ದಿವಂಗತ ತಾತನವರು( ತಾಯಿಯವರ ತಂದೆ) ಸಹ್ಯಾದ್ರಿಯ ಮಡಿಲಲ್ಲಿ Forest guard ಆಗಿದ್ದುಕೊಂಡು ಕಾಡು ಮೇಡುಗಳನ್ನು ನೋಡಿಕೊಳ್ಳುತ್ತಾ ಜೀವನ ನಡೆಸಿದವರು, ಅಜ್ಜಿಯವರು ಕೂಡ ತಾತನವರು ಇರುವವರೆಗೂ ಸಹ್ಯಾದ್ರಿಯ ಬೆಟ್ಟ-ಗುಡ್ಡಗಳ ಮೇಲೆ ಇದ್ದಂತಹ ಒಂದೊಂದೇ ಮನೆಗಳಲ್ಲಿ ಜೀವನ ನಡೆಸಿದವರು, ಅಕ್ಕ ( ತಾಯಿ) ಯವರೊಂದಿಗೆ ಅವರ ಅಕ್ಕ ತಂಗಿ,ಅಣ್ಣ, ತಮ್ಮಂದಿರೆಲ್ಲರೂ ಇದೇ ಸಹ್ಯಾದ್ರಿಯ ಮಡಿಲಲ್ಲಿ ಜನಿಸಿ, ಶಾಲೆಯ ಮೆಟ್ಟಿಲೇರಿ, ಸತತ ಸುರಿಯುವ ಮಳೆಯಲ್ಲಿ ಮಿಂದು, ಸುತ್ತಲು ಬೆಳೆಯುವ ಹಣ್ಣು ಹಂಪಲುಗಳನ್ನು ತಿಂದು ಕೊಂಡು, ಮನೆಯ ಹಿಂದೆ ಹಿತ್ತಿಲಲ್ಲಿ ನಾಲ್ಕಾರು ಬಗೆಯ ಹಣ್ಣು ಹೂಬಿಡುವ ಸಸಿಗಳನ್ನು ನೆಟ್ಟು ಬೆಳೆಸಿದವರು.
ಇನ್ನು ತಾತ ಅಜ್ಜಿ (ತಂದೆಯವರ ಕಡೆಯಿಂದ) ಕರ್ನಾಟಕದ ಊಟಿ ಎಂದೇ ಕರೆಯುವ ಹಾಸನ ಜಿಲ್ಲೆಯ ಶಾಂತಿಗ್ರಾಮದವರು, ಕಷ್ಟದಲ್ಲಿ ಇದ್ದು ಮಗ್ಗದ ಕೆಲಸ, ರಸ್ತೆ ಕೆಲಸ, ಮಲೆನಾಡ ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಾ ಸ್ವಲ್ಪ ಜಮೀನನ್ನು ಮಾಡಿಕೊಂಡು ಜೀವನ ಕಟ್ಟಿಕೊಂಡವರು, ಮನೆಯ ಮಕ್ಕಳೆಲ್ಲರೂ ಜಮೀನು ಕೆಲಸವನ್ನು ನೋಡಿಕೊಳ್ಳುತ್ತಾ, ಸಂತೆ ಜಾತ್ರೆಗಳಲ್ಲಿ ಅಂಗಡಿಯನ್ನು ತೆರೆದು, ಹಲಸಿನ ಹಣ್ಣನ್ನು ಮಾರಿ, ಸೈಕಲ್ ಶಾಪ್ ನೊಂದಿಗೆ ದಿನಸಿ ಅಂಗಡಿಯನ್ನು ತೆರೆದರು, ಮನೆಯಲ್ಲಿ ತಮ್ಮೊಂದಿಗೆ ಹಸು, ಕರು, ನಾಯಿ, ಬೆಕ್ಕು, ಪಾರಿವಾಳ ಹೀಗೆ ಹತ್ತಾರು ಪಕ್ಷಿಗಳನ್ನು ಸಾಕಿದವರು, ಹೀಗೊಮ್ಮೆ ಜಮೀನಿನಲ್ಲಿ ಮರಕುಟುಕ ಪಕ್ಷಿಯನ್ನು ಹಿಡಿದು, ಮನೆಗೆ ತಂದು ಮರದ ಪೆಟ್ಟಿಗೆಯಲ್ಲಿ ಕೂಡಿಹಾಕಿ, ರಾತ್ರಿ ಇರುವುದನ್ನು ಖಾತ್ರಿಪಡಿಸಿಕೊಂಡು ಬೆಳಗ್ಗೆ ನೋಡುವಷ್ಟರಲ್ಲಿ ಮರದ ಪೆಟ್ಟಿಗೆಯನ್ನು ಕುಟ್ಟಿ ಹಾರಿಹೋಗಿತ್ತು, ಹೀಗೆ ಇವರೆಲ್ಲರೂ ಈ ರೀತಿಯಾದಂತಹ ಹತ್ತಾರು ಹುಡುಗಾಟದ ಘಟನೆಗಳಿಗೆ ಭಾಗಿಯಾದವರು, ಮುಂದೆ ಬೆಳೆಯುತ್ತಾ ಉದ್ಯೋಗವನ್ನರಸಿ ನಗರ ಸೇರಿದವರು.
