ಬೇಸಿಗೆಯಲ್ಲಿ ನಿಸರ್ಗದ ಚಿತ್ತಾರ ಒಂದು ರೀತಿಯಾದರೆ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆಯೇ ಪ್ರತಿ ವೃಕ್ಷವು ಚೈತನ್ಯದಿಂದ ತುಂಬಿ ತುಳುಕುತ್ತಿರುತ್ತದೆ. ಇದೇ ಮಳೆಗಾಲದ ಸಂದರ್ಭ ಬೇಸಿಗೆಯಲ್ಲಿ ಉದುರಿದಂತಹ ಎಲ್ಲ ತರಗೆಲೆಗಳು ಕೊಳೆಯಲು ಅನುಕೂಲವಾದಂತಹ ವಾತಾವರಣವನ್ನು ಸೃಷ್ಟಿಸುತ್ತವೆ. ಇವುಗಳ ನಡುನಡುವೆಯೇ ತಿಂಗಳಾನುಗಟ್ಟಲೆ ನಿದ್ರಾವಸ್ಥೆಗೆ ಜಾರಿದ್ದ ಎರೆಹುಳುಗಳು, ಶಂಕ ಹುಳುಗಳು, ಕಪ್ಪೆ, ಚಿಟ್ಟೆ, ಗೆದ್ದಲು ಹುಳು, ಸಾವಿರಕಾಲಿನ ಹುಳು, Train ಹುಳು ಗೋಚರಿಸುತ್ತವೆ. ಇರುವೆಗಳು ಭೂಮಿಯಲ್ಲಿದ್ದ ತಮ್ಮ ಗೂಡುಗಳನ್ನು ಮರದ ಮೇಲೆ ಎಲೆಗಳಿಂದ ನಿರ್ಮಿಸಿಕೊಳ್ಳುವುದಲ್ಲದೆ, ಮಳೆಗಾಲಕ್ಕೆ ಬೇಕಾದಷ್ಟು ಆಹಾರವನ್ನು ಕಾಲಾಳು ಇರುವೆಗಳು ಸಂಗ್ರಹಿಸುತ್ತವೆ. ಜೇನುಹುಳುಗಳು ಸಹ ತನಗೆ ಮಳೆಗಾಲಕ್ಕೆ ಆಗುವಷ್ಟು ಆಹಾರವನ್ನು ಸಂಗ್ರಹಿಸಿ ಕೊಂಡಿರುತ್ತದೆ. ಸೊಳ್ಳೆಗಳ ಬೆಳವಣಿಗೆ ಈ ಸಮಯಕ್ಕೆ ಗಣನೀಯವಾಗಿ ಹೆಚ್ಚಾಗಿ ಕಪ್ಪೆ ಬಾವಲಿಗೆ ಆಹಾರವನ್ನು ಒದಗಿಸುತ್ತವೆ.
ಹುಡುಗಾಟದ ಬುದ್ಧಿಯಲ್ಲಿ ಚಿಕ್ಕವನಿದ್ದಾಗ ನಾ ಏಕೆ ಮನೆಯ ಮುಂದೆ ಒಂದು ಬಾವಿಯನ್ನು ತೋಡಿ ಅದರಲ್ಲಿ ಮೀನು ಆಮೆ ಸಾಕಬಾರದು ಎಂಬ ಕಲ್ಪನೆಯನ್ನು ಮಾಡಿದ್ದೆ ಇದರ ಸಲುವಾಗಿ ಹಾರೆ ಗುದ್ದಲಿ ಹಿಡಿದು ಬಾವಿ ತೋಡಲು ಮುಂದಾದಾಗ ಮನೆಯವರಿಂದ ತೀವ್ರ ಟೀಕೆಗೆ ಗುರಿಯಾದೆ, ಮನೆ ಮುಂದೆ ಹಾಗೆ ವಾಸ್ತು ಪ್ರಕಾರವಿಲ್ಲದೆ ಬಾಗಿ ತೋರಬಾರದು ಎಂದು ಬೈದಿದ್ದರು. ಆದರೂ ಛಲಬಿಡದೆ ಮತ್ತೊಮ್ಮೆ ಪ್ರಯತ್ನಿಸಿದ್ದೆ, ಹತ್ತರಿಂದ ಹದಿನೈದು ದಿನ ಎಡಬಿಡದೆ ಪ್ರತಿದಿನ ಎರಡು ಅಡಿಯಂತೆ 10 ಅಡಿಯವರೆಗೂ ತೋಡಿದ್ದೆ, ಅಷ್ಟರೊಳಗಾಗಿ ನಾನು ಅದರೊಳಗೆ ಮುಳುಗಿದ್ದ ಕಾರಣ, ಮಣ್ಣನ್ನು ಎತ್ತಿ ಹಾಕಲು ಯಾರ ಸಹಾಯವೂ ಇಲ್ಲದಿದ್ದುದು, ಕನಸಿನ ಕಾಮಗಾರಿ ಕನಸಾಗಿಯೇ ಉಳಿಯಿತು, ಇದಾದ ಸ್ವಲ್ಪ ದಿನದ ಬಳಿಕ ಮನೆಯವರು ನಾ ಕಷ್ಟಪಟ್ಟು ತೋಡಿದ್ದ ಈ ಗುಂಡಿಯನ್ನು ಗೊಬ್ಬರದ ಗುಂಡಿಯಾಗಿ ಪರಿವರ್ತಿಸಿದರು.
