ಪ್ರತಿದಿನ ಸೂರ್ಯೋದಯವಾಗುವ ಮುನ್ನವೇ ಕೆಲ ಸ್ನೇಹಿತರು ಚಿಲಿಪಿಲಿಗುಟ್ಟುತ್ತಲಿರುತ್ತಾರೆ, ಹಿಂದಿನ ದಿನ ಸೂರ್ಯಸ್ತವಾಗುವ ಕೆಲಹೊತ್ತು ಇರುವಾಗಲೇ ಕೊನೆಯ Roundನಲ್ಲಿ ಒಂದಿಷ್ಟು ಊಟ ಇಲ್ಲವಾದರೆ ಒಂದೆರಡು ಗುಟುಕು ನೀರು ಕುಡಿದು ಪುರ್ರೆಂದು ಹಾರಿ ಬಂದು ಗೂಡು ಸೇರಿಕೊಳ್ಳುತ್ತವೆ, ಪ್ರತಿ ಪಕ್ಷಿಗಳು ಮತ್ತೊಂದು ಪಕ್ಷಿಗಳಿಗಿಂತ ವಿಭಿನ್ನವಾಗಿರುವುದರಿಂದ ಕೆಲವು ಪಕ್ಷಿಗಳು ಒತ್ತೊತ್ತಾಗಿ ಬಾಗುವ ಕೊಂಬೆಯ ಮೇಲೆ ಕಣ್ಣು ಮುಚ್ಚಿ ತಪಸ್ಸು ಮಾಡುತ್ತಾ ಕುಳಿತಿದ್ದು, ಚಳಿ ಇನ್ನಷ್ಟು ಹೆಚ್ಚಾದಾಗ ಇನ್ನೂ ಅಂಟಿಕೊಂಡು ಕುಳಿತುಕೊಳ್ಳುತ್ತವೆ, ಕೆಲವು ಪಕ್ಷಿಗಳು ತಾವೇ ಹೆಣೆದ ಗುಂಡಾಕಾರದ ಅಥವಾ ತಟ್ಟೆಯಾಕಾರದ ಗೂಡಿನಲ್ಲಿ ಕುಳಿತುಕೊಳ್ಳುತ್ತವೆ ಇನ್ನು ಕೆಲವು ಮರದ ಪೊಟರೆಗಳಲ್ಲಿ, ಕೆಲವು ಮರಕುಟಿಕ ಕುಟ್ಟಿ ಗೂಡು ಮಾಡಿ ಖಾಲಿ ಇರುವ ಮರಗಳಲ್ಲಿ, ಪೊದರುಗಳ ಮಧ್ಯ, ಇನ್ನು ಕೆಲವು ಮಣ್ಣಿನ ಗೂಡುಗಳಲ್ಲಿ ಅಥವಾ ಏಕಾಂಗಿಯಾಗಿಯೂ ತನಗೆ ಸುರಕ್ಷಿತ ವೆನಿಸುವ ಜಾಗಗಳಲ್ಲಿ ರಾತ್ರಿಯನ್ನು ಕಳೆಯುತ್ತವೆ.
