Saturday, March 6, 2021

ಕಾಲಾಯ ತಸ್ಮೈ ನಮಃ.

                                                                       
                                                            ಎಸ್ ಪಿ ತೇಜರಾಜು.
                                                             
 ಒಂದಲ್ಲ ಒಂದು ರೀತಿಯ ಖರ್ಚುಗಳ ಮೇಲೆ ಖರ್ಚುಗಳನ್ನು ಮಾಡಿಸುವಂತಹ ಈ ಹಬ್ಬ- ಆಚರಣೆಗಳು ಮಧ್ಯಮ ವರಮಾನದ ಜನರಿಗೆ ನಿಜವಾಗಿಯೂ ಬೇಕಾಗಿತ್ತೆ? ಬಡವರೇನು ಇರುವುದರಲ್ಲಿಯೇ ಹಬ್ಬವನ್ನು ಮುಗಿಸುತ್ತಾರೆ ಆದರೆ ಶ್ರೀಮಂತರ ಕಥೆ ಹಾಗಲ್ಲವಲ್ಲ, ಅವರಿಗೆ ಆದಾಯವು ಹೆಚ್ಚು ಅದನ್ನು ಖರ್ಚು ಮಾಡಿ ಆನಂದಿಸಬೇಡವೇ? ಅದೇನೇ ಇರಲಿ ನಮ್ಮ ಹಿರಿಯರಲ್ಲಿಯೂ ಶ್ರೀಮಂತರು ಬಡವರು ಎಲ್ಲರೂ ಇದ್ದರಲ್ಲವೇ? ಹಾಗೆಂದುಕೊಂಡು ಅವರೇನು ಹಬ್ಬಗಳನ್ನು ಆಚರಿಸದೆ ಇದ್ದರೆ? ಇಲ್ಲವಲ್ಲ. ನಮ್ಮ ಪೂರ್ವಜರು ಪ್ರಾರಂಭಿಸಿದ ಆಚರಣೆಗಳೆಲ್ಲವೂ ಆಡಂಬರ ತೋರ್ಪಡಿಕೆಗಳಿಗಲ್ಲದೆ ಮನಸ್ಸಿನ ಸುಖ ಶಾಂತಿ ನೆಮ್ಮದಿಗಾಗಿ ಪ್ರಾರಂಭಿಸಿದ್ದಲ್ಲದೆ ಮತ್ತೆನು? ಹಾಗಾದರೆ ನಾವೇಕೆ ಇದನ್ನು ಅರ್ಥಮಾಡಿಕೊಳ್ಳದೆ ಮರಳುವಂತೆ ವರ್ತಿಸುತ್ತಿದ್ದೇವೆ ?

 ಅಜ್ಜಿ ಆಗಾಗ ಕೆಲ ಸನ್ನಿವೇಶಗಳನ್ನು ಹೇಳುತ್ತಿರುತ್ತಾರೆ ವರ್ಷದ ಮೊದಲ ಹಬ್ಬವಾದ ಯುಗಾದಿ, ಮಧ್ಯದಲ್ಲಿ ಬರುವ ದಸರಾ ಸಮಯದ ಪಿತೃಪಕ್ಷ, ಕೊನೆಯ ಹಬ್ಬವಾದ ದೀಪಾವಳಿಯಲ್ಲಿ ಮನೆಯಲ್ಲಿ ಖರ್ಚುಗಳು ಇರುತ್ತಿದ್ದವೆ ಹೊರತು ಮಿಕ್ಕೆಲ್ಲಾ ಹಬ್ಬಗಳು ಅಷ್ಟೇನು ಖರ್ಚುಎಂದೆನಿಸುತಿರಲಿಲ್ಲ, ಇಂದಿನವರು ಟಿವಿಯನ್ನು ನೋಡಿಕೊಂಡು ಗುರೂಜಿ ಈ ಪೂಜೆಯನ್ನು ಮಾಡಲಿಕ್ಕೆ ಹೇಳಿದ್ದಾರೆ, ಪಕ್ಕದ ಮನೆಯವರು ಮಾಡುತ್ತಿದ್ದಾರೆ ನಾವು ಯಾರಿಗೆ ಕಮ್ಮಿ ಎಂಬಂತೆ ತೋರ್ಪಡಿಕೆಗೆ ಹಬ್ಬಗಳು ಬಂದುನಿಂತಿದೆ.