ಅಜ್ಜಿ ಮನೆಗೆ ಬಂದಾಗಲೆಲ್ಲ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆಯ Roundನಲ್ಲಿ ಎಲ್ಲಾ ಗಿಡಮರಬಳ್ಳಿಗಳು ಪಕ್ಷಿಗಳನ್ನು ಸೂಕ್ಷ್ಮವಾಗಿ ಗ್ರಹಿಸುತ್ತಾರೆ ಹಾಗೂ ಈ ಸಲ ಮನೆಗೆ ಯಾವ ಪಕ್ಷಿ ಹೊಸದಾಗಿ ಬಂದಿದೆ ಯಾವ ಪಕ್ಷಿಯ ಮೊಟ್ಟೆ ಇಟ್ಟು ಮರಿಮಾಡಿ ಹಾರಿಹೋಯಿತು, ಯಾವ ಪಕ್ಷಿ ಹೊಸ ಗೂಡು ಕಟ್ಟಿದೆ, ಹೊಸ ಪಕ್ಷಿಯ ಶಬ್ದ ಎಲ್ಲಿಯಾದರೂ ಕೇಳಿಸುತ್ತಿದೆಯೇ, ಯಾವುದಾದರೂ ಮರದ ಬೆಳವಣಿಗೆ ಕುಂಠಿತವಾಗುತ್ತಿದೆಯಾ, ಅವುಗಳಿಗೆ ಯಾವುದಾದರೂ ಕೀಟಬಾಧೆ ಇದೆಯೇ, ಯಾವುದಾದರೂ ಬಳ್ಳಿ ಆಸರೆ ಗಿಡವನ್ನು ಬೇಡುತ್ತಿದೆಯೇ, ಯಾವುದಕ್ಕೆ ನೀರು ಹೆಚ್ಚಾಗಿದೆ ಇನ್ನು ಯಾವುದಕ್ಕೆ ಕಡಿಮೆಯಾಗಿದೆ, ಯಾವುದಕ್ಕೆ ಪೋಷಕಾಂಶ ಆವಶ್ಯಕತೆಯಿದೆ, ಇನ್ನಾವುದಕ್ಕೆ ಇಲ್ಲ ಹೀಗೆ ಹತ್ತಾರು ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಿ ನಮ್ಮೊಂದಿಗೆ ಚರ್ಚಿಸುತ್ತಾರೆ, ಊರಿನಲ್ಲಿದ್ದಾಗ ಹೆಂಚಿನ ಮನೆಯ ಸಂದುಗಳಲ್ಲೆಲ್ಲಾ ಗುಬ್ಬಿಗಳ ಗೂಡು ಕಟ್ಟಿರುತ್ತಿದ್ದರು ಹಾಗೂ ಹೆಂಚುಗಳ ಸಂಧಿಯಲ್ಲಿ ಆಗಾಗ ಹಾವುಗಳು ಸೇರಿಕೊಳ್ಳುತ್ತಿದ್ದವು ಎಂದು ನೆನಪಿಸಿಕೊಳ್ಳುತ್ತಿರುತ್ತಾರೆ.( ಅಜ್ಜಿಯ ಸೂಕ್ಷ್ಮ ಗ್ರಹಿಕೆಯ ಕುರಿತಾಗಿ ಬಹಳಷ್ಟು ವಿಷಯಗಳಿವೆ, ಮುಂದೆ ಬರುವ ಅಂಕಣಗಳಲ್ಲಿ ಸವಿಸ್ತಾರವಾಗಿ ತಿಳಿದುಕೊಳ್ಳೋಣ)