ಹುಟ್ಟಿದ/ಬೆಳೆದ ಗುಣ ಎಲ್ಲಿ ತಾನೇ ಬಿಡಲು ಸದ್ಯ, ಊರು ಬಿಟ್ಟು ನಗರ ಸೇರಿ ಬೆವರು ಸುರಿಸಿ ದುಡಿದು ಮನೆ ಕಟ್ಟಿದರು, ಮನೆಯ ಸುತ್ತಲಿದ್ದ ವಿಶಾಲ ಜಾಗದಲ್ಲಿ ನಾಲ್ಕಾರು ಬಗೆಯ ಗಿಡಗಳನ್ನು ಬೆಳೆಸಿದರು. ಈ ಮನೆಯ ಗೃಹಪ್ರವೇಶದ ವೇಳೆಯ ನಾನು ನನ್ನ ತಂಗಿ ಇಬ್ಬರೂ ಚಿಕ್ಕವರು, ಹೆಚ್ಚೇನು ಚಿಕ್ಕವರಲ್ಲ ನಾನು 7ನೇ ತರಗತಿ ಆಕೆ 5ನೇ ತರಗತಿ, ಶಾಲೆಯು ಮನೆಯಿಂದ ಎರಡು ಕಿಲೋಮೀಟರ್ ದೂರವಿದ್ದುದರಿಂದ ಪ್ರತಿದಿನವೂ ನಡೆದುಕೊಂಡು ಹೋಗಿ ಬರುತ್ತಿದ್ದೆವು,ಮಳೆಗಾಲದಲ್ಲಂತೂ ಮಳೆಯಲ್ಲಿ ನೆನೆದು ಬರುವುದೇ ಒಂದು ಮಜಾ.
ನಾವಿದ್ದ ಮನೆಯ ಸುತ್ತಮುತ್ತಲೂ ಅಷ್ಟೇನೂ ಜನದಟ್ಟನೆ, ಮನೆಗಳು ಇರದೆ ಸುತ್ತಲು ತೋಟದಿಂದ ಆವೃತವಾಗಿತ್ತು, ನಾವು ಕೂಡ ಮನೆಯ ಮುಂದಿದ್ದ ಜಾಗದಲ್ಲಿ ಪ್ರತಿಬಾರಿಯೂ ಹೊಸ ಹೊಸ ಪ್ರಯೋಗಗಳನ್ನು ನಡೆಸುತ್ತಲೇ ಇದ್ದೆವು, ಇಲ್ಲಿಯ ಪ್ರದೇಶ ಸಂಪೂರ್ಣವಾಗಿ ಕೆಂಪು ಮಣ್ಣಿನಿಂದ ಆವೃತವಾಗಿದ್ದರೂ ಸಹ, ಒಂದಾನೊಂದು ಕಾಲಕ್ಕೆ ಸುಣ್ಣ ಸುಡುತ್ತಿದ್ದ ಜಾಗವಾಗಿ, ಮುಂದೆ ಕಲ್ಲಿದ್ದಲು ಉಗಿಬಂಡಿಯ ಬೂದಿಯನ್ನು ಸುರಿದ ಕಾರಣ ಬೂದಿ ಗುಂಡಿಯಾಗಿ ಮಾರ್ಪಾಡಾಗಿತ್ತು, ಈಗಲೂ ಇಲ್ಲಿಯ ಪ್ರದೇಶಕ್ಕೆ ಬೂದಿ ಗುಂಡಿ ಎಂದು ಕರೆಯುವವರು ಬಹಳಷ್ಟು ಮಂದಿ ಇದ್ದಾರೆ.