 ನಾವುಗಳು (ಅಜ್ಜಿಯ ಮಾತುಗಳು) ಮಳೆಗಾಲ ಬಂತೆಂದರೆ ಸಾಕು ಭೂಮಿತಾಯಿಯನ್ನು ಪೂಜಿಸಿ ತೋಟ, ಗದ್ದೆ, ಜಮೀನಿನ ಕೆಲಸಗಳು ಪ್ರಾರಂಭಿಸಿ ಬೆಳೆ ಬಂದನಂತರ ಕಟಾವುಮಾಡಿ,ಚಳಿಗಾಲದಲ್ಲಿ ಮತ್ತೊಂದು ಬೆಳೆ ಬೆಳೆದು ಅದನ್ನು ಕೂಡ ಬೇಸಿಗೆಯಲ್ಲಿ ಮುಗಿಸಿ ಉಳಿದ ಸಮಯವನ್ನು ಊರ ಹಬ್ಬ ಜಾತ್ರೆ ಇನ್ನಿತರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದೆವು. ಈ ಜಾತ್ರೆಗೆ ಬಂದಂತಹ ಎಲ್ಲರೂ ಒಂದಲ್ಲ ಒಂದು ರೀತಿಯ ಸ್ವಯಂ ಸೇವಕರಂತೆ ಒಂದುಗೂಡಿ ಕೆಲಸವನ್ನು  ವಿಭಾಗಿಸಿಕೊಳ್ಳುತ್ತಿದ್ದರು, ಊರ ಜನರಿಂದಲೇ ದವಸ ಧಾನ್ಯಗಳನ್ನು ಸಂಗ್ರಹಿಸಿ, ಜಾತ್ರೆಗೆ ಬಂದ ಜನರ ಊಟೋಪಚಾರಗಳನ್ನು ನೋಡಿಕೊಳ್ಳುತ್ತಿದ್ದರು. ಜಾತ್ರೆಯ ಕೊನೆಯ ದಿನ ತೇರು ರಥಬೀದಿಯಿಂದ ಊರನ್ನು ಒಂದು ಪ್ರದಕ್ಷಿಣೆ ಹೊಡೆದು ನಂತರ ದೇವಸ್ಥಾನಕ್ಕೆ ಬಂದು ನಿಂತಬಳಿಕ ಜಾತ್ರೆ ಮುಕ್ತಾಯವಾಗುತ್ತಿತ್ತು. ಇದಾದ ಬಳಿಕ ಅಂದು ಸಂಜೆ ಮಠಗಳಲ್ಲಿ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪೌರಾಣಿಕ ನಾಟಕಗಳು ಆಯಾಯ ಪ್ರದೇಶಕ್ಕೆ ಹೊಂದಿಕೊಂಡಂತೆ ಇತರ ಕಾರ್ಯಕ್ರಮಗಳು ನೆರವೇರುತ್ತಿದ್ದವು.

 ಹಾಗಾದರೆ ಒಂದಲ್ಲ ಒಂದು ರೀತಿಯ ಹಬ್ಬಗಳು ಪ್ರತಿಮಾಸವು ಬರುತ್ತಿದೆಯಲ್ಲ ಅವುಗಳನ್ನು ನಾವು ಹೇಗೆಲ್ಲ ಆಚರಿಸಬಹುದು ಎಂಬ ಮಾತಿಗೆ, ಆಚರಣೆಗಳ ಒಳಾರ್ಥವನ್ನು ಗ್ರಹಿಸುವುದರ ಮೂಲಕ ಹಬ್ಬಗಳ ಮಹತ್ವವನ್ನು ತಿಳಿಯುವುದು ಎಂದಾಯಿತು.