ಶತಮಾನಗಳುರುಳಿದರೂ, ತಲೆಮಾರುಗಳು ಕಳೆದರೂ ಕೂಡ ತಮ್ಮ ಜೀವನಶೈಲಿಯನ್ನು ಯಥಾವತ್ತಾಗಿ ಪಾಲಿಸಿಕೊಂಡು ತಮ್ಮ ಸ್ವಂತಿಕೆಯನ್ನು ಉಳಿಸಿಕೊಂಡು ಶಿಸ್ತಿನ ಸಿಪಾಯಿಗಳ ರೀತಿಯ ಜೀವನ ನಡೆಸುತ್ತಿವೆ. ಪಕ್ಷಿಗಳಿಗೆ ಒಮ್ಮೆ ಸೂರ್ಯ ಪಡುವಣದಲ್ಲಿ ಮುಳುಗಿದರೆ ಮುಗಿಯಿತು ಅದೇನೇ ಕೆಲಸ ಕಾರ್ಯಗಳಿದ್ದರೂ ಅವುಗಳು ಬಿಟ್ಟು ಗೂಡು ಸೇರಿಕೊಳ್ಳುತ್ತವೆ, ಇವುಗಳದೆಷ್ಟು ನಿಪುಣತನ ಹಾಗೂ ಜಾಗೃತ ಪ್ರಜ್ಞೆ ಎಂದರೆ ಅನಿವಾರ್ಯದ ಕೆಲಸವಾದರೂ ಕೂಡ ದಿನ ಮುಗಿಯುವುದರೊಳಗಾಗಿ ಕೆಲಸ ಮುಗಿಸಲು ಪ್ರಯತ್ನಪಡುತ್ತವೆ. ಹಗಲಿನಲ್ಲಿ ಎಚ್ಚರ ಇರುವ ಪಕ್ಷಿಗಳಿಗೆ ಹೊರತಾಗಿ ಇರುಳಿನಲ್ಲಿ ಎಚ್ಚರವಿರುವ ಪಕ್ಷಿಗಳ ದಿನಚರಿಯೇ ಬೇರೆಯದ್ದು, ಹಗಲಿನಲ್ಲಿ ಚಟುವಟಿಕೆಯಿಂದ ಕೂಡಿರುವ ಪಕ್ಷಿಗಳು ಬೆಳಿಗ್ಗೆ ಮುಂಚಿತವಾಗಿಯೇ ಎದ್ದು ತಮ್ಮ ಸುಶ್ರಾವ್ಯವನ್ನು ಹೊರಡಿಸುತ್ತಾ ದೂರದಲ್ಲಿ ಕುಳಿತಿರುವ ತನ್ನ ಬಂಧುಗಳು ಅಥವಾ ಸ್ನೇಹಿತರಿಗೂ ಕರೆನೀಡಿ ಅಂದಿನ ದಿನಚರಿಯನ್ನು ಖಾತ್ರಿಪಡಿಸಿಕೊಳ್ಳುತ್ತಾವೆ.
ಪಕ್ಷಿಗಳು ಬಾನಿನಲ್ಲಿ ಎಷ್ಟು ಎತ್ತರಕ್ಕೆ ಹಾರಿದರು ಕೂಡ ತಾನು ಉಳಿಯುವ ಅಥವಾ ಮಲಗುವ ಜಾಗವನ್ನು ನಿರ್ದಿಷ್ಟಪಡಿಸಿ ಕೊಂಡಿರುತ್ತವೆ ಅದಕ್ಕೆ ಬಹಳಷ್ಟು ಕಾರಣಗಳು ಇವೆ ಬೇಟೆ ಪ್ರಾಣಿಗಳ ( ಹಾವು, ಬೆಕ್ಕು, ಅಂಟೆಗೊದ್ದ, ಹದ್ದು, ಬಾವಲಿ ಇತ್ಯಾದಿ) ಕಾಟ, ತಾನು ಗೂಡುಕಟ್ಟುವ ಮರಕ್ಕಿರುವ ಅಪಾಯ, ಜನರ ಓಡಾಟ, ಸಣ್ಣ ಟೊಂಗೆಗಳು ತಮ್ಮ ಭಾರವನ್ನು ತಡೆಯುವ ಸಾಮರ್ಥ್ಯ, ಎಲೆಯ ಮರೆ, ಮರಿ ಪಕ್ಷಿಗಳ ಹಾರೈಕೆ ಕಾಳಜಿ, ಆಹಾರದ ಲಭ್ಯತೆಯ ಹೀಗೆ ಹತ್ತಾರು ಬಗೆಯ ಮುಂಜಾಗ್ರತ ಕ್ರಮವನ್ನು ಅನುಸರಿಸುತ್ತವೆ, ದುರ್ದೈವದ ಸಂಗತಿಯೆಂದರೆ ಇಷ್ಟೆಲ್ಲಾ ಮುಂಜಾಗ್ರತಾ ಕ್ರಮವನ್ನು ಅನುಸರಿಸಿದ್ದರೂ ಕೂಡ ಕೆಲವೊಮ್ಮೆ ಬೇಡ ಪ್ರಾಣಿಗಳಿಗೆ ಬಲಿಯಾಗಿ ಬಿಡುತ್ತವೆ.