ಗೃಹಪ್ರವೇಶ ಆದ ಬಳಿಕ ಪ್ರಥಮವಾಗಿ ಸುತ್ತಲು ಇದ್ದ ಜಾಗಕ್ಕೆ ಹುರುಳಿ,ಹೆಸರು,ಬೀನಿಸ್ ಬೀಜವನ್ನು ಚೆಲ್ಲಿದ ಕಾರಣ ಒಂದರ ಪಕ್ಕ ಮತ್ತೊಂದರಂತೆ ಹೇರಳವಾಗಿ ಹಬ್ಬಿ, ಪಕ್ಕದಲ್ಲಿದ್ದ ಜಾಗಕೆಲ್ಲ ನುಗ್ಗಿ ಬೆಳೆದು ಭೂಮಿಯೇ ಕಾಣದ ರೀತಿ ಬೆಳೆದು ನಿಂತಿತು, ಒಂದೆರಡು ಮಳೆಯಾಗಿ ಹೂ ಹಿಡಿದು ಕಾಯಿಯಾಗುವ ವೇಳೆಗೆ ಹುಳ ಕೀಟಗಳು ಇಡೀ ಬಳ್ಳಿಯನ್ನು ತಿಂದು ಮುಗಿಸಿದವು, ಕೊನೆಗೆ ಇವುಗಳ ಉಪಟಳ ತಾಳಲಾರದೆ ಎಲ್ಲಾ ಬಳ್ಳಿಯನ್ನು ಕಿತ್ತು ಸುಡಲಾಯಿತು.
ಈ ಬಾರಿ ಅಕ್ಕ ಹೇಳಿದ ಹಾಗೆ ಭೂಮಿಯನ್ನು ಚೆನ್ನಾಗಿ ಒಣಗಲು ಬಿಟ್ಟು ಸುತ್ತಲೂ ಪರಂಗಿ ಬೀಜಗಳನ್ನು ಚೆಲ್ಲಲಾಯಿತು, ಈ ಬೀಜಗಳು ಮೊಳಕೆಯೊಡೆದು ಒಂದರ ಪಕ್ಕ ಮತ್ತೊಂದರಂತೆ ಒತ್ತೊತ್ತಾಗಿ ಬೆಳೆಯಲಾರಂಭಿಸಿದರು ಬೀಜ ಬಿತ್ತು ಆರು ತಿಂಗಳಾದ ಬಳಿಕ ಫಲಕೊಡಲು ಪ್ರಾರಂಭವಾಗಿದ್ದು, ಪ್ರತಿದಿನವೂ ಹೊಟ್ಟೆತುಂಬುವಷ್ಟು ದೊಡ್ಡ ಗಾತ್ರದ ಹಣ್ಣನ್ನು ನೀಡಲಾರಂಭಿಸಿತು, ಪ್ರತಿದಿನ ಮೂರರಿಂದ ನಾಲ್ಕು ಹಣ್ಣುಗಳನ್ನು ಮರದಿಂದ ಕೇಳಿಸಲೇ ಇದ್ದವು, ಇದರ ಹೊರತಾಗಿಯೂ ಬಹಳಷ್ಟು ಹಣ್ಣನ್ನು ವ್ಯಾಪಾರಕ್ಕೂ, ಸ್ನೇಹಿತರು, ಸಂಬಂಧಿಕರಿಗೂ ಕೊಟ್ಟು ಉಳಿದ,ಅದೆಷ್ಟೋ ಹಣ್ಣುಗಳನ್ನು ನಾನಾ ವಿಧವಾದ ಪಕ್ಷಿಗಳು ಅಳಿಲು ಪ್ರತಿದಿನ ಬಂದು ತಿನ್ನುತ್ತಿದ್ದವು, ದುರ್ದೈವದ ಸಂಗತಿಯೆಂದರೆ ಎರಡು ವರ್ಷ ಒಂದೇ ಸಮನೆ ಹೇರಳವಾಗಿ ಹಣ್ಣು ಕೊಡುತ್ತಿದ್ದ ಮರಗಳಿಗೆ ಇದ್ದಕ್ಕಿದ್ದ ಹಾಗೆ ಎಲ್ಲಿಂದಲೋ ಒಂದೇಸಮನೆ ಕೀಟಗಳು ಮರವನ್ನು ಮುತ್ತಿ ಇಡೀ ಮರವನ್ನೇ ಹಾಳು ಮಾಡುತ್ತಿದ್ದವು, ಇವುಗಳ ಉಪಟಳ ಕೈಮೀರಿದಾಗ ದೊಡ್ಡದೊಂದು ಗುಂಡಿ ತೋಡಿ ಎಲ್ಲವನ್ನೂ ಕಡಿದು ಅದರೊಳಗೆ ತುಂಬಬೇಕಾಯಿತು, ಆಗ ಮೊದಲಿನಂತೆ ಜಾಗ ಸಂಪೂರ್ಣವಾಗಿ ಬೋಳಾಯಿತು.
ಈ ಬಾರಿಯ ಸಂಪೂರ್ಣವಾಗಿ ಹೂಗಿಡಗಳನ್ನು ನೆಡೋಣ ಎಂದು ತೀರ್ಮಾನಿಸಿ ಎರಡು-ಮೂರು ಬಗೆಯ ಗುಲಾಬಿ, ಚಂಡು ಹೂವು, ದಾಸವಾಳ, ತುಳಸಿ, ಹರಳು, ಒಂದು ಸೀಬೆ ಗಿಡ ಒಂದು ನಿಂಬೆ ಗಿಡವನ್ನು ಒಂದೆರಡು ಕುಂಬಳ ಬಳ್ಳಿಯ ಬೀಜಗಳನ್ನು ನೆಟ್ಟೆವು, ಇವುಗಳೆಲ್ಲವೂ ಒಂದು ವರ್ಷ ಆಗುವುದರೊಳಗೆ ಎತ್ತರಕ್ಕೆ ಬೆಳೆಯಲು ಪ್ರಾರಂಭಿಸಿದವು, ಈ ಹೂವಿನ ಗಿಡಗಳು ಹೇರಳವಾಗಿ ಹೂ ಬಿಡುತ್ತಿದ್ದ ಕರಣ ನಮ್ಮ ಮನೆಯ ಪೂಜೆಗೂ ಆಗಿ ಉಳಿದ ಅದೆಷ್ಟೋ ಹೂವುಗಳನ್ನು ದಾರಿಹೋಕರು ಕೀಳುತ್ತಿದ್ದರು, ಹೇರಳವಾಗಿ ಬಿಡುತ್ತಿದ್ದ ಹೂವುಗಳನ್ನು ಅಕ್ಕ ಕಿತ್ತು ಪ್ರತಿದಿನವೂ ಕಟ್ಟಿ ಹೂವಿನ ಹಾರವನ್ನು ಮಾಡಿ ಹತ್ತಿರದಲ್ಲಿದ್ದ ದೇವಸ್ಥಾನಕ್ಕೂ ಕೊಡಲಾಗುತ್ತಿತ್ತು, ಈ ಬೃಹದಾಕಾರವಾಗಿ ಬೆಳೆದ ಕುಂಬಳ ಬಳ್ಳಿಯನ್ನು ಮನೆಯ ತಾರಸಿಯ ಮೇಲೆ ಹಬ್ಬಿಸಿದ ಕಾರಣ ಆಶ್ಚರ್ಯವಾಗುವ ರೀತಿಯಲ್ಲಿ ದೊಡ್ಡ ದೊಡ್ಡ ಗಾತ್ರದ ಸಿಹಿಗುಂಬಳ ಕಾಯಿಯನ್ನು ಬಿಡಲಾರಂಭಿಸಿತು, ಮನೆಯ ಪ್ರತೀತಿಯಂತೆ ಬೆಳೆದ ಮೊದಲ ಫಲ ಅಥವಾ ಪುಷ್ಪವನ್ನು ದೇವಸ್ಥಾನಕ್ಕೆ ಕೊಡುವಂತೆ ಈ ಬಾರಿಯ ಕುಂಬಳಕಾಯಿಯನ್ನು ಕೊಡಲಿಕ್ಕೆ ಹೋದಾಗ ಇಷ್ಟು ದೊಡ್ಡ ಗಾತ್ರದ ಕುಂಬಳಕಾಯಿಯನ್ನು ನೋಡಿ ಅರ್ಚಕರೇ ಆಶ್ಚರ್ಯಕ್ಕೊಳಗಾಗಿದ್ದರು. ಕೆಲವು ಕುಂಬಳಕಾಯಂತೂ 3ರಿಂದ 5 ಕೆಜಿ ಇರುವ ತನಕ ದೊಡ್ಡದಿರುತ್ತಿದ್ದವು, ಇವುಗಳನ್ನು ಬಹಳಷ್ಟು ಜನರಿಗೂ ಕೂಡ ಕೊಡಲಾಗುತ್ತಿತ್ತು. ಸ್ವಲ್ಪ ತಿಂಗಳಾದ ಬಳಿಕ ಈ ಗಿಡಗಳಿಗೂ ಹುಳ ಹಿಡಿದ ಕಾರಣ ಎಲ್ಲವನ್ನು ಕಿತ್ತುಹಾಕಲಾಯಿತು.
ಹಿಂದಿನ ಬಹಳಷ್ಟು ನಿದರ್ಶನಗಳನ್ನು ಕಂಡ ನಮಗೆ ನಾವು ಮಾಡುತ್ತಿರುವ ಕೃಷಿ ನಿಜವಾಗಿಯೂ ಸರಿಯೇ ಎಂಬ ಹುಳು ತಲೆ ತಿನ್ನಲು ಪ್ರಾರಂಭಿಸಿದಾಗ ಸತ್ಯಾನ್ವೇಷಣೆಗೆ ಮುಂದಾದೆ ಆಗ ನಮ್ಮ ಕರ್ನಾಟಕ ಕೃಷಿ ಪಂಡಿತ ನಾಡೋಜ ನಾರಾಯಣ ರೆಡ್ಡಿ ಅವರ ಆದರ್ಶಗಳಲ್ಲಿ ಬೆಳಕು ಚೆಲ್ಲುತ್ತಾ ಹೋದಂತೆ ಸತ್ಯ ಅರಿವಾಗತೊಡಗಿತು, ಪ್ರಾರಂಭದಲ್ಲಿ ಪೋಷಕರು ಒಪ್ಪದೇ ಹೋದರು ಕೃಷಿಯನ್ನು ಕೃಷಿ ಪಂಚಾಂಗದಂತೆ ಮಾಡುತ್ತಿದ್ದುದರಿಂದ ಪ್ರತಿನಿತ್ಯ ಸತ್ಯ ಅರಿವಾಗುತ್ತಿದೆ.
ಈಗ ಮನೆಮುಂದಿನ ಚಿತ್ರಣ ಮೊದಲಿಗಿಂತಲೂ ಬಹಳಷ್ಟು ವಿಭಿನ್ನವಾಗಿದೆ, ಹಲವಾರು ಬಗೆಯ ಹೂವು ಹಣ್ಣಿನ ಗಿಡಗಳು ಹೆಮ್ಮರವಾಗಿ ಮಾರ್ಪಾಡಾಗಿವೆ, ಸೀಬೆ ಹಾಗೂ ನಿಂಬೆ ಹಳೆಯ ಮರಗಳಾದರೆ ಇವುಗಳೊಂದಿಗೆ ಸೀತಾಫಲ, ಬೆಟ್ಟದನೆಲ್ಲಿ, ಮಾವಿನಮರ, ಸಪೋಟ, ಹೊಂಗೆ, ಬೇವು, ಕರಿಬೇವು ಬಹಳ ಹೊತ್ತೊತ್ತಾಗಿ ಬೆಳೆಯಲಾರಂಭಿಸಿದೆ ಕೆಲವೊಮ್ಮೆ ಜಾಗದ ಕೊರತೆಯ ಕಾರಣದಿಂದಾಗಿ ಪ್ರತಿಯೊಂದು ಮರವು ನಾಮುಂದು ತಾಮುಂದು ಎಂದು ಆಗಸ ಮುಟ್ಟುವ ಭರದಲ್ಲಿ ಬೆಳೆಯಲಾರಂಭಿಸಿದೆ. ನೋಡುನೋಡುತ್ತಿದ್ದಂತೆಯೇ ನಾವು ನೆಟ್ಟ ಪುಟ್ಟ ಗಿಡ ಇಂದು ಹೆಮ್ಮರವಾಗಿ ಬೆಳೆಯುತ್ತಿರುವುದನ್ನು ಕಂಡರೆ ಮನಸ್ಸಿಗೆ ಏನೋ ಒಂದು ರೀತಿಯ ಆನಂದ ಎನಿಸುತ್ತದೆ.
ಅಕ್ಕಪಕ್ಕದ ಮನೆಯವರು ಕೆಲವು ಬಾರಿ ಮನೆಗೆ ಬಂದು ಉಪದೇಶಗಳನ್ನು ನೀಡುತ್ತಾರೆ ಮನೆಯಲ್ಲಿ ಆ ಮರ ಇರಬಾರದು ಈ ಮರಗಳು ಇರಬಾರದು ಮನೆಯಲ್ಲಿ ಅಶಾಂತಿ ನೆಲೆಸುತ್ತದೆ, ಹಾವುಗಳು ಸೇರಿಕೊಂಡುಬಿಡುತ್ತವೆ, ಗಿಡಗಳ ಬೇರುಗಳು ಮನೆಯನ್ನೇ ಬುಡಮೇಲು ಮಾಡುತ್ತವೆ, ಈ ಗಿಡಗಳಿದ್ದು ಏನು ಪ್ರಯೋಜನ ಎಲ್ಲವನ್ನು ಕಡಿದು ಮುಂದೆ ಇರುವ ಜಾಗದಲ್ಲಿ ಮನೆಯನ್ನಾದರೂ ಕಟ್ಟಿದರೆ ಬಾಡಿಗೆ ಆದರೂ ಬರುತ್ತದೆ ಎಂದು ಹೇಳುತ್ತಾರೆ, ಆದರೆ ಇವರೆಲ್ಲರೂ ಯಾವುದಾದರೂ ಹಬ್ಬಗಳು ಬಂದರೆ ಸಾಕು ಆ ಗಿಡದ ಎಲೆಗಳು ಬೇಕು ಈ ಗಿಡದ ಚಿಗರೆ ಬೇಕು ಎಂದು ಕೇಳುತ್ತಾರೆ, ಕೆಲವು ಬಾರಿ ನಾವು ಕೇಳುವ ತನಕ ಸುಮ್ಮನಿದ್ದ ತಿರುಗಿ ಮಾತನಾಡಿ ಕಳುಹಿಸಿದ ಅದೆಷ್ಟೋ ನಿದರ್ಶನಗಳಿವೆ.