* ಪ್ರತಿಶತ ಬಹುಪಾಲು ನಮ್ಮ ಹಬ್ಬಗಳೆಲ್ಲ ಪ್ರತಿ ಮಾಸದ ಶುಕ್ಲಪಕ್ಷದಲ್ಲಿ ಬರುವುದು ಹೆಚ್ಚು ಇದರ ಒಳಾರ್ಥ ಕೃಷ್ಣ ಪಕ್ಷ ಮುಗಿದ ಬಳಿಕ ಚಂದ್ರ ಹೇಗೆ ಪರಿಪೂರ್ಣವಾಗಿ ನಮಗೆ ಗೋಚರಿಸಲು ಪ್ರಾರಂಭಿಸುತ್ತಾನೆಯೋ ಅದೇ ರೀತಿ ನಮ್ಮ ಜೀವನವು ಪೂರ್ಣತೆಯಿಂದ ಕೂಡಿರಲಿ ಎಂಬುದಾಗಿದೆ.( ಶುಕ್ಲಪಕ್ಷದಲ್ಲಿ ಆಚರಿಸಲ್ಪಡುವ ಬಹುದೊಡ್ಡ ಹಬ್ಬ ದಸರಾ ನವರಾತ್ರಿ)

* ಸಂಕ್ರಾಂತಿಯ ಸಮಯದಲ್ಲಿ ಹಗಲಿನಲ್ಲಿ ಬಿಸಿಲು ಹೆಚ್ಚಿದ್ದು ಹಾಗೂ ಬೆಳಿಗ್ಗೆ ರಾತ್ರಿ ಚಳಿ ಇರುವ ಕಾರಣ ಎಳ್ಳುಬೆಲ್ಲದ ಜೊತೆ ನಾನಾ ರೀತಿಯ ಎಣ್ಣೆ ಕಾಳುಗಳನ್ನು ಸೇವಿಸುವುದರ ಮೂಲಕ ದೇಹದಲ್ಲಿ ಎಣ್ಣೆ ಅಂಶವನ್ನು ಕಾಪಾಡಿಕೊಳ್ಳುವುದು, ಮನೆಯ ಹಸುಗಳಿಗೆ ಅರಿಶಿಣವನ್ನು ಬೆಳೆಯುವುದರ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವುದು.

* ಯುಗಾದಿ ಹಬ್ಬ ಹಿಂದೂ ಪಂಚಾಂಗದ ಪ್ರಕಾರ ಚೈತ್ರಮಾಸದಲ್ಲಿ ಆಚರಿಸಲ್ಪಡುವ ಹಬ್ಬವಾಗಿದ್ದು  ಅಂದು ಮನೆಯವರೆಲ್ಲರೂ ಹೊಸಬಟ್ಟೆಯನ್ನುಟ್ಟು ಬೇವು-ಬೆಲ್ಲವನ್ನು ತಿನ್ನುವುದರ ಮೂಲಕ ಜೀವನದಲ್ಲಿ ಬರುವಂತಹ ಸುಖದುಃಖಗಳನ್ನು ಸಮಾನವಾಗಿ ಸ್ವೀಕರಿಸುವುದು.

* ಚೈತ್ರ, ವೈಶಾಖ, ಜೇಷ್ಠ ಮಾಸಗಳಲ್ಲಿ ಬಯಲುಸೀಮೆ, ಕರಾವಳಿ, ಮಲೆನಾಡಿನ ಊರುಗಳಲ್ಲಿ ದೇವರ ಜಾತ್ರೆಗಳನ್ನು ಮುಗಿಸಿ ಕಥೆ, ಪುರಾಣ, ನಾಟಕ, ಕೀರ್ತನೆ, ಭಜನೆಗಳಲ್ಲಿ ಜನರು ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಮೂಲಕ ತಮ್ಮ ಪರಂಪರೆಯನ್ನು ತಲೆತಲಾಂತರಗಳಿಂದ ಮುಂದುವರಿಸಿಕೊಂಡು ಹೋಗುತ್ತಿದ್ದರು. ಈ ಸಮಯದಲ್ಲಿಯೇ ಪಂಚಾಂಗವಾದರಿತ ಮೊದಲ ಹಾಗೂ ದೊಡ್ಡ ಮಳೆಯಾದ ಅಶ್ವಿನಿ, ಭರಣಿ, ಕೃತ್ತಿಕಾ ಮಳೆಗಳು ಧರೆಗುರುಳುತ್ತಿದ್ದವು.