ಮನೆಯ ಮುಂದಿರುವ ಕೆಲವು ಮರಗಳಿಗೆ ಕಾಯಂ ಪಕ್ಷಿ ಸದಸ್ಯರಿದ್ದಾರೆ, ಕೆಲವು ತಾವು ಗೂಡು ಕಟ್ಟಿರುವ ಮರವನ್ನು ಹೊರತುಪಡಿಸಿ ಮತ್ತಾವುದೆ ಮರಕ್ಕೆ ಹೋಗುವುದಿಲ್ಲ, ಹೋದರು ಯಾವುದೇ ಇತರ ಪಕ್ಷಿಗಳಿಗೆ ತೊಂದರೆ ಕೊಡದೆ ಹಾರಿ ಬಂದು ಕುಳಿತುಬಿಡುತ್ತದೆ. ಬುಲ್ ಬುಲ್ ಪಕ್ಷಿ, ಕಾಡು ಪಾರಿವಾಳ,Sun bird, Indian silver bird, common tailor bird, ನಿಂಬೆ ಸೀಬೆ ಬೆಟ್ಟದನೆಲ್ಲಿ ಮರದಲ್ಲಿಯೇ ವಿಶೇಷವಾಗಿ ಗೂಡುಕಟ್ಟಲು ಪ್ರಯತ್ನಪಡುತ್ತವೆ. ಬುಲ್ಬುಲ್ ಪಕ್ಷಿಯಂತೂ ತಲೆಮಾರುಗಳಿಂದಲೂ ಕೂಡ ನಿಂಬೆ ಗಿಡವನ್ನು ಬಿಟ್ಟು ಬೇರೆ ಮರದ ಮೇಲೆ ಕಟ್ಟಿದಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿಯೆ, ಪಾರಿವಾಳವಂತು ತಾನು ಭಾರ ಇರುವ ಕಾರಣ ಸೀಬೆ ಗಿಡದ ಮೇಲೆ ತಟ್ಟೆಯಾಕಾರದ ಗೂಡು ಕಟ್ಟುತ್ತದೆ. ಇನ್ನುಳಿದ ಪುಟ್ಟ ಪಕ್ಷಿಗಳು ಬಾಗುವ ತುತ್ತತುದಿಯ ಗೊಂಬೆಯ ತುದಿಯಲ್ಲಿ ಪುಟ್ಟದಾದ ಗೂಡನ್ನು ಹೆಣೆದುಕೊಳ್ಳುತ್ತದೆ, ಕೆಲವು ಜಾತಿಯ ಪಕ್ಷಿಗಳಲ್ಲಿ ಗಂಡು ಮಾತ್ರ ಗೂಡು ಹೆಣೆದರೆ ಇನ್ನು ಕೆಲವುಗಳಲ್ಲಿ ಗಂಡು-ಹೆಣ್ಣು ಎರಡು ಸೇರಿ ಗೂಡುಗಳನ್ನು ನಿರ್ಮಿಸಿಕೊಳ್ಳುತ್ತವೆ, ಹೆಣ್ಣು ಗೂಡಿನಲ್ಲಿ ಕುಳಿತು ಗೂಡು ಹೆಣೆದರೆ ಇದಕ್ಕೆ ಬೇಕಾದಂತಹ ಕಡ್ಡಿ, ಹುಲ್ಲು, ಹತ್ತಿಯನ್ನು