ಹೊರಗಿನವರದು ಏನೇ ವಿಚಾರವಾಗಲಿ ನನ್ನ ಹವ್ಯಾಸದಂತೆ ಸಮಯ ಮಾಡಿಕೊಂಡು Bike trip, Treking ಹೋಗಿ ಬರುವಾಗ ಅಲ್ಲಿಯ ನೆನಪಿಗಾಗಿ ಬಗೆಬಗೆಯ ಗಿಡವನ್ನು ತಂದು ಗಿಡಗಳನ್ನು ನೆಡಲಾಗುತ್ತಿದೆ, ಇದರಿಂದಾಗಿ ಮನೆಯಲ್ಲಿ ಮಲೆನಾಡ ಸಸಿಗಳಾದ ಅಡಕೆ, ಕಾಫಿ, ಮೈಸೂರು ವೀಳ್ಯದೆಲೆ, ರಾಮಫಲದ ಜೊತೆಗೆ ತಂದೆಯವರು 2016ರಲ್ಲಿ 18 ಬಾರಿ ಶಬರಿಮಲೆ ಯಾತ್ರೆಯನ್ನು ನೆರವೇರಿಸಿದ ನೆನಪಿಗಾಗಿ ಎರಡು ತೆಂಗಿನ ಗಿಡಗಳನ್ನು ನೆಡಲಾಯಿತು ಇವುಗಳು ಕೂಡ ಇನ್ನೇನು ಹೂವು ಹಿಡಿಯಲು ದಿನಗಣನೆ ಆರಂಭವಾಗಿದೆ.
ಇದೇ ಹೋದವರ್ಷ 2020 ಮೇ ತಿಂಗಳಲ್ಲಿ, ಲಾಕ್ಡೌನ್ ಆಗುವ ಒಂದು ವಾರ ಹಿಂದೆಯಷ್ಟೇ, ಆಗುಂಬೆಯ ಮಳೆಗಾಡಿನ ಬೆಟ್ಟ-ಗುಡ್ಡಗಳನ್ನು ಏರಿ ಇಳಿದು, ಅಲ್ಲಿಯ ಒಂದಿಷ್ಟು ಜೀವವೈವಿಧ್ಯದ ಬಗ್ಗೆ ಅರಿತುಕೊಂಡು ಹಿಂತಿರುಗಿ ಬರುವಾಗ ಫಾರೆಸ್ಟ್ ಡಿಪಾರ್ಟ್ಮೆಂಟ್ ನ ನರ್ಸರಿಯಿಂದ ಬಹಳಷ್ಟು ವೈವಿಧ್ಯಮಯವಾದಂತಹ ಕಾಡು ಸಸಿಗಳನ್ನು ತಂದು ನೆಡಲಾಯಿತು. ಮೊದಲೇ ಇರುವಷ್ಟು ಮರಗಳಿಗೆ ಇನ್ನಷ್ಟು ಮಗಳು ಸೇರಿಕೊಂಡು ಈಗ ಮನೆಯೇ ಗೋಚರಿಸದಷ್ಟು ಹಸಿರಿನಿಂದ ಆವೃತವಾಗಿದೆ.
ನಾ ಕಂಡ ವಿಸ್ಮಯ.
ಹೇಗೆ ನಮ್ಮ ಬೆಳವಣಿಗೆಗೆ ಆಹಾರ ಮುಖ್ಯವೋ ಅದೇ ರೀತಿಯ ಪ್ರತಿ ಸಸ್ಯದ ಬೆಳವಣಿಗೆಗೆ ನೀರಿನೊಂದಿಗೆ ಬಹಳಷ್ಟು ಪೋಷಕಾಂಶಗಳ ಅಗತ್ಯವಿರುತ್ತದೆ, ಇವುಗಳಿಗೆಲ್ಲಕ್ಕಿಂತಲೂ ಬಹುಮುಖ್ಯವಾಗಿ ಮಣ್ಣು ಸದಾ ಜೀವಂತವಾಗಿರಬೇಕಾಗುತ್ತದೆ, ಇವುಗಳಲ್ಲಿ ಕೋಟ್ಯಾಂತರ ಸೂಕ್ಷ್ಮಜೀವಿಗಳು ವಾಸವಿದ್ದು( ಎರೆಹುಳು,ಗೆದ್ದಲುಹುಳು, ನಾಲ್ಕಾರು ಬಗೆಯ ಇರುವೆಗಳು, ಕಪ್ಪೆ, ಚಿಟ್ಟೆ, ಜೇನು, ಹುಳು-ಹುಪ್ಪಟೆಗಳು) ಮರದಿಂದ ಉದುರಿದ ತರಗೆಲೆಗಳನ್ನು ತಿಂದು, ಮಣ್ಣ ನೀರನ್ನು ಹಿಡಿದಿಟ್ಟುಕೊಳ್ಳುವ ಸ್ಪಂಜಿನ ರೀತಿ ಸತ್ವಭರಿತವನ್ನಾಗಿ ಮಾಡುತ್ತದೆ. ಇವುಗಳೊಂದಿಗೆ ಗಿಡಗಳು ಬೆಳೆಯುವ ಕ್ರಮ, ಬಿಸಿಲಿನ ಪ್ರಮಾಣ, ಅಂತರ, ಬೇರಿನ ಆಳ ಅಗಲ, ಬಳ್ಳಿಗಳನ್ನು ಮರಗಳಿಗೆ ಪೂರಕವಾಗಿ ಹಬ್ಬಿಸುವ ಕ್ರಮ, ಹೆಚ್ಚು ಬಿಸಿಲು ಕೇಳದ ಗಿಡಗಳು, ಹೆಚ್ಚು ನೀರನ್ನು ಹೀರುವ ಸಸಿಗಳು, ಕೀಟಗಳ ಕಾಟ, ಸಣ್ಣಪುಟ್ಟ ಗಿಡಮೂಲಿಕ ಸಸಿಗಳು, ಹೂ ಬಿಡುವ ಗಿಡಗಳು ಹೀಗೆ ಹತ್ತಾರು ಸಸಿಗಳು ಒಂದಕ್ಕೊಂದು ಅರ್ಥೈಸಿಕೊಂಡು ಪೂರಕವಾಗಿ ಬೆಳೆಯುವುದು ನಿಜಕ್ಕೂ ವಿಸ್ಮಯಕಾರಿ ಸಂಗತಿ ಅಲ್ಲದೆ ಮತ್ತೇನು?
ಸುಮಾರು ಹದಿನಾಲ್ಕು ಸಂವತ್ಸರಗಳನ್ನು ಪೂರೈಸಿದ ನಮ್ಮ ಮನೆ ಹತ್ತಾರು ವರ್ಷಗಳ ಸೀಬೆ ಸೀತಾಫಲ ನಿಂಬೆ ಗಿಡಗಳನ್ನು, ಏಳೆಂಟು ವರ್ಷಗಳ ಮಾವು ಕರಿಬೇವು ನೆಲ್ಲಿ ಸಪೋಟ ಬೇವು ಹೊಂಗೆ, ಐದಾರು ವರ್ಷಗಳ ತೆಂಗು, ಎರಡು ಮೂರು ವರ್ಷಗಳ ಅಡಿಕೆ ಕಾಫಿ ದಾಳಿಂಬೆ ಹಾಗೂ ನಾಲ್ಕಾರು ಜಾತಿಯ ಕಾಡು ಸಸಿಗಳನ್ನು ಪೋಷಿಸಿ ಬೆಳೆಸಿದೆ, ಇದರೊಂದಿಗೆ ನಮ್ಮನ್ನು ಕೂಡ ಅದರೊಂದಿಗೆ ಪೂರಕವಾಗಿ ಬೆಳೆಯುವಂತೆ ಅವಕಾಶವನ್ನು ಮಾಡಿಕೊಟ್ಟಿದೆ, ನಾವು ನೆಟ್ಟ ಪುಟ್ಟ ಸಸಿಗಳು ನಮ್ಮ ಎತ್ತರವನ್ನು ಮೀರಿ ಬೆಳೆದಾಗ ದೊರೆಯುವ ಆನಂದ ಎಲ್ಲಕ್ಕೂ ಮೀರಿದ್ದಾಗಿರುತ್ತವೆ.
ಈ ಪ್ರಕೃತಿಯ ವೈಭೋಗವೆ ವಿಶಿಷ್ಟವಾಗಿರುವಂತಹದ್ದು, ಪ್ರತಿ ಮಾಸವು ಎಲ್ಲಾ ಗಿಡದಲ್ಲಿಯೂ ಒಂದಲ್ಲ ಒಂದು ರೀತಿಯ ಹೊಸರೂಪವನ್ನು ತಾಳುತ್ತಲೇ ಇರುತ್ತದೆ, ಕೆಲವು ಬೇಸಿಗೆಯ ಬಿಸಿಲನ್ನು ಹೆಚ್ಚು ಹೀರಿಕೊಂಡು ಚಿಗುರಿದರೆ ಇನ್ನು ಕೆಲವು ಮಳೆಗಾಲ ಪ್ರಾರಂಭವಾಗುತ್ತಿದ್ದಂತೆಯೇ ಚಿಗುರಿ ನಿಲ್ಲುತ್ತದೆ, ನೋಡುನೋಡುತ್ತಿದ್ದಂತೆಯೇ ಹೂ ಹಿಡಿದು ಕಾಯಿಯಾಗಿ ನಾನಾಬಗೆಯ ಜೇನು, ಪಕ್ಷಿಗಳನ್ನು ಆಕರ್ಷಿಸಿ ಆಹಾರ ವಸತಿಯನ್ನು ಕಲ್ಪಿಸಿಕೊಡುತ್ತದೆ, ಇದೇ ಹಂತ ಮುಂದಿನ ನೂರಾರು ಘಟನಾವಳಿಗಳಿಗೆ ಪೂರಕವಾದ ವಾತಾವರಣನ್ನು ಕಲ್ಪಿಸಿಕೊಡುತ್ತದೆ, ಇಷ್ಟೆಲ್ಲಾ ವಿಷಯಗಳನ್ನು ನಾನು ಪ್ರಸ್ತಾಪ ಮಾಡಬೇಕಾದದ್ದು ಮುಂದಿನ ಅಂಕಣದ ನೆರವಿಗೋಸ್ಕರ, ಮುಂದಿನ ಅಂಕಣ ಬಹಳಷ್ಟು ನಿದರ್ಶನವಾಧಾರಿತವಾಗಿದ್ದು ಹೆಚ್ಚೇನು ಪೀಠಿಕೆ ಕೊಡದೆ ನೇರವಾಗಿ ವಿಷಯವನ್ನು ಪ್ರಸ್ತಾಪಿಸಲು ಬಯಸುತ್ತೇನೆ, ವಿಷಯಗಳನ್ನು ಬಹಳ ಸರಳ ಭಾಷೆಯಲ್ಲಿ ಪ್ರಸ್ತಾಪಿಸಬೇಕಾಗಿರುವುದು ನನಗೆ ನಿಜಕ್ಕೂ ಸವಾಲಿನ ಕೆಲಸವಾಗಬಹುದು, ಎಲ್ಲವನ್ನು ಕಾದು ನೋಡೋಣ.
ಧನ್ಯವಾದಗಳು.
ಎಸ್ ಪಿ ತೇಜರಾಜು.
ಸಾವಿರದಮರ ಪರಿಸರಾಸಕ್ತ ಯುವಜನತೆ.
ನಿಮ್ಮ ಪರಿಸರದ ಕಾಳಜಿ ನಿಜಕ್ಕೂ ನಮ್ಮೆಲ್ಲರಿಗೂ ಪ್ರೇರಕವಾದದ್ದು ಶುಭವಾಗಲಿ
ReplyDelete🌱🍃👏👏
ReplyDeleteSuper💕
ReplyDeleteSuper 💕💕
ReplyDeleteNyc
ReplyDeleteನಿಮ್ಮ ಮಲೆನಾಡಿನ ಸೊಬಗಿನ ವರ್ಣನೆ ನನ್ನ ಬಾಲ್ಯದ ದಿನಗಳನ್ನು ನೆನಪಿಸಿತು 👌🙏
ReplyDeleteNice theju 👏👏
ReplyDeleteಮನೆಗೊಂದು ಮರ ಊರಿಗೊಂದು ವನ ಎಂಬ ಮಾತಿನಂತೆ ಮನೆಯಲ್ಲಿರುವ ಒಬ್ಬರಿಗೆ ಐದಾರು ಗಿಡವಾದರೆ
ReplyDeleteಮನೆಗೊಂದು ಕೈ/ಹೂ ತೋಟ.
ಸುವಾಸನೆ ಬೀರುವ ಫಲ-ಪುಷ್ಪಗಳ ಗಿಡಗಳು ಸೊಬಗಿಗಾದರೆ
ಔಷಧಿ ಸಸ್ಯಗಳು ಕಾಯಿಲೆ ಬಾರದ ರೀತಿ ತಡೆಯಲಿಕ್ಕಾದರೆ
ನೆರಳಿನ ಮರಗಳು ನಮಗಾಗಿ ಪಕ್ಷಿ ಸಂಕುಲಕಾಗಿ ಉಪಯೋಗವಾಗುವುದು...
ಮನಸ್ಸಿಗೆ ಚೈತನ್ಯ ಚೇತರಿಕೆಯನ್ನು ನೀಡುತ್ತವೆ..
ಹಾಗಾಗಿ ಆದಷ್ಟು ನಮ್ಮಲ್ಲಿರುವ ನಮ್ಮ ಮನೆಯ/ ಹಿತ್ತಲಿನ/ ಜಮೀನಿನ ಜಾಗಗಳಲ್ಲಿ ನಮ್ಮನ್ನು ನಾವು ಬದಲಾಯಿಸಿಕೊಳ್ಳಬೇಕಿದೆ..
Nice
ReplyDelete