ಬೇಸಿಗೆ ಮಳೆಗಾಲ ಮುಗಿದು ಚಳಿಗಾಲ ಪಕ್ಷಿಗಳಿಗೆ ಪ್ರಶಾಂತವಾದ ವಾತಾವರಣವನ್ನು ಕಲ್ಪಿಸಿಕೊಡುತ್ತದೆ, ಇದೇ ಸಮಯದಲ್ಲಿ ಬಹಳಷ್ಟು ವಲಸೆ ಪಕ್ಷಿಗಳು ಕೂಡ ಕಾಣಸಿಗುತ್ತವೆ, ಆಹಾರದ ಲಭ್ಯತೆಗೆ ತಕ್ಕನಾಗಿ ಗೂಡು ಕಟ್ಟಿ ಮೊಟ್ಟೆಯಿಟ್ಟು ಮರಿಮಾಡುತ್ತವೆ, ದುರ್ದೈವದ ಸಂಗತಿಯೆಂದರೆ ಇದೇ ಸಂದರ್ಭದಲ್ಲಿ ಬರುವಂತಹ ದೀಪಾವಳಿ ಹಬ್ಬ ಇಂದು ಶಬ್ದ ಮಾಲಿನ್ಯದಿಂದ ಕೂಡಿದ್ದು ಬಹಳಷ್ಟು ಪಕ್ಷಿಗಳ ಜೀವಕ್ಕೆ ಕುತ್ತು ಬಂದೊದಗಿದೆ. ಮೊದಲೇ ತಿಳಿಸಿದಂತೆ ನಮ್ಮ ನಗರದ ಚಿತ್ರಣ ಈಗ ಸಂಪೂರ್ಣವಾಗಿ ಬದಲಾಗಿದೆ ತೋಟವಿದ್ದ ಜಗವೆಲ್ಲ ಸಂಪೂರ್ಣವಾಗಿ ನಗರವಾಗಿ ಬೆಳವಣಿಗೆ ಹೊಂದಿದೆ, ಅಲ್ಲಲ್ಲಿ ಅಳಿದುಳಿದಿರುವ ಪ್ರದೇಶಗಳಲ್ಲಿ ಒಂದಷ್ಟು ಗಿಡಮರಗಳು ಮಾತ್ರ ಕಾಣುತ್ತಿದೆ, ಪ್ರತಿದಿನವೂ ಕಾಣಸಿಗುತ್ತಿದ್ದ ಮೊಲ, ಹಾವು, ಮುಂಗುಸಿ, ನವಿಲುಗಳು ಕಣ್ಮರೆಯಾಗಿದೆ, ಬಹಳಷ್ಟು ಸಂಖ್ಯೆಯಲ್ಲಿದ್ದ ಮಂಗಟ್ಟೆಗಳು( Gray hornbill ) ಇಂದು ಬೆರಳೆಣಿಕೆಗೆ ಬಂದು ತಮ್ಮ ಅವನತಿಯ ದಿನಗಳನ್ನು ಎಣಿಸುತ್ತಿದೆ, ಮನೆಯ ಸುತ್ತಲೂ ಹಾರಾಡುತ್ತಿದ್ದ ಗುಬ್ಬಿಗಳು ಕಣ್ಮರೆಯಾಗುತ್ತಿದೆ, ಈ ವಿಚಾರಗಳು ನಿಜವಾಗಿಯೂ ಪರಿಸರ ಪ್ರೇಮಿಗಳಿಗೆ ನಿರಾಸೆಯನ್ನುಂಟು ಮಾಡುತ್ತಿವೆ.