ದೂರದಿಂದ ಗಂಡು ಹಕ್ಕಿ ತಂದುಕೊಡುತ್ತದೆ. ಈ ಎಲ್ಲಾ ಪಕ್ಷಿಗಳ ಆದ್ಯತೆ ಗೂಡುಗಳನ್ನು ಸುರಕ್ಷಿತ ಹಾಗೂ ಶುಚಿತ್ವವನ್ನು ಕಾಪಾಡಿಕೊಳ್ಳುವುದಾಗಿರುತ್ತದೆ, ಗೂಡು ಕಟ್ಟಿ ಮೊಟ್ಟೆ ಇಡುವ ತನಕ ಸದಾ ಸುರಕ್ಷತೆಯ ಕಡೆಗೆ ಗಮನ ಹರಿಸುತ್ತಲೆ ಇರುತ್ತವೆ ಮೊಟ್ಟೆ ಇಟ್ಟ ಬಳಿಕ ಮೊಟ್ಟೆಗಳಿಗೆ ಕಾವು ಕೊಡುವುದು, ಬಿಸಿಲಿನಿಂದ ರಕ್ಷಣೆ, ಮಳೆಯಿಂದ ನೆನೆಯದ ರೀತಿ ಸುರಕ್ಷತೆ, ಚಳಿ ಹೆಚ್ಚಾದಾಗ ಬೆಚ್ಚಗಿರಿಸಲು ಹತ್ತಿಯ ಲಭ್ಯತೆ, ಎಲ್ಲವನ್ನೂ ನೋಡಿಕೊಳ್ಳುತ್ತಲೇ ಇರುತ್ತದೆ ಮೊಟ್ಟೆ ಒಡೆದು ಮರಿಗಳು ಹೊರಗೆ ಬಂದಾಗ ಅವುಗಳಿಗೆ ಬೇಕಾದಂತಹ ಆಹಾರ, ಭಾಷೆ, ಹಾರುವ ಕ್ರಮ ಎಲ್ಲವನ್ನೂ ಒಂದೊಂದಾಗಿ ಹೇಳಿಕೊಡಲು ಪ್ರಾರಂಭಿಸುತ್ತದೆ. ಹಾರುವ ಪಾಠವನ್ನು ಹೇಳಿಕೊಡುವಾಗಲಂತೋ ಪೋಷಕರು ಮೈಯೆಲ್ಲ ಕಣ್ಣು ಮಾಡಿಕೊಂಡಿರುತ್ತವೆ.
ಪ್ರತಿ ಪಕ್ಷಿಯು ತನ್ನದೇ ಆದಂತಹ ಆಹಾರಕ್ರಮವನ್ನು ಅನುಸರಿಸಿಕೊಂಡು ಬಂದಿದೆ, ಹಾಗೂ ಇವುಗಳ ಆಹಾರಕ್ರಮವನ್ನು ಆಧರಿಸಿ ಅವುಗಳ ದೇಹ ರಚನೆಯು ಮಾರ್ಪಾಡಾಗಿದೆ,Sun bird ನಂತಹ ಪುಟ್ಟ ಪಕ್ಷಿಗಳು ಹೂವಿನ ಮಕರಂದವನ್ನು ಹೀರಲು ನಳಿಕೆಯಕಾರದ ಕೊಕ್ಕನ್ನು ಹೊಂದಿದ್ದರೆ, ಪಾರಿವಾಳ ಗುಬ್ಬಿಗಳು ದವಸ ಧಾನ್ಯವನ್ನು ತಿನ್ನುತ್ತವೆ, ಇನ್ನು ಈ ಗಿಳಿಗಳು ಸೀಬೆಹಣ್ಣಿಗೆ ಮುತ್ತಿಗೆ ಇಟ್ಟರೆ, ಬುಲ್ಬುಲ್ ಪಕ್ಷಿಯಂತೂ ಸದಾ ಸೀತಾಫಲ ಹಣ್ಣಿನ ಸೀಸನ್ ಗಾಗಿ ಕಾಯುತ್ತಿರುತ್ತದೆ, ಕೆಲವು ಬಾರಿ ಈ ಪಕ್ಷಿಯ ಚುರುಕು ಮೆಣಸಿನಕಾಯಿ ಕೆಂಪಾದಾಗ ಕಾದುಕುಳಿತು ತಿಂದಿದ್ದ ನಿದರ್ಶನಗಳಿವೆ, ನಮ್ಮ Common tailor bird ಅಂತೂ ಎಲೆ ಮರಗಳಲ್ಲಿ ಅಡಗಿ ಕುಳಿತಿರುವ ಸಣ್ಣಪುಟ್ಟ ಹುಳ ಹುಪ್ಪಟೆಗಳನ್ನು ತಿನ್ನಲು ಹಾತೊರೆಯುತ್ತಿರುತ್ತದೆ. King fisher bird ಕೂಡ ಹುಳ ಹುಪ್ಪಟೆಗಳನ್ನು ತಿನ್ನಲು ಆಸೆ ಪಡುತ್ತದೆ, ಇನ್ನು ಕೆರೆಯಲ್ಲಿ ವಾಸಿಸುವ ಪಕ್ಷಿಗಳ ಆಹಾರ ಕ್ರಮವಂತೂ ಬಹಳ ವಿಭಿನ್ನವಾಗಿರುವಂತಹದ್ದು ಇವುಗಳಲ್ಲಿ ಕೆಲವು ಮರಿ ಮೀನುಗಳನ್ನು, ಕಪ್ಪೆಗಳನ್ನು, ನೀರಿನ ಮೇಲೆ ತೇಲುವ ಕೆಲವು ಹುಳು ಹುಪ್ಪಟೆಗಳನ್ನು ತಿಂದು ಬದುಕುತ್ತವೆ. ಕೆಲವು ಪಕ್ಷಿಗಳ ಹಿಕ್ಕೆಯಂತು ಬಹಳ ಕಠಿಣ ಅದರಲ್ಲಿಯೂ King fisher bird ಹಿಕ್ಕೆ ಏನಾದರೂ ವಾಹನಗಳ ಮೇಲೆ ಬಿದ್ದರೆ ನೀರು ಹಾಕಿ ತೊಳೆದರೂ ಹೋಗುವುದಿಲ್ಲ ಅಷ್ಟು ಗಾಢವಾಗಿರುತ್ತದೆ.
ಒಂದೊಮ್ಮೆ ಬುಲ್ಬುಲ್ ಹಕ್ಕಿಯಂತೂ ನಿಂಬೆ ಗಿಡದಲ್ಲಿ ಗೂಡುಕಟ್ಟಿ ಮೊಟ್ಟೆ ಇಟ್ಟು ಮರಿಗಳು ಹೊರ ಬರುತ್ತಿದ್ದಂತೆ ಆರೈಕೆ ಪ್ರಾರಂಭಿಸಿ 15 ದಿನ ಆಗುವುದರೊಳಗೆ ಮಾಂಸದ ಮುದ್ದೆಯಾಗಿದ್ದ ಮೂರು ಮರಿ ಪಕ್ಷಿಗಳ ಮೈಮೇಲೆ ನಿಧಾನವಾಗಿ ಪುಕ್ಕ ಬರಲು ಪ್ರಾರಂಭವಾಯಿತು, ಇನ್ನೇನು ಒಂದು ವಾರದೊಳಗಾಗಿ ಪಕ್ಷಿಗಳು ರೆಕ್ಕೆ ಬಿಚ್ಚಿ ಹಾರಲು ಸಿದ್ಧವಾಗುತ್ತದೆ ಎಂಬ ಸಂತಸದ ದಿನಗಳಿಗಾಗಿ ದಿನಗಣನೆ ಆರಂಭವಾಗುತ್ತಿದ್ದಂತೆಯೇ, ಎಲ್ಲಿಯೋ ಒಂದು ಮರೆಯಲ್ಲಿ ಹೊಂಚುಹಾಕುತ್ತಿದ್ದ ಬೆಕ್ಕು, ತಾಯಿ ಪಕ್ಷಿ ಹಾರಿ ಹೋಗುವುದನ್ನೇ ಕಾದು ಕುಳಿತು, ಗಿಡದಿಂದ ಗೂಡನ್ನು ಕಿತ್ತು 3 ಮರಿ ಪಕ್ಷಿಗಳನ್ನು ತನ್ನ ಉಗುರುಗಳಿಂದ ಹೊಡೆದು, ರಕ್ತ ಜಿಮ್ಮಿ ಹೊರಬರುತ್ತಿದ್ದಂತೆಯೇ, ಬಾಯಲ್ಲಿ ಹಿಡಿದು, ಕೆಲವೇ ದಿನಗಳ ಹಿಂದೆ ತಾನು ಜನ್ಮ ನೀಡಿದ ಮೂರು ಪುಟ್ಟ ಮರಿ ಬೆಕ್ಕುಗಳಿಗೆ ಈ ಮೂರು ಪಕ್ಷಿಗಳನ್ನು ಉಣಬಿಡಿಸುವುದನ್ನು ಕಂಡು ಅದನ್ನು ಕೊಂದುಬಿಡಬೇಕು ಎನ್ನುವಷ್ಟು ಕೋಪ ತಾರಕಕ್ಕೇರಿತ್ತು. ಆದರೆ ಅಷ್ಟು ಹೊತ್ತಿಗಾಗಲೇ ಸನ್ನಿವೇಶ ಕೈ ಮೀರಿ ಹೋಗಿತ್ತು, ಮರಿ ಪಕ್ಷಿಗಳನ್ನು ಅರಸಿ ಬಂದ ತಾಯಿ ಬುಲ್ಬುಲ್ ಹಕ್ಕಿ ದಿಗಿಲುಗೊಂಡು ತನ್ನ ಮರಿ ಪಕ್ಷಿಗಳಿಗಾಗಿಯೇ ಆತರಿಸಿ ರಾತ್ರಿಯಾಗುವವರೆಗೂ ಕೂಗಿ, ಹುಡುಕಿ ಆಯಾಸ ಗೊಂಡಿತ್ತು, ಈ ಘಟನೆ ನಡೆದಾಗ ನಾವು ಚಿಕ್ಕವರಾಗಿದ್ದರಿಂದ ಒಂದೆರಡು ದಿನ ಕಣ್ಣೀರು ಸುರಿಸಿ, ಊಟವನ್ನು ಸರಿಯಾಗಿ ಸೇವಿಸದೆ ಮಲಗಿದ್ದಾಗಿತ್ತು, ನಿಜಕ್ಕೂ ನಮ್ಮ ಜೀವನದಲ್ಲಿ ಈ ಘಟನೆ ಮನಕಲಕುವ ವಿಷಯವಾಗಿಯೇ ಉಳಿಯಿತು.
