ಮಣ್ಣಿನ ಒಳಗಿಂದನೆ, ಅಭಿವೃದ್ಧಿಯ ಕಾಮಗಾರಿಗಳಾಗುತ್ತಿರುವುದು ( ರಸ್ತೆಯ, ರೈಲ್ವೆ, ಬಂದರೂ etc ) ಈ ಮಣ್ಣು ಮೇಲೆ.

ಇಷ್ಟೆಲ್ಲಕ್ಕೂ ಮಣ್ಣು ಬೇಕು ಆದುದರಿಂದಲೇ ಹಿರಿಯರು ಹೇಳಿದ್ದು ಮಣ್ಣಿಂದಲೇ ಸರ್ವಸ್ವವೆಂದು. ಆಧುನಿಕ ಭರಾಟೆಯಲ್ಲಿ ಓಡುತ್ತಿರುವ ನಾಗರಿಕ ಸಮುದಾಯಕ್ಕೂ ಹಾಗೂ ಪ್ರಕೃತಿಗೂ ಇರಬೇಕಾದ ಕೊಂಡಿ ಕಳಚಿದೆ, ಇದಕ್ಕೆ ಅನೇಕ ಕಾರಣಗಳಿವೆ, ಮಾನವ ಎಲ್ಲಾ ವಿಧದಿಂದಲೂ ತನಗೆ ಅರಿವಿದ್ದರೂ ಅರಿವಿಲ್ಲದಂತೆ ಭೂಮಿಯನ್ನು ಹಾಳು ಮಾಡುತ್ತಿದ್ದಾನೆ, ಭೂಮಿಗೂ ಒಂದು ಹಂತದ ತನಕ ತಡೆಯುವ ಶಕ್ತಿ ಇದೆ ಅದು ಮಿತಿಮೀರಿದಲ್ಲಿ ಎಲ್ಲವನ್ನೂ ಪ್ರಕೃತಿಯ ವಿಕೋಪ ಎಂಬ ಹೆಸರಿನಲ್ಲಿ ಅಪೋಹನ ಪಡೆಯುತ್ತದೆ.

ಮಣ್ಣನ್ನ ಜೀವಂತವಾಗಿ ಉಳಿಸಿಕೊಳ್ಳಲೇಬೇಕಾದಂತಹ ಅನಿವಾರ್ಯ ಪರಿಸ್ಥಿತಿಯಲ್ಲಿ ನಾವಿದ್ದೇವೆ, ಈ ಕಾರ್ಯಕ್ಕೆ ಕೃಷಿಯಲ್ಲಿ ಯಥೇಚ್ಛ ಮರ-ಗಿಡಗಳು ಬರಬೇಕು, ಜಾಗ ಇದ್ದಲ್ಲೆಲ್ಲ ಹಸಿರು ಆವರಿಸಬೇಕು, ಪ್ರತಿಯೊಬ್ಬರೂ ಸಾಧ್ಯವಾದಷ್ಟು ಮರಗಿಡಗಳನ್ನು ಬೆಳೆಸಬೇಕು, ಸಾವಯವ ಕೃಷಿಯನ್ನು ಅವಲಂಬಿಸಬೇಕು, ಮಳೆನೀರಿಗೆ ಭೂಮಿಯ ಮೇಲ್ಮಣ್ಣು ಕೊಚ್ಚಿ ಹೋಗದಂತೆ ತಡೆಯಬೇಕು, ಇಲ್ಲವಾದಲ್ಲಿ ಮಣ್ಣು ಮರುಭೂಮಿಯಾಗಿ ಮಾರ್ಪಾಡಾಗುತ್ತದೆ, ಇದಕ್ಕೆ ಸಂಬಂಧಿಸಿದಂತೆ ಇಂಗ್ಲಿಷಿನಲ್ಲಿ Kiss the ground ಎಂಬ ಚಲನಚಿತ್ರವಿದೆ ಅದನ್ನ ತಪ್ಪದೆ ವೀಕ್ಷಿಸಿ.

ಬ್ರಹ್ಮಪುತ್ರ ನದಿಯಲ್ಲಿ ಕಂಡುಬರುವ ಅತ್ಯಂತ ದೊಡ್ಡದಾದ ಮಜುಲಿ ದ್ವೀಪ ನದಿಯ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದು ಇದನ್ನು ಮನೆಗಂಡ ಜಾಧವ್ ಅವರು ತಾವೊಬ್ಬರೇ ಗಿಡಗಳನ್ನು ನೆಟ್ಟು ಪೋಷಿಸಿದ್ದಾರೆ, ಇಂದು ಆ ಮರಗಳೆಲ್ಲವೂ ಎತ್ತರಕ್ಕೆ ಬೆಳೆದು ನಿಂತಿವೆ ಹಾಗೂ ನದಿಯ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದಂತಹ ಮಜುಲಿ ದ್ವೀಪ ಉಳಿದುಕೊಂಡಿದೆ, ಯಾವುದೇ ಫಲಾಪೇಕ್ಷೆ ನಿರೀಕ್ಷಿಸದೆ ಮೌನದಿಂದಲೇ ಜಾಧವ್ ಅವರು ಈ ಕೆಲಸವನ್ನು ಮಾಡಿದ್ದಾರೆ ಈ ಕಾರ್ಯ ನಿಜಕ್ಕೂ ಶ್ಲಾಘನೀಯ.