* ಆಶಾಡ ಹಾಗೂ ಶ್ರಾವಣಮಾಸದಲ್ಲಿ ತಂಪಾದ ಗಾಳಿಯನ್ನು ಬೀಸಿಕೊಂಡು ಸೋನೆಮಳೆಯೊಂದಿಗೆ ರೋಹಿಣಿ, ಮಾರ್ಗಶಿರ, ಅರ್ಧ, ಪುನರ್ವಸು ಮಳೆಯಿಂದಾಗಿ ಕೃಷಿ ಕೆಲಸಗಳು ಪ್ರಾರಂಭವಾಗುತ್ತದೆ. ಹಾಗೂ ಈ ಶ್ರಾವಣಮಾಸದಲ್ಲಿ ಅನೇಕ ಮನೆಗಳಲ್ಲಿ  ಮದುವೆ-ಮುಂಜಿಯಂತಹ ಶುಭಕಾರ್ಯಗಳು ನಡೆಯುತ್ತವೆ.

* ಭಾದ್ರಪದ ಹಾಗೂ ಆಶ್ವಯುಜ ಮಾಸದಲ್ಲಿ ಗಣಪತಿ ಹಬ್ಬ, ನಾಗರ ಹಬ್ಬ, ದಸರಾ, ದೀಪಾವಳಿ ಹಬ್ಬ ನಡೆಯುತ್ತದೆ. ಈ ಮಾಸದಲ್ಲಿಯೇ ಪುಷ್ಯ ಆಶ್ಲೇಷ, ಮಖ,ಫುಫಾ, ಉಫಾ, ಹಸ್ತ, ಚಿತ್ತೆ ನಕ್ಷತ್ರವಾದರಿತ ಮಳೆಯಿಂದ ಕೃಷಿ ಕಾಯಕ ಬಿರುಸಿನಿಂದ ಸಾಗುತ್ತದೆ ಹಸ್ತ ಮಳೆ ಸಮಯದಲ್ಲಿ ಬೆಳೆ ಕಟಾವಾಗಿ, ಚಿತ್ತೆ ಮಳೆಗೆ ಹುಳಗಳು ಚಿಟ್ಟೆಗಳಾಗಿ ಮಾರ್ಪಟ್ಟು, ವನಸ್ಪತಿ ಸಸ್ಯಗಳು ಓಡಮೂಡಿದ ಹಣ್ಣುಗಳನ್ನುತಿನ್ನುತ್ತಾ ಸ್ವಾತಿ, ವಿಶಾಖ ಮಳೆಯಲ್ಲಿ ಮರೆಯಾಗುತ್ತವೆ.

* ಭಾದ್ರಪದ ಮಾಸದಲ್ಲಿ ಹೆಚ್ಚಾದ ಇಲಿಗಳ ಉಪಟಳವನ್ನು ತಡೆಯಲು ಹಾವುಗಳನ್ನು ಪೂಜಿಸಲಾಗುತ್ತಿತ್ತು, ಇವತ್ತಿನ ರೀತಿ ಲೀಟರುಗಟ್ಟಲೆ ಹಾಲನ್ನು, ಡಾಲ್ಡಾ ತುಪ್ಪವನ್ನು ಕೃತಕ ಹುತ್ತಗಳಿಗೆ ಸುರಿಯುತ್ತಿರಲಿಲ್ಲ.

* ದೀಪಾವಳಿ ಹಬ್ಬ ನಾಲ್ಕು ದಿನದ ಆಚರಣೆಯಾಗಿದ್ದು, ಮಳೆಗಾಲದಿಂದ ಚಳಿಗಾಲಕ್ಕೆ ಬದಲಾಗುತ್ತಿರುವ ವಾತಾವರಣಕ್ಕೆ ದೇಹ ಹೊಂದಿಕೊಂಡಲೆಂದೇ ಎಣ್ಣೆ ಸ್ನಾನವನ್ನು ಮಾಡಲಾಗುತ್ತಿತ್ತು.