ಇವುಗಳನ್ನು ಉಳಿಸುವ ನಿಟ್ಟಿನಲ್ಲಿ ಮಾಡಿದಂತಹ ಒಂದು ಸಣ್ಣ ಪ್ರಯತ್ನ ಯಶಸ್ವಿಯಾಗಿದೆ, ಮೊದಲು ಪಕ್ಷಿಗಳಿಗಾಗಿ ಮನೆಯ ಮೇಲಿನ ತಾರಸಿಯಲ್ಲಿ ಒಂದಿಷ್ಟು ಅಕ್ಕಿ ಕಾಳನ್ನು ಚೆಲ್ಲಲಾಗುತ್ತಿತ್ತು ಇದರೊಂದಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಯಿತು, ಮೊದಮೊದಲು ಪಕ್ಷಿಗಳು ಬಾರದೆ ಹೋದರು ಕಾಲಕ್ರಮೇಣ ನಿಧಾನವಾಗಿ ಬರಲಾರಂಭಿಸಿದವು, ಕಣ್ಮರೆಯಾಗಿದ್ದಂತಹ ಗುಬ್ಬಿ ಬಂದು ನೀರು ಕುಡಿದಾಗ ನಮಗೆ ದಾಹ ನಿವಾರಣೆಯಾಯಿತು ಎಂದೆನಿಸಿತು, ಪಾರಿವಾಳ, ಕಾಗೆ, ಗಿಳಿ, ಬುಲ್ ಬುಲ್, ಪಾರಿವಾಳ, ಮೈನಾ, ಕೋಗಿಲೆ, ಹದ್ದು, ಕಾಲಕ್ರಮೇಣ ನಿಧಾನವಾಗಿ ಇವುಗಳು ಕೂಡ ನೀರು ಕುಡಿಯಲು ಧಾವಿಸಿ ಬರಲಾರಂಭಿಸಿದವು, ಇದರೊಂದಿಗೆ ಪಕ್ಷಿಗಳು ನಿಧಾನವಾಗಿ ಮನೆಯಲ್ಲಿರುವ ಗಿಡ ಮರಗಳ ಮೇಲೆ ಗೂಡು ಕಟ್ಟಲು ಪ್ರಾರಂಭಿಸಿದವು, 2 ಸಂಖ್ಯೆಯಲ್ಲಿದಂತಹ ಗುಬ್ಬಿ ಇಂದು ಅವುಗಳ ಸಂಖ್ಯೆ ಹತ್ತಕ್ಕೆ ಏರಿದೆ, ಮೂಲೆಯಲ್ಲಿ ಅಡಗಿ ಕುಳಿತಿದ್ದಂತಹ ಗಿಳಿಗಳು ಬರಲಾರಂಭಿಸಿವೆ, ಅಪರೂಪದಲ್ಲಿ ಅಪರೂಪ ವಿರಳದಲ್ಲಿ ವಿರಳವಾಗಿ ಮಂಗಟ್ಟೆಗಳು ನೀರು ಕುಡಿಯಲು ಬಂದಾಗ ಸಿಗುವಂತಹ ಆನಂದಕ್ಕೆ ಬೆಲೆಕಟ್ಟಲಾಗದಷ್ಟಗುತ್ತದೆ. ಆದರೆ ನಗರದ ಬೆಳವಣಿಗೆಯಿಂದ ಪಕ್ಷಿಗಳ ಮೂಲ ನೆಲೆಗೆ ದಕ್ಕೆ ಆಗುತ್ತಿರುವುದು ನಿಜಕ್ಕೂ ಶೋಚನೀಯ ಸಂಗತಿ. ಇದರೊಂದಿಗೆ ಮನೆಯ ಮುಂದಿಟ್ಟಿರುವ ನೀರಿನ ಮಡಿಕೆಯಲ್ಲಿ ದಿನ ಪ್ರತಿ ರಸ್ತೆಯಲ್ಲಿ ಓಡಾಡುವ ನಾಯಿ, ಬೆಕ್ಕು, ದನ, ಕರು ಒಂದು ಸ್ವಲ್ಪ ನೀರು ಕುಡಿದ ಮನೆಯ ಮುಂದೆ ಇರುವ ಮರಗಳ ನೆರಳಿನಲ್ಲಿ ಸ್ವಲ್ಪಕಾಲ ಕಳೆದು ಹೊರಡುತ್ತವೆ.