ಮಣ್ಣಿನ ಬಗ್ಗೆ ಕೇವಲ ದೊಡ್ಡವರಿಗೆ ಅಷ್ಟೇ ಅಲ್ಲದೆ ಮಕ್ಕಳಿಗೂ ಮಾಹಿತಿಯ ಕೊರತೆ ಇದೆ ಅದಕ್ಕಾಗಿ ಈ ಕೆಳಗಿನ ಪುಟ್ಟದೊಂದು ಪ್ರಯೋಗವನ್ನು ಮಾಡಿ : ಎರಡು ಹಿಡಿಯಷ್ಟು ಮಣ್ಣನ್ನು ಆಯ್ದು ತನ್ನಿ, ಅದನ್ನ ಒಂದು ವಾರ, ಹದಿನೈದು ಅಥವಾ ಒಂದು ತಿಂಗಳಾದರೂ ಒಣಗಲು ಬಿಡಿ, ಒಣಗಿದಾಗ ಎಲ್ಲಾ ಸತ್ವಗಳು ಸಾಯುತ್ತವೆ ಅಲ್ಲವೇ ? ನಂತರ ಚೆನ್ನಾಗಿ ಒಣಗಿದ ಮಣ್ಣನ್ನು ತೆಗೆದು ಒಂದು ಡಬ್ಬದಲ್ಲಿಡಿ, ಆ ಮಣ್ಣಿಗೆ ನೀವು ಯಾವುದೇ ಬೀಜವನ್ನು ಹಾಕುವುದು ಬೇಡ, ಪ್ರತಿದಿನವೂ ಸ್ವಲ್ಪ ಸ್ವಲ್ಪ ನೀರನ್ನು  ಹಾಕುತ್ತಾ ಬನ್ನಿ, ಕೆಲವು ದಿನಗಳು ಕಳೆಯುತ್ತಿದ್ದಂತೆ, ಮಣ್ಣು ಜೀವಂತಿಕೆಯನ್ನು ಪಡೆದು ಯಾವುದೋ ಒಂದು ಸಸ್ಯ ಚಿಗುರೊಡೆಯುತ್ತದೆ ಈ ಪ್ರಕ್ರಿಯೆ ಹೇಗೆ ಆಯಿತು ? ಹಾಗಾದರೆ ಆ ಮಣ್ಣಿಗೆ ಜೀವಂತಿಕೆ ಹೇಗೆ ಬಂದಿತು ? ಇದನ್ನೇ ಪಾಶ್ಚಾತ್ಯ ದೇಶದ ಪ್ರಮುಖ ವಿಜ್ಞಾನಿಗಳಲ್ಲಿ ಒಬ್ಬರಾದ ಲೂಯಿಸ್ ಪಾಶ್ಚರ್ ಇದನ್ನ ಸೂಪರ್ ನ್ಯಾಚುರಲ್ ಪವರ್ ( Super natural power ) ಎಂದು ಕರೆದದ್ದು. ನಮ್ಮ ಸುರಪಾಲ ಜೀವಂತಿಗೆ ಎಂದದ್ದು, ಜಾನಪದದಲ್ಲಿ ಭೂಮಿ ತಾಯಿ ಎಂದು ನಮಿಸಿದ್ದು.

ಮಣ್ಣಿನ ಮೇಲೆ ಜೀವಿಸುತ್ತಿರುವ ನಮ್ಮ ಜೀವಂತಿಕೆ ಬಹಳ ಚಿಕ್ಕದು, ಮಣ್ಣು ಮುಂದಿನ ಪೀಳಿಗೆಗಾಗಿ ಉಳಿಸುವ ಜವಾಬ್ದಾರಿ ನಮ್ಮ ಮೇಲೆ ಇದೆ ಸಾಧ್ಯವಾದಷ್ಟು ಮರಗಳನ್ನು ಬೆಳೆಸೋಣ ಮಣ್ಣಿನ ಜೀವಂತಿಕೆಯನ್ನು ಉಳಿಸೋಣ.

ಕೊನೆಯದಾಗಿ, ಅಂದಹಾಗೆ ಸದ್ಗುರು ಜಗ್ಗಿ ವಾಸುದೇವ ಅವರು ಜಾಗತಿಕವಾಗಿ ಕೈಗೊಂಡಿರುವ ಮಣ್ಣು ಉಳಿಸಿ / Save soil ಅಭಿಯಾನದ ಬಗ್ಗೆ ನಿಮಗೀಗಾಗಲೇ ತಿಳಿದಿರಬಹುದು, ಇದು ಕೂಡ ಮಣ್ಣಿನ ಮಹತ್ವವನ್ನು ತಿಳಿಸುತ್ತದೆ.

ಧನ್ಯವಾದಗಳು.



4 comments:

  1. u have very good knowledge about nature nice article

    ReplyDelete
  2. ಲೇಖನ ಬಹಳ ಚೆನ್ನಾಗಿದೆ

    ReplyDelete
  3. A Very good article about soil.and I should appreciate Mr Tej raju for his passion towards nature,he had collected lots of information about soil.I wish more articles come from him.Tq

    ReplyDelete