* ಕಾರ್ತಿಕ ಮಾಸದ ಪ್ರತಿದಿನವೂ ಮನೆಯನ್ನು ದೀಪಗಳಿಂದ ಸಿಂಗರಿಸಲಾಗುತ್ತಿತ್ತು. ಧನುರ್ಮಾಸದ ಸಮಯದಲ್ಲಿ ಸೂರ್ಯೋದಯಕ್ಕೆ ಮುಂಚೆ ಅರಳಿ ಮರ ಪ್ರದಕ್ಷಿಣೆ ಮಾಡಲಾಗುತ್ತಿತ್ತು.

* ಪ್ರತಿ ಹಬ್ಬಗಳ ಆಚರಣೆಯಲ್ಲಿಯೂ ವಾತಾವರಣಕನುಕೂಲವಾಗುವಂತೆ ದೇಹಕ್ಕೆ ಬೇಕಾಗುವಂತಹ ಪೌಷ್ಟಿಕಾಂಶವುಳ್ಳ ಆಹಾರವನ್ನು  ಸೇವಿರಿಸಲಾಗುತ್ತಿತ್ತು.

* ಹಬ್ಬದ ದಿನಗಳು ಮಾತ್ರವಲ್ಲದೆ ಪ್ರತಿದಿನವೂ ಮನೆಯನ್ನು ಸ್ವಚ್ಛಗೊಳಿಸಿ ಹೊರಾಂಗಣವನ್ನು ಸಗಣಿಯಿಂದ ಸಾರಿಸುವ ಮೂಲಕ ಕ್ರಿಮಿಕೀಟಳಿಂದ ರಕ್ಷಣೆ ಪಡೆಯಲಾಗುತ್ತಿತ್ತು.

 ಹೀಗೆ ಈ ಹಬ್ಬಗಳೆಲ್ಲವೂ ಪ್ರತಿ ಸಂವತ್ಸರವು ಮರುಕಳಿಸುತ್ತಲಿವೆ, ಇವುಗಳ ಒಳಾರ್ಥವನ್ನು ನಾವಿಂದು ಗ್ರಹಿಸಬೇಕಾಗಿದೆ.
 
ಇಷ್ಟೆಲ್ಲಾ ಹಬ್ಬಗಳ ಜೊತೆಯಲ್ಲಿ ನಾವು ಆಚರಿಸುವ ಮತ್ತೊಂದು ಹಬ್ಬವೆಂದರೆ ಮಹಾಶಿವರಾತ್ರಿ, ಈ ಶಿವರಾತ್ರಿ ಹಬ್ಬದ ವೈಶಿಷ್ಟವೇ ವಿಭಿನ್ನ, ಹಬ್ಬದ ದಿನದಿಂದ ಸೂರ್ಯ ತನ್ನ ಪ್ರಕರತೆಯನ್ನು ಇನ್ನಷ್ಟು ಹೆಚ್ಚಿಸುತ್ತಾನೆ, ಅಂದು ಪ್ರಪಂಚದ ನಾನಾ ಮೂಲೆಯ ಶಿವದೇವಾಲಯಗಳಲ್ಲಿ ಪೂಜೆ ನೆರವೇರುತ್ತದೆ, ಕೆಲ ದೇವಾಲಯಗಳ ವಾಸ್ತುಶಿಲ್ಪ ಎಷ್ಟು ಸ್ವಾರಸ್ಯಕರವಾಗಿದೆ ಎಂದರೆ ಮಹಾಶಿವರಾತ್ರಿಯ ಹಬ್ಬದ ದಿನದಂದೇ ಸೂರ್ಯನ ರಶ್ಮಿಗಳು ಶಿವಲಿಂಗದ ಮೇಲೆ ಬೀಳುವಂತೆ ನಿರ್ಮಿಸಲಾಗಿದೆ. ಪುರಾಣಗಳಲ್ಲಿ ಉಲ್ಲೇಖಿಸಿರುವಂತೆ ಬ್ರಹ್ಮ ಸೃಷ್ಟಿಕರ್ತನಾದರೆ, ವಿಷ್ಣು ಇವುಗಳನ್ನು ಕಾಪಾಡುತ್ತಾನೆ, ಆದರೆ ಶಿವ ಸೃಷ್ಟಿಕರ್ತನ ಪ್ರತಿಯೊಂದು ಸೃಷ್ಟಿಯ ಕಾಲ ನಿರ್ಣಾಯಕನಾಗಿರುತ್ತಾನೆ.