ಈ ಸುಂದರ ಸೃಷ್ಟಿಯಲ್ಲಿ ಒಂದಾದ ಪ್ರಾಣಿ ಪಕ್ಷಿಗಳು ನಮ್ಮಿಂದ ಹೆಚ್ಚೇನು ಬಯಸಲಾರರು, ಸ್ವಲ್ಪವೇ ಸ್ವಲ್ಪ ಪ್ರೀತಿ ಕಾಳಜಿ ತೋರಿಸಿಬಿಟ್ಟರೆ ಅವುಗಳು ನಮ್ಮಿಂದ ದೂರವಾಗಲು ಬಯಸುವುದೇ ಇಲ್ಲ, ಮನೆಗೆ ಬರುವಂತಹ ಬಹಳಷ್ಟು ಸ್ನೇಹಿತರು ನೆಂಟರು ಎಲ್ಲರೂ ಮನೆ ಹೊರಗೆ ಹೆಚ್ಚು ಕಾಲ ಕಳೆಯಲು ಇಷ್ಟಪಡುತ್ತಾರೆ, ನಿಜವಾಗಿಯೂ ಈ ಮರ-ಗಿಡ ಬಳ್ಳಿಗಳು ಬೆಳವಣಿಗೆ ನಮ್ಮನ್ನು ಮೂಕರನ್ನಾಗಿಸುತ್ತವೇ, ಇನ್ನು ರಸ್ತೆಯ ಅಂಚಿನಲ್ಲಿರುವ ಮೂರ್ನಾಲ್ಕು ಮರಗಳು ಸದಾ ನೆರಳು ಕೊಡುವುದರಿಂದ ದಾರಿಹೋಕರು, ವೃದ್ಧರು, ತರಕಾರಿ ವ್ಯಾಪಾರಿಗಳು, ಒಂದೆರಡು ನಿಮಿಷ ನಿಂತು ಸಮಾಧಾನತಂದುಕೊಳ್ಳುತ್ತಾರೆ, ಮಕ್ಕಳು ಇದರಡಿಯಲ್ಲಿ ಆಟವಾಡಲು ಬಯಸಿದರೆ ಇನ್ನೂ ಕೆಲವರು ನೆರಳಿನಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿಕೊಳ್ಳುತ್ತಾರೆ, ಇನ್ನು ಕೆಲ ಸಂದರ್ಭಗಳಲ್ಲಿ ಮಹಿಳೆಯರು ಮರಗಳ ಅಡಿಯಲ್ಲಿ ನಿಂತು ಯೋಗಕ್ಷೇಮ ವಿಚಾರಿಸಿಕೊಳ್ಳುವ ಸ್ಥಳಗಳು ಆಗುತ್ತವೆ. ನಮ್ಮಿಂದ ಏನನ್ನು ಬಯಸದ ವೃಕ್ಷಗಳು ಸದಾ ಪರೋಪಕಾರಿಯಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತವೆ.
ಇಷ್ಟೆಲ್ಲಾ ವಿಷಯಗಳನ್ನು ಕೇಳಿ ತಿಳಿದುಕೊಂಡು ಕೆಲವರು ಮನೆಯ ಜಗಲಿ ಕಟ್ಟೆಯ ಮೇಲೆ ಕುಳಿತು ಮರಗಿಡಬಳ್ಳಿಗಳುನ್ನು ಗಮನಿಸಿ ಮಾತನಾಡಲು ಪ್ರಾರಂಭಿಸಿ ವಿಳ್ಯ, ತೆಂಗು, ಅಡಕೆ, ಮಾವು, ಸೀಬೆ, ಹೀಗೆ ಹತ್ತಾರು ಪವಿತ್ರ ಗಿಡಗಳು ನಿಮ್ಮ ಮನೆಯಲ್ಲಿ ಬೆಳೆಯುತ್ತಿವೆ ನೀವೇ ನಿಜಕ್ಕೂ ಪುಣ್ಯವಂತರು ಎಂದು ಹೇಳುವವರಿದ್ದಾರೆ, ಇನ್ನು ಕೆಲವರು ಇವುಗಳನ್ನೆಲ್ಲವನ್ನೂ ತೆರವುಗೊಳಿಸಿ ಮನೆಯಾದರೂ ಕಟ್ಟಿ ಬಾಡಿಗೆ ಬರುತ್ತದೆ ಎಂದು ಉಪದೇಶ ನೀಡಿದವರು ಇದ್ದಾರೆ, ಇವರುಗಳಿಗೆ ನಾ ಹೇಗೆ ಮೇಲೆ ತಿಳಿಸಿದ ಅಷ್ಟು ವಿಷಯಗಳನ್ನು ಅರ್ಥಮಾಡಿಸಲಿ, ತಿಳಿಸಿದರು ಇವರು ಅರ್ಥ ಮಾಡಿಕೊಳ್ಳುವ ಪರಿ ಆದರೂ ಎಂತಹದ್ದು? ನಿಜವಾಗಿಯೂ ತಿಳಿಯದು.
ಪ್ರತಿ ಮರ, ಗಿಡ, ಬಳ್ಳಿ ,ಒಂದು ಹುಲ್ಲು ಕಡ್ಡಿಯೂ ಕೂಡ ಚಿಗುರೊಡೆದು ಹೂಬಿಟ್ಟು ನಿಂತಾಗ ಅದರಿಂದ ನಮಗೆ ದೊರಕುವ ಆನಂದ, ಒಂದು ಬಳ್ಳಿಯ ಇನ್ನೊಂದು ಮರದ ನೆರವಿನಿಂದ ಮತ್ತಷ್ಟು ಎತ್ತರಕ್ಕೆ ಬೆಳೆದಾಗ ನಾವೇ ಇನ್ನಷ್ಟು ಎತ್ತರಕ್ಕೆ ಬೆಳೆದೋ ಎನ್ನಿಸುವ ಸಮಾಧಾನ, ಒಂದು ಹೊಸ ಪಕ್ಷಿಯ ಕೂಗಿದಾಗ ಸಿಗುವ ಆನಂದ, ಮೊಟ್ಟೆ ಇಟ್ಟು ಮರಿ ಮಾಡಿ ಮರಿಗಳನ್ನು ತನ್ನೊಂದಿಗೆ ಆಗಸದಲ್ಲಿ ಹಾರಾಡಿಸುವಾಗ ನಾವೇ ಬಾನಿನಲ್ಲಿ ಹಾರಾಡುತ್ತಿದ್ದೇವೆ ಎಂದು ಭಾಸವಾಗುವ ಕಲ್ಪನೆ, ಒಂದೇ ಒಂದು ಪುಟ್ಟ ಜೇನು, ಇರುವೆ, ಅಳಿಲಿನಿಂದ ಸಿಗುವ ಆನಂದ ಮತ್ತಾವ ಹೋಲಿಕೆಗೂ ನಿಲುಕತಕ್ಕದ್ದು.
ಕೊನೆಯದಾಗಿ ಈ ಮೇಲೆ ತಿಳಿಸಿದ ವಿಷಯಗಳನ್ನು ನಾ ಹೇಗೆ ಇತರರಿಗೆ ಅರ್ಥಮಾಡಿಸಲಿ ?
ಕೆಲವೊಮ್ಮೆ ಮನೆಯಲ್ಲಿ ಮರಗಳು ಉದುರಿಸಿದಂತಹ ಎಲೆಗಳು ಬಹಳಷ್ಟು ಹೆಚ್ಚಾಗಿ ಕಸ ಗುಡಿಸುವುದು ಕಷ್ಟವೆನಿಸಿದಾಗ, ಇನ್ನು ಕೆಲವೊಮ್ಮೆ ಹೆಗ್ಗಣಗಳ ಕಾಟ ಹೆಚ್ಚಾದಾಗ, ಅಕ್ಕ ನಮ್ಮ ಮೇಲೆ ಎರಗಿದ್ದಿದೆ ಇವುಗಳ ನಡುವೆ ಎಷ್ಟೇ ಕಷ್ಟವಾದರೂ ಪಕ್ಷಿಗಳನ್ನು ನೋಡುತ್ತಾ ಸಮಾಧಾನ ತಂದುಕೊಳ್ಳುತ್ತಾರೆ. ಅದಕ್ಕಾಗಿಯೇ ಈ ಅಂಕಣವನ್ನು ಅಕ್ಕನವರಿಗೆ (ತಾಯಿ) ಅವರಿಗೆ ಸಮರ್ಪಿಸುತ್ತಿದ್ದೇನೆ.
ಧನ್ಯವಾದಗಳು.
ಎಸ್ ಪಿ ತೇಜರಾಜು.
ಸಾವಿರದ ಮರ ಪರಿಸರಾಸಕ್ತ ಯುವಜನತೆ.



Felt happy reading it
ReplyDeleteNice writing
ReplyDeleteThis article made to feel like flying like bird in greenish environment,u made to revind my childhood observations tq very much
ReplyDeleteNice
ReplyDelete