ಹೇಗೆ ಮನೆಯಲ್ಲಿ ನಾಯಿಗಳು ಇದ್ದರೆ ದಾರಿಹೋಕರು ಅಥವಾ ಯಾರಾದರೂ ಹೊಸಬರು ಬಂದರೆ ಬೊಗಳುತ್ತವೆಯೋ ಹಾಗೂ ನಮ್ಮ ಮಾತುಗಳನ್ನು ಅವುಗಳು ಹಾಗೂ ಅವುಗಳ ಮಾತುಗಳನ್ನು ನಾವು ಹೇಗೆ ಗ್ರಹಿಸಲು ಪ್ರಯತ್ನಪಡುತ್ತೇವೆ ಅದೇ ರೀತಿ ಪಕ್ಷಿಗಳಿಗೆ ನಾವು ಅವುಗಳ ಹತ್ತಿರವಾಗುತ್ತಾಹೋದಂತೆ ಅವುಗಳು ನಮಗೆ ನಿಧಾನವಾಗಿ ಹೊಸ ಹೊಸ ಅನುಭವಗಳನ್ನು ನೀಡುತ್ತಾ ಹೋಗುತ್ತವೆ, ಪ್ರಥಮವಾಗಿ ಸದಾ ಪಕ್ಷಿಗಳು ನಮ್ಮ ಚಟುವಟಿಕೆಗಳನ್ನು ಗ್ರಹಿಸುತ್ತಿರುತ್ತದೆ, ಒಮ್ಮೆ ನಮ್ಮ ಉಪಟಳ ಅವುಗಳಿಗೆ ಇಲ್ಲ ಎಂದು ಗ್ರಹಿಸಿದ ಬಳಿಕ ಅವುಗಳ ಚಲನವಲನಗಳನ್ನು ತಮ್ಮಿಷ್ಟದಂತೆ ಪಾಲಿಸುತ್ತವೆ. ಇಷ್ಟು ದಿನ ನಮ್ಮ ಒಡನಾಟದಲ್ಲಿಯೇ ಇರುವ ಪಕ್ಷಿಗಳಿಗೆ ನಮ್ಮ ನೆರವು ಅವುಗಳಿಗೆ ಇದೆ ಎಂದು ತೋರುತ್ತದೆ, ಅವುಗಳ ಭಾಷೆಯ ಸಂಪೂರ್ಣವಾಗಿ ನಮಗೆ ಅರ್ಥವಾಗದೇ ಹೋದರೂ ಸಹ ಅಪಾಯ ಬಂದೊದಗಿದಾಗ ಅವುಗಳು ಕೂಗುವ ರೀತಿ ಬದಲಾಗಿರುತ್ತದೆ. ಈ ಸಂದರ್ಭದಲ್ಲಿ ನಾವು ಹೋಗಿ ನೋಡಿದರೆ ನಾವು ಮೊದಲೇ ಗ್ರಹಿಸಿರುವಂತ ಅವುಗಳಿಗೆ ಯಾವುದೋ ಮತ್ತೊಂದು ಪಕ್ಷಿಯಿಂದ ತೊಂದರೆಯಾಗುತ್ತಿರುತ್ತದೆ ಅಥವಾ ಇದರ ಸ್ಥಳವನ್ನು ಆಕ್ರಮಿಸಲು ಹೊಂಚುಹಾಕುತ್ತಿರುತ್ತದೆ ಅಥವಾ ಇದರ ಊಟವನ್ನು ಕಬಳಿಸಲು ಪ್ರಯತ್ನಪಡುತ್ತದೆ ಇನ್ನು ಕೆಲವು ಬಾರಿ ಅವುಗಳ ಮರಿಗಳನ್ನ ಎತ್ತುಕೊಂಡು ಹೋಗಲು ಹೊಂಚು ಹಾಕುತ್ತಿರುತ್ತದೆ. ಇಂತಹ ಸನ್ನಿವೇಶಗಳು ಬಂದಾಗ ನಮ್ಮನ್ನು ಸದಾ ಕೂಗಿ ಕರೆಯುತ್ತವೆ ಈ ಮೂಲಕ ಇವುಗಳ ಮಾತುಗಳನ್ನು ನಮಗೆ ಸದಾ ಅರ್ಥಮಾಡಿಸಲು ಏನೇನು ಹೊಸಹೊಸ ಪ್ರಯೋಗಗಳನ್ನು ಈ ಪಕ್ಷಿಗಳು ನಡೆಸುತ್ತಲೇ ಇರುತ್ತವೆ.
ಈ ಕಾಡು ಪಾರಿವಾಳಗಳು ನಾವು ತೊಂದರೆ ಕೊಡುವುದಿಲ್ಲ ಎಂದು ಗ್ರಹಿಸಿ ನಮ್ಮ ಹತ್ತಿರ ಬರುವ ಪರಿ,Sun bird ನಂತಹ ಪುಟ್ಟ ಪಕ್ಷಿಗಳು ವಾಹನದ Mirror ನಲ್ಲಿ ತನ್ನ ಪ್ರತಿಬಿಂಬವನ್ನು ಕಂಡು ಒಂದೆರಡು ಬಾರಿ ಅದನ್ನು ಕುಟ್ಟಿ mirror ನ ಹಿಂದೆ ಹಾರಿಬಂದು ನೋಡಿದರೆ ಯಾವುದೇ ಪಕ್ಷಿ ಇರದಿರುವುದನ್ನು ಕಂಡು ಪುರ್ರೆಂದು ಹಾರಿ ಹೋಗುವ ಬಗೆ, ಕಾಗೆಯಂತೂ ತನಗೆ ಸಿಕ್ಕಿರುವ ಚೂರು ಆಹಾರವನ್ನು ತನ್ನ ಸ್ನೇಹಿತರಿಗೆ ಕೊಡಬೇಕೆಂದು ಕೂಗಿ ಕರೆಯುವ ಪರಿ, ತನಗೆಲ್ಲಿ ದವಸ ಕಡಿಮೆಯಾಗುತ್ತದೆಂದು ಹೊಸ ಗಿಳಿಯನ್ನು ಕಂಡಾಗ ಕಿರುಚುವ ಪರಿ, ಕೋಳಿ ತನ್ನ ಕಾಲುಗಳಿಂದ ಸ್ವಲ್ಪ ಮಣ್ಣನ್ನು ತೆಗೆದ ತಕ್ಷಣ ಮರಿಗಳು ಬಂದು ಏನಾದರೂ ಇದೆಯೇ ಎಂದು ಹುಡುಕುವ ಪರಿ, ಅರಳಿದ ಹೂಗಳನ್ನು ಹರಸಿ ಬರುವ ದುಂಬಿಗಳ ನಾದ, ಬುಲ್ಬುಲ್ ಪಕ್ಷಿ ಸೀತಾಫಲ ಮಾವು ಮಾಗಿ ಹಣ್ಣಾಗುವ ಸುವಾಸನೆಯನ್ನು ಗ್ರಹಿಸುವ ಪರಿ, ಪ್ರಥಮ ಮಳೆ ಬಿದ್ದಾಗ ಭೂಮಿಯಿಂದ ಹೊರಬರುವ ಮಣ್ಣಿನ ಸುವಾಸನೆ, ಹಾಗೂ ಪ್ರಥಮ ಮಳೆಗೆ ಭೂಮಿಯಿಂದ ಹೊರನಡೆದ ಚಿಟ್ಟೆಗಳನ್ನು ಹುಡುಕಿ ಕಾದು ತಿನ್ನುವ ಹಕ್ಕಿಗಳ ಪರಿ, ಇನ್ನು ರಾತ್ರಿ ಪಾಳಿಯ ಹಕ್ಕಿಗಳಾದ ಬಾವಲಿಯ ದಿನಚರಿಯ ನಿಜಕ್ಕೂ ವಿಸ್ಮಯಕಾರಿ ಸಂಗತಿಯೇ ಸರಿ.
ಮುಂದುವರಿಯುವುದು,
ಧನ್ಯವಾದಗಳು.
ಎಸ್ ಪಿ ತೇಜರಾಜು.
ಸಾವಿರದ ಮರ ಪರಿಸರಾಸಕ್ತ ಯುವಜನತೆ.



ಪಕ್ಷಿಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದ ಪಕ್ಷಿ ಪ್ರೇಮಿಗೆ ನನ್ನದೊಂದು ಸಲಾಂ
ReplyDeletenice article
ReplyDelete