 ಮೂಲತೋ ಬ್ರಹ್ಮರೂಪಾಯ, ಮಧ್ಯತೋ ವಿಷ್ಣು ರೂಪಿಣಿ, ಅಗ್ರತೋ ಶಿವರೂಪಾಯ ವಕ್ಷರಾಜತೆಯೇ ನಮಹ ಎಂಬ ವೃಕ್ಷವಾಧಾರಿತ ಶ್ಲೋಕ ಒಂದಿದೆ, ಅರಳಿಮರ ಸದೃಢವಾಗಿ ನಿಲ್ಲಲು ಭದ್ರ ಬುನಾದಿಯನ್ನು ನೀಡಿದ ಬೇರುಗಳನ್ನು ಬ್ರಹ್ಮನಿಗೆ ಹೋಲಿಸಲಾಗಿದೆ, ಹೆಮ್ಮರವಾಗಿ ಕವಲೊಡೆದು ಶಾಕೋಪ ಶಾಖೆಯನ್ನು ದೂರಕ್ಕೆ ಚಾಚಿಕೊಂಡಿರುವ ರೆಂಬೆಕೊಂಬೆಗಳನ್ನು ಭದ್ರವಾಗಿ ಹಿಡಿದಿಟ್ಟಿರುವ ಕಾಂಡವನ್ನು ವಿಷ್ಣುವಿಗೆ ಹೋಲಿಸಲಾಗಿದೆ, ಮರದ ತುಂಬಾ ಹಸಿರು ಎಲೆಗಳಿಂದ ಕಂಗೊಳಿಸಿ ಜನರಿಗೆ ನೆರಳು, ಗಾಳಿ, ಆಹಾರವನ್ನು ಕೊಟ್ಟು ಮರಕ್ಕೂ ಕೂಡ ಬೇಕಾದ ಆಹಾರವನ್ನು ತಯಾರಿಸಿ ಕೊನೆಗೆ ತನ್ನ ಕಾಯಕವನ್ನು ಮುಗಿಸಿ ಮಣ್ಣಿನಲ್ಲಿ ಮಣ್ಣಾಗುವ ಹೊಸಚಿಗುರು ಹಳೇಬೇರ ಕಾಲ ನಿರ್ಧಾರಕ ಶಿವನೇ ಎನ್ನುವುದು ಶ್ಲೋಕವಾದರೂ, ವಾಸ್ತವವು ಇದೆ ಅಲ್ಲವೇ? ( ಅಂದರೆ ಶಿವನ ಒಳಾರ್ಥ ಕಾಲ ) ಇದೇ ಅಲ್ಲವೇ ಕಾಲಾಯತಸ್ಮೈನಮಃ ಅಂದರೆ.

 ಶಿವನನ್ನು ಲಿಂಗದ ರೂಪದಲ್ಲಿ ಪೂಜಿಸಲಾಗುತ್ತದೆ ಹಾಗೂ ಈತ ಅಭಿಷೇಕಪ್ರಿಯ ಎಂತಲೂ ನಂಬಲಾಗಿದೆ, ಇದರ ಒಳಾರ್ಥ ಬೇಸಿಗೆಯಲ್ಲಿ ಶಿವಲಿಂಗದ ನೀರನ್ನು ಹೆಚ್ಚೆಚ್ಚು ಸೇವಿಸುವುದರ ಮೂಲಕ ಈ ಬೇಸಿಗೆಯ ಸಮಯದಲ್ಲಿ ದೇಹದಲ್ಲಿ ನೀರಿನಂಶವನ್ನು ಕಾಪಾಡಿಕೊಳ್ಳುವುದು ಇದರ ರಹಸ್ಯವಲ್ಲದೆ ಮತ್ತೇನು?

 ಎಲ್ಲರಿಗೂ ಮಹಾಶಿವರಾತ್ರಿಯ ಶುಭಾಶಯಗಳು.

 ಧನ್ಯವಾದಗಳು.

